ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಆವೃತ್ತಿಯೊಂದಿಗೆ ಮಾರುಕಟ್ಟೆಯತ್ತ...

Last Updated 20 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಒಂದು ಫೋನಿಗೆ ಭಾರತದಲ್ಲಿ ಜನ ಸಾಲುಗಟ್ಟಿ ನಿಲ್ಲುವಂತೆ ಮಾಡಿದ ಫೋನ್ ಒನ್‌ಪ್ಲಸ್ 5. ಇದು ತನಕ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಎಲ್ಲ ಫೋನ್‌ಗಳೂ ಉತ್ತಮ ಮತ್ತು ಅತ್ಯುತ್ತಮ ಅನ್ನಬಹುದಾದ ಫೋನ್‌ಗಳನ್ನು ತಯಾರಿಸಿದ ವಿಶಿಷ್ಟ ಕಂಪನಿ ಒನ್‌ಪ್ಲಸ್. ಈ ಕಂಪನಿ ಕೆಲವೇ ಫೋನ್‌ಗಳನ್ನು ತಯಾರಿಸಿದೆ. ಆದರೆ ತಯಾರಿಸಿದ ಎಲ್ಲ ಫೋನ್‌ಗಳೂ ಉತ್ತಮವಾಗಿವೆ ಹಾಗೂ ಈ ಮೂಲಕ ಮಾರುಕಟ್ಟೆಯಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡಿದೆ.

ಐಫೋನಿನಂತೆ ಈ ಕಂಪನಿಯೂ ಮಾರುಕಟ್ಟೆಯಲ್ಲಿ ಒಂದು ಸಮಯದಲ್ಲಿ ಒಂದೇ ಫೋನ್ ಇಟ್ಟುಕೊಳ್ಳುವ ಕಂಪನಿ. ಒನ್‌ಪ್ಲಸ್ 3ಟಿ ಬಂದ ನಂತರ ಒನ್‌ಪ್ಲಸ್ 3ರ ದಾಸ್ತಾನು ಮುಗಿಯುವ ತನಕ ಮಾತ್ರ ಅದರ ಮಾರಾಟ ಮಾಡಿತ್ತು. ಈಗ ಹೊಸದಾಗಿ ಒನ್‌ಪ್ಲಸ್ 5 ಟಿ (Oneplus 5 T) ಬಂದಿದೆ. ಇದು ನಮ್ಮ ಈ ವಾರದ ಗ್ಯಾಜೆಟ್. ಒನ್‌ಪ್ಲಸ್ 5 ಮಾರುಕಟ್ಟೆಯಿಂದ ಖಾಲಿಯಾದ ನಂತರ ಅದನ್ನು ತಯಾರಿಸುವುದಿಲ್ಲ.

ಒನ್‌ಪ್ಲಸ್ ಈಗ ಮಾರುಕಟ್ಟೆಯಲ್ಲಿ ತನ್ನದೇ ಪ್ರತ್ಯೇಕ ಸ್ಥಾನವನ್ನು ಪಡೆದಿದೆ. ಅತ್ಯುತ್ತಮವಾದ ಗುಣವೈಶಿಷ್ಟ್ಯಗಳನ್ನು ಒಳಗೊಂಡ, ಆದರೆ ಅಧಿಕ ಹಣ ನೀಡಬೇಕಾದ ಅಗತ್ಯವಿಲ್ಲದ ಫೋನ್ ಎಂದು ಒನ್‌ಪ್ಲಸ್ 5/5 ಟಿ ಬಗ್ಗೆ ಧಾರಾಳವಾಗಿ ಬರೆಯಬಹುದು. ಇದರ ಕಾರ್ಯಕ್ಷಮತೆಯನ್ನು ಮೇಲ್ದರ್ಜೆಯ ಫೋನ್‌ಗಳಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್8, ಐಫೋನ್ 7, ಗೂಗಲ್‌ ಪಿಕ್ಸೆಲ್ ಫೋನ್‌ಗಳ ಜೊತೆ ಹೋಲಿಸಬಹುದು. ಆದರೆ ಇದರ ಬೆಲೆ ಆ ಫೋನ್‌ಗಳ ಬೆಲೆಯ ಅರ್ಧದಷ್ಟು ಮಾತ್ರ. ಇವೆಲ್ಲವನ್ನು ನಾನು ಒನ್‌ಪ್ಲಸ್ 5 ಬಗ್ಗೆ ಬರೆದಿದ್ದೆ. ಈಗ ಅದು ಒನ್‌ಪ್ಲಸ್ 5ಟಿ ಗೂ ಅನ್ವಯವಾಗುತ್ತದೆ.

ರಚನೆ ಮತ್ತು ವಿನ್ಯಾಸದಲ್ಲಿ ಇದು ಒನ್‌ಪ್ಲಸ್ 5 ಗಿಂತ ಸ್ವಲ್ಪ ಭಿನ್ನ. ಮುಖ್ಯವಾಗಿ ಇದು bezelless ಅಂದರೆ ಕಡಿಮೆ ಅಂಚಿನ ಫೋನ್. ಇದರ ಪರದೆ ಬಹುಮಟ್ಟಿಗೆ ಅಂಚಿನಿಂದ ಅಂಚಿನ ತನಕ ಇದೆ. ಪರದೆಯ ಉದ್ದ ಅಗಲಗಳ ಅನುಪಾತ 18:9 ಇದೆ. ಆದುದರಿಂದ ಪರದೆಯ ಮೇಲೆ ಮತ್ತು ಕೆಳಗೆ ಅತಿ ಕಡಿಮೆ ಸ್ಥಳವಿದೆ.

ಹಾಗಾಗಿ ಬೆರಳಚ್ಚು ಸ್ಕ್ಯಾನರ್ ಹಿಂದುಗಡೆಗೆ ವರ್ಗಾವಣೆ ಆಗಿದೆ. ಪ್ರಾಥಮಿಕ ಕ್ಯಾಮೆರಾಗಳು ಹಿಂದುಗಡೆ ಮೂಲೆಯಲ್ಲಿವೆ. ಪಕ್ಕದಲ್ಲಿ ಫ್ಲಾಶ್ ಇದೆ. ಕ್ಯಾಮೆರಾ ಎದ್ದು ನಿಂತಿದೆ. ಇದು ನನಗೆ ಇಷ್ಟವಾಗಲಿಲ್ಲ. ಮೇಜಿನ ಮೇಲೆ ಇಟ್ಟಾಗ ಕ್ಯಾಮೆರಾದ ಲೆನ್ಸ್‌ಗೆ ಸ್ವಲ್ಪ ಗೀರುಗಳಾಗುವ ಸಾಧ್ಯತೆ ಇದೆ. ದಪ್ಪದ ಕವಚ ಹಾಕಿ ಕೊಂಡು ಈ ನ್ಯೂನತೆಯನ್ನು ಸರಿಪಡಿಸಿಕೊಳ್ಳಬಹುದು. ಇದರಲ್ಲಿ ಮುಂದುಗಡೆ ಮೂರು ಸಾಫ್ಟ್‌ಬಟನ್‌ ಗಳು ಇಲ್ಲ. ಪರದೆಯಲ್ಲೇ ಕೆಳಭಾಗದಲ್ಲಿ ಅಗತ್ಯಬಿದ್ದಾಗ ಮೂರು ಬಟನ್‌ಗಳು ಗೋಚರಿಸುತ್ತವೆ. ಅಥವಾ ಕೆಳಗಿನಿಂದ ಬೆರಳನ್ನು ಮೇಲಕ್ಕೆ ಸವರಿದಾಗ ಅವು ಮೂಡಿಬರುತ್ತವೆ. ಎಂದಿನಂತೆ ಕೈಯಲ್ಲಿ ಹಿಡಿಯುವ ಮತ್ತು ಬಳಸುವ ಅನುಭವ ಚೆನ್ನಾಗಿದೆ.

ಒಂದು ಮೇಲ್ದರ್ಜೆಯ ಫೋನನ್ನು ಹಿಡಿದ ಭಾವನೆ ಬರುತ್ತದೆ. ಹಿಂಭಾಗ ನಯವಾಗಿದೆ. ಕೈಯಿಂದ ಜಾರಿ ಬೀಳುವ ಭಯವಿದೆ. ಹೆಚ್ಚಿಗೆ ಕವಚ ಹಾಕಿಕೊಂಡರೆ ಒಳ್ಳೆಯದು. ಪೆಟ್ಟಿಗೆಯಲ್ಲಿ ಅವರೇ ನೀಡಿದ ಒಂದು ಕವಚ ಇದೆ.

ಒನ್‌ಪ್ಲಸ್ 5 ನಂತೆ ಇದರ ಕೆಲಸದ ವೇಗವೂ ಅತ್ಯುತ್ತಮವಾಗಿದೆ. ಇದರ ಅಂಟುಟು ಬೆಂಚ್‌ಮಾರ್ಕ್ 1,79,691 ಇದೆ. ಅಂದರೆ ಇದು ನಿಜಕ್ಕೂ ಅತಿ ವೇಗದ ಫೋನ್. 8 ಗಿಗಾಬೈಟ್ ಪ್ರಾಥಮಿಕ ಮೆಮೊರಿ ಇರುವ ಕೆಲವೇ ಫೋನ್‌ಗಳಲ್ಲಿ ಇದೂ ಒಂದು. ಯಾವ ಆಟವನ್ನು ಬೇಕಾದರೂ ಆಡಬಹುದು. ಇದು ವೇದ್ಯವಾಗಬೇಕಾದರೆ ಇದರಲ್ಲಿ ಆಸ್ಫಾಲ್ಟ್8 ಆಟ ಆಡಬೇಕು. ವಿಡಿಯೊ ವೀಕ್ಷಣೆ ಚೆನ್ನಾಗಿದೆ. ಹೈಡೆಫಿನಿಶನ್ ಮಾತ್ರವಲ್ಲ 4k ವಿಡಿಯೊ ವೀಕ್ಷಣೆ ಕೂಡ ಮಾಡಬಹುದು. ಬ್ಯಾಟರಿ ಬಾಳಿಕೆ ಚೆನ್ನಾಗಿದೆ. ಡ್ಯಾಶ್ ಚಾರ್ಜಿಂಗ್ ಇದೆ. ಸುಮಾರು 45 ನಿಮಿಷದಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ.

ಕ್ಯಾಮೆರಾದ ವಿಷಯಕ್ಕೆ ಬಂದಾಗ ಇದರಲ್ಲೂ ಒನ್‌ಪ್ಲಸ್ 5ನಂತೆ ಎರಡು ಪ್ರಾಥಮಿಕ ಕ್ಯಾಮೆರಾಗಳಿವೆ. ಒಂದು 16 ಮೆಗಾಪಿಕ್ಸೆಲ್‌ನ f/1.7 ಲೆನ್ಸ್ ಮತ್ತು ಇನ್ನೊಂದು 20 ಮೆಗಾಪಿಕ್ಸೆಲ್‌ನ f/1.7 ಲೆನ್ಸ್ ಇರುವಂಥದ್ದು. ಇದರಲ್ಲಿ ನೀಡಿರುವ ಮ್ಯಾನ್ಯುವಲ್ ವಿಧಾನ ತುಂಬ ಚೆನ್ನಾಗಿದೆ. ಕಡಿಮೆ ಬೆಳಕಿನಲ್ಲೂ ತೃಪ್ತಿದಾಯಕವಾಗಿ ಫೋಟೊ ತೆಗೆಯುತ್ತದೆ. ‌ಗುಣಮಟ್ಟದ ವಿಡಿಯೊ ಜೊತೆ 4k ವಿಡಿಯೊ ಕೂಡ ಇದನ್ನು ಬಳಸಿ ತಯಾರಿಸಬಹುದು. ಉತ್ತಮ ಫೋಟೊ, ವಿಡಿಯೊ, ಸ್ವಂತೀ ತೆಗೆಯಲು ಸದ್ಯ ಇದಕ್ಕಿಂತ ಉತ್ತಮ ಕ್ಯಾಮೆರಾ ಫೋನ್ ಈ ಬೆಲೆಯಲ್ಲಿ ಇಲ್ಲ.

ಇತರೆ ಒನ್‌ಪ್ಲಸ್ ಫೋನ್‌ಗಳಂತೆ ಇದರ ಆಡಿಯೊ ಇಂಜಿನ್ ಕೂಡ ಚೆನ್ನಾಗಿದೆ. ಇಯರ್‌ಫೋನ್ ನೀಡಿಲ್ಲ. ಆ್ಯಂಡ್ರಾಯ್ಡ್ 7.1.1 ಜೊತೆ ಆಕ್ಸಿಜನ್ 4.7.2 ಓಎಸ್ ಇದೆ. ಕನ್ನಡದ ಯೂಸರ್ ಇಂಟರ್‌ಫೇಸ್ ಕೂಡ ಇದೆ. ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ಅತ್ಯುತ್ತಮ ಫೋನ್ ಎನ್ನಬಹುದು. ಈಗ ನೀವು ಒಂದು ಪ್ರಶ್ನೆ ಕೇಳಬಹುದು – ‘ನನ್ನಲ್ಲಿ ಈಗಾಗಲೇ ಒನ್‌ಪ್ಲಸ್ 5 ಇದೆ. ನಾನು ಪುನಃ ಹಣ ಖರ್ಚು ಮಾಡಿ ಒನ್‌ಪ್ಲಸ್ 5 ಟಿ ಕೊಳ್ಳುವ ಅಗತ್ಯವಿದೆಯೇ?’ ಎಂದು. ಅದು ಅಗತ್ಯವಿಲ್ಲ ಎಂಬುದೇ ನನ್ನ ಉತ್ತರ.

ಗಣಿತ ಸಮೀಕರಣ ಬಿಡಿಸಿ

ನೀವು ವಿಜ್ಞಾನದ ವಿದ್ಯಾರ್ಥಿಯಾಗಿದ್ದು ಗಣಿತದ ಸಮೀಕರಣಗಳು ತಲೆ ತಿನ್ನುತ್ತಿವೆಯೇ? ಅವುಗಳನ್ನು ಬಿಡಿಸುವುದು ಸಮಸ್ಯೆಯಾಗಿದೆಯೇ? ಹಾಗಿದ್ದರೆ ನಿಮಗೆ ಗೂಗಲ್‌ ಪ್ಲೇ ಸ್ಟೋರಿನಲ್ಲಿ ದೊರೆಯುತ್ತಿರುವ Socratic - Math Answers & Homework Help ಹೆಸರಿನ ಕಿರುತಂತ್ರಾಂಶ (ಆ್ಯಪ್) ಬೇಕು. ಈ ಕಿರುತಂತ್ರಾಂಶವನ್ನು http://bit.ly/gadgetloka308 ಜಾಲತಾಣದ ಮೂಲಕವೂ ಪಡೆಯಬಹುದು. ಗಣಿತದ ಸಮಸ್ಯೆಗಳನ್ನು ಫೋನಿನ ಕ್ಯಾಮೆರಾದ ಮುಂದೆ ಹಿಡಿದರೆ ಈ ಆ್ಯಪ್ ಅದನ್ನು ಬಿಡಿಸಿ ಉತ್ತರ ನೀಡುತ್ತದೆ! ಮುದ್ರಿಸಿದ ಪಠ್ಯವನ್ನು ಮಾತ್ರವಲ್ಲ ನೀವು ಕೈಯಲ್ಲಿ ಬರೆದ ಸಮೀಕರಣಗಳನ್ನೂ ಇದು ಅರ್ಥ ಮಾಡಿಕೊಳ್ಳುತ್ತದೆ. ನಿಮ್ಮ ಮಕ್ಕಳಿಗೆ ಶಾಲೆಯ ಪಠ್ಯಪುಸ್ತಕದಲ್ಲಿ ನೀಡಿದ ಸಮಸ್ಯೆ ಅಥವಾ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿದ್ದ ಪ್ರಶ್ನೆಯನ್ನು ಇದಕ್ಕೆ ಊಡಿಸಿ ಉತ್ತರ ಕಂಡುಕೊಂಡು ನಿಮ್ಮ ಮಕ್ಕಳು ನೀಡಿದ ಉತ್ತರದೊಡನೆ ತಾಳೆ ಮಾಡಿ ನೋಡಬಹುದು. ನಿಜಕ್ಕೂ ಉತ್ತಮ ಕಿರುತಂತ್ರಾಂಶ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಸ್ಮಾರ್ಟ್‌ಫೋನ್ ಕವಚ ಬಳಸಿ ರಕ್ತ ಪರೀಕ್ಷೆ

ಸಕ್ಕರೆ ಕಾಯಿಲೆ ಇದೆಯೋ ಇಲ್ಲವೋ ಎಂದು ಪರೀಕ್ಷಿಸಲು ಸ್ಮಾರ್ಟ್‌ಫೋನಿಗೆ ಹಲವು ಜೋಡಣೆಗಳು ಮಾರುಕಟ್ಟೆಗೆ ಬಂದಿವೆ. ಈಗ ಬಂದ ಸುದ್ದಿಯಂತೆ ರಕ್ತಪರೀಕ್ಷೆ ಮಾಡಲು ಸ್ಮಾರ್ಟ್‌ಫೋನಿಗೆ ಹೊಸ ಕವಚ ವಿನ್ಯಾಸ ಮಾಡಲಾಗಿದೆ. ಇದು ನೋಡಲು ಮಾಮೂಲು ಕವಚದಂತೆಯೇ ಕಾಣಿಸುತ್ತದೆ. ಆದರೆ ಇದರಲ್ಲಿ ಒಂದು ಮೂಲೆಯಲ್ಲಿ ಒಂದು ಚಿಕ್ಕ ಮಾತ್ರೆ ಇಡಲು ಸ್ಥಳವಿದೆ. ಕವಚಕ್ಕೆ ಸೇರಿಕೊಂಡ ಪೆನ್ನಿನಂತಹ ಸ್ಟೈಲಸ್‌ನಲ್ಲಿ 30 ಮಾತ್ರೆಗಳಿರುತ್ತವೆ. ಒಂದು ಮಾತ್ರೆಯನ್ನು ಕವಚದ ಮೂಲೆಗೆ ತಳ್ಳಿ ಅದರ ಮೇಲೆ ಒಂದು ಬಿಂದು ರಕ್ತವನ್ನು ಇಟ್ಟರೆ 20 ಸೆಕೆಂಡುಗಳಲ್ಲಿ ಅದು ರಕ್ತ ಪರೀಕ್ಷೆ ಮಾಡಿ ಸ್ಮಾರ್ಟ್‌ಫೋನಿನಲ್ಲಿರುವ ಆ್ಯಪ್‌ಗೆ ನಿಸ್ತಂತು ವಿಧಾನದಲ್ಲಿ ಫಲಿತಾಂಶವನ್ನು ರವಾನಿಸುತ್ತದೆ. ಸದ್ಯಕ್ಕೆ ಈ ಸಾಧನ ಇನ್ನೂ ಪ್ರಯೋಗಶಾಲೆಯಲ್ಲಿದೆ.

ರಘು ಅವರ ಪ್ರಶ್ನೆ: ₹15,000ಕ್ಕೆ 64 ಗಿಗಾಬೈಟ್ ಮೆಮೊರಿ ಇರುವ ಉತ್ತಮ ಕ್ಯಾಮೆರಾ ಫೋನ್ ಯಾವುದು?
ಉ: ಶಿಯೋಮಿ ಎಂಐ ಎ1. ಹೋನರ್ 7 ಎಕ್ಸ್ ಕೂಡ ಪರವಾಗಿಲ್ಲ. ನನಗೆ ವಿಮರ್ಶೆಗೆ ಬಂದ, ನಾನು ಬಳಸಿದ ಫೋನ್‌ಗಳ ಬಗ್ಗೆ ಮಾತ್ರ ನಾನು ಸಲಹೆ ನೀಡಬಲ್ಲೆ. ಮಾರುಕಟ್ಟೆಯಲ್ಲಿ ನೂರಾರು ಫೋನ್‌ಗಳಿವೆ. ಎಲ್ಲ ಫೋನ್‌ಗಳ ಬಗ್ಗೆ ನನಗೆ ತಿಳಿದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT