ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟದ ಮಾರ್ಗ: ಗಂಭೀರ ಚಿಂತನೆ ಅನಿವಾರ್ಯ

Last Updated 15 ಸೆಪ್ಟೆಂಬರ್ 2016, 19:26 IST
ಅಕ್ಷರ ಗಾತ್ರ

ಹಲವು ದಶಕಗಳಿಂದಲೂ ಮೈಸೂರಿನಲ್ಲಿ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಲು ಅಲ್ಲಿನ ಪ್ರತಿಭಟನಾಕಾರರು ಒಂದು ಮಾದರಿಯನ್ನು ಕಟ್ಟಿಕೊಂಡಿದ್ದರು. ಅದರ ಪ್ರಕಾರ ನಗರದ ಯಾವುದೇ ಭಾಗದಿಂದ ಹೊರಟಿದ್ದರೂ ಎಲ್ಲ ಮೆರವಣಿಗೆಗಳು ನಗರದ ಕೇಂದ್ರದಲ್ಲಿರುವ ಕೆ.ಆರ್. ವೃತ್ತವನ್ನು ತಲುಪಿ ಅಲ್ಲೊಂದು ಸಣ್ಣ ಸಭೆ ನಡೆಸಬೇಕು. ಆನಂತರದಲ್ಲಿ ದೇವರಾಜ ಅರಸ್ ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ, ಕಚೇರಿಯಲ್ಲಿದ್ದ ಯಾರಾದರೂ ಹಿರಿಯ ಅಧಿಕಾರಿಗೆ ಮನವಿ ಪತ್ರವೊಂದನ್ನು ಸಲ್ಲಿಸಬೇಕು.

ಪ್ರತಿದಿನವೂ ಒಂದಲ್ಲ ಒಂದು ಪ್ರತಿಭಟನಾ ಮೆರವಣಿಗೆ ಕಾರ್ಯಕ್ರಮ ಮೈಸೂರಿನಲ್ಲಿ ನಡೆಯುತ್ತಿರುತ್ತದೆ. ಇಂತಹ ಕಾರ್ಯಕ್ರಮಗಳಿಂದ ವಾಹನ ಸಂಚಾರಕ್ಕೆ ಆಗುತ್ತಿದ್ದ ಅಡೆತಡೆಗಳನ್ನು ತಪ್ಪಿಸಲು, ಕೆಲವು ವರ್ಷಗಳ ಹಿಂದೆ ಮೈಸೂರಿನ ಪೊಲೀಸರು ಹೊಸದೊಂದು ಯೋಜನೆಯನ್ನು ರೂಪಿಸಿದರು. ಅದರಂತೆ ಕೆ.ಆರ್. ವೃತ್ತಕ್ಕೆ ಪ್ರತಿಭಟನಾ ಮೆರವಣಿಗೆಗಳು ಬರುವುದನ್ನು ಮತ್ತು ಅಲ್ಲಿ ಸಭೆ ನಡೆಸುವುದನ್ನು ನಿಷೇಧಿಸಿದರು. ಜೊತೆಗೆ ಪ್ರತಿಭಟನೆಗಳನ್ನು ನಡೆಸುವುದಕ್ಕಾಗಿಯೇ ಸಮೀಪದಲ್ಲಿಯೆ ಇರುವ ಗಾಂಧಿ ವೃತ್ತವನ್ನು ಒಂದು ಪರ್ಯಾಯ ಸ್ಥಳವಾಗಿ ಸೂಚಿಸಿದರು.

ಮೈಸೂರಿನ ಹೋರಾಟಗಾರರುಗಳಿಗೆ ಈ ಕ್ರಮ ಒಪ್ಪಿಗೆಯಾಗಲಿಲ್ಲ. ಯಾವುದೇ ಸಾರ್ವಜನಿಕ ಪ್ರತಿಭಟನೆಯ ಉದ್ದೇಶವು ಪ್ರತಿಭಟನಾಕಾರರು ಕೇವಲ ತಮ್ಮ ನಿಲುವನ್ನು ಬಹಿರಂಗವಾಗಿ ಅಭಿವ್ಯಕ್ತಗೊಳಿಸುವುದರ ಮೂಲಕ ಪೂರ್ಣಗೊಳ್ಳುವುದಿಲ್ಲ. ಅಂದರೆ ಬೇಡಿಕೆಗಳನ್ನು ಪೂರೈಸುವಂತೆ ಯಾವುದೋ ನಿಗದಿತ ಸ್ಥಳದಲ್ಲಿ ಸೇರಿ ಸರ್ಕಾರವನ್ನೊ ಅಥವಾ ಮತ್ತಾರನ್ನೊ ಆಗ್ರಹಿಸುವುದು ಮಾತ್ರವೇ ಸಾಲದು. ಬದಲಿಗೆ ಪ್ರತಿಭಟನೆಯ ಉದ್ದೇಶವೆಂದರೆ ಹೆಚ್ಚಿನ ಜನರ ಕಣ್ಣಿಗೆ ಕಾಣಿಸಿಕೊಳ್ಳುವುದು ಮತ್ತು ತಮ್ಮ ಬೇಡಿಕೆಗಳ ಬಗ್ಗೆ ಅವರೆಲ್ಲರ ಪ್ರಜ್ಞೆಯನ್ನು ವಿಸ್ತರಿಸುವುದು. ಜೊತೆಗೆ ಪ್ರತಿದಿನದ ಜನಜೀವನವನ್ನು ಸಾಧ್ಯವಾದಷ್ಟು ಮಟ್ಟಿಗೆ ಅಸ್ತವ್ಯಸ್ತಗೊಳಿಸುವುದು. ಹೀಗೆ ಮೈಸೂರಿನ ಪೊಲೀಸರು ಯಾವುದನ್ನು ತಪ್ಪಿಸಬೇಕೆಂದು ನಗರದ ಪ್ರತಿಭಟನಾಕಾರರನ್ನು ಕೆ.ಆರ್. ವೃತ್ತದಿಂದ ಹೊರಕಳಿಸಬಯಸಿದ್ದರೊ, ಪ್ರತಿಭಟನಾಕಾರರ ಉದ್ದೇಶವೂ ಅದೇ ಆಗಿತ್ತು. ಪ್ರತಿಭಟನಾಕಾರರ ದೃಷ್ಟಿಯಲ್ಲಿ ಸಾರ್ವಜನಿಕರಿಗೆ ಆಗುವ ತೊಂದರೆ ಅನೈತಿಕವಾಗಲಿ ಅಥವಾ ಕಾನೂನುಬಾಹಿರವಾದ ಕ್ರಮವಾಗಲಿ ಅಗಿರಲಿಲ್ಲ.

ಇದು ಮೈಸೂರಿನ ಕತೆ ಮಾತ್ರವಲ್ಲ ಎಲ್ಲ ಊರುಗಳಲ್ಲಿಯೂ ಸಂಭವಿಸುವ ವಿದ್ಯಮಾನ. ಸ್ವಲ್ಪ ಹೆಚ್ಚು ನಾಟಕೀಯವಾದ ಉದಾಹರಣೆಗಳು ಬೇಕೆಂದರೆ ಎಂಬತ್ತರ ದಶಕದ ಪ್ರಾರಂಭದ ರೈತ ಚಳವಳಿಯ ರ್‍ಯಾಲಿಗಳನ್ನಾಗಲಿ ಅಥವಾ ಕಾವೇರಿ ಇಲ್ಲವೆ ಮಹಾದಾಯಿಯಂತಹ ಸಮಸ್ಯೆಗಳು ತಲೆದೋರಿದಾಗ ಮಂಡ್ಯ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ನಡೆಯುವ ಚಳವಳಿಗಳನ್ನು ನೆನಪಿಸಿಕೊಳ್ಳಿ. ಹೆದ್ದಾರಿಗಳು ಬಂದಾಗುತ್ತವೆ. ದಿನನಿತ್ಯದ ಬಳಕೆಯ ಅವಶ್ಯಕ ಸಾಮಗ್ರಿಗಳು ದೊರೆಯುವುದಿಲ್ಲ. ಪ್ರತಿದಿನವೂ ದುಡಿದೇ ಬದುಕಬೇಕಾದ ಅನಿವಾರ್ಯತೆಯಿರುವ ವರ್ಗಗಳಿಗೆ ಬದುಕು ದುಸ್ತರವಾಗುತ್ತದೆ. ಆದರೆ ಈ ಎಲ್ಲ ಸಮಸ್ಯೆಗಳು ಇಡೀ ಸಮಾಜವೇ ಎದುರಿಸುತ್ತಿರುವ ಬಿಕ್ಕಟ್ಟಿನ ಮುಂದೆ ಅಷ್ಟೇನೂ ಮುಖ್ಯವಲ್ಲ ಎಂಬ ತರ್ಕವನ್ನು ಚಳವಳಿಗಾರರು ಮುಂದಿಡುತ್ತಾರೆ. ಹೀಗಾಗಿ ಇಂತಹ ಸಂದರ್ಭಗಳಲ್ಲಿ ನಾವು ಸಾಧಿಸಬೇಕೆಂದಿರುವ ಲಕ್ಷ್ಯ-ಗುರಿಗಳು ಆ ಉದ್ದೇಶಕ್ಕಾಗಿ ನಾವು ಬಳಸುವ ಸಾಧನಗಳನ್ನು ಕಡೆಗಣಿಸುವಂತೆ ಮಾಡುತ್ತವೆ.   ಸಾರ್ವಜನಿಕವಾಗಿ ಪ್ರತಿಭಟನೆಗಳನ್ನು ನಡೆಸಲು ಆಧುನಿಕ ಭಾರತದಲ್ಲಿ ಎರಡು ಮಾದರಿಗಳು ರೂಪುಗೊಂಡಿರುವುದನ್ನು ನಾವು ಕಾಣಬಹುದು. ಮೊದಲನೆಯದು, ಬಂದ್-ಹರತಾಳಗಳ ಮೂಲಕ ಪ್ರತಿದಿನದ ಬದುಕನ್ನು ಅಸ್ತವ್ಯಸ್ತಗೊಳಿಸುವುದು.

ಎರಡನೆಯದು, ಸತ್ಯಾಗ್ರಹಿಯೇ ತನ್ನ ಆತ್ಮತ್ಯಾಗ (ಸೆಲ್ಫ್‌ ಸ್ಯಾಕ್ರಿಫೈಸ್‌್) ಮತ್ತು ನೋವು ಭರಿಸುವ ಶಕ್ತಿಯ ಮೂಲಕ ತನ್ನ ಎದುರಾಳಿಯನ್ನು ಪರಿವರ್ತಿಸಲು ಪ್ರಯತ್ನಿಸುವುದು. ಈ ಎರಡೂ ಮಾದರಿಗಳು ವಸಾಹತುಶಾಹಿ ವಿರೋಧಿ ಹೋರಾಟದ ಸಂದರ್ಭದಲ್ಲಿ ರೂಪುಗೊಂಡವು. ಆಳುವ ವರ್ಗಗಳಿಗೆ ತಮ್ಮ ಅಸಹಕಾರವನ್ನು ಸೂಚಿಸುವ ಮೂಲಕ ಇಲ್ಲವೆ ನಿರ್ದಿಷ್ಟ ಕಾನೂನುಗಳನ್ನು ಉಲ್ಲಂಘಿಸುವ ಮೂಲಕ ನಡೆಯುತ್ತಿದ್ದ ಈ ಪ್ರತಿಭಟನೆಗಳು ಬಹುಮಟ್ಟಿಗೆ ಅಹಿಂಸಾತ್ಮಕವಾದವುಗಳು. ಈ ಎರಡು ಪ್ರತಿಭಟನೆಯ ಮಾದರಿಗಳು ಆಧುನಿಕ ಭಾರತವು ಜಾಗತಿಕ ರಾಜಕಾರಣಕ್ಕೆ ನೀಡಿದ ಬಹುಮಹತ್ವದ ಕೊಡುಗೆಯೆಂದರೆ ಉತ್ಪ್ರೇಕ್ಷೆಯೇನಲ್ಲ. ಸ್ವಾತಂತ್ರ್ಯ ಬಂದ ಮೇಲೆ ಸಹ, ಭಾರತದ ನಾಗರಿಕ ಸಮಾಜದ ಗುಂಪುಗಳು ಈ ಎರಡೂ ಮಾದರಿಯ ಹೋರಾಟಗಳನ್ನು ತಮ್ಮ ಗುರಿ ಸಾಧನೆಗಾಗಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರಗಳ ವಿರುದ್ಧ ಕೂಡ ಬಳಸುತ್ತಲೇ ಬಂದಿವೆ.

ಹತ್ತೊಂಬತ್ತನೆಯ ಶತಮಾನದ ಕಡೆಯ ಹೊತ್ತಿಗೆ ವಸಾಹತುಶಾಹಿ ಸರ್ಕಾರದ ಕಾನೂನುಗಳನ್ನು ಬಹಿರಂಗವಾಗಿ ಧಿಕ್ಕರಿಸುವ, ಅದಕ್ಕಾಗಿ ಹರತಾಳಗಳನ್ನು ನಡೆಸುವ ಪರಿಪಾಠ ಭಾರತದಾದ್ಯಂತ ಬೆಳೆದುಬಂದಿತ್ತು. ಇಂತಹ ಪ್ರತಿಭಟನೆಗಳು ಬಂಗಾಳದ ವಿಭಜನೆಯನ್ನು ಪ್ರತಿಭಟಿಸಿಯೋ ಇಲ್ಲವೆ ಪ್ಲೇಗ್ ಬಂದಾಗ ಸರ್ಕಾರ ತೆಗೆದುಕೊಳ್ಳುತ್ತಿದ್ದ ಕ್ರಮಗಳನ್ನು ವಿರೋಧಿಸಿಯೋ ನಡೆಯುತ್ತಿದ್ದವು. ಮುಂದೆ 20ನೆಯ ಶತಮಾನದ ಮೊದಲೆರಡು ದಶಕಗಳಲ್ಲಿ ಸ್ವದೇಶಿ ಮತ್ತು ಹೋಮ್‍ರೂಲ್ ಚಳವಳಿ ಜನಪ್ರಿಯವಾಗುತ್ತಿದ್ದಂತೆ ಭಾರತದ ಪ್ರಮುಖ ನಗರಗಳಲ್ಲಿ ಹರತಾಳಗಳು ನಡೆಯುತ್ತಿದ್ದುದನ್ನು ನಾವು ಗಮನಿಸಬಹುದು. ಈ ಹೋರಾಟಗಳ ಮೂಲಕವೇ ಲೋಕಮಾನ್ಯ ತಿಲಕರಂತಹ ಉಗ್ರಗಾಮಿ ನಾಯಕರು ಕಾಂಗ್ರೆಸ್ಸಿನೊಳಗೆ ಪ್ರಭಾವ ಗಳಿಸಿದರು. ನಾನು ಮೇಲೆ ಗುರುತಿಸಿದ ಮೊದಲ ಮಾದರಿಯ ಹುಟ್ಟು ಇಲ್ಲಿದೆ. 

ಎರಡನೆಯ ಮಾದರಿಯ ಜನಕ ಗಾಂಧೀಜಿ. ಭಾರತದಲ್ಲಿ ಮೊದಲ ಮಾದರಿ ಪ್ರಚಲಿತವಾಗುತ್ತಿದ್ದ ಕಾಲಘಟ್ಟದಲ್ಲಿಯೆ ದೂರದ ದಕ್ಷಿಣ ಆಫ್ರಿಕಾದಲ್ಲಿ ಹೊಸ ಬಗೆಯ ಪ್ರತಿಭಟನೆಯ ಮಾರ್ಗಗಳನ್ನು ಹುಡುಕತೊಡಗಿದರು. ಸಾರ್ವಜನಿಕ ಪ್ರತಿಭಟನೆಯ ನೈತಿಕತೆಯ ಬಗ್ಗೆ, ಹೋರಾಟಕ್ಕೆ ಸಂಕೇತಗಳನ್ನು ಹುಡುಕುವುದಕ್ಕೆ ಗಾಂಧೀಜಿಯವರಷ್ಟು ಸೂಕ್ಷ್ಮವಾಗಿ ಆಲೋಚಿಸಿದವರು, ಪ್ರಯೋಗಗಳನ್ನು ಮಾಡಿದವರು ಜಗತ್ತಿನ ಇತಿಹಾಸದಲ್ಲಿ ಮತ್ತೊಬ್ಬರಿಲ್ಲ. ಎರಡನೆಯ ಮಾದರಿಯ ಹುಟ್ಟು ಗಾಂಧೀಜಿಯವರ 1908ರ ಟ್ರಾನ್ಸವಾಲ್ ಚಳವಳಿಯಲ್ಲಿದೆ.

1906ರಲ್ಲಿ ಟ್ರಾನ್ಸವಾಲ್ ಪ್ರಾಂತ್ಯದಲ್ಲಿ ಏಷ್ಯನ್ನರ ನೋಂದಣಿ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಇದರ ಅಂಗವಾಗಿ ಎಲ್ಲ ಏಷ್ಯನ್ನರು ತಮ್ಮ ಹಳೆಯ ರಹದಾರಿಗಳನ್ನು ವಾಪಸು ಮಾಡಿ, ಮತ್ತೆ ನೋಂದಣಿ ಮಾಡಿಸಿಕೊಳ್ಳಬೇಕಿತ್ತು. ಹೆಬ್ಬೆರಳಿನ ಗುರುತಿದ್ದ ಹೊಸ ರಹದಾರಿಯನ್ನು ಪೊಲೀಸರು ಕೇಳಿದಾಗ ತೋರಿಸಬೇಕಿತ್ತು. ಅಲ್ಲದೆ ಹೊಸದಾಗಿ ಏಷ್ಯನ್ನರು, ಅದರಲ್ಲೂ ಭಾರತೀಯರು ದಕ್ಷಿಣ ಆಫ್ರಿಕಾಗೆ ವಲಸೆ ಬರುವುದನ್ನು ನಿಷೇಧಿಸಲಾಗಿತ್ತು. ಇವುಗಳನ್ನೆಲ್ಲ ತಾರತಮ್ಯದ ಕ್ರಮಗಳೆಂದು ಬಣ್ಣಿಸಿದ ಗಾಂಧೀಜಿ, ಸತ್ಯಾಗ್ರಹವೆಂಬ ಹೊಸ ಹೋರಾಟವನ್ನು ಪ್ರಾರಂಭಿಸಿದರು. 1908ರ ಜನವರಿಯಲ್ಲಿ ಅವರು ಪ್ರಥಮ ಬಾರಿಗೆ ಬಂಧನಕ್ಕೊಳಗಾಗಿದ್ದು ಈ ಚಳವಳಿಯ ಸಂದರ್ಭದಲ್ಲಿಯೆ.

ಆ ವೇಳೆಗೆ ವಕೀಲಿ ವೃತ್ತಿಯಲ್ಲಿ ಗಣನೀಯ ಯಶಸ್ಸನ್ನು ಕಂಡಿದ್ದ ಗಾಂಧೀಜಿಯವರು ಎದುರಿಸಿದ ಸವಾಲು ಸರಳವಾದುದು. ವಕೀಲನಾಗಿ ಕಾನೂನುಭಂಗ ಮಾಡುವುದಾದರೆ, ಅದನ್ನು ಸಮರ್ಥಿಸುವುದು ಹೇಗೆ? ಈ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತ ನಾಗರಿಕ ಅಸಹಕಾರ (ಸಿವಿಲ್ ಡಿಸ್‍ಒಬೀಡಿಯನ್ಸ್) ಚಟುವಟಿಕೆಗಳ ರಾಜಕೀಯ ಮತ್ತು ನೈತಿಕ ನೆಲೆಗಳನ್ನು ಗಾಂಧೀಜಿ ಕಟ್ಟಿಕೊಳ್ಳಲಾರಂಭಿಸಿದರು. 1908ರಲ್ಲಿ ಅವರು ಹಾಕಿದ ಮೊದಲ ಹೆಜ್ಜೆಯೆಂದರೆ ತನ್ನ ಮುಂದಿದ್ದ ಟ್ರಾನ್ಸವಾಲಿನ ನೋಂದಣಿ ಕಾಯ್ದೆಯನ್ನು ಪರೀಕ್ಷಿಸುವುದು. ಅದಕ್ಕಾಗಿ ದಕ್ಷಿಣ ಆಫ್ರಿಕಾದಲ್ಲಿದ್ದ ಭಾರತೀಯರನ್ನು ರಹದಾರಿ ಪಡೆಯದೆ ಟ್ರಾನ್ಸವಾಲನ್ನು ಪ್ರವೇಶಿಸುವಂತೆ ಪ್ರೋತ್ಸಾಹಿಸಿದರು.

ಗಾಂಧೀಜಿಯವರು ಕಾನೂನುಭಂಗ ಮತ್ತು ಅಸಹಕಾರಗಳ ಮೂಲಕ ಸಾಮಾಜಿಕ ಹಾಗೂ ರಾಜಕೀಯ ಬದಲಾವಣೆಗಳನ್ನು ತರಲು ಆಶಿಸಿದಾಗ, ಅವರು ಕಂಡುಕೊಂಡ ಮುಖ್ಯ ಆಯುಧವೆಂದರೆ ಸತ್ಯಾಗ್ರಹಿಯು ತನಗಾಗಬಹುದಾದ ನೋವು-ಹಿಂಸೆಗಳನ್ನು, ತನ್ನ ಪ್ರತಿದಿನದ ಬದುಕಿನಲ್ಲಿ ಆಗಬಹುದಾದ ಬದಲಾವಣೆಗಳನ್ನು ಸಹಿಸಿಕೊಳ್ಳಲು ಸಿದ್ಧನಾಗಿದ್ದುದು. ಇಂತಹ ಸೆಲ್ಫ್‌ ಸಫರಿಂಗ್ ಸಾರ್ವಜನಿಕವಾಗಿ ಪ್ರದರ್ಶಿತವಾದಾಗ, ಅಧಿಕಾರದಲ್ಲಿರುವವರೂ ಸೇರಿದಂತೆ ಸಮಾಜದ ಮನಃಪರಿವರ್ತನೆಯೂ ಸಾಧ್ಯ ಎನ್ನುವುದನ್ನು ಅವರು ಅರಿತರು. ಸತ್ಯಾಗ್ರಹವು ಎಲ್ಲ ಬಗೆಯ ಅಧಿಕಾರ ವ್ಯವಸ್ಥೆಗಳ, ಸರ್ಕಾರಗಳ ಸಂದರ್ಭದಲ್ಲಿಯೂ ಫಲಕಾರಿಯಾಗಿರುತ್ತದೆ ಎಂದು ಅವರು ನಂಬಿದ್ದರು. ಹಾಗಾಗಿಯೆ ಟ್ರಾನ್ಸವಾಲಿನಲ್ಲಾಗಲಿ ಅಥವಾ ಮುಂದೆ ಭಾರತದಲ್ಲಾಗಲಿ, ಕಾನೂನನ್ನು ಮುರಿದಾಗ ತಮ್ಮ ‘ಅಪರಾಧ’ವನ್ನು ಅವರು ಮುಕ್ತವಾಗಿ ಒಪ್ಪಿಕೊಳ್ಳುತ್ತಿದ್ದರು. ಅಲ್ಲದೆ ಕಾನೂನಿನ ಪ್ರಕಾರ ನೀಡಲಾಗುವ ಯಾವುದೇ ಶಿಕ್ಷೆಯನ್ನು ಅನುಭವಿಸಲು ತಾವು ಸಿದ್ಧರಿರುವುದಾಗಿ ಹೇಳುತ್ತಿದ್ದರು. 1909ರಲ್ಲಿ ‘ಹಿಂದ್‌ ಸ್ವರಾಜ್’ ಕೃತಿಯನ್ನು ಬರೆಯುವ ಹೊತ್ತಿಗೆ, ಗಾಂಧೀಜಿಯವರಿಗೆ ಸತ್ಯಾಗ್ರಹಿಯ ಬದುಕು ಮತ್ತು ಚಟುವಟಿಕೆಗಳ ಬಗ್ಗೆ ಸ್ಪಷ್ಟತೆ ದೊರಕಿತ್ತು.

1908ರಲ್ಲಿ ಪ್ರಾರಂಭವಾದ ಈ ಪ್ರಯೋಗ ಮುಂದೆ ಭಾರತದಲ್ಲಿ ಅಸಹಕಾರ ಚಳವಳಿ ಮತ್ತು ಉಪ್ಪಿನ ಸತ್ಯಾಗ್ರಹಗಳಂತಹ ಪ್ರಮುಖ ಘಟ್ಟಗಳಲ್ಲಿ ಹೊಸ ಆಯಾಮಗಳನ್ನು ಪಡೆಯುವುದನ್ನು ನಾವು ಗಮನಿಸಬಹುದು. ಅಹಿಂಸೆಗೆ ಸಂಪೂರ್ಣವಾಗಿ ಬದ್ಧವಾಗಿರದಿದ್ದಾಗ ಸತ್ಯಾಗ್ರಹವನ್ನೇ ವಾಪಸು ಪಡೆಯುವ ಧೈರ್ಯವನ್ನು ಚೌರಿಚೌರಾದ ಘಟನೆಯ ನಂತರ ಅವರು ಪ್ರದರ್ಶಿಸಿದರು. ಉಪ್ಪನ್ನು ಸಂಕೇತವಾಗಿರಿಸಿಕೊಂಡು ದಂಡಿಯಾತ್ರೆಯನ್ನು ಗಾಂಧೀಜಿಯವರು ಸಂಘಟಿಸಿದ ರೀತಿ ಮತ್ತು ಗಾಂಧಿಮಾರ್ಗವನ್ನು ಅನುಸರಿಸಿ ಆಫ್ರಿಕನ್‌ ಅಮೆರಿಕನ್ನರು ನಾಗರಿಕ ಹಕ್ಕುಗಳಿಗೆ ನಡೆಸಿದ ಹೋರಾಟಗಳು ನಮ್ಮ ಇಂದಿನ ಚಳವಳಿಗಾರರಿಗೆ ಕೈಪಿಡಿಗಳಾಗಬೇಕಿದೆ.

ಚಳವಳಿಗಾರರು ಅಹಿಂಸೆ, ಆತ್ಮತ್ಯಾಗಗಳಿಗೆ ಬದ್ಧರಾಗಿರಬೇಕು ಮತ್ತು ಸ್ವತಃ ನೋವನ್ನು ಅನುಭವಿಸಲು ಸಿದ್ಧರಿರಬೇಕು ಎಂದು ಹೇಳುವುದು ಅಸಂಬದ್ಧವೆನ್ನುವ ಕಾಲದಲ್ಲಿ ನಾವಿದ್ದೇವೆ ಎನ್ನುವ ಅರಿವು ನನಗಿದೆ. ಗುರಿಗಳಂತೆ ಅವುಗಳನ್ನು ತಲುಪಲು ನಾವು ಬಳಸುವ ಸಾಧನಗಳೂ ಶುದ್ಧವಾಗಿರಲಿ ಎನ್ನುವ ಧೈರ್ಯ ನಮಗಾರಿಗೂ ಇಲ್ಲ. ಇಷ್ಟೆಲ್ಲ ಏಕೆ. ಸತ್ಯಾಗ್ರಹ ಎನ್ನುವ ಪದದ ಬಳಕೆಯನ್ನೇ ನಾವು ಬಿಟ್ಟಿದ್ದೇವೆ. ನೋವನ್ನು ಸ್ವೀಕರಿಸುವುದಕ್ಕಿಂತ ನೋವನ್ನು ಕೊಡುವುದು, ಎದುರಿಗೆ ಸಿಕ್ಕವರಿಗೆ ಬಾರಿಸುವುದು ಪೌರುಷದ ಸಂಕೇತಗಳಾಗಿವೆ. ಚಳವಳಿಗಳು, ಬಂದ್‌ಗಳು  ಮತ್ತೆ ಮತ್ತೆ ಜರುಗುತ್ತಿವೆ. ಅವುಗಳ ಗುರಿಗಳಾಗಲಿ, ದಾರಿಗಳಾಗಲಿ, ಪರಿಣಾಮಗಳಾಗಲಿ ಸ್ಪಷ್ಟವಾಗಿದೆ ಎಂದು ಯಾರಿಗೂ ಅನಿಸುತ್ತಿಲ್ಲ.

ಗಾಂಧೀಜಿಯವರು ಪ್ರತಿಪಾದಿಸಿದ ಸತ್ಯಾಗ್ರಹ ಮಾರ್ಗವನ್ನು ಒಪ್ಪುವುದು ಬಿಡುವುದು ಒಂದೆಡೆ ಇರಲಿ. ಆದರೆ ನಮ್ಮ ಹೋರಾಟದ ಮಾರ್ಗಗಳ ಬಗ್ಗೆ, ಪ್ರತಿದಿನದ ಬದುಕಿನ ಮೇಲೆ ಅವುಗಳ ಪರಿಣಾಮಗಳನ್ನು ಕುರಿತಾಗಿ ಗಂಭೀರವಾಗಿ ಆಲೋಚಿಸಬೇಕಾದ ಅನಿವಾರ್ಯತೆಯಂತೂ ನಮಗಿದೆ. ಇತ್ತೀಚಿನ ಕಾವೇರಿ ಹೋರಾಟದ ಉದ್ದೇಶವಾದರೂ ಏನು, ನಮ್ಮ ಬೇಡಿಕೆಗಳನ್ನು ಯಾರ ಮುಂದಿಡುತ್ತಿದ್ದೇವೆ, ನಮಗೆ ದೊರಕಬಹುದಾದ ಪರಿಹಾರಗಳಾದರೂ ಏನು ಎಂದು ಕೇಳಿಕೊಂಡರೆ ಉತ್ತರಗಳಂತೂ ದೊರಕುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT