ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಪ್ಪಿಗೆ’ಯ ವಿಚಾರದ ದ್ವಂದ್ವದಲ್ಲಿ ದಕ್ಕದ ನ್ಯಾಯ

Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಅತ್ಯಾಚಾರ ಪ್ರಕರಣಗಳ ವಿಚಾರಣೆಗಳಲ್ಲಿ ‘ಒಪ್ಪಿಗೆ’ಯ ವಿಚಾರದ ದ್ವಂದ್ವ ನಮ್ಮ ನ್ಯಾಯಾಲಯಗಳನ್ನು ಕಾಡುವುದು ಮುಂದುವರಿದಿದೆ. ಇತ್ತೀಚೆಗೆ ರಾಷ್ಟ್ರದಲ್ಲಿ ಎರಡು ಹೈಕೋರ್ಟ್‌ಗಳು ನೀಡಿದ ತೀರ್ಪುಗಳೇ ಇದಕ್ಕೆ ಸಾಕ್ಷಿ. ‘ಪೀಪ್ಲಿ ಲೈವ್’ ಚಿತ್ರದ ಸಹನಿರ್ದೇಶಕ ಮಹಮ್ಮದ್ ಫಾರೂಕಿ ಹಾಗೂ ಮೂವರು ಕಾನೂನು ವಿದ್ಯಾರ್ಥಿಗಳು ಆರೋಪಿಗಳಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ನೀಡಲಾದ ಈ ತೀರ್ಪುಗಳು, ಈ ಹಿಂದಿನಿಂದ ನ್ಯಾಯಾಂಗ ಅನುಸರಿಸಿಕೊಂಡು ಬಂದ ಮೇಲ್ಪಂಕ್ತಿ ಹಾಗೂ ಔಚಿತ್ಯವನ್ನು ಗಾಳಿಗೆ ತೂರಿವೆ. ಅತ್ಯಾಚಾರ ಸಂತ್ರಸ್ತೆಯರನ್ನು ಮತ್ತಷ್ಟು ಅವಮಾನಿಸುವ ಮಾತುಗಳು ಈ ತೀರ್ಪುಗಳಲ್ಲಿವೆ.

ಅಮೆರಿಕದ ಸಂಶೋಧನಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಕಳೆದ ವರ್ಷ ದೆಹಲಿ ಹೈಕೋರ್ಟ್, ಫಾರೂಕಿ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಕಳೆದ ವಾರ, ಸಂಶಯದ ಲಾಭ ನೀಡಿ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಅಶುತೋಷ್ ಕುಮಾರ್ ಅವರು ಫಾರೂಕಿ ಬಿಡುಗಡೆಗೆ ಆದೇಶ ನೀಡಿದ್ದಾರೆ. ಈ ಸಂದರ್ಭದಲ್ಲಿ, ಲೈಂಗಿಕ ಸಂಬಂಧಕ್ಕೆ ‘ಒಪ್ಪಿಗೆ’ ಎಂದರೆ ಏನೆಂಬುದನ್ನು ಅರ್ಥೈಸುತ್ತಾ ಪ್ರತಿಗಾಮಿಯಾದ ಮಾತುಗಳನ್ನಾಡಿರುವುದು ಆಘಾತಕಾರಿ.

ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಚರ್ಚಾವಸ್ತುವಾಗುವ ‘ಒಪ್ಪಿಗೆ’ ಎಂದರೆ ಏನೆಂಬುದನ್ನು ವ್ಯಾಖ್ಯಾನಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಒಪ್ಪಿಗೆ ಬಗ್ಗೆ ಸುಶಿಕ್ಷಿತ ಮಹಿಳೆಯರಿಗೆ ಬೇರೆಯದೇ ಮಾನದಂಡವನ್ನು ಈ ತೀರ್ಪಿನಲ್ಲಿ ಕೋರ್ಟ್ ರೂಪಿಸಲು ಯತ್ನಿಸಿರುವುದು ವಿಚಿತ್ರ. ಮಹಿಳೆ ಸಂಪ್ರದಾಯಶೀಲಳಾಗಿದ್ದಲ್ಲಿ ಆಕೆಯ ಒಪ್ಪಿಗೆಯ ರೀತಿ ಬೇರೆಯದೇ ರೀತಿ ಇರುತ್ತದೆ ಎಂದು ಕೋರ್ಟ್ ಹೇಳಿರುವುದಂತೂ ಹಾಸ್ಯಾಸ್ಪದ.

‘ಮಹಿಳೆಯ ನಡವಳಿಕೆಯ ವಿಚಾರ ಗೊತ್ತಿಲ್ಲದ್ದೇನೂ ಅಲ್ಲ. ಲೈಂಗಿಕ ಸಂಪರ್ಕಕ್ಕೆ ನಿರಾಕರಿಸಿ, ‘ಇಲ್ಲ’ ಎಂದು ಹೇಳಿದಾಗಲೂ ಹೆಣ್ಣಿನ ಪ್ರತಿರೋಧ ಹೆಚ್ಚಿರದಿದ್ದಲ್ಲಿ ‘ಒಪ್ಪಿಗೆ ಇದೆ’ ಎಂದೇ ಆಗಿಬಿಡಬಹುದು. ಆದರೆ ಇಬ್ಬರೂ ಅಪರಿಚಿತರಾಗಿದ್ದಾಗ ಇದೇ ಸಿದ್ಧಾಂತ ಅನ್ವಯಿಸಲಾಗದು. ಹಾಗೆಯೇ, ಇಬ್ಬರೂ ಒಂದು ಬಗೆಯ ನಿಷೇಧಿತ ಸಂಬಂಧವನ್ನು ಈಗಾಗಲೇ ಹೊಂದಿದ್ದ ಸಂದರ್ಭದಲ್ಲಿ ಲೈಂಗಿಕ ಸಂಪರ್ಕಕ್ಕೆ ಒಪ್ಪಿಗೆ  ‘ಇಲ್ಲ’ ಎಂಬ ಮಾತು ಅದನ್ನೇ ಧ್ವನಿಸಿರುತ್ತದೆ ಎಂಬಂಥ ಸಾಮಾನ್ಯ ತತ್ವವನ್ನು ಅಳವಡಿಸುವುದು ಕಷ್ಟ. ಆದರೆ ಇಂತಹ ವಿಚಾರಗಳಲ್ಲಿ ಒಬ್ಬರು ಪೂರ್ಣ ಸಂಪ್ರದಾಯಶೀಲರಾಗಿದ್ದು ಪ್ರಪಂಚದ ರೀತಿನೀತಿಗಳು ಹಾಗೂ ವ್ಯವಸ್ಥೆಗೆ ತೆರೆದುಕೊಂಡಿರದೆ ಹಿಂಜರಿಕೆ ಹೊಂದಿದ್ದಲ್ಲಿ ಲೈಂಗಿಕ ಸಂಪರ್ಕಕ್ಕೆ ಯಾವುದೇ ಬಗೆಯ ಒಪ್ಪಿಗೆ ಇಲ್ಲದಿರುವುದು ಸಾಧ್ಯ.

ಆದರೆ ಇಬ್ಬರೂ ಪರಸ್ಪರ ಪರಿಚಯವಿದ್ದು, ವಿದ್ವಾಂಸರಾಗಿದ್ದು, ಬೌದ್ಧಿಕವಾಗಿ, ಶೈಕ್ಷಣಿಕವಾಗಿ ಸಮರ್ಥರಾಗಿದ್ದು ಹಿಂದೆ ದೈಹಿಕ ಸಂಪರ್ಕಗಳಿದ್ದಂತಹವರಾಗಿದ್ದಲ್ಲಿ ಈ ತತ್ವ ಅನ್ವಯಿಸಲಾಗದು. ಇಂತಹ ಸಂದರ್ಭಗಳಲ್ಲಿ ಅಲ್ಪ ಪ್ರಮಾಣದ ಪ್ರತಿರೋಧ, ಪ್ರತಿರೋಧವೇ ಇಲ್ಲದಂತಹದ್ದು ಅಥವಾ ದುರ್ಬಲ ದನಿಯ ‘ಬೇಡ’ ಎಂಬುದು ‘ಒಪ್ಪಿಗೆಯ ನಿರಾಕರಣೆ’ ಎಂದು ಹೇಳುವುದು ಕಷ್ಟ’.

ಒಪ್ಪಿಗೆಯ ಕುರಿತಾಗಿ ಕೋರ್ಟ್‌ನ ಈ ಮಾತುಗಳು ವಿವಾದವನ್ನು ಸೃಷ್ಟಿಸಿವೆ. ಅದರಲ್ಲೂ ಸುಶಿಕ್ಷಿತ ಹಾಗೂ ಕಾಸ್ಮೊಪಾಲಿಟನ್ ಮಹಿಳೆಯರಿಗೆ ಬೇರೆಯದೇ ಮಾನದಂಡ ಅನ್ವಯಿಸಿರುವುದು ಅತಿರೇಕದ್ದು. ‘ಪ್ರಣಯದಲ್ಲಿ ಮಾತುಗಳಿಲ್ಲದ ಸಂವಹನ ಇರುತ್ತದೆ. ಮಹಿಳೆಗಿಂತ ಪುರುಷ ಹೆಚ್ಚು ಸಕ್ರಿಯನಾಗಿರುತ್ತಾನೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ಸಮಾನತೆ ಎಂಬುದು ಮೂಲಮಂತ್ರವಾಗಿರುವಾಗ ಪುರುಷರಿಗೆ ಗೊಂದಲಕಾರಿಯಾಗಿರುತ್ತದೆ. ‘ಒಪ್ಪಿಗೆ ಇಲ್ಲ’ ಎಂದು ಮಹಿಳೆ ಹೇಳಿದರೂ ‘ಒಪ್ಪಿಗೆ ಇದೆ’ ಎಂದೇ ಭಾವಿಸಬಹುದಾದ ಸಂದರ್ಭಗಳಿರುತ್ತವೆ’ ಎಂಬಂಥ ಕೋರ್ಟ್ ವ್ಯಾಖ್ಯಾನ ದಂಗು ಬಡಿಸುವಂತಹದ್ದು.

ಇದೇ ರೀತಿ, ಜಿಂದಾಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯ ಮೇಲೆ ಪದೇಪದೇ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ. 13ರಂದು ವಿದ್ಯಾರ್ಥಿಗಳ ಶಿಕ್ಷೆ ಅಮಾನತು ಮಾಡಿ ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ವಿಭಾಗೀಯ ಪೀಠ ಜಾಮೀನು ನೀಡಿತು. ‘ಸಂತ್ರಸ್ತೆ ನುಡಿದ ಸಾಕ್ಷ್ಯದಲ್ಲಿ, ಸ್ನೇಹಿತರು, ಪರಿಚಿತರ ಜೊತೆಗೆ ಕ್ಷಣಿಕ ಸಂಬಂಧಗಳನ್ನು ಹೊಂದಿದ ಮತ್ತೊಂದು ಕಥನವೂ ಇದೆ. ಲೈಂಗಿಕ ವಿಚಾರಗಳಲ್ಲಿನ ಈ ಸಾಹಸ, ಪ್ರಯೋಗಗಳನ್ನು ಗಮನಿಸಿದಲ್ಲಿ, ಶಿಕ್ಷೆ ಅಮಾನತು ಮಾಡಬೇಕೆಂಬ ಆರೋಪಿಗಳ ಪ್ರಾರ್ಥನೆಯನ್ನು ಪರಿಗಣಿಸಲು ಅಗತ್ಯ ಕಾರಣಗಳಿವೆ. ಅದೂ ಆರೋಪಿಗಳು ಇನ್ನೂ ಚಿಕ್ಕವರು. ಇಂತಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಇರುವ ತೀವ್ರತರದ ಹಿಂಸೆಯೂ ಇಲ್ಲಿಲ್ಲ’ ಎಂದು ಕೋರ್ಟ್ ಆದೇಶ ಹೇಳಿರುವುದು ಆಘಾತಕಾರಿಯಾದುದು.

ವಾಟ್ಸ್ಯಾಪ್‌ನಲ್ಲಿ ತನ್ನ ನಗ್ನ ಚಿತ್ರಗಳನ್ನು ಪಡೆದುಕೊಂಡು ಸೀನಿಯರ್‌ಗಳು ತನ್ನನ್ನು ಬ್ಲ್ಯಾಕ್‌ಮೇಲ್ ಮಾಡಿಶೋಷಿಸುತ್ತಿದ್ದರೆಂಬ ಸಂತ್ರಸ್ತೆಯ ದೂರು ಇಲ್ಲಿ ಗೌಣವಾಗಿದೆ. ಒಪ್ಪಿಗೆ ಇಲ್ಲದಿದ್ದಾಗ ಅದು ಲೈಂಗಿಕ ದುರಾಕ್ರಮಣವೇ. ಇದರಲ್ಲಿ ಯಾವುದೇ ದ್ವಂದ್ವವಿಲ್ಲ. ‘ಇಲ್ಲ’ ಎಂದಾಗ ಅದು ‘ಇಲ್ಲ’ ಎಂದೇ ಅರ್ಥ.‘ ಒಪ್ಪಿಗೆ ಇದೆ’ ಎಂದು ಅರ್ಥೈಸುವುದು ಎಂದಿಗೂ ಸಲ್ಲದು. ಆದರೆ, ‘ಆಕೆಯ ಹೇಳಿಕೆಯನ್ನು ನಿಗಾ ಇಟ್ಟು ಪರಿಶೀಲಿಸಿದಾಗ ಸ್ವಚ್ಛಂದ ಧೋರಣೆಯಿಂದ ಸೃಷ್ಟಿಯಾದ ದುಸ್ಸಾಹಸವಿದು ಎಂಬ ನಿರ್ಣಯಕ್ಕೆ ಬರುವುದೂ ಸಾಧ್ಯವಿದೆ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿರುವುದು ಅಸಂಗತ.

ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಈ ಬಗೆಯ ಅಸೂಕ್ಷ್ಮತೀರ್ಪುಗಳಿಗೆ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ದೊಡ್ಡ ಇತಿಹಾಸವೇ ಇದೆ. 16 ವರ್ಷದ ಆದಿವಾಸಿ ಬಾಲಕಿ ಮಥುರಾ ಮೇಲೆ ಪೊಲೀಸ್ ಠಾಣೆಯಲ್ಲಿ ನಡೆದ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರ ಬಿಡುಗಡೆ ಪ್ರತಿಭಟಿಸಿ 1979ರಲ್ಲಿ ಉಪೇಂದ್ರ ಭಕ್ಷಿ, ಲೋತಿಕಾ ಸರ್ಕಾರ್ ಸೇರಿದಂತೆ ನಾಲ್ವರು ಕಾನೂನು ಪ್ರೊಫೆಸರ್‌ಗಳು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಬರೆದ ಬಹಿರಂಗ ಪತ್ರವನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ‘ಲೈಂಗಿಕ ಸಂಪರ್ಕಮಥುರಾಗೆ ಹೊಸದಲ್ಲ. ಕೂಗಿಕೊಳ್ಳದೇ ಇದ್ದದ್ದರಿಂದ ಆಕೆ ಒಪ್ಪಿಗೆ ನೀಡಿರಬೇಕು’ ಎಂದು ಕೆಳ ನ್ಯಾಯಾಲಯಗಳು ಆಗ ತೀರ್ಪು ನೀಡಿದ್ದವು. ಆದರೆ ಹೈಕೋರ್ಟ್ ನಲ್ಲಿ ಪೊಲೀಸರಿಗೆ ಶಿಕ್ಷೆಯಾಗಿತ್ತು.

ಆ ನಂತರ, ‘ಆಕೆಯ ಮೈಮೇಲೆ ಗಾಯದ ಗುರುತುಗಳಿಲ್ಲದಿರುವುದರಿಂದ ಆಕೆ ಒಪ್ಪಿಗೆ ನೀಡಿರಬೇಕು. ಅವಳ ನಡತೆಯೂ ಪ್ರಶ್ನಾರ್ಹ’ ಎಂದು ಕೆಳನ್ಯಾಯಾಲಯಗಳ ತೀರ್ಪನ್ನೇ ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್, ಶಿಕ್ಷೆಯನ್ನು ರದ್ದುಪಡಿಸಿತ್ತು. ಇದನ್ನು ವಿರೋಧಿಸಿ ಕಾನೂನು ಪ್ರೊಫೆಸರ್‌ಗಳು ಬರೆದ ಬಹಿರಂಗ ಪತ್ರ ದೇಶದಾದ್ಯಂತ ಹುಟ್ಟುಹಾಕಿದ ಚರ್ಚೆ ಭಾರತದಲ್ಲಿ ಮಹಿಳಾ ಸಂಘಟನೆಗಳಹುಟ್ಟಿಗೆ ಕಾರಣವಾದದ್ದು ಈಗ ಇತಿಹಾಸ. ಮಹಿಳೆಯರ ದೇಹಗಳ ಮೇಲಿನ ಹಿಂಸಾಚಾರವನ್ನು ಮತ್ತಷ್ಟು ಸ್ಥಾಯಿಯಾಗಿಸುವ ನ್ಯಾಯಾಂಗದ ಬರವಣಿಗೆಗಳನ್ನು ವಿಮರ್ಶೆಗೆ ಒಳಪಡಿಸುವ ನೆಲೆಯೊಂದನ್ನು ಈ ಬಹಿರಂಗ ಪತ್ರ ಆಗ ಸೃಷ್ಟಿಸಿತು. ಆ ನಂತರ ದೇಶದಾದ್ಯಂತ ಎದ್ದ ಪ್ರತಿಭಟನೆಯ ಅಲೆಯಿಂದಾಗಿ ಅತ್ಯಾಚಾರ ಕಾನೂನಿಗೆ 1983ರಲ್ಲಿ ಮೊದಲ ಬಾರಿಗೆ ತಿದ್ದುಪಡಿ ತರಲಾಯಿತು. ವಸಾಹತುಶಾಹಿ ಕಾಲದಲ್ಲಿ1860ರಷ್ಟು ಹಿಂದೆ ಜಾರಿಯಾಗಿದ್ದ ಕಾನೂನು ಅದು.

1983ರ ತಿದ್ದುಪಡಿಯಾದ ಕಾನೂನು, ವಿಚಾರಣಾ ನ್ಯಾಯಾಲಯಗಳಲ್ಲಿ ಹೇಗೆ ಜಾರಿಗೊಳ್ಳುತ್ತಿದೆ? ಎಂಬುದನ್ನು ಆಧ್ಯಯನ ಮಾಡಿ ಉಪೇಂದ್ರ ಭಕ್ಷಿ ಅವರ ಮಗಳು ಪ್ರತೀಕ್ಷಾ ಭಕ್ಷಿ ಅವರು ‘ಪಬ್ಲಿಕ್ ಸೀಕ್ರೆಟ್ಸ್ ಆಫ್ ಲಾ: ರೇಪ್ ಟ್ರಯಲ್ಸ್ ಇನ್ ಇಂಡಿಯಾ’ (ಪ್ರಕಾಶಕರು: ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್, 2014) ಎಂಬಂತಹ ಮಹತ್ವದ ಪುಸ್ತಕವನ್ನು ಈಗ ಬರೆದಿದ್ದಾರೆ. ಅತ್ಯಾಚಾರ ವಿಚಾರಣೆಗಳನ್ನು ಕುರಿತು ಭಾರತದಲ್ಲಿ ಇಂತಹದೊಂದು ವ್ಯವಸ್ಥಿತ ಅಧ್ಯಯನ ನಡೆದಿರುವುದು ಇದೇ ಮೊದಲು. 1990ರ ದಶಕದಲ್ಲಿ ಈ ಅಧ್ಯಯನಕ್ಕೆ ಅವರು ಆಯ್ದುಕೊಂಡಿದ್ದ ರಾಜ್ಯ ಗುಜರಾತ್. ಹೀಗಿದ್ದೂ ಇಲ್ಲಿ ವಿವರಿಸಲಾಗಿರುವ ಪೊಲೀಸ್ ಹಾಗೂ ನ್ಯಾಯಾಂಗ ಪ್ರಕ್ರಿಯೆಗಳು, ಭಾರತದಲ್ಲಿ ಯಾವುದೇ ಭಾಗದಲ್ಲಿ ನಡೆಯಬಹುದಾದ ವಿಚಾರಣೆಯ ಕಥೆಯೂ ಆಗಿದೆ. ಉಲ್ಲಂಘನೆಗೊಳಗಾದ ಮಹಿಳೆಯರ ದೇಹಗಳ ಕುರಿತಾದ ಸಾಮಾಜಿಕ, ಸಾಂಸ್ಕೃತಿಕ ಕಥನಗಳನ್ನು ಈ ಕೃತಿ ನಿರೂಪಿಸುತ್ತದೆ.

‘ರಾಷ್ಟ್ರದ ಕಾನೂನು’ ಅನುಷ್ಠಾನಗೊಳ್ಳುವ ಸಂದರ್ಭದಲ್ಲಿ ಲಿಖಿತ ಕಾನೂನಿಗೆ ಹೆಚ್ಚಿನ ಸಾಮ್ಯತೆ ಇಲ್ಲದೆ ತನ್ನದೇ ‘ಸ್ಥಳೀಯತೆಯಲ್ಲಿ’ ಹೇಗೆ ಬದಲಾಗುತ್ತದೆ ಎಂಬುದನ್ನು ಈ ಕೃತಿ ಕಟ್ಟಿಕೊಡುವ ರೀತಿ ಅನನ್ಯ. ಸಾರ್ವಜನಿಕ ರಹಸ್ಯವನ್ನು ವಿವಿಧ ರೀತಿಗಳಲ್ಲಿ ಅತ್ಯಾಚಾರ ವಿಚಾರಣೆಗಳಲ್ಲಿ ಹೊರಗೆಳೆಯುವ ಬಗೆಯನ್ನೂ ಇದು ವಿವರಿಸುತ್ತದೆ. ಇಂತಹ ಅತ್ಯಾಚಾರ ವಿಚಾರಣೆಗಳು, ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಒದಗಿಸುವುದಿಲ್ಲ. ಬದಲಿಗೆ ಆಳವಾಗಿ ಬೇರೂರಿರುವ ಗಂಡಾಳ್ತನದ ನ್ಯಾಯ ಪರಿಕಲ್ಪನೆಯನ್ನೇ ಪೋಷಿಸುತ್ತವೆ. ಭಾರತೀಯ ಕಾನೂನು ವ್ಯವಸ್ಥೆಯ ಲೋಪದೋಷಗಳಿಗೆ ಕನ್ನಡಿ ಹಿಡಿಯುತ್ತಲೇ ಅತ್ಯಾಚಾರ ವಿಚಾರಣೆ ಬಗ್ಗೆ ಸಮಾಜಶಾಸ್ತ್ರೀಯ ಒಳನೋಟಗಳನ್ನು ನೀಡುತ್ತದೆ ಈ ಕೃತಿ.

ಅತ್ಯಾಚಾರ ವಿಚಾರಣೆಗಳ ಸಂದರ್ಭದಲ್ಲಿ ಬಳಕೆಯಾಗುವ ಭಾಷೆ ಕಾನೂನಿನ ಆಶಯವನ್ನೇ ನುಂಗಿ ಹಾಕುತ್ತದೆ. ಮೊದಲಿಗೆ, ವಿಚಾರಣೆಯ ಅಧಿಕೃತ ವಿವರಗಳಲ್ಲಿ ಪೂರ್ಣ ವಿವರಗಳು ದಾಖಲಾಗುವುದಿಲ್ಲ. ಹಿಂಸಾಚಾರದ ಬಗ್ಗೆ ಹೇಳಿದ ವಿವರಗಳು ಅಧಿಕೃತ ದಾಖಲೆಗಳಲ್ಲಿ ಶುದ್ಧೀಕರಣಗೊಂಡಿರುತ್ತವೆ. ಕರ್ತವ್ಯದಲ್ಲಿರುವ ಪೊಲೀಸರು ಎಫ್‌ಐಆರ್‌ನಲ್ಲಿ ಏನು ಬರೆಯಬೇಕೆಂಬುದನ್ನು ನಿರ್ದೇಶಿಸುತ್ತಾರೆ. ಸರಿಯಾದ ಶಾಸನಾತ್ಮಕ ಭಾಷೆ ಇರಬೇಕು ಎಂಬಂತಹ ನೆಪದಲ್ಲಿ ದೂರುಗಳನ್ನು ತಿಳಿಗೊಳಿಸಲಾಗುತ್ತದೆ. ದುರ್ಬಲಗೊಳಿಸಲಾಗುತ್ತದೆ ಅಥವಾ ಸುಳ್ಳು ಸೇರಿಸಲಾಗುತ್ತದೆ.

‘ಮಹಿಳೆಯರ ಸಾಕ್ಷ್ಯಗಳನ್ನು ತಿರುಚಲಾಗಿರುತ್ತದೆ, ಶಿಸ್ತುಬದ್ಧಗೊಳಿಸಲಾಗಿರುತ್ತದೆ ಹಾಗೂ ತಪ್ಪಾಗಿ ಪ್ರತಿನಿಧೀಕರಿಸಲಾಗಿರುತ್ತದೆ ಎಂಬುದು ಪ್ರತಿಯೊಬ್ಬ ವಕೀಲರಿಗೂ ತಿಳಿದಿರುವ ಸಂಗತಿ’ ಎಂದು ಪ್ರತೀಕ್ಷಾ ಭಕ್ಷಿ ಬರೆಯುತ್ತಾರೆ. ಅತ್ಯಾಚಾರ ಕುರಿತಾದ ಸಾಕ್ಷ್ಯವನ್ನು ಒಪ್ಪಿತ ಲೈಂಗಿಕ ಸಂಬಂಧ ಎಂದು ಹೇಳಿಕೊಳ್ಳುವಂತೆ ಕೋರ್ಟ್ ರೂಂ ಮಾತುಕತೆಗಳಲ್ಲಿ ಪರಿವರ್ತಿಸಿಬಿಡಲಾಗುತ್ತದೆ ಎಂಬುದನ್ನು ಪ್ರತಿವಾದಿ ವಕೀಲರು ಮಾಮೂಲಾಗಿ ಅಥವಾ ಕೆಲವೊಮ್ಮೆ ಜಂಭದಿಂದ ಹೇಳಿಕೊಳ್ಳುವುದೂ ಉಂಟು. ಪಾಟೀ ಸವಾಲಿನಲ್ಲಿ ಅತ್ಯಾಚಾರ ಸಂತ್ರಸ್ತೆಯನ್ನು ಯಶಸ್ವಿಯಾಗಿ ಬೆದರಿಸಿ ಚಾರಿತ್ರ್ಯ ಹರಣಕ್ಕೆ ಯತ್ನಿಸುವುದು ಪ್ರತಿವಾದಿ ವಕೀಲಿಕೆಯಲ್ಲಿ ಮಾಮೂಲು. ಸರ್ವಾಧಿಕಾರದ ಸಮಾಜ ಹಾಗೂ ಅಧಿಕಾರಶಾಹಿ ಕ್ರೌರ್ಯದ ಚಕ್ರವ್ಯೂಹದಲ್ಲಿ ವ್ಯಕ್ತಿಯ ಅಸಂಗತ ಅನುಭವಗಳನ್ನು ಕಟ್ಟಿಕೊಡುವ ಫ್ರ್ಯಾಂಜ್ ಕಾಫ್ಕಾನ ‘ದಿ ಟ್ರಯಲ್’ ಕಾದಂಬರಿಯ ಕಾಫ್ಕಾಯೆಸ್ಕ್ (Kafkaesqe) ಜಗತ್ತು ಈ ಅತ್ಯಾಚಾರ ವಿಚಾರಣೆಗಳಲ್ಲೂ ಅನಾವರಣಗೊಳ್ಳುತ್ತಿರುತ್ತದೆ.

ಪೊಲೀಸ್ ಹಾಗೂ ನ್ಯಾಯಾಲಯಗಳ ಮೊದಲ ಪ್ರವೃತ್ತಿಯೇ ಸಂತ್ರಸ್ತೆಯನ್ನು ನಂಬದಿರುವುದು. ಪ್ರತೀಕಾರ ಅಥವಾ ಪರಿಹಾರದ ಉದ್ದೇಶ ಸಂತ್ರಸ್ತೆಗಿರುತ್ತದೆ ಎಂಬಂಥ ಭಾವನೆ ಇಲ್ಲಿ ದೊಡ್ಡದಾಗಿರುತ್ತದೆ. ಹೀಗಾಗಿ ದೂರು ನೀಡುವವರು ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಕೆಲಸ ಮಾಡುವುದು ಅನಿವಾರ್ಯವಾಗುತ್ತದೆ. ಹಲವು ವರ್ಷಗಳ ಹೋರಾಟಗಳಿಂದಾಗಿ ನ್ಯಾಯಶಾಸ್ತ್ರದಲ್ಲಿ ಬದಲಾವಣೆಗಳಾಗಿವೆ. 2013ರಲ್ಲಿ ಅತ್ಯಾಚಾರ ಕಾನೂನು ಮತ್ತಷ್ಟು ಕಠಿಣವಾಗಿದೆ. ಆದರೆ ಈಗಲೂ ಅತ್ಯಾಚಾರ ಪ್ರಕರಣಗಳ ವಿಚಾರಣೆಗಳಲ್ಲಿ ಇದು ಪ್ರತಿಬಿಂಬಿತವಾಗುತ್ತಿಲ್ಲ ಎಂಬುದು ದುರಂತ. ಗಂಡಾಳ್ತನದ ಅಧಿಕಾರ ರಾಜಕಾರಣದಲ್ಲಿ ಹೆಣ್ಣಿನ ವೈಯಕ್ತಿಕ ಹಕ್ಕುಗಳು ಮುರುಟಿಹೋಗುತ್ತವೆ.

ಥೆರಪೆಟಿಕ್ (ಚಿಕಿತ್ಸಾ) ನ್ಯಾಯಶಾಸ್ತ್ರದತ್ತ ಜಗತ್ತು ಸಾಗುತ್ತಿದೆ. ಸಂತ್ರಸ್ತರನ್ನು ಮತ್ತಷ್ಟು ಬಲಿಪಶುಗಳನ್ನಾಗಿ (ರಸ್ತೆ ಅಪಘಾತ, ಕಳವು ಅಥವಾ ಹಿಂಸಾಚಾರ) ಮಾಡದಂತಹ ರೀತಿಯಲ್ಲಿ ಕಾನೂನು ಅಳವಡಿಸುವ ಕ್ರಮ ಇದು. ಆದರೆ ನ್ಯಾಯಾಂಗದ ಮಾನವೀಯತೆ ಅಥವಾ ಸೂಕ್ಷ್ಮತೆ ಭಾರತೀಯ ನ್ಯಾಯಾಲಯಗಳಲ್ಲಿ ಗೈರು ಹಾಜರಾಗಿರುವುದನ್ನು ಈ ಪುಸ್ತಕದಲ್ಲಿ ಎತ್ತಿಹೇಳಲಾಗಿದೆ. ಕಾನೂನು ಶಿಕ್ಷಣ ವ್ಯವಸ್ಥೆಯ ಪ್ರಮುಖ ವೈಫಲ್ಯ ಇದು. ‘ಪೊಲೀಸರನ್ನು ಸಂವೇದನಾಶೀಲರನ್ನಾಗಿಸಬೇಕು’ ಎಂಬ ಮಾತುಗಳು ಪದೇ ಪದೇ ಕೇಳಿ ಬರುತ್ತವೆ. ಆದರೆ ನಮ್ಮ ವಕೀಲರು ಹಾಗೂ ಭವಿಷ್ಯದ ನ್ಯಾಯಮೂರ್ತಿಗಳಿಗೂ ಸಂವೇದನಾಶೀಲತೆಯ ಪಾಠ ಬೇಕು. ಕಾಳಜಿಪೂರ್ಣ ಸಂವೇದನೆ ನಮ್ಮ ಸಾಂಸ್ಥಿಕ ವ್ಯವಸ್ಥೆಗಳಲ್ಲಿ ಅಂತರ್ಗತವಾಗಬೇಕಿರುವುದು ಸದ್ಯದ ತುರ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT