ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟ ತೋರುವುದೇ ಹೊಸ ದಾರಿಗಳನ್ನು?

Last Updated 24 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ
ಇನ್ನೇನು ಪ್ರಳಯ ಪ್ರಪಂಚವನ್ನೇ ವಿನಾಶ ಮಾಡಲು ಧಾವಿಸಿ ಬರುತ್ತಿದೆ ಎಂಬ ಭಯದಲ್ಲಿ ತತ್ತರಿಸುತ್ತಿದ್ದ ನಮ್ಮನ್ನು ತನ್ನ ಕಬಂಧ ಬಾಹುಗಳಲ್ಲಿ ಸೆಳೆದುಕೊಂಡದ್ದು ಪ್ರಳಯವಲ್ಲ. ಹತ್ತು ದಿನಗಳ ಹಿಂದೆ ರಾಷ್ಟ್ರದ ರಾಜಧಾನಿಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಮಾನವರೂಪಿ ದಾನವರು ಆಕೆಯನ್ನು ಅರೆನಗ್ನಾವಸ್ಥೆಯಲ್ಲಿ ಅದೇ ವಾಹನದಿಂದ ರಸ್ತೆಯಲ್ಲಿ ತಳ್ಳಿ ಹೋದ ಘಟನೆಯನ್ನು ಖಂಡಿಸಿ ದೇಶದಾದ್ಯಂತ ಭುಗಿಲೆದ್ದಿರುವ ಆಕ್ರೋಶ ಪ್ರಳಯ ಸ್ವರೂಪವನ್ನು ತಳೆಯುತ್ತಿದೆ. ದಿನಗಳು ಉರುಳಿದ ಹಾಗೆ ಒಂದು ಬೃಹತ್ ನಾಗರಿಕ ಚಳವಳಿಯಾಗಿ ಹೊರ ಹೊಮ್ಮುತ್ತಿರುವ ಜನರ ಪ್ರಶ್ನೆ-ಪ್ರತಿಭಟನೆಗಳು ಈ ದೇಶದ ಸರ್ಕಾರ ಮತ್ತು ಪೊಲಿಸ್ ವ್ಯವಸ್ಥೆಗಳೆರಡನ್ನೂ ಅಲುಗಾಡಿಸುತ್ತಿವೆ.
 
ದೆಹಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು, ಅದರಲ್ಲೂ ಯುವಜನತೆ ಕೊರೆಯುತ್ತಿರುವ ಚಳಿಯಲ್ಲಿಯೂ ಪೊಲಿಸರ ಲಾಠಿಪ್ರಹಾರ, ಅಶ್ರುವಾಯು ಪ್ರಯೋಗ ಹಾಗೂ ನೂಕಾಟ ಮತ್ತು ತಳ್ಳಾಟಗಳನ್ನು ಎದುರಿಸಿ ಅತ್ಯಾಚಾರಿಗಳಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ವಿಧಿಸಬೇಕೆಂದು ನಡೆಸುತ್ತಿರುವ ಹೋರಾಟ ಎಲ್ಲಿ ಮತ್ತು ಹೇಗೆ ಅಂತ್ಯಗೊಳ್ಳುವುದೋ ತಿಳಿಯದು. ಆದರೆ ಈ ಘಟನೆ ಮತ್ತು ದಿನೇ ದಿನೇ ಪ್ರಬಲವಾಗುತ್ತಿರುವ ಜನರ ಹೋರಾಟ- ಇವುಗಳೆರಡೂ ನಮ್ಮ ಕಾನೂನು ಪಾಲನಾ ವ್ಯವಸ್ಥೆ, ರಾಜಕೀಯ ಇಚ್ಛಾಶಕ್ತಿ, ಸಾರ್ವಜನಿಕ ಪ್ರಜ್ಞೆ ಹಾಗೂ ನಾಗರಿಕ ಸಮಾಜದ ಜವಾಬ್ದಾರಿಗಳನ್ನು ಕುರಿತಂತೆ ಗಂಭೀರ ಪ್ರಶ್ನೆಗಳನ್ನೆತ್ತಬೇಕಾದ ಅಗತ್ಯವನ್ನು ನಮ್ಮ ಮುಂದಿಟ್ಟಿವೆ. ಇನ್ನು ಮುಂದಾದರೂ ನಮ್ಮ ಸಮಾಜವನ್ನು ಸರಿದಾರಿಯಲ್ಲಿ ತೆಗೆದುಕೊಂಡು ಹೋಗಲು ಸಾಧ್ಯವೇ ಎಂಬ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಲು ಸಮಯ ಸನ್ನಿಹಿತವಾಗಿದೆ.
 
ಇಡೀ ದೇಶದಲ್ಲೇ ಮೊಳಗುತ್ತಿರುವ ಇಂಥ ಪ್ರಬಲ ಯುವಗರ್ಜನೆಯನ್ನು ಪ್ರಾಯಶಃ ನಾವು ಕೇಳುತ್ತಿರುವುದು ಇತ್ತೀಚಿನ ದಿನಗಳಲ್ಲಿ ಇದೇ ಮೊದಲ ಬಾರಿಗೆ ಎಂದು ಹೇಳುವುದು ತಪ್ಪಾಗಲಾರದು. ಡಿಸೆಂಬರ್ 16ರ ಭಾನುವಾರ ನಡೆದು ಹೋದ ಘಟನೆಯ ತೀವ್ರತೆಯೇ ಅಂತಹುದು. ತನ್ನ ಗೆಳೆಯನೊಡನೆ ಚಲನಚಿತ್ರವನ್ನು ವೀಕ್ಷಿಸಿ ರಾತ್ರಿ 9.00 ಗಂಟೆಯ ವೇಳೆಯಲ್ಲಿ ಮನೆಗೆ ಹಿಂದಿರುಗಲು ಬಸ್ಸೊಂದನ್ನು ಏರಿದ 23 ವರ್ಷದ ವಿದ್ಯಾರ್ಥಿನಿಯ ಮೇಲೆ ಆ ಬಸ್ಸಿನಲ್ಲಿದ್ದ ಆರು ಮಂದಿ ಪುರುಷರು ಸಾಮೂಹಿಕ ಅತ್ಯಾಚಾರ ಮಾಡಿದ್ದೇ ಅಲ್ಲದೆ, ಆಕೆಯ ಸಂಗಾತಿಯ ಮೇಲೂ ಹಲ್ಲೆ ನಡೆಸಿದ್ದರು.

ಪರದೆಗಳಿಂದ ಆವೃತವಾಗಿದ್ದ ಆ ವಾಹನವನ್ನು ದೆಹಲಿಯ ರಸ್ತೆಗಳಲ್ಲಿ ಓಡಿಸುತ್ತಲೇ ಇಂಥ ಹೇಯ ಕೃತ್ಯದಲ್ಲಿ ತೊಡಗಿದ ಆ ವಿಕೃತ ಮನಸ್ಸುಗಳು ಆಕೆಯನ್ನು ಅರೆನಗ್ನಾವಸ್ಥೆಯಲ್ಲಿ ಹಾಗೂ ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆಯಲ್ಲಿ ತಳ್ಳುವ ಮೂಲಕ ತಮ್ಮ ಅಟ್ಟಹಾಸವನ್ನು ಮೆರೆದಿದ್ದರು. ದೇಶ ಕಂಡ ಅತ್ಯಂತ ಘೋರ ಸ್ವರೂಪದ ಲೈಂಗಿಕ ಅಪರಾಧಗಳಲ್ಲಿ ಒಂದಾದ ಈ ಘಟನೆ ನಮ್ಮ ಕಾನೂನು ವ್ಯವಸ್ಥೆಯನ್ನು ಅಪರಾಧಿಗಳು ಎಷ್ಟು ಹಗುರವಾಗಿ ತೆಗೆದುಕೊಳ್ಳಬಹುದು ಎಂಬುದಕ್ಕೆ ಸಾಕ್ಷಿಯೋ ಅಥವಾ ನಮ್ಮ ಮಾತೃಭೂಮಿಯಲ್ಲಿ ಮಹಿಳೆಯರು ಎಷ್ಟು ಸುರಕ್ಷಿತವಾಗಿ ಬದುಕುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯೋ ತಿಳಿಯದು.
 
ತನ್ನ ದೇಹ ಮತ್ತು ಮನಸ್ಸಿನ ಮೇಲೆ ನಡೆದ ಈ ಲೈಂಗಿಕ ದಾಳಿಯಿಂದ ತತ್ತರಿಸಿದ್ದ ಆ ಯುವತಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಯನ್ನೇನೋ ನೀಡಲಾಗುತ್ತಿದೆ. ಸಾವು-ಬದುಕುಗಳ ನಡುವೆ ಆಕೆಯ ಬದುಕು ತಲ್ಲಣಿಸುತ್ತಿದೆ. ಅಗತ್ಯ ಬಿದ್ದರೆ ವಿದೇಶಕ್ಕಾದರೂ ಕಳುಹಿಸಿ ಚಿಕಿತ್ಸೆಯನ್ನು ಕೊಡಿಸಲು ತಮ್ಮ ಸರ್ಕಾರ ಸಿದ್ಧವಿದೆ ಎಂದು ದೆಹಲಿಯ ಮುಖ್ಯಮಂತ್ರಿ ಸಾರಿ ಸಾರಿ ಹೇಳುತ್ತಿದ್ದಾರೆ. ಅಮಾನುಷ ಹಲ್ಲೆಗೆ ಒಳಗಾದ ಒಬ್ಬ ಹೆಣ್ಣಿಗೆ ವಿದೇಶಿ ಚಿಕಿತ್ಸೆ ಕೊಡಿಸಿ ಬಿಟ್ಟರೆ ಸಾಕೆ? ದಿನನಿತ್ಯ ದೇಶದಾದ್ಯಂತ ಅತ್ಯಾಚಾರಕ್ಕೆ ಒಳಗಾಗಿ ತಮ್ಮ ಪ್ರಾಣವನ್ನೇ ಒತ್ತೆಯಿಡುತ್ತಿರುವ ಬಡ ಹಾಗೂ ನಿರಾಶ್ರಿತ ಹೆಣ್ಣು ಮಕ್ಕಳ ಬಗ್ಗೆ ಚಿಂತಿಸುವವರು ಯಾರು? 
 
ಪ್ರಸಕ್ತ ಸಾಲಿನಲ್ಲಿ ದೆಹಲಿ ನಗರ ಒಂದರಲ್ಲೇ ದಾಖಲಾಗಿರುವ 637ನೇ ಅತ್ಯಾಚಾರ ಪ್ರಕರಣ ಈ ಹಲ್ಲೆ ಎಂದು ಒಂದು ವರದಿ ತಿಳಿಸಿದೆ. ಇದು ನಿಜವೇ ಆಗಿದ್ದರೆ, ಇನ್ನುಳಿದ 636 ಪ್ರಕರಣಗಳಲ್ಲಿ ಅತ್ಯಾಚಾರವನ್ನೆಸಗಿದವರಿಗೆ ಕಾನೂನು ರೀತ್ಯಾ ಶಿಕ್ಷೆ ಆಯಿತೇ - ಇಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸುವವರು ಯಾರು? ಅತ್ಯಾಚಾರಿಗಳಿಗೆ ವಿಧಿಸುವ ಶಿಕ್ಷೆ ಭಾವಿ ಅಪರಾಧಿಗಳನ್ನು ಎಚ್ಚರಿಸುವಷ್ಟು ಕಠಿಣವಾಗಿರಬೇಕೆಂಬ ಕೂಗು ಮುಗಿಲು ಮುಟ್ಟಿರುವಾಗಲೇ ಇದೇ ದೆಹಲಿಯ ಬಾಲವಿಹಾರವೊಂದರಲ್ಲಿ ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ನಡೆದಿದೆ. ಒಂದು ಸಾಮೂಹಿಕ ಅತ್ಯಾಚಾರದ ವಿರುದ್ದ ಇಷ್ಟೊಂದು ಆಕ್ರೋಶ ಹೊರಹೊಮ್ಮುತ್ತಿರುವಾಗಲೇ ಮತ್ತದೇ ದೆಹಲಿಯಲ್ಲಿ 40 ವರ್ಷದ ಮಹಿಳೆಯೊಬ್ಬರ ಮೇಲೆ ಮೂವರು ಪುರುಷರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಇದೆಂಥ ವಿಪರ್ಯಾಸ? 
 
ದೆಹಲಿಯ ಪ್ರತಿಭಟನೆಗಳು ಗಟ್ಟಿಯಾಗುತ್ತಾ ಹೋದ ಹಾಗೆಲ್ಲ ದೇಶದೆಲ್ಲೆಡೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಕುರಿತಂತೆ ಹೊಸ ಹೊಸ ಅಂಕಿ-ಅಂಶಗಳು ಹೊರ ಬೀಳುತ್ತಿವೆ. ಇಡೀ ಜಗತ್ತಿನಲ್ಲೇ ಅಮೆರಿಕ ಮತ್ತು ದಕ್ಷಿಣ ಆಫ್ರಿಕಾವನ್ನು ಹೊರತು ಪಡಿಸಿದರೆ ಅತ್ಯಂತ ಹೆಚ್ಚಿನ ಅತ್ಯಾಚಾರ ಪ್ರಕರಣಗಳು ಸಂಭವಿಸುವುದು ಭಾರತದಲ್ಲೇ ಎಂದು ಹೇಳಲಾಗುತ್ತಿದೆ! ಕಳೆದ ನಾಲ್ಕು ದಶಕಗಳಲ್ಲಿ ಭಾರತದಲ್ಲಿ ಅತ್ಯಾಚಾರಗಳ ಪ್ರಮಾಣದಲ್ಲಿ ಉಂಟಾಗಿರುವ ಹೆಚ್ಚಳ ಶೇಕಡ 875ರಷ್ಟು ಎಂಬ ವಿಷಯ ತಿಳಿದಾಗ ಎಂಥ ಧೈರ್ಯಸ್ಧರೂ ಬೆಚ್ಚಿ ಬೀಳದಿರಲಾರರು. ವರ್ಷದಿಂದ ವರ್ಷಕ್ಕೆ ಅತ್ಯಾಚಾರಗಳ ಸಂಖ್ಯೆಯಲ್ಲಿ ಹೆಚ್ಚಳ ಉಂಟಾಗುತ್ತಿದ್ದು ಭಾರತದಲ್ಲಿ ನಡೆಯುವ 70 ಅತ್ಯಾಚಾರ ಪ್ರಕರಣಗಳಲ್ಲಿ ಕೇವಲ ಒಂದು ಮಾತ್ರ ವರದಿಯಾಗುತ್ತದೆ, ಇನ್ನು ವರದಿಯಾದ ಪ್ರಕರಣಗಳಲ್ಲೂ ಶೇಕಡ 20 ರಷ್ಟರಲ್ಲಿ ಮಾತ್ರ ಅಪರಾಧಿಗಳಿಗೆ ಶಿಕ್ಷೆಯಾಗುತ್ತದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ.
 
ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸುವ ಅಂಕಿ ಅಂಶಗಳು ಒಂದೆಡೆ ಹೊರಬೀಳುತ್ತಿದ್ದರೆ ಮತ್ತೊಂದೆಡೆ ಸರ್ಕಾರಿ ಮತ್ತು ಪೊಲೀಸ್ ವಲಯಗಳಲ್ಲಿ ಅಧಿಕಾರ ಸ್ಥಾನದಲ್ಲಿರುವವರ ಅಸೂಕ್ಷ್ಮ ಪ್ರತಿಕ್ರಿಯೆಗಳು ಭವಿಷ್ಯದ ಬಗ್ಗೆ ಅನುಮಾನಗಳನ್ನು ಹುಟ್ಟಿಸುತ್ತಿವೆ. ಅತ್ಯಾಚಾರವನ್ನು ಖಂಡಿಸುವುದಕ್ಕಿಂತ ಮಹಿಳೆಯರಿಗೆ ನೀತಿ ಪಾಠ ಬೋಧನೆ ಮಾಡಹೊರಟಿರುವ ಜನರೇ ಹೆಚ್ಚಿದ್ದಾರೇನೋ ಎನಿಸುತ್ತಿದೆ. ಹೆಣ್ಣಾದವಳು ರಾತ್ರಿ ವೇಳೆ ಹೊರ ಹೋಗುವುದು ಅಥವಾ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದರಿಂದಲೇ ಆಕೆ ಲೈಂಗಿಕ ದೌರ್ಜನ್ಯಕ್ಕೆ ಆಹ್ವಾನ ನೀಡುತ್ತಾಳೆ ಎಂಬರ್ಥ ಬರುವಂತೆ ಮಾತನಾಡುತ್ತಾ ಅತ್ಯಾಚಾರಕ್ಕೆ ಹೆಣ್ಣನ್ನೇ ಹೊಣೆ ಮಾಡುತ್ತಾರೆ.
 
ಹೆಣ್ಣು ಮತ್ತು ಗಂಡುಗಳಿಗೆ ವಿಭಿನ್ನ ನೈತಿಕ ಮಾನದಂಡಗಳನ್ನಿಟ್ಟಿರುವ ಈ ಸಮಾಜ ಹೆಣ್ಣಿನ ಲೈಂಗಿಕತೆಯನ್ನೇ ಮುಂದಿಟ್ಟುಕೊಂಡು ಆಕೆಯನ್ನು ಎರಡು ಬಗೆಗಳಲ್ಲಿ ಶೋಷಣೆಗೆ ಒಳಪಡಿಸುತ್ತದೆ. ಹೆಣ್ಣು ಮನೆಯಿಂದ ಹೊರ ಬಂದರೆ ಆಕೆಯ ದೇಹದ ಮೇಲೆ ಆಕ್ರಮಣವನ್ನೆಸಗಿ, ಅವಳ ಬದುಕನ್ನೇ ಬರಿದು ಮಾಡಿ ಅವಳಿಗೆ ಆಜೀವ ಕಳಂಕವನ್ನು ಅಂಟಿಸುವುದು ಶೋಷಣೆಯ ಒಂದು ಮುಖ. ಈ ವ್ಯವಸ್ಥೆಯ ಮತ್ತೊಂದು ಮುಖವೆಂದರೆ ಹೆಣ್ಣು ದೇಹದ ಮೇಲೆ ಅತ್ಯಾಚಾರ ನಡೆಯಬಹುದು ಎಂಬ ಭಯವನ್ನು ಬಿತ್ತಿ ಆಕೆಯನ್ನು ಗೃಹಬಂಧಿಯನ್ನಾಗಿ ಮಾಡಿ ಅವಳ ಬದುಕಿನ ಆಶೋತ್ತರಗಳನ್ನೆಲ್ಲಾ ಚಿವುಟಿ ಹಾಕುವುದು. ಆಕೆ ಹೊರಗೆ ಹೋದರೆ ಒಂದು ಬಗೆಯ ಚಿತ್ರ ಹಿಂಸೆಯನ್ನು ನೀಡುವುದು, ಮನೆಯೊಳಗೇ ಇದ್ದರೂ ಮತ್ತೊಂದು ರೀತಿಯಲ್ಲಿ ಉಸಿರುಗಟ್ಟಿಸುವುದು.

ಇಂಥ ಚಕ್ರವ್ಯೆಹದಿಂದ ಹೊರ ಬಂದು ತಮ್ಮ ಜೀವನದ ದಾರಿಗಳನ್ನು ಕಂಡುಕೊಂಡಿರುವ ಮಹಿಳೆಯರು ನಮ್ಮಲ್ಲಿದ್ದಾರೆ ನಿಜ. ಆದರೆ ಎಲ್ಲೋ ಒಂದೆಡೆ ಹೆಚ್ಚು ಕಡಿಮೆ ಎಲ್ಲ ಸ್ತ್ರೀಯರೂ ತಮ್ಮನ್ನು ಹತ್ತಿಕ್ಕುವ ಪರಿಸ್ಥಿತಿಗಳನ್ನು ಎದುರಿಸಿರುವಂಥವರೇ ಆಗಿರುತ್ತಾರೆ. ವ್ಯಕ್ತಿಯಿಂದ ವ್ಯಕ್ತಿಗೆ ಶೋಷಣೆಯ ಸ್ವರೂಪ, ಪ್ರಮಾಣ ಮತ್ತು ಆಕೆಯ ಜೀವನದ ಮೇಲೆ ಅದರಿಂದುಂಟಾಗುವ ಪ್ರಭಾವಗಳಲ್ಲಿ ವ್ಯತ್ಯಾಸಗಳಿರಬಹುದಷ್ಟೆ. 
ದೆಹಲಿಯಲ್ಲಿ ನಡೆದಿರುವ ಅತ್ಯಾಚಾರ ಯಾವಾಗಲೋ ಒಮ್ಮಮ್ಮೆ ನಡೆಯುವ ಘಟನೆಗಳ ಸಾಲಿಗೆ ಸೇರುತ್ತದೆ ಎಂದು ಯಾರಾದರೂ ಭಾವಿಸಿದ್ದರೆ ಅದಕ್ಕಿಂತ ಬೇರೆ ತಪ್ಪೊಂದಿಲ್ಲ. ಕಳೆದೊಂದು ವಾರದಲ್ಲೇ ದೇಶದ ವಿವಿಧ ಭಾಗಗಳಿಂದ ಬರುತ್ತಿರುವ ಅತ್ಯಾಚಾರ ಪ್ರಕರಣಗಳ ವರದಿಗಳು ಒಂದೆಡೆ ಭಯ, ಮತ್ತೊಂದೆಡೆ ಜುಗುಪ್ಸೆ-ಇವುಗಳೆರಡನ್ನು ಏಕ ಕಾಲದಲ್ಲಿ ಹುಟ್ಟಿಸುತ್ತಿವೆ.

ಕಾನೂನು ಪಾಲನಾ ವ್ಯವಸ್ಥೆಯ ವೈಫಲ್ಯವೇ ಅತ್ಯಾಚಾರಗಳ ಹೆಚ್ಚಳಕ್ಕೆ ಕಾರಣವೇನೋ ಎಂಬಂತೆ ಬಿಂಬಿಸುತ್ತಿರುವ ನಾವು ಸಾರ್ವಜನಿಕ ಪ್ರಜ್ಞೆಯ ಕೊರತೆಯೂ ಇಂಥ ಪ್ರಕರಣಗಳು ಸಂಭವಿಸಲು ಪರೋಕ್ಷವಾಗಿ ಉತ್ತೇಜಿಸುತ್ತಿದೆ ಎಂದ್ಯಾಕೆ ಈಗಲಾದರೂ ಚಿಂತಿಸಲಾರಂಭಿಸಬಾರದು? ಅನೇಕ ಸಂದರ್ಭಗಳಲ್ಲಿ ಕಾನೂನು ಬಾಹಿರವಾದ ಚಟವಟಿಕೆಗಳು ನಡೆಯುತ್ತಿವೆ ಎಂಬುದನ್ನು ಗಮನಿಸಿದ್ದರೂ ಕಂಡೂ ಕಾಣದಂತಿರುವ ಸಾರ್ವಜನಿಕ ಧೋರಣೆಗಳು ಸರಿಯೇ? ಉದಾಹರಣೆಗೆ ದೆಹಲಿಯ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನೇ ತೆಗೆದುಕೊಳ್ಳೋಣ.
 
ಪ್ರಜ್ಞಾಹೀನಳಾಗಿ ರಸ್ತೆ ಬದಿಯಲ್ಲಿ ಬಿದ್ದಿದ್ದ ವಿದ್ಯಾರ್ಥಿನಿ ಹಾಗೂ ಆಕೆಯ ಗೆಳೆಯನ ನೆರವಿಗೆ ಬರುವುದನ್ನು ಬಿಟ್ಟು, ಅವರನ್ನು ಜನರ ಗುಂಪೊಂದು ಸುತ್ತುವರೆದು ನಿಂತಿದ್ದರ ಬಗ್ಗೆ ಮಾಧ್ಯಮಗಳು ವರದಿ ಮಾಡಿದಾಗ ಇವರೇನು ಮನುಷ್ಯರೇ ಎನಿಸದಿರಲಿಲ್ಲ. ಪೊಲೀಸರು ಹತ್ತಿರದ ಹೋಟೆಲಿನಿಂದ ಬಟ್ಟೆಗಳನ್ನು ತಂದು ಅವರ ದೇಹವನ್ನು ಮುಚ್ಚುವವರೆಗೂ ಅಲ್ಲಿ ನೆರೆದಿದ್ದವರು ಈ ಕೆಲಸವನ್ನು ಮಾಡಲಿಲ್ಲವೇಕೆ? ಅನಾಹುತ, ಅಪಘಾತ, ಅತ್ಯಾಚಾರ, ಅಪರಾಧಗಳಿಗೆ ಒಳಗಾದವರು ತಮ್ಮ ಮನೆಯವರಲ್ಲದಿದ್ದರೆ ಸರಿ, ಬೇರೆಯವರ ಗೊಡವೆ ನಮಗೇಕೆ ಎಂಬ ಧೋರಣೆಯೇ ಬಹು ಮಂದಿಯಲ್ಲಿರುವುದು.
 
ಸರ್ಕಾರ, ಕಾನೂನು, ನ್ಯಾಯಾಲಯಗಳು, ಆರಕ್ಷಕ ಠಾಣೆಗಳು ಇವುಗಳೆಲ್ಲಾ ನಮಗೆ ಸುರಕ್ಷಿತ ಬದುಕನ್ನು ಕಟ್ಟಿಕೊಳ್ಳಲು ಪೂರಕವಾದಂಥ ಪರಿಸರವನ್ನು ಸೃಷ್ಟಿಸುವಲ್ಲಿ ಪ್ರಧಾನ ಪಾತ್ರ ವಹಿಸಬೇಕು ಎನ್ನುವುದರಲ್ಲಿ ಸಂದೇಹವೇ ಇಲ್ಲ. ಆದರೆ ಎಲ್ಲ ಜವಾಬ್ದಾರಿಗಳನ್ನೂ ಇವರ ಮೇಲೆ ಹೊರೆಸಿ ನಾವು ಕೈ ಕಟ್ಟಿ ಕೂರಲಾಗುವುದಿಲ್ಲ. ಈಗಿನ ಸಂದರ್ಭದಲ್ಲಂತೂ ಕೇವಲ ಹೆಣ್ಣು ಮಕ್ಕಳಲ್ಲ, ಯಾರು ಬೇಕಾದರೂ ಯಾವ ಹೊತ್ತಿನಲ್ಲಾದರೂ ಅಪಾಯ ವಲಯಕ್ಕೆ ಜಾರಬಹುದು. ರಾಜಧಾನಿಗಳಲ್ಲಿ, ಸುರಕ್ಷಿತ ಸ್ಥಳಗಳಲ್ಲಿ, ರಕ್ಷಣಾ ಸಿಬ್ಬಂದಿಯ ನೆರಳಿನಲ್ಲಿ ಬದುಕುತ್ತಿರುವ ಅಧಿಕಾರ ವಲಯದಿಂದಲೇ ದೇಶದ ಎಲ್ಲ ನಾಗರಿಕರ ರಕ್ಷಣೆಯಾಗಬೇಕು ಎಂಬ ಭ್ರಮೆಯಿಂದ ಹೊರಬಂದು ನಮ್ಮ ನಮ್ಮ ನೆರೆಹೊರೆಗಳಲ್ಲಿ ನಾವು ಸ್ಥಳೀಯ ಸ್ವರೂಪದ ರಕ್ಷಣಾ ವ್ಯವಸ್ಥೆಯೊಂದನ್ನು ನಿರ್ಮಿಸಿಕೊಳ್ಳಬೇಕು. ರಸ್ತೆಗಳ, ವಾರ್ಡುಗಳ, ಪಂಚಾಯಿತಿಗಳ ಮಟ್ಟದಲ್ಲಿಯೇ ರಕ್ಷಣಾ ವಲಯಗಳನ್ನು ಕಟ್ಟಿಕೊಂಡಾಗ ನಾವು ಸುರಕ್ಷಿತ ಬದುಕನ್ನು ನಡೆಸಲು ಸಾಧ್ಯವಾಗಬಹುದೇನೋ?
 
ದೆಹಲಿ ಹಾಗೂ ದೇಶದೆಲ್ಲೆಡೆ ನಡೆಯುತ್ತಿರುವ ನಾಗರಿಕ ಹೋರಾಟ ನಮ್ಮ ಹೃದಯಕ್ಕೆ ಹಿತ ತಂದಿದೆ, ಹೊಸ ಕನಸುಗಳನ್ನು ನಿರ್ಮಾಣ ಮಾಡಿದೆ. ಇಂದಿನ ಯುವ ಜನತೆಯ ಸಾಮಾಜಿಕ ಕಳಕಳಿಯ ಅಭಾವದ ಬಗ್ಗೆ ನಿರಂತರವಾಗಿ ಗೊಣಗುತ್ತಿದ್ದವರಿಗೆಲ್ಲ ಈ ಹೊಸ ಜನಾಂಗದಲ್ಲಿ ಅಡಗಿರುವ ಶಕ್ತಿಯ ಪರಿಚಯ ನಿಧಾನವಾಗಿ ಆಗುತ್ತಿದೆ. ಆದರೆ ಈ ಹೋರಾಟದಲ್ಲಿ ನಿರಂತರತೆ  ಮತ್ತು ಸುಸ್ಥಿರತೆಗಳೆರಡೂ ನಶಿಸಬಾರದು. ಏಕೆಂದರೆ ಇದು ಒಂದು ಹೆಣ್ಣಿನ ಕಥೆಯಲ್ಲ. ಆಯ್ದ ಅತ್ಯಾಚಾರ ಪ್ರಕರಣಗಳನ್ನು `ಅಪರೂಪದಲ್ಲಿ ಅಪರೂಪದ್ದು' ಎಂದು ಪರಿಗಣಿಸಿ ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸುವುದರಿಂದಲಾಗಲಿ, ಅವರನ್ನು ಸಾರ್ವಜನಿಕವಾಗಿ ಚಚ್ಚಿ ಕೊಲ್ಲುವುದರಿಂದಾಗಲಿ, ಹೊಸಹೊಸ ಸಮಿತಿಗಳನ್ನು ರಚಿಸುವುದರಿಂದಾಗಲಿ ಅತ್ಯಾಚಾರ ಕೊನೆಗೊಳ್ಳುವುದಿಲ್ಲ.
 
ಅತ್ಯಾಚಾರವನ್ನು ಕಾನೂನು ಮತ್ತು ಸಮಾಜ ನೋಡುವ ರೀತಿಯಲ್ಲಿಯೇ ಬದಲಾವಣೆಗಳಾಗಬೇಕು. ಮಹಿಳೆ ಅತ್ಯಾಚಾರಕ್ಕೆ ಅಥವಾ ಯಾವುದೇ ಬಗೆಯ ಲೈಂಗಿಕ ಕಿರುಕುಳಕ್ಕೆ ಒಳಗಾಗಿರಲಿ, ಅದನ್ನು ನಿರ್ಭಯವಾಗಿ, ನಿಸ್ಸಂಕೋಚವಾಗಿ ಪೊಲಿಸ್ ಠಾಣೆಗಳಿಗೆ ಬಂದು ವರದಿ ಮಾಡುವಂಥ ವಾತಾವರಣ ಮೊದಲು ನಿರ್ಮಾಣವಾಗಲಿ. ಎರಡನೆಯದಾಗಿ, ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಮತ್ತು ಅಪರಾಧಿಗಳಿಗೆ ಶಿಕ್ಷೆ - ಇವುಗಳೆರಡನ್ನೂ ತ್ವರಿತ ಗತಿಯಲ್ಲಿ ನೀಡುವಂಥ ನ್ಯಾಯ ವ್ಯವಸ್ಥೆ ಸೃಷ್ಟಿಯಾಗಲಿ. ಎಲ್ಲಕ್ಕಿಂತ ಮಿಗಿಲಾಗಿ ದುರಂತಗಳು ನಡೆದಾಗ ಮಾತ್ರ ಜ್ವಾಲಾಮುಖಿಯಂತೆ ಅಬ್ಬರಿಸಿ, ನಂತರ ನಿಶ್ಯಬ್ದವಾಗುವ ಬದಲು ಸರ್ಕಾರವನ್ನು, ಪೊಲೀಸರನ್ನು, ನ್ಯಾಯಾಂಗ ವ್ಯವಸ್ಥೆಯನ್ನು, ಪ್ರಜೆಗಳನ್ನು ಮಾನವ ಹಕ್ಕುಗಳನ್ನು ಗೌರವಿಸುವಂತೆ ಪ್ರೇರೇಪಿಸುವ  ನಾಗರಿಕ ಪ್ರಜ್ಞೆ ಎಂಬ ಜ್ವಾಲೆ ನಿರಂತರವಾಗಿ ಉರಿಯುತ್ತಿರಲಿ. ಹೊಸ ವರುಷಕ್ಕೆ ಕಾಲಿಡುತ್ತಿರುವ ಈ ಹೊತ್ತಿನಲ್ಲಿ ಇಂಥ ಹೊಸ ದಾರಿಗಳು ನಮಗೆ ತೆರೆದುಕೊಳ್ಳುತ್ತವೆಂದು ಆಶಿಸೋಣ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT