ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟಗಳು ನೈತಿಕ ಎಚ್ಚರ ಕಳೆದುಕೊಳ್ಳಬಾರದು

Last Updated 29 ಜೂನ್ 2017, 20:28 IST
ಅಕ್ಷರ ಗಾತ್ರ

ಅಸಹನೆ ಮತ್ತು ಹಿಂಸೆಗಳೇ ಸುದ್ದಿ ಕೇಂದ್ರವಾಗಿದ್ದ ಈ ವಾರದ ನಾಲ್ಕು ಘಟನೆಗಳನ್ನು ಗಮನಿಸಿ.

ಮೊದಲಿಗೆ ಗುರುವಾರ (ಜೂನ್ 22)  ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿ ಮೊಹಮ್ಮದ್ ಅಯೂಬ್ ಪಂಡಿತ್ ಅವರ ಅಮಾನುಷ ಹತ್ಯೆಯಾಯಿತು. ಶ್ರೀನಗರದ ನೌಹಾಟ್ಟದಲ್ಲಿನ ಜಾಮಿಯಾ ಮಸೀದಿಯ ಹೊರಗಿದ್ದ ಅಯೂಬ್ ಅವರನ್ನು ಕೊಂದದ್ದು ಕಾಶ್ಮೀರಿ ಪ್ರತಿಭಟನಾಕಾರರ ಗುಂಪು. ಅವರ ಹತ್ಯೆಯಾದ ದಿನ ಶಬ್-ಎ-ಖದ್ರ್ (ಅಂದರೆ ಪ್ರವಾದಿ ಮೊಹಮ್ಮದರಿಗೆ ಕುರಾನಿನ ಶ್ಲೋಕಗಳನ್ನು ತಿಳಿಸಿದ ದಿನ) ಅನ್ನು ಆಚರಿಸಲಾಗುತ್ತಿತ್ತು. ಕಾಶ್ಮೀರಿ ಪ್ರತಿಭಟನಾಕಾರರು ಹೀಗೆ ಮಾಡಿದ್ದೇಕೆ ಎನ್ನುವುದು ಸ್ಪಷ್ಟವಾಗಿಲ್ಲ. ಅಯೂಬ್, ಕಲ್ಲೆಸೆಯುತ್ತಿದ್ದ ಪ್ರತಿಭಟನಾಕಾರರ ವಿಡಿಯೊ ತೆಗೆಯುತ್ತಿದ್ದರು. ಇದರಿಂದ ಉದ್ರೇಕಿತರಾದ ಪ್ರತಿಭಟನಾಕಾರರಿಂದ ತಪ್ಪಿಸಿಕೊಳ್ಳಲು ಅವರು ತಮ್ಮ ರಿವಾಲ್ವರ್ ಬಳಸಿದರು. ಈ ಕಾರಣಗಳಿಂದ ಅಯೂಬರ ಹತ್ಯೆಯನ್ನು ಮಾಡಲಾಯಿತು ಎನ್ನುವ ವಿವರಣೆಗಳು ಕೇಳಿಬಂದಿವೆ.

ಕಾರಣಗಳು, ವಿವರಣೆಗಳು ಏನೇ ಇದ್ದರೂ ಈ ಘಟನೆ ಕಾಶ್ಮೀರದ ಪ್ರತಿಭಟನೆಗಳ ಇತಿಹಾಸದಲ್ಲಿ ಒಂದು ತಿರುವಿನ ಘಟ್ಟವಾಗಬಹುದು. ಇದಕ್ಕೆ ಕಾರಣವಿಷ್ಟೇ. ಈಗ ಕೆಲವೇ ತಿಂಗಳುಗಳ ಹಿಂದೆ ಸೈನ್ಯದ ಯುವ ಅಧಿಕಾರಿ ಲೆಫ್ಟಿನೆಂಟ್ ಉಮರ್‌ ಫಯಾಜ್‌ ಅವರ ಹತ್ಯೆಯಾದಾಗ, ಆ ಕೃತ್ಯದ ಹೊಣೆಗಾರಿಕೆಯು ಉಗ್ರಗಾಮಿಗಳ ಮೇಲಿತ್ತು. ಆದರೆ ಈಗ ಪ್ರತಿಭಟನೆ ಮಾಡುತ್ತಿದ್ದವರು ಸಾಮಾನ್ಯ ಕಾಶ್ಮೀರಿಗಳು. ಇವರು ಸೈನಿಕರ ಅಥವಾ ಪೋಲಿಸರ ಮೇಲೆ ಕಲ್ಲೆಸೆದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುವುದು ಹಲವಾರು ವರ್ಷಗಳಿಂದ ನಡೆದುಬರುತ್ತಿದೆ. ಆದರೆ ಈ ಪ್ರತಿಭಟನಾಕಾರರು ಕಾಶ್ಮೀರಿಯೇ ಆದ ಪೋಲಿಸ್ ಅಧಿಕಾರಿಯೊಬ್ಬನನ್ನು ಹಿಡಿದು, ಆತನ ಉಡುಪುಗಳನ್ನು ಕಳಚಿ, ಕಲ್ಲು ಹೊಡೆದು, ರಸ್ತೆಯಲ್ಲೆಲ್ಲ ಎಳೆದಾಡಿ, ಕಡೆಗೆ ಚರಂಡಿಯಲ್ಲಿ ಮೃತ ದೇಹವನ್ನು ಎಸೆದರು.

ಈ ಅನಾಗರಿಕ ನಡವಳಿಕೆ ಕಾಶ್ಮೀರಿ ನಾಯಕರಿಂದಲೇ ಖಂಡನೆಗೊಳಗಾಗಿದೆ, ನಿಜ. ಉದಾಹರಣೆಗೆ ಕಾಶ್ಮೀರಿಗಳ ಆಧ್ಯಾತ್ಮಿಕ ಮುಖಂಡನೆಂದು ಪರಿಗಣಿಸಲಾಗುವ ಮೀರ್‌ವೈಜ್ ಮೊಹಮ್ಮದ್ ಉಮರ್ ಫರೂಕ್ ‘ಸಾಮೂಹಿಕ ಹಿಂಸೆ ಮತ್ತು ಸಾರ್ವಜನಿಕ ಕಗ್ಗೊಲೆಗಳು ಇಸ್ಲಾಮಿನ ಧರ್ಮ ಮತ್ತು ಮೌಲ್ಯಗಳಿಗೆ ಹೊರತಾದವು. ನಮ್ಮ ಮೇಲೆ ಪ್ರಭುತ್ವವು ನಡೆಸುತ್ತಿರುವ ದಮನಕಾರಿ ಹಿಂಸೆಯನ್ನು ನೆಪ ಮಾಡಿ ನಮ್ಮ ಮಾನವತೆ ಮತ್ತು ಮೌಲ್ಯಗಳನ್ನು ಕಳೆದುಕೊಳ್ಳಬಾರದು’ ಎಂದರು. ಆದರೆ ಈ ಘಟನೆಯು ಮತ್ತಷ್ಟು ಗಂಭೀರವಾದ ಹಾಗೂ ತೀವ್ರವಾದ ಪ್ರತಿಕ್ರಿಯೆಯನ್ನು ಕಾಶ್ಮೀರಿ ನಾಯಕರಿಂದ ನಿರೀಕ್ಷಿಸುತ್ತದೆ. ಈ ನಾಯಕರಿಗೆ ಗಾಂಧಿಯವರು 1922ರ ಚೌರಿಚೌರ ಘಟನೆಗೆ ಪ್ರತಿಕ್ರಿಯಿಸಿದ ರೀತಿಯು ಮಾದರಿಯಾಗಬೇಕಿತ್ತು. ಚೌರಿಚೌರದ ಪೊಲೀಸ್ ಚೌಕಿಯ ಮೇಲೆ ಅಸಹಕಾರ ಚಳವಳಿಯಲ್ಲಿ ಭಾಗವಹಿಸುತ್ತಿದ್ದ ಭಾರತೀಯರು ದಾಳಿ ಮಾಡಿದಾಗ, ಗಾಂಧೀಜಿ ಚಳವಳಿಯನ್ನೇ ಸ್ಥಗಿತಗೊಳಿಸಿ, ತಮ್ಮ ಜೊತೆಗಾರ ಸತ್ಯಾಗ್ರಹಿಗಳಿಗೆ ಅಹಿಂಸೆಯಲ್ಲಿ ಸಂಪೂರ್ಣ ವಿಶ್ವಾಸ ಬರಬೇಕಾಗಿರುವ ಅಗತ್ಯವನ್ನು ಒತ್ತಿಹೇಳಿದರು. ಕಾಶ್ಮೀರಿ ನಾಯಕರು ತಮ್ಮ ಪ್ರತಿಭಟನೆಯ ವಿಧಾನ ಹೇಗಿರಬೇಕು ಎನ್ನುವುದನ್ನು ಮತ್ತೊಮ್ಮೆ ಕೇಳಿಕೊಳ್ಳಬೇಕಾಗಿರುವ ಸನ್ನಿವೇಶವಿದು. ಏಕೆಂದರೆ ಕಾಶ್ಮೀರಿಗಳ ಮುಂದಿರುವ ಪ್ರಶ್ನೆ ಕೇವಲ ಒಬ್ಬ ಕಾಶ್ಮೀರಿ ಪೊಲೀಸ್ ಅಧಿಕಾರಿಯ ಹತ್ಯೆಯಲ್ಲ. ಹಿಂಸೆ ಕಾಶ್ಮೀರಕ್ಕೆ ಹೊಸದಲ್ಲ. ಕಳೆದ 25 ವರ್ಷಗಳಲ್ಲಂತೂ ಹಿಂಸೆಯು ಕಾಶ್ಮೀರಿಗಳ ಪ್ರತಿದಿನದ ಬದುಕಿನ ಸತತ ಸಂಗಾತಿಯಾಗಿಯೇ ಇದೆ. ಅಲ್ಲಿರುವ ಎಲ್ಲರೂ- ಪಾಕಿಸ್ತಾನದಿಂದ ಬಂದ ಭಯೋತ್ಪಾದಕರು, ಕಾಶ್ಮೀರ ಮೂಲದ ಉಗ್ರಗಾಮಿಗಳು, ಭಾರತದ ಭದ್ರತಾ ಪಡೆಗಳು, ಕಾಶ್ಮೀರದ ಪೊಲೀಸರು ಹಾಗೂ ಸಾಮಾನ್ಯ ಜನರು ಸೇರಿದಂತೆ- ಎಲ್ಲರೂ ಈ ಹಿಂಸೆಯ ಕರ್ತರಾಗಿ, ಅನುಭವಿಸುವವರಾಗಿ ಇದ್ದಾರೆ.

ಇಂದು ಅಯೂಬರ ಹತ್ಯೆಯಿಂದ ಸ್ಪಷ್ಟವಾಗುತ್ತಿರುವ ಅಂಶವೆಂದರೆ ಕಾಶ್ಮೀರದ ಪ್ರತಿಭಟನಾಕಾರರು ತಮ್ಮೊಳಗೆ ಉದ್ಭವವಾಗುವ ಹಿಂಸೆಯನ್ನು ನಿಗ್ರಹಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ.  

ಅದೇ ಗುರುವಾರದಂದು ದೆಹಲಿಯ ಸದರ್‌ ಬಜಾರ್ ಮಾರುಕಟ್ಟೆಯಿಂದ ಈದ್ ಹಬ್ಬಕ್ಕೆ ಉಡುಗೊರೆಗಳನ್ನು ಕೊಳ್ಳಲು ಹೋಗಿದ್ದ ನಾಲ್ವರು ಸಹೋದರರ ಮೇಲೆ, ಅವರು ರೈಲಿನಲ್ಲಿ ವಾಪಸಾಗುವಾಗ ಹಲ್ಲೆ ನಡೆಯಿತು. ಈ ಘಟನೆಯಲ್ಲಿ ಜುನೈದ್ ಎಂಬ ಹದಿನಾರು ವರ್ಷದ ಹುಡುಗನ ಹತ್ಯೆಯಾಯಿತು. ಮಥುರಾಕ್ಕೆ ಹೋಗುತ್ತಿದ್ದ ರೈಲಿನಲ್ಲಿ, ದೆಹಲಿಯ ಹೊರವಲಯದಲ್ಲಿರುವ ಬಲ್ಲಭಗಡದ ಹತ್ತಿರ ಈ ಘಟನೆ ನಡೆದಿದ್ದು. ಕಾಶ್ಮೀರದ ಘಟನೆಯಂತೆಯೇ ಇಲ್ಲಿ ಸಹ ಕಾರಣಗಳು ಅಸ್ಪಷ್ಟ. ರೈಲಿನಲ್ಲಿ ಕೂರುವ ಸ್ಥಳಕ್ಕಾಗಿ ಜಗಳ ಪ್ರಾರಂಭವಾಯಿತು ಎನ್ನುವ ಮಾತುಗಳು ಕೇಳಿಬಂದಿವೆ. ಆದರೆ ಕಾರಣಗಳ ಚರ್ಚೆ ಅನವಶ್ಯಕ. ಜುನೈದ್‌ನ ಸಹೋದರರು ಹೇಳುವಂತೆ ಹಲ್ಲೆ ಮಾಡಿದವರು ಟೋಪಿ ಧರಿಸಿದ್ದ ಈ ಸಹೋದರರನ್ನು ‘ದೇಶದ್ರೋಹಿಗಳು’ ಮತ್ತು ‘ಗೋಮಾಂಸಭಕ್ಷಕರು’ ಎಂದು ಕರೆದರು. 

ಜುನೈದ್‌ನ ಹತ್ಯೆ ಹೀಗೆ ಕಳೆದ ಮೂರು ವರ್ಷಗಳಲ್ಲಿ ಹಲ್ಲೆಗೊಳಗಾದವರ ಉದ್ದನೆಯ ಪಟ್ಟಿಯಲ್ಲಿನ ಇತ್ತೀಚಿನ ಹೆಸರಷ್ಟೆ. ಎರಡು ವರ್ಷಗಳಿಂದ ನಿಲ್ಲದೆ ಮುಂದುವರೆಯುತ್ತಿರುವ ಅಲ್ಪಸಂಖ್ಯಾತರು ಮತ್ತು ದಲಿತರ ಮೇಲಿನ ಹಲ್ಲೆಯನ್ನು ವಿರೋಧಿಸಿ, ‘ನನ್ನ ಹೆಸರಿನಲ್ಲಲ್ಲ’ (ನಾಟ್ ಇನ್ ಮೈ ನೇಮ್) ಎಂಬ ನಾಗರಿಕ ಪ್ರತಿಭಟನೆಯ ಕಾರ್ಯಕ್ರಮವು ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ನಡೆಯಿತು. ಈ ಪ್ರತಿಭಟನೆಯ ಉದ್ದೇಶ ಹೀಗೆ ನಡೆಯುತ್ತಿರುವ ಹಲ್ಲೆಗಳಿಗೆ ನಮ್ಮ ಅಸಮ್ಮತಿ ಸೂಚಿಸುವುದು. ಆದರೆ ರಾಜಕೀಯ ವಿಶ್ಲೇಷಕ ಪ್ರತಾಪ್‌ಭಾನು ಮೆಹ್ತಾ ಹೇಳಿದಂತೆ ಹೀಗೆ ಮಾಡುವುದರಿಂದ ಇಂತಹ ದೌರ್ಜನ್ಯಗಳನ್ನು ತಡೆಯುವುದು ಆಗುತ್ತಿಲ್ಲ. ಅಲ್ಲೊಂದು ಇಲ್ಲೊಂದು ಬಲಿಪಶುಗಳನ್ನು ಹುಡುಕುತ್ತ, ನಿಧಾನವಾಗಿ ಹರಡುತ್ತಿರುವ ಈ ವಿದ್ಯಮಾನವು ಒಂದು ದೊಡ್ಡ ಗಲಭೆಯಂತೆ ನಮ್ಮನ್ನು ತಕ್ಷಣವೇ ತಟ್ಟುವುದಿಲ್ಲ. ಪ್ರತಿದಿನವೂ ನಡೆಯುವ ಇಂತಹ ದೌರ್ಜನ್ಯಗಳ ವಿರುದ್ಧದ ನಮ್ಮ ಪ್ರತಿಭಟನೆಯೂ  ನಾವು ಪುನರುಚ್ಚರಿಸುತ್ತ ಬಂದಂತೆ ದಿನೇ ದಿನೇ ತೀವ್ರತೆಯನ್ನು, ಪರಿಣಾಮಕಾರಿ ಗುಣವನ್ನು ಕಳೆದುಕೊಳ್ಳುತ್ತದೆ. ಈ ವಿದ್ಯಮಾನವನ್ನು ಮೆಹ್ತಾರ ಮಾತುಗಳಲ್ಲಿಯೇ ಹೇಳುವುದಾದರೆ: ‘ಕೆಡುಕು (ಇವಿಲ್) ತಾನು ಅಕ್ಷಯವೆಂದು ಭಾಷೆಗೆ ಹೇಳುತ್ತಿದೆ. ಅಂದರೆ ಪ್ರತಿಭಟನೆಯ ಮಾತುಗಳು ಕೆಡುಕಿನ ಮುಂದೆ ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತಿವೆ’.

ಪ್ರತಿಭಟನೆಯು ಇಂದು ಹೆಚ್ಚು ಪ್ರಬುದ್ಧವಾದ, ಹೆಚ್ಚು ಪರಿಣಾಮಕಾರಿಯಾದ ದಾರಿಗಳನ್ನು ಹುಡುಕಬೇಕಾಗಿರುವ ಸಂದರ್ಭದಲ್ಲಿಯೇ ಮೈಸೂರಿನಲ್ಲಿ ಭಾನುವಾರದಂದು (ಜೂನ್ 25) ನಾನು ಇಂದು ಪ್ರಸ್ತಾಪಿಸಬಯಸುವ ಮೂರನೆಯ ವಿವಾದಾತ್ಮಕ ಕಾರ್ಯಕ್ರಮ ನಡೆದಿದೆ. ಅಂದು ನಡೆದ ವಿಚಾರ ಸಂಕಿರಣವೊಂದರ ಉದ್ಘಾಟನೆಯನ್ನು ಸಾರ್ವಜನಿಕವಾಗಿ ಗೋಮಾಂಸ ಭಕ್ಷಣೆಯನ್ನು ಮಾಡುವ ಮೂಲಕ ಮಾಡಲಾಗಿದೆ.

ನಮ್ಮ ಆಹಾರದ ಒಲವು ವೈಯಕ್ತಿಕ ಆಯ್ಕೆಯ ವಿಚಾರ ಹಾಗೂ ಆ ಹಕ್ಕನ್ನು ಚಲಾಯಿಸುವ ಅವಕಾಶ ನಮಗಿರಬೇಕು ಎನ್ನುವುದರ ಬಗ್ಗೆ ನನಗೆ ಯಾವ ಅನುಮಾನವೂ ಇಲ್ಲ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಪ್ರತಿಭಟನೆ ಮಾಡುವಾಗ ಕೇವಲ ಸಾಂವಿಧಾನಿಕ ಹಕ್ಕುಗಳನ್ನು ಚಲಾಯಿಸುವ ಮಾತುಗಳನ್ನು ಆಡಿದರೆ ಸಾಲದು. ನಮ್ಮ ಪ್ರತಿಯೊಂದು ಪ್ರತಿಭಟನೆಯ ಮಾತು ಹಾಗೂ ಕ್ರಿಯೆಯ ಜೊತೆಗೆ ನೈತಿಕ ಶಕ್ತಿಯನ್ನು ತಳಕು ಹಾಕಬೇಕು. ನನ್ನ ಮಾತಿನ ಅರ್ಥ ಗೋಮಾಂಸ ಭಕ್ಷಣೆಯ ಹಕ್ಕು ನಮಗಿದ್ದರೂ, ಆ ಕ್ರಿಯೆ ಅನೈತಿಕವೆಂದಲ್ಲ. ಬದಲಿಗೆ ನನಗನ್ನಿಸುವುದು ಏನೆಂದರೆ ನಮ್ಮ ಸಾರ್ವಜನಿಕ ನಡವಳಿಕೆಯು ನೈತಿಕ ಎತ್ತರವನ್ನು ಪ್ರತಿ ಬಾರಿಯೂ ಗಳಿಸುವಂತಿರಬೇಕು. ಯಾರೂ ಯಾವ ನೆಲೆಯಲ್ಲಿಯೂ ನಮ್ಮ ನೈತಿಕತೆಯನ್ನು ಪ್ರಶ್ನಿಸುವಂತಿರಬಾರದು. ಆಗ ಮಾತ್ರ ಮೆಹ್ತಾರವರು ಮೇಲೆ ಗುರುತಿಸುತ್ತಿರುವ ಅಪಾಯದಿಂದ ನಾವು ತಪ್ಪಿಸಿಕೊಳ್ಳಲು ಸಾಧ್ಯವಾಗಬಹುದು. ಇಂದು ಪರ–ವಿರೋಧಿ ಗುಂಪುಗಳೆರಡರ ಮಾತುಗಳನ್ನು ಕೇಳಿದರೆ ಇದೊಂದು ಉಪಯುಕ್ತವಾದ ಸಾರ್ವಜನಿಕ ಪ್ರವಚನವೆಂದು ಯಾರಿಗೂ ಅನಿಸುವುದಿಲ್ಲ.

ಹೀಗೆ ಸಾರ್ವಜನಿಕ ನೈತಿಕತೆಯನ್ನು ಅದ್ಭುತವಾಗಿ ಆಚರಣೆಗೆ ತಂದ ಬಹುಮುಖ್ಯ ವ್ಯಕ್ತಿಯೆಂದರೆ ಗಾಂಧೀಜಿ. ತಮ್ಮ ಹಕ್ಕುಗಳನ್ನು ಚಲಾಯಿಸುವಾಗ ಅಥವಾ ತಾವು ಒಪ್ಪದ ಕಾನೂನುಗಳನ್ನು ಅನುಸರಿಸದಿರುವಾಗ, ಅವರು ಅನುಸರಿಸಿದ ಬಹಳ ಮುಖ್ಯವಾದ ತತ್ವವಿದು: ಪ್ರತಿಭಟನೆಯ ಉದ್ದೇಶ ಎದುರಾಳಿಯನ್ನು ಹೀಗಳೆಯುವುದಲ್ಲ, ಬದಲಿಗೆ ತನ್ನ ದೃಷ್ಟಿಕೋನವನ್ನು ಗುರುತಿಸುವಂತೆ ಆತನನ್ನೇ ಬದಲಿಸುವುದು. ಈ ಉದ್ದೇಶ ಸಾಧನೆಗೆ ತಾನು ನೋವನ್ನು ಅನುಭವಿಸಬೇಕಾದರೂ ಸರಿಯೇ, ಆದರೆ ಹಿಂಸೆಯನ್ನು ಸಾಧನವಾಗಿ ಬಳಸುವುದಿಲ್ಲ ಎಂದು ಅವರು ಹೇಳಿದರು. ತನ್ನ ಎದುರಾಳಿಯ ಮಾನವತೆಯನ್ನು ನಿರಾಕರಿಸುವ ಕೆಲಸವನ್ನು ಗಾಂಧೀಜಿ ಎಂದೂ ಮಾಡಲಿಲ್ಲ.

ಕಳೆದ ವಾರದ ನಾಲ್ಕನೆಯ ವಿವಾದಾತ್ಮಕ ಘಟನೆಯು ಇಂತಹ ಮನಸ್ಥಿತಿಯಿಂದಲೇ ಹುಟ್ಟಿರುವುದು. ಪೇಜಾವರ ಮಠದ ವಿಶ್ವೇಶ ತೀರ್ಥರು ಉಡುಪಿಯ ಕೃಷ್ಣ ದೇವಾಲಯದಲ್ಲಿ ಇಫ್ತಾರ್ ಕೂಟವನ್ನು ಏರ್ಪಡಿಸಿದಾಗ, ಅವರು ಬಹುಮುಖ್ಯವಾಗಿ ಮಾಡಿದುದು ಮುಸ್ಲಿಮರ ಮಾನವತೆಯನ್ನು ಸಾರ್ವಜನಿಕವಾಗಿ ಗುರುತಿಸಿದ್ದು. ಅವರ ಶ್ಲಾಘನೀಯ ಕಾರ್ಯಕ್ರಮದ ಉತ್ತಮ ಸಮರ್ಥನೆಗಳು ಈಗಾಗಲೇ ಪ್ರಕಟವಾಗಿವೆ. ಹಾಗಾಗಿ ಇಲ್ಲಿ ಹೆಚ್ಚು ಬರೆಯುವ ಅವಶ್ಯಕತೆಯಿಲ್ಲ.

ಹಿಂಸೆಯ ಘಟನೆಗಳು ಎಲ್ಲಾದರೂ, ಯಾವಾಗಲಾದರೂ ನಡೆಯಬಹುದು ಎನ್ನುವ ಪರಿಸ್ಥಿತಿ ಇಂದು ನಿಧಾನವಾಗಿ ನಮ್ಮ ಕಣ್ಣ ಮುಂದೆಯೇ ನಾವು ಸ್ಪಷ್ಟವಾಗಿ ಅರಿಯುವ ಮೊದಲೇ ಸೃಷ್ಟಿಯಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಜನಗಳ ಗುಂಪೊಂದು ರಾಷ್ಟ್ರ, ಧರ್ಮ, ಭಾಷೆ ಇತ್ಯಾದಿಗಳ ಹೆಸರಿನಲ್ಲಿ ತಾನೇ ಪ್ರಭುತ್ವವನ್ನು ತನ್ನ ಹಕ್ಕಾಗಿ ಸಾಧಿಸುತ್ತ, ತನಗಿಷ್ಟ ಬಂದಂತೆ ವರ್ತಿಸುತ್ತದೆ. ಪ್ರಭುತ್ವದ ಸಂಸ್ಥೆಗಳು ಮೂಕವಾಗಿ ನಿಂತಿವೆ. ನಮಗೆ ಮೂಕವಾಗಿರುವ ಆಯ್ಕೆಯಿಲ್ಲ. ಆದರೆ ನೈತಿಕ ಎಚ್ಚರವನ್ನು ಕಳೆದುಕೊಳ್ಳದೆ ಕಾರ್ಯಪ್ರವೃತ್ತರಾಗಬೇಕಾದ ಅನಿವಾರ್ಯ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT