ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರುಷದಲ್ಲಿ ಹಳೆಯ ರಾಗ

Last Updated 8 ಜನವರಿ 2012, 19:30 IST
ಅಕ್ಷರ ಗಾತ್ರ

ವರ್ಷ ಹೊಸತು. ಆದರೆ ಅದೇ ಹಳೆಯ ರಾಗ. ಸಚಿನ್ ತೆಂಡೂಲ್ಕರ್ ತಮ್ಮ ನೂರನೇ ಶತಕ ಗಳಿಸಲಿಲ್ಲ. ಮೊನ್ನೆ ಶುಕ್ರವಾರ, ಸಿಡ್ನಿಯಲ್ಲಿ ಸಚಿನ್ ಶತಕ ಗಳಿಸುವರೆಂದು ಬೆಳಿಗ್ಗೆ ಬೇಗ ಎದ್ದು ಕುಳಿತಿದ್ದವರಿಗೆ ನಿರಾಶೆಯಾಯಿತು.

ಇಡೀ ದೇಶ    ಸಂಭ್ರಮಪಡಲು ಕಾದಿರುವ ಆ `ನೂರನೇ ನೂರು~ ಅವರನ್ನು ಬಹಳ ಕಾಡುತ್ತಿದೆ. ನೂರಕ್ಕೂ ಹೆಚ್ಚು ರನ್ ಕೊಟ್ಟರೂ ವಿಕೆಟ್ ಪಡೆಯದ ಆಫ್‌ಸ್ಪಿನ್ನರ್ ಅಶ್ವಿನ್         ಆಸ್ಟ್ರೇಲಿಯದ ಬೌಲರುಗಳನ್ನು ದಂಡಿಸುವುದನ್ನು ನೋಡಲು ಯಾರಿಗೂ ಅಷ್ಟು ಖುಷಿಯಿಲ್ಲ. ಯಾರು ಖುಷಿ ಕೊಡಬೇಕೋ ಅವರು ಕೊಡುತ್ತಿಲ್ಲ.

ಕಳೆದ ವರ್ಷ ಮುಂಬೈನಲ್ಲಿ ಭಾರತ ವಿಶ್ವ ಕಪ್ ಗೆದ್ದ ಭಾರತ  ನಂತರ ದುರ್ಬಲ ವೆಸ್ಟ್‌ಇಂಡೀಸರನ್ನು ಮಣಿಸಿದ್ದನ್ನು ಬಿಟ್ಟರೆ ದೋನಿಪಡೆಯನ್ನು ಸೋಲಿನ ಬೆತ್ತ ಬಾರಿಸುತ್ತಲೇ ಇದೆ. ಇಂಗ್ಲೆಂಡ್‌ನಲ್ಲಿ ನಾಲ್ಕು ಹಾಗೂ ಈಗ ಆಸ್ಟ್ರೇಲಿಯದಲ್ಲಿ ಎರಡು ಟೆಸ್ಟ್‌ಗಳನ್ನು ಸೋತ ಭಾರತ ಕೆಟ್ಟ ಕ್ರಿಕೆಟ್ ಆಡುತ್ತಿದೆ.

ಒಂದಲ್ಲ ಎರಡಲ್ಲ ಸಚಿನ್ ಸತತವಾಗಿ 21 ಇನಿಂಗ್ಸ್‌ಗಳಿಂದ (ವಿಶ್ವ ಕಪ್‌ನಲ್ಲಿ ನಾಲ್ಕು, ಇಂಗ್ಲೆಂಡ್‌ನಲ್ಲಿ ನಾಲ್ಕು ಟೆಸ್ಟ್‌ಗಳಲ್ಲಿ ಎಂಟು, ವೆಸ್ಟ್‌ಇಂಡೀಸ್ ವಿರುದ್ಧ ಐದು ಹಾಗೂ ಈಗ ಆಸ್ಟ್ರೇಲಿಯದಲ್ಲಿ ನಾಲ್ಕು) ಆ ನೂರಂಕಿಗಾಗಿ ಕಾಯುತ್ತಿದ್ದಾರೆ. ಭಾರತದ ಕ್ರಿಕೆಟ್‌ಪ್ರೇಮಿಗಳೂ ಕಾಯುತ್ತಿದ್ದಾರೆ. ಇವತ್ತು ಹೊಡೆಯುತ್ತಾರೆ ಎಂಬ ನಿರೀಕ್ಷೆ ಇಂದೂ ಹೊಡೆಯಲಿಲ್ಲ ಎಂಬ ನಿರಾಶೆಯಲ್ಲಿ ಕೊನೆಗೊಳ್ಳುತ್ತಿದೆ. ನಮ್ಮ `ತೇಂಡ್ಲ್ಯಾ~ಗೆ ಏನಾಗುತ್ತಿದೆ? ಎಂಬತ್ತು ತೊಂಬತ್ತರ ವರೆಗೆ ಚೆನ್ನಾಗಿಯೇ ಆಡುವ ಅವರು ನಂತರ ಒತ್ತಡದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ನಿರೀಕ್ಷೆಯ ಭಾರ ಅವರ ಮೇಲೆ ಬಿದ್ದಿದೆಯೇ?

ಎರಡು ದಶಕಗಳಿಂದ ಸಚಿನ್ ಅವರ ಆಟವನ್ನು ನೋಡಿದವರಿಗೆ, ಈ ಮುಂಬೈಕರ್ ಯಾಕೆ ಒದ್ದಾಡುತ್ತಿದ್ದಾನೆ ಎಂದು ಬೇಸರವಾಗುವುದು ಸಹಜ. ಆತ ಮಾನಸಿಕವಾಗಿ ಬಹಳ ಗಟ್ಟಿ ಆಟಗಾರ. ಆದರೆ ಯಾಕೋ ಅವರಿಗೆ ಗುರಿ ಮುಟ್ಟಲು ಆಗುತ್ತಿಲ್ಲ. ಸಿಡ್ನಿಯಲ್ಲಿ ಅವರು 80 ರನ್ನುಗಳಿಗೆ ಔಟಾಗಿ ಪೆವಿಲಿಯನ್‌ಗೆ ಮರಳುವಾಗ ಅವರ ಮುಖದ ಭಾವ ಅವರಿಗಾದ ನಿರಾಶೆ, ನೋವನ್ನು ಹೇಳುತ್ತಿತ್ತು.

ಅಲ್ಲಿಯ ವರೆಗೆ ವೇಗದ ಬೌಲರುಗಳನ್ನು ದಿಟ್ಟತನದಿಂದಲೇ ಎದುರಿಸಿದ್ದ ಅವರಿಗೆ ಆಗೊಮ್ಮೆ ಈಗೊಮ್ಮೆ ಎಡಗೈ ತಿರುಗಿಸುವ ಮೈಕೆಲ್ ಕ್ಲಾರ್ಕ್ ಅವರಿಗೆ ವಿಕೆಟ್ ಒಪ್ಪಿಸಿದ್ದು ಇನ್ನಷ್ಟು ಬೇಸರಕ್ಕೆ ಕಾರಣವಾಗಿರಬಹುದು. ಯಾವುದೇ ಬೌಲರ್ ಕೂಡ ಸಚಿನ್ ವಿಕೆಟ್ ಪಡೆಯಲು ಕಾಯುತ್ತಿರುತ್ತಾನೆ. ಅವರ ದಾಖಲೆಯಲ್ಲಿ ತಾನು ನಕರಾತ್ಮಕವಾಗಿ ಭಾಗಿಯಾಗಲು ಯಾವ ಬೌಲರನೂ ಬಯಸುವುದಿಲ್ಲ. `ಸಚಿನ್ ನೂರು ಹೊಡೆಯಲು ಕೊಡುವುದಿಲ್ಲ~ ಎಂದು ಯಾವುದೇ ಬೌಲರ್ ಹೆಮ್ಮೆಯಿಂದಲೇ ಹೇಳಿ     ಕೊಳ್ಳುತ್ತಾನೆ.
 
ವೆಸ್ಟ್‌ಇಂಡೀಸ್‌ನ ಡರೆನ್ ಸಾಮಿ ಹಾಗೆ ಹೇಳಿಯೇ ಯಶಸ್ವಿಯಾದರು. ಈಗ ಆಸ್ಟ್ರೇಲಿಯನ್ನರು ಅದನ್ನೇ ಮಾಡುತ್ತಿದ್ದಾರೆ. ಸಚಿನ್ ಈ ಸರಣಿಯಲ್ಲೇ ತಮ್ಮ ನೂರನೇ ಶತಕ ಗಳಿಸಿದರೆ ಅವರ ಸಾಧನೆಗೆ ಹೆಚ್ಚು ಬೆಲೆ ಬರುತ್ತದೆ. ಇಲ್ಲದಿದ್ದರೆ ಅಂತೂ ಇಂತೂ ಅವರು ದಾಖಲೆ ಮಾಡಿದರು ಎಂಬ ಟೀಕೆಗೆ ಬಲಿಯಾಗುವ ಸಾಧ್ಯತೆ ಇರುತ್ತದೆ. ಮುಂದಿನ ನಿರ್ಧಾರ ಸಚಿನ್ ಅವರಿಗೇ ಬಿಟ್ಟದ್ದು.

ಆಸ್ಟ್ರೇಲಿಯನ್ನರು ಯಾವಾಗಲೂ ಭಾರತ ವಿರುದ್ಧ ಕತ್ತಿ ಮಸಿಯುತ್ತಲೇ ಇರುತ್ತಾರೆ. ವಿಶ್ವ ಕಪ್‌ನಲ್ಲಿ ಭಾರತ ಕೊಟ್ಟ ಪೆಟ್ಟಿನ ಅವಮಾನವನ್ನು ಅವರು ಅಷ್ಟು ಸುಲಭವಾಗಿ ಮರೆಯುವುದಿಲ್ಲ.          ಪ್ರೇಕ್ಷಕರಿಗೆ ತಮ್ಮ ನೆಲದ ಮೇಲೆ ಭಾರತೀಯರು ಹಿಗ್ಗಾ ಮುಗ್ಗಾ ಹೊಡೆಸಿಕೊಳ್ಳುವುದನ್ನು ಕೀಟಲೆ ಯಿಂದಲೇ ನೋಡುವುದು ಅವರ ಆಟದ ಒಂದು ಮುಖ್ಯ ಭಾಗ. ಪ್ರೇಕ್ಷಕರು ತಮ್ಮ ಹತ್ತಿರದ ಫೀಲ್ಡರನನ್ನು ಕೆಟ್ಟದಾಗಿ ಕಾಡುತ್ತಲೇ ಇರುತ್ತಾರೆ. ಆಸ್ಟ್ರೇಲಿಯದಲ್ಲಿ ಕುಡಿದು ದಾಂಧಲೆ ಹಾಕುವ ಪ್ರೇಕ್ಷಕರನ್ನು ಕ್ರೀಡಾಂಗಣದಿಂದ ಹೊರಹಾಕಿದ ಘಟನೆಗಳೂ ಇವೆ.

ಈ ಅತಿರೇಕದ ಕಾಟ ವಿರಾಟ್ ಕೊಹ್ಲಿಯಂಥ ಬಿಸಿ ರಕ್ತದ ಆಟಗಾರನನ್ನು ಕೆರಳಿಸುತ್ತದೆ. ಪ್ರೇಕ್ಷಕರು ವೈಯಕ್ತಿಕವಾಗಿ ಕೆಟ್ಟ ಬೈಗುಳ ಬೈದಾಗ ಸಹಜವಾಗಿಯೇ ಯಾರಿಗಾದರೂ ಸಿಟ್ಟು ಬರುತ್ತದೆ. ಅನುಭವಿ ಆಟಗಾರರು ಇದನ್ನು ನಿರ್ಲಕ್ಷಿಸುತ್ತಾರೆ. ಪ್ರತಿಭೆ ಇದ್ದರೂ ಸೊಕ್ಕು ಇರುವ ವಿರಾಟ್ ಕೊಹ್ಲಿ ಪ್ರೇಕ್ಷಕರತ್ತ ಮಧ್ಯದ ಬೆರಳು ತೋರಿಸುವ ಅಶ್ಲೀಲ ಕೆಲಸ ಮಾಡುವ ಬದಲು ಅದನ್ನು ಬ್ಯಾಟನ್ನು ಬಿಗಿಯಾಗಿ ಹಿಡಿದುಕೊಳ್ಳಲು ಉಪಯೋಗಿಸಿದ್ದರೆ ರನ್ನುಗಳು ಬರುತ್ತಿದ್ದವು. ಭಾರತದ ಪಿಚ್‌ಗಳ ಮೇಲೆ ರನ್ನುಗಳನ್ನು ಗಳಿಸುವುದಕ್ಕೂ ವಿದೇಶಗಳಲ್ಲಿ ಯಶಸ್ವಿ ಯಾಗುವುದಕ್ಕೂ ಎಷ್ಟೊಂದು ವ್ಯತ್ಯಾಸ ಇದೆ ಎಂಬುದು ಈಗ ವಿರಾಟ್‌ಗೆ ಅರಿವಾಗಿರಬೇಕು. ಅವರು ಬೆರಳಿನ ಪ್ರಕರಣದಲ್ಲಿ ತಪ್ಪಾಯಿತು ಎಂದು ಒಪ್ಪಿಕೊಂಡರೂ ದಂಡ ತಪ್ಪಲಿಲ್ಲವಲ್ಲ!

ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಮತ್ತು ಸುರೇಶ್ ರೈನಾ ಬಹಳ ಭರವಸೆ ಮೂಡಿಸಿದ್ದ ಆಟಗಾರರು. ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್ ಹಾಗೂ ವಿ.ವಿ.ಎಸ್ ಲಕ್ಷ್ಮಣ್ ಅವರ ಸ್ಥಾನವನ್ನು ಇವರು ತುಂಬುತ್ತಾರೆ ಎಂಬ ವಿಶ್ವಾಸ ಇತ್ತು. ಆದರೆ ಕಳೆದ ಒಂದು ವರ್ಷದಲ್ಲಿ ಈ ಯುವ ಆಟಗಾರರು ಆ ಮಟ್ಟಕ್ಕೇರಿಲ್ಲ. ಈಗಲೂ ಭಾರತ ತಂಡಕ್ಕೆ ವೀರೇಂದ್ರ ಸೆಹ್ವಾಗ್ ಅವರಿಂದಲೇ ಉತ್ತಮ ಆರಂಭ ದೊರೆಯಬೇಕು. ನಂತರ ರಾಹುಲ್ ಗೋಡೆಯಂತೆ ನಿಂತುಕೊಳ್ಳಬೇಕು. ಸಚಿನ್ ಮತ್ತು ಲಕ್ಷ್ಮಣ್ ಮೊತ್ತ ಬೆಳೆಸಬೇಕು ಎಂಬ ಸ್ಥಿತಿ ಇದೆ. ಸುರೇಶ್ ರೈನಾ      ಟೆಸ್ಟ್‌ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲಿಲ್ಲ.

ಕೊಹ್ಲಿ ಕೂಡ ಅದೇ ಹಾದಿಯಲ್ಲಿದ್ದಾರೆ. ಮುಂದಿನ ಟೆಸ್ಟ್‌ನಲ್ಲಿ ಅವರು ರೋಹಿತ್ ಶರ್ಮ ಅವರಿಗೆ ತಮ್ಮ ಸ್ಥಾನ ಬಿಟ್ಟುಕೊಡುವುದು ಖಚಿತ. ರೋಹಿತ್ ಏನು ಮಾಡುತ್ತಾರೆ ಎಂಬುದನ್ನು ಕಾಯ್ದುನೋಡಬೇಕು. ವಿಶ್ವ ಕಪ್‌ನಲ್ಲಿ ಮಿಂಚಿದ್ದ ಯುವರಾಜ್ ಸಿಂಗ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರು ಮತ್ತೆ ಕ್ರಿಕೆಟ್‌ಗೆ ಮರಳುವುದು ಅನುಮಾನ ಎಂದು ಹೇಳಲಾಗುತ್ತಿದೆ. ರಾಹುಲ್, ಸಚಿನ್, ಲಕ್ಷ್ಮಣ್ ಇನ್ನೆಷ್ಟು ದಿನ ಆಡುತ್ತಾರೆ? ನಾಯಕ ಮಹೇಂದ್ರಸಿಂಗ್ ದೋನಿ ಗಂಭೀರವಾಗಿ ಯೋಚಿಸುವಂತಾಗಿದೆ. ಹೊಸ ಕೋಚ್ ಡಂಕನ್ ಫ್ಲೆಚರ್ ಅವರಿಂದ ತಂಡಕ್ಕೆ ಹೆಚ್ಚು ಪ್ರಯೋಜನವಾದಂತೆ ಕಾಣುತ್ತಿಲ್ಲ.

ಅತ್ತ ಆಸ್ಟ್ರೇಲಿಯದಲ್ಲಿ ಭಾರತ ತಂಡದ ಸ್ಥಿತಿ ಹೀಗಾದರೆ ಇತ್ತ ಬೆಂಗಳೂರಿನಲ್ಲಿ ಕರ್ನಾಟಕ ಕ್ರಿಕೆಟ್ ತಂಡದ ರಣಜಿ ಪ್ರಶಸ್ತಿ ಗೆಲ್ಲುವ ಕನಸು ಕ್ವಾರ್ಟರ್‌ಫೈನಲ್‌ನಲ್ಲೇ ನುಚ್ಚುನೂರಾಯಿತು. ಕಳೆದ ಕೆಲವು ವರ್ಷಗಳಿಂದ ಕರ್ನಾಟಕ ತಂಡ ಇದೇ ರೀತಿ ಮುಗ್ಗರಿಸುತ್ತಿದೆ.

ಲೀಗ್ ಹಂತದಲ್ಲಿ ಚೆನ್ನಾಗಿಯೇ ಆಡಿ ಮುನ್ನಡೆಯುವ ತಂಡ ನಾಕ್‌ಔಟ್‌ನಲ್ಲಿ ದಿಢೀರನೆ ಕುಸಿಯುತ್ತಿದೆ. ಅದೂ ತನ್ನ ಅಂಗಳದಲ್ಲೇ ಎದುರಾಳಿಗೆ ಶರಣಾಗುವುದು ಯಾಕೋ ಸರಿಕಾಣುವುದಿಲ್ಲ. ಹರ‌್ಯಾಣ ವಿರುದ್ಧ ಕರ್ನಾಟಕ ಸೋಲುವ ನಿರೀಕ್ಷೆಯೇ ಇರಲಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ತಂಡದ ಶಕ್ತಿಗೆ ಅನುಗುಣವಾಗಿಯೇ ಇತ್ತು. ಆದರೆ ಹೋರಾಟ ಬಿಗಿಯಾಗಿರಲಿಲ್ಲ. ಎಂಥ ಸ್ಥಿತಿಯಲ್ಲೂ ಪುಟಿದೇಳುವ ಸಾಮರ್ಥ್ಯ ತೋರುವುದೇ ಹೋರಾಟ ಎಂಬುದನ್ನು ಮುಂಬೈ ತಂಡದಿಂದ ನೋಡಿ ಕಲಿಯಬೇಕು.
 
ಮಧ್ಯಪ್ರದೇಶ ವಿರುದ್ಧ ಕ್ವಾರ್ಟರ್‌ಫೈನಲ್‌ನಲ್ಲಿ 70 ರನ್ನುಗಳಿಗೆ ಐದು ವಿಕೆಟ್ ಬಿದ್ದಿದ್ದರೂ ಒಬ್ಬ ಬ್ಯಾಟ್ಸಮನ್ ಶತಕ ಗಳಿಸಿ ತಂಡವನ್ನು ಮುನ್ನಡೆಸಿದ. ಮುಂಬೈ ಆಟಗಾರರಲ್ಲಿರುವ ಜಿಗುಟುತನ ಕರ್ನಾಟಕದ ಆಟಗಾರರಲ್ಲಿ ಇಲ್ಲ. ವಿನಯಕುಮಾರ್ ಮತ್ತು ಅಭಿಮನ್ಯು ಮಿಥುನ್ ಆಸ್ಟ್ರೇಲಿಯ ಪ್ರವಾಸ ದಲ್ಲಿರುವುದು ತಂಡದ ಬೌಲಿಂಗ್ ಶಕ್ತಿಯನ್ನು ಸ್ವಲ್ಪ ಕಡಿಮೆ ಮಾಡಿದರೂ ಅದು ಸೋಲಿಗೆ ನೆಪವಾಗುವುದಿಲ್ಲ. ಕರ್ನಾಟಕದ ಆಟಗಾರರು ತಮ್ಮ ಆಟದ ಬಗ್ಗೆ ಇನ್ನಷ್ಟು ಗಂಭೀರವಾಗಿ, ವೃತ್ತಿಪರವಾಗಿ ಯೋಚಿಸಬೇಕು. ಹೊಸ ವರ್ಷದಲ್ಲಿ ಹಳೆಯ ರಾಗಗಳು ಮುಂದುವರಿಯಬಾರದು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT