ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇದೊಂದು ಅಂಗ ಇಲ್ಲದಿದ್ದರೆ ಅದೆಷ್ಟು ಚೆನ್ನ!

Last Updated 6 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ವರ್ಷಗಳ ಹಿಂದೆ, ರಾಜಧಾನಿ ದೆಹಲಿಯ ಪತ್ರಿಕೆಗಳು ಹತ್ತು– ಹದಿನೈದು ದಿನಗಳ ಕಾಲ ದಿನನಿತ್ಯ ಮಾಡಿದ ವರದಿಗಳು ಸಾಮೂಹಿಕ ಆತ್ಮಸಾಕ್ಷಿ ಸತ್ತಿದೆಯೇ ಅಥವಾ ಬದುಕಿದೆಯೇ ಎಂಬುದನ್ನು ಪರೀಕ್ಷೆಗೆ ಒಡ್ಡಿದ್ದವು. ಕೆಂಪುಕೋಟೆ, ಚಾಂದನಿ ಚೌಕವನ್ನು ಹೊಟ್ಟೆಯಲ್ಲಿ ಹೊತ್ತಿರುವ ಹಳೆಯ
ದೆಹಲಿಯ ದರಿಯಾಗಂಜ್ ಸೀಮೆಯಲ್ಲಿ ಆರ್ಯ ಅನಾಥಾಲಯ ಎಂಬ ಕೂಪದಲ್ಲಿ ನಡೆದ ಅನಾಚಾರಗಳು ಅವು.

ಅಸಹಾಯಕ ಮತ್ತು ಅಮಾಯಕ ಎಳೆಯ ಬಾಲೆಯರು ಮತ್ತು ಬಾಲಕರ ಮೇಲೆ ಜರುಗಿದ ಲೈಂಗಿಕ ಅತ್ಯಾಚಾರದ ವರದಿಗಳು. ವಾರ್ಡನ್‌ಗಳು, ಕಾವಲಿನವರು, ಎಲೆಕ್ಟ್ರಿಷಿಯನ್‌ಗಳು, ಗಂಡು ಸಹಪಾಠಿಗಳು, ಭೇಟಿಗೆಂದು ಬರುವವರು ಹಸಿ ಮಾಂಸದ ಮೇಲೆ ಹದ್ದಿನಂತೆ ಎರಗಿದ್ದರು.

ಆರ್ಯ ಅನಾಥಾಲಯದಲ್ಲಿ ಸಾವಿರ ಮಕ್ಕಳು. ಬಹುತೇಕರು ನಿಜ ಅರ್ಥದಲ್ಲಿ ಅನಾಥರಲ್ಲ. ಹೊತ್ತಿನ ಕೂಳಿಗಾಗಿ ಕಣ್ಣು, ಬಾಯಿ ಬಿಡಬೇಕಿರುವ ನಿರ್ಗತಿಕರ ಮಕ್ಕಳಿವು. ಉಂಡು, ಉಟ್ಟು ನಾಲ್ಕು ಅಕ್ಷರ ಕಲಿಯಲೆಂಬ ಹಂಬಲದಿಂದ ತಂದೆ ತಾಯಿಗಳೇ ಇಲ್ಲಿಗೆ ಸೇರಿಸಿರುವ ಹಸುಳೆಗಳು. ಮೂರು ತಿಂಗಳಿಗೊಮ್ಮೆ ಕಾವಲಿನವರ ಕಣ್ಗಾವಲಿನಲ್ಲಿ ಕೆಲವೇ ನಿಮಿಷಗಳ ಕಾಲ ಕರುಳ ಕುಡಿಗಳನ್ನು ಕಣ್ಣು ತುಂಬಿಸಿಕೊಂಡರೆ ಮುಗಿಯಿತು.

ನಂತರ ದರ ದರನೆ ಒಳಕ್ಕೆ ಎಳೆದೊಯ್ದರೆ ಮತ್ತೆ ಅದೇ ನರಕ. ಮುಚ್ಚಿದ ಕದಗಳ ಹಿಂದಿನ ವಿಕೃತ ಘೋರಗಳ ಸುಳಿವೂ ಹೊರ ಜಗತ್ತಿಗೆ ಸೋರುವುದು ದುಸ್ತರ. ಹತ್ತಾರು ವರ್ಷಗಳಿಗೊಮ್ಮೆ ಸ್ಫೋಟಿಸಿದಾಗ ತುಟಿ ಮೇಲಿನ ಅನುಕಂಪ ತೋರುವ ಸಜ್ಜನ ಸಮಾಜ ಮತ್ತೆ ನಿದ್ದೆಗೆ ಜಾರುವ ಪರಿಯಲ್ಲಿ ಯಾವ ಏರುಪೇರೂ ಇಲ್ಲ.

ಇಂತಹದೇ ವಿಕೃತಿಯ ಭಿನ್ನ ಚಹರೆಗಳು ನಮ್ಮ ನಡುವೆ ಅನಾವರಣ ಆಗುತ್ತಲೇ ಇರುತ್ತವೆ. ಹತ್ತು ವರ್ಷ ವಯಸ್ಸಿನ ಪುಟ್ಟ ಬಾಲೆಯ ಮೇಲೆ ಆಕೆಯ ತಾಯಿಯ ಸೋದರನೇ ಬಾರಿ ಬಾರಿ ಎರಗಿ ಉಲ್ಲಂಘಿಸಿದ ಘೋರವೊಂದು ಮೊನ್ನೆ ಮೊನ್ನೆ ಜರುಗಿದೆ.

ಮಗುವಾಗಿದ್ದಾಗಲೇ ತಾಯಿಯ ಒಜ್ಜೆ ಹೊತ್ತಿದೆ ಈ ಕಂದ. ಮೂವತ್ತೆರಡು ವಾರಗಳ ಗರ್ಭದ ಭಾರವನ್ನು ಈಕೆಯ ಪುಟ್ಟ ದೇಹ ಹೊರಲಾರದು ಎಂದಿದ್ದಾರೆ ವೈದ್ಯರು. ವೈದ್ಯಕೀಯ ಗರ್ಭಪಾತ ಕಾಯ್ದೆಯ ಪ್ರಕಾರ 20 ವಾರಗಳ ಮೀರಿದ ಗರ್ಭವನ್ನು ಕೆಡವುವುದು ನಿಷಿದ್ಧ.

ಗರ್ಭವನ್ನು ಇಳಿಸಲು ಸುಪ್ರೀಂ ಕೋರ್ಟ್ ಕೂಡ ಮೊನ್ನೆ ಮೊನ್ನೆ ಅನುಮತಿ ನಿರಾಕರಿಸಿತು. ಈಗಾಗಲೇ ಹೃದಯದಲ್ಲಿನ ರಂಧ್ರ ಮುಚ್ಚಲು ಶಸ್ತ್ರ ಚಿಕಿತ್ಸೆ ಪಡೆದಿದ್ದ ಮಗುವಿದು. ಗರ್ಭಪಾತದ ದೈಹಿಕ ಕ್ಲೇಶವನ್ನು ಸಹಿಸಲಾರದು ಎಂಬ ವೈದ್ಯಕೀಯ ಅಭಿಪ್ರಾಯವೇ ನ್ಯಾಯಾಲಯದ ನಿಲುವಿಗೆ ಕಾರಣ. ಬಡ ತಂದೆತಾಯಿ ದಿಕ್ಕೆಟ್ಟಿದ್ದಾರೆ. ಮಗುವಿಗೆ ತನಗೇನಾಗಿದೆ ಎಂದೂ ತಿಳಿಯದು. ‘ನಮ್ಮ ಪಡಿಪಾಟಲು ಸಾರ್ವಜನಿಕ ಸುದ್ದಿಯಾಗಿ ಹೋಗಿದೆ... ನಮಗೆ ಇದೆಲ್ಲ ಬೇಕಿರಲಿಲ್ಲ. ನಮಗೆ ಯಾರ ನೆರವೂ ಬೇಡ’ ಎಂದು ಕಣ್ಣೀರು ತುಂಬಿ ನೋವು ತುಳುಕಿಸಿದೆ ತಾಯಿ ಜೀವ.

ಗರ್ಭ ಧರಿಸಿದಂದಿನಿಂದ ಹೆರಿಗೆಯವರೆಗಿನ ಸರಾಸರಿ ಅವಧಿ 40 ವಾರಗಳು. ಇನ್ನೂ ಎಂಟು ವಾರಗಳ ಕಾಲ ಗರ್ಭ ಹೊರುವ ಶಕ್ತಿ ಈ ಕಂದನಿಗೆ ಇಲ್ಲ. ಅವಧಿಗೆ ಮುನ್ನವೇ ಹೆರಿಗೆ ಮಾಡಿಸಬೇಕು. ಆ ಹೆರಿಗೆ ಕೂಡ ಸುರಕ್ಷಿತ ಅಲ್ಲ. ಅಂಧ ಕಾನೂನಿನ ಮುಂದೆ, ಮಾನವ ವಿಕೃತಿಗಳ ಮುಂದೆ ಅಸಹಾಯಕ ಕಂದ ಮತ್ತು ಕಂಗಾಲಾದ ತಂದೆ ತಾಯಿಗಳು.

ಮಗುವಿನ ಗರ್ಭದಲ್ಲಿ ಬೆಳೆಯುತ್ತಿರುವ ಭ್ರೂಣಕ್ಕೂ ಜೀವಿಸುವ ಹಕ್ಕು ಉಂಟು. ಹೀಗಾಗಿ ಈ ಭ್ರೂಣವನ್ನು ಮಗುವಾಗಿಸಿ ಹೆರಬೇಕು ಎಂಬುದು ಕ್ರೂರ ವಾದ. ಗರ್ಭ ಧರಿಸಿರುವ ಮಗ ಲೈಂಗಿಕ ಹಿಂಸೆಯ ಬಲಿಪಶು. ಈ ಹಿಂಸೆಯ ಮನೋ-ದೈಹಿಕ ಗಾಯಗಳನ್ನೂ ವೈದ್ಯಕೀಯವಾಗಿ ವಾಸಿ ಮಾಡಬೇಕಿದೆ. ಈ ಸ್ಥಿತಿಯಲ್ಲಿ ಅತ್ಯಾಚಾರದ ಫಲವಾದ ಗರ್ಭವನ್ನು ಇಳಿಸದೆ ಹೊತ್ತು ನಡೆಯಬೇಕೆಂಬ ತೀರ್ಪು ಈ ಗಾಯಗಳನ್ನು ವಾಸಿ ಮಾಡಲು ನೆರವಾಗುವುದಿಲ್ಲ ಎನ್ನುತ್ತಾರೆ ತಜ್ಞರು.

ಯಾರೋ ಮಾಡಿದ ತಪ್ಪಿಗೆ ತಾನು ಬದುಕಿನುದ್ದಕ್ಕೂ ನವೆಯಬೇಕು. ಅತ್ಯಾಚಾರದ ಕ್ಲೇಶದ ಫಲವನ್ನು ಕಣ್ಣೆದುರಿಗೆ ಇರಿಸಿಕೊಂಡೇ ನೀಗಬೇಕಾದ ಕ್ರೂರ ಶಿಕ್ಷೆ. ಇಂತಹ ಘಟನೆ ಇದೇ ಮೊದಲಲ್ಲ, ಕೊನೆಯದೂ ಅಲ್ಲ. ವರ್ಷವೊಂದಕ್ಕೆ ಅರವತ್ತು ಲಕ್ಷ ಗರ್ಭಪಾತಗಳು ನಡೆಯುತ್ತಿದ್ದು, ಅವುಗಳಲ್ಲಿ ಬಹುತೇಕ ತಾಯಿಯ ಜೀವಕ್ಕೆ ಎರವಾಗುತ್ತಿವೆ ಎಂಬ ಮಾತನ್ನು ಅಬಾರ್ಷನ್ ಅಸೆಸ್ಮೆಂಟ್ ಪ್ರಾಜೆಕ್ಟ್- ಇಂಡಿಯಾ ಈ ಹಿಂದೆಯೇ ಹೇಳಿತ್ತು.

ಪ್ರಸೂತಿ ವೈದ್ಯಕೀಯವಿಜ್ಞಾನ ಇದೀಗ ಬಹಳಷ್ಟು ಮುಂದುವರೆದಿದೆ. ಹೆಣ್ಣು ಭ್ರೂಣಗಳ ಹತ್ಯೆಯನ್ನು ತಡೆಯಲೆಂದು ನಲವತ್ತು ವರ್ಷಗಳ ಹಿಂದೆ 1971ರಲ್ಲಿ ರೂಪಿಸಿದ್ದ ಕಾಯ್ದೆಗೆ ತಿದ್ದುಪಡಿ ತರುವ ಜರೂರು ಅಗತ್ಯವಿದೆ. ಬೇಡದ ಗರ್ಭವನ್ನು ಇಳಿಸಿಕೊಳ್ಳುವ ಸ್ವಾತಂತ್ರ್ಯ ಮಹಿಳೆಗೆ 20 ವಾರಗಳ ನಂತರವೂ ಇರಬೇಕು ಎನ್ನುವ ವಾದ ಗಟ್ಟಿಯಾಗುತ್ತಿದೆ. ಸರ್ಕಾರ ಮತ್ತು ನೀತಿ ನಿರ್ಧಾರ ನಿರೂಪಕರು ಕಣ್ಣು ತೆರೆಯಬೇಕು.

ಭಾರತದಲ್ಲಿ ಪ್ರತಿ ಎರಡೂವರೆ ತಾಸಿಗೆ ಹದಿನಾರು ವರ್ಷದ ಒಳಗಿನ ಒಬ್ಬ ಪುಟ್ಟ ಪೋರಿಯ ಮೇಲೆ ಅತ್ಯಾಚಾರ ನಡೆಯುತ್ತಿದೆ. ಪ್ರತಿ 13 ತಾಸುಗಳಲ್ಲಿ ಹತ್ತು ವರ್ಷಗಳ ಒಳಗಿನ ಹೆಣ್ಣುಮಗುವೊಂದು ಅತ್ಯಾಚಾರಕ್ಕೆ ಬಲಿಯಾಗುತ್ತಿದೆ. 2015ರಲ್ಲಿ ಹತ್ತು ಸಾವಿರ ಪುಟ್ಟ ಹೆಣ್ಣುಮಕ್ಕಳು ಅತ್ಯಾಚಾರಕ್ಕೆ ಗುರಿಯಾದರು.

ಹದಿನೆಂಟು ತುಂಬುವ ಮೊದಲೇ ಮದುವೆ ಮಾಡಲಾದ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚು ಕಡಿಮೆ ಎರಡೂವರೆ ಕೋಟಿ. ಸರ್ಕಾರಿ ಅಧ್ಯಯನವೊಂದರಲ್ಲಿ ಪಾಲ್ಗೊಂಡ ಮಕ್ಕಳ ಪೈಕಿ ಶೇ 53.22ರಷ್ಟು ಪುಟ್ಟ ಹೆಣ್ಣುಮಕ್ಕಳು ತಾವು ಒಂದಲ್ಲ ಒಂದು ಲೈಂಗಿಕ ಹಲ್ಲೆಗೆ ಗುರಿಯಾಗಿರುವ ಮಾಹಿತಿ ನೀಡಿದ್ದಾರೆ ಎಂದು ಯೂನಿಸೆಫ್ ಅಂಕಿ ಅಂಶಗಳು ಹೇಳುತ್ತವೆ.

ಭಾರತೀಯ ಸಮಾಜದ ಲಿಂಗಭೇದದ ಚರ್ಚೆಗಳನ್ನು ಇದೇ ನೆಲದ ವಾಸ್ತವದಲ್ಲಿಟ್ಟು ಹೊಸ ನೋಟದಿಂದ ನೋಡಿದ ತೆಲುಗು ಬರೆಹಗಾರ್ತಿ ಓಲ್ಗಾ ಅಲಿಯಾಸ್ ಪೋಪೂರಿ ಲಲಿತಕುಮಾರಿ. ಮೆದು ಮಾತುಗಳಲ್ಲೇ ಬೆಂಕಿ ಕಾರುವ ಪ್ರಖರ ಸ್ತ್ರೀವಾದಿ.

ಅವರ ಸಣ್ಣ ಕತೆಯೊಂದರ ಹೆಸರು ‘ಅಯೋನಿ’. ಅಂತ್ಯವಿಲ್ಲದ ಅತ್ಯಾಚಾರ ಸಹಿಸಲಾಗದೆ ಆ ಅಂಗವೇ ತನಗೆ ಇಲ್ಲದೆ ಹೋಗಿದ್ದರೆ ಎಷ್ಟು ನೆಮ್ಮದಿಯಿರುತ್ತಿತ್ತು ಎಂದು ಹಂಬಲಿಸುವ ಹತ್ತು ವರ್ಷದ ಎಳೆ ಬಾಲೆಯ ಹೃದಯವಿದ್ರಾವಕ ಕಥಾನಕ. ನೈಜ ಘಟನೆಯನ್ನು ಆಧರಿಸಿದ ಈ ಸಣ್ಣ ಕತೆಯನ್ನು ಪ್ರಕಟಿಸಲು ಪತ್ರಿಕೆಗಳು, ನಿಯತಕಾಲಿಕಗಳು ಶುರುವಿನಲ್ಲಿ ನಿರಾಕರಿಸಿದ್ದವು.

ಪ್ರೀತಿ ತುಂಬಿದ ಕುಟುಂಬದಲ್ಲಿ ‘ಚಂದಮಾಮ’ ಓದಿಕೊಂಡು ಬೆಳೆಯುತ್ತಿದ್ದ ಬಾಲೆ ಒಂದು ದಿನ ಹಠಾತ್ತನೆ ಅಪಹರಣಕ್ಕೆ ಗುರಿಯಾಗಿ ಮೈ ಮಾರಿಕೊಳ್ಳುವ ಕೂಪವೊಂದರಲ್ಲಿ ಕಣ್ಣು ತೆರೆಯುತ್ತಾಳೆ. ಅಲ್ಲಿಯ ನರಕದ ಕತೆಯನ್ನು ಹೇಳಿಕೊಳ್ಳುತ್ತಾಳೆ.

‘... ನನಗಾಗ ಹತ್ತು ವರ್ಷ. ಗಂಡಸರು ವಾರಕ್ಕೆ ಮೂರು ಸಲ ಬಳಿಗೆ ಬರುತ್ತಿದ್ದರು. ಅವರಿಗೆ ಏನೇನೋ ಕಾಯಿಲೆಗಳು. ನನ್ನೊಳಗನ್ನು ಹರಿಯುವಂತೆ ತೂರಿದರೆ ಆ ಕಾಯಿಲೆಗಳು ವಾಸಿಯಾಗುತ್ತವೆ ಎಂದು ಅವರು ನಂಬಿಕೊಂಡದ್ದು ನನಗೆ ಗೊತ್ತಾಯಿತು. ಹಾಗೆ ಅವರು ಎರಗಲು ಬಂದಾಗ ಕಣ್ಣಾಲಿಗಳು ತುಂಬಿ ಬರುತ್ತಿದ್ದವು. ಬೆದರಿರುತ್ತಿದ್ದೆ. ಆದರೆ ಅಳುವಂತಿರಲಿಲ್ಲ. ಅತ್ತು ಸದ್ದು ಮಾಡಿದರೆ ಕತ್ತಲ ಕೋಣೆಗೆ ನೂಕಿ ಉಪವಾಸ ಕೆಡವುತ್ತಿದ್ದರು. ಅಂಗೈಗಳಿಂದ ಮುಖ ಮುಚ್ಚಿ ಅಳು ನುಂಗಲು ಬಯಸುತ್ತಿದ್ದೆ. ಆದರೆ ಅವರು ಮುಖ ಮುಚ್ಚಿಕೊಳ್ಳಲು ಬಿಡುತ್ತಿರಲಿಲ್ಲ. ನನಗೆ ಮಾಡುತ್ತಿದ್ದುದನ್ನು ಕಣ್ಣು ತೆರೆದು ನೋಡುವಂತೆ ಬಲವಂತ ಮಾಡುತ್ತಿದ್ದರು’.

‘ಪ್ರಪಂಚ ನನ್ನನ್ನು ಏನೆಂದು ತಿಳಿದುಕೊಂಡಿದೆ? ಪುಟ್ಟ ಪೋರಿಯೇ? ಇಲ್ಲ. ನಾನು ಮನುಷ್ಯ ಜೀವಿ ಕೂಡ ಅಲ್ಲ, ಕೇವಲ ಒಂದು ಯೋನಿ. ಒಂದು ಸಣ್ಣ ರಂಧ್ರ. ಮಂದಿಗೆ ರಂಧ್ರ ಬೇಕಿತ್ತು. ತಮ್ಮ ಕಾಯಿಲೆ ಕಸಾಲೆಗಳನ್ನು ರಂಧ್ರದಲ್ಲಿ ಹೂತು ಹೋಗುತ್ತಿದ್ದರು. ನನ್ನ ಪಾಡೇನು? ನಾನು ಏನು? ನಾನು ಯಾರು? ನಾನೆಂದರೆ ಅನ್ನ ಸಾರು ಕಲೆಸುವ ಈ ನನ್ನ ಕೈಯೇನು? ನಾನೆಂದರೆ ಅನ್ನವನ್ನು ಒಳಗಿಟ್ಟುಕೊಳ್ಳುವ ಈ ನನ್ನ ಬಾಯೇ? ಉಂಡಾಗ ತೃಪ್ತಿಯಾಗುವ ಈ ನನ್ನ ಹೊಟ್ಟೆ ನಾನ್ಯಾರು ಎಂಬ ವ್ಯಾಖ್ಯೆಯನ್ನು ಕಟ್ಟಿಕೊಟ್ಟೀತೇ?

ಇಲ್ಲವೇ ನಾನೆಂದರೆ ನನಗೆ ಅನ್ನ ಸಂಪಾದಿಸಿಕೊಡುವ ನನ್ನ ಈ ಯೋನಿ ಮಾತ್ರವೇ? ಇವರೆಲ್ಲರ ಪಾಲಿಗೆ ನಾನೊಂದು ಯೋನಿಯಲ್ಲದೆ ಬೇರೇನೂ ಅಲ್ಲ. ಆದಕಾರಣವೇ ನಾನದನ್ನು ದ್ವೇಷಿಸುತ್ತೇನೆ. ಯೋನಿಯಾಚೆಗೂ ನನ್ನ ಅಸ್ತಿತ್ವ ಉಂಟು. ಮನುಷ್ಯ ಜೀವಿಯೆಂದು, ಪುಟ್ಟ ಬಾಲೆಯೆಂದು ನನ್ನನ್ನು ನಡೆಸಿಕೊಳ್ಳಲೆಂದು ಹಂಬಲಿಸುವೆ. ಆದರೆ ನನ್ನ ಹಂಬಲದ ಬಗೆಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ’.

‘... ವಯಸ್ಸಾಗ್ತಾ ಆಗ್ತಾ ಸರಿಯಾಗ್ತದೆ, ಅಭ್ಯಾಸವಾಗಿ ಹೋಗ್ತದೆ... ಅಷ್ಟಾಗಿ ನೋಯೋದಿಲ್ಲ ಅಂತಾಳೆ ಭಾಗ್ಯಂ. ಆದರೆ ವರ್ಷಗಳು ಉರುಳಿದಂತೆ ಬಯಕೆಯೊಂದು ಬಲಿಯುತ್ತಲೇ ಹೋಯಿತು. ಅಯೋನಿ ಆಗುವ ಆಸೆ. ಇದೊಂದು ಅಂಗ ಇಲ್ಲದೆ ಹೋದರೆ ಅದೆಷ್ಟು ಚೆನ್ನ! ನನ್ನ ಆಸೆ ಕೇಳಿ ನಗುತ್ತಾಳೆ ಭಾಗ್ಯಂ. ಇಹದಲ್ಲಿ ಈ ಅಂಗ ಬಲು ಮುಖ್ಯ ಅಂತಾಳೆ. ನಂಬಿಕೆ ಬರಲೊಲ್ಲದು ನನಗೆ’.

‘ಈ ಚಿತ್ರವಧೆಗೆ ಎಲ್ಲ ಹುಡುಗಿಯರೂ ಗುರಿಯಾಗಬೇಕಿಲ್ಲ ಎನ್ನುತ್ತಾರೆ. ಆದರೂ ಖುದ್ದಾಗಿ ನನಗೆ ಈ ಅಂಗ ಬೇಕಿಲ್ಲ. ಇದರಿಂದಲೇ ನನ್ನ ಅಪಹರಣ, ಇದರಿಂದಲೇ ಕೊಳಕು ರೋಗದ ಅಸಹ್ಯ ಕೂಪ ನಾನು. ಸಣ್ಣ ಹುಡುಗಿಯರ ನೋಡಲೂ ಭಯ ನನಗೀಗ. ಅವರ ಪೈಕಿ ಯಾರೆಲ್ಲ ನನ್ನಂತೆ ಆದರೂ ಎಂಬ ಆತಂಕ.

ಇದೆಲ್ಲವನ್ನು ತಡೆವುದು ಹೇಗೆ? ಅಯೋನಿ ಆಗಿಬಿಡುವುದೇ ನನಗೀಗ ಹೊಳೆಯುತ್ತಿರುವ ಏಕೈಕ ಉಪಾಯ. ನನ್ನ ಇಚ್ಛೆ ನಿಮ್ಮಲ್ಲಿ ಜುಗುಪ್ಸೆ ಹುಟ್ಟಿಸುತ್ತಿದೆಯೇ? ಹೌದಾಗಿದ್ದರೆ ಈ ನರಕದ ಹಿಂಸೆ ನಿಲ್ಲಿಸಲು ನೀವೇ ಯಾಕೆ ಏನಾದರೂ ಮಾಡಬಾರದು? ಯೋನಿಗಳಿಗಾಗಿ ಪುಟ್ಟ ಪೋರಿಯರನ್ನು ಅಪಹರಿಸುವ ಹಾವುಗಳನ್ನು ನೀವೇ ಹೊಡೆಯಲಾರಿರಾ? ಅವರ ವ್ಯಾಪಾರವನ್ನು ನಿಲ್ಲಿಸಲಾರಿರಾ? ಆಗುವುದಿಲ್ಲ ಎನ್ನುತ್ತೀರಿ, ಆದರೆ ನಾನು ತಿರುಗಿ ಬೀಳುತ್ತಿದ್ದೀನಿ ಎನ್ನುವವರೂ ನೀವೇ ಅಲ್ಲವೇ. ಹಾಗಿದ್ದರೆ ಈ ನನ್ನ ಕತೆ ಅಸಹ್ಯ ಎಂದು ಯಾಕೆ ಅನಿಸುತ್ತಿದೆ ನಿಮಗೆ’ ಎಂಬ ಆಕೆಯ ಕಣ್ಣಲ್ಲಿ ಕಣ್ಣಿರಿಸಿ ಜವಾಬು ನೀಡುವ ದಿಟ್ಟತನವನ್ನು ನಮ್ಮ ಸಮಾಜ ಇನ್ನೂ ಗಳಿಸಿಕೊಂಡಿಲ್ಲ.

‘ಮೊದಲ ಸಾವು’ ಎಂಬುದು ಓಲ್ಗಾ ಅವರ ಮತ್ತೊಂದು ಕತೆ. ಹದಿಮೂರು ವರ್ಷದ ಬಾಲೆ ಇಂದಿರಾ ನೆರೆಮನೆಯ ವಿವಾಹಿತ ಗಂಡಿನ ಅತ್ಯಾಚಾರಕ್ಕೆ ಗುರಿಯಾಗಿ ಗರ್ಭ ಧರಿಸುತ್ತಾಳೆ. ಗರ್ಭಪಾತದ ನೋವಿನಲ್ಲಿ ಮರಣಯಾತನೆ ಅನುಭವಿಸಿ ಎಚ್ಚರಗೊಳ್ಳುತ್ತಾಳೆ. ತಾನು ಸತ್ತಿದ್ದೇನೆಯೇ, ಬದುಕಿದ್ದೇನೆಯೇ ಎಂದು ಅಮ್ಮನನ್ನು ಕೇಳುತ್ತಾಳೆ.

ಕಣ್ಣೀರುಗರೆದು ಮಗಳನ್ನು ಅವಚಿಕೊಂಡ ಅಮ್ಮ ಹೇಳುವ ಮಾತು- ‘ಸತ್ತು ಬದುಕಬೇಕು ಮಗಳೇ, ಹಲವು ಸಲ ಸತ್ತು ಹಲವು ಸಲ ಬದುಕಬೇಕಾಗುತ್ತದೆ. ಹೆಣ್ಣಿಗಿರೋದು ಒಂದೇ ಸಾವಲ್ಲ. ಹೆಣ್ಣೊಬ್ಬಳು ನಿತ್ಯ ಸಂಕಟಗಳನ್ನು ಭರಿಸದೆ ಗೋಳಿಡ್ತಾಳೆ ಅಂತಾದರೆ ಊರಿನ ಎಲ್ಲ ಹೆಂಗಸರೂ ನಿತ್ಯ ನಿರಂತರ ಅಳಬೇಕಾದೀತು... ಹೆಂಗಸರ ಹೊಟ್ಟೇಲಿ ಸುರುಳಿ ಸುತ್ತಿ ಬಿದ್ದಿರೋದು ಅಳುವೇ ವಿನಾ ಕರುಳುಗಳಲ್ಲ...’

‘ವಿಮುಕ್ತಿ’ ಎಂಬುದು ಇನ್ನೊಂದು ಕತೆ. ತಂದೆ-ತಾಯಿಯನ್ನು ಕಳೆದುಕೊಂಡ ಕೆಳವರ್ಗದ ವೆಂಕಟಲಕ್ಷ್ಮೀ ಸಮೀಪ ಬಂಧುವಿನಿಂದ ಲೈಂಗಿಕ ಶೋಷಣೆಯ ಬಲಿಪಶು. ಚಿಕಿತ್ಸೆ ನೀಡಿ ಗಾಯಗಳನ್ನು ವಾಸಿ ಮಾಡಿ ಮನೆಗೊಯ್ದು ನೆರಳು ನೀಡುತ್ತಾಳೆ ಕಥಾನಿರೂಪಕಿ. ಕರುಣಾಳು ವೈದ್ಯೆಯಲ್ಲಿ ಕತೆಗಾರ್ತಿಯೇ ಕುಳಿತು ಮಾತಾಡುತ್ತಾಳೆ- ‘ಓ ದೇವರೇ!

ನೀನು ನಿಜವಾಗಿಯೂ ಇರುವುದೇ ಆದಲ್ಲಿ, ಬಾಲೆಯರನ್ನು ಹುಟ್ಟಿಸಬೇಡ. ವಿಶೇಷವಾಗಿ ಕೆಳವರ್ಗದ ಬಾಲೆಯರ ನ್ನಂತೂ ಹುಟ್ಟಿಸಲೇಬೇಡ. ಆದರೆ, ನೀನು ಇರುವುದೇ ನಿಜವಾದಲ್ಲಿ ನೀನೊಬ್ಬ ಪುರುಷ. ಮೇಲ್ವರ್ಗದ ಪುರುಷ. ಹೀಗಾಗಿಯೇ ಬಾಲೆಯರನ್ನು ಹಿಂಸಿಸುತ್ತಿದ್ದಿ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT