ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸತನಕ್ಕೆ ಹಾತೊರೆಯುತ್ತಿದ್ದಾನೆ ಎಲ್ಲೆಡೆಯ ಮತದಾರ

Last Updated 13 ನವೆಂಬರ್ 2016, 5:12 IST
ಅಕ್ಷರ ಗಾತ್ರ

ವಿಶ್ವದಾದ್ಯಂತ ಬಲಪಂಥೀಯ ರಾಜಕೀಯ ವಿಚಾರಧಾರೆಯು ಪ್ರಭಾವಶಾಲಿಯಾಗಿ ಬೆಳೆಯುತ್ತಿರುವುದನ್ನು ಅಮೆರಿಕದಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಅವರ ಗೆಲುವು ಸಾಬೀತುಪಡಿಸಿದೆ. ಇದನ್ನು ಚುನಾವಣಾ ವಿಶ್ಲೇಷಕರೆಲ್ಲ ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತಾರೆ.

ಎಡಪಂಥೀಯ ಚಿಂತನೆಯನ್ನು ದೂಳೀಪಟ ಮಾಡುವುದರ ಜತೆಗೆ, ಉದಾರವಾದಿ ಚಿಂತನೆಗಳನ್ನೂ ಅಳವಡಿಸಿಕೊಳ್ಳುತ್ತಲೇ ಬಲಪಂಥೀಯ ರಾಜಕಾರಣವು ಅಧಿಕಾರಕ್ಕೆ ಬರುತ್ತಿರುವುದನ್ನು ನಾವೆಲ್ಲ ಒಪ್ಪಿಕೊಳ್ಳಬೇಕಾಗಿದೆ. ಎರಡು ವಿಭಿನ್ನ ರಾಜಕೀಯ ಚಿಂತನೆಯ ಪಕ್ಷಗಳನ್ನು ಮತದಾರರು ಒಪ್ಪಿಕೊಳ್ಳುತ್ತಿರುವುದನ್ನು ನಾವೀಗ ನಂಬಬೇಕಾಗಿದೆ.

ಅಮೆರಿಕದಲ್ಲಿ ಮುಕ್ತ ಮಾರುಕಟ್ಟೆ– ವ್ಯಾಪಾರ, ವಲಸೆ ಸಮಸ್ಯೆ ಇದ್ದರೆ, ಯುರೋಪ್‌ನಲ್ಲಿ ರಾಷ್ಟ್ರೀಯತೆಯ ತೀವ್ರತೆ ಕಡಿಮೆಯಾಗುತ್ತಿದೆ. ಇಂದು ವಿಶ್ವದಾದ್ಯಂತ ಎಲ್ಲೆಡೆ ಮತದಾರರಲ್ಲಿ ಹೊಸ ಬದಲಾವಣೆ ಕಂಡು ಬರುತ್ತಿದೆ. ರಷ್ಯಾ  ಮತ್ತು ಚೀನಾದ ಮತದಾರರು ವ್ಲಾಡಿಮಿರ್‌ ಪುಟಿನ್‌ ಮತ್ತು ಕ್ಸಿ ಜಿನ್‌ ಪಿಂಗ್‌ ಅವರ ಬಗ್ಗೆ ಯಾವ ಬಗೆಯ ಅಭಿಪ್ರಾಯ ತಳೆದಿದ್ದಾರೆ ಎನ್ನುವುದು ನಮಗೆ ನಿಜವಾಗಿಯೂ ಗೊತ್ತಿಲ್ಲ.

ಸೈದ್ಧಾಂತಿಕ ಪರಿಭಾಷೆಯಲ್ಲಿ ಹೇಳುವುದಾದರೆ, ಈ ಎಲ್ಲ ಬೆಳವಣಿಗೆಗಳು ಒಂದೇ ದಿಕ್ಕಿನಲ್ಲಿ ಚಲಿಸುತ್ತಿವೆ ಎಂದೂ ಅರ್ಥವಲ್ಲ. ಭಾರತ, ಬ್ರಿಟನ್‌ (ಬ್ರೆಕ್ಸಿಟ್‌), ಅಮೆರಿಕ, ಅರ್ಜೆಂಟಿನಾ ಮತ್ತು ಬ್ರೆಜಿಲ್‌ ದೇಶಗಳಲ್ಲಿ ಬಲಪಂಥದ ರಾಜಕೀಯ ಅಲೆ ಕಂಡುಬರುತ್ತಿದೆ. ಈ ಬಗೆಯ ರಾಜಕೀಯ ಚಿಂತನೆಯು ಶೀಘ್ರದಲ್ಲಿಯೇ ಇಟಲಿ, ಫ್ರಾನ್ಸ್‌ ಮತ್ತು ಬಹುಶಃ ವೆನಿಜುವೆಲಾವನ್ನೂ ಪ್ರಭಾವಿಸಲಿದೆ ಎಂದು ಅಂದಾಜಿಸಬಹುದಾಗಿದೆ.

ರುಚಿರ್‌ ಶರ್ಮಾ ಅವರು ತಮ್ಮ ಇತ್ತೀಚಿನ ಗ್ರಂಥ ‘ದ ರೈಸ್‌ ಅಂಡ್‌ ಫಾಲ್‌ ಆಫ್‌ ನೇಷನ್ಸ್‌’ ಕೃತಿಯಲ್ಲಿ ಉಲ್ಲೇಖಿಸಿರುವಂತೆ, ದಕ್ಷಿಣ ಮತ್ತು ಲ್ಯಾಟಿನ್‌ ಅಮೆರಿಕದ ಬಹುತೇಕ ದೇಶಗಳು ಕೂಡ ಎಡಪಂಥದಿಂದ ಬಲಪಂಥದ ವಿಚಾರಧಾರೆಗೆ ಬದಲಾಗಿವೆ.

ಕೊಲಂಬಿಯಾದಲ್ಲಿ ನಡೆದ ಜನಾಭಿಪ್ರಾಯ ಸಂಗ್ರಹದಲ್ಲಿ ಸ್ಥಳೀಯರು ಗೆರಿಲ್ಲಾ ಬಣಗಳ ಜತೆಗಿನ ಶಾಂತಿ ಒಪ್ಪಂದವನ್ನು ತಿರಸ್ಕರಿಸಿ ತಮ್ಮದೇ ಆದ ಬಲಪಂಥೀಯ ಸರ್ಕಾರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜಪಾನ್‌ನಲ್ಲಿ ಪ್ರಧಾನಿ ಶಿಂಜೊ ಅಬೆ ಅವರ ಜನಪ್ರಿಯತೆಯು ಅಬಾಧಿತವಾಗಿ ಮುಂದುವರೆದಿದೆ.

ಹಳೆಯ ಎಡಪಂಥೀಯ ವಿಚಾರಧಾರೆಯನ್ನು ಬಲಪಂಥವು ಹಿಮ್ಮೆಟ್ಟಿಸುತ್ತಿದೆ. ಹೀಗಾಗಿ ಅದೊಂದು ಎಲ್ಲರನ್ನೂ ಒಪ್ಪಿಸಬಲ್ಲ ಚಿಂತನೆಯಾಗಿ ಬೆಳೆಯುತ್ತಿದೆ. ಹಾಗಿದ್ದರೆ, ಕೆನಡಾದಲ್ಲಿ ಜಸ್ಟಿನ್‌ ಟ್ರುಡೆಯು ಅವರ ಬಹುತೇಕ ಎಡಪಂಥೀಯ ಉದಾರವಾದ, ಫಿಲಿಪ್ಪೀನ್ಸ್‌ನಲ್ಲಿನ ಎಡಪಂಥದ ಡ್ಯುಟ್ರೆಟ್‌, ದಕ್ಷಿಣ ಕೊರಿಯಾದಲ್ಲಿನ ಬಲಪಂಥೀಯ ಸರ್ಕಾರದ ವಿರುದ್ಧ ಕೇಳಿಬರುತ್ತಿರುವ ಒಡಕಿನ ದನಿ ಮತ್ತು ಪ್ರತಿಭಟನೆ, ಗ್ರೀಸ್‌ನಲ್ಲಿ ಸಮಾಜವಾದ ತಲೆಎತ್ತುತ್ತಿರುವುದು... ಹೀಗೆ  ಯುರೋಪ್‌ನಾದ್ಯಂತ ಕಂಡು ಬರುತ್ತಿರುವ ಬೆಳವಣಿಗೆಗಳನ್ನು ನಾವು ಹೇಗೆ ವ್ಯಾಖ್ಯಾನಿಸಬಹುದು ಮತ್ತು ವಿಶ್ಲೇಷಿಸಬಹುದು ಎನ್ನುವ ಪ್ರಶ್ನೆಯೂ ಇಲ್ಲಿ ಎದುರಾಗುತ್ತಿದೆ.

ಇಂತಹ ವಿದ್ಯಮಾನಗಳು ಭಾರತದಲ್ಲಿಯೂ 2014ರ ಸಾರ್ವತ್ರಿಕ ಚುನಾವಣೆ ನಂತರದ ದಿನಗಳಲ್ಲಿ ನಿರ್ವಹಿಸಿದ ಪಾತ್ರ ಮತ್ತು ಅದರಿಂದ ಕಂಡುಬಂದ ರಾಜಕೀಯ ತಿರುವುಗಳು ಕೂಡ ಆಸಕ್ತಿದಾಯಕ ಸಂಗತಿಗಳಾಗಿವೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಭರ್ಜರಿ ಗೆಲುವು ಸಾಧಿಸಿದ ನಂತರ ಕೆಲವು ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಇದೇ ಬಗೆಯ ವಿಚಿತ್ರ ಬೆಳವಣಿಗೆಗಳು ಕಂಡುಬಂದವು.

ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್‌ ರಾಜ್ಯಗಳಲ್ಲಿನ ಚುನಾವಣಾ ಫಲಿತಾಂಶವು ಲೋಕಸಭಾ ಚುನಾವಣಾ ಫಲಿತಾಂಶವನ್ನೇ ಪ್ರತಿಫಲಿಸಿತು. ಆದರೆ, ದೆಹಲಿ, ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಇದಕ್ಕೆ ವ್ಯತಿರಿಕ್ತವಾದ ಫಲಿತಾಂಶ ಕಂಡುಬಂದಿತು. ಒಂದೆಡೆ ಬಿಜೆಪಿ ಅಥವಾ ಬಲಪಂಥೀಯ ವಿಚಾರಧಾರೆ ಜಯಭೇರಿ ಬಾರಿಸಿದರೆ, ಇನ್ನೊಂದೆಡೆ ಅನೇಕ ರಾಜ್ಯಗಳಲ್ಲಿ ಈ ವಿಚಾರಧಾರೆಯು ಯಾವುದೇ ಪ್ರಭಾವ ಬೀರದಿರುವುದು ಕಂಡು ಬಂದಿತು. ಅನೇಕ ಕಡೆಗಳಲ್ಲಿ ಲೋಕಸಭಾ ಚುನಾವಣೆಯಲ್ಲಿನ ಮತಗಳಿಕೆ ಸಾಧನೆಯನ್ನು ಪುನರಾವರ್ತಿಸಲೂ ಬಿಜೆಪಿಗೆ ಸಾಧ್ಯವಾಗಲಿಲ್ಲ.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ನೇತೃತ್ವದ ತೃಣಮೂಲ ಕಾಂಗ್ರೆಸ್‌ (ಟಿಎಂಸಿ), ಬಹುತೇಕವಾಗಿ ಎಡಪಕ್ಷ ಸಿಪಿಎಂನ ಚಿಂತನೆಯನ್ನೇ ಹೊಂದಿದೆ. ಕೇರಳದಲ್ಲಿ ಬಿಜೆಪಿ ಲೆಕ್ಕಕ್ಕೆ ಇರದಿದ್ದರೂ, ಕಾಂಗ್ರೆಸ್‌ ನೇತೃತ್ವದಲ್ಲಿನ ‘ಯುಡಿಎಫ್‌’ ಅನ್ನು ಸೋಲಿಸಿದ ಕಮ್ಯುನಿಸ್ಟರು ಗೆಲುವಿನ ನಗೆ ಬೀರಿದರು. ಈ ವಿಭಿನ್ನ ಚುನಾವಣಾ ಫಲಿತಾಂಶಗಳು ಭಾರತೀಯರನ್ನು ಸಾಕಷ್ಟು ಗೊಂದಲದಲ್ಲಿ ಮುಳುಗಿಸಿವೆ.

ಲೋಕಸಭೆ ಮತ್ತು  ವಿಧಾನಸಭಾ ಚುನಾವಣಾ ಫಲಿತಾಂಶಗಳು ಭಾರತೀಯರಿಗೆ ಗೊಂದಲಮಯ ಮತ್ತು ಸಂಕೀರ್ಣ ಸ್ವರೂಪದ ಸತ್ಯವೊಂದನ್ನು ಮನದಟ್ಟು ಮಾಡಿಕೊಟ್ಟಿವೆ. ಭಾರತದ ಮತದಾರನ ಮನಸ್ಥಿತಿ ಬದಲಾಗಿರುವುದನ್ನೂ ಇದು ಸೂಚಿಸುತ್ತದೆ. ಆದರೆ,  ನಾವೆಲ್ಲ ಅಂದುಕೊಂಡಿರುವಂತೆ ಅಧಿಕಾರದಲ್ಲಿ ಇರುವ ಪಕ್ಷದ ವಿರುದ್ಧದ ಆಕ್ರೋಶವನ್ನಷ್ಟೇ ಈ ಫಲಿತಾಂಶವು ಪ್ರತಿಬಿಂಬಿಸುವುದಿಲ್ಲ.

ಆಡಳಿತಾರೂಢ ಪಕ್ಷದ ವಿರುದ್ಧ ಮತದಾರ ಮತ ಚಲಾಯಿಸುವುದೇ ನಿಜವಾಗಿದ್ದರೆ, ಬ್ರಿಟನ್‌ ಮತ್ತು ಕೊಲಂಬಿಯಾದಲ್ಲಿ ಎಡಪಂಥೀಯ ವಿಚಾರಧಾರೆ ಪ್ರಖರವಾಗಿರದ ಸಂದರ್ಭದಲ್ಲಿ, ಬಲಪಂಥೀಯ ಸರ್ಕಾರಗಳಿಗೆ ಜನಾಭಿಪ್ರಾಯ ಸಂಗ್ರಹದಲ್ಲಿ ಸೋಲು ಉಂಟಾಗಲು ಕಾರಣಗಳೇನು?

ಬಲಪಂಥೀಯ ಚಿಂತನೆಯ ಮುನ್ನಡೆಯನ್ನು ಯಾರೊಬ್ಬರೂ ನಿರ್ಬಂಧಿಸಲು ಸಾಧ್ಯವಿಲ್ಲ ಎನ್ನುವುದಾದರೆ, ರಾಜಕೀಯವಾಗಿ ಇನ್ನೂ ಅಂಬೆಗಾಲು ಇಡುತ್ತಿರುವ ಅರವಿಂದ ಕೇಜ್ರಿವಾಲ್ ಅವರ ಆಮ್‌ ಆದ್ಮಿ ಪಾರ್ಟಿಯು, ದೆಹಲಿಯಲ್ಲಿ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಲು ಕಾರಣಗಳೇನು? ಪಂಜಾಬ್‌, ಗೋವಾ ಮತ್ತು ಗುಜರಾತ್‌ನಲ್ಲಿ ಈಗಾಗಲೇ ಬೇರುಬಿಟ್ಟಿರುವ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ‘ಎಎಪಿ’ಯು ಚಳಿ ಮೂಡಿಸಿರುವುದಕ್ಕೆ ಕಾರಣಗಳೇನು?

ಡೆಮಾಕ್ರಾಟ್‌ ಪಕ್ಷವು ಇನ್ನೇನು ಅಧಿಕಾರ ಸಿಕ್ಕೇಬಿಟ್ಟಿತು ಎನ್ನುವ ಖುಷಿಯಲ್ಲಿದ್ದಾಗ ಮತ್ತು ರಿಪಬ್ಲಿಕನ್ನರು ಗೆಲುವಿನ ಆಸೆಯನ್ನೇ ಕೈಬಿಟ್ಟಿದ್ದಾಗ, ಡೊನಾಲ್ಡ್‌ ಟ್ರಂಪ್‌ ಅವರು ಆಘಾತಕಾರಿಯಾದ ಗೆಲುವು ಸಾಧಿಸಿರುವುದಕ್ಕೆ ಏನು ಕಾರಣ ಎನ್ನುವ ಪ್ರಶ್ನೆಗಳು ಕಾಡುತ್ತವೆ. ಇಂತಹ ಅನುಮಾನಗಳಿಗೆ ನಾವು ಉತ್ತರ ಕಂಡುಕೊಳ್ಳಲು ಹೊರಟಾಗ, ಸೈದ್ಧಾಂತಿಕ ಸ್ವರೂಪದ ಆಚೆಯೂ ನೋಡಬೇಕಾಗುತ್ತದೆ ಎನ್ನುವುದು ಸ್ಪಷ್ಟಗೊಳ್ಳುತ್ತದೆ.

ಸರ್ಕಾರವೊಂದೇ ಬದಲಾಗಬೇಕು ಎನ್ನುವುದಷ್ಟೇ ಮತದಾರನ ಬಯಕೆ ಆಗಿರಲಾರದು. ಸ್ಥಾಪಿತ ವಿಚಾರಧಾರೆ, ಆದರ್ಶಗಳು ಮತ್ತು ಚಿಂತನಾ ಕ್ರಮವೂ ಬದಲಾಗಬೇಕು ಎನ್ನುವುದು ಮತದಾರನ ಒಲವು ಆಗಿರುವುದು ಇದರಿಂದ ಸ್ಪಷ್ಟಗೊಳ್ಳುತ್ತದೆ. ಈ ಬದಲಾವಣೆ ಎಡ ಅಥವಾ ಬಲಪಂಥೀಯ ಆಗಿರಬಹುದು ಇಲ್ಲವೇ ಅದಕ್ಕೆ ವಿರುದ್ಧ ದಿಕ್ಕಿನದ್ದೂ ಆಗಿರಬಹುದು ಅಥವಾ ಒಂದೇ ದಿಕ್ಕಿನಲ್ಲಿ ಇನ್ನಷ್ಟು ತೀವ್ರ ಗತಿಯಲ್ಲಿ ಮುಂದುವರೆಯಲೂಬಹುದು.

ಮೂರು ಕಾರಣಗಳಿಗಾಗಿ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಯಲ್ಲಿ ಸಂಪೂರ್ಣ ಬದಲಾವಣೆ ಆಗಬೇಕು ಎಂದು ಭಾರತದ ಮತದಾರ ಬಯಸುತ್ತಾನೆ.  ಕೆಲ ಗಂಡಾಂತರಗಳನ್ನು ಪರಿಗಣಿಸಿಯೂ ಹೊಸ ಸಾಹಸ ಚರ್ಯೆಗಳು ಇರಬೇಕು,  ಕಾಲು ಶತಮಾನದ ಅಭಿವೃದ್ಧಿ ಕಾರ್ಯಸೂಚಿ ಒಳಗೊಂಡಿರಬೇಕು.

ಇತ್ತೀಚಿನ ದಿನಗಳಲ್ಲಿ ಜಾಗತೀಕರಣ ಮತ್ತು ಗರಿಷ್ಠ ಪ್ರಮಾಣದ ಸಂವಹನವು ಜನರ ನಿರೀಕ್ಷೆಗಳ ಮಟ್ಟವನ್ನು ಹೆಚ್ಚಿಸಿವೆ. ಹಳ್ಳಿಗರು ನಗರಗಳಿಗೆ ವಲಸೆ ಹೋಗುವುದನ್ನು  ಇಷ್ಟಪಡುತ್ತಿಲ್ಲ. ತಾವು ಇರುವಲ್ಲಿಗೇ ಅಭಿವೃದ್ಧಿಯ ಫಲವು ತಲುಪಬೇಕು. ಗ್ರಾಮೀಣ ಪ್ರದೇಶ ಕೂಡ ನಗರಗಳಂತೆ ಉದ್ಧಾರವಾಗಬೇಕು ಎನ್ನುವುದು ಅವರ ಹಂಬಲವಾಗಿದೆ.

ಮತದಾರರು ಹಳೆಯ ರಾಜಕೀಯದಿಂದ ರೋಸಿ ಹೋಗಿದ್ದಾರೆ ಎಂದೂ ನನಗೆ ಅನಿಸುತ್ತದೆ. ಒಟ್ಟಾರೆ ಹೊಸತನಕ್ಕೆ ಅವರ ಮನಸ್ಸು ತಹತಹಿಸುತ್ತಿದೆ.  ಹೊಸ ಆಲೋಚನೆ, ಹೊಸ ಮುಖಂಡರು ಬೇಕು ಎಂಬುದು ಅವರ ಹಂಬಲವಾಗಿದೆ. ಈಗಾಗಲೇ  ತಮ್ಮ ಮಹತ್ವ ಕಳೆದುಕೊಂಡಿರುವ ಕೆಲ ಭಾವೋದ್ವೇಗದ ಸಂಗತಿಗಳಿಗೆ ಮರಳಿ ಜೀವ ತುಂಬಬೇಕು ಎನ್ನುವುದೂ ಅವರ ಬಯಕೆಯಾಗಿರುವಂತಿದೆ.

ಧರ್ಮದಂತೆ ರಾಷ್ಟ್ರೀಯತೆ ಕೂಡ ಮನುಕುಲದ ತುಂಬ ಹಳೆಯ ಮತ್ತು ಮಹತ್ವದ ಭಾವನಾತ್ಮಕ ವಿಷಯವಾಗಿದೆ. ಹಿಂದಿನ ಹಳವಂಡಗಳು ಮತ್ತೆ ಮುಂಚೂಣಿಗೆ ಬಂದು ನಿಲ್ಲುತ್ತಿವೆ. ಅಂತಹ ಆಲೋಚನೆಗಳ ಪೈಕಿ ರಾಷ್ಟ್ರೀಯತೆ ಭಾವನೆ ಉದ್ದೀಪಿಸುವುದು ಪ್ರಮುಖ ವಿಚಾರವಾಗಿದೆ.

ಯುರೋಪ್‌ನಲ್ಲಿ ಈ ಹಿಂದಿನಂತೆ ಫುಟ್‌ಬಾಲ್ ಅಭಿಮಾನಿಗಳು ಬರೀ ಕ್ಲಬ್‌ಗಳ ಬೆಂಬಲಿಗರಾಗಿ ಉಳಿದುಕೊಂಡಿಲ್ಲ. ಅವರೆಲ್ಲ ಈಗ ರಾಷ್ಟ್ರೀಯ ತಂಡದ ಬೆಂಬಲಿಗರಾಗಿ ಬದಲಾಗಿದ್ದಾರೆ. ಡೊನಾಲ್ಡ್ ಟ್ರಂಪ್ ಅವರಂತಹ ಜಾಣ ನಾಯಕರು ಈ ಬದಲಾವಣೆಯನ್ನು (ರಾಷ್ಟ್ರೀಯತೆ) ಸರಿಯಾಗಿ ಗ್ರಹಿಸಿ, ಮತದಾರರ ಮತ– ಮನ ಗೆಲ್ಲುತ್ತಿದ್ದಾರೆ.

ಭಾರಿ ಜನಪ್ರಿಯತೆ ಮತ್ತು ಸ್ಥಾಪಿತ ನಿಯಮಗಳಿಗೆ, ಅದರಲ್ಲೂ ವಿಶೇಷವಾಗಿ ತಮ್ಮದೇ ಪಕ್ಷ ಅನುಸರಿಸಿಕೊಂಡು ಬಂದಿರುವ ಧೋರಣೆಗಳ ಬದಲಾಗಿ ತನ್ನದೇ ಆದ ವೈಯಕ್ತಿಕವಾದ ವಿಶಿಷ್ಟ ನಿಯಮಗಳನ್ನು ಪ್ರತಿಪಾದಿಸುತ್ತಿರುವವರು ಜನಾನುರಾಗಿಯಾಗುತ್ತಿದ್ದಾರೆ.

ಇದುವರೆಗಿನ ನಾಯಕರನ್ನು ಕಂಡು ಬೇಸರಗೊಂಡಿರುವ ಮತದಾರರು ಬಂಡಾಯ ಸ್ವಭಾವದ ನಾಯಕನನ್ನು ಮೆಚ್ಚಿಕೊಳ್ಳುತ್ತಿದ್ದಾರೆ. 2014ರ ಏಪ್ರಿಲ್‌ – ಮೇ ತಿಂಗಳಿನಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ, ‘ಇದೊಂದು ಹೊಸ, ತಾರುಣ್ಯದ, ಸಿದ್ಧಾಂತಕ್ಕೆ ಹೊರತಾದ ಮತ್ತು ಹಳೆಯ ತತ್ವಗಳಿಗೆ ಜೋತು ಬೀಳದ ಹೊಸ ಮತದಾರನ ತೀರ್ಮಾನವಾಗಿದೆ’ ಎಂದು ನಾನು ನನ್ನ ಅಂಕಣದಲ್ಲಿ ಬರೆದಿದ್ದೆ.

ಇದಕ್ಕೆ ಪ್ರತಿವಾದವೂ ಇದ್ದೇ ಇದೆ. ಬಲಪಂಥೀಯ ವಿಚಾರಧಾರೆಯ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿ ಗೆಲ್ಲಿಸಿದಾಗ ಹೀಗೆ ಹೇಳುವುದು ಸರಿಯೇ ಎನ್ನುವ ಪ್ರಶ್ನೆಯೂ ಇಲ್ಲಿ ಉದ್ಭವವಾಗುತ್ತದೆ. ಮತದಾರರ ನಂಬಿಕೆಯಲ್ಲಿನ ಭಾರಿ ಬದಲಾವಣೆಯೇ ಇದಕ್ಕೆ ಕಾರಣ.

2014ರಲ್ಲಿ ದೇಶಿ ಮತದಾರರು ಬಹುಶಃ ಸೈದ್ಧಾಂತಿಕ ಬದಲಾವಣೆಗೆ ಮತ ಚಲಾಯಿಸಿರಲಿಕ್ಕಿಲ್ಲ. ಕಾಂಗ್ರೆಸ್‌ನ ಸಿನಿಕತನ ಮತ್ತು ನೇರವಾಗಿ ಆಡಳಿತ ನಡೆಸದೆ, ತಾವೇ ನೇಮಕ ಮಾಡಿದವರೂ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ಒದಗಿಸದ ಗಾಂಧಿ ಮನೆತನದ ಆಷಾಢಭೂತಿತನದಿಂದ  ರೋಸಿ ಹೋಗಿ ಜನರು ಬಂಡಾಯವೆದ್ದಿದ್ದರು.  ಬಿಜೆಪಿ ಕೂಡ ಈ ಸಂಗತಿಗಳನ್ನು ತನ್ನ ಚುನಾವಣಾ ಕಾರ್ಯತಂತ್ರದಲ್ಲಿ ಸೇರಿಸಿರಲಿಲ್ಲ.

ಜಾಗತಿಕ ಬೆಳವಣಿಗೆಗಳಲ್ಲಿಯೇ ನಮಗೆ ಈ ಸಂಗತಿಗಳ ಸಾಕ್ಷ್ಯಗಳು ಸಿಗುತ್ತಿವೆ. ಜನರು ತಮ್ಮ ಹಳೆಯ ಪಕ್ಷ ನಿಷ್ಠೆಯಿಂದ ಹೊರ ಬರುತ್ತಿದ್ದಾರೆ. ಹೊಸ ತಲೆಮಾರಿನ ಯುವ ಜನಾಂಗವು ರಾಜಕೀಯವನ್ನು ನಿರ್ಲಕ್ಷಿಸಿ ಭವಿಷ್ಯದ ಬಗ್ಗೆ ಹೆಚ್ಚು ಆಶಾವಾದಿಯಾಗಿದೆ.

ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಜನಸಂಖ್ಯೆಯಲ್ಲಿ ವೃದ್ಧರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.  ಜಾಗತೀಕರಣ ಮತ್ತು ಆರ್ಥಿಕ ಬೆಳವಣಿಗೆಗಳ ಲಾಭವು ಅನರ್ಹ ವ್ಯಕ್ತಿಗಳ, ಅದರಲ್ಲೂ ವಿಶೇಷವಾಗಿ ವಲಸಿಗರ ಪಾಲಾಗುತ್ತಿರುವುದು ಈ ಸಿರಿವಂತ ದೇಶಗಳ ಮೂಲ ಪ್ರಜೆಗಳ ಅತೃಪ್ತಿ, ಅಸಮಾಧಾನಕ್ಕೆ ಕಾರಣವಾಗುತ್ತಿದೆ. ವ್ಯಾಪಕ ಬದಲಾವಣೆ ಬಯಸುವ ಮತ್ತು ಕೊಳೆತು ನಾರುತ್ತಿರುವ ಹಳೆಯ ಸ್ಥಾಪಿತ ವ್ಯವಸ್ಥೆಯ ಪ್ರತಿಯೊಂದನ್ನೂ ಉಲ್ಲಂಘಿಸುವ ಪ್ರವೃತ್ತಿಯು ವಿಶ್ವದ ಎಲ್ಲೆಡೆ ಕಂಡು ಬರುತ್ತಿದೆ.

ಇದೇ ಕಾರಣಕ್ಕೆ, ನರೇಂದ್ರ ಮೋದಿ ಅವರು ಬಿಜೆಪಿಯನ್ನು ತಮ್ಮ ನಿಯಂತ್ರಣದಲ್ಲಿ ಇರಿಸಿಕೊಂಡಿದ್ದಾರೆ. ಈ ಹಿಂದೆ ಯಾರೊಬ್ಬರಿಂದಲೂ ಇಂತಹ ಧೋರಣೆ ಸಾಧ್ಯವಾಗಿರಲಿಲ್ಲ. ಕೇಜ್ರಿವಾಲ್‌ ಅವರು ಕಾಂಗ್ರೆಸ್‌ನ ಮತ ಬ್ಯಾಂಕ್‌ಗೆ ಲಗ್ಗೆ ಹಾಕುತ್ತಿದ್ದಾರೆ. ರಿಪಬ್ಲಿಕನ್‌ ಪಕ್ಷದ ಸ್ಥಾಪಿತ ಧೋರಣೆಯನ್ನೂ ಸೋಲಿಸಿರುವ ಟ್ರಂಪ್‌ ಗೆಲುವಿನಿಂದ ಅಮೆರಿಕದಲ್ಲಿನ ಅವರ ಬೆಂಬಲಿಗ ಮತದಾರರೂ ಸಾಕಷ್ಟು ಸಂಭ್ರಮಪಡುತ್ತಿದ್ದಾರೆ.  

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT