ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಗುವುದೋ ಇನ್ನೊಬ್ಬರಿಗೆ ಕಾಯುವುದೋ?

Last Updated 23 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ನನ್ನ ಗ್ರಹಿಕೆಯ ಅಲಾಸ್ಕ ಭಾಗ -2

ಪ್ರವಾಸಕ್ಕೆ ಅಮಿತ ಉದ್ದೇಶಗಳಿವೆ. ದುಡ್ಡು ಹುಡುಕಿ ಹೋಗುವ ವ್ಯಾಪಾರಿ, ದೇವರನ್ನು ಹುಡುಕಿ ಹೋಗುವ ಭಕ್ತ, ಅಧ್ಯಯನಕ್ಕೆ ಹೋಗುವ ವಿದ್ಯಾರ್ಥಿ, ಇರುವ ನೆಲೆಯಲ್ಲಿ ಉಸಿರುಗಟ್ಟಿತೆಂದು ಬೇರೊಂದು ನೆಲೆ ಹುಡುಕಿ ಹೋಗುವ ವಿಮೋಚನಾಕಾಂಕ್ಷಿ, ಏನನ್ನೋ ಸೃಷ್ಟಿಸಲು ಲಗತ್ತಾದ ಜಾಗವನ್ನು ಹುಡುಕಿ ಹೋಗುವ ಸೃಜನಶೀಲ ತಹತಹದ ಕಲಾಕಾರ, ಬೇಕಾದ್ದನ್ನು ಮತ್ತು ಬೇಕಾದವರನ್ನು ಅರಸಿ ಹೋಗುವ ಸಂಬಂಧಶೋಧಕ, ತೀರ್ಥಯಾತ್ರೆಯ ವೃದ್ಧಜೀವ, ಮಧುಚಂದ್ರದ ಜೋಡಿ, ವಿಚ್ಛೇದನ ಪಡೆದ ಒಂಟಿ, ರಂಜನೆ ಮತ್ತು ಖುಷಿಯನ್ನಷ್ಟೇ ಬಯಸಿ ಹೋಗುವ ಅಪ್ಪಟ ಲೌಕಿಕ, ಜಗತ್ತನ್ನು ಅರಿಯಲು, ಬರೆಯಲು, ಬಂದ ಮೇಲೆ ಕೊರೆಯಲು ಹೋಗುವ ಬರಹಗಾರ, ಶೂಟಿಂಗು ಪಾಟಿಂಗು ಅಂತ ಹೋಗುವ ಸಿನಿಮಾದವರು, ಯಾವ ಉದ್ದೇಶವೂ ಇಲ್ಲದ ಅಲೆಮಾರಿ... ಒಟ್ಟಾರೆ ಗುರಿ ಎಂಥದ್ದೇ ಇರಲಿ ಮೂರು ಬಗೆಯಲ್ಲಿ ಜನ ಪ್ರವಾಸ ಮಾಡುತ್ತಾರೆ.

ಮೊದಲನೆಯದು : ಒಂಟಿ ಪ್ರವಾಸ. ಎರಡನೆಯದು ಸಕುಟುಂಬ ಅಥವಾ ಆಪ್ತರ ಜೊತೆ. ಮೂರನೆಯದು ಸಹೋದ್ಯೋಗಿಗಳ, ಸಹಪಾಠಿಗಳ, ವಿದ್ಯಾರ್ಥಿಗಳ, ಅಧ್ಯಯನಶೀಲರ, ಸಮಾನಮನಸ್ಕರ ಅಥವಾ ಅಪರಿಚಿತರ ಗುಂಪಿನ ಜೊತೆ. ನಾನೂ ಈ ಮೂರು ತೆರನಾದ ಪ್ರವಾಸ ಕೈಗೊಂಡಿದ್ದೇನೆ. ವಿದ್ಯಾರ್ಥಿಗಳನ್ನು ಕರೆದುಕೊಂಡು ಎಲ್ಲೆಲ್ಲೋ ಅಲೆದಾಡಿದ್ದೇನೆ. ನನ್ನ ಹಳ್ಳಿಯ ರೈತರನ್ನು ಕರೆದುಕೊಂಡು ವಿವಿಧ ರಾಜ್ಯಗಳಿಗೆ ಕೃಷಿ ಅಧ್ಯಯನಕ್ಕಾಗಿಯೂ ಹೋಗಿ ಬಂದಿದ್ದೇನೆ. ಎಲ್ಲ ರೀತಿಯ ಪ್ರವಾಸಗಳಲ್ಲೂ ಅದರದೇ ಆದ ಕಷ್ಟಸುಖಗಳಿವೆ. ಮನುಷ್ಯ ಎಂಥ ಸಂಕೀರ್ಣವಾದ ಪ್ರಾಣಿ ಎಂದರೆ, ಒಬ್ಬನೇ ಹೋದಾಗ ಒಂಟಿತನದಿಂದ ನರಳುವವನೇ, ಗುಂಪಿನ ಜತೆ ಹೋದಾಗ ಖಾಸಗಿತನಕ್ಕೆ ಹಂಬಲಿಸುತ್ತಾನೆ. ಸಮಾನ ಅಭಿರುಚಿಯ ಬೆರಳೆಣಿಕೆಯ ಗುಂಪಿನೊಂದಿಗೆ ಪ್ರವಾಸ ಹೋಗುವುದು ಇದ್ದುದರಲ್ಲಿ ಉತ್ತಮ. ಆಗಲೂ ಮನು ಷ್ಯರ ಮೂಲ ಸ್ಥಾನದಲ್ಲಿದ್ದ ನಡವಳಿಕೆಗಳೇ ಪ್ರಯಾಣ ಕಾಲದಲ್ಲೂ, ತಲುಪಿದ ಸ್ಥಾನದಲ್ಲೂ ಇರುತ್ತವೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಹೊಸ ಜಾಗಗಳಲ್ಲಿ ಹೊಸ ನಡವಳಿಕೆಗಳು ಅನಾವರಣಗೊಳ್ಳುವ ಮತ್ತು ಅವು ಅಸಹನೀಯವಾಗಿರುವ ಸಾಧ್ಯತೆಗಳೂ ಇರುತ್ತವೆ.

ನೀನು ಪ್ರವಾಸವನ್ನು ಹೇಗೆ ಗ್ರಹಿಸುತ್ತೀಯ? ಟಿಪ್ಪಣಿ ಮಾಡಿಕೊಳ್ಳುವ ಕ್ರಮವೇನು? ಯಾವುದಕ್ಕೆ ಒತ್ತು ಕೊಡುತ್ತೀಯ? ಎಂದು ನನಗೆ ಅಪಾರ ಕುತೂಹಲವಿದೆ. ನಿನ್ನ ಪ್ರವಾಸೀಬರಹಗಳನ್ನೆಲ್ಲ ಓದಿದ್ದೇನೆ. ನನ್ನನ್ನೂ ಒಂದು ಪ್ರವಾಸಕ್ಕೆ ಕರೆದುಕೊಂಡು ಹೋಗು ಎಂದು ಮೈಸೂರಿನಿಂದ ಕರೆ ಮಾಡಿದವರು ಜಕ್ಕೇನಹಳ್ಳಿ ಬೆಟ್ಟಪ್ಪ ರಂಗಸ್ವಾಮಿ. ಅವರ ಹೆಸರು ಬರಿಯ ರಂಗಸ್ವಾಮಿ ಎಂದೇ ತಿಳಿದಿದ್ದೆ. ಪಾಸ್‌ಪೋರ್ಟ್‌ನ ನಕಲು ನೋಡಿದಾಗಲೇ ಅವರಿಗೆ ಮೂರು ತುಂಡಿನ, ಐದು ಒತ್ತಕ್ಷರದ, ಉದ್ದನೆ ಹೆಸರಿದೆ ಎಂದು ತಿಳಿದದ್ದು. ನನ್ನ ಜೊತೆ ಪ್ರವಾಸಕ್ಕೆ ಬರಬೇಕೆಂಬುದು ಅವರ ಆಳವಾದ ಅನಿಸಿಕೆಯೋ ಅಥವಾ ಬುರುಬುರು ನೊರೆಗುಳ್ಳೆಯೋ ಎಂಬ ಅನುಮಾನಕ್ಕೆ ಬಿದ್ದೆ. ಆದರೆ ಅವರು ಬದ್ಧತೆಯುಳ್ಳ ಮನುಷ್ಯ. ಚೆನ್ನಾಗಿ ಓದಿಕೊಂಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಡಿವೈಎಸ್‌ಪಿ ಆಗಿ ದುಡಿದು ಒಳ್ಳೆಯ ಹೆಸರು ಪಡೆದು ನಿವೃತ್ತರಾಗಿದ್ದಾರೆ. ಸಾಕಷ್ಟು ಪ್ರವಾಸ ಮಾಡಿದ್ದಾರೆ.

ಜತೆಯಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗಲು ಅರ್ಹರು. ಊಹಿಸಬಹುದಾದ ಒಂದೇ ಒಂದು ಭೀಕರ ಸಮಸ್ಯೆ ಎಂದರೆ ಅವರು ಕುಳಿತ ಕೂಡಲೇ ನಿದ್ರಿಸಬಲ್ಲರು. ಮರುಕ್ಷಣವೇ ಗರಗಸದಂತೆ ಗೊರಕೆಯಿಂದ ಕೊರೆಯಬಲ್ಲರು. ಒಂದೇ ಕ್ಯಾಬಿನ್‌ನ ಎರಡು ಹಾಸಿಗೆಗಳೆಂದ ಮೇಲೆ ನನ್ನ ಇರುಳ ಪಾಡೇನು? ಗೊರಕೆ ಎಂಬುದು ಪೂರ್ಣ ರಿಪೇರಿಯಾಗದ ರೋಗವಲ್ಲ. ಗೊರಕೆ ವೀರರು ಸರಿಪಡಿಸಿಕೊಳ್ಳಲು ಪ್ರಯತ್ನಿಸುವುದೂ ಇಲ್ಲ. ಅವರಿಗೋ ಗೊರಕೆಯೊಡನೆ ಸೊಂಪಾದ ನಿದ್ರೆ. ಚಿತ್ರಹಿಂಸೆ ಅನುಭವಿಸುವವರು ಬದಿಯಲ್ಲಿರುವವರು. ನಿಮ್ಮ ಗೊರಕೆಯಿಂದ ನನ್ನ ಇಡೀ ರಾತ್ರಿಯ ನಿದ್ರೆ ಹಾಳಾಯಿತೆಂದು ನೀವು ಯಾವುದೇ ಗೊರಕೇಶ್ವರ ಅಥವಾ ಗೊರಕೇಶ್ವರಿಯವರಿಗೆ ಹೇಳಿ ನೋಡಿರಿ; ಅವರು ತಾವು ಗೊರಕೆ ಹೊಡೆಯುವುದನ್ನು ಒಪ್ಪಿಕೊಳ್ಳದೆ, ಹೌದಾ ಎಂದು ಅಮಾಯಕರಂತೆ ನಟಿಸುತ್ತಾರೆ.

ಜಬೆರಂ ಅವರ ಗೊರಕೆ ಗರಗಸದಿಂದ ಸಾವಿರಾರು ಬಾರಿ ಕೊಯ್ಯಿಸಿಕೊಂಡು ಇಡೀ ರಾತ್ರಿ ನಿದ್ರಾವಿಹೀನನಾಗಿರುವ ನಾನು ಯಾವ ಧೈರ್ಯದಲ್ಲಿ ಇವರನ್ನು ಅಲಾಸ್ಕಗೆ ಕರೆದುಕೊಂಡು ಹೋಗಲಿ? ಕಿವಿಗೆ ಗಿಡಿದುಕೊಳ್ಳಲು ಎಷ್ಟು ಕಿಲೋ ಹತ್ತಿಯನ್ನು ಕೊಂಡೊಯ್ಯಲಿ ? ಗೊರಕೆಯ ಸದ್ದಿನ ಕಂಪನಕ್ಕೆ ಹಡಗು ಪಥ ಬದಲಿಸುವುದಿಲ್ಲ ಎಂದು ಏನು ಗ್ಯಾರಂಟಿ? ಅಲಾಸ್ಕಗೆ ಕರೆದೊಯ್ಯುವುದು ಎಂದರೆ ಹೊಸ ಅಂಗಿ ಧರಿಸಿ ಅಥವಾ ಚೆಂಡು ಹೂವು ಮುಡಿದು ಹುಲಿಕೆರೆ ಜಾತ್ರೆಗೆ ಹೋಗುವಂಥದಲ್ಲ. ನಾನು ಆರಿಸಿಕೊಂಡ ಹಡಗು ಕೆನಡಾ, ಅಮೆರಿಕಾ ದೇಶಗಳಲ್ಲಿ ತೇಲಿಹೋಗುವುದರಿಂದ ಎರಡೂ ದೇಶಗಳ ವೀಸಾ ಬೇಕು. ಆರೋಗ್ಯ, ಋತುಮಾನ, ಹಣಕಾಸು ಹೊಂದಿಕೆಯಾಗಬೇಕು. ಅಲಾಸ್ಕ ಹಿಮದಲ್ಲಿ ಮುಚ್ಚಿಹೋಗಿ ವರ್ಷದ ಕೆಲವು ತಿಂಗಳು ಮಾತ್ರ ಲೋಕಕ್ಕೆ ತೆರೆದುಕೊಳ್ಳುತ್ತದೆ. ಬಿಸಿಲು ಕೋಲಿನ ಜತೆ ನಾವೂ ಹೋಗಬೇಕು.

ಸುಮ್ಮನೆ ಹೋಗುವುದಲ್ಲ. ಅಚ್ಚರಿಯನ್ನು ತುಂಬಿಕೊಂಡು, ಅಚ್ಚರಿಯನ್ನೇ ಹೊದ್ದುಕೊಂಡು, ಅಚ್ಚರಿಯ ಕಣ್ಣುಗಳನ್ನು ಒಳಗೂ ಹೊರಗೂ ತೆರೆದುಕೊಂಡು ಹೋಗಬೇಕು. ಏಕೆಂದರೆ ಅಲಾಸ್ಕವೆನ್ನುವುದು ಭೂಮಿಯ ಮೇಲಿರುವ ನಿಸರ್ಗ ನಿರ್ಮಿತ ಅಚ್ಚರಿ. ಅದು ಹಿಮಬಾಲೆ, ಹಿಮಾಂಗನೆ, ಹಿಮಮೇಖಲೆ, ಹಿಮಗರ್ಭ, ಹಿಮಶರಧಿ, ಹಿಮಾಂಶು, ಹಿಮದೇಗುಲ, ಹಿಮಕೋಟೆ, ಹಿಮಜ್ವಾಲೆ, ಹಿಮದೇವತೆ ಮತ್ತು ಹಿಮರಾಕ್ಷಸಿ. ನಾನು ಓದಿದ ಒಂದು ಹೊತ್ತಗೆ ಅಲಾಸ್ಕದ ಗ್ಲೇಸಿಯರ್‌ಗಳು (Glaciers of Alaska) ಸೋಜಿಗದ ರಾಶಿಯನ್ನೇ ನನ್ನೆದುರು ಗುಡ್ಡೆ ಹಾಕಿ ಹೀಗೆ ಜಪಿಸುವಂತೆ ಮಾಡಿತು. ಅಗಾಧ ಸಚಿತ್ರ ವಿವರಗಳನ್ನುಳ್ಳ ಆ ಪುಸ್ತಿಕೆಯ ಯಾವ ವರ್ಣನೆಗಳೂ ಉತ್ಪ್ರೇಕ್ಷೆಗಳಲ್ಲ. ಇಂಥ ಹಲವು ಅಗಾಧ ಅಚ್ಚರಿಗಳುಳ್ಳ ಈ ಭೂಮಿಯ ಮೇಲೆ ಬಂದು ಇಣುಕಿ ಹೋಗುವ ಅವಕಾಶ ನಮಗೆ ದೊರಕುತ್ತದೆ ಎಂಬುದೇ ಮನುಕುಲಕ್ಕಿರುವ ಬಹುದೊಡ್ಡ ಅದೃಷ್ಟ. ಇಂಥ ಭವ್ಯವಾದ ಭೂಮಿಯ ಮೇಲೆ ನಾವೂ ನಾಲ್ಕು ದಿನ ಇರುತ್ತೇವೆ ಎನ್ನುವುದು ಸಣ್ಣ ಸಂಗತಿಯಲ್ಲ. ಗ್ರ್ಯಾಂಡ್ ಕ್ಯಾನಿಯನ್ ಎದುರು ನಿಂತಾಗಲೂ ನನಗೆ ಇದೇ ಭಾವ ತುಂಬಿ ಬಂದದ್ದುಂಟು. ಸೋಜಿಗಗಳು ಯಾವ ದೇಶಕ್ಕಾದರೂ ಸೇರಿರಲಿ, ಈ ಭೂಮಿಯ ಮೇಲಿರುವ ಎಲ್ಲ ಮನುಷ್ಯರೂ ಅವುಗಳ ಬಗ್ಗೆ ಹೆಮ್ಮೆಪಟ್ಟುಕೊಳ್ಳಬೇಕು.

ಅಲಾಸ್ಕಗೆ ಕೈ ಕಾಲು ಗಟ್ಟಿ ಇರುವಾಗ ಹೋಗಿ ಬರಲೇಬೇಕೆಂದು ಅನ್ನಿಸಿದ್ದು, ಒಮ್ಮೆ ಚಿತ್ರೀಕರಣ ಮುಗಿಸಿ ಬರುವಾಗ ಜುನೌ ಮತ್ತು ಆಂಕ್ರೆಜ್‌ಗಳ ನಡುವೆ ಆಕಾಶಗಮನದಲ್ಲಿ ಕಂಡ ಮಲಾಸ್ಪಿನಾ ಮತ್ತು ಮೌಂಟ್ ಲೋಗನ್ ಗ್ಲೇಸಿಯರ್‌ಗಳ ಮನೋಹರ ಚಿತ್ರದಿಂದ. ಸಹೃದಯದ ಪೈಲಟ್ ವಿಮಾನದ ವೇಗ ತಗ್ಗಿಸಿ ಕೊಂಚ ಕೆಳಗಿಳಿಸಿ ವಿವರಿಸುತ್ತಿದ್ದ. ಹೊರಗೆ ನೊಚ್ಚನೆ ಬಿಸಿಲಿದ್ದುದರಿಂದ ಆ ವಿಶಾಲ ದೃಶ್ಯ ನೀಲಿ ಮತ್ತು ಬಿಳಿ ಬಣ್ಣವನ್ನು ಅರೆಬರೆ ಕಲೆಸಿಟ್ಟ, ತುಸು ಒಣಗಿದ ಕ್ಯಾನ್‌ವಾಸಿನಂತೆ ಉಂಗುರಾಕಾರವಾಗಿ ಕಾಣಿಸಿತ್ತು. ಆಗಲೇ ನಿರ್ಣಯಿಸಿದ್ದೆ. ಜಲಮಾರ್ಗ ಮತ್ತು ಭೂಮಾರ್ಗಗಳ ಮೂಲಕ ಅಲಾಸ್ಕ ಎಂಬ ಅಚ್ಚರಿಯನ್ನು ಅನ್ವೇಷಿಸಬೇಕೆಂದು. ಆ ಪುಸ್ತಕದಲ್ಲಿ ಇನ್ನೊಂದು ಮಾತಿದೆ. ಅದು ಭವ್ಯತೆಗೆ ಸಂಬಂಧಿಸಿದ್ದಲ್ಲ; ಮಹಾನ್ ಭವ್ಯತೆಗೆ ಸಂಬಂಧಿಸಿದ್ದು. ಏನೆಂದರೆ ಅಲಾಸ್ಕದಲ್ಲಿ ಎಷ್ಟು ಗ್ಲೇಸಿಯರ್‌ಗಳಿವೆ ಎಂದು ಖಚಿತವಾಗಿ ಲೆಕ್ಕ ಹಾಕಲು ಈವರೆಗೂ ಸಾಧ್ಯವಾಗಿಲ್ಲ. ನಿಸ್ಸಂಶಯವಾಗಿ ಅವು ಒಂದು ಲಕ್ಷಕ್ಕೂ ಹೆಚ್ಚಿವೆ. ಸಾಮಾನ್ಯ ಪ್ರವಾಸಿಗರು ಬೆರಳೆಣಿಕೆಯಷ್ಟು ಗ್ಲೇಸಿಯರ್‌ಗಳನ್ನು ಮಾತ್ರ ನೋಡಲು ಸಾಧ್ಯ. ಇದುವರೆಗೆ ನಾಮಕರಣ ಮಾಡಲಾಗಿರುವ ಗ್ಲೇಸಿಯರ್‌ಗಳು ಕೇವಲ ೬೫೦.

ಭೂಮಿ ಚಪ್ಪಟೆ ಎಂದು ಬಾಲ್ಯದಲ್ಲಿ ನಂಬಿದ್ದ ದಡ್ಡ ನಾನೊಬ್ಬನೇ ಎಂಬ ಕೀಳರಿಮೆ ಭಾವನೆಯನ್ನು ಜನಪ್ರಿಯ ವಿಜ್ಞಾನ ಲೇಖಕರೂ, ಮಿತ್ರರೂ ಆದ ಟಿ.ಆರ್. ಅನಂತರಾಮು ಹೋಗಲಾಡಿಸಿದರು. ಭೂಮಿ ಚಪ್ಪಟೆ ಎಂದು ದೊಡ್ಡವರಾದ ಮೇಲೂ ನಂಬಿರುವ, ನಂಬಿ ವಾದಿಸುವವರ ಸಂಘವೇ ಇದೆ ಎಂದರು. ಅಂತರ್ಜಾಲದಲ್ಲಿ ಶೋಧಿಸಿದಾಗ ಇನ್ನಷ್ಟು ಮಾಹಿತಿ ಸಿಕ್ಕವು. ಹತ್ತೊಂಬತ್ತನೇ ಶತಮಾನದ ಆದಿ ಭಾಗದಲ್ಲೇ ಸ್ಯಾಮ್ಯುಯೆಲ್ ಬಾರ್‍್ಲಿ ರೌಬೋತಮ್ ಎಂಬಾತ ಭೂಮಿ ಚಪ್ಪಟೆಯಾಗಿದೆ ಎಂದು ನಂಬಿದ್ದು ಮಾತ್ರವಲ್ಲ ; ಫ್ಲ್ಯಾಟ್ ಅರ್ತ್ ಸೊಸೈಟಿಯನ್ನೇ ಕಟ್ಟಿದ್ದನಂತೆ. ಅದೂ ಸೋ ಕಾಲ್ಡ್ ಜಾಣರೆನಿಸಿದ ಇಂಗ್ಲೆಂಡ್‌ನಲ್ಲಿ. ಬೈಬಲ್ ಉಲ್ಲೇಖಿಸುತ್ತಿದ್ದ ಆತ ಝೆಟೆಟಿಕ್ ಅಸ್ಟ್ರಾನಮಿ ಎಂದು ಕರೆದು ಭೂಮಿ ಧ್ವನಿಸಾಂದ್ರಿಕೆ (CD) ಆಕಾರದಲ್ಲಿ ಫ್ಲ್ಯಾಟ್ ಆಗಿದೆ. ಕೇಂದ್ರದಲ್ಲಿರುವುದು ಉತ್ತರ ಧ್ರುವ ಎಂದು ವಾದಿಸಿದ.

ಇವನು ತೀರಿಕೊಂಡ ಮೇಲೆ ಇವನ ಅನುಯಾಯಿಗಳು ದಡ್ಡತನವನ್ನು ಇನ್ನಷ್ಟು ಪ್ರಚುರಪಡಿಸಿ ಅಮೆರಿಕೆಗೂ ಹಬ್ಬಿಸಿದರು. ಇಂಟರ್‌ನ್ಯಾಶನಲ್ ಫ್ಲ್ಯಾಟ್ ಅರ್ತ್ ಸೊಸೈಟಿ ಹುಟ್ಟಿಕೊಂಡಿತು. ಸ್ಯಾಮ್ಯುಯೆಲ್ ಶೆಂಟನ್ ಈ ಸಂಘವನ್ನು ಜೋರಾಗಿ ಬೆಳೆಸಿದ. ೩೦೦೦ ಜನ ಸದಸ್ಯರಾದರು. ೧೯೯೫ರಲ್ಲಿ ಬೆಂಕಿ ಬಿದ್ದು ಕಚೇರಿ, ಗ್ರಂಥಾಲಯ, ಸದಸ್ಯರ ಲಿಸ್ಟು ಬೂದಿಯಾದವು. ಆಗಲಾದರೂ ಚಪ್ಪಟೆ ಭೂಮಿಯ ವಿಷಯ ಮರೆತು ಸುಮ್ಮನಾಗಬಹುದಿತ್ತು. ಆದರೆ ದಡ್ಡರಿಗೆ ಧೈರ್ಯ ಜಾಸ್ತಿ. ಇತ್ತೀಚೆಗೆ ೨೦೦೪ರಲ್ಲಿ ಸಂಘ ಚಿಗುರಿತು. ಉಚಿತ ಸದಸ್ಯತ್ವವನ್ನು ಒಂದು ಟಿಶರ್ಟ್ ಜತೆಗೆ ಕೊಡುತ್ತಾರಂತೆ. ನೀವು ಮಾಡಬೇಕಾದ್ದಿಷ್ಟೆ. ಭೂಮಿ ಚಪ್ಪಟೆಯಾಗಿದೆ ಎಂಬ ಸ್ಲೋಗನ್ ಮುದ್ರಿಸಲ್ಪಟ್ಟ ಆ ಟಿಶರ್ಟ್ ತಗುಲಿಸಿಕೊಂಡು, ನಿಮ್ಮ ದಡ್ಡತನ ಬಿಂಬಿಸುತ್ತಾ ಓಡಾಡುತ್ತಿರಬೇಕು. ಒಂದು ಪೋಸ್ಟ್ ಕಾರ್ಡು ಬರೆದರೆ ಸಾಕು, ಸಹಸದಸ್ಯತ್ವವನ್ನು ತಕ್ಷಣವೇ ಕೊಡುತ್ತಾರಂತೆ. ಟಿಶರ್ಟ್‌ಗಾಗಿಯಾದರೂ ನಾನೂ ಸದಸ್ಯನಾಗಬೇಕೆಂದಿದ್ದೇನೆ. ಚಪ್ಪಟೆಯಾಗಿದ್ದಿ ಎಂದರೆ ಸಿನಿಮಾ ತಾರೆಯಂತೆ ನಮ್ಮ ಭೂತಾಯಿ ಏನೂ ಬೇಸರ ಪಟ್ಟುಕೊಳ್ಳುವುದಿಲ್ಲ !

ದೈತ್ಯ ಹಡಗು ಎನಿಸಿದ ಡೈಮಂಡ್ ಪ್ರಿನ್ಸಸ್‌ನಲ್ಲಿ ನಾನೂ ರಂಗಸ್ವಾಮಿಯವರೂ ಅಲಾಸ್ಕಗೆ ಹೋಗಲು ಕ್ಯಾಬಿನ್ ಗೊತ್ತು ಮಾಡಿದ್ದಾಯಿತು. ಆ ಹಡಗಿನ ಆರಂಭ ಬಿಂದು ವ್ಯಾಂಕೋವರ್ ನಗರ ಕೆನಡಾಕ್ಕೆ ಸೇರಿದೆ. ಇಬ್ಬರೂ ದೆಹಲಿಯಲ್ಲಿದ್ದ ಕೆನಡಾ ರಾಯಭಾರಿ ಕಚೇರಿಗೆ ವೀಸಾಗೆ ಅರ್ಜಿ ಸಲ್ಲಿಸಿದೆವು. ನಾನು ಗೊರಕೆಯನ್ನು ತಾಳಿಕೊಳ್ಳುವುದು ಹೇಗೆ ಎಂಬ ಪುಸ್ತಕಗಳನ್ನು ಆಳವಾಗಿ ಅಭ್ಯಾಸ ಮಾಡತೊಡಗಿದೆ. ಒಂದೇ ವಾರಕ್ಕೆ ನನ್ನ ವೀಸಾ ಬಂತು. ರಂಗಸ್ವಾಮಿಯವರ ವೀಸಾ ಅರ್ಜಿ ಸ್ವೀಕೃತವೂ ಆಗಲಿಲ್ಲ. ತಿರಸ್ಕೃತವೂ ಆಗಲಿಲ್ಲ. ಪಾಪ, ಅವರಿಗೂ ಗೊರಕೆಯ ಬಗ್ಗೆ ಸುಳಿವು ಸಿಕ್ಕಿತ್ತೇನೋ. ಹಡಗು ಹೊರಡುವ ದಿನ ಸಮೀಪಿಸುತ್ತಿದ್ದಂತೆ ನನಗೆ ಆತಂಕ ಹೆಚ್ಚಾಯಿತು.

ರಂಗಸ್ವಾಮಿಯವರ ಪರವಾಗಿ ವೀಸಾ ಅರ್ಜಿ ಸಲ್ಲಿಸಿದ್ದ ಮೈಸೂರಿನ ಏಜೆಂಟು ಮಾತ್ರ ಆಕಾಶ ತೋರಿಸುತ್ತಾ ದೇವರಿದ್ದಾನೆ, ವೀಸಾ ಬಂದೇ ಬರುತ್ತದೆ ಎಂದು ಕ್ಯಾಲೆಂಡರ್ ಈಶ್ವರನಂತೆ ಮುಗುಳ್ನಗುತ್ತ ನಿಲ್ಲುತ್ತಿದ್ದನಂತೆ. ಹಡಗು ಹೋದ ಮೇಲೆ ವೀಸಾ ಬಂದರೇನು ಲಾಭ? ಎಲ್ಲಕ್ಕೂ ಹಣ ಪಾವತಿ ಮಾಡಲಾಗಿತ್ತು. ಒಬ್ಬನೇ ಹೊರಟುಬಿಡುವುದೋ ಅಥವಾ ಕಾಯುವುದೋ ಎಂದು ಗೊಂದಲಕ್ಕೆ ಬಿದ್ದೆ. ನನ್ ಮಾತ್ರ ಬಿಟ್ ಹೋಗಬೇಡ. ವೀಸಾ ಇನ್ನೇನ್ ಬಂತು ಎಂದು ಅವರು ಆಸೆಗಣ್ಣಿನಿಂದ ನಿತ್ಯ ಕುರಿಯರ್‌ಗೆ ಕಾಯತೊಡಗಿದರು. ವ್ಯಾಂಕೋವರ್‌ನಿಂದ ಡೈಮಂಡ್ ಪ್ರಿನ್ಸಸ್ ಎಂಬ ತ್ರಿಪುರ ಸುಂದರಿ ರಾಜಕುಮಾರಿ ಹಡಗು ತಾನು ಹೊರಡುವ ಮುನ್ನ ಹಾರನ್  ಮಾಡುತ್ತಿರುವಂತೆ, ನನ್ನನ್ನು ಹತ್ತಿಸಿಕೊಳ್ಳದೆ ಹೊರಟಂತೆ ಕನಸಾಗಿ ಚಡಪಡಿಸತೊಡಗಿದೆ. ಒಂದೇ ವಾರ ಬಾಕಿ ಉಳಿದಿತ್ತು. ಕ್ಷಣಗಣನೆ ಆರಂಭವಾಯಿತು.
(ಮುಂದುವರಿಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT