ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಸಾಧ್ಯತೆಗಳ ಹೊರಳು ದಾರಿಯಲ್ಲಿ ರಾಜ್ಯ ರಾಜಕೀಯ

Last Updated 22 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಇದೊಂದು ಸಮುದ್ರಮಥನದ ಕಾಲ. ಮೊದಲು ಹಾಲಾಹಲವೇ ಬರುತ್ತದೆ. ಈಗಲೂ ಅದೇ ಬರುತ್ತಿದೆ. ಕರ್ನಾಟಕದ ಇತಿಹಾಸದಲ್ಲಿ ಕಂಡು ಕೇಳರಿಯದ ಘಟನೆಗಳು ನಡೆಯುತ್ತಿವೆ. ಮಾಜಿ ಮುಖ್ಯಮಂತ್ರಿಯೇ ಜೈಲು ಸೇರಿದ್ದಾರೆ. ಇದು ಯಾರೂ ಸಂಭ್ರಮ ಪಡುವ ಸಂಗತಿಯಲ್ಲ. ಖಂಡಿತವಾಗಿಯೂ ವಿಷಾದದ ಸಂಗತಿ. ಉಪ್ಪು ತಿಂದವರು ನೀರು ಕುಡಿಯುತ್ತಾರೆ. ತಪ್ಪು ಮಾಡಿದವರು ಜೈಲು ಸೇರಿದ್ದಾರೆ. ಆದರೆ, ಕರ್ನಾಟಕದ ಜನರಿಗೆ ಇದು ಒಂದು ಕಳಂಕ. ಎಂಥವರನ್ನು ಅವರು ಆಯ್ಕೆ ಮಾಡಿದರು ಎಂದು ಇಡೀ ದೇಶದ ಜನ ನಗೆಯಾಡುವ ಪ್ರಸಂಗವಿದು. ಇದು ಇಲ್ಲಿಗೇ  ನಿಲ್ಲುವಂತೆ ಕಾಣುವುದಿಲ್ಲ. ಈಗ ಮೂವರು ಮಾಜಿ ಸಚಿವರು, ಒಬ್ಬ ಮಾಜಿ ಮುಖ್ಯಮಂತ್ರಿ ಜೈಲು ಸೇರಿದ್ದಾರೆ.  ಸ್ಪರ್ಧೆಗೆ ಬಿದ್ದವರಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡುತ್ತಿರುವುದನ್ನು ನೋಡಿದರೆ ರಾಜ್ಯದ ಜನರು ಇನ್ನೂ ಯಾರು ಯಾರನ್ನು ಕಂಬಿಗಳ ಹಿಂದೆ ನೋಡಬೇಕಾಗಿದೆಯೋ ಗೊತ್ತಿಲ್ಲ.

ಯಡಿಯೂರಪ್ಪ ಹಟವಾದಿ. ಹಟಕ್ಕೆ ಬಿದ್ದೇ ಈಗ ಜೈಲಿಗೆ ಹೋಗಿದ್ದಾರೆ. ಮಾಧ್ಯಮಗಳು ತಮ್ಮ ತೇಜೋವಧೆ ಮಾಡುತ್ತಿವೆ ಎಂದು ದೂರಿದ್ದಾರೆ. ಲೋಕಾಯುಕ್ತ ನ್ಯಾಯಾಲಯ ತಮ್ಮ ಬಂಧನಕ್ಕೆ ಆದೇಶಿಸಿದಾಗ ಅವರು ನೇರವಾಗಿ ಜೈಲಿಗೆ ಹೋಗಿ ಬಿಟ್ಟಿದ್ದರೆ ಏನೂ ಆಗುತ್ತಿರಲಿಲ್ಲ. ಅಂದು ನ್ಯಾಯಾಲಯದ ಮುಂದೆ ಹಾಜರಾಗುವುದಕ್ಕೇ ಅವರು ತಡ ಮಾಡಿದರು. ಎಲ್ಲಿ ಹೋಗಿದ್ದರೋ ಗೊತ್ತಿಲ್ಲ. ಅನಿವಾರ್ಯವಾಗಿ ಬಂಧನಕ್ಕೆ ಒಳಗಾದರೂ ಜೈಲಿನಲ್ಲಿ ಬಹುಹೊತ್ತು ಕಳೆಯಲಿಲ್ಲ. ಜಯದೇವಕ್ಕೆ ಸೇರಿದರು.

ಜಯದೇವದಲ್ಲಿ ಇನ್ನು ಹೆಚ್ಚು ಕಾಲ ಇರಲು ಆಗುವುದಿಲ್ಲ ಎನಿಸಿದಾಗ ವಿಕ್ಟೋರಿಯಾ ಆಸ್ಪತ್ರೆ ಸೇರಿದರು. ಆ ಆಸ್ಪತ್ರೆ ಸೇರುವಾಗ ಅವರು ನೇರವಾಗಿ ಮುಂಬಾಗಿಲಿನಿಂದಲೇ ಹೋಗಬಹುದಿತ್ತು. ಆಸ್ಪತ್ರೆಯ ಬೆಡ್‌ಶೀಟುಗಳ ಅಡಿಯಲ್ಲಿ ಮುಖ ಮುಚ್ಚಿಕೊಳ್ಳಬೇಕಾದ ಅಗತ್ಯವೂ ಇರಲಿಲ್ಲ. ಮುಖ ಮುಚ್ಚಿಕೊಳ್ಳುವಂಥ ತಪ್ಪನ್ನು ಮೊದಲು ಮಾಡಬಾರದು. ಮಾಡಿದ ನಂತರ ಅದರ ಪರಿಣಾಮ ಎದುರಿಸಲು ಸಿದ್ಧರಾಗಿರಬೇಕು.

ಯಡಿಯೂರಪ್ಪ ಬರೀ ಹಟವಾದಿ ಮಾತ್ರವಲ್ಲ ಮಹಾ ಧಾರ್ಮಿಕ ಮನುಷ್ಯ. ಅವರಷ್ಟು ಗುಡಿ ಗುಂಡಾರಗಳಿಗೆ ಭೇಟಿ ಕೊಟ್ಟ ಮತ್ತೊಬ್ಬ ಮುಖ್ಯಮಂತ್ರಿಯನ್ನು ರಾಜ್ಯದ ಜನ ಇದುವರೆಗೆ ಕಂಡಿಲ್ಲ. ಆದರೆ, ಆ ಧಾರ್ಮಿಕತೆ ಬಂದುದು ಪಾಪಪ್ರಜ್ಞೆಯಿಂದಲೇ? ಇರಬೇಕು ಅನಿಸುತ್ತದೆ. ರೆಡ್ಡಿ ಸೋದರರಿಗೂ ಇದೇ ಪಾಪಪ್ರಜ್ಞೆ ಕಾಡುತ್ತಿತ್ತೋ ಏನೋ? ತಿರುಪತಿ ತಿಮ್ಮಪ್ಪನಿಂದ ಹಿಡಿದು ಅನೇಕ ದೇವತೆಗಳಿಗೆ ಅವರು ಸಲ್ಲಿಸಿದ ಕಾಣಿಕೆ ಬಹುಕೋಟಿ ಮೊತ್ತದ್ದು. ಮನುಷ್ಯ ದೇವರಲ್ಲಿ ನಂಬಿಕೆ ಇಟ್ಟುಕೊಳ್ಳಬಹುದು ಬಿಡಬಹುದು. ಗುಡಿ ಗುಂಡಾರಗಳಿಗೆ ಹೋಗಬಹುದು ಬಿಡಬಹುದು. ಅದು ಅವರವರ ವೈಯಕ್ತಿಕ ನಂಬಿಕೆಗೆ ಬಿಟ್ಟ ವಿಚಾರ. ಆದರೆ, ಇದೆಲ್ಲಕ್ಕಿಂತ ಹೆಚ್ಚಿಗೆ ತನ್ನ ಮನಸ್ಸಿನ ಮಾತಿಗೆ ಕಿವಿಗೊಡಬೇಕು. ನಾನು ತಪ್ಪು ಮಾಡುತ್ತಿದ್ದರೆ ಅದನ್ನು ಮೊದಲು ನನಗೆ ಹೇಳುವುದು ನಮ್ಮ ಮನಸ್ಸು. ನಾವು ಮನಸ್ಸಿನ ಮಾತನ್ನು ಕಡೆಗಣಿಸತೊಡಗಿದಾಗ ಕಷ್ಟದಲ್ಲಿ ಸಿಲುಕುತ್ತೇವೆ. ಈಗ ಯಡಿಯೂರಪ್ಪನವರಿಗೆ ಆಗಿರುವುದೂ ಅದೇ. ಉನ್ನತ ಹುದ್ದೆಯಲ್ಲಿ ಇರುವವರು ಕಷ್ಟದಲ್ಲಿ ಸಿಲುಕಲಿ ಎಂದು ಬಯಸುವವರು, ಸಿಕ್ಕಾಗ ಮೋಜು ನೋಡುವವರು ಅವರ ಸುತ್ತಲೇ ಇರುತ್ತಾರೆ. ನಾವು ನಾವಾಗಿಯೇ ಕಷ್ಟಕ್ಕೆ ಸಿಕ್ಕು, ಈಗ ಅವರು ಮೋಜು ನೋಡುತ್ತಿದ್ದಾರೆ ಎಂದು ಸಂಕಟಪಡುವುದರಲ್ಲಿ ಅರ್ಥವಿಲ್ಲ.

ಯಡಿಯೂರಪ್ಪ ಅವರು ಕಷ್ಟದಲ್ಲಿ ಸಿಲುಕಿದಾಗ ಮೋಜು ನೋಡಿದವರು ಇದ್ದಿರಬಹುದು. ಆದರೆ, ಅವರ ಬೆಂಬಲಕ್ಕೆ ನಿಂತವರೇನು ಕಡಿಮೆ ಜನರಲ್ಲ. ಲಿಂಗಾಯತ ಸ್ವಾಮಿಗಳಲ್ಲಿಯೇ ಅತ್ಯಂತ ಹಿರಿಯರಾದ ತುಮಕೂರಿನ ಸಿದ್ಧಗಂಗಾ ಶ್ರೀಗಳೇ ಜಯದೇವ ಆಸ್ಪತ್ರೆಗೆ ಹೋಗಿ ಯಡಿಯೂರಪ್ಪನವರ ಆರೋಗ್ಯ ವಿಚಾರಿಸಿದರು.

ಪಂಚಾಚಾರ್ಯರಲ್ಲಿ ಒಬ್ಬರಾದ ರಂಭಾಪುರಿ ಶ್ರೀಗಳು ಯಡಿಯೂರಪ್ಪ ಪರವಾಗಿ ಬಹಿರಂಗ ಬೆಂಬಲದ ಹೇಳಿಕೆಯನ್ನೇ ನೀಡಿದರು. ಲಿಂಗಾಯತ ಸ್ವಾಮಿಗಳು ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತುದರಲ್ಲಿ ದೊಡ್ಡ ರಾಜಕೀಯ ಸಂದೇಶ ಅಡಗಿದೆ. ಅದು ಯಡಿಯೂರಪ್ಪ ಮಾತ್ರ ಲಿಂಗಾಯತರ ನಾಯಕ ಎಂಬುದನ್ನು ದೃಢಪಡಿಸುವ ಸಂದೇಶ. ಭ್ರಷ್ಟಾಚಾರದ ಆರೋಪದ ಎದುರಿಸುತ್ತಿರುವ ಒಬ್ಬ ಮಾಜಿ ಮುಖ್ಯಮಂತ್ರಿಗೆ ಸ್ವಾಮಿಗಳು ಹೀಗೆ `ಬೆಂಬಲ~ ನೀಡಬಹುದಿತ್ತೇ ಎಂಬುದು ಖಂಡಿತ ಚರ್ಚಾಸ್ಪದ ಸಂಗತಿ. ಆ ಬಗ್ಗೆ ಸ್ವಾಮಿಗಳು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ಆದರೆ, ಯಡಿಯೂರಪ್ಪನವರು ಸ್ವಾಮಿಗಳು ತಮಗೆ ತೋರಿದ ಸಹಾನುಭೂತಿಯಿಂದ ಪಟ್ಟ ನೆಮ್ಮದಿಗಿಂತ, ಹೈಕಮಾಂಡಿನ ನಾಯಕರ ಅದರಲ್ಲೂ ಎಲ್.ಕೆ.ಅಡ್ವಾಣಿಯವರ ಪ್ರತಿಕ್ರಿಯೆಯಿಂದ ಹೆಚ್ಚು ಗಾಸಿಗೊಂಡಂತೆ ಕಾಣುತ್ತದೆ. ಯುಪಿಎ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಅಡ್ವಾಣಿಯವರಿಗೆ ಹೋದಲ್ಲೆಲ್ಲ ಮೊದಲು ಎದುರಾದುದು ಕರ್ನಾಟಕದಲ್ಲಿ ಗಬ್ಬೆದ್ದು ಹೋದ ರಾಜಕೀಯದ ಪ್ರಶ್ನೆ. ಅಡ್ವಾಣಿಯವರು ಪತ್ರಿಕಾಗೋಷ್ಠಿಯನ್ನು ತಪ್ಪಿಸಬಹುದಿತ್ತು. ಆದರೆ, ಈ ಪ್ರಶ್ನೆಯನ್ನು ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಅಡ್ವಾಣಿಯವರ ಪಕ್ಕದಲ್ಲಿ ಅನಂತಕುಮಾರ್ ನಿಂತಿರುವುದೂ ಯಡಿಯೂರಪ್ಪ ಅವರನ್ನು ಮತ್ತಷ್ಟು ಅಸ್ವಸ್ಥ ಮಾಡಿದಂತೆ ಕಾಣುತ್ತದೆ. ರಾಜ್ಯ ಬಿಜೆಪಿಯಲ್ಲಿ ಈಗ ಈ ಅಸ್ವಸ್ಥತೆಯೇ ಮನೆ ಮಾಡಿದೆ. ಮನಸ್ಸುಗಳು ಒಡೆದು ಹೋಗಿವೆ. ಜನಾರ್ದನ ರೆಡ್ಡಿಯವರು ಜೈಲು ಸೇರಿದ್ದಕ್ಕಿಂತ ಯಡಿಯೂರಪ್ಪ ಜೈಲು ಸೇರಿರುವುದು ಬಿಜೆಪಿಯ ಜಂಘಾಬಲವನ್ನೇ ಉಡುಗಿಸಿದೆ. ಪಕ್ಷವನ್ನು ಅಧಿಕಾರಕ್ಕೆ ತಂದ ನಾಯಕ ಜೈಲಿನಲ್ಲಿ ಹೋಗಿ ಕುಳಿತಿದ್ದಾನೆ. ಆತನಲ್ಲಿ ಮಾತ್ರ ಪಕ್ಷವನ್ನು ಅಧಿಕಾರಕ್ಕೆ ತರುವ ಸಾಮರ್ಥ್ಯವಿತ್ತು. ಅವರು ಇನ್ನೂ ಎಷ್ಟು ದಿನ ಜೈಲಿನಲ್ಲಿ ಇರಬೇಕಾಗುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ಅದು ನ್ಯಾಯಾಲಯದ ಸುಪರ್ದಿಗೆ ಸೇರಿದ ವಿಚಾರ.

ಅದಕ್ಕಾಗಿಯೇ ಪರ್ಯಾಯ ನಾಯಕತ್ವ ಕುರಿತು ಬಿಜೆಪಿಯ ಒಂದು ವಲಯದಲ್ಲಿ ಈಗ ಚಿಂತನೆ ಆರಂಭವಾಗಿದೆ. ಆದರೆ, ಯಡಿಯೂರಪ್ಪನವರ ನಾಯಕತ್ವವೇ ಇರಬೇಕು ಎಂದ ಬಯಸುವ ಒಂದು ದೊಡ್ಡ ಗುಂಪು ಕೂಡ ಅದೇ ಪಕ್ಷದಲ್ಲಿ ಇದೆ. ಅವರಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದವರೇ ಬಹಳ ಜನ ಇದ್ದಾರೆ. ಯಡಿಯೂರಪ್ಪ ಅವರು ಸದಾನಂದಗೌಡರನ್ನು ಮುಖ್ಯಮಂತ್ರಿ ಮಾಡುವಾಗ ತಮ್ಮ ಶಕ್ತಿ ಏನು ಎಂಬುದನ್ನು ತೋರಿಸಿಯಾಗಿದೆ. ಮೇಲಾಗಿ ಸಂಘದ ನಾಯಕರೆಲ್ಲ ಯಡಿಯೂರಪ್ಪ ಋಣದಲ್ಲಿ ಇದ್ದಾರೆ. ಅದಕ್ಕಾಗಿಯೇ ತುಟಿ ಪಿಟಕ್ಕೆನ್ನದೆ ಸುಮ್ಮನಿದ್ದಾರೆ. ಹೀಗೆಲ್ಲ ತದ್ವಿರುದ್ಧ ಆಶಯದ ಶಕ್ತಿಗಳು ಏಕಕಾಲದಲ್ಲಿಯೇ ಕೆಲಸ ಮಾಡುತ್ತಿರುವುದರಿಂದ ಪಕ್ಷ ಒಂದು ರೀತಿಯಲ್ಲಿ ಕವಲು ದಾರಿಯಲ್ಲಿ ಇದೆ. ಹಾಗೆ ನೋಡಿದರೆ ಕರ್ನಾಟಕದ ರಾಜಕಾರಣವೇ ಕವಲು ದಾರಿಗೆ ಬಂದು ನಿಂತಿದೆ. ಯಡಿಯೂರಪ್ಪನವರು ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ನಂತರ ಅದಕ್ಕೆ ಒಂದು ಸ್ವರೂಪ ಬರಬಹುದು ಎಂಬ ಸೂಚನೆಗಳು ಇವೆ. ಯಡಿಯೂರಪ್ಪನವರು ಮತ್ತು ಕುಮಾರಸ್ವಾಮಿಯವರು ನಿಕಟವಾಗುತ್ತಿದ್ದಾರೆ ಎಂಬ ಭಾವನೆ ಬಲಿಯುತ್ತಿದೆ. ಅದು ಕುಮಾರಸ್ವಾಮಿಯವರು ಯಡಿಯೂರಪ್ಪನವರ ಬಂಧನಕ್ಕೆ ಕೊಟ್ಟ ಪ್ರತಿಕ್ರಿಯೆಗಿಂತ ಹೆಚ್ಚಾಗಿ ಕಾಂಗ್ರೆಸ್ ವಿರುದ್ಧ ಹರಿ ಹಾಯುತ್ತಿರುವುದರಲ್ಲಿ ಅದು ಎದ್ದು ಕಾಣುತ್ತಿದೆ.

ಯಡಿಯೂರಪ್ಪನವರು ಬಿಜೆಪಿಯ ಹೈಕಮಾಂಡ್ ವಿರುದ್ಧ ಬಂಡೆದ್ದು ಹೊರಗೆ ಬಂದು ದೇವೇಗೌಡರ ತೆಕ್ಕೆಗೆ ಬೀಳುತ್ತಾರೆಯೇ? ಬೀಳುವಂತೆ ಕಾಣುತ್ತದೆ ಎಂದೇ ಎಲ್ಲರಿಗೂ ಅನಿಸತೊಡಗಿದೆ. ಈಚಿನ ರಾಜಕೀಯ ವಿದ್ಯಮಾನಗಳ ಬಗ್ಗೆ ದೇವೇಗೌಡರ ಮೌನ ತುಂಬ ಅರ್ಥಪೂರ್ಣವಾಗಿದೆ. ತಾವು ಮತ್ತು ತಮ್ಮ ಮಕ್ಕಳು ಯಡಿಯೂರಪ್ಪನವರ ವಿರುದ್ಧ ಸಾರಿದ ಸಮರ ಅತಿಗೆ ಹೋಯಿತು ಎಂದು ಅವರಿಗೆ ಅನಿಸುತ್ತಿರಬಹುದು. ಬಿಜೆಪಿಯಿಂದ ಹೊರಗೆ ಬಂದರೆ ಯಡಿಯೂರಪ್ಪ `ಕೋಮುವಾದಿ~ ಆಗಿರುವುದಿಲ್ಲ.

ಅವರ ಜತೆಗೆ ಮೈತ್ರಿ ಮಾಡಿಕೊಳ್ಳಲು ಅಷ್ಟು ಸಾಕು ಎಂದೂ ಅವರು ಲೆಕ್ಕ ಹಾಕುತ್ತಿರಬಹುದು. ಜೆ.ಡಿ (ಎಸ್) ಏಕಾಂಗಿಯಾಗಿ ಅಧಿಕಾರ ಹಿಡಿಯುವುದು ಸಾಧ್ಯವಿಲ್ಲ ಎಂದು ಅವರಿಗೆ ಯಾವಾಗಲೋ ಮನದಟ್ಟಾಗಿದೆ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಒಂದಾದರೆ ಅದು `ಡೆಡ್ಲಿ ಕಾಂಬಿನೇಷನ್~ ಎಂದೂ ಅವರಿಗೆ ಗೊತ್ತಿದೆ. ಹಾಗೆಂದು ಭ್ರಷ್ಟಾಚಾರ ಒಂದು ವಿಷಯವಲ್ಲವೇ? ಅದು ಅವರ ಕುಟುಂಬವನ್ನೂ ಸುತ್ತುವರಿದಿದೆ. ದೇಶದಲ್ಲಿ ಯಾರಿಗೆ ಯಾರೂ ಬುದ್ಧಿ ಹೇಳುವ ಸ್ಥಿತಿಯಲ್ಲಿ ಈಗ ಇಲ್ಲ. `ಕಾಂಗ್ರೆಸ್ ಪಕ್ಷವೇನು ಸತ್ಯ ಹರಿಶ್ಚಂದ್ರರ ಪಕ್ಷವೇ~ ಎಂದು ಗೌಡರು ಕೇಳಬಹುದು. ಕುಮಾರಸ್ವಾಮಿ ಅದನ್ನೇ ಕೇಳುತ್ತಿದ್ದಾರೆ! ಅಕ್ರಮ ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಲೇ ಪಕ್ಕದ ರಾಜ್ಯದಲ್ಲಿ ಜಯಲಲಿತಾ ಜಯಭೇರಿ ಬಾರಿಸಿದರು. ಮೊನ್ನೆ ಪರಪ್ಪನ ಆಗ್ರಹಾರದ ನ್ಯಾಯಾಲದಲ್ಲಿ ಹಾಜರಾದ ಜಯಾಗೆ ತಮಿಳು ಭಾಷಿಕರು ತೋರಿದ ಪ್ರೀತಿಯ ಹಿಂದಿನ `ಆರಾಧನೆ~ ಎಂಥದು? ನಮ್ಮ ರಕ್ತದಲ್ಲಿಯೇ ನಾಯಕ ಪೂಜೆಯ ಈ ಗುಣ ಇದೆಯೇ? ನಾಳೆ ಯಡಿಯೂರಪ್ಪ ಅವರಿಗೂ ಜನ ಹೀಗೆಯೇ ಪ್ರತಿಕ್ರಿಯೆ ತೋರಿದರೆ ಅಚ್ಚರಿಯಿಲ್ಲ. ಅದಕ್ಕೆ ಪೂರಕವಾಗಿಯೇ ಯಡಿಯೂರಪ್ಪ ಬೆಂಬಲಕ್ಕೆ ನಿಂತಿರುವ ಲಿಂಗಾಯತ ಸಮುದಾಯಕ್ಕೆ ಭ್ರಷ್ಟಾಚಾರ ಒಂದು `ವಿಷಯ~ ಎಂದು ಅನಿಸುತ್ತಿಲ್ಲ. ಕೊಪ್ಪಳ ಚುನಾವಣೆಯಲ್ಲಿ ಅದು ಒಂದು `ವಿಷಯ~ ಆಗಲಿಲ್ಲ ಎಂದು ಈಗಾಗಲೇ  ಸಾಬೀತಾಗಿದೆ. ಯಡಿಯೂರಪ್ಪ ಪರ ಲಿಂಗಾಯತ ಸಮುದಾಯದಲ್ಲಿ ಇರುವ ಅನುಕಂಪವನ್ನು ನಗದು ಮಾಡಿಕೊಳ್ಳಬಹುದು ಎಂದು ದೇವೇಗೌಡರಿಗೆ ಅನಿಸಿದೆಯೇ? ಕಾಲ ಇದಕ್ಕೆ ಉತ್ತರ ಕೊಡಲಿದೆ.

ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಯಾರೂ ಮಿತ್ರರಲ್ಲ; ಯಾರೂ ಶತ್ರುಗಳಲ್ಲ. ಒಂದು ಕಾಲದಲ್ಲಿ ಯಡಿಯೂರಪ್ಪನವರ ಕುತ್ತಿಗೆಗೇ ಕೈ ಹಾಕಿದ್ದ ಕುಮಾರಸ್ವಾಮಿಯವರ ಮಾತಿನ ಧಾಟಿಯಲ್ಲಿ ಆಗಿರುವ ಬದಲಾವಣೆ ಇದಕ್ಕೆ ಒಂದು ಸಣ್ಣ ಸೂಚನೆ.

ರಾಜಕೀಯವೇ ಹಾಗೆ. ಅದು ಸಾಧ್ಯತೆಗಳ ಒಂದು ದೊಡ್ಡ ಜಗತ್ತು. ಆ ಸಾಧ್ಯತೆಗಳ ಹುಡುಕಾಟ, ಅದಕ್ಕಾಗಿ ನರಳಾಟ ಕೇಳಿ ಬರುತ್ತಿದೆ. ಕರ್ನಾಟಕದ ರಾಜಕಾರಣದಲ್ಲಿ ಜಾತಿ ದೊಡ್ಡ ಪಾತ್ರ ಆಡಿದೆ. ಉದ್ದಕ್ಕೂ ಇತಿಹಾಸದಲ್ಲಿ ಅದರ ಕುರುಹುಗಳು ಸ್ಪಷ್ಟವಾಗಿ ಕಾಣುತ್ತವೆ. ಮುಂದಿನ ರಾಜಕೀಯ ಸನ್ನಿವೇಶ ಕೂಡ ಜಾತಿ ಆಧಾರಿತವೇ ಆಗಿರುತ್ತದೆ.

ಜಾತಿ ಭಾವನೆಗಳನ್ನು ಇನ್ನಷ್ಟು ಕೆದಕುವ ಮಾತುಗಳೂ ಕೇಳಿ ಬಂದರೆ ಅಚ್ಚರಿ ಪಡಬೇಕಿಲ್ಲ. `ಯಡಿಯೂರಪ್ಪ ರಾಜಕೀಯ ಹುನ್ನಾರಕ್ಕೆ ಬಲಿಯಾಗಿದ್ದಾರೆ~ ಎಂದು ಲಿಂಗಾಯತ ಸ್ವಾಮೀಜಿಗಳು ಹೇಳುತ್ತಿರುವುದು ಇದೇ ಅರ್ಥದಲ್ಲಿ. ಸಂಸದ  ಡಿ.ಬಿ.ಚಂದ್ರೇಗೌಡರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದೇ ಮಾತನ್ನು ಹೇಳಿದ್ದಾರೆ. ಯಡಿಯೂರಪ್ಪನವರ ಪರವಾಗಿ ಅನುಕಂಪದ ಅಲೆಯನ್ನು ಸೃಷ್ಟಿಸುವ ಪ್ರಯತ್ನವೂ ಇದು ಇರಬಹುದು.  ಮುಂಬರುವ ದಿನಗಳಲ್ಲಿ ಈ ಪ್ರಯತ್ನದ ಸ್ಪಷ್ಟ ರೂಪುರೇಷೆಗಳು ಕಾಣಬಹುದು. ಆದರೆ, ಸದ್ಯದ ಸಮುದ್ರಮಥನದಲ್ಲಿ ಹುಟ್ಟಿರುವ ಹಾಲಾಹಲವನ್ನು ನುಂಗುವ ನೀಲಕಂಠ ಯಾರು? ಕಾಲವೇ? ರಾಜ್ಯ ರಾಜಕೀಯದಲ್ಲಿ ಈಗ ಎದ್ದಿರುವ ಬಗ್ಗಡವೆಲ್ಲ ಕೊಚ್ಚಿ ಹೋಗಿ ಹೊಸ ನೀರು ಹರಿದೀತೇ? ಸಮುದ್ರಮಥನದ ಕೊನೆಯಲ್ಲಿ ಸಿಗುವ ಅಮೃತ ಅದುವೇ ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT