ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ನಿರೀಕ್ಷೆಗಳ ಹೊಸ್ತಿಲಲ್ಲಿ...

Last Updated 7 ಜುಲೈ 2012, 19:30 IST
ಅಕ್ಷರ ಗಾತ್ರ

ಕರ್ನಾಟಕ ಇನ್ನೊಂದು ರಾಜಕೀಯ ಮಜಲಿನ ಹೊಸ್ತಿಲಲ್ಲಿ ನಿಂತುಕೊಂಡಿದೆ. ಮುಂದಿನ ವಾರದ ಆರಂಭದಲ್ಲಿ ಹೊಸ ಸರ್ಕಾರದ ಪ್ರಮಾಣ ವಚನ ನಡೆಯುವುದು ನಿರೀಕ್ಷೆಯಂತೆಯೇ ನಿಜವಾಗಿದೆ.
 
ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರ ನಡುವಿನ ಹಗ್ಗ ಜಗ್ಗಾಟದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣದ ಬಲ ಹೆಚ್ಚಾದಂತೆ ಕಾಣುತ್ತದೆ. ಇಲ್ಲವಾದರೆ, ಹೈಕಮಾಂಡಿನ ನಾಯಕರು ಸದಾನಂದಗೌಡರಿಗೆ `ನೀವು ಗದ್ದುಗೆ ತೊರೆಯಬೇಕಾಗುತ್ತದೆ~ ಎಂಬ ಇಂಗಿತ ಕೊಡುತ್ತಿರಲಿಲ್ಲ.
 
ಅವರು ಹಾಗೆ ಇಂಗಿತ ಕೊಟ್ಟಿರದೇ ಇದ್ದರೆ ಗೌಡರು ಈಗ ಮಾತನಾಡುವ ಹಾಗೆ ಬೆದರಿಕೆಯ ಮಾತು ಆಡುತ್ತಿರಲಿಲ್ಲ. ದೆಹಲಿಗೆ ಹೋಗಿ ಬಂದಾಗಿನಿಂದ ಅವರ ಮುಖದಲ್ಲಿನ ನಗು ಕಡಿಮೆಯಾಗಿದೆ.

ಬಿಜೆಪಿ ಹೈಕಮಾಂಡಿಗೆ `ಸದಾನಂದಗೌಡರು ಇನ್ನು ಸಾಕು~ ಎನ್ನಿಸಲು ಅನೇಕ ಕಾರಣಗಳು ಇದ್ದುವು. ರಾಜ್ಯದಲ್ಲಿ 14ನೇ ವಿಧಾನಸಭೆಗೆ ಚುನಾವಣೆ ನಡೆಯಲು ಬಹಳ ಕಾಲವೇನೂ ಉಳಿದಿಲ್ಲ. ವಾಸ್ತವದಲ್ಲಿ ಮುಂದಿನ ಏಪ್ರಿಲ್-ಮೇನಲ್ಲಿ ಚುನಾವಣೆ ನಡೆಯಬೇಕಾದರೂ ಚುನಾವಣೆ ಆಯೋಗ ಮನಸ್ಸು ಮಾಡಿದರೆ ಡಿಸೆಂಬರ್‌ನಲ್ಲಿಯೇ ಅದು ನಡೆದು ಬಿಡಬಹುದು.
 
`ಹಾಗಾದರೆ ಉಳಿದಿರುವುದು ಐದಾರು ತಿಂಗಳು ಮಾತ್ರ. ಈ ಅವಧಿಯಲ್ಲಿ ರಾಜ್ಯದಲ್ಲಿ ಒಂದು `ಸರ್ಕಾರ~ವನ್ನು ಮರಳಿ ಸ್ಥಾಪಿಸಬೇಕು. ಆಡಳಿತವನ್ನು ಹಳಿಯ ಮೇಲೆ ಕೂಡ್ರಿಸಬೇಕು. ಪಕ್ಷವನ್ನು ಅಡ್ಡಡ್ಡ ಸೀಳಿರುವ ಭಿನ್ನಮತವನ್ನು ನಿಯಂತ್ರಣಕ್ಕೆ ತರಬೇಕು. ಇದೆಲ್ಲ ಸಾಧ್ಯವಾಗಬೇಕಾದರೆ ಸದಾನಂದಗೌಡರನ್ನು ಮೊದಲು ಬದಲಿಸಬೇಕು.

ಯಡಿಯೂರಪ್ಪ ಅವರಿಗೆ ಕೊಟ್ಟ `ಶಿಕ್ಷೆ~ಯಿಂದಾಗಿ ಮುನಿಸಿಕೊಂಡಿರುವ ಲಿಂಗಾಯತರನ್ನು ಸಮಾಧಾನ ಮಾಡಬೇಕು. ಅಂದರೆ ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರ ಹಿಡಿಯಬಹುದು~ ಎಂದು ಹೈಕಮಾಂಡ್ ಲೆಕ್ಕ ಹಾಕಿರುವಂತಿದೆ.

ಹೈಕಮಾಂಡ್ ಇಷ್ಟು ಸುಲಭವಾಗಿ ಬಗ್ಗುವ ಲಕ್ಷಣಗಳೇನೂ ಇರಲಿಲ್ಲ. ಯಡಿಯೂರಪ್ಪ ಅವರ ಸಹನೆಯ ಕಟ್ಟೆ ಒಡೆದು ಅವರ ಬಣದ ಒಂಬತ್ತು ಜನ ಸಚಿವರು ನೇರವಾಗಿ ಮುಖ್ಯಮಂತ್ರಿಗೆ ರಾಜೀನಾಮೆ ಸಲ್ಲಿಸದೇ ಇದ್ದರೆ ಹೈಕಮಾಂಡ್ ಇನ್ನಷ್ಟು ಎಳೆದಾಡುತ್ತಿತ್ತೋ ಏನೋ?
 
ಲಿಂಗಾಯತ ಸಮುದಾಯದ ಜಗದೀಶ್ ಶೆಟ್ಟರ್ ಅವರನ್ನು ಪರ್ಯಾಯ ನಾಯಕನಾಗಿ ಬಿಂಬಿಸುವ ಮೂಲಕ ಯಡಿಯೂರಪ್ಪನವರು ಹೈಕಮಾಂಡಿನ ಕೈಗಳನ್ನು ಕಟ್ಟಿ ಹಾಕಿದರು. ಇದುವರೆಗೆ ಅವರು ಗೌಡರನ್ನು ತೆಗೆಯಬೇಕು ಎಂದು ಹೇಳುತ್ತಿದ್ದರು ಮತ್ತು ತಮ್ಮನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುತ್ತಿದ್ದರು.
 
ಅದನ್ನು ಹೈಕಮಾಂಡ್ ಒಪ್ಪಲು ಸಾಧ್ಯವಿರಲಿಲ್ಲ. ಶೆಟ್ಟರ್ ಅವರು ಮುಖ್ಯಮಂತ್ರಿಯಾದರೆ ಈ ಸರ್ಕಾರದಲ್ಲಿ ಲಿಂಗಾಯತರಿಗೆ ಅನ್ಯಾಯವಾಯಿತು ಎಂದು ದೂರಲು ತಮ್ಮ ಬತ್ತಳಿಕೆಯ ಅಸ್ತ್ರವೇ ಹೊರಟು ಹೋಗುತ್ತದೆ ಎಂದು ಗೊತ್ತಿದ್ದೂ ಯಡಿಯೂರಪ್ಪನವರು ವರಸೆ ಬದಲಿಸಿದ್ದಾರೆ.
 
ಸದಾನಂದಗೌಡರನ್ನು ಕೆಳಗೆ ಇಳಿಸಬೇಕಾದರೆ ತಾವು ಮೊದಲು ವಿರೋಧಿಸಿದ ಶೆಟ್ಟರ್ ಅವರಿಗೇ ಪಟ್ಟ ಕಟ್ಟುವುದು ಅನಿವಾರ್ಯ ಎಂದು ಅವರಿಗೆ ಹಿಂದೆಯೇ ಗೊತ್ತಾಗಬೇಕಿತ್ತು.

ತಡವಾಗಿ ತಿಳಿವು ಮೂಡಲು ತೆರೆಯ ಹಿಂದೆ ಸಾಕಷ್ಟು ಕಸರತ್ತೂ ನಡೆದಿರಬಹುದು. ರಾಜೀನಾಮೆ ಕೊಟ್ಟ ಸಚಿವರ ನಾಯಕತ್ವವನ್ನು ಶೆಟ್ಟರ್ ಅವರು ವಹಿಸಿದ ನಂತರವೇ ಹೈಕಮಾಂಡ್ ಗಾಢ ನಿದ್ದೆಯಿಂದ ಎಚ್ಚೆತ್ತುಕೊಂಡಿತು. ಇಲ್ಲವಾದರೆ ದುಷ್ಪರಿಣಾಮಗಳು ಆಗಬಹುದು ಎಂಬ ಅಂಜಿಕೆ ಕಾಡತೊಡಗಿತು.

ತಕ್ಷಣದಲ್ಲಿ ನಡೆಯುವ ರಾಷ್ಟ್ರಪತಿ ಚುನಾವಣೆಯಲ್ಲಿ ಪಕ್ಷಕ್ಕೆ ಮುಖಭಂಗ ಆಗುವ ಸಾಧ್ಯತೆಯೂ ಇತ್ತು. ಅಲ್ಲಿಗೆ ಸದಾನಂದಗೌಡರಿಗೆ ಸರ್ಕಾರವನ್ನು ಜತೆಗೆ ತೆಗೆದುಕೊಂಡು ಹೋಗಲು ಆಗುತ್ತಿಲ್ಲ ಎಂಬುದು ಹೈಕಮಾಂಡ್‌ಗೆ ಗೋಡೆಮೇಲಿನ ಬರಹದಂತೆ ಕಾಣತೊಡಗಿತು.
 
ಶಾಸಕಾಂಗದ ಸಭೆ ಕರೆದಿದ್ದರೆ ಗೌಡರ ಪರವಾಗಿ ಕೈ ಎತ್ತುವವರು ಎಷ್ಟು ಜನ ಇರುತ್ತಿದ್ದರೋ? ಗೌಡರು ಬರೀ ಶಾಸಕರ ಬೆಂಬಲ ಮಾತ್ರವಲ್ಲ, ಆರ್‌ಎಸ್‌ಎಸ್ ಬೆಂಬಲವನ್ನೂ ಕಳೆದುಕೊಂಡಂತೆ ಕಂಡುಬಂತು. ಅವರು ಮುಖ್ಯಮಂತ್ರಿಯಾಗುವಾಗ ಬೆಂಬಲಕ್ಕೆ ನಿಂತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸಂಘದ ಮುಖಂಡರೂ ಬೇರೆ ಕಡೆ ಮುಖ ಮಾಡಿದ್ದಾರೆ.

ಸದಾನಂದಗೌಡರ ಕಳೆದ ಹನ್ನೊಂದು ತಿಂಗಳ ಆಡಳಿತದಲ್ಲಿ ಒಂದೇ ಒಂದು ಹಗರಣ ನಡೆದಿಲ್ಲ ಎಂಬುದು ನಿಜ. ಹಾಗೆಂದು ಸರ್ಕಾರ ದಕ್ಷವಾಗಿ, ಪರಿಣಾಮಕಾರಿಯಾಗಿ ಆಡಳಿತ ನಡೆಸಿತೇ ಎಂದರೆ ಅದಕ್ಕೂ `ಇಲ್ಲ~ ಎಂಬ ಉತ್ತರವೇ ಬರುತ್ತದೆ.
 
ಎಚ್.ಡಿ.ಕುಮಾರಸ್ವಾಮಿಯವರ ಮಾತುಗಳಲ್ಲಿಯೇ ಹೇಳಬಹುದಾದರೆ `ಗೌಡರು ಒಳ್ಳೆಯವರು. ಆದರೆ ನಿರುಪಯುಕ್ತ!~ ಒಂದು ಸರ್ಕಾರ ದಕ್ಷ ಆಡಳಿತ ನಡೆಸಬೇಕಾದರೆ ಸಂಪುಟ ಎಂಬುದು ಸಂಪೂರ್ಣವಾಗಿ ಅಸ್ತಿತ್ವದಲ್ಲಿ ಇರಬೇಕು.
 
ಅದರ ಮೇಲೆ ಮುಖ್ಯಮಂತ್ರಿಗೆ ಪ್ರಶ್ನಾತೀತ ಅಧಿಕಾರ ಇರಬೇಕು. ಎಲ್ಲ ಸಚಿವರಿಗೆ ತಕ್ಕ ಮಟ್ಟಿನ ಸ್ವಾತಂತ್ರ್ಯ ಇರಬೇಕು. ಅಧಿಕಾರಿಗಳ ಮೇಲೆ ನಿಯಂತ್ರಣ ಇರಬೇಕು. ಜಾರಿಗೆ ತರಲು ಜನರಿಗೆ ಕಾಣುವಂಥ ಕಾರ್ಯಕ್ರಮಗಳು ಇರಬೇಕು.
 
ಆದರೆ, ಸದಾನಂದಗೌಡರ ಸರ್ಕಾರದಲ್ಲಿ ಇದು ಯಾವುದೂ ಇರಲಿಲ್ಲ. ಅವರು ಪ್ರಾಮಾಣಿಕರು; ಅವರು ಪ್ರಾಮಾಣಿಕ ಆಗಿರಲೇಬೇಕಿತ್ತು. ಹಿಂದಿನ ಸರ್ಕಾರದ ಕಟು ಅನುಭವಗಳು ಅವರ ಬೆನ್ನ ಹಿಂದೆ ಕಾಡುತ್ತಲೇ ಇದ್ದುವು. ಹಾಗೆಂದೇ ಅವರಿಗೆ ಯಾವ ನಿರ್ಧಾರ ತೆಗೆದುಕೊಳ್ಳಲೂ ಧೈರ್ಯ ಇರಲಿಲ್ಲ. ನಡೆಯುವವನು ಎಡವುತ್ತಾನೆ.

ಏನು ಮಾಡುವುದು ಎಂದೂ ಅವರಿಗೆ ತಿಳಿಯಲಿಲ್ಲ. ಹೀಗಾಗಿ ಅವರ ಆಡಳಿತ ಕ್ರಿಯಾಶೀಲ ಎನಿಸುತ್ತಿರಲಿಲ್ಲ. ಅವರ ಸಂಪುಟದ ಬಹುತೇಕ ಸಚಿವರೂ ಅವರ ಜತೆಗೆ `ಅಸಹಕಾರ~ ಮಾಡಿಕೊಂಡೇ ಸಂಪುಟದಲ್ಲಿ ಇದ್ದರು.
ಸದಾನಂದಗೌಡರು ತಿಳಿದೋ ತಿಳಿಯದೆಯೋ ಯಡಿಯೂರಪ್ಪ ಅವರನ್ನು ಬಹುಬೇಗ ಎದುರು ಹಾಕಿಕೊಂಡರು.
 
ಅದರ ಪರಿಣಾಮ ಏನಾಗಬಹುದು ಎಂದು ಲೆಕ್ಕಿಸಲಿಲ್ಲ. ತಾವು ಮುಖ್ಯಮಂತ್ರಿಯಾದ ಕೂಡಲೇ ಸಂಪಾದಕರ ಜತೆಗೆ ಮಾತನಾಡಿದ್ದ ಗೌಡರು, `ಕಳೆದ ಮೂರು ವರ್ಷಗಳ ಆಡಳಿತಕ್ಕೆ ನೀವು ಶೂನ್ಯ ಅಂಕ ಕೊಟ್ಟಿದ್ದೀರಿ~ ಎಂದಿದ್ದರು.
 
ಹಾಗೆ ಹೇಳುವಾಗ ಮೂರು ವರ್ಷಗಳ ಆಡಳಿತ ನಡೆಸಿದವರು ತಮ್ಮನ್ನು ಮುಖ್ಯಮಂತ್ರಿ ಮಾಡಿದವರೇ ಎಂಬುದು ಅವರಿಗೆ ಮರೆತು ಹೋಗಿತ್ತು. ನಂತರ ಅವರು ಯಡಿಯೂರಪ್ಪ ಅವರನ್ನು ಮರೆತೇ ಬಿಟ್ಟರು.

ತಮ್ಮ ಹಿತಾಸಕ್ತಿಗೆ ಧಕ್ಕೆ ತರುವಂಥ ನಿರ್ಣಯಗಳನ್ನು ಗೌಡರು ತೆಗೆದುಕೊಳ್ಳುತ್ತಿದ್ದಾರೆ ಎಂದು ಯಡಿಯೂರಪ್ಪ ಅವರಿಗೆ ಅನಿಸತೊಡಗಿತು. ಗಣಿ ಅಕ್ರಮಗಳಿಗೆ ಸಂಬಂಧಿಸಿದಂತೆ ಸದಾನಂದಗೌಡರ ನೇತೃತ್ವದ ಸರ್ಕಾರ ಸಿ.ಇ.ಸಿಗೆ ವರದಿ ಕೊಡುವಾಗ ಎಲ್ಲ ಮಾಜಿ ಮುಖ್ಯಮಂತ್ರಿಗಳನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ತೂಗಲಿಲ್ಲ.

ತೂಗಿದ್ದರೆ ತಮ್ಮ ಪಕ್ಷದ್ದಲ್ಲದ ಮೂವರು ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಕೊಟ್ಟ ವರದಿಯನ್ನು ಮತ್ತೆ ಬದಲಿಸಬೇಕಿರಲಿಲ್ಲ. ಆ ವೇಳೆಗಾಗಲೇ ಯಡಿಯೂರಪ್ಪ ಬಣದ ಸಚಿವರ ಅಸಹಕಾರದಿಂದ ಗೌಡರ ಸರ್ಕಾರ ಹಾಯಿಯಿಲ್ಲದ ದೋಣಿಯಂತೆ ಆಗಿತ್ತು. ಸರ್ಕಾರ ಇದ್ದರೂ ಅಷ್ಟೇ ಹೋದರೂ ಅಷ್ಟೇ ಎಂದು ಬಿಜೆಪಿಯವರೇ ಹೇಳುತ್ತಿದ್ದರು.

ಹೈಕಮಾಂಡಿಗೆ ಈಗ ಸರ್ಕಾರ ಉಳಿಸಿಕೊಳ್ಳಬೇಕು ಎನಿಸಿದೆ. ಜಗದೀಶ್ ಶೆಟ್ಟರ್ ಮುಂದಿನ ಮುಖ್ಯಮಂತ್ರಿಯಾಗುವುದಕ್ಕೆ ಹಸಿರು ನಿಶಾನೆ ಸಿಕ್ಕಿದೆ. ಆದರೆ, ಶೆಟ್ಟರ್ ಅವರಂಥ ನಾಯಕರು ಹೀಗೆ ತೂರಿಕೊಂಡು ಬಂದು ಮುಖ್ಯಮಂತ್ರಿಯಾಗಬಾರದು.

ಸದಾನಂದಗೌಡರಿಗೆ ಹೋಲಿಸಿದರೆ ಅವರಿಗೆ ತಳಮಟ್ಟದ ಜನಸಂಪರ್ಕ ಇದೆ. ವಿರೋಧ ಪಕ್ಷದ ನಾಯಕರಾಗಿ, ಸಚಿವರಾಗಿ ಕೆಲಸ ಮಾಡಿದ ಅನುಭವ ಇದೆ. ಸ್ನೇಹಪರ ಮನುಷ್ಯ ಎಂಬ ಹೆಸರೂ ಇದೆ. ಆದರೆ, ಅವರಿಗೂ ಅಳುಕು ಜಾಸ್ತಿ ಎಂಬ ಟೀಕೆಯೂ ಇದೆ.
 
ಈ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ವಿಧಾನಸಭಾಧ್ಯಕ್ಷರಾಗಿದ್ದ ಶೆಟ್ಟರ್ ಸಚಿವರಾಗಲು ಹಾತೊರೆದರು. ಆಗ ಅವರಿಗೆ ಬೆಂಬಲವಾಗಿ ರೆಡ್ಡಿ ಸೋದರರು ನಿಂತಿದ್ದರು. ಈಗ ಶೆಟ್ಟರು ಮುಖ್ಯಮಂತ್ರಿಯಾಗಲು ಯಡಿಯೂರಪ್ಪ ನೆರವಿಗೆ ಬಂದಿದ್ದಾರೆ. ಈ ಸರ್ಕಾರಕ್ಕೆ ಉಳಿದಿರುವುದು ಅಬ್ಬಬ್ಬ ಎಂದರೆ ಇನ್ನು ಹತ್ತು ತಿಂಗಳ ಅವಧಿ ಮಾತ್ರ.
 
ಹಲವು ಬಣಗಳಾಗಿ ಮಾರ್ಪಟ್ಟಿರುವ ಸರ್ಕಾರ ಎಷ್ಟು ದಿನ ಇರುತ್ತದೆ ಎಂದು ಗೊತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ನೇತೃತ್ವ ಯಾರು ವಹಿಸುತ್ತಾರೆ ಎಂದೂ ಗೊತ್ತಿಲ್ಲ. ಈಗ ಶೆಟ್ಟರ್ ಮುಖ್ಯಮಂತ್ರಿಯಾಗಿ ಬಿಟ್ಟರೆ ಅವರು ಬಹುಬೇಗ ಮಾಜಿ ಮುಖ್ಯಮಂತ್ರಿ ಆಗುತ್ತಾರೆ.

ಒಂದು ಸಾರಿ ಮುಖ್ಯಮಂತ್ರಿ ಆಗಿಬಿಟ್ಟರೆ ಸಾಕು ಎನ್ನುವುದೇ ಶೆಟ್ಟರ್ ಅವರ ಗುರಿಯೇ?
ಹೈಕಮಾಂಡ್ ಮುಂದೆ ಇದಕ್ಕಿಂತ ಹೆಚ್ಚಿನ ಗುರಿ ಮತ್ತು ಹೊಣೆ ಇದೆ. ಸರ್ಕಾರಗಳು ಬರುತ್ತವೆ ಹೋಗುತ್ತವೆ. ಆದರೆ, ಬಿಜೆಪಿ ಹೈಕಮಾಂಡಿಗೆ ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ಕರ್ನಾಟಕದಲ್ಲಿ ಪಕ್ಷದ ಬುನಾದಿ ಭದ್ರವಾಗಿ ಇರಬೇಕಾಗುತ್ತದೆ.
 
ಹಾಗೆಂದು, ಲಿಂಗಾಯತರು ಕೋಪಿಸಿಕೊಂಡಿದ್ದಾರೆ ಎಂದು ಅವರನ್ನು ಸಮಾಧಾನ ಮಾಡುವ ಕಡೆಗೇ ಹೈಕಮಾಂಡಿಗೆ ಗಮನ ಇದೆ ಎಂಬ ಸಂದೇಶ ಈಗ ಹೋಗಬಹುದಲ್ಲವೇ? ಒಬ್ಬ ಒಕ್ಕಲಿಗ ಮುಖ್ಯಮಂತ್ರಿಯನ್ನು ಲಿಂಗಾಯತರೂ ಸಹಿಸಿಕೊಳ್ಳಲಿಲ್ಲ, ಪಕ್ಷದ ಹೈಕಮಾಂಡಿಗೂ ಇಷ್ಟ ಇರಲಿಲ್ಲ ಎಂದೂ ಅನಿಸಬಹುದಲ್ಲವೇ?
ಗೌಡರು ಏನು ತಪ್ಪು ಮಾಡಿದ್ದರು ಎಂದು ಅವರ ಸಮುದಾಯ, ಬೆಂಬಲಿಗರು ಕೇಳಬಹುದಲ್ಲವೇ? ಈಗ ಹೈಕಮಾಂಡ್ ಲೆಕ್ಕಾಚಾರ ನೋಡಿದರೆ ಬರೀ ಲಿಂಗಾಯತರು, ಒಕ್ಕಲಿಗರು, ಹಿಂದುಳಿದವರನ್ನು ಮಾತ್ರ ಸಮಾಧಾನ ಮಾಡುವ ಇರಾದೆ ಇದ್ದಂತೆ ಭಾಸವಾಗುತ್ತದೆ.

ದಲಿತರು, ಅಲ್ಪಸಂಖ್ಯಾತರು ಪಕ್ಷಕ್ಕೆ ಬೇಡವೇ? ಅಷ್ಟು ವರ್ಷ ಪಕ್ಷಕ್ಕೆ ನಿಷ್ಠರಾಗಿರುವ ಗೋವಿಂದ ಕಾರಜೋಳರನ್ನು ಉಪ ಮುಖ್ಯಮಂತ್ರಿ ಮಾಡಬಾರದೇ? ಮಾಡಿದರೆ ಏನಾಗುತ್ತದೆ? ಯಡಿಯೂರಪ್ಪ ಮತ್ತು ಸದಾನಂದಗೌಡರ ಸರ್ಕಾರದಲ್ಲಿ ಎಲ್ಲ ಪ್ರಮುಖ ಖಾತೆಗಳನ್ನು ಲಿಂಗಾಯತರು ಮತ್ತು ಒಕ್ಕಲಿಗರೇ ಇಟ್ಟುಕೊಂಡಿದ್ದಾರೆ.
 
ಇದು ಪಾಳೆಗಾರಿಕೆ ಮನೋಭೂಮಿಕೆ. ಕಾರಜೋಳರಿಗೆ ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ. ಉದಾಸಿಯವರಿಗೆ ಲೋಕೋಪಯೋಗಿ. ಬೊಮ್ಮಾಯಿಯವರಿಗೆ ಜಲಸಂಪನ್ಮೂಲ. ಅಶೋಕ ಅವರಿಗೆ ಗೃಹ ಮಾತ್ರ ಸಾಲದು; ಸಾರಿಗೆಯೂ ಬೇಕು.

ಆದರೆ, ರೇವು ನಾಯಕ ಬೆಳಮಗಿ ಅವರಿಗೆ ಪಶು ಸಂಗೋಪನೆ ಮತ್ತು ಗ್ರಂಥಾಲಯ ಖಾತೆ ಕೊಟ್ಟರೆ ಬೇಕಾದಷ್ಟು ಆಯಿತು! ಕಾರಜೋಳ ಮತ್ತು ಬೆಳಮಗಿ ಅವರ ಹೆಸರನ್ನು ಬರೀ ಸಂಕೇತವಾಗಿ ಇಲ್ಲಿ ಬಳಸಿರುವೆ. ಆ ಸಮುದಾಯಗಳ ಯಾರಿಗೇ ಆದರೂ ಹೀಗೆ ಉನ್ನತ ಹುದ್ದೆ, ಅವಕಾಶ ಕೊಟ್ಟರೆ ಪಕ್ಷಕ್ಕೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇದೆ ಎಂದು ಅನಿಸುತ್ತದೆ.

ಬಿಜೆಪಿಗೆ ಅಷ್ಟು ದೊಡ್ಡ ಮನಸ್ಸು ಇದೆಯೋ ಇಲ್ಲವೋ ಗೊತ್ತಿಲ್ಲ. ಸರ್ಕಾರದ ಬಗ್ಗೆ ಜನರ ಮನಸ್ಸೂ ಸಣ್ಣದಾಗಿದೆ. ಸ್ಥಿರವಾದ ಆಡಳಿತವಿಲ್ಲದ ಒಂದು ಸರ್ಕಾರ ಜನರ ಮೇಲೆ ಮಾಡುವ ಅಡ್ಡ ಪರಿಣಾಮಗಳು ದೀರ್ಘಕಾಲೀನವಾದುವು.

ಈಗಾಗಲೇ ಆಗಿರುವ ಅಡ್ಡಪರಿಣಾಮಗಳನ್ನು ನಿವಾರಿಸುವಂಥ ಸರ್ಕಾರವನ್ನು ಕೊಡುವ ಹೊಣೆ ಜಗದೀಶ್ ಶೆಟ್ಟರ್ ಅವರ ಮೇಲೆ ಇದೆ. ಅವರ ಸಂಪುಟದ ಮೇಲೆ ಇದೆ. ಹೊಸ ಮಜಲುಗಳನ್ನು ಮುಟ್ಟುವುದು, ಕಟ್ಟುವುದು ಸುಮ್ಮನೆ ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT