ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಗೆನ್ನಲಿಲ್ಲ, ಹೊಗೆಯನಿಕ್ಕಿದರು

Last Updated 30 ಜುಲೈ 2011, 19:30 IST
ಅಕ್ಷರ ಗಾತ್ರ

ವಿದ್ಯಾರ್ಥಿಗಳ ಕೊರತೆಯ ನೆಪದಿಂದ ಕನ್ನಡ ಶಾಲೆಗಳನ್ನು ಮುಚ್ಚಬಾರದು: ಮುಖ್ಯಮಂತ್ರಿಗಳಿಗೆ ಒತ್ತಾಯ

ಕಾಸರಗೋಡು: ಕಳೆದ ಸರಕಾರ ಹೊರಡಿಸಿದ ಮಲಯಾಳ ಕಡ್ಡಾಯ ಆದೇಶದಿಂದ ಭಯಭೀತರಾದ ಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳು ಸಾಮೂಹಿಕವಾಗಿ ಕರ್ನಾಟಕಕ್ಕೆ ವಲಸೆ ಹೋಗುತ್ತಿದ್ದು ಇದನ್ನು ತಡೆಗಟ್ಟಲು ಈ ಆದೇಶ ಕನ್ನಡ ಶಾಲೆಗಳಿಗೆ ಅನ್ವಯಿಸುವುದಿಲ್ಲವೆಂದು ತಕ್ಷಣವೇ ತಿದ್ದುಪಡಿ ತಂದು ಭಾಷಾ ಅಲ್ಪಸಂಖ್ಯಾತರಲ್ಲಿ ವಿಶ್ವಾಸ ಮೂಡಿಸಬೇಕೆಂದು ಮುಳ್ಳೆರಿಯದ ಹಿರಿಯ ನಾಗರಿಕ ವೇದಿಕೆ ಕೇರಳ ಮುಖ್ಯಮಂತ್ರಿಗಳನ್ನು ಮತ್ತು ಶಿಕ್ಷಣ ಸಚಿವರನ್ನು ಒತ್ತಾಯಿಸಿದೆ.

ಕಳೆದ ಸರಕಾರ ಹುಟ್ಟಿಸಿದ ಈ ಗೊಂದಲವನ್ನು ಈ ಸರಕಾರವೂ ಮುಂದುವರಿಸದೆ ಈ ಆತಂಕವನ್ನು ತಕ್ಷಣ ಕೊನೆಗೊಳಿಸಬೇಕು. ಈ ಆತಂಕಕ್ಕೆ ಸರಕಾರದ ಆದೇಶವೇ ಕಾರಣವಾದುದರಿಂದ ವಿದ್ಯಾರ್ಥಿಗಳ ಸಂಖ್ಯೆಯ ಕೊರತೆಯ ನೆವದಿಂದ ಕನ್ನಡ ಶಾಲೆಗಳ ಯಾವುದೇ ವಿಭಾಗವನ್ನು ರದ್ದುಗೊಳಿಸಬಾರದು ಮತ್ತು ಕನ್ನಡ ಅಧ್ಯಾಪಕ ಹುದ್ದೆಗಳನ್ನು ಕಡಿತಗೊಳಿಸಬಾರದು ಎಂದು ವಿನಂತಿಸಿ ಪತ್ರ ಕಳುಹಿಸಲಾಗಿದೆ.

ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇಂಗ್ಲಿಷ್ ಶಾಲೆಗಳಿದ್ದು ಇನ್ನಷ್ಟು ಶಾಲೆಗಳಿಗೆ ಅನುಮತಿ ನೀಡಬಾರದು ಎಂದು ಕೇಳಿಕೊಳ್ಳಲಾಗಿದೆ.

ಸಾಮಾನ್ಯವಾಗಿ ಭಾಷಾ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಗೆ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಬೊಟ್ಟು ಮಾಡಲಾಗುತ್ತದೆ, ಅದರಲ್ಲಿ ಸತ್ಯಾಂಶವೂ ಇದೆ.
ಆದರೆ ಮಂಜೇಶ್ವರ ಶೈಕ್ಷಣಿಕ ಉಪಜಿಲ್ಲೆಯ ಬಹುಪಾಲು ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿ ಸಂಖ್ಯಾ ಕುಸಿತ ಉಂಟಾಗಿದ್ದು ಇದಕ್ಕೆ ಮಲಯಾಳ ಕಡ್ಡಾಯ ಆದೇಶವೇ ಕಾರಣ ಎಂದು ತಿಳಿದುಬಂದಿದೆ.

ಮಲಯಾಳ ಕಡ್ಡಾಯವನ್ನು ಸಂಪೂರ್ಣ ಜಾರಿಗೊಳಿಸಿದಲ್ಲಿ ಇಲ್ಲಿ ಕನ್ನಡ ಸಂಸ್ಕತಿ ಮತ್ತು ಕನ್ನಡಿಗರ ಬದುಕಿಗೆ ಸರಿಪಡಿಸಲಾರದ ಹಾನಿ ಸಂಭವಿಸುವುದರಲ್ಲಿ ಸಂಶಯವಿಲ್ಲ. ಈ ಪತ್ರದ ಪ್ರತಿಗಳನ್ನು ಪ್ರಧಾನಮಂತ್ರಿಗಳಿಗೆ ಮತ್ತು ರಾಷ್ಟ್ರೀಯ ಭಾಷಾ ಅಲ್ಪಸಂಖ್ಯಾತ ಆಯೋಗಕ್ಕೆ ಕೂಡ ಕಳಿಸಲಾಗಿದೆ .
(ಪತ್ರಿಕಾ ವರದಿ)

***
ಕೇರಳದಲ್ಲಿ ಮಲೆಯಾಳವನ್ನು ಸಾರ್ವತ್ರಿಕವಾಗಿ ಪ್ರಥಮಭಾಷೆಯಾಗಿ ಕಡ್ಡಾಯಗೊಳಿಸಲಾಗಿದೆ. ಮಲೆಯಾಳವನ್ನು ಐದನೇ ತರಗತಿಯಿಂದ ಕಡ್ಡಾಯ ಮಾಡಿರುವುದಷ್ಟೇ ಅಲ್ಲ, ಒಂದನೇ ತರಗತಿಯಿಂದಲೇ ಸಮಯ ಸಿಕ್ಕಿದಾಗೆಲ್ಲ ಮಲೆಯಾಳದ ಅಕ್ಷರಾಭ್ಯಾಸ ಮಾಡಿಸಿ ಮಕ್ಕಳನ್ನು ಸಜ್ಜುಗೊಳಿಸಬೇಕು ಅಂತಿದೆ.

ಎಳೆಯ ಮಗುವಿನೆದುರು ಅಕ್ಷರಗಳ ಗೊಂದಲ ಹುಟ್ಟಿಸುವ ಹುಂಬತನವಲ್ಲವೆ ಇದು? ಎಡೆಸಿಕ್ಕಾಗೆಲ್ಲ ಮಲೆಯಾಳಿ ಅಕ್ಷರಗಳನ್ನು ಕಲಿಸುವವರು ಯಾರು? ಹೆತ್ತವರೋ, ಅಧ್ಯಾಪಕರೋ? ಸಮಯ ಸಿಕ್ಕಾಗೆಲ್ಲ ಮಲೆಯಾಳಿಯೇತರ ಮಗು ಆಟ ಆಡಬೇಕೋ, ಮಲೆಯಾಳಿ ಅಕ್ಷರ ತಿದ್ದುತ್ತ ತನ್ನ ಬಾಲ್ಯವನ್ನು, ಭಾಷೆಯನ್ನೂ ಬಲಿಕೊಡಬೇಕೋ.

-ಹೀಗೆ ಆದೇಶದ ವಿರುದ್ಧವಾಗಿ ಕಾಸರಗೋಡಿನ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ, ಕರ್ನಾಟಕ ಸಮಿತಿ ಹಾಗೂ ಇನ್ನಿತರ ಕನ್ನಡ ಸಂಘಟನೆಗಳು ಧರಣಿ ಮಾಡಿದವು. ತಮ್ಮ ಶಾಸಕರನ್ನು ಧರಣಿಗೆ ಕರೆಸಿ ಅನ್ಯಾಯ ವಿವರಿಸಿದವು. ಹೊರಾಟಗಾರರ ನಿಯೋಗವೊಂದು ತಿರುವನಂತಪುರಕ್ಕೆ ಶಾಸಕರ ಬಳಿಗೂ ಹೋಗಿ ವಿಷಯ ಚರ್ಚಿಸಿತು. ಪ್ರಯೋಜನವಿಲ್ಲವಾಯ್ತು.

ಬಹಳ ಹಿಂದೆ ನಮ್ಮೂರಿನಲ್ಲಿ ವಿದ್ವಾನ್ ಡಿ.ವಿ.ಹೊಳ್ಳ ಎಂಬ ಕನ್ನಡ ಪಂಡಿತರಿದ್ದರು. ಮಂಜೇಶ್ವರದಿಂದ ಉದ್ಯೋಗ ನಿಮಿತ್ತ ಕುಂದಾಪುರಕ್ಕೆ ಬಂದು ಅಲ್ಲಿನ ಶಾಲೆಯಲ್ಲಿ ಕನ್ನಡ ಬೋಧಿಸಿದವರು. ಕನ್ನಡವೇ ಉಸಿರಂತಿದ್ದವರು.

ಅನೇಕ ಯಕ್ಷಗಾನ ಪ್ರಸಂಗಗಳನ್ನೂ ಸಂಜ್ಞಾರ್ಥಕೋಶವೆಂಬ ಅಪರೂಪದ ಅರ್ಥಕೋಶವನ್ನೂ ಬರೆದವರು. ಅವರ ಮತ್ತು ಅವರ ಹೆಂಡತಿ ಕಾವೇರಮ್ಮ ಇಬ್ಬರ ಮಾತುಕತೆಯಲ್ಲಿಯೂ `ತೆಂಕಲಾಯಿನ~ ತಮ್ಮೂರಿನ ನೆನಪುಗಳು ಹಣಕುತ್ತಲೇ ಇರುತಿದ್ದವು. ಅಂದೊಂದು ದಿನ ಭೂಪಟದಲ್ಲಿ ಕಾಸರಗೋಡು ಕನ್ನಡನಾಡಿಂದ ಚಿಮ್ಮಿ ಕೇರಳಕ್ಕೆ ಹಾರುವ ಸುದ್ದಿ ಕೇಳಿ ಇಬ್ಬರೂ ಭಾರೀ ಸಂಕಟಗೊಂಡರು; ಆಗಿನ್ನೂ ಹನ್ನೊಂದು ವರ್ಷದವಳು ನಾನು, ಆ ಸಂಕಟ ಏನೆಂದೇ ಅರ್ಥವಾಗದೆ ಅಚ್ಚರಿಪಟ್ಟಿದ್ದೆ...

ಮುಂದೆ ಎಂಬತ್ತರ ದಶಕದಲ್ಲೊಮ್ಮೆ ಕುಂದಾಪುರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಗಡಿನಾಡ ಗೋಷ್ಠಿಯೊಂದು ನಡೆಯಿತು. ಕಾಸರಗೋಡಿನ ಪ್ರತಿನಿಧಿಗಳಾಗಿ ಯು.ಪಿ.ಕುಣಿಕುಳ್ಳಾಯ, ಖಂಡಿಗೆ ಶಾಮಭಟ್, ಡಾ. ಲಲಿತಾಭಟ್, ಶ್ರೀಶದೇವ ಪೂಜಿತ್ತಾಯ, ಗಂಗಾಧರಭಟ್, ವೆಂಕಟರಾಜ ಪುಣಿಂಚಿತ್ತಾಯ, ಕೆ.ಟಿ.ಶ್ರೀಧರ್ ಮತ್ತು ಎಡನೀರು ಮಠದ ಸ್ವಾಮಿಗಳು ಬಂದಿದ್ದರು.

ಅಂದು ಅವರೆಲ್ಲರ ಮಾತು ಕವಿತೆ ಉಪನ್ಯಾಸಗಳಲ್ಲಿ ಉಕ್ಕುತಿದ್ದ ವೇದನೆಯ ಛಳಕು ಈಗಲೂ ನನ್ನಲ್ಲಿ ಮಸಳಿಸದೆ ಇದೆ. `ಕಾಸರಗೋಡೆಂಬುದು ಕನ್ನಡಿಗರ ಪಾಲಿಗೆ ಒಂದು ಇಲ್ಲಗಳ ಜಿಲ್ಲೆ~ ಎಂದು ತಮ್ಮ ಆಳನೋವನ್ನು ಅವರೆಲ್ಲರೂ ತೋಡಿಕೊಂಡಿದ್ದರು.

ಗೋಷ್ಠಿಯ ಅಂತ್ಯದಲ್ಲಿ ಸಭಿಕರೊಬ್ಬರು- `ಇನ್ನು ನೀವು ಒಂದಾಗುವ ಪ್ರಶ್ನೆ ಬಿಡುವುದು ಒಳಿತಲ್ಲವೆ? ಎಷ್ಟು ದಿನ ಅಂತ ಅದನ್ನೇ ಹಿಡಿದುಕೊಳ್ತೀರಿ? ಆಯ್ತುಹೋಯ್ತು ಅಂತಿರಬೇಕು. ನಾವೆಲ್ಲರೂ ಭಾರತೀಯರು ಎಂದುಕೊಳ್ಳಬೇಕು~ ಎಂದು ಪ್ರತಿಕ್ರಿಯಿಸಿದಾಗ ನೆರೆದ ಸಭೆ ನೊಂದು ನಿಶ್ಶಬ್ದ ಕುಳಿತ್ದ್ದದೂ ಪ್ರತಿಕ್ರಿಯೆಗೆ ಸಿಕ್ಕಿದ ಮಾರ್ಮಿಕ ಉತ್ತರವೂ ನೆನಪಾಗುತ್ತಿದೆ.

ಸಭೆ ಮುಗಿದ ಮೇಲೆ ಈಚೆ ಬರುತ್ತ ಆ ಪ್ರತಿನಿಧಿಗಳಲ್ಲೊಬ್ಬರು `ಭಾರತೀಯರೇ ಏನು, ವಿಶ್ವಮಾನವರೆನ್ನಲು ನಮಗೂ ಖುಶಿಯೇ. ಆದರೆ ಹಾಗೆ ಹೇಳಲು ಮೊದಲು ನಮ್ಮಲ್ಲಿ ನಾವು ಎನ್ನುವುದು ಉಳಿಯಬೇಕಲ್ಲ~ ಎಂದದ್ದೂ ನೆನಪಿಗೆ ಬರುತ್ತಿದೆ.

ಈಗ-
ಕಾಸರಗೋಡು ಜಿಲ್ಲೆ ಕರ್ನಾಟಕಕ್ಕೆ ಮರಳಿ ಸೇರಬೇಕೆಂಬ ಹಂಬಲ ಒತ್ತಟ್ಟಿಗಿರಲಿ, ಅಲ್ಲಿ ಕನ್ನಡ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಮಲೆಯಾಳ ಭಾಷೆಯ ಸೂಕ್ಷ್ಮ ಬರಹಗಾರರಾದ ಜ್ಞಾನಪೀಠ ಪುರಸ್ಕೃತ ಓ.ವಿ.ಎನ್.ಕುರುಪ್, ಸುಕುಮಾರ ಅಝಿಕ್ಕೋಡ್, ಸುಗತಕುಮಾರಿ ಅಂಥವರೇ ಸರಕಾರದ ಮಲೆಯಾಳ ಕಡ್ಡಾಯ ನಿರ್ಧಾರವನ್ನು ಬೆಂಬಲಿಸಿದ್ದಾರೆ.

ಮುಳುಗುವವರ ಕೈ ನೀರಮೇಲೆ ಚಾಚಿ ತೇಲುತ್ತ `ಕಾಪಾಡಿ~ ಎನ್ನುತ್ತಿರುವ ಹಾಗೆ ಇಲ್ಲಿನ ಕನ್ನಡದ ಚಿತ್ರವಿದೆ. ನೀವು ನಿಮ್ಮ ಸಾಹಿತಿಗಳ ಮಾತನ್ನು ಮಾತ್ರವನ್ನಲ್ಲ. ಇಲ್ಲಿ ನೋಡಿ, ಕಾಸರಗೋಡಿನ ಕವಿ ಡಾ.ಕೆ.ವಿ.ತಿರುಮಲೇಶ್ ಇದ್ದಾರೆ, ಕನ್ನಡನಾಡಿಗೆ ತನ್ನ ಜಿಲ್ಲೆ ಸೇರಿಹೋಗುವ ಸುದಿನವನ್ನೇ ಇನ್ನೂ ಎದುರು ನೋಡುತ್ತಿರುವ, ಶತಮಾನ ಸಮೀಪಿಸುತ್ತಿರುವ ಕವಿ ಮುತ್ಸದ್ದಿ ಕಿಞ್ಞಣ್ಣ ರೈ ಅವರಿದ್ದಾರೆ.

ಇಲ್ಲಿ ಕನ್ನಡದ ದೊಡ್ಡ ಪರಂಪರೆಯೇ ಇದೆ. ತೆಂಕುತಿಟ್ಟು ಯಕ್ಷಗಾನದ ತವರು ಎಂದೆನಿಸಿಕೊಂಡ ನಾಡಿದು. ಪಾರ್ತಿಸುಬ್ಬರ ಕುಂಬಳೆ, ಕುಂಬಳೆ ಸುಂದರರ ಕುಂಬಳೆ, ಗೋವಿಂದ ಪೈ ಅವರ ಮಂಜೇಶ್ವರ ಇರುವುದು ಭಾರತದ ಇನ್ನೆಲ್ಲೂ ಅಲ್ಲ, ಕಾಸರಗೋಡಿನಲ್ಲೇ. ಡಾ.ಯು.ಶಂಕರನಾರಾಯಣ ಭಟ್ಟರು ಕಾಸರಗೋಡಿನಲ್ಲಿನ ಯಕ್ಷಗಾನ ಪ್ರಸಂಗಕರ್ತರ ಅರ್ಥಧಾರಿಗಳ ಕುರಿತು ಸಂಶೋಧನೆಗೆ ಹೊರಟಾಗ ಸಿಕ್ಕಿದ ಹಸ್ತಪ್ರತಿಗಳೂ ಪ್ರಸಂಗಕರ್ತರ ಅರ್ಥಧಾರಿಗಳ ದಾಖಲೆಗಳೂ ಅಸಂಖ್ಯ.

ನಮ್ಮ ಶೇಣಿ, ಕುರಿಯ, ಕನ್ನಡದೋಜ ಪೆರಡಾಲ ಕೃಷ್ಣಯ್ಯ, ಪೆರ್ಲ ಕೃಷ್ಣಭಟ್ಟ, ಬೇಕಲ ರಾಮನಾಯಕ, ಸಾರಾ ಅಬೂಬಕರ್, ಕೆ.ಟಿ.ಗಟ್ಟಿ, ಡಾ.ರಮಾನಂದ ಬನಾರಿ, ಡಾ.ಯು.ಮಹೇಶ್ವರಿ, ಡಾ.ವೇಣುಗೋಪಾಲ ಕಾಸರಗೋಡು, ಡಾ.ನಾ.ದಾಮೋದರ ಶೆಟ್ಟಿ, ಕಾಸರಗೋಡು ಚಿನ್ನಾ, ಶಶಿಭಾಟಿಯಾ, ತುಲಸೀ, ಕೆ.ಟಿ. ವೇಣುಗೋಪಾಲ... ತೀರಾ ಇತ್ತೀಚೆಗಿನ ಹರೀಶ ಪೆರ್ಲ, ರಾಧಾಕೃಷ್ಣ ಉಳಿಯತ್ತಡ್ಕ, ಅನುಪಮಾ ಪ್ರಸಾದ, ವಿಜಯಲಕ್ಷ್ಮಿ... ಸಾಲು ಮುಗಿಯುವುದಿಲ್ಲ, ಅಷ್ಟುದ್ದ ಇದ್ದೂ, ಈ ದೀರ್ಘ ಪರಂಪರೆಯನ್ನು ಅಳಿಸಿ, ಕನ್ನಡ ಆಚೆಗಿಡಿ, ಇನ್ನೆಲ್ಲ ಮಲೆಯಾಳಿ ಎಂದರೆ!

ನಮಗಿರುವುದು ಮಲೆಯಾಳಿ ಭಾಷೆಯ ದ್ವೇಷವಲ್ಲ, ನಮ್ಮ ಭಾಷೆಯ ಮೇಲಿನ ಪ್ರೀತಿ ಅಂತ ಬಿಡಿಸಿ ಹೇಳಬೇಕಾದ ಅಸೂಕ್ಷ್ಮವಂತಿಕೆಯ ಕಾಲಕ್ಕೆ ಭಾಷೆಯೇ ಮೂಲವಾಯಿತೆ? ಎಂಡೋಸಲ್ಫಾನ್ ತರುವ ಅಂಗವಿಕಲತೆ ಒಂದು ತೀವ್ರದ್ದಾದರೆ, ಯಾವುದೇ ಸರಕಾರದ ಭಾಷಾ ಸರ್ವಾಧಿಕಾರ ನೀತಿಯಿಂದ ಉಂಟಾಗುವ ವಿಕಲತೆ ಇನ್ನೊಂದೇ ತೀವ್ರ ಬಗೆಯದು.

ಸರಕಾರಗಳು ಕೊನೇ ಪಕ್ಷ ತಂತಮ್ಮ ಭಾಷಾನೀತಿಯಲ್ಲಾದರೂ ವಿವೇಕ ತೋರಬೇಕು. ಅದು ಯಾವುದೇ ಸರಕಾರದ ಘನತೆಯನ್ನು ಎತ್ತಿಹಿಡಿಯುತ್ತದೆ.

ಕೇರಳದ ರಾಜಕಾರಣಿಗಳೂ, ಭಾಷಣಕಾರರೂ ವೇದಿಕೆ ಏರಿದರೆಂದರೆ ಸಪ್ತಭಾಷಾ ಸಂಗಮ ಭೂಮಿ ಎಂದು ತಮ್ಮ ರಾಜ್ಯದ ಕುರಿತು ಭಾವೋದ್ವೇಗದಿಂದ ಹೆಗ್ಗಳಿಕೆ ಹೇಳಿಕೊಳ್ಳದೆ ಕೆಳಗಿಳಿಯರು. ವಿಷಾದವೆಂದರೆ ಅದೀಗ ಸತ್ತಭಾಷಾ ಸಂಗಮ ಭೂಮಿಯಾಗಲು ಹೊರಟಂತಿದೆ.

ಪ್ರಸ್ತುತ ಭಾಷಾಧೋರಣೆ ಅವರ ಈ ಹೆಗ್ಗಳಿಕೆಗೇ ಕೊಡಲಿಯೇಟು ಕೊಡುತ್ತದೆ ಎಂಬ ಸರಳಸತ್ಯ ಅವರಿಗೆ ತಿಳಿದಿಲ್ಲ ಅಂತಲೇ? ವೇದಿಕೆಯ ಮಾತುಗಳೇ ಬೇರೆ, ಧೋರಣೆಯ ಮಾತುಗಳೇ ಬೇರೆ ಎಂಬುದಕ್ಕೆ ಇದೊಂದು ಪ್ರಖರ ಉದಾಹರಣೆ.

ಅತ್ಯಂತ ಸಹಿಷ್ಣು ಭಾಷೆಯಾಗಿರುವ ಕನ್ನಡ ಲಾಗಾಯ್ತಿನಿಂದಲೂ ಸಾಧಿಸಿಕೊಂಡು ಬಂದ ಬಹುತ್ವವನ್ನು ನಾಶಪಡಿಸಿ ಆ ಜಾಗದಲ್ಲಿ ಏಕಮೇವ ಕನ್ನಡಭಾಷೆಯನ್ನು ಸ್ಥಾಪಿಸಿಕೊಳ್ಳುವ ಪರಿಕ್ರಮವನ್ನು ನಾವಂತೂ ನಮ್ಮಲ್ಲಿ ಊಹಿಸಲೂ ಆರೆವು. ಭಾಷೆಗಳ ಬೆಳವಣಿಗೆಗೆ ಭಾಷೆಗಳ ಒಡನಾಟವೂ ಬಹಳ ಮುಖ್ಯವೆಂಬುದನ್ನು ಮರೆಯಲುಂಟೆ?

ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಒಂದು ಭಾಗವಾಗಿದ್ದ ಕಾಸರಗೋಡು ಜಿಲ್ಲೆಯಲ್ಲಿಯೂ ತುಳು, ಮಲೆಯಾಳ, ಕನ್ನಡ ಎಲ್ಲ ಒಂದಕ್ಕೊಂದು ತಕ್ಕೈಸಿಕೊಂಡು ಕೊಡುಕೊಳುಗೆಯಿಂದ ಬೆಳೆದುಬಂದವು. ಭಾಷೆಯ ಈ ಬಹುತ್ವಗುಣವನ್ನು ನಾಶಪಡಿಸಿ ಒಕ್ಕುಂಟಿತನ ಮೆರೆದರೆ ಏನು ಸಾಧಿಸಿದಂತಾಯಿತು? ಕನ್ನಡದ ಪಂಪ, ಕುಮಾರವ್ಯಾಸ, ರನ್ನ, ಜನ್ನ ಯಾರೂ ಇನ್ನು ಕಾಸರಗೋಡಿನ ಗಡಿ ದಾಟಲಾರರು.

ಯಾಕೆ, ಇಲ್ಲಿನದೇ ನೆಲದ ಕವಿ ಗೋವಿಂದ ಪೈಯವರು ಇಲ್ಲಿಯೇ ಅಪ್ರಸ್ತುತರೂ ಅಪರಿಚಿತರೂ ಆಗುತ್ತಾರೆ. ಕೇಂದ್ರ ಸರಕಾರದ, ಕರ್ನಾಟಕ ರಾಜ್ಯ ಸರಕಾರದ ಆರ್ಥಿಕ ಬೆಂಬಲವಿದ್ದೂ ಸಾರ್ಥಕ ಸ್ಥಿತಿಗೆ ಬಂದಿಲ್ಲದ ಗೋವಿಂದ ಪೈ ಸ್ಮಾರಕದ ಕತೆ ಏನು ಸೂಚಿಸುತ್ತದೆ? ಈಗಾಗಲೇ ಕನ್ನಡ ಇಲ್ಲಿ ಕ್ಷೀಣಿಸಿದೆ. ಜನ ತಮ್ಮ ಮಕ್ಕಳಿಗೆ ಭವಿಷ್ಯದ ದೃಷ್ಟಿಯಿಂದ ಪ್ರಥಮ ಭಾಷೆಯಾಗಿ ಮಲೆಯಾಳ ಕೊಡಿಸುತಿದ್ದಾರೆ.

ಕನ್ನಡಶಾಲೆಗಳು ಮುಚ್ಚುತ್ತಿವೆ. ಇಂತಹ ಆಕ್ರಮಣಕ್ಕೆ ಏನಂತ ಕರೆಯೋಣ? ಕಾಸರಗೋಡಿನ ಉಜ್ವಲ ಕನ್ನಡಭಾಷಾ ಪ್ರಪಂಚವನ್ನು ಅಬ್ಬೆಪಾರಿಯಂತೆ ಬೀಳ್ಕೊಡಬೇಕೆ?

ಮಲೆಯಾಳಿ ಕಡ್ಡಾಯ ಮಾಡಿದರೆ ಕನ್ನಡ ಮಾತ್ರವಲ್ಲ, ಪಾಲ್ಘಾಟ್ ಜಿಲ್ಲೆಯ ವಿಶೇಷ ಘಮವುಳ್ಳ ತಮಿಳೂ ಕುಂದುತ್ತದೆ. ಮಲೆಯಾಳಿ ಪ್ರಭಾವ ಪಡೆದೂ ತನ್ನದೇ ಸ್ವಂತ ಆಕೃತಿ ಹೊಂದಿರುವ ಬ್ಯಾರೀ ಭಾಷೆಯ ವಿವಿಧ ಪ್ರಭೇದಗಳೂ ಕಾಣೆಯಾಗುತ್ತವೆ. ಚಂದ್ರಗಿರಿ ನದಿಯಾಚೆಗಿನ ವಿಶಿಷ್ಟ ಸೊಗಡಿನ ತುಳು ಭಾಷೆಯೂ ಕ್ಷೀಣಿಸುತ್ತಿದೆ.

ಈಚೀಚೆಗೆ ತುಳು ಕುಟುಂಬಗಳು ಮಲೆಯಾಳಕ್ಕೆ ಭಾಷಾಂತರಗೊಳ್ಳುತ್ತಿವೆ. ಕಾಲಾಂತರದಲ್ಲಿ ಮಲೆಯಾಳ ಭಾಷೆ ತನ್ನ ಮಡಿಲು ಸೇರಿದ ಇತರ ಭಾಷೆಗಳನ್ನು ನುಂಗಿ ಜೀರ್ಣೋಭವ ಮಾಡಿ ತಾನೊಂದೇ ಉಳಿಯುತ್ತದೆಯೇನು? ಭಾಷಾ ಹತ್ಯೆ ಎಂದರೆ ಒಂದು ಲೆಕ್ಕದಲ್ಲಿ ಬ್ರಹ್ಮಹತ್ಯೆಯೇ ಅಲ್ಲವೇನು? ಬಹುತ್ವ ಅಳಿಸಿ ಹೋದ ಮೇಲೆ ಏನಿದೆ? ದೀರ್ಘಾವಧಿಯಲ್ಲಿ ಸ್ವತಃ ಮಲೆಯಾಳದ ಪ್ರಭೆಯೂ ಕಂದಬಹುದು. ಎಲ್ಲರೂ ಒಂದೇ ತರಹದ ಅಂಗಿತೊಟ್ಟು ಮರಣದ ಮೆರಣಿಗೆಗೆ ಹೊರಟ ಚಿತ್ರವೊಂದು ಕಣ್ಮುಂದೆ ಕಟ್ಟುತ್ತಿದೆ.

ಇಲ್ಲೊಂದು ಮಾದರಿ ಇದೆ
ಬೆಲ್ಜಿಯಂನಲ್ಲಿ ಒಂದು ಭಾಷಾನೀತಿಯಿದೆ. ಅಲ್ಲಿ ಯಾವ ಭಾಷೆಯೂ ಅದು ಅಲ್ಪಸಂಖ್ಯಾತವಾಗಲಿ ಬಹುಸಂಖ್ಯಾತವಾಗಲಿ ಕೀಳಲ್ಲ ಮೇಲಲ್ಲ. ಭಾಷೆಯಲ್ಲಿ ಶ್ರೇಷ್ಠ ಕನಿಷ್ಠ ಎಂಬ ಭ್ರಮೆಯೇ ಇಲ್ಲದ ದೇಶವದು. ಅಲ್ಲಿ ಅಧಿಕಾರ ಕೂಡ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಭಾಷೆಯವರಿಗೆ ಸಮಸಮವಾಗಿ ಹಂಚಿ ಹೋಗುತ್ತದೆ.

ಏನು ನಡೆದರೂ ಇಬ್ಬರಿಗೂ ಸಂಬಂಧಿಸಿಯೇ ಇರುತ್ತದೆ. ಒಂದು ಭಾಷೆಯವರು ಇನ್ನೊಂದು ಭಾಷೆಯವರನ್ನು ಅವಲಂಬಿಸುವ ಪ್ರಶ್ನೆಯೇ ಇಲ್ಲ ಅಲ್ಲಿ. ಜಗತ್ತಿನಲ್ಲಿಯೇ ಇದೊಂದು ಮಾದರಿ. ಇದನ್ನು ಯಾಕೆ ನಮ್ಮಲ್ಲಿಯೂ ಕಾರ್ಯಗತಗೊಳಿಸಬಾರದು?

ಭಾಷಾ ಅಲ್ಪಸಂಖ್ಯಾತರಿಗಾಗಿ ಒಂದು ಅಕಾಡಮಿಗಿಂತ ಒಂದು ಅಧ್ಯಯನಪೀಠಕ್ಕಿಂತ ಒಂದು ಸಮ್ಮೇಳನಕ್ಕಿಂತ ಒಂದು ಜಾತ್ರೆಗಿಂತ ಸರಕಾರಿ ಕಚೇರಿಗಳಲ್ಲಿ ಅವರ ಭಾಷೆಯಲ್ಲಿ ಸೇವೆಯನ್ನು ನೀಡುವುದು ಹೆಚ್ಚು ಜನಪರವಾದುದು ಎಂಬುದನ್ನು ಆಡಳಿತ ವ್ಯವಸ್ಥೆ ಅರಿವಾಗದಂತೆ ನಟಿಸುತ್ತದೆ (ಡಾ. ನರೇಶ್ ಮುಳ್ಳೇರಿಯಾ).

ಈವರೆಗೆ ಇಲ್ಲಿ ವ್ಯವಹಾರದ ದಾಖಲೆಗಳು, ರಿಜಿಸ್ಟ್ರಾರ್ ಆಫೀಸಿನಲ್ಲಿ ರಿಕಾರ್ಡುಗಳೆಲ್ಲ ಕನ್ನಡದಲ್ಲಿಯೇ ಇದ್ದುವು. ಸಮರ್ಥ ಶಾಸಕರಾಗಿದ್ದ ಮಹಾಬಲ ಭಂಡಾರಿ ಮತ್ತು ಯು.ಪಿ. ಕುಣಿಕುಳ್ಳಾಯರು ಹೋರಾಡಿ ಗಟ್ಟಿಗೊಳಿಸಿಕೊಟ್ಟ ಸಂವಿಧಾನದತ್ತ ಸವಲತ್ತುಗಳು ಇವು... ಇಷ್ಟು ಸುಲಭವಾಗಿ ಗುಡಿಸಿಹೋಗುತ್ತಿದೆ ಎಂದರೆ! ಸಂವಿಧಾನ ಏನನ್ನುತ್ತದೆ?ಸ್ವತಂತ್ರ ಭಾರತದ ಸಂವಿಧಾನವಾದರೂ ಸಮಂಜಸವಾಗಿಯೇ ಚಿಂತಿಸಿದೆ.

1. ಆರ್ಟಿಕಲ್ 350ಎ- ಭಾಷಾ ಅಲ್ಪಸಂಖ್ಯಾತ ವಿಭಾಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಪ್ರಾಥಮಿಕ ವಿದ್ಯಾಭ್ಯಾಸವನ್ನು ಅವರ ಮಾತೃಭಾಷೆಯಲ್ಲಿ ಒದಗಿಸಲು ಹಾಗೂ ಅದಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರಕಾರ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳು ಬದ್ಧರಾಗಿದ್ದು ಇದಕ್ಕಾಗಿ ಶಕ್ತಿಮೀರಿ ಪ್ರಯತ್ನಿಸತಕ್ಕದ್ದು. ಇದರ ಅನುಷ್ಠಾನಕ್ಕಾಗಿ ಅಗತ್ಯವಿದ್ದಲ್ಲಿ ಮಾನ್ಯ ರಾಷ್ಟ್ರಪತಿಗಳು ದೇಶದ ಯಾವುದೇ ರಾಜ್ಯಗಳಿಗೆ ಸೂಕ್ತ ಆದೇಶಗಳನ್ನು ನಿಡಬಹುದು.

2. ಆರ್ಟಿಕಲ್ 350 ಬಿ- ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿ ರಾಷ್ಟ್ರಪತಿಗಳಿಂದ ನೇಮಕಗೊಂಡ ವಿಶೇಷ ಅಧಿಕಾರಿಯೊಬ್ಬರು ಇರಬೇಕು. ಇವರಿಗೆ ದೇಶದ ಯಾವುದೇ ಭಾಗದಲ್ಲಿರುವ ಭಾಷಾ ಅಲ್ಪಸಂಖ್ಯಾತರ ಸವಲತ್ತುಗಳು ಮೊಟಕುಗೊಂಡಲ್ಲಿ ಅದರ ಬಗ್ಗೆ ಕಾಲಾನುಕಾಲದಲ್ಲಿ ತನಿಖೆ ನಡೆಸಿ ವರದಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸುವ ಅಧಿಕಾರವಿದೆ. ಈ ವರದಿಯನ್ನು ರಾಷ್ಟ್ರಪತಿಗಳು ಪರಿಶೀಲಿಸಿ ಪಾರ್ಲಿಮೆಂಟಿನ ಉಭಯಸದನಗಳಿಗೆ ಕಳುಹಿಸಿ ಅಗತ್ಯವಿರುವ ಆದೇಶವನ್ನು ಮಂಜೂರು ಮಾಡಿಸಿ ಸಂಬಂಧಿಸಿದ ರಾಜ್ಯ ಸರಕಾರಗಳಿಗೆ ಕಳುಹಿಸುವರು.

ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿ ರಾಜ್ಯಸರಕಾರಗಳು ನೀಡಬೇಕಾದ ಸವಲತ್ತುಗಳಲ್ಲಿ ಅಲ್ಪಸಂಖ್ಯಾತರ ಶೈಕ್ಷಣಿಕ ಹಿತರಕ್ಷಣೆ, ಆಡಳಿತ ಮತ್ತು ಸರಕಾರಿ ಉದ್ದೇಶಗಳಿಗೆ, ಸಂಪರ್ಕ ಮಾಧ್ಯಮವಾಗಿ ಅಲ್ಪಸಂಖ್ಯಾತ ಭಾಷೆಗಳ ಬಳಕೆ.

ಸರಕಾರಿ ಸೇವೆಗೆ ಸೇರುವ/ ಸೇವೆಯಲ್ಲಿರುವ ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣೆ. ಇನ್ನೂ ಮುಂತಾಗಿ ಇವೆ. ಇವುಗಳ ಅನುಷ್ಠಾನಕ್ಕಾಗಿ ಕಾರ‌್ಯಕಾರಿ ಸಮಿತಿಯ ರಚನೆಯಾಗ ಬೇಕೆಂತಲೂ ಇದೆ. 

ಆದರೆ ಸಂವಿಧಾನಕ್ಕೆ ವಿರೋಧವಾಗಿ ರಾಜಾರೋಷವಾಗಿ ಭಾಷಾ ಹುನ್ನಾರಗಳು ನಡೆಯುತ್ತಲೇ ಇವೆ. ಭಾಷಾ ರಾಜಕಾರಣ ಒಂದು ಜನಾಂಗದ ಸ್ಮೃತಿಯನ್ನೇ ಅಳಿಸುತ್ತದಷ್ಟೆ?

ಜೀವಮಾನವಿಡೀ ಕನ್ನಡ ಕಲಿಸುತ್ತಿರುವ ಅಧ್ಯಾಪಕಿ ನಾನು. ನಾನು ಬೋಧಿಸುವ ಕನ್ನಡಭಾಷೆ ಇನ್ನು ಕೆಲಕಾಲದಲ್ಲಿಯೇ ಪಳಿಯುಳಿಕೆಯಾಗುತ್ತದೆ ಎಂಬ ಭಾವನೆ ನನ್ನನ್ನು ಅಧೀರಗೊಳಿಸುತ್ತಿದೆ.

ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದು ಕನ್ನಡ ಮನೆಮಾತಾಗಿ ವ್ಯವಹಾರಕ್ಕೂ ಅದನ್ನೇ ಬಳಸುತ್ತಿರುವ ನಾನು ಇದ್ದಕ್ಕಿದ್ದಂತೆ ನನ್ನ ಭಾಷೆ ಮೂಲೆ ಸೇರುವುದನ್ನು ನೋಡುತ್ತ ತಪ್ಪಿಸುವ ಮಾರ್ಗವೆಲ್ಲವೂ ತಪ್ಪಿಹೋಗುತ್ತಿರುವ ದುರಂತಕ್ಕೆ ಸಾಕ್ಷಿಯಾಗಿದ್ದೇನೆ. ನಾನಷ್ಟೇ ಅಲ್ಲ, ಕಾಸರಗೋಡು ಜಿಲ್ಲೆಯ ನನ್ನ ಪೀಳಿಗೆಯವರೆಲ್ಲರೂ.

ಈ ಉರಿಯೆಲ್ಲ ನಮಗೆ. ಮುಂದಿನ ಪೀಳಿಗೆಗೆ ಇದೇ ಸಂಕಟ ಇರುತ್ತದೆ ಎನ್ನಲಾಗದು. ಈಗಾಗಲೇ ಭವಿಷ್ಯದ ದೃಷ್ಟಿಯಿಂದ ಹಲವರು ಕನ್ನಡದ ಕೈ ಸಡಿಲಿಸಿಕೊಂಡು ಆ ಭಾಷೆಗೆ ವಲಸೆ ಹೋಗಿದ್ದಾರೆ. ಕನ್ನಡ ಕಲಿತು ಮಾಡುವುದೇನು? ಉದ್ಯೋಗಕ್ಕಾಗಿ ಮಲೆಯಾಳಿಗಳೊಂದಿಗೆ ಸ್ಪರ್ಧೆ ಸಾಧ್ಯವೆ? ಅಂತಹ ಸ್ಪರ್ಧೆ ಯಾರಿಗೆ ಬೇಕು? ಉದ್ಯೋಗ ಸಿಗುವ ಮಲೆಯಾಳಿ ಶ್ರೇಷ್ಠ - ಕನ್ನಡ ಕನಿಷ್ಠ ಎಂಬ ಭಾವನೆ ನಿಧಾನವಾಗಿ ಹರಡಿಕೊಳ್ಳುತ್ತಿದೆ. ನಮ್ಮ ಭಾಷೆಯಲ್ಲಿ ಶಿಕ್ಷಣ ಪಡೆಯುವುದು ಸಂವಿಧಾನ ನಮಗೆ ನೀಡಿರುವ ಹಕ್ಕು ಎಂಬ ಪ್ರಜ್ಞೆಯೇ ಇವತ್ತಿನ ಪೀಳಿಗೆಯಲ್ಲಿ ಮಾಯವಾಗುತ್ತಿದೆ, ಅಥವಾ ಅದು ಬೇಡವಾಗಿದೆ.

ಇದೇ ಆಗಸ್ಟ್ ಮೂರನೇ ತಾರೀಕಿನಂದು ಜಿಲ್ಲಾಧಿಕಾರಿಗಳ ಕಚೇರಿಯೆದುರು ಎಲ್ಲ ಕನ್ನಡಪರ ಸಂಘಟನೆಗಳು ಪ್ರತಿಭಟನೆ ಕೈಗೊಳ್ಳಲು ನಿರ್ಧರಿಸಿವೆ. ಅಂದು ಎಲ್ಲಾ ಕನ್ನಡ ಅಧ್ಯಾಪಕರು ರಜೆ ಹಾಕಲಿದ್ದಾರೆ, ಕನ್ನಡ ವಿದ್ಯಾರ್ಥಿಗಳು ತರಗತಿಯನ್ನು ಬಹಿಷ್ಕರಿಸಲಿದ್ದಾರೆ, ಎಲ್ಲರೂ ಒಟ್ಟಾಗಿ ಪ್ರತಿಭಟಿಸಲಿದ್ದೇವೆ. ಹೀಗಂತ ಪತ್ರಿಕೆ ಪ್ರಕಟಣೆಯಲ್ಲಿಯೂ ತಿಳಿಸಿದೆ. ಏನಾಗುತ್ತದೆ ನೋಡಬೇಕು.

ಪರಿಸರ ಸಂತ್ರಸ್ತರ ಹಾಗೆ ಭಾಷಾಸಂತ್ರಸ್ತರು ನಾವು. ಸರಕಾರಕ್ಕೇನೋ ಹಿಂದಿಲ್ಲ ಮುಂದಿಲ್ಲ. ಅಲ್ಲಿರುವವರು ವಿಷಯವೇತ್ತರೋ ಅಲ್ಲವೋ, ಹೇಗೆ ಗೆದ್ದು ಬಂದು ಹೇಗೆ ಆಯಕಟ್ಟಿನ ಸ್ಥಾನದಲ್ಲಿ ಕುಳಿತರೋ. ಬಿಡಿ. ಆದರೆ ಇಲ್ಲಿನ ಸಾಹಿತಿಗಳಿಗೆ ಭಾಷೆಯ ಮಹತ್ವದ ಕುರಿತು ತಿಳಿದಿಲ್ಲವೆ?

ಕರ್ನಾಟಕ ಸರಕಾರ, ಕನ್ನಡದ ಸಾಹಿತಿಗಳು ಮಾತಾಡಬೇಕಾದ ಕಾಲ ಬಂದಿದೆ ಎಂದು ನಮಗನಿಸುತ್ತಿದೆ. (ಕವಿ, ಪ್ರಾಧ್ಯಾಪಕಿ ವಿಮರ್ಶಕಿ ಯು.ಮಹೇಶ್ವರಿ)

ಕವಿ ಕಯ್ಯೊರರ `ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ~ ಸಾಲು ದಿನ ಹೋದಂತೆ ಹೇಗೆ ಹೆಚ್ಚೆಚ್ಚು ಪ್ರಸ್ತುತವೆನಿಸುತ್ತಿದೆ. ಕಾಸರಗೋಡಿನಲ್ಲಿ ಮಾತ್ರವಲ್ಲ; ಕರ್ನಾಟಕದಲ್ಲಿಯೂ! ಇಲ್ಲಿಯೂ ಕನ್ನಡ ಅತಂತ್ರವಾಗಿದೆ. ಕನ್ನಡ ಶಾಲೆಗಳು ಮುಚ್ಚುತ್ತಿವೆ. ಇದು ಅದೇ, ಆದರೂ ಅದು ಬೇರೆಯೇ. ಬೇರೆಯೇ ಆಗಿಯೂ ಅದು ಇದುವೇ. ವಿಚಿತ್ರ.
ಒಟ್ಟು `ಹರಸು ತಾಯೆ ಸುತರ ಕಾಯೆ~ ಅಷ್ಟೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT