ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಣ್ಣದ ಲಿಂಗಕ್ಕೆ ಬೋನವ ಹಿಡಿ ಎಂಬರಯ್ಯ!’

Last Updated 8 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಏಪ್ರಿಲ್ 14ರ ಅಂಬೇಡ್ಕರ್ ದಿನಾಚರಣೆ ಬಂದಿದೆ. ಈ ದಿನ ಪ್ರತಿವರ್ಷ ಬರುತ್ತದೆ ಮತ್ತು ಬಂದಂತೆಯೇ ಹೋಗುತ್ತದೆ, ಮತ್ತೆ ಮರು ವರ್ಷ ಮರಳಲೆಂದು. ಕಾಂಗ್ರೆಸ್ಸಿರಲಿ, ಬಿಜೆಪಿ ಬರಲಿ, ಕಾಯಂ ಅಭದ್ರತೆಯಲ್ಲಿ ದಿನ ದೂಡುವ ದೇಶದ ದಲಿತ ಸಮುದಾಯವನ್ನು ಹಿಂದೆಂದಿಗಿಂತ ಹೆಚ್ಚು ತಬ್ಬಲಿತನದ ದುಗುಡ, ಅಸಹಾಯಕತೆಗಳು ಆವರಿಸಿಕೊಂಡಿರುವುದು ಈ ಸಲದ ಅಂಬೇಡ್ಕರ್ ದಿನದ ವಿಶೇಷ.

ಇತ್ತ ದೇಶವನ್ನು ಮತ್ತು ಸಮಾಜ ಜೀವನವನ್ನು ಆಳುವ ಶಕ್ತಿಗಳೂ ಚಿಂತೆಗೆ ಬಿದ್ದಿವೆ. ಆದರೆ ಅವುಗಳನ್ನು ಬಾಧಿಸಿರುವುದು ದಲಿತರ ದುಗುಡ ಅಥವಾ ತಬ್ಬಲಿತನ ಅಲ್ಲ. 2019ರ ಲೋಕಸಭಾ ಚುನಾವಣೆಗಳು ಸಮೀಪಿಸುತ್ತಿವೆ. ದಲಿತ ಮತಗಳು ತನ್ನ ಕೈ ತಪ್ಪುವ ಗೋಡೆ ಬರಹ ಬಿಜೆಪಿ- ಸಂಘಪರಿವಾರಕ್ಕೆ ದಿಗಿಲು ಉಂಟು ಮಾಡಿದೆ. ‘ದಲಿತ ಹಳ್ಳಿಗಳಲ್ಲಿ ಎರಡು ರಾತ್ರಿ ಕಳೆಯಿರಿ’ ಎಂದು ಪ್ರಧಾನಮಂತ್ರಿ ಮೋದಿ ತಮ್ಮ ಪಕ್ಷದ ಸಂಸದರಿಗೆ ಅಪ್ಪಣೆ ಮಾಡಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ದುರ್ಬಲಗೊಳಿಸುವ ವಿಷಯದಿಂದ ಮೊದಲುಗೊಂಡು ಹೆಚ್ಚುತ್ತಲೇ ನಡೆದಿರುವ ದೌರ್ಜನ್ಯಗಳಿಂದ, ಸಂವಿಧಾನ ಬದಲಿಸುವ ಮತ್ತು ಮೀಸಲಾತಿ ರದ್ದು ಮಾಡುವ ಸಂಘಪರಿವಾರದ ಸದಸ್ಯರ ಬೆದರಿಕೆಗಳಿಂದ ದಲಿತರನ್ನು ರಕ್ಷಿಸಲು ಮೋದಿ ಮತ್ತು ಯೋಗಿ ನೇತೃತ್ವದ ಸರ್ಕಾರ ಯಾವ ಕ್ರಮಗಳನ್ನೂ ಜರುಗಿಸುತ್ತಿಲ್ಲವೆಂದು ಬಿಜೆಪಿಯ ನಾಲ್ವರು ದಲಿತ ಸಂಸದರು ಬಹಿರಂಗವಾಗಿ ದನಿ ಎತ್ತಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೆಲವೇ ದಿನಗಳ ಹಿಂದೆ ಒಡಿಶಾದ ಹಳ್ಳಿಯೊಂದರ ದಲಿತರ ಮನೆಯಲ್ಲಿ ಊಟಕ್ಕೆ ಕುಳಿತಿದ್ದರು. ಆದರೆ ದೇವಗಾಂವ್ ಎಂಬ ಈ ಇಡೀ ಹಳ್ಳಿ ಶಾ ಮತ್ತು ಬಿಜೆಪಿ ವಿರುದ್ಧ ‘ಮೌನ ಪ್ರತಿಭಟನೆ’ ಯಲ್ಲಿ ತೊಡಗಿತ್ತು. ದಲಿತರೇ ಬಹುಸಂಖ್ಯೆಯಲ್ಲಿರುವ ದೇವಗಾಂವ್‌ನ ಗ್ರಾಮಸ್ಥರು ಅಂದು ಕದ ತೆರೆದು ಹೊರಬರಲಿಲ್ಲ.

ಅಶೋಕ್ ದೋಹರೆ, ಛೋಟೇಲಾಲ್ ಖರ್ವಾರ್, ಯಶವಂತ್ ಸಿಂಗ್ ಹಾಗೂ ಸಾವಿತ್ರಿ ಬಾಯಿ ಫುಲೆ ಈ ನಾಲ್ವರೂ ಬಿಜೆಪಿಯ ದಲಿತ ಸಂಸದರು. ದಲಿತ ಜನಾಂಗದ ರಕ್ಷಣೆಗೆ ಸರ್ಕಾರ ಮನಸಾರೆ ಕೆಲಸ ಮಾಡುತ್ತಿಲ್ಲವೆಂದು ದೂರಿದವರು. ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ದಲಿತರ ವಿರುದ್ಧ ತಾರತಮ್ಯದಲ್ಲಿ ತೊಡಗಿದೆ ಎಂದು ಬಹಿರಂಗ ದನಿ ಎತ್ತಿರುವವರು. ನ್ಯಾಯಾಂಗ ವ್ಯವಸ್ಥೆ ಉನ್ನತ ಹಂತಗಳಲ್ಲಿ ಹಿಂದುಳಿದವರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಹಾಗೂ ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ಬಹುತೇಕ ಇಲ್ಲವೇ ಇಲ್ಲ ಎಂದು ಕೇಂದ್ರ ಸಚಿವ ಉಪೇಂದ್ರ ಕುಶವಾಹ ದೂರಿದ್ದಾರೆ. ‘ಹಲ್ಲಾ ಬೋಲ್ ದರ್ವಾಜಾ ಖೋಲ್’ ಆಂದೋಲನವನ್ನು ಅವರು ಸಾರಿದ್ದಾರೆ.

‘ಅಂಬೇಡ್ಕರ್ ದಿನವನ್ನು ಅದ್ಧೂರಿಯಿಂದ ಆಚರಿಸಿರಿ. ಅವರೊಡನೆ ಕುಳಿತು ಊಟ ಮಾಡಿರಿ. ವಿಚಾರ ಸಂಕಿರಣಗಳು ನಡೆಯಲಿ. ಬಿಜೆಪಿಗೆ ‘ದಲಿತ ವಿರೋಧಿ’ ಬಣ್ಣ ಬಳಿಯುತ್ತಿರುವ ಬಿ.ಎಸ್.ಪಿ. ಮತ್ತು ಎಸ್.ಪಿ. ಹಾಗೂ ಕಾಂಗ್ರೆಸ್ ಪಕ್ಷಗಳ ಹೂರಣವನ್ನು ಬಯಲಿಗೆಳೆಯಿರಿ. ಅಂಬೇಡ್ಕರ್ ಅವರನ್ನು ಗೌರವಿಸುವ ನಿಜ ಕೆಲಸವನ್ನು ಮಾಡಿದ ಪಕ್ಷ ಬಿಜೆಪಿ ಮಾತ್ರ ಎಂಬ ಸಂದೇಶವನ್ನು ಗಟ್ಟಿ ದನಿಯಲ್ಲಿ ಮುಟ್ಟಿಸಿರಿ’ ಎಂದು ಮೋದಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಉನ್ನತ ಪದಾಧಿಕಾರಿಗಳು ಪರಿವಾರದ ಕಾರ್ಯಕರ್ತರು, ಶಾಸಕರು, ಸಂಸದರಿಗೆ ಸೂಚಿಸಿದ್ದಾರೆ.

ಆದರೆ 1956ರಲ್ಲಿ ಗತಿಸಿದ್ದು ಅಂಬೇಡ್ಕರ್ ಅವರ ನಶ್ವರ ದೇಹವೇ ವಿನಾ ಅವರ ಪ್ರಖರ ಜೀವಪರ ವಿಚಾರಗಳಲ್ಲ ಎಂಬ ಕಠೋರ ಸತ್ಯವನ್ನು ಮೋದಿಯವರ ಕಣ್ಣುಗಳು ಕಾಣದಾಗಿವೆ. ಈ ನೆಲವನ್ನು ಈವರೆಗೆ ಆಳಿಕೊಂಡು ಬಂದಿರುವ ಬಹುತೇಕ ಎಲ್ಲ ಸರ್ಕಾರಗಳು ಮಾಡಿಕೊಂಡು ಬಂದಿರುವ ತಪ್ಪನ್ನೇ ಮೋದಿಯವರೂ ಮಾಡುತ್ತಿದ್ದಾರೆ. ನಶ್ವರ ದೇಹಕ್ಕೆ ಮತ್ತು ನಾಮಧೇಯಕ್ಕೆ ಪ್ರತಿಮೆಗಳು, ಮಹಲುಗಳು, ಭವನಗಳು, ಭವ್ಯ ಸ್ಮಾರಕಗಳನ್ನು ಕಟ್ಟಿಸಿ ನಿಲ್ಲಿಸಿದರೆ ಸಾಲದು. ತುಳಿದಿಟ್ಟ ಸಮುದಾಯಗಳು ಎದೆಯೊಳಗೆ ಧರಿಸಿರುವ ದೀಪವಾಗಿ ಧಗಧಗಿಸಿ ಹೊಳೆದಿದ್ದಾರೆ. ಸಮ ಸಮಾಜವನ್ನು ಕನಸುವ ಆಂದೋಲನಗಳಲ್ಲಿ, ಸ್ವಾತಂತ್ರ್ಯ– ಸಮಾನತೆ– ಸೋದರಭಾವ ಸಾರುವ ಸಂವಿಧಾನದಲ್ಲಿ ಇಂದಿಗೂ ಜೀವಂತ ಅಂಬೇಡ್ಕರ್.

ಬದುಕಿರುವ ಈ ಅಂಬೇಡ್ಕರರನ್ನು ಕಣ್ಣು ತೆರೆದು ಕಾಣಬೇಕಿದೆ ಪ್ರಧಾನಿಯವರು. ಬಹುಜನ ಸಮಾಜ ಪಕ್ಷದ ಮಾಯಾವತಿಯವರು ಮಾಡಿದ್ದು ಅದನ್ನೇ ಅಲ್ಲವೇ ಎಂದು ಕೇಳುವುದು ಅತಿ ಜಾಣತನದ ಪೆದ್ದು ಪ್ರಶ್ನೆಯಾದೀತು. ಕಾನ್ಶಿರಾಂ- ಮಾಯಾವತಿ ಜೋಡಿ ಮಾಡಿದ ಕೆಲಸ ಪ್ರತಿಮೆ, ಉದ್ಯಾನಗಳು, ಸ್ಮಾರಕಗಳಿಗೆ ಸೀಮಿತ ಆಗಲಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಗೊತ್ತಿಲ್ಲ ಎನ್ನುವವರು ಮಲಗಿದಂತೆ ನಟಿಸುತ್ತಿರುವವರು. ಅವರನ್ನು ಎಬ್ಬಿಸಲು ಸಾಧ್ಯವಿಲ್ಲ. ಅಸ್ಮಿತೆಯನ್ನು ಕಂಡುಕೊಂಡ ಉತ್ತರಪ್ರದೇಶದ ದಲಿತರು ತಮ್ಮ ಕಣ್ಣ ಮುಂದೆ ಬಿಜೆಪಿ ಹರವಿದ ಆರ್ಥಿಕ ಆಶೋತ್ತರಗಳ ಕನಸಿಗೆ ಕಣ್ಣರಳಿಸಿದರು.

ನಾಲ್ಕು ವರ್ಷಗಳ ನಂತರ ಇದೀಗ ಅವರಿಗೆ ಸಿಕ್ಕಿದ್ದು ಭ್ರಮನಿರಸನ. ತಾವು ತುಳಿದ ಹೊಸ ದಾರಿಯಲ್ಲಿ ನಡೆದು ಗುರಿ ಸೇರಲು ಅವರಿಗೆ ಅವಕಾಶ ಇಲ್ಲ. ಅದನ್ನು ಪ್ರಬಲರು ಈಗಾಗಲೇ ಆವರಿಸಿ, ಆಕ್ರಮಿಸಿಕೊಂಡಿದ್ದಾರೆ.

ಅಸಮಾನತೆಯ ನರಕಕೂಪದಿಂದ ನಿಜ ಸಮಾನತೆಯ ಎತ್ತರವನ್ನು ಭಾರತ ಏರಬೇಕೆಂಬ ಅಂಬೇಡ್ಕರ್ ಕನಸು ಇಂದಿಗೂ ನನಸಾಗಿಲ್ಲ. ಅವರು ನೀಡಿದ ಈ ದಸ್ತಾವೇಜನ್ನು ತಿದ್ದಿ ಬರೆಯುತ್ತೇವೆಂದು ಎದೆ ಸೆಟೆಸುವುದು ಈ ನಾಯಕನಿಗೆ ಮಾಡುವ ಅವಮಾನ. ಏಕಕಾಲಕ್ಕೆ ಹಲವು ನಾಲಗೆಗಳಲ್ಲಿ ನುಡಿಯುವ ಧೂರ್ತತನವನ್ನು ಆಳುವವರು ಬಿಡಬೇಕು. ಒಂದೇ ನಾಲಗೆಯಲ್ಲಿ ಮಾತಾಡಬೇಕು. ಏಕಕಾಲಕ್ಕೆ ಬೇಟೆನಾಯಿಯೊಂದಿಗೆ ಬೆನ್ನಟ್ಟುವ ಮತ್ತು ಪ್ರಾಣ ಉಳಿಸಿಕೊಳ್ಳಲು ಧಾವಿಸುವ ಮೊಲದೊಂದಿಗೆ ಓಡುವ ಆಷಾಢಭೂತಿತನದ ಮರ್ಮವೇನು?

ಆಚರಣೆಯಲ್ಲಿ ಅಂಬೇಡ್ಕರ್ ಸಿದ್ಧಾಂತವನ್ನು ಇಡಿಯಾಗಿ ವಿರೋಧಿಸಿ, ನಿತ್ಯದ ಬದುಕಿನಲ್ಲಿ ದಲಿತ ದ್ವೇಷವನ್ನು ಕಾರುವ ಜಾತಿ ವರ್ಗಗಳ ಜೊತೆ ನಿಲ್ಲುವ ಪರಿವಾರ, ಅಂಬೇಡ್ಕರ್ ಅವರಿಗೆ ತೋರುವ ಆದರವು ಅಪ್ಪಟ ಕಪಟ.

ಏಣಿ ಶ್ರೇಣಿಗಳು, ಭೇದ ಭಾವಗಳ ಸಾಮಾಜಿಕ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತಾರದೆ ಆರ್ಥಿಕ ಸುಧಾರಣೆಯಾದರೂ ಹೇಗೆ ಸಾಧ್ಯ ಎಂಬ ಅಂಬೇಡ್ಕರ್ ಪ್ರಶ್ನೆ ಇಂದಿಗೂ ಪ್ರಸ್ತುತ. ಬಹುತೇಕ ರಾಜಕೀಯ ಪಕ್ಷಗಳಿಗೆ ಅಂಬೇಡ್ಕರ್ ರೂಪವಾಗಿ ಬೇಕೇ ವಿನಾ ಸಾರವಾಗಿ ಅಲ್ಲ. ‘ಕಲ್ಲ ನಾಗರಕೆ ಹಾಲೆರೆವ’ ಮತ್ತು ‘ಉಣ್ಣದ ಲಿಂಗಕ್ಕೆ ಬೋನವ ಹಿಡಿವ’ ಡಾಂಬಿಕತನವನ್ನು ನಮ್ಮ ರಾಜಕೀಯ ಪಕ್ಷಗಳು ಅಂಬೇಡ್ಕರರ ಕುರಿತು ಪ್ರದರ್ಶಿಸಿವೆ. ಜಾತಿ ವ್ಯವಸ್ಥೆಯ ವಿರುದ್ಧ ಅಂಬೇಡ್ಕರ್ ಸಿಡಿಸಿದ ವಿಚಾರಗಳು ಈ ಪಕ್ಷಗಳಿಗೆ ಬೇಕಿಲ್ಲ. ಅವುಗಳನ್ನು ಮಡಿಕೋಲಿನಿಂದಲೂ ಮುಟ್ಟಿಲ್ಲ.

‘ಅಸ್ಪೃಶ್ಯತೆಯು ಮೊದಲು ಅಸ್ಪೃಶ್ಯರನ್ನು ಸರ್ವನಾಶ ಮಾಡಿದೆ. ನಂತರ ಹಿಂದೂ ಸವರ್ಣೀಯರನ್ನು ಸರ್ವನಾಶ ಮಾಡಿದೆ. ಅಂತಿಮವಾಗಿ ಅದು ಇಡೀ ದೇಶವನ್ನೇ ನಾಶ ಮಾಡಿದೆ... ಹಿಂದೂ ಧರ್ಮದಲ್ಲಿ ನಿಮ್ನ ವರ್ಗಗಳಿಗೆ ಗೌರವ, ಸಮಾನತೆ, ನ್ಯಾಯ ಸಿಗದೆ ಹೋದರೆ ಇವುಗಳು ಎಲ್ಲಿ ಸಿಗುತ್ತವೆಯೋ ಅಲ್ಲಿಗೆ ಅವರು ಹೋಗುವುದು ಹೇಗೆ ತಾನೆ ತಪ್ಪಾಗುತ್ತದೆ’ ಎಂಬ ಅಂಬೇಡ್ಕರ್ ಪ್ರಶ್ನೆಗೆ ಪಕ್ಷ ಪರಿವಾರಗಳಿಂದ ಈಗಲೂ ಉತ್ತರ ಸಿಕ್ಕಿಲ್ಲ. ಆದರೆ ಮತಾಂತರ ಹೊಂದಿದವರನ್ನು ಹಿಂದೂ ಧರ್ಮಕ್ಕೆ ಮರಳಿ ತರುವ ‘ಘರ್ ವಾಪಸಿ’ಯನ್ನು ಪರಿವಾರ ಬಹುದೊಡ್ಡ ಉದ್ಯಮವಾಗಿ ಹಮ್ಮಿಕೊಂಡಿದೆ. ಅದು ಅಂಬೇಡ್ಕರ್ ದಲಿತರಿಗೆ ತೋರಿದ ಮತಾಂತರದ ದಾರಿಯ ನೇರ ತಿರಸ್ಕಾರ. ದಲಿತರನ್ನು ಮೇಲು ಕೀಳಿನ ಹಿಂದೂ ಧರ್ಮದ ಗಾಣಕ್ಕೇ ಕಟ್ಟಿ ಹಾಕುವ ಹುನ್ನಾರ.

ಹಿಂದೂ ಸಮಾಜ ನಿರ್ವಂಚನೆಯಿಂದ ದಲಿತರನ್ನು ಸರಿಸಮನಾಗಿ ನಡೆಸಿಕೊಳ್ಳಬೇಕು ಎಂಬ ಅಂಬೇಡ್ಕರ್ ಆಗ್ರಹಕ್ಕೆ ಇಂದಿಗೂ ರಾಜಕೀಯ ಪಕ್ಷ-ಪರಿವಾರಗಳು ಜಾಣ ಕಿವುಡು ಮತ್ತು ಕುರುಡನ್ನೇ ತೋರಿವೆ. ಶೂದ್ರರ ಸೃಷ್ಟಿಯಾದದ್ದು ಬ್ರಾಹ್ಮಣ, ಕ್ಷತ್ರಿಯ, ವೈಶ್ಯರ ಸೇವೆಗೆ ಎಂದು ಸಾರಿದ್ದ ಪ್ರಾಚೀನ ಭಾರತದ ಕಾನೂನು ಸಂಹಿತೆ ಮನುಸ್ಮೃತಿಯನ್ನು ಅಂತರಂಗದಲ್ಲಿ ಆರಾಧಿಸುವ ವಿಚಾರಧಾರೆಗೆ ಸೇರಿದವರು ನರೇಂದ್ರ ಮೋದಿ. ಇದೇ ಮನುಸ್ಮೃತಿಯ ಪ್ರತಿಯನ್ನು ಸಾಂಕೇತಿಕವಾಗಿ ಸುಟ್ಟಿದ್ದವರು ಅಂಬೇಡ್ಕರ್. 2016ರಲ್ಲಿ ಅಂಬೇಡ್ಕರ್ ಅವರ 125ನೆಯ ಜಯಂತಿ ಸಂದರ್ಭದಲ್ಲಿ ಸಂವಿಧಾನಶಿಲ್ಪಿಯನ್ನು ‘ಅಖೈರು ಏಕೀಕರಣಕಾರ’ (Ultimate Unifier) ಎಂದು ಹಾಡಿ ಹೊಗಳಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖವಾಣಿ ‘ಆರ್ಗನೈಸರ್’ ಹಲವು ಲೇಖನಗಳನ್ನು ಪ್ರಕಟಿಸಿ

ದ್ದೇನೋ ಹೌದು. ಹೊಗಳಿಕೆಯ ಜೊತೆಗೆ ಈ ಹಳೆಯ ತೆಗಳಿಕೆಯನ್ನೂ ನೋಡಬೇಕು. ‘ಹೊಸ ಸಂವಿಧಾನದ ಅತಿ ಕೇಡಿನ ಅಂಶವೆಂದರೆ ಅದರಲ್ಲಿ ಭಾರತೀಯ ಎಂಬುದು ಏನೇನೂ ಇಲ್ಲ... ಪ್ರಾಚೀನ ಭಾರತದ ವಿಶಿಷ್ಟ ಸಾಂವಿಧಾನಿಕ ಬೆಳವಣಿಗೆಗಳ ಕುರಿತ ಪ್ರಸ್ತಾಪವೇ ಇಲ್ಲ. ಪ್ರಾಚೀನ ಗ್ರೀಸ್ ದೇಶದ ಕಾನೂನು ಬರೆದು ದಂತಕತೆಯೇ ಆಗಿ ಹೋದ ಲೈಕರ್ಗಸ್ ಮತ್ತು ಅಥೆನ್ಸಿನ ಸೋಲನ್ ಅವರಿಗಿಂತ ಬಹಳ ಮೊದಲೇ ಭಾರತದಲ್ಲಿ ಮನುಸ್ಮೃತಿಯ ರಚನೆಯಾಗಿತ್ತು. ಮನು ರಚಿಸಿದ ಕಾನೂನುಗಳು ಇಂದಿಗೂ ಜಗತ್ತಿನ ಮೆಚ್ಚುಗೆಗೆ ಪಾತ್ರವಾಗಿದ್ದು, ಭಾರತದಲ್ಲಿ ಹಿಂದೂಗಳು ಅವುಗಳನ್ನು ಸ್ವಯಂಪ್ರೇರಣೆ ಮತ್ತು ವಿಧೇಯತೆಯಿಂದ ಪಾಲಿಸುತ್ತಾರೆ. ಆದರೆ ನಮ್ಮ ಸಂವಿಧಾನ ಪಂಡಿತರ ಪಾಲಿಗೆ ಈ ಕಾನೂನುಗಳು ಲೆಕ್ಕಕ್ಕೇ ಇಲ್ಲ’ (1949ರ ನವೆಂಬರ್‌ 30ರ ಆರ್ಗನೈಸರ್ ಸಂಚಿಕೆಯ ಸಂಪಾದಕೀಯ). ಸಂವಿಧಾನವನ್ನು ಬದಲಾಯಿಸುತ್ತೇವೆ ಎಂಬುದಾಗಿ ಆಗಾಗ ಹಾಕುವ ಗುಟುರುಗಳ ಮೂಲ ಇದು.

ಹಾಗೆಯೇ ಮೀಸಲಾತಿಯನ್ನು ಅಂತ್ಯಗೊಳಿಸುತ್ತೇವೆ ಎಂಬ ಧಮಕಿಯ ಮೂಲ ಕೂಡ ಬಹಳ ಹಿಂದಿನದು. ಸಂಘ ಪರಿವಾರದ ಚಿಂತನೆಯ ಸಾರಸರ್ವಸ್ವ ಸದಾ ಕಾಲಕ್ಕೆ ಹರಳುಗಟ್ಟಿರುವ ಹೊತ್ತಿಗೆ ‘ಬಂಚ್ ಅಫ್ ಥಾಟ್ಸ್’. ಮೂರು ದಶಕಗಳಿಗೂ ಹೆಚ್ಚು ಕಾಲ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಮುನ್ನಡೆಸಿ ಹೊಸ ಎತ್ತರಕ್ಕೆ ಮುಟ್ಟಿಸಿದ ಎಂ.ಎಸ್. ಗೋಳ್ವಲಕರ್‌ (1906-1973) ವಿರಚಿತ ಕೃತಿ. ವಿವೇಕಾನಂದರ ನಂತರ ತಮ್ಮ ಮೇಲೆ ಗಾಢ ಪ್ರಭಾವ ಬೀರಿದ ಎರಡನೆಯ ಪೂಜನೀಯರು ಗುರೂಜಿ (ಗೋಳ್ವಲಕರ್) ಎಂದು ಪ್ರಧಾನಮಂತ್ರಿ ಮೋದಿ ಹೇಳಿದ್ದಾರೆ.

‘ಜಾತಿಯ ಕಾರಣಕ್ಕಾಗಿ ಯಾರಾದರೂ ಯಾವುದೇ ಬಗೆಯ ಸಾಮಾಜಿಕ ಅಥವಾ ರಾಜಕೀಯ ಊನದಿಂದ ಬಳಲುತ್ತಿದ್ದರೆ, ಅಂತಹುದನ್ನು ಪೂರ್ಣವಾಗಿ ನಿವಾರಿಸಬೇಕು ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. 1950ರಲ್ಲಿ ನಾವು ಗಣರಾಜ್ಯ ಆದ ದಿನದಿಂದ ಕೇವಲ ಹತ್ತು ವರ್ಷಗಳ ಕಾಲ ಪರಿಶಿಷ್ಟ ಜಾತಿಗಳಿಗೆ ವಿಶೇಷಾಧಿಕಾರಗಳನ್ನು ನೀಡಿದ್ದರು ಡಾ.ಅಂಬೇಡ್ಕರ್. ಆದರೆ ಈಗಲೂ ಅದು ವಿಸ್ತರಣೆ ಆಗುತ್ತ ಸಾಗಿದೆ. ಕೇವಲ ಜಾತಿಯ ಆಧಾರದ ಮೇಲೆ ಮುಂದುವರೆಯುತ್ತಿರುವ ವಿಶೇಷಾಧಿಕಾರಗಳು ಅವರನ್ನು ಪ್ರತ್ಯೇಕ ಘಟಕವಾಗಿ ಉಳಿಸಿ ಅವರಲ್ಲಿ ಪಟ್ಟಭದ್ರ ಹಿತಾಸಕ್ತಿಗಳನ್ನು ಸೃಷ್ಟಿಸುವುದು ನಿಶ್ಚಿತ. ಶೇಷ ಸಮಾಜದೊಂದಿಗೆ ಅವರು ಬೆರೆಯುವುದಕ್ಕೆ ಹಾನಿ, ಹಿನ್ನಡೆಯನ್ನು ಉಂಟು ಮಾಡುತ್ತದೆ. ನಮ್ಮ ಸಮಾಜದ ಎಲ್ಲ ವರ್ಗಗಳಲ್ಲಿಯೂ ದುಃಸ್ಥಿತಿಯಲ್ಲಿರುವ ಜನರಿದ್ದಾರೆ. ನಿರ್ಗತಿಕರು, ದರಿದ್ರರು ಇಲ್ಲದ ಜಾತಿಯೇ ಇಲ್ಲ. ಆದಕಾರಣ ಆರ್ಥಿಕ ಸ್ಥಿತಿಗತಿಯೊಂದೇ ವಿಶೇಷಾಧಿಕಾರ ನೀಡಿಕೆಗೆ ಆಧಾರ ಆಗಬೇಕು...’ (ಬಂಚ್ ಅಫ್ ಥಾಟ್ಸ್; ಪುಟ 356).

ದಲಿತರ ಮತಗಳನ್ನು ಸೆಳೆಯುವ ಒಂದು ಪ್ರತಿಮೆ- ಪ್ರತೀಕ- ಸ್ಮಾರಕವಾಗಿ ಪಕ್ಷ ಪರಿವಾರಗಳು ಅಂಬೇಡ್ಕರ್ ವರ್ಚಸ್ಸನ್ನು ದೋಚತೊಡಗಿವೆ.

ನಿಜದ ಅಂಬೇಡ್ಕರರನ್ನು ಬಗೆ ಬಗೆಯಲ್ಲಿ ಕೊಲ್ಲುವ ಸಂಚುಗಳನ್ನು ಎತ್ತಿ ಹಿಡಿಯುವವರಿಗೆ ಅನ್ವಯಿಸುತ್ತದೆ ಬಸವಣ್ಣನವರ ಈ ವಚನ- ‘ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು; ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ! ಉಂಬ ಜಂಗಮ ಬಂದರೆ ನಡೆ ಎಂಬರು; ಉಣ್ಣದ ಲಿಂಗಕ್ಕೆ ಬೋನವ ಹಿಡಿ ಎಂಬರಯ್ಯ! ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದರೆ, ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯ!’ ‘ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ. ನೀಡ ನೀಡಿ ಕೆಟ್ಟರು ನಿಜವಿಲ್ಲದೆ. ಮಾಡುವ ನೀಡುವ ನಿಜಗುಣವುಳ್ಳಡೆ. ಕೂಡಿಕೊಂಬ ನಮ್ಮ ಕೂಡಲಸಂಗಮದೇವ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT