ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಹುಲ್ಲುಗಾವಲಿನ ಕಡೆ ಹೊರಟವರ ನೆಪದಲ್ಲಿ...

Last Updated 23 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಇದೀಗ ಅಂಗಿ ಬದಲಿಸುವ ಕಾಲ. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಇದೆ. ಒಂದು ಪಕ್ಷದಲ್ಲಿ ಇದ್ದವರು ಇನ್ನೊಂದು ಪಕ್ಷಕ್ಕೆ ಹಾರಲು ಇದು `ಪಕ್ವ ಕಾಲ'. ಯಾವ ದೊಡ್ಡ ಪಕ್ಷಕ್ಕೂ ತತ್ವ ಸಿದ್ಧಾಂತ ಎಂಬುದು ಇಲ್ಲವಾದ್ದರಿಂದ ಹಸಿರು ಕಂಡ ಕಡೆಗೆ ಹೋಗುವ ದನಗಳ ಹಾಗೆ ರಾಜಕಾರಣಿಗಳೂ ಅಧಿಕಾರಕ್ಕೆ ಬರಬಹುದಾದ ಪಕ್ಷದ ಕಡೆಗೆ ವಲಸೆ ಹೋಗುತ್ತಾರೆ. ಅಧಿಕಾರಕ್ಕಾಗಿ ಹೋಗುತ್ತೇವೆ ಎಂದು ಹೇಳುವುದಿಲ್ಲ ಅಷ್ಟೇ.

ಅವರು ಯಾವಾಗಲೂ `ಜನಸೇವೆಗಾಗಿಯೇ', `ಕ್ಷೇತ್ರದ ಅಭಿವೃದ್ಧಿ'ಗಾಗಿಯೇ ಪಕ್ಷವನ್ನು ಬದಲಿಸುತ್ತಾರೆ; ಹಾಗೆಂದು ಜನರು ನಂಬಬೇಕು ಎಂದು ಬಯಸುತ್ತಾರೆ. ಅದಕ್ಕೆ, ಅವರು ಮತ್ತು ಅವರು ಸೇರಿಕೊಳ್ಳುವ ಪಕ್ಷದ ದುರಂಧರರು ತತ್ವ ಸಿದ್ಧಾಂತದ ಲೇಪನ ಹಚ್ಚುತ್ತಾರೆ.

ಹಾಲಿ ಪಕ್ಷವನ್ನು ಬಿಡುವುದಕ್ಕಿಂತ ಮುಂಚೆ ಕೊನೆ ಗಳಿಗೆವರೆಗೆ ಕಾಯುತ್ತಾರೆ. ಎಲ್ಲ ಅಧಿಕಾರವನ್ನು ಅನುಭವಿಸುತ್ತಾರೆ. ಹೋಗುವಾಗ ಕ್ಷೇತ್ರದ ಮತದಾರರ ಅಭಿಪ್ರಾಯ ಕೇಳುವ ಕಾರಣ ಕೊಡುತ್ತಾರೆ. ತಮ್ಮ ಕ್ಷೇತ್ರದಲ್ಲಿ ಒಂದು ಸಭೆ ಏರ್ಪಡಿಸುತ್ತಾರೆ. ಎಲ್ಲಿಗೆ ಹೋಗಬೇಕು ಎಂದು ಅಲ್ಲಿ ಕೇಳುತ್ತಾರೆ. ಅಲ್ಲಿ ಸೇರಿದ ಹಲವರು ಇವರು ಹೇಳಿಕೊಟ್ಟಂತೆ ಇಂಥ ಪಕ್ಷಕ್ಕೆ ಸೇರಿ ಎಂದು ಕೂಗುತ್ತಾರೆ. ಇವರು ಮರುದಿನ ರಾಜ್ಯಪಾಲರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ. ಸಭಾಧ್ಯಕ್ಷರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ. ಅದೆಲ್ಲ ಆಗುವುದಕ್ಕಿಂತ ಮುಂಚೆಯೇ ಇವರು ಯಾವ ಪಕ್ಷ ಸೇರುತ್ತಾರೆ, ಏಕೆ ಸೇರುತ್ತಾರೆ ಎಂದು ಇಡೀ ಜಗತ್ತಿಗೇ ಗೊತ್ತಿರುತ್ತದೆ!

ಇವರು ಈಗ ಬಿಡುತ್ತಿರುವ ಪಕ್ಷವನ್ನು ಸೇರುವಾಗಲೂ ಇನ್ನೊಂದು ಪಕ್ಷವನ್ನು ಬಿಟ್ಟಿರುತ್ತಾರೆ. ಅಥವಾ ಈಗ ಸೇರಲು ಹೊರಟಿರುವ ಪಕ್ಷವನ್ನೇ ಬಿಟ್ಟಿರುತ್ತಾರೆ. ಆಗಲೂ ಇದೇ ರೀತಿ ಕ್ಷೇತ್ರದ ಮತದಾರರ ಅಭಿಪ್ರಾಯ ಕೇಳಿರುತ್ತಾರೆ. ಆಗಲೂ ಮತದಾರರು ಇವರಿಗೆ ಅನುಕೂಲ ಆಗುವ ಹಾಗೆಯೇ ಹೇಳಿರುತ್ತಾರೆ. ಮತ್ತೆ ಮುಂದಿನ ಸಾರಿ ಚುನಾವಣೆ ಬರುವ ವೇಳೆಗೆ, ಈಗ ಸೇರಿದ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎನಿಸಿದರೆ ಮತ್ತೆ ಇನ್ನೊಂದು ಪಕ್ಷಕ್ಕೆ ಹಾರಲು ಸಿದ್ಧತೆ ಮಾಡಿಕೊಳ್ಳುತ್ತಾರೆ.

ಮತ್ತೆ ಕ್ಷೇತ್ರದ  ಮತದಾರರ...  ಸುಸ್ತು ಹೊಡೆಯಿತೇ? ನಮಗೆ ಸುಸ್ತು ಹೊಡೆಯಬಹುದು. ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರುವವರಿಗೆ ಎಂದೂ ಸುಸ್ತು ಅನಿಸುವುದಿಲ್ಲ. ಕನಿಷ್ಠ ಲಜ್ಜೆ ಎಂಬುದು ಇದೆಯೇ? ಇದ್ದರೆ ರಾಜಕೀಯಕ್ಕೆ ಯಾರು ಬರುತ್ತಿದ್ದರು? ಏಕೆ ಬರುತ್ತಿದ್ದರು? ಲಜ್ಜೆ ಇದ್ದಿದ್ದರೆ ಈಗ ಬಿಜೆಪಿ ಬಿಟ್ಟಿರುವ ಒಬ್ಬ ಸಚಿವರು `ಬೆಳೆ ಎಲ್ಲಿ ಚೆನ್ನಾಗಿ ಇರುತ್ತದೋ ಅಲ್ಲಿ ಕೊಯಿಲು ಮಾಡಬೇಕಾಗುತ್ತದೆ', `ಅಧಿಕಾರಕ್ಕಾಗಿ ಪಕ್ಷ ಬಿಡುತ್ತಿದ್ದಾರೆ...', `ಅವಕಾಶವಾದಿ ರಾಜಕಾರಣಿಗಳು...' ಹೀಗೆ ಯಾರು ಏನೇ ಅಂದರೂ ಬೇಸರವಿಲ್ಲ ಎಂದು ತಮ್ಮ ಪಕ್ಷಾಂತರವನ್ನು ಸಮರ್ಥಿಸಿಕೊಳ್ಳುತ್ತಿರಲಿಲ್ಲ.

ಕಳೆದ ಐದು ವರ್ಷಗಳಲ್ಲಿ ರಾಜಕಾರಣಕ್ಕೆ ಇದ್ದ ಕನಿಷ್ಠ ಲಜ್ಜೆ, ಸಂಕೋಚಗಳ ಪೊರೆಗಳೂ ಹರಿದು ಹೋಗಿರುವುದರಿಂದ ಎಲ್ಲರೂ ಮೂರೂ ಬಿಟ್ಟವರ ಹಾಗೆ ನಡೆದುಕೊಳ್ಳುತ್ತಿದ್ದಾರೆ. ರಾಜಕಾರಣಿಗಳು ಹೀಗೆ ಅಂಗಿ ಕಳಚಿದಷ್ಟು ಸುಲಭವಾಗಿ ರಾಜಕೀಯ ಪಕ್ಷ ಬದಲಿಸುವುದನ್ನು ಯಾರು ಕಲಿಸಿಕೊಟ್ಟರು? ಬಿಜೆಪಿಯವರೇ ಅಲ್ಲವೇ? ಹಿಂಡು ಹಿಂಡಾಗಿ ಬೇರೆ ಬೇರೆ ಪಕ್ಷಗಳ ಶಾಸಕರನ್ನು ರಾಜೀನಾಮೆ ಕೊಡಿಸಿ ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಅವರಿಗೆ ಟಿಕೆಟ್ ಕೊಟ್ಟು ಮತ್ತೆ ಅವರನ್ನೇ ಶಾಸಕರನ್ನಾಗಿ ಗೆಲ್ಲಿಸಿ, ಅದಕ್ಕಾಗಿ ಕೋಟಿಗಟ್ಟಲೆ ಹಣ ಚೆಲ್ಲಿ, ಬರೀ ಶಾಸಕರಾಗಿ ಗೆದ್ದುದು ಸಾಲದು ಎಂದು ಸಚಿವರನ್ನೂ ಮಾಡಿದ ಬಿಜೆಪಿ ಧುರೀಣರು ಈಗ ಯಾರಿಗೆ ಏನು ಬುದ್ಧಿ ಹೇಳುತ್ತಾರೆ?

ತಾವು ಹೀಗೆ ಅನ್ಯ ಪಕ್ಷಗಳ ಶಾಸಕರ ಬೇಟೆ ಆಡುವುದು ಮುಂದೆ ಒಂದು ದಿನ ತಮಗೇ ಮುಳುವಾಗಬಹುದು ಎಂದು ಅವರಿಗೆ ಅನಿಸಲಿಲ್ಲ. ಎಲ್ಲರೂ ಈಗ ತತ್ಕಾಲದ ರಾಜಕೀಯ ಮಾಡುತ್ತಿದ್ದಾರೆ. ಹೆಚ್ಚೆಂದರೆ ಐದು ವರ್ಷದ್ದು! ಅನ್ಯ ಪಕ್ಷಗಳ ಶಾಸಕರು ರಾಜೀನಾಮೆ ಕೊಟ್ಟು ಬರುವಾಗ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಹೀಗೆ ಮಾಡುತ್ತಿರುವುದಾಗಿ ಹೇಳಿದರು.

ಅಂದರೆ ಸರ್ಕಾರ ಎಂಬುದು, ಅಭಿವೃದ್ಧಿ ಎಂಬುದು ಆಡಳಿತ ಪಕ್ಷದವರಿಗೆ ಮಾತ್ರ ಎಂದೇ ಅಲ್ಲವೇ ಅವರು ಆಗ ಹೇಳಿದ್ದು? ಹೀಗೆ ಮಾತನಾಡಲು ಹೇಳಿಕೊಟ್ಟ ಬಿಜೆಪಿಯವರಿಗೆ ಅದು ಒಂದು ದಿನ ತಿರುಗುಬಾಣ ಆಗಬಹುದು ಎಂದು ಗೊತ್ತಿತ್ತೋ ಇಲ್ಲವೋ? ಇದು ಪ್ರಜಾಪ್ರಭುತ್ವದ ಬಹುತ್ವದ ಆಶಯಕ್ಕೇ ವಿರುದ್ಧವಾದ ಮಾತು ಎಂದಾದರೂ ಗೊತ್ತಿತೋ ಇಲ್ಲವೋ?

`ಆಪರೇಷನ್ ಕಮಲ' ಜಾರಿಯಲ್ಲಿ ಇದ್ದಾಗ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, `ಮೂಲ ರಾಜಕೀಯ ಕಾರ್ಯಕರ್ತರು ಪಕ್ಷಕ್ಕಾಗಿ ತ್ಯಾಗ ಮಾಡಬೇಕು. ಎಷ್ಟಾದರೂ ಬರಲಿ. ವಲಸೆ ಬಂದವರಿಗೆ ಸ್ಥಾನಮಾನ ಕೊಡುತ್ತೇವೆ' ಎಂದು ಘೋಷಿಸಿದ್ದರು. ವಿರೋಧ ಪಕ್ಷಗಳನ್ನು ಖಾಲಿ ಮಾಡುವ ವರೆಗೆ ಆಪರೇಷನ್ ಕಮಲ ಮಾಡುತ್ತೇವೆ ಎಂದು ಪಕ್ಷದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅಬ್ಬರಿಸಿದ್ದರು. ಹಾಗೆ ಹಾರಿ ಬಂದವರು ಈಗ ಹೀಗೆ ಹಾರಿ ಹೋಗುತ್ತಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಬಿಜೆಪಿ ಮಾಡಿದ ಹಾಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಯಾರನ್ನೂ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿಲ್ಲ ಎಂದು ತಮ್ಮ ಪಕ್ಷ ಮತ್ತು ಬಿಜೆಪಿ ನಡುವೆ ಇರುವ ವ್ಯತ್ಯಾಸವನ್ನು ಹೇಳಿದ್ದಾರೆ. ಇದೇನು ಅಗಾಧ ವ್ಯತ್ಯಾಸವೇ? ಆಗ ಶಾಸಕ ಸ್ಥಾನ ಬಿಟ್ಟು ಬಿಜೆಪಿಗೆ ಸೇರಿದವರು ಈಗ ಸಚಿವ ಸ್ಥಾನ ಬಿಟ್ಟು ಬಂದಿದ್ದಾರೆ. ಕೊನೆಯ ದಿನದ ಅಧಿಕಾರವನ್ನೂ ಅನುಭವಿಸಿ ಬಂದಿದ್ದಾರೆ. ಅಂಥ ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗಿದ್ದ ಯೋಗೇಶ್ವರ್ ಈಗ ಮತ್ತೆ ಅದೇ ಅಧಿಕಾರಕ್ಕಾಗಿ ಬರುತ್ತಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ತಾನು ನಿಂತು ಗೆಲ್ಲಬೇಕು ಎಂದು ದುಡಿದಿದ್ದ, ಪಕ್ಷವನ್ನು ಎಂದೂ ಬದಲಿಸದ ಆಕಾಂಕ್ಷಿಗಳಿಗೆ ಪರಮೇಶ್ವರ್ ಏನು ಸಮಾಧಾನ ಹೇಳುತ್ತಾರೆ? ರಾಜ್ಯದಲ್ಲಿ ಇರುವ ಎಲ್ಲ ಪಕ್ಷಗಳನ್ನು ಸುತ್ತಾಡಿ ಬಂದಿರುವ ರಾಜೂಗೌಡರಿಗೆ ಟಿಕೆಟ್ ಕೊಡಿಸಲು ಹೊರಟಿರುವ ಮಲ್ಲಿಕಾರ್ಜುನ ಖರ್ಗೆಯವರು ಅಲ್ಲಿನ ಮೂಲ ಕಾಂಗ್ರೆಸ್ ಕಾರ್ಯಕರ್ತರಿಗೆ,  ಶಾಸಕ ಸ್ಥಾನದ ಆಕಾಂಕ್ಷಿಗಳಿಗೆ ಏನು ಸಮಾಧಾನ ಹೇಳುತ್ತಾರೆ?

ಯಾರನ್ನೋ ಹೊತ್ತು ಮೆರೆಸಲು ಪಕ್ಷದ ಮೂಲ ಕಾರ್ಯಕರ್ತರೇನು ಜೀತಕ್ಕೆ ಇದ್ದಾರೆಯೇ? ಯಾವ ಪಕ್ಷದವರೇ ಇರಲಿ. ನಾಯಕನ ಭಾಷೆ ಒಂದೇ ಆಗಿರುತ್ತದೆ. ಯಡಿಯೂರಪ್ಪ ಇದನ್ನೇ ಅಲ್ಲವೇ ಹೇಳಿದ್ದು. ಪಕ್ಷಕ್ಕಾಗಿ ಕಾರ್ಯಕರ್ತರು ತ್ಯಾಗ ಮಾಡಬೇಕು ಎಂದರೆ ಏನು ಅರ್ಥ? ಪಕ್ಷಕ್ಕೆ ಸಿಕ್ಕ ಭಾಗ್ಯವೇನು? ಅದೇ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕಿತ್ತು. ಮಧ್ಯದಲ್ಲಿ ಸದಾನಂದಗೌಡರು ಮುಖ್ಯಮಂತ್ರಿ ಆಗಬೇಕಿತ್ತು.

ತದನಂತರ ಜಗದೀಶ ಶೆಟ್ಟರ್ ಅವರೂ ಮುಖ್ಯಮಂತ್ರಿ ಆಗಬೇಕಿತ್ತು. ಆರ್.ಅಶೋಕ್ ಮತ್ತು ಈಶ್ವರಪ್ಪ ಉಪಮುಖ್ಯಮಂತ್ರಿ ಆಗಬೇಕಿತ್ತು. ಇವರನ್ನು ಮುಖ್ಯಮಂತ್ರಿ ಮಾಡಲು, ಉಪಮುಖ್ಯಮಂತ್ರಿ ಮಾಡಲು ಕಾರ್ಯಕರ್ತರು ವಲಸೆ ಬಂದವರನ್ನು ಸಹಿಸಬೇಕಿತ್ತು. ಈಗ ಏನಾಯಿತು? ವಲಸೆ ಬಂದವರು ಹೊರಟು ಹೋದರು. ಯಡಿಯೂರಪ್ಪನವರೇ ಹೋಗಿಬಿಟ್ಟರಲ್ಲ?

ಇನ್ನೂ ಪಕ್ಷದ ಟೊಂಗೆಗಳ ಮೇಲೆ ಬಂದಳಿಕೆ ಹಾಗೆ ಕುಳಿತವರು ಕೊನೆ ಕ್ಷಣದವರೆಗೆ ಮರದ ರಸವನ್ನೆಲ್ಲ ಹೀರಿ ಈ ಪಕ್ಷಕ್ಕೋ ಆ ಪಕ್ಷಕ್ಕೋ ಹಾರಿ ಹೋಗುತ್ತಾರೆ. ಯಾರೋ ಇಂಥ ಹಾರುವ ಸಚಿವರನ್ನು, ಶಾಸಕರನ್ನು ಕೋತಿಗಳಿಗೆ ಹೋಲಿಸಿದ್ದಾರೆ!

ಈಗ ಪರಮೇಶ್ವರ್ ಅವರಿಗೆ, ಮಲ್ಲಿಕಾರ್ಜುನ ಖರ್ಗೆಯವರಿಗೆ ಮುಖ್ಯಮಂತ್ರಿ ಆಗುವ ಕನಸು. ತಪ್ಪಲ್ಲ. ಆದರೆ, ಅವರಿಗೂ ಗೆಲ್ಲುವ ಅಭ್ಯರ್ಥಿಗಳ ಮೇಲೆ ಕಣ್ಣು. ಅವರು `ಕೋಮುವಾದಿ' ಬಿಜೆಪಿಯಲ್ಲಿ ಇದ್ದರೂ ಅಷ್ಟೇ.

ಪ್ರಾದೇಶಿಕ ಪಕ್ಷ ಜೆ.ಡಿ (ಎಸ್)ನಲ್ಲಿ ಇದ್ದರೂ ಅಷ್ಟೇ. ಅವರನ್ನು ಕಾಂಗ್ರೆಸ್ಸಿಗೆ ಕರೆದುಕೊಂಡು ಬರಬೇಕು. ಟಿಕೆಟ್ ಕೊಡಬೇಕು. ಗೆಲ್ಲಿಸಬೇಕು. ಬಹುಮತ ಬಂದರೆ ತನ್ನ ಪರವಾಗಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೈ ಎತ್ತುವಂತೆ ಮಾಡಬೇಕು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಲು, ಆಗಿ ಉಳಿಯಲು ಹೀಗೆ ತಮ್ಮ ಪರವಾಗಿ ಕೈ ಎತ್ತುವ ಶಾಸಕರು ಬೇಕಾಗಿತ್ತು.

ರಾಜಕಾರಣಿಗಳು ಬೇರೆ ಬೇರೆ ಪಕ್ಷದಲ್ಲಿ ಇರುತ್ತಾರೆ. ಅವರು ಅಂತರಂಗದಲ್ಲಿ ಒಂದೇ ಆಗಿರುತ್ತಾರೆ. ಅವರಿಗೆ ಅಧಿಕಾರ ಮುಖ್ಯ. ಹೈಕಮಾಂಡ್‌ಗೆ ಪಟ್ಟಿ ತೆಗೆದುಕೊಂಡು ಹೋಗುವುದು. ಅವರು ಕೆಲವು ಹೆಸರುಗಳಿಗೆ ಹಸಿರು ನಿಶಾನೆ ತೋರಿಸುವುದು, ಇನ್ನು ಕೆಲವು ಹೆಸರುಗಳಿಗೆ ಕೆಂಪು ನಿಶಾನೆ ತೋರಿಸುವುದು ಶುದ್ಧ `ಅಣಕ'. ಪಕ್ಷದ ತತ್ವ ಸಿದ್ಧಾಂತ ಅದಕ್ಕೆ ಒಂದು ಹುಸಿ ಆವರಣ!

ರಾಜಕೀಯ ಎಂಬುದು ವ್ಯಾಪಾರ ಆದಾಗ ಹೀಗೆಲ್ಲ ಆಗುತ್ತದೆ. ಯಾವ ಪಕ್ಷದಲ್ಲಿ ಹೋಗಿ ಅಂಗಡಿ ತೆರೆದರೆ ಜೋರು ವ್ಯಾಪಾರ ಆಗುತ್ತದೆ ಎಂದು ಚುನಾವಣೆ ಬರುತ್ತಿದ್ದಂತೆಯೇ ರಾಜಕಾರಣಿಗಳಿಗೆ ಅಂದಾಜು ಆಗುತ್ತದೆ. ಅಲ್ಲಿ ಹೋಗಿ ಅಂಗಡಿ ತೆರೆಯುತ್ತಾರೆ. ಮೊದಲು ಅಲ್ಲಿ ಅಂಗಡಿ ಇಟ್ಟುಕೊಂಡವರು ತೆರವು ಮಾಡಿಕೊಂಡು ಹೋಗುತ್ತಾರೆ. ಬಹುಪಾಲು ಎಲ್ಲ ಕಾಲದಲ್ಲಿಯೂ, ಎಲ್ಲ ಕಡೆಯೂ ಬಲಿಷ್ಠರದೇ ಮಾತು ನಡೆಯುತ್ತದೆ. ಜನರು ಏನೆಂದಾರು ಎಂಬ ಭಯ ಯಾರಿಗೂ ಇದ್ದಂತಿಲ್ಲ.

ಭಯ ಇರಬೇಕಾಗಿಯೇ ಇಲ್ಲ. ಜನರ ತಪ್ಪೇನೂ ಕಡಿಮೆ ಇಲ್ಲ. ಕಾಂಗ್ರೆಸ್, ಜೆ.ಡಿ (ಎಸ್) ಟಿಕೆಟ್ ಮೇಲೆ ಗೆದ್ದ ಶಾಸಕರು ರಾಜೀನಾಮೆ ಕೊಟ್ಟು ಬಿಜೆಪಿ ಟಿಕೆಟ್ ಮೇಲೆ ಮತ್ತೆ ಅದೇ ಕ್ಷೇತ್ರದಲ್ಲಿ ಕಣಕ್ಕೆ ಇಳಿದರೂ ಜನ ಅವರನ್ನೇನು ತಿರಸ್ಕರಿಸಲಿಲ್ಲವಲ್ಲ? ಮೊದಲು ನೀವು ಆ ಪಕ್ಷದಿಂದ ಏಕೆ ನಿಂತಿರಿ? ಈಗ ಈ ಪಕ್ಷದಿಂದ ಏಕೆ ನಿಲ್ಲುತ್ತಿದ್ದೀರಿ ಎಂದು ಯಾರೂ ಕೇಳಲಿಲ್ಲವಲ್ಲ? ಜನ ಎಂಬುದು ಇಷ್ಟು ಸದರ ಆಗಿಬಿಟ್ಟರೆ ಹೇಗೆ?

ಜನ ಎಷ್ಟು ದಿನ ಎಂದು ಹೀಗೆಯೇ ಮೇಣೆ ಹೊರುವ ಕೆಲಸ ಮಾಡುತ್ತಾರೆ? ಅವರಿಗೆ ಆತ್ಮ ಗೌರವ ಎಂಬುದು ಇಲ್ಲವೇ? ತನ್ನ ಒಂದು ಮತ ಎಷ್ಟು ದೊಡ್ಡದು ಎಂದು ತಿಳಿಯುತ್ತಿಲ್ಲವೇ? ಹೀಗೆ ಅಂಗಿ ಬದಲಿಸಿದಂತೆ ಪಕ್ಷ ಬದಲಿಸುವವರನ್ನು ಒಮ್ಮೆಯಾದರೂ ಐದು ವರ್ಷ ಮನೆಯಲ್ಲಿ ಕೂಡ್ರಿಸಿ ಬಿಟ್ಟರೆ ಅವರು ಪಾಠ ಕಲಿಯುವುದಿಲ್ಲವೇ? ಕಲಿಯಲಿಕ್ಕಿಲ್ಲವೇ? ಪಾಠ ಕಲಿಸಲು ಈಗಲೇ ಬೇಕಾದಷ್ಟು ತಡ ಆಗಿಲ್ಲವೇ? ಪಾಠ ಯಾರು ಕಲಿಸಬೇಕು? ಜನರೇ ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT