ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಏಕಲವ್ಯ’ರಿಗೆ ಹೊಸ ತಂತ್ರಜ್ಞಾನ

Last Updated 13 ಜುಲೈ 2017, 19:30 IST
ಅಕ್ಷರ ಗಾತ್ರ

ಕಳೆದ ಭಾನುವಾರ (ಜುಲೈ 9)  32 ಹೊಸ ಶೈಕ್ಷಣಿಕ ಟಿ.ವಿ. ವಾಹಿನಿಗಳಿಗೆ ಹಾಗೂ ಇಲ್ಲಿ ಪ್ರಸಾರವಾಗುವ ಕಲಿಕಾ ಸಾಮಗ್ರಿಗಳನ್ನು ಅಂತರ್ಜಾಲದಲ್ಲಿ ಇಡಲಾಗುವ ‘ಸ್ವಯಂ’ ಅಂತರ್ಜಾಲ ವೇದಿಕೆಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿಯವರು ಚಾಲನೆ ನೀಡಿದರು. ಶೈಕ್ಷಣಿಕ ವಾಹಿನಿಗಳು ‘ಸ್ವಯಂಪ್ರಭ’ ಎನ್ನುವ ಹೆಸರಿನಲ್ಲಿ ಡಿಟಿಎಚ್ ವ್ಯವಸ್ಥೆಯ ಮೂಲಕ ನಮ್ಮ ಮನೆಗಳನ್ನು ತಲುಪಲಿವೆ. ಶಾಲಾ ಮತ್ತು ಉನ್ನತ ಶಿಕ್ಷಣಕ್ಕೆ ಪೂರಕವಾದ ಕಲಿಕಾ ಸಾಮಗ್ರಿಗಳನ್ನು ಒದಗಿಸುವ ಗುರಿಯನ್ನು ಹೊಂದಿರುವ ಈ ಮಹತ್ವಾಕಾಂಕ್ಷಿ ಯೋಜನೆಯು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ರೂಪುಗೊಂಡಿರುವುದು.

ಈ ಹೊಸ ವ್ಯವಸ್ಥೆ ಮೂರು ಬಗೆಯ ವಿದ್ಯಾರ್ಥಿಗಳನ್ನು ತಲುಪುವ ಗುರಿಯನ್ನು ಹೊಂದಿದೆ. ಮೊದಲನೆಯ ಗುಂಪು ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಪಡೆದ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳದ್ದು. ಇವರಿಗೆ ಮೀಸಲಾಗಿರುವ ಐಐಟಿ- ಪಾಲ್ ಎನ್ನುವ ಹೆಸರನ್ನು ಹೊಂದಿರುವ ನಾಲ್ಕು ಶೈಕ್ಷಣಿಕ ಟಿ.ವಿ. ವಾಹಿನಿಗಳು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರಗಳ ಬೋಧನೆಯನ್ನು ನಡೆಸುತ್ತವೆ. ಈ ವಾಹಿನಿಗಳನ್ನು ಐಐಟಿ ದೆಹಲಿಯು ನಿರ್ವಹಿಸಲಿದ್ದು, ಇದರಲ್ಲಿ ದೇಶದ ಎಲ್ಲ ಐಐಟಿಯ ಪ್ರಾಧ್ಯಾಪಕರು ತಮ್ಮ ವಿಶೇಷ ಪರಿಣತಿಯ ವಿಷಯಗಳನ್ನು ಬೋಧಿಸುತ್ತಾರೆ.

ಇಲ್ಲಿ ಎರಡು ಅಂಶಗಳನ್ನು ನೆನಪಿಸಿಕೊಳ್ಳಬೇಕು. ಒಂದು, ನಾವು ಇಂದು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶ ಪರೀಕ್ಷೆಗಳು ರಾಷ್ಟ್ರಮಟ್ಟದಲ್ಲಿ ನಡೆಯುವ ಕಾಲದಲ್ಲಿ ಇದ್ದೇವೆ. ಎರಡು, ಹನ್ನೊಂದು ಮತ್ತು ಹನ್ನೆರಡನೆಯ ತರಗತಿಯ ಪಠ್ಯಕ್ರಮವು ಸಹ ಭಾರತದಾದ್ಯಂತ ಏಕರೂಪದ್ದಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೇರೆಬೇರೆ ಪಠ್ಯಕ್ರಮಗಳನ್ನು ಹೊಂದಿದ್ದ ವಿವಿಧ ರಾಜ್ಯಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಬ್ಬರೂ ಪರಿವರ್ತನೆಯ ಈ ಘಟ್ಟದಲ್ಲಿ ಐಐಟ್-ಪಾಲ್‌ನ ಮೂಲಕ ವಿಷಯ ತಜ್ಞರ ಸಹಾಯವನ್ನು ಪಡೆಯಬಹುದು.

ಐಐಟಿ-ಪಾಲ್ ಶೈಕ್ಷಣಿಕ ವಾಹಿನಿಗಳನ್ನು ಪ್ರಾರಂಭಿಸಲು ಇರುವ ಇನ್ನೊಂದು ಸಂದರ್ಭವನ್ನು ಸಹ ಗಮನಿಸಿ. ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಗಳ ತರಬೇತಿಯು ದೇಶದಾದ್ಯಂತ ಶಿಕ್ಷಣ ಕ್ಷೇತ್ರದ ದೊಡ್ಡ ವಹಿವಾಟುಗಳಲ್ಲಿ ಒಂದಾಗಿದೆ. ಹಲವಾರು ಅಖಿಲ ಭಾರತ ವ್ಯಾಪ್ತಿಯ ತರಬೇತಿ ಸಂಸ್ಥೆಗಳು ಇವೆ. ಜೊತೆಗೆ ರಾಜಸ್ಥಾನದ ಕೋಟಾದಂತಹ ನಗರಗಳು ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡುವ ಬಹುಮುಖ್ಯ ಕೇಂದ್ರಗಳೂ ಆಗಿವೆ. ಇಂತಹ ನಗರಗಳು ಮತ್ತು ಅವುಗಳಲ್ಲಿರುವ ತರಬೇತಿ ಕೇಂದ್ರಗಳು ಪ್ರತಿವರ್ಷವೂ ಲಕ್ಷಾಂತರ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿವೆ. ಹೀಗೆ ಪ್ರವೇಶ ಪರೀಕ್ಷೆ ತರಬೇತಿಯು ಇಂದು ಒಂದು ಉದ್ದಿಮೆಯಾಗಿದೆ ಎನ್ನುವುದು ಒಂದು ಸಮಸ್ಯೆ. ಇವುಗಳಿಗೆ ಹೋಗಲಾರದವರಿಗೆ ಮನೆಯಲ್ಲಿಯೇ ಸಿದ್ಧವಾಗಲು ಈ ಹೊಸ ಶೈಕ್ಷಣಿಕ ವಾಹಿನಿಗಳು ಉಪಯುಕ್ತವಾಗಬಹುದು.

ಇಷ್ಟಾದರೂ ಈ ವಾಹಿನಿಗಳು ನೀಡುವ ತರಬೇತಿಯು ಯಾವ ಬಗೆಯದಾಗಿರುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ. ಈಗ ತರಬೇತಿ ಸಂಸ್ಥೆಗಳಲ್ಲಿ ದೊರಕುವ ತರಬೇತಿಯು ಪರೀಕ್ಷಾ ಕೇಂದ್ರಿತವಾದುದೇ ಹೊರತು ಕಲಿಯಬೇಕಾಗಿರುವ ವಿಷಯ ಕೇಂದ್ರಿತವಾದುದಲ್ಲ. ಗಮನಿಸಿ. ವಿದ್ಯಾರ್ಥಿಯ ಅರ್ಹತೆಯ ಮಾಪನ ಮಾಡುವ ಈ ಪರೀಕ್ಷೆಗಳು ಒಂದು ಇಲ್ಲವೇ ಎರಡು ಹಂತಗಳಲ್ಲಿ ನಡೆಯುತ್ತವೆ ಹಾಗೂ ಕೆಲವೇ ಗಂಟೆಗಳಲ್ಲಿ ತನ್ನ ಕಲಿಕೆಯನ್ನು ತೋರಿಸುವ ಸವಾಲನ್ನು ವಿದ್ಯಾರ್ಥಿಯ ಮುಂದಿಡುತ್ತವೆ. ಆದುದರಿಂದ ವಿದ್ಯಾರ್ಥಿ ಭೌತಶಾಸ್ತ್ರ ಇಲ್ಲವೇ ಜೀವಶಾಸ್ತ್ರಗಳ ಮೂಲತತ್ವಗಳನ್ನು ಎಷ್ಟರ ಮಟ್ಟಿಗೆ ಕಲಿತಿರಬಹುದು, ಮುಂದೆ ತಾನು ಕಲಿಯಬೇಕಾಗಿರುವ ಕೋರ್ಸ್‌ಗಳಿಗೆ ಅಗತ್ಯವಿರುವ ಬೌದ್ಧಿಕ ಸಿದ್ಧತೆಯನ್ನು ಎಷ್ಟರಮಟ್ಟಿಗೆ ಪಡೆದಿರಬಹುದು ಎನ್ನುವ ಪ್ರಶ್ನೆಯನ್ನು ಆಗಾಗ ತಜ್ಞರು ಎತ್ತಿದ್ದಾರೆ. ಹಾಗಾಗಿಯೇ  ಈಗ ನಡೆಯುವ ಪ್ರವೇಶ ಪರೀಕ್ಷೆಗಳು ಎಷ್ಟರಮಟ್ಟಿಗೆ ವಿದ್ಯಾರ್ಥಿಯ ಅರ್ಹತೆ - ಸಾಮರ್ಥ್ಯಗಳನ್ನು ಅಳೆಯುತ್ತವೆ ಎಂದು ಐಐಟಿ ಪ್ರಾಧ್ಯಾಪಕರು ಬಹಳ ಕಾಲದಿಂದ ಪ್ರಶ್ನಿಸುತ್ತಿದ್ದಾರೆ. ಈ ಹೊಸ ಶೈಕ್ಷಣಿಕ ವಾಹಿನಿಗಳು ಪರೀಕ್ಷೆಗೆ ತರಬೇತಿ ನೀಡುವುದನ್ನು ತಮ್ಮ ಗುರಿಯಾಗಿಸಿಕೊಳ್ಳುತ್ತವೆಯೋ ಅಥವಾ ವಿಷಯಗಳ ಮೂಲತತ್ವಗಳನ್ನು ಕಲಿಸುತ್ತವೆಯೋ ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರಗಳಿಲ್ಲ.

ಐಐಟಿ-ಪಾಲ್‌ ಅಲ್ಲದೆ ಉಳಿದ ಇಪ್ಪತ್ತೆಂಟು ಶೈಕ್ಷಣಿಕ ವಾಹಿನಿಗಳು ಪ್ರೌಢಶಾಲೆ ಮತ್ತು ಪಿಯುಸಿ ಮಟ್ಟದ ವಿದ್ಯಾರ್ಥಿಗಳಿಗೆ ಹಾಗೂ ಉನ್ನತ ಶಿಕ್ಷಣ ಕ್ಷೇತ್ರದ ವಿದ್ಯಾರ್ಥಿಗಳಿಗೆ ವರ್ಚ್ಯುವಲ್ ತರಗತಿಗಳನ್ನು ನಡೆಸುವ ಉದ್ದೇಶವನ್ನು ಹೊಂದಿವೆ. ಈ ಕಾರ್ಯಕ್ರಮಗಳು ಕೇವಲ ಟಿ.ವಿ. ಮಾಧ್ಯಮಕ್ಕೆ ಸೀಮಿತವಾಗಿಲ್ಲ. ಜೊತೆಗೆ ಅಂತರ್ಜಾಲದೊಂದಿಗೂ ಸಂಪರ್ಕ ಕೊಂಡಿ ಹೊಂದಿವೆ. ‘ಸ್ವಯಂ’ ಎಂಬ ಹೆಸರಿನ ಅಂತರ್ಜಾಲದ ವೇದಿಕೆಯಲ್ಲಿ (swayam.gov.in) ಈ ತರಗತಿಗಳು ವಿದ್ಯಾರ್ಥಿಗಳಿಗೆ ಲಭ್ಯವಾಗಲಿವೆ. ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಗಳು ಮೈಕ್ರೊಸಾಫ್ಟ್‌ ಕಂಪೆನಿಯ ಸಹಕಾರದೊಡನೆ ಅಭಿವೃದ್ಧಿಪಡಿಸಿರುವ ಸ್ವಯಂ ಅಂತರ್ಜಾಲ ವೇದಿಕೆಯಲ್ಲಿ 2000 ಪತ್ರಿಕೆಗಳನ್ನು ಮತ್ತು 80,000 ತಾಸಿಗೆ ಆಗುವಷ್ಟು ಕಲಿಕಾ ಸಾಮಗ್ರಿಗಳನ್ನು ಇಡಬಹುದಾಗಿದೆ.

ಈ ವಾಹಿನಿಗಳಿಂದ ಲಾಭ ಪಡೆಯಬಹುದಾಗಿರುವ ಎರಡನೆಯ ಗುಂಪಿನ ವಿದ್ಯಾರ್ಥಿಗಳೆಂದರೆ ಪ್ರೌಢಶಾಲೆ ಮತ್ತು ಪಿಯುಸಿ ಹಂತದ ವಿದ್ಯಾರ್ಥಿಗಳು. ಮುಕ್ತ ಶಾಲಾ ವ್ಯವಸ್ಥೆಯ ಮೂಲಕ ಮನೆಯಲ್ಲಿಯೇ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿನ ವರ್ಚ್ಯುವಲ್  ತರಗತಿಗಳು ಪೂರಕ ಕಲಿಕಾ ಸಾಮಗ್ರಿಗಳಾಗಿ ಉಪಯುಕ್ತವಾಗಬಹುದು.

ಇನ್ನು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಶೈಕ್ಷಣಿಕ ವಾಹಿನಿಗಳು ಮತ್ತು ಸ್ವಯಂ ಅಂತರ್ಜಾಲ ತಾಣದ ಮೂಲಕ ಎಲ್ಲ ಹಿನ್ನೆಲೆಯ (ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯ ಮತ್ತು ನಿರ್ವಹಣೆ, ಕಲೆ ಮತ್ತು ಸಮಾಜ ವಿಜ್ಞಾನಗಳು ಸೇರಿದಂತೆ) ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ನಾಲ್ಕುನೂರಕ್ಕೂ ಹೆಚ್ಚಿನ ಪತ್ರಿಕೆಗಳನ್ನು ಅಭ್ಯಸಿಸುವ ವ್ಯವಸ್ಥೆಯನ್ನು ಈಗ ಮಾಡಲಾಗಿದೆ. ಈ ವಿದ್ಯಾರ್ಥಿ ಸಮುದಾಯವು ಹೊಸ ಶೈಕ್ಷಣಿಕ ವಾಹಿನಿಗಳ ಲಾಭ ಪಡೆಯುವ ಮೂರನೆಯ ಸಮುದಾಯ. ಇಲ್ಲಿನ ಕೋರ್ಸುಗಳನ್ನು ದೇಶದ ವಿವಿಧ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಬೋಧಿಸುತ್ತಾರೆ. ಇವುಗಳ ಪೈಕಿ ಕೆಲವು ನಿಗದಿತ ಸಮಯದಲ್ಲಿ ನಡೆಯುವ ತರಗತಿಗಳಾದರೆ, ಇನ್ನಷ್ಟು ಕೋರ್ಸುಗಳು ವಿದ್ಯಾರ್ಥಿಗಳೇ ತಮ್ಮ ಇಷ್ಟದ ಗತಿಯಲ್ಲಿ ಕಲಿತು, ಪರೀಕ್ಷೆಗಳನ್ನು ತೆಗೆದುಕೊಳ್ಳುವ ವ್ಯವಸ್ಥೆಯನ್ನು ಹೊಂದಿವೆ.

‘ಸ್ವಯಂ’ನ ಮೂಲಕ ಕಲಿಕೆಯು ಎರಡು ರೀತಿಯಲ್ಲಿ ನಡೆಯುತ್ತದೆ. ಮೊದಲಿಗೆ, ‘ಸ್ವಯಂ’ನ ಅಂಗವಾಗಿಯೇ  ನೀಡಲಾಗುವ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸುಗಳಿಗೆ ವಿದ್ಯಾರ್ಥಿಗಳು ಸೇರಬಹುದು ಮತ್ತು ತಮ್ಮ ಶಿಕ್ಷಣವನ್ನು ಮುಂದುವರಿಸಬಹುದು. ಎರಡನೆಯದಾಗಿ, ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ‘ಸ್ವಯಂ’ ತಾಣದಲ್ಲಿ ತಮ್ಮ ಅಧ್ಯಯನಕ್ಕೆ ಸಂಬಂಧಿಸಿದ ಪತ್ರಿಕೆಗಳನ್ನು ಅಭ್ಯಸಿಸಬಹುದು. ಸೇರಬಹುದು. ಈ ಪತ್ರಿಕೆಗಳು ವಿದ್ಯಾರ್ಥಿಗಳು ತಮ್ಮ ಸಂಸ್ಥೆಯಲ್ಲಿ ಅಧ್ಯಯನ ಮಾಡಬೇಕಿದ್ದ ಪತ್ರಿಕೆಗಳಿಗೆ ಬದಲಾಗಿ ಮಾಡುವಂತಹವು. ‘ಸ್ವಯಂ’ ತಾಣದ ಕೋರ್ಸಿನಲ್ಲಿ ವಿದ್ಯಾರ್ಥಿಯು ಪಡೆಯುವ ಅಂಕಗಳನ್ನು ಮತ್ತು ಸಂಪಾದಿಸುವ ಕ್ರೆಡಿಟ್‌ಗಳನ್ನು ಅವರ ಪದವಿಯ ಅವಶ್ಯಕತೆಗಳತ್ತ ಪರಿಗಣಿಸಲಾಗುತ್ತದೆ. ಸದ್ಯಕ್ಕೆ ಎಂಜಿನಿಯರಿಂಗ್ ಪತ್ರಿಕೆಗಳೇ (ಇತರ ವಿಷಯಗಳ ನಾಲ್ಕು ಪಟ್ಟು) ಹೆಚ್ಚಾಗಿ ‘ಸ್ವಯಂ’ನ ಅಂತರ್ಜಾಲ ತಾಣದಲ್ಲಿ ಕಂಡುಬರುತ್ತಿವೆ. ಐಐಟಿ ಮದ್ರಾಸ್ ಸಂಸ್ಥೆಯೊಂದೇ ಅರ್ಧಕ್ಕಿಂತ ಹೆಚ್ಚಿನ ಕೋರ್ಸುಗಳನ್ನು ನಡೆಸುತ್ತಿದೆ.
ಶಿಕ್ಷಣ ಕ್ಷೇತ್ರದ ಅಸಮರ್ಪಕತೆಗಳು ಮತ್ತು ಅಭಾವಗಳನ್ನು ತುಂಬಲು ಅಂತರ್ಜಾಲ ಮತ್ತು ಟೆಲಿವಿಷನ್ ಮಾಧ್ಯಮಗಳನ್ನು ಬಳಸುತ್ತಿರುವುದು ಇದೇ ಮೊದಲಲ್ಲ. ಹಲವಾರು ವರ್ಷಗಳಿಂದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಆಸಕ್ತ ವಿಶ್ವವಿದ್ಯಾಲಯಕ್ಕೆ ಅದರದೇ ಆದ ಸ್ಟುಡಿಯೊ ಸೌಲಭ್ಯ ಮತ್ತು ಶೈಕ್ಷಣಿಕ ವಾಹಿನಿಯನ್ನು ನೀಡುವುದಾಗಿ ಹೇಳುತ್ತಲೇ ಬಂದಿದೆ. ಇತ್ತೀಚಿನ ದಿನಗಳಲ್ಲಿ ಬೃಹತ್ ಮುಕ್ತ ಆನ್‌ಲೈನ್ ಕೋರ್ಸ್ (ಮ್ಯಾಸಿವ್ ಓಪನ್ ಆನ್‌ಲೈನ್ ಕೋರ್ಸ್ ಅಥವಾ ಮೂಕ್ಸ್) ಗಳನ್ನು ಪ್ರಾರಂಭಿಸುವ ಉತ್ಸಾಹದ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ. ಈಗ ಪ್ರಾರಂಭವಾಗಿರುವ ‘ಸ್ವಯಂ’ ಇದೇ ಉದ್ದೇಶವನ್ನು ಹೊಂದಿರುವಂತಹುದು. ಆಯ್ಕೆ ಮಾಡಿದ ಉತ್ತಮ ಪ್ರಾಧ್ಯಾಪಕರು ಕಲಿಸುವ ಇಂತಹ ಮೂಕ್ಸ್‌ಗಳ ಮೂಲಕ ಶಿಕ್ಷಣದ ಗುಣಮಟ್ಟವನ್ನು ಮೇಲೆತ್ತಬಹುದು ಎನ್ನುವ ಆಶಾವಾದವೂ ಇದೆ.

ಮೂಕ್ಸ್‌ಗಳು ಭಾರತೀಯ ಶಿಕ್ಷಣ ವ್ಯವಸ್ಥೆಯ ಸಮಸ್ಯೆಗಳಿಗೆ ರಾಮಬಾಣ ಎನ್ನುವುದು ಅಷ್ಟು ಸುಲಭವಲ್ಲ. ಏಕೆಂದರೆ ಮೂಕ್ಸ್‌ಗಳನ್ನು ಮೊದಲು ಪ್ರಾರಂಭಿಸಿದ ಪಶ್ಚಿಮದ ವಿಶ್ವವಿದ್ಯಾಲಯಗಳ ಉದ್ದೇಶ ನಮಗಿಂತ ಭಿನ್ನವಾಗಿತ್ತು. ಈ ಸಂಸ್ಥೆಗಳು ತಮ್ಮ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಲು ಇಂತಹ ಕೋರ್ಸುಗಳನ್ನು ಪ್ರಾರಂಭಿಸಿದವು. ಭೌತಿಕ ತರಗತಿಯಾಚೆಗೆ ವರ್ಚ್ಯುವಲ್ ತರಗತಿಗಳಲ್ಲಿದ್ದ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ ಪ್ರಶ್ನಾರ್ಹವಾಗಿತ್ತು ಎನ್ನುವುದನ್ನು ಒಂದೆರಡು ವರ್ಷಗಳೊಳಗೆ ಹಲವು ವಿಶ್ವವಿದ್ಯಾಲಯಗಳು ಕಂಡುಕೊಂಡವು. ಈಗ ಮೂಕ್ಸ್ ಎಲ್ಲ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಾಧನವಾಗಿಲ್ಲ. ಬದಲಿಗೆ ಸ್ವಯಂಪ್ರೇರಣೆಯನ್ನು ಹೊಂದಿರುವ ಗಂಭೀರ ವಿದ್ಯಾರ್ಥಿಯನ್ನು ಹಾಗೂ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳನ್ನು ತಲುಪುವ ಸಾಧನವಾಗಿ ಪರಿವರ್ತಿತವಾಗಿವೆ.

ಇದಕ್ಕೆ ಕಾರಣ ಕೂಡ ಸರಳ. ಸಾವಿರಾರು ವರ್ಷಗಳಿಂದ ಮಾನವ ಏನನ್ನು ಕಲಿತರೂ ಅದು ತನ್ನ ಭೌತಿಕ ಪರಿಸರದಲ್ಲಿರುವ ಗುರುವಿನಿಂದಲೇ. ಅಂದರೆ ಉಪನಿಷದ್ ಅಥವಾ (ಗುರುವಿನ) ಹತ್ತಿರ ಕುಳಿತು ಎನ್ನುವುದು ನಮ್ಮ ಕಲಿಕೆಯ ಮಾದರಿಯಾಗಿದೆ. ಇದು ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಮಾನವರು ಕಟ್ಟಿಕೊಂಡಿರುವ ಕಲಿಕೆಗೆ ಸಂಬಂಧಿಸಿದ ಸಾಂಸ್ಕೃತಿಕ ಅಭ್ಯಾಸ. ಇಂದಿನ ಹೊಸ ತಂತ್ರಜ್ಞಾನಗಳು ನಮ್ಮನ್ನು ಏಕಲವ್ಯರಾಗುವಂತೆ ಕೇಳುತ್ತಿವೆ. ಹಳೆಯ ಅಭ್ಯಾಸಗಳನ್ನು ಮರೆಯಲು ಕಾಲವೆಷ್ಟು ಬೇಕಾಗಬಹುದು ಎನ್ನುವ ಅಂದಾಜು ನಮಗೆ ಮತ್ತು ನೀತಿನಿರೂಪಕರಿಗೆ ಸದ್ಯಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT