ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಕಾಲದ ವಿದ್ಯಾರ್ಥಿಗಳ ಹೊಸ ಎಚ್ಚರ!

Last Updated 16 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಒಂದು ಹುಂಬ ಗುಂಪು ಅಫ್ಜಲ್ ಗುರು ಬಗ್ಗೆ ಚರ್ಚೆ ನಡೆಸುತ್ತದೆ. ಅಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ ಇದ್ದಾರೆ.  ಯಾರೋ ದೇಶವಿರೋಧಿ ಘೋಷಣೆ ಕೂಗುತ್ತಾರೆ. ಕನ್ಹಯ್ಯಾರನ್ನು ಬಂಧಿಸಲಾಗುತ್ತದೆ. ನಮ್ಮ ಸರ್ಕಾರಗಳು ಹಾಗೂ ಪೊಲೀಸರು ಬ್ರಿಟಿಷರ ಕಾಲದ ಕ್ಷುದ್ರ ತಂತ್ರಗಳನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಈ ನಡುವೆ ಇಂಡಿಯಾವಿರೋಧಿ ಘೋಷಣೆ ಕೂಗುತ್ತಿರುವವರ ವಿಡಿಯೊ ತುಣುಕುಗಳನ್ನು ದೆಹಲಿ ಪೊಲೀಸರಿಗೆ ಕೊಟ್ಟಿರುವ ಆಮ್ ಆದ್ಮಿ ಪಕ್ಷ ‘ಈ ಘೋಷಣೆಕಾರರನ್ನು ಬಂಧಿಸದೆ ಕನ್ಹಯ್ಯಾರನ್ನು ಬಂಧಿಸಿದ್ದೇಕೆ?’ ಎಂದು ಪ್ರಶ್ನಿಸಿದೆ.

ತನಗೆ ಬೇಕಾದ್ದನ್ನು ಮಾತ್ರ ಕೇಳಿಸಿಕೊಳ್ಳುತ್ತಿದ್ದ ಬ್ರಿಟಿಷ್ ಕಾಲದ ಪೊಲೀಸರಂತೆ ಈ ಪೊಲೀಸರೂ ಈ ವಿಡಿಯೊ ಬಗ್ಗೆ ಮಾತಾಡುತ್ತಿಲ್ಲ. ಫ್ಯಾಸಿಸ್ಟ್ ಶಕ್ತಿಗಳು ಎಲ್ಲಿ ಬೇಕಾದರೂ ವೇಷಧಾರಿಗಳನ್ನು ಹರಿಬಿಟ್ಟು, ಉದ್ರೇಕಕಾರಿ ಘೋಷಣೆಗಳನ್ನು ಕೂಗಿಸಿ ಯಾರ ವಿರುದ್ಧವಾದರೂ ತಿರುಗಿಸಬಲ್ಲರೆಂಬುದು ಮತ್ತೆ ಸಾಬೀತಾಗಿದೆ. ಈ ದಿಕ್ಕಿನಿಂದ ನೋಡಿದರೆ, ಇಡೀ ಕನ್ಹಯ್ಯಾ  ಪ್ರಕರಣ ಈಗಾಗಲೇ ಸಿದ್ಧಪಡಿಸಿದ ಕೋಮುವಾದಿ ಚಿತ್ರಕತೆಯ ಚಿತ್ರೀಕರಣದಂತೆ ಕಾಣುತ್ತಿದೆ. ಕನ್ಹಯ್ಯಾ ವಿಚಾರಣೆಯ ದಿನ ಪಟಿಯಾಲ ಹೌಸ್‌ ಕೋರ್ಟ್ ಬಳಿ ಬರಬೇಕೆಂದು ಕೆಲವರಿಗೆ ಹೋಗಿರುವ ಸಂದೇಶ, ಆನಂತರ ವಿದ್ಯಾರ್ಥಿಗಳು ಹಾಗೂ ಪತ್ರಕರ್ತರ ಮೇಲೆ ನಡೆದ ದಾಳಿ… ಇವೆಲ್ಲವೂ ವ್ಯವಸ್ಥಿತವಾಗಿ ನಡೆದಂತಿವೆ.

ಇವೆಲ್ಲ ಎಲ್ಲಿಂದ ಶುರುವಾಗಿವೆಯೆಂಬುದು ಈಗ ಇಡೀ ದೇಶಕ್ಕೇ ಗೊತ್ತಾಗಿದೆ. ಚೆನ್ನೈನ ಅಂಬೇಡ್ಕರ್-ಪೆರಿಯಾರ್ ಸ್ಟಡಿ ಸರ್ಕಲ್ ಮೇಲೆ ಹೇರಿದ ನಿರ್ಬಂಧ, ಹೈದರಾಬಾದಿನಲ್ಲಿ ರೋಹಿತ್ ವೇಮುಲ ಆತ್ಮಹತ್ಯೆ, ಈಗ ಕನ್ಹಯ್ಯಾ ಬಂಧನ– ಈ ಮೂರರಲ್ಲೂ ಒಂದು ಮಾದರಿ ಸ್ಪಷ್ಟವಾಗಿ ಕಾಣುತ್ತಿದೆ: ಮುಕ್ತ ಪ್ರಗತಿಪರ ಚಿಂತನೆಗಳು, ಮಾರ್ಕ್ಸ್‌ವಾದಿ, ಅಂಬೇಡ್ಕರ್ ವಾದಿ ಚಿಂತನೆಗಳು ಮತೀಯವಾದಿಗಳಿಗೆ, ಅವರನ್ನು ಪೋಷಿಸುತ್ತಿರುವ ಮೇಲ್ಜಾತಿಗಳಿಗೆ, ಲಾಭಬಡುಕ ವ್ಯಾಪಾರಿ ವರ್ಗಗಳಿಗೆ ನುಂಗಲಾರದ ತುತ್ತಾಗಿವೆ. ಆದ್ದರಿಂದ ಎಲ್ಲ ಪ್ರಗತಿಪರರಿಗೂ ‘ರಾಷ್ಟ್ರವಿರೋಧಿ’ ಪಟ್ಟ ಹಚ್ಚಿ ಆ ದನಿಗಳನ್ನು ಅಡಗಿಸುವ ‘ದೇಶಭಕ್ತ’ ಹುನ್ನಾರ ಶುರುವಾಗಿದೆ. 

ಆದರೆ ಇಂಥ ಚೀರಾಟಗಳಿಂದ ಇಂಡಿಯಾದ ಮಾನ ನಿತ್ಯ ಹರಾಜಾಗುತ್ತಿದೆ ಎಂಬುದನ್ನು ಈ ಸ್ವಘೋಷಿತ ದೇಶಭಕ್ತರು ತಿಳಿದಂತಿಲ್ಲ. ಯಾವುದೇ ದೇಶಭಕ್ತಿ, ಘೋಷಣೆಗಳಿಂದ ಸ್ಥಾಪಿತವಾಗುವುದಿಲ್ಲ. ನೆಲ ಲೂಟಿ ಹೊಡೆದ ಗಣಿದರೋಡೆಕೋರರು, ಭ್ರಷ್ಟಾಚಾರಿಗಳು ದೇಶಭಕ್ತಿಯ ಘೋಷಣೆಗಳನ್ನು ಎಲ್ಲರಿಗಿಂತ ಜೋರಾಗಿ ಕೂಗುವುದನ್ನು ಎಲ್ಲೆಡೆ ನೋಡುತ್ತಿದ್ದೇವೆ. ಈಚೆಗೆ ಕೈದಿಯೊಬ್ಬ ಮತ್ತೊಬ್ಬ ಕೈದಿ ಸೆರೆಮನೆಯ ಗೋಡೆಯ ಮೇಲೆ ಇಸ್ಲಾಂ ಧರ್ಮದ ಚಿಹ್ನೆ ಬರೆದು ಕೈದಿಗಳನ್ನು ಮತಾಂತರ ಮಾಡುತ್ತಿದ್ದಾನೆಂದು ಸುದ್ದಿ ಹಬ್ಬಿಸಿ ಗೊಂದಲ ಹುಟ್ಟಿಸಿದ! ಈವರೆಗೆ ನಡೆದಿರುವ ಎಲ್ಲ ಕೋಮುಗಲಭೆಗಳಲ್ಲಿ ಯಾವುದೋ ಘೋಷಣೆಯನ್ನು ಯಾರೋ ಕೂಗಿದರಂತೆ ಎಂಬ ಗಾಳಿಸುದ್ದಿಗಳೇ ತುಂಬಿರುವುದನ್ನು ತನಿಖಾ ವರದಿಗಳು ಸಾರಿ ಹೇಳಿವೆ.

ಈಗ ನಡೆಯುತ್ತಿರುವುದೂ ಅದೇ: ವಿದ್ಯಾರ್ಥಿ ಸಂಘಗಳ ಚುನಾವಣೆಯಲ್ಲಿ ಸೋತ ಜಿದ್ದನ್ನು ಇನ್ನೊಂದು ಥರ ತೀರಿಸಿಕೊಳ್ಳುವುದು; ತಾವು ಒಲ್ಲದ ತಾತ್ವಿಕತೆಯನ್ನು ನಂಬುವವರ ಮೇಲೆ ಫೈಲ್ ತಯಾರಿಸುವುದು, ಸಮಯ ನೋಡಿ ಯಾವುದನ್ನಾದರೂ ಅವರ ವಿರುದ್ಧ ತಿರುಗಿಸುವುದು. ಇಂಥ ‘ಸಂಶೋಧನೆ’ಯಲ್ಲಿ ತೊಡಗುವ ಕ್ರಿಮಿನಲ್ ಮನಸ್ಸಿನವರು ವಿದ್ಯಾರ್ಥಿಗಳಾಗಲೀ ಸಂಶೋಧಕರಾಗಲೀ ಆಗಲಾರರು. ಆದ್ದರಿಂದಲೇ ‘ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯವನ್ನು ಮುಚ್ಚಿ’ ಎಂಬ ಕೂಗು ಅವರ ಹಾಗೂ ಅವರ ಸೂತ್ರಧಾರರ ಬಾಯಲ್ಲಿ ಸಲೀಸಾಗಿ ಬರುತ್ತದೆ.

ಇಡೀ ಇಂಡಿಯಾದಲ್ಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಷ್ಟು ಶ್ರೇಷ್ಠ ವಿಶ್ವವಿದ್ಯಾಲಯ ಇನ್ನೊಂದಿಲ್ಲ. ಅಲ್ಲಿಂದ ಬಂದಿರುವಷ್ಟು ಸ್ವತಂತ್ರ ಮನಸ್ಸಿನ ಅಧ್ಯಾಪಕ, ಅಧ್ಯಾಪಕಿಯರು, ವಿದ್ಯಾರ್ಥಿಗಳು  ಇನ್ನಾವ ವಿಶ್ವವಿದ್ಯಾಲಯದಿಂದಲೂ ಬಂದಿಲ್ಲ. ಇಡೀ ಜಗತ್ತೇ ಗೌರವಿಸುವ ಚರಿತ್ರಕಾರರಾದ ರೊಮಿಲಾ ಥಾಪರ್, ಇರ್ಫಾನ್ ಹಬೀಬ್ ಥರದವರು ಇಲ್ಲಿಂದ ಬಂದವರು. ಎಲ್ಲ ಕ್ಷೇತ್ರಗಳಲ್ಲಿ ಆಳವಾಗಿ ಚಿಂತಿಸುವ, ಬರೆಯುವ ಚಿಂತಕ, ಚಿಂತಕಿಯರನ್ನು ಜೆಎನ್‌ಯು ಕೊಟ್ಟಿದೆ. ಇಲ್ಲಿ ಓದಿದ ನೂರಾರು ಜನ ವಿದೇಶಗಳಲ್ಲಿ ಅಧ್ಯಾಪಕ, ಅಧ್ಯಾಪಕಿಯರಾಗಿದ್ದಾರೆ. ಈಚೆಗೆ ಕೋಮುವಾದಿಗಳ ಉಪಟಳಕ್ಕೆ ಗುರಿಯಾಗಿರುವ ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿ ಕೂಡ ಕಳೆದ ವರ್ಷ ದೇಶದ ವಿಶ್ವವಿದ್ಯಾಲಯಗಳಲ್ಲಿ ಪ್ರಥಮ ಸ್ಥಾನಕ್ಕೇರಿದೆ.

ಆದರೆ ಕಳೆದ ಐವತ್ತು ವರ್ಷಗಳಲ್ಲಿ ದೇಶ ವಿಭಜನೆಯೊಂದನ್ನು ಬಿಟ್ಟು ಇನ್ನಾವ ವಲಯದಲ್ಲೂ ‘ಸಂಶೋಧನೆ’ ಮಾಡಲಾಗದ ಕೋಮುಶಕ್ತಿಗಳಿಗೆ ಇಂಥ ವಿಶ್ವವಿದ್ಯಾಲಯಗಳನ್ನು ನಾಶ ಮಾಡಿದರೆ ತಮ್ಮ ಪೌರೋಹಿತ್ಯ ಹಾಗೂ ಬಂಡವಾಳವಾದಿ ಮಾರ್ಗಗಳು ಸಲೀಸಾಗಿ ನಡೆಯುತ್ತವೆ ಎಂಬ ಕೆಟ್ಟ ನಂಬಿಕೆ ಬಂದಂತಿದೆ. ಆದರೆ, ಕಳೆದ ಐವತ್ತು ವರ್ಷಗಳಲ್ಲಿ ಇಂಡಿಯಾ ಬಹುದೂರ ಚಲಿಸಿದೆ. ಅಂಬೇಡ್ಕರ್ ಪ್ರತಿಪಾದಿಸಿದ ಸಾಮಾಜಿಕ ನ್ಯಾಯದ ಚಿಂತನೆಗಳು ಹಾಗೂ ಅವುಗಳ ಅನುಷ್ಠಾನಗಳ ಫಲ ವಿಶ್ವವಿದ್ಯಾಲಯಗಳಾಚೆಗೂ ಹಬ್ಬಿವೆ. ದಲಿತ, ಶೂದ್ರ ಜಾತಿಗಳಲ್ಲಿ ಸ್ವತಂತ್ರ ಚಿಂತಕ, ಚಿಂತಕಿಯರು, ನಾಯಕರು ಹುಟ್ಟಿಕೊಂಡಿದ್ದಾರೆ.ಮಾರ್ಕ್ಸ್‌ವಾದಿ ಚಿಂತನೆಗಳು ಪ್ರಗತಿಪರರ, ಸ್ತ್ರೀವಾದಿಗಳ, ಜನಪರ ಚಳವಳಿಗಾರರ ಭಾಗಗಳಾಗಿ ಹೋಗಿವೆ. 

ಇಂಥ ಹೊಸ ಚಲನೆಗಳಿಗೆ ಕಾರಣವಾಗಿರುವ ತಾತ್ವಿಕ ಕೇಂದ್ರಗಳನ್ನು ನಾಶಪಡಿಸುವ ಕೆಲಸ ವ್ಯವಸ್ಥಿತವಾಗಿ ಶುರುವಾಗಿದೆ:  ಅಂಬೇಡ್ಕರ್–ಪೆರಿಯಾರ್ ಸ್ಟಡಿ ಸರ್ಕಲ್ ವಿರುದ್ಧ ಪಿತೂರಿ ಮಾಡಿದವರೇ ಮಾರ್ಕ್ಸ್ ವಾದ, ಸ್ತ್ರೀವಾದಗಳ ವಿರುದ್ಧ ಚಿಂತನೆಗಳನ್ನು ರೂಪಿಸುತ್ತಿರುತ್ತಾರೆ; ಅಂಥವರೇ ಜಾತ್ಯತೀತತೆಯನ್ನೂ ದುರ್ಬಲ ವರ್ಗಗಳಿಗೆ ಮೀಸಲಾತಿಯನ್ನೂ ವಿರೋಧಿಸುತ್ತಾರೆ. ಈಗಂತೂ ಅವರ ಎದೆಯಲ್ಲಿರುವ ವಿಷ ಶರವೇಗದಲ್ಲಿ ಹೊರಬರುತ್ತಿದೆ: ಅವರು ಅಂಬೇಡ್ಕರ್ ಪೆರಿಯಾರರನ್ನು ಓದಬೇಡಿ ಎಂದು ಸ್ಟಡಿ ಸರ್ಕಲ್ ಮುಚ್ಚಿ ಎನ್ನುತ್ತಾರೆ. ನಂತರ ದಲಿತರ ಪ್ರಾಬಲ್ಯವಿರುವ ಹೈದರಾಬಾದ್ ವಿಶ್ವವಿದ್ಯಾಲಯವನ್ನು ‘ಶುದ್ಧೀಕರಿಸಬೇಕು’ ಎಂದು ಕೂಗುತ್ತಾರೆ; ಇದೀಗ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯವನ್ನು ಮುಚ್ಚಬೇಕೆಂದು ಚೀರುತ್ತಿದ್ದಾರೆ.

ಹಿಂದೆ ಕರ್ನಾಟಕದ ಹೆಮ್ಮೆಯ ಕನ್ನಡ ವಿಶ್ವವಿದ್ಯಾಲಯವನ್ನೂ ನಾಶ ಮಾಡಲೆತ್ನಿಸಿದರು. ನಾಳೆ ಅವರು ಎಲ್ಲ ವಿಶ್ವವಿದ್ಯಾಲಯಗಳನ್ನೂ ಮುಚ್ಚಿ ತಮ್ಮ ಗುರುಮಠಗಳನ್ನು ಸ್ಥಾಪಿಸಲು ಸಿದ್ಧರಾಗಬಹುದು. ಇಂಥ ಜಡರಿಗೆ ಇಂಡಿಯಾದ ವಿದ್ಯಾರ್ಥಿಗಳ ವಿಚಿತ್ರ ನೈತಿಕ ಶಕ್ತಿಯ ಚರಿತ್ರೆ ಗೊತ್ತಿರಲಿಕ್ಕಿಲ್ಲ. 40 ವರ್ಷಗಳ ಕೆಳಗೆ ವಿದ್ಯಾರ್ಥಿಗಳು ಜೆ.ಪಿ. ಚಳವಳಿಯ ಆಧಾರಸ್ತಂಭವಾಗಿದ್ದರು. ಆನಂತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ವಿರೋಧಿಸಿ ಐಐಟಿಯ ಹುಡುಗರು ಗಲಾಟೆಯೆಬ್ಬಿಸಿದಾಗ, ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಉಳಿಸಿಕೊಡುವಲ್ಲಿ ದಲಿತ ಹುಡುಗರು ಪ್ರಧಾನ ಪಾತ್ರ ವಹಿಸಿದ್ದರು. ಮೊನ್ನೆ ತಾನೇ ಮುಗಿದ ತೆಲಂಗಾಣ ಹೋರಾಟಕ್ಕೆ ಎಂಬತ್ತುಭಾಗ ಕೊಡುಗೆ ಕೊಟ್ಟವರು ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಎಂದು ಈ ಚಳವಳಿಯನ್ನು ಹತ್ತಿರದಿಂದ ಗಮನಿಸಿರುವ ಡಾ. ತಾರಕೇಶ್ವರ್ ಹೇಳಿದರು.

ತೆಲಂಗಾಣ ಹೋರಾಟದ ಹಿರಿಯ ನಾಯಕರಾದಿಯಾಗಿ ಎಲ್ಲರೂ ತೆಲಂಗಾಣ ಹೋರಾಟದ ಆರಂಭತಾಣವಾದ ಉಸ್ಮಾನಿಯಾ ಆರ್ಟ್ಸ್ ಕಾಲೇಜಿನ ಮೇಲೆ ಆಣೆಯಿಟ್ಟು ‘ತೆಲಂಗಾಣವನ್ನು ಸಾಧಿಸಲು ನಾವು ಬದ್ಧ’ ಎಂದು ಘೋಷಿಸಿದ್ದನ್ನೂ ನೆನೆಸಿಕೊಂಡರು. ಇಂಡಿಯಾದ ವಿದ್ಯಾರ್ಥಿಗಳು ಕಳೆದ 40 ವರ್ಷಗಳಲ್ಲಿ ಭ್ರಷ್ಟಾಚಾರ, ಸರ್ವಾಧಿಕಾರಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ; ವಿಕೇಂದ್ರೀಕರಣದ, ಸಾಮಾಜಿಕ ನ್ಯಾಯದ ಹೋರಾಟಗಳನ್ನು ಮುನ್ನಡೆಸಿದ್ದಾರೆ. ಈ ಚರಿತ್ರೆ ಕೋಮುವಾದದ ಹಲವು ದಿಕ್ಕಿನ ಆರ್ಭಟದ ವಿರುದ್ಧ ನಿಂತಿರುವ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬೇಕು.  

ಇಂಡಿಯಾದಲ್ಲಿ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಸಿಟ್ಟಿಗೆದ್ದಾಗಲೆಲ್ಲ ಸರ್ಕಾರಗಳು ಕುಸಿದು ಬಿದ್ದಿವೆ. ಸರ್ಕಾರದ ಬೆಂಬಲವಿದೆಯೆಂಬ ಹಮ್ಮಿನಲ್ಲಿ ಮತೀಯವಾದಿಗಳು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಮೂಗು ತೂರಿಸಿ ಮಾಡುತ್ತಿರುವ ಹಾವಳಿ, ವಿದ್ಯಾರ್ಥಿಗಳ ವಿರುದ್ಧ ಬಳಸುತ್ತಿರುವ ಕ್ರೂರ ಭಾಷೆ ಅವರಿಗೇ ಮುಳುವಾಗುತ್ತದೆ. ಮೊನ್ನೆ ಬೆಂಗಳೂರಿನಲ್ಲಿ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಗಾಗಿ ಮೆರವಣಿಗೆ ನಡೆಸಿದ್ದ ಬಹುಜನ ವಿದ್ಯಾರ್ಥಿ ಸಂಘದ ಮೇಲೆ ಪೊಲೀಸರ ಲಾಠಿ ಚಾರ್ಜ್ ನೋಡಿದವರಿಗೆ ಕಾಂಗ್ರೆಸ್ ಸರ್ಕಾರ ಕೂಡ ಎಪ್ಪತ್ತರ ದಶಕದ ಮೂಡಿನಲ್ಲೇ ಇರುವಂತೆ ಕಾಣುತ್ತದೆ.

ಕೇಂದ್ರವಿರಲಿ, ರಾಜ್ಯವಿರಲಿ, ಬಹುಮತದ ಹಮ್ಮಿನಲ್ಲಿ ಪೊಲೀಸರ ಮೂಲಕ ನಡೆಸಲಾಗುವ ಎಲ್ಲ ಹಲ್ಲೆಗಳೂ ಸರ್ಕಾರಗಳ ಗೋರಿಗಳನ್ನು ಒಂದೊಂದೇ ಇಂಚು ಅಗೆಯುತ್ತಾ ಇರುತ್ತವೆ. ಇತಿಹಾಸದ ಪುಟಗಳಿಂದ ನಮ್ಮ ರಾಜಕಾರಣಿಗಳು ಏನನ್ನೂ ಕಲಿಯುವಂತೆ ಕಾಣುವುದಿಲ್ಲ. ಇಷ್ಟೆಲ್ಲದರ ನಡುವೆ, ಅಕಸ್ಮಾತ್ ದಿಕ್ಕುತಪ್ಪಿದ ವಿದ್ಯಾರ್ಥಿಯೊಬ್ಬ ದೇಶವಿರೋಧಿ ಘೋಷಣೆ ಕೂಗಿದನೆಂದೇ ಇಟ್ಟುಕೊಳ್ಳಿ. ಅವನನ್ನು ಮಗನಂತೆ ಕರೆದು ತಿದ್ದಲು, ಬುದ್ಧಿ ಹೇಳಲು ಮೇಷ್ಟರುಗಳಿದ್ದಾರೆ. ವಿಶ್ವವಿದ್ಯಾಲಯದ ಶಿಸ್ತುಸಮಿತಿಯಿದೆ. ಲೋಹಿಯಾ ಮತ್ತೊಂದು ಸಂದರ್ಭದಲ್ಲಿ ಹೇಳಿದ ಮಾತುಗಳನ್ನು ಇಲ್ಲಿ ಮಾರ್ಪಡಿಸಿ ಹೇಳಬಹುದು: ತನ್ನ ಮಕ್ಕಳು ತನ್ನನ್ನು ವಿರೋಧಿಸಿದರೆ ತಾಯಿ ಭಾರತಿ ಅವರನ್ನು ಕರೆದು ತಿದ್ದುತ್ತಾಳೆಯೇ ಹೊರತು ಶಿಕ್ಷಿಸುತ್ತೇನೆ ಎಂದು ಹೊರಡುವುದಿಲ್ಲ.

ಇಂಥ ಸಂದರ್ಭಗಳಲ್ಲಿ ತಮ್ಮ ಪಕ್ಷಗಳ ಬೇಳೆ ಬೇಯಿಸಿಕೊಳ್ಳಲು ರಾಜಕಾರಣಿಗಳು ನುಗ್ಗುವುದರಿಂದಲೇ ಕ್ಯಾಂಪಸ್ಸುಗಳು ರಾಡಿಯಾಗುತ್ತವೆ. ಜೆ.ಪಿ.ಯವರಂಥ ಪಕ್ಷಾತೀತ ಹಿರಿಯರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾಡಲು ಇದು ಸಕಾಲ. ಇದೇ ಸಂದರ್ಭದಲ್ಲಿ ದೇಶಪ್ರೇಮದ ಅಬ್ಬರದ ಭಾಷೆ ಬಳಸಿ ಮಾತಾಡುತ್ತಿರುವವರು ಯಾರು ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ: ದೇಶದ ಭೂಮಿಯನ್ನು ಇಂಚಿಂಚೇ ಬಂಡವಾಳಶಾಹಿಗಳಿಗೆ ಮಾರುವುದನ್ನು ಬೆಂಬಲಿಸುವವರು ದೇಶಪ್ರೇಮದ ಪಾಠ ಮಾಡುತ್ತಿದ್ದಾರೆ. ಮೊನ್ನೆ ತಾನೇ ನಾಡಿನ ಗಣಿಗಳ ಲೂಟಿಕೋರರಿಂದ ಹಣ ವಸೂಲಿ ಮಾಡುತ್ತಿದ್ದವರಿಂದ ಇಂದು ನಾಡಪ್ರೇಮದ ಭಾಷಣ! ಇದು ಈ ಕಾಲದ ವ್ಯಂಗ್ಯ.

ಇಂಡಿಯಾದ ಗಡಿಗಳಲ್ಲಿ ಇವತ್ತು ಗುಂಡಿಗೆ ಎದೆಯೊಡ್ಡಿ ಸಾಯುತ್ತಿರುವ ಬಹುತೇಕರು ಬಡವರಾದ ಶೂದ್ರರು, ದಲಿತರೇ ಹೊರತು ದಿನನಿತ್ಯ ದೇಶಪ್ರೇಮದ ಬಗ್ಗೆ ಕೂಗುತ್ತಿರುವವರ ಮಕ್ಕಳಲ್ಲ. ಮಾತೆತ್ತಿದರೆ ದೇಶಭಕ್ತಿಯ ಭಾಷಣ ಕೊಡುವವರೇ ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳಿಸಲು ತುದಿಗಾಲಲ್ಲಿರುತ್ತಾರೆ; ವಿದೇಶಗಳಲ್ಲಿ ಸೊಂಪಾಗಿ ಕೂತು, ಇಂಡಿಯಾಕ್ಕೆ ಬರಲೊಪ್ಪದೆ ದೇಶಭಕ್ತಿಯ ಸಂದೇಶವನ್ನು ಅಲ್ಲಿಂದಲೇ ಜಾಲತಾಣಗಳಲ್ಲಿ  ಬಿತ್ತುವ ದೇಶಭಕ್ತರೂ ದಂಡಿಯಾಗಿದ್ದಾರೆ! ಈ ನೆಲದಲ್ಲಿಯೇ ಹುಟ್ಟಿ, ಇಲ್ಲಿಯೇ ನರಳಿ, ದೇಶಕ್ಕೆಲ್ಲ ಬೆಳೆ ಬೆಳೆದುಕೊಟ್ಟು ಇಲ್ಲಿಯೇ ನೇಣು ಹಾಕಿಕೊಳ್ಳುತ್ತಿರುವ ರೈತರನ್ನು ಉಳಿಸಿಕೊಳ್ಳಲು ಹೋರಾಡಬೇಕೆಂಬ ದೇಶಪ್ರೇಮ ಈ ಹುಸಿ ದೇಶಭಕ್ತರ ಬಾಯಲ್ಲಿ ಎಂದೂ ಹೊರಟಂತಿಲ್ಲ. ಈ ಕಹಿ ಸತ್ಯಗಳ ಹಿನ್ನೆಲೆಯಲ್ಲಿ ಕನ್ಹಯ್ಯಾ  ಪ್ರಕರಣವನ್ನು ನೋಡಿದರೆ, ನಮ್ಮ ಸಾರ್ವಜನಿಕ ಭಾಷೆಯ ಹುಸಿತನ, ದೇಶ ಮುಂತಾದ ಪರಿಕಲ್ಪನೆಗಳನ್ನು ತಮಗೆ ಬೇಕಾದಂತೆ  ಅಗ್ಗವಾಗಿ ಬಳಸುವವರ ಕುಟಿಲತೆಗಳು ಕಾಣತೊಡಗುತ್ತವೆ.

ಕೊನೆ ಟಿಪ್ಪಣಿ : ಕರ್ನಾಟಕದ ಬೃಹತ್ ವಿದ್ಯಾರ್ಥಿ ಒಕ್ಕೂಟ
ಈ ಟಿಪ್ಪಣಿ ಬರೆಯುವ ದಿನ ಕರ್ನಾಟಕದಲ್ಲಿ ನಡೆದ ಚಾರಿತ್ರಿಕ ಬೆಳವಣಿಗೆಯೊಂದನ್ನು ಅನೇಕರು ಗಮನಿಸಿರಬಹುದು. ವಿವಿಧ ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳು ಒಟ್ಟಾಗಿ ಸೇರಿ ರೋಹಿತ್ ವೇಮುಲರ ಆತ್ಮಹತ್ಯೆಗೆ ಕಾರಣರಾದವರನ್ನು ಖಂಡಿಸಿದವು. ಜೆಎನ್‌ಯು ಪ್ರಕರಣದಲ್ಲಿ ನಡೆದ ಹಲ್ಲೆಗಳನ್ನೂ ಒಕ್ಕೂಟ ಖಂಡಿಸಿತು.  ಈಗ ಶುರುವಾಗಿರುವ ಈ ವಿಶಾಲ ಸಂಘಟನೆಯನ್ನು ತಾತ್ವಿಕ ಚೌಕಟ್ಟಿನ ಮೂಲಕ ಗಟ್ಟಿಯಾಗಿಸುವ ಅಗತ್ಯವಿದೆ. ಇಲ್ಲಿ ಸೇರಿರುವ ಎಲ್ಲ ಸಂಘಟನೆಗಳನ್ನೂ ಬೆಸೆಯುವ ಚಿಂತನೆಗಳು, ಕಾರ್ಯಕ್ರಮಗಳನ್ನು ರೂಪಿಸಬೇಕು.

ಪ್ರಗತಿಪರ ಚಳವಳಿಗಳ ಹಿರಿಯರೊಡನೆ ಚರ್ಚಿಸಿ ವಿಶಾಲವಾದ ಸಾಮಾನ್ಯ ಕಾರ್ಯಕ್ರಮಗಳನ್ನು ರೂಪಿಸಬೇಕು.  ಈ ಸಂಘಟನೆಯಲ್ಲಿ ಭಾಗಿಯಾಗುವ ಎಲ್ಲರೂ ಮಾರ್ಕ್ಸ್, ಅಂಬೇಡ್ಕರ್, ಜೆ.ಪಿ. ಲೋಹಿಯಾ ಮುಂತಾದವರ ಚಿಂತನೆಗಳನ್ನು, ಇಂದಿನ  ಸಮಾಜದ ಬಿಕ್ಕಟ್ಟುಗಳನ್ನು ಸರಳವಾಗಿಯಾದರೂ ಅರಿಯುವುದು ಮುಖ್ಯ. ಇದೀಗ ಎಲ್ಲೆಡೆ ಸ್ಫೋಟಗೊಳ್ಳುತ್ತಿರುವ ವಿದ್ಯಾರ್ಥಿಗಳ ಸಾತ್ವಿಕ ಸಿಟ್ಟು ಅಹಿಂಸಾವಾದಿ ಮಾರ್ಗದಲ್ಲಿ ದೃಢವಾಗಿ ಸಾಗಿದರೆ ಅದರ ಉತ್ತಮ ಫಲ ದೇಶಕ್ಕೆ ದಕ್ಕಬಲ್ಲದು; ಅಸಲಿ ದೇಶಭಕ್ತರು ಆಗ ಹುಟ್ಟಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT