ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಸ್ಪತ್ರೆ ಒಳಗೆ, ಸ್ಟೇಷನ್ ಹೊರಗೆ ಸುಮ್ಸುಮ್ನೆ ನಿಲ್ಲಬಾರ್ದು’

Last Updated 6 ಅಕ್ಟೋಬರ್ 2016, 4:29 IST
ಅಕ್ಷರ ಗಾತ್ರ

ಹಳೇ ಇನ್‌ಸ್ಪೆಕ್ಟರು ಸ್ಟೇಷನ್ನಿನ ಒಳಗೆ ಹೋಗುವಾಗ ಮದನ, ರವಿ, ಅಪಾರ್ಟ್‌ಮೆಂಟ್ ಮ್ಯಾನೇಜರು ಮತ್ತು ಕವಿತಾ ಹೊರಗೆ ಬರುತ್ತಿದ್ದರಷ್ಟೇ? ಆ ಗುಂಪಿನಲ್ಲಿ ಮ್ಯಾನೇಜರು ಮತ್ತು ರವೀಂದ್ರನನ್ನು ಮಾತ್ರ ಇನ್‌ಸ್ಪೆಕ್ಟರು ನೋಡಿ ಬಲ್ಲವರಾಗಿದ್ದರು. ಮದನ ಮತ್ತು ಕವಿತಾರ ಮುಖಪರಿಚಯವೂ ಇನ್‌ಸ್ಪೆಕ್ಟರಿಗೆ ಇರಲಿಲ್ಲ.

ಖಾಕಿ ಅಧಿಕಾರಿ ಎದುರಿನಿಂದ ಬರುತ್ತಿದ್ದಾರೆನ್ನುವುದನ್ನು ಮೊದಲಿಗೆ ಗಮನಿಸಿದ್ದು ಮ್ಯಾನೇಜರು. ಅವರೂ ರವೀಂದ್ರನೂ ಮಾತಾಡುತ್ತಾ ಮುಂದೆ ನಡೆಯುತ್ತಿದ್ದರು... ಮದನ, ಕವಿತಾ ಇಬ್ಬರನ್ನೂ ಹಿಂಬಾಲಿಸುತ್ತಿದ್ದರು. ಇನ್‌ಸ್ಪೆಕ್ಟರನ್ನು ಕಂಡ ಕೂಡಲೆ ಮ್ಯಾನೇಜರು ಸರಕ್ಕಂತ ರವೀಂದ್ರನ ಕೈ ಹಿಡಿದು ಹಿಂದಕ್ಕೆ ಬರುವಂತೆ ಎಳೆದರು.

ಕವಿತಾ ಮತ್ತು ಮದನನಿಗೆ ಮುಂದಕ್ಕೆ ಹೋಗುವಂತೆ ಸನ್ನೆ ಮಾಡಿದರು. ಅವರ ಇಂಗಿತ ಕವಿತಾಗೆ ಅರ್ಥವಾಯಿತು. ಮಾತಾಡದೆ ಸುಮ್ಮನೆ ನಡೆದಳು. ‘ಮಾಸ್ಟರ್ ಪ್ಲಾನರ್’ ಮದನನ ತಲೆಗೆ ಮಾತ್ರ ಮ್ಯಾನೇಜರು ಏನು ಸನ್ನೆ ಮಾಡಿದರು ಅಂತ ಅರ್ಥವಾಗದೆ, ಪೆದ್ದನ ಥರ ‘ಏನ್ ಸಾರ್?’ ಅಂತ ತಿರುಗಿ ನಿಂತು ಮ್ಯಾನೇಜರನ್ನು ಕೇಳಿದ.

ಅಷ್ಟು ಹೊತ್ತಿಗೆ ಸರಿಯಾಗಿ ಇನ್‌ಸ್ಪೆಕ್ಟರ್ ಇವರನ್ನು ದಾಟಿ ಹೋಗುತ್ತಿದ್ದವರು ತಮ್ಮ ನೀಟಿಗೆ ಏನೋ ಚಟುವಟಿಕೆ ನಡೆಯುತ್ತಿದ್ದುದನ್ನು ಗಮನಿಸಿದರು. ರವೀಂದ್ರ ಮತ್ತು ಮ್ಯಾನೇಜರನ್ನು ಕಂಡ ಕೂಡಲೇ ಇನ್‌ಸ್ಪೆಕ್ಟರ್ ಮುಖಭಾವ ಬೇರೆಯಾಯಿತು. ರವೀಂದ್ರನನ್ನು ಉದ್ದೇಶಿಸಿ ‘ಏನ್ರಿ?’ ಎಂದರು. ಅವನೋ ಅಲ್ಲೇ ಜಲಜಲನೆ ಬೆವೆತು ಹೋಗಿ ‘ಏನಿಲ್ಲ ಸರ್ ಏನಿಲ್ಲ ಸರ್’ ಎಂದು ತೊದಲತೊಡಗಿದ.

ಕವಿತಾಗೆ ಇದ್ದ ಭಾರೀ ಸಮಯಪ್ರಜ್ಞೆಯಿಂದ ಮದನ ಅಲ್ಲಿ ನಿಲ್ಲದೆ ಸುಮ್ಮನೆ ಮುಂದಕ್ಕೆ ಬರುವಂತೆ ಪರಿಸ್ಥಿತಿಯನ್ನು ನಿಭಾಯಿಸಿದಳು. ಇನ್‌ಸ್ಪೆಕ್ಟರ್ ನಿಂತುದ್ದನ್ನು ಕಂಡ ಕವಿತಾ ಮದನನಿಗೆ ‘ಬಾರೋ...’ ಅಂತ ಉಸಿರಿನ ಅಡಿಯಲ್ಲೇ, ಅದೇ ಆವೇಗದಲ್ಲೇ ಹೇಳುತ್ತಾ ಬಂದದ್ದು ಮದನನಿಗೆ ತಬ್ಬಿಬ್ಬಾಗುವಂತಾದರೂ ಯಾವುದೋ ಒಂದು ಸನ್ನೆ ಅರ್ಥವಾಗಿ ಸಾಕು ನಾಯಿ ಓನರನ್ನು ಹಿಂಬಾಲಿಸುವಂತೆ ಅವಳ ಹಿಂದೆಯೇ ಹೊರಕ್ಕೆ ಹೋದ.

ಇಬ್ಬರೂ ದುಡು ದುಡು ನಡೆಯುತ್ತಾ ಸ್ಟೇಷನ್ ಕಾಂಪೌಂಡು ದಾಟಿ ರವಿಗೆ ಕಾಯುತ್ತಾ ನಿಲ್ಲದೆ ಆಟೊ ಹಿಡಿದು ನೇರ ಮನೆಗೆ ಹೋದರು. ಅತ್ತ ರವಿ ಮತ್ತು ಮ್ಯಾನೇಜರನ್ನ ಇನ್‌ಸ್ಪೆಕ್ಟರ್ ಮಾತನಾಡಿಸುತ್ತಾ ನಿಂತಿದ್ದರಷ್ಟೆ? ಇಂಥದ್ದರಲ್ಲೆಲ್ಲಾ ಅನುಭವವಿದ್ದ ಮ್ಯಾನೇಜರು ಇನ್‌ಸ್ಪೆಕ್ಟರನ್ನು ಅತ್ತ ಕರೆದುಕೊಂಡು ಹೋಗಿ ಅದೇನೋ ಮಾತನಾಡಿದರು. ಐದು ನಿಮಿಷದ ಮಾತು ನಡೆದಿರಬೇಕೇನೋ... ಅಷ್ಟರಲ್ಲಿ ಒಳಗಿನಿಂದ ಪೀಸಿ ಬಂದು ಇನ್‌ಸ್ಪೆಕ್ಟರನ್ನು ಕೂಗಿ ‘ಸಾರ್...ಕಂಟ್ರೋಲ್ ರೂಮಿಂದ ಫೋನು...’ ಎಂದು ಅವಸರ ಪಡಿಸಿದ.

ಇನ್‌ಸ್ಪೆಕ್ಟರ್ ರವಿ ಕಡೆ ಸ್ವಲ್ಪ ಅಸಮಾಧಾನದಿಂದಲೇ ನೋಡುತ್ತಾ ಒಳಗೆ ಹೋದರು. ಮ್ಯಾನೇಜರು ರವಿಗೆ ‘ಲೆಟ್ಸ್ ಗೋ’ ಎಂದು ಧಾವಂತದಿಂದ ಕಾರಿನತ್ತ ನಡೆಸಿದರು.

ರವಿ ಕಾರಿನ ಹತ್ತಿರ ಅತ್ತಿತ್ತ ನೋಡಿದ. ಕವಿತಾ ಮದನ ಇಬ್ಬರೂ ಕಾಣಲಿಲ್ಲ. ‘ಇಬ್ರೂ ಕಾಣ್ತಿಲ್ಲ. ಇಲ್ಲೇ ಎಲ್ಲಾದ್ರೂ ನಿಂತಿರಬೋದು. ಒಂದೈದು ನಿಮಿಷ ಕಾಯೋಣ ಸರ್’ ಎಂದ. ಆದರೆ ಮ್ಯಾನೇಜರು ಖಡಾಖಂಡಿತವಾಗಿ ಸ್ಟೇಷನ್ನಿನ ಹತ್ತಿರ ನಿಲ್ಲುವುದಕ್ಕೆ ವಿರೋಧ ವ್ಯಕ್ತಪಡಿಸಿದರು.

‘ರೀ...ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದೀರಿ. ಇಲ್ಲಿಗೆ ಬರೋಕೆ ಹೆದರ್ತಾ ಇದ್ರಿ. ಈಗ ನೋಡಿದ್ರೆ ಸ್ಟೇಷನ್ನಿನ ಹತ್ತಿರ ನಿಂತು ಕಾಯ್ತೀನಿ ಅಂತೀರಲ್ರೀ? ಇಲ್ಲಿಂದ ಮೊದಲು ಜಾಗ ಖಾಲಿ ಮಾಡೋಣ ನಡೀರಿ...’
‘ಅಲ್ಲ ಸರ್... ಕವಿತಾ, ಮದನ ಇಲ್ಲಿ ಕಾಣ್ತಿಲ್ಲ...’
‘ಅವರೇನು ಚಿಕ್ಕ ಹುಡುಗರೇನ್ರಿ? ಅವರೂ ಇಲ್ಲೇ ಎಲ್ಲೋ ನಿಂತಿರಬಹುದು. ಕಾರು ಇಲ್ ಕಾಣ್ಲಿಲ್ಲ ಅಂದ್ರೆ ಮನೆಗೆ ಬಂದೇ ಬರ್ತಾರೆ... ಸುಮ್ಮನೆ ನಡೀರಿ ನೀವು. ಇಲ್ಲಿ ನಿಂತ್ಕೊಂಡಷ್ಟೂ ಹೊತ್ತು ಡೇಂಜರ್ರು’
ಹೆಚ್ಚು ವಾದ ಮಾಡಲಾಗದೆ ರವೀಂದ್ರ ಕಾರು ಸ್ಟಾರ್ಟ್ ಮಾಡಿ ಮನೆ ಕಡೆಗೆ ಓಡಿಸಿದ. ಮ್ಯಾನೇಜರೇ ಮುಂದುವರೆದು ಮಾತನಾಡಿದರು. ‘ಇನ್‌ಸ್ಪೆಕ್ಟರ್ ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯವನ್ನೇನೂ ಹೊಂದಿಲ್ಲ. ಸೋ ಈಗ ಇದನ್ನೆಲ್ಲಾ ಮರೆತು ಆರಾಮಾಗಿರಿ’
ರವಿಗೆ ತಬ್ಬಿಬ್ಬಾಯಿತು. ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದೂ ಅಲ್ಲದೆ ಕವಿತಾನ್ನ ಸ್ಟೇಷನ್ನಿಗೆ ಕರೆದುಕೊಂಡು ಬಾ ಅಂತ ಗಲೀಜಾಗಿ ಮಾತನಾಡಿ ಹೇಳಿದ್ದ ಆ ಮನುಷ್ಯನಿಗೆ ತನ್ನ ಬಗ್ಗೆ ತಪ್ಪು ಅಭಿಪ್ರಾಯವಿಲ್ಲ ಅಂದರೆ ನಂಬುವುದಾದರೂ ಹೇಗೆ?
ತನಗನ್ನಿಸಿದ್ದನ್ನ ಮ್ಯಾನೇಜರಿಗೆ ಹೇಳಿದ. ಅದಕ್ಕೆ ಪ್ರತಿಯಾಗಿ ಮ್ಯಾನೇಜರು ಜೋರಾಗಿ ನಕ್ಕುಬಿಟ್ಟರು. ‘ಎಲ್ಲಾ ವೃತ್ತಿಗೂ ಒಂದೊಂದು ಭಾಷೆ ಅಂತ ಇರುತ್ತೆ. ಕೆಲವೊಮ್ಮೆ ಹಾಗೆ ಮಾತನಾಡುವುದು ಅನಿವಾರ್ಯ ಕೂಡ ಆಗುತ್ತೆ. ಹಾಗಂತ ನಿಮ್ಮ ಬಗ್ಗೆ ಕೇಸ್ ಬಿಲ್ಡ್ ಮಾಡ್ತಾರೆ ಅಂತ ಅಂದ್ಕೋಬೇಡಿ.

ನೀವು ಕ್ರಿಮಿನಲ್ ಆಗುವ ಲಕ್ಷಣ ತೋರಿಸದ ಹೊರತು ನಿಮ್ಮ ಬಗ್ಗೆ, ನಿಮ್ಮ ಥರದ ಭಯ-ಭಕ್ತಿಯುಳ್ಳ ಮಧ್ಯಮ ವರ್ಗದ ಜನರ ಬಗ್ಗೆ ಪೊಲೀಸರು ಆಸಕ್ತಿ ಉಳಿಸಿಕೊಳ್ಳೋದೇ ಇಲ್ಲ. ಅದು ಅವರಿಗೆ ವೇಸ್ಟ್ ಆಫ್ ಟೈಂ. ಬದಲಿಗೆ ಯಾರೋ ರೌಡಿ ಶೀಟರನ್ನೋ, ತಮಗೆ ಮಾಹಿತಿದಾರರನ್ನೋ ಮಾತನಾಡಿಸಿ ತಮ್ಮ ಕೆಲಸ ಸುಲಭವಾಗಿ ನಿಭಾಯಿಸಲು ಆಗುವಂತೆ ಮಾಡಿಕೊಳ್ಳುವುದು ಅವರ ಮುಖ್ಯ ಉದ್ದೇಶ. ಹಾಗಾಗಿ ಅವರು ನಿಮ್ಮ ಮೇಲೆ ಕಣ್ಣಿಡುವುದಾಗಲೀ, ನಿಮಗೆ ತೊಂದರೆ ಕೊಡುವುದಾಗಲೀ ಮಾಡಲ್ಲ. ಆರಾಮಾಗಿರಿ..’ ಎಂದರು.

ರವಿಗೆ ನೆತ್ತಿಗೇರಿದ್ದ ಉಸಿರು ಇಳಿದು ಸರಾಗವಾಗಿ ಶ್ವಾಸಕೋಶದಲ್ಲಿ ಸಂಚಾರಮಾಡತೊಡಗಿ ಪ್ರಾಣಕ್ಕೆ ವಾಯು ಸೇರಿಕೊಂಡಂತಾಯಿತು. ಮ್ಯಾನೇಜರು ಎಲ್ಲಾ ವಿಷಯವನ್ನೂ ಬಿಡಿಸಿ ಹೇಳಿದರು. ಅದರ ಒಟ್ಟೂ ಸಾರಾಂಶ ಇದ್ದದ್ದು ಇಷ್ಟು. ರವಿಯ ಮನೆಯಲ್ಲಿ ಡ್ರಗ್ಸ್ ಸಿಕ್ಕಿರಲಿಲ್ಲ. ಆದರೆ ನಾಲ್ಕು ಜನ ಹುಡುಗರಿರುವ ಮನೆಯಲ್ಲು ಸಾಮಾನ್ಯವಾಗಿ ಕಾಣಬಲ್ಲ ‘ಅಪರಾಧ’ಗಳನ್ನು ಊಹಿಸುತ್ತಾ ಪೊಲೀಸರು ಹಾಗೆ ಹೇಳಿದ್ದರು. ಹಾಗೇನಾದ್ರೂ ಇದ್ದರೆ ಹುಡುಗರೇ ಬಾಯಿ ಬಿಡಲಿ ಅಂತ.

‘ಸಾರ್... ಹೀಗೆ ಮಾಡೋದು ತಪ್ಪಲ್ವಾ? ನನಗೆ ಎಷ್ಟು ಹೆದ್ರಿಕೆ ಆಗಿತ್ತು ಸರ್! ನಮ್ಮ ಹುಡುಗರ ಮೇಲೇ ಡ್ರಗ್ಸ್ ತಗೋತಾ ಇದ್ದಾರ ಅಂತ ಅನುಮಾನ ಬಂದುಬಿಟ್ಟಿತ್ತು. ಬಟ್ಟೆ ಅಂಗಡೀಲಿ ಸುಮ್ಮನೆ ಹಾವು ಬಿಟ್ಟು ಆಟ ನೋಡಿದ್ರು ಅಂತ ನಮ್ಮ ಕಡೆ ಗಾದೆ ಇದೆ. ಹಾಗಾಯ್ತು ಇವರು ಮಾಡಿದ್ದು...’ ಅಂತ ರವಿ ಆ ದಿನಗಳಲ್ಲಿ ತಾನು ಅನುಭವಿಸಿದ ಮಾನಸಿಕ ವ್ಯವಕಲನವನ್ನು ನೆನೆಸಿಕೊಂಡು, ಮರು ಅನುಭವಿಸಿ ಮತ್ತೆ ಹೊಸದಾಗಿ ವ್ಯಾಕುಲಗೊಂಡ.

‘ಹಾಗಲ್ಲ ರೀ ಡ್ರಗ್ಸ್ ಬಗ್ಗೆ ಮಾಹಿತಿ ಕೊಡೋರು ಯಾರು ಗೊತ್ತಾ? ಮಾರೋವ್ರಲ್ಲ, ಬದಲಿಗೆ ಕೊಂಡುಕೊಳ್ಳೋರು. ಕೊಳ್ಳೋರಿಗೆ ಡ್ರಗ್ಸು ಎಲ್ಲೆಲ್ಲಿ ಸಿಗುತ್ತೆ, ಎಷ್ಟಕ್ಕೆ ಸಿಗುತ್ತೆ ಹೀಗೆ ಸಾವಿರ ಥರದ ಮಾಹಿತಿ ಇರುತ್ತೆ. ಮಾರೋವ್ರನ್ನ ಒಮ್ಮೆ ಹಿಡಿದ್ರೆ ಪೊಲೀಸರ ಕೆಲಸ ಮುಗಿದು ಹೋಗಲಿಲ್ಲ. ಬದಲಿಗೆ ಈ ಜಾಲ ಎಲ್ಲೆಲ್ಲಿ ಹರಡಿದೆ ಅಂತ ಒಂದು ಸಾವಿರ ಆಯಾಮಗಳುಳ್ಳ ಹೊಸ ಸಮಸ್ಯೆ ಸೃಷ್ಟಿಯಾಗುತ್ತೆ. ಅದನ್ನು ಪರಿಹರಿಸೋಕೆ ಹಗಲೂ ರಾತ್ರಿ ದುಡೀಬೇಕು.

ಇಂಥವೇ ಬೇಕಾದಷ್ಟು ಕೆಲಸ ಅವರಿಗೆ ಇರುತ್ತೆ. ಸೋ ವರಿ ಮಾಡ್ಕೋಬೇಡಿ. ನೀವು ಈಗ ಕ್ಲೋಸ್ಡ್ ಕೇಸ್’ ಎನ್ನುತ್ತಾ ರವಿಗೆ ಸಮಾಧಾನ ಹೇಳಿದರು.
ಸದ್ಯ ತನ್ನ ತಂದೆಯ ಕಪಿಮುಷ್ಟಿಗೆ ಒಳಪಡುವ ಸಂದರ್ಭ ಬರಲಿಲ್ಲವಲ್ಲ ಅಂತ ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತಾ ಮನೆಗೆ ಬಂದ. ಅಲ್ಲಿ ಬಂದು ನೋಡಿದರೆ ಏನಿತ್ತು? ಕವಿತಾ ಮತ್ತು ಮದನ ಮನೆಯಲ್ಲಿ ಆರಾಮಾಗಿ ಟೀವಿಯಲ್ಲಿ ಬರುತ್ತಿದ್ದ ಪಿಚ್ಚರ್ ನೋಡುತ್ತಾ ಕುಳಿತಿದ್ದರು.

ಅದನ್ನು ನೋಡಿದ ರವಿಗೆ ಸಿಟ್ಟು ಮತ್ತು ಮೆಚ್ಚುಗೆ ಏಕ ಕಾಲಕ್ಕೆ ಉಂಟಾಯಿತು. ಸಿಟ್ಟು ಏಕೆಂದರೆ ತಾನು ಅಲ್ಲಿ ಇವರಿಗೋಸ್ಕರ ಒದ್ದಾಡುತ್ತಾ ನಿಂತಿದ್ದರೆ ಆಗಲೇ ಮನೆ ಸೇರಿಕೊಂಡಿದ್ದಾರೆ ಎನ್ನುವ ವಿಷಯಕ್ಕೆ. ಮೆಚ್ಚುಗೆ ಉಂಟಾದದ್ದೂ ಅದೇ ಮಾತಿಗೇನೇ! ಒಂದೇ ವಿಷಯದ ಬಗ್ಗೆ ಹೀಗೆ ಎರಡು ವ್ಯತಿರಿಕ್ತ ಭಾವನೆ ಇರಲು ಹೇಗೆ ಸಾಧ್ಯ ಅಂತ ನೀವು ಕೇಳಿದರೆ ನಿಮ್ಮನ್ನು ನಾವು ಒಂದು ಮಾತು ಕೇಳಬೇಕಾದೀತು. ಪ್ರೀತಿ ಇರೋ ಕಡೆ ಜಗಳನೂ ಇರುತ್ತೆ ಅಂತ ನಂಬೋದಾದರೆ ಸಿಟ್ಟು ಮತ್ತು ಮೆಚ್ಚುಗೆ ಒಂದೇ ಕಡೆ ಇರುತ್ತೆ ಅಂತ ನಂಬೋಕೆ ಯಾಕೆ ಕಷ್ಟ?

ಕವಿತಾ ಇವನ ಅವಸ್ಥೆ ಕಂಡು ನಗುವನ್ನು ಒಳಗೇ ಹತ್ತಿಕ್ಕಲು ಪ್ರಯತ್ನ ಪಡುತ್ತಿದ್ದಳು. ಅದನ್ನು ನೋಡಿ ರವಿಗೆ ಆಲ್ ಮೋಸ್ಟ್ ರೇಗಿ ಹೋಯಿತು. ತನ್ನ ಅಸಹಾಯಕತೆ ಇವಳಿಗೆ ಜೋಕ್ ಆಗಿ ಕಾಣುತ್ತಿದೆಯಲ್ಲಾ ಅಂತ ಅನ್ನಿಸಿ ತನ್ನೊಳಗೆ ಶಿಕ್ಷಣ ಎನ್ನುವ ಸಂಸ್ಕಾರ ಇಲ್ಲದಿದ್ದರೆ ಇವಳನ್ನು ಒದ್ದು ಸಿಟ್ಟು ತೀರಿಸಿಕೊಳ್ಳಬಹುದಿತ್ತು ಅಂತ ಅನ್ನಿಸಿ ಹಣೆ ಗಟ್ಟಿಸಿಕೊಂಡ.

ಮದನ ಕೂಡ ಕವಿತಾ ಜೊತೆ ಸೇರಿ ನಗಲು ತೊಡಗಿದ. ಆ ನಗು ಎಷ್ಟು ಸಹಜವಾಗಿತ್ತು ಎಂದರೆ ರವಿಗೂ ಅವರಿಬ್ಬರ ಜೊತೆ ಸೇರಿ ನಗದೆ ಇರಲು ಸಾಧ್ಯವೇ ಇರಲಿಲ್ಲ. ರವಿ ಆಗ ನಿಜವಾಗಿ ನಿರಾಳ ನಗೆ ನಕ್ಕ. ಹೊಟ್ಟೆಯಿಂದ ಗಾಳಿಯ ಸಣ್ಣ ಗುಬ್ಬರದಂತೆ ಗುಳುಗುಳು ಎನ್ನುತ್ತಾ ಶುರುವಾದ ಆ ನಗು ನೀಳವಾದ ಶ್ವಾಸನಾಳದಲ್ಲಿ ಸಂಚರಿಸಿ ವಿಲೋಮ ಮಾರ್ಗವಾಗಿ ಬಂದು ಕೆನ್ನೆಗಳನ್ನು ಅಗಲಿಸಿ, ಕಣ್ಣುಗಳನ್ನು ಕಿರಿದು ಮಾಡಿಸಿ, ಕಪ್ಪು ಗುಡ್ಡೆಗಳಲ್ಲಿ ನಕ್ಷತ್ರ ಸ್ಥಾಪಿಸಿ, ಹುಬ್ಬುಗಳನ್ನು ಹತ್ತಿರ ಸೇರಿಸಿ, ಕಿವಿ ಬೆಚ್ಚಗಾಗಿಸಿ ಹಣೆ ಸಂಕುಚಿತಗೊಳಿಸಿ ‘ಹಹಹಹಹಹ....’ ಎನ್ನುವ ಶಬ್ದವಾಗಿ ಮಾರ್ಪಾಡಾಗಿ ಗಾಳಿ ತುಂಬಿದ ವಾತಾವರಣಕ್ಕೆ ಹೊಸ ಉಲ್ಲಾಸ ತುಂಬಿಸಿ ಬಣ್ಣವನ್ನೇ ಬದಲಿ ಮಾಡಿಬಿಟ್ಟಿತು. ನಗು ನಿಲ್ಲುವ ಹೊತ್ತಿಗೆ ಮನಸ್ಸಿನ ಭಾರ ಕಳೆದು ಹೊಸ ಪ್ರಶ್ನೆಗಳು ಮೂಡಿದ್ದವು.

‘ಅಲ್ಲಿಂದ ಯಾವಾಗ ಬಂದ್ರಿ ನೀವು? ಹೇಗೆ ಬಂದ್ರಿ?’
‘ಆಟೊದಲ್ಲಿ ಬಂದ್ವಿ. ಅಲ್ಲಿಂದ ಹೊರಗೆ ಬಂದ ತಕ್ಷಣ ಅಲ್ಲೆಲ್ಲೂ ನಿಲ್ಲೋದು ಬ್ಯಾಡ ಅಂತ ಕವಿತಾ ಹೇಳಿದ್ಲು. ಸುಮ್ಮನೆ ಹೊರಟು ಬಿಟ್ಟೆವು. ನೀವು ಕಾದಿರೇನು?’
‘ಇಲ್ಲ. ಮ್ಯಾನೇಜರು ಅಲ್ಲಿ ನಿಲ್ಲೋದು ಬೇಡ ಅಂದ್ರು. ನಾವೂ ತಕ್ಷಣ ಹೊರಟೆವು...’

‘ಒಳ್ಳೆಯದಾಯ್ತು. ಅಸ್ಪತ್ರೆ ಒಳಗೆ, ಪೊಲೀಸ್ ಸ್ಟೇಷನ್ ಹೊರಗೆ ಸುಮ್ ಸುಮ್ನೆ ನಿಲ್ಲಬಾರದಂತೆ. ನಿಂತರೆ ಬರಬಾರದ ಕಷ್ಟ ಬರುತ್ತಂತೆ. ಹಂಗಂತ ದೊಡ್ಡೋರು ಹೇಳಿದಾರೆ...’ ಮದನ್ ಹೇಳಿದ.
‘ಯಾವ್ ದೊಡ್ಡೋರು?’
‘ಗಾದೆ ಇದೆಯಪ್ಪ ನಮ್ಮೂರ್ ಕಡೆ’

‘ಮುಚ್ಚೋ ಬಾಯಿ. ಗಾದೆ ಆಗೋ ಕಾಲಕ್ಕೆ ಆಸ್ಪತ್ರೆನೂ ಇರಲಿಲ್ಲ, ಪೊಲೀಸ್ ಸ್ಟೇಷನ್ನೂ ಇರಲಿಲ್ಲ. ಸುಮ್ನೆ ಹೇಳ್ತಾನೆ’
‘ಅವನು ಹೇಳಿದ ಮಾತು ಸರಿ ಇದೆ ಅಂದಮೇಲೆ ಅದನ್ನ ಒಪ್ಪಿಕೋಬಾರದೇಕೆ? ಜ್ಞಾನ ಅಂದ್ರೆ ಹಳೇ ತೀರ್ಥವೇ ಆಗಬೇಕೇನು? ಈವತ್ತು ಇರೋ ಎಷ್ಟೋ ವಿಷಯಗಳು ಹಿಂದೆ ಇರಲಿಲ್ಲ. ಹಾಗಂತ ಹೊಸ ಜ್ಞಾನ ಹುಟ್ಟೋದೇ ಇಲ್ಲವೇನು? ಎಲ್ಲವನ್ನೂ ಪುರಾಣ ಪುಣ್ಯಕಥೆ, ಮಹಾಭಾರತ, ರಾಮಾಯಣಕ್ಕೇ ಲಿಂಕ್ ಮಾಡಿ ನೋಡ್ಕೋಬೇಕೇನು?’ ಕವಿತಾ ರವೀಂದ್ರನ ಧೋರಣೆಯನ್ನು ಸಿಕ್ಕಾಪಟ್ಟೆ ಮೆಲೋಡ್ರಮಾಟಿಕ್ ಆಗಿ ಪ್ರಶ್ನಿಸಿದಳು.

‘ನೀನು ಸುಮ್ನೆ ಇರು. ಪೊಲೀಸ್ನೋನ ಹತ್ತಿರ ಸಿಕ್ಕಿಕೊಂಡಿದ್ರೆ ನಿನಗೆ ಗೊತ್ತಾಗ್ತಾ ಇತ್ತು,’ ರವೀಂದ್ರ ಅವಳನ್ನು ಅಲ್ಲಗಳೆದ.
‘ಅಯ್ಯೋ ಕಂಡಿದೀನಿ ಕಣೋ. ಪೊಲೀಸ್ನೋರ ಹತ್ತಿರ ನಾನು ಸಾವಿರ ಸಾರಿ ಮಾತಾಡಿದೀನಿ. ಅವರ ಹತ್ತಿರ ಹೆಂಗೆ ಮಾತಾಡಬೇಕು ಅಂತ ನನಗೆ ಗೊತ್ತು’
‘ಅಹ! ಹೌದಾ? ಹಾಗಾದ್ರೆ ಇನ್‌ಡೀಸೆಂಟ್ ಪ್ರಶ್ನೆ ಕೇಳಿದ್ರೆ ಏನು ಹೇಳ್ತಿದ್ದೆ?’
‘ಏನು ಇನ್‌ಡೀಸೆಂಟ್ ಪ್ರಶ್ನೆ ಅಂದ್ರೆ?’
‘ನಿನ್ನ ಚಡ್ಡಿ ಬ್ರಾ ಆ ಮನೇಲಿ ಯಾಕೆ ಇತ್ತು ಅಂತ ಕೇಳಿದ್ರೆ?’
‘ಅಯ್ಯೋ ಅದಾ? ಮೊನ್ನೆ ಅಲ್ಲೇ ಸ್ನಾನ ಮಾಡಿ ಏರ್ ಪೋರ್ಟಿಗೆ ಹೋದೆ ಸರ್. ಹಾಗಾಗಿ ಬಟ್ಟೆ ಅಲ್ಲೇ ಇದ್ವು. ಇವರೆಲ್ಲ ನನಗೆ ತಮ್ಮಂದಿರ ಥರಾ ಅಂತ ಹೇಳ್ತಿದ್ದೆ’
‘ಥೂ ಬಾಯ್‌ಫ್ರೆಂಡನ್ನ ‘ತಮ್ಮ’ ಅನ್ನೋಕೆ ನಾಚಿಕೆ ಆಗಲ್ವಾ ನಿಂಗೆ?’
‘ತಮ್ಮ ಅಂತ ಹೇಳಿದ ತಕ್ಷಣ ತಮ್ಮ ಆಗ್ಬಿಡ್ತೀಯಾ ನೀನು? ಇನ್‌ಸ್ಪೆಕ್ಟರು ಹಾಗೆ ಪ್ರಶ್ನೆ ಕೇಳಿದ್ರೆ ನಾನೂ ಅದೇ ಥರ ಉತ್ತರ ಕೊಡಬೇಕಾಗುತ್ತೆ...’
‘ತಪ್ಪಿಸಿಕೊಳ್ಳೋಕೆ ಏನ್ ಬೇಕಾದ್ರೂ ಮಾಡ್ತೀಯಾ ಹಂಗಾರೆ? ಎಂಥಾ ಸುಳ್ಳು ಬೇಕಾದ್ರೂ ಹೇಳ್ತೀಯಾ??’ ರವಿ ಅವಳ ಚಾಕಚಕ್ಯತೆಗೆ ಬೆರಗಾಗಿ ಪ್ರಶ್ನೆ ಮಾಡಿದ.

‘ಇನ್‌ಸ್ಪೆಕ್ಟರ ಹತ್ತಿರ ಸತ್ಯ ಹೇಳಲೇಬೇಕು ಅನ್ನಕ್ಕೆ ಅವರೇನು ನನ್ನ ಸಂಬಂಧಿ ಅಲ್ಲ. ಅಲ್ಲದೆ ನಾನು ಹೇಳ್ತಾ ಇರೋ ಮಾತು ಸುಳ್ಳು ಅಥವಾ ಸತ್ಯ ಅನ್ನೋದು ತಗೊಂಡು ಅವರಿಗೆ ಏನೂ ಆಗಬೇಕಿಲ್ಲ. ನನ್ನಿಂದ ಯಾವುದೇ ಇಲ್ಲೀಗಲ್ (ಕಾನೂನು ಬಾಹಿರ) ಕೃತ್ಯ ಆಗದೇ ಹೋದರೆ ಸಾಕು ಅಷ್ಟೆ...’
‘ಹೌದಲ್ವಾ? ಆದರೂ... ತಮ್ಮ ಅಂತ ಹೇಳೋಕೆ ಮನಸ್ಸು ಹೇಗೆ ಒಪ್ಪುತ್ತೆ?’

‘ಎರಡು ಅಪ್ರೋಚ್ ಇದೆ ಕಣೋ. ಯಾವುದು ಅನೈತಿಕವೋ ಅದು ಅಪರಾಧವಲ್ಲದೇ ಹೋಗಬಹುದು. ಯಾವುದು ಅಪರಾಧವೋ ಅದು ಅನೈತಿಕವಲ್ಲದೇ ಹೋಗಬಹುದು. ಸ್ವಲ್ಪ ಯೋಚಿಸಿ ನೋಡು’
‘ಫಾರ್ ಎಕ್ಸಾಂಪಲ್?’
‘ನಾನು ನೀನು ಒಟ್ಟಿಗಿರುವುದು ಅನೈತಿಕವಾಗಿ ಕಾಣಬಹುದು. ಆದರೆ ಅದು ಅಪರಾಧ ಅಲ್ಲ. ಇನ್ನೊಂದು ಕಡೆಯಿಂದ, ಉದಾಹರಣೆ ಹೇಳಬೇಕು ಅಂದರೆ ತನಗೆ ಸಂಬಳ ಕೊಡದೆ ಮೋಸ ಮಾಡಿದ ಸಾಹುಕಾರನನ್ನು ಒಬ್ಬ ಹೊಡೆದರೆ ಅದು ಸಮಾಜದ ಕಣ್ಣಲ್ಲಿ ಅನೈತಿಕ ಅಲ್ಲ, ಆದರೆ ಕಾನೂನಿನ ಕಣ್ಣಲ್ಲಿ ಅಪರಾಧ. ಈ ಥರದ ವೈಪರೀತ್ಯಗಳು ಬಹಳ ಇವೆ. ಇವೆಲ್ಲವನ್ನೂ ಇನ್‌ಸ್ಪೆಕ್ಟರ ಹತ್ತಿರ ಸಾಧಿಸುತ್ತಾ ಕೂರೋಕೆ ಸಾಧ್ಯವಿಲ್ಲ. ಬಂದಿರೋ ಕಷ್ಟ ಪರಿಹಾರವಾಗಬೇಕು ಅಷ್ಟೆ’

‘ಸತ್ಯ ಹೇಳದಿದ್ದರೆ ತೊಂದರೆ ಜಾಸ್ತಿಯಾಗಲ್ವೇನೆ?’
‘ಯಾವ ಸತ್ಯ? ನಮ್ಮ ಬಗೆಗಿನ ಎಲ್ಲಾ ಸತ್ಯವನ್ನೂ ಇನ್ನೊಬ್ಬರ ತಲೆಗೆ ಕಟ್ಟೋಕ್ಕಾಗತ್ತೇನು? ಅವರಿಗೇನು ಕಾಟ ಎಲ್ಲವನ್ನೂ ಸಹಿಸಿಕೊಳ್ಳಕ್ಕೆ? ಇನ್‌ಸ್ಪೆಕ್ಟರಿಗೆ ಏನು ಬೇಕು? ತಮ್ಮ ಮುಂದಿರುವ ಪ್ರಶ್ನೆಗೆ ಸಮಾಧಾನಕರ ಉತ್ತರ ಬೇಕು. ನಮ್ಮಿಂದ ಕಾಂಪ್ಲಿಕೇಷನ್ಸ್ ಆಗಲ್ಲ ಎನ್ನುವ ಭರವಸೆ ಬೇಕು.

ಇಷ್ಟು ಸಿಂಪಲ್ ವಿಷಯ ಅರ್ಥವಾದರೆ ಎಲ್ಲರ ಹತ್ತಿರವೂ ಯಾವ್ಯಾವುದೋ ಕಂತೆ ಪುರಾಣ ಬಿಚ್ಚಿಕೊಂಡು ಕೂರೋದು ಅನವಶ್ಯಕ ಅಂತ ಗೊತ್ತಾಗುತ್ತೆ’
ರವಿಗೂ ಮದನನಿಗೂ ಕವಿತಾ ಆಧುನಿಕ ಪುರಾಣವೊಂದರ ಹರಿಕಾರ್ತಿಯಂತೆ ಕಾಣಿಸಿದಳು. ‘ಹೆಂಗಸರ ಬುದ್ಧಿ ಮೊಣಕಾಲ ಕೆಳಗೆ’ ಅಂತ ಹೇಳಿದವನಿಗೆ ನಡೆದು ನಡೆದು ಒರಟಾಗಿ ಹೋದ ಕಾಲುಗಳಿಗೆ ತಿಳಿಯುವ ಸತ್ಯದ ಅನುಭವವೇ ಬೇರೆ, ಗಾಳಿಯಲ್ಲಿ ತೇಲುವ ತಲೆಗೆ ರುಚಿಸುವ ತರ್ಕವೇ ಬೇರೆ ಎನ್ನುವುದು ಗೊತ್ತಾಗಿರಲಿಕ್ಕಿಲ್ಲ ಎನ್ನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT