ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಮ’ ಮತ್ತು ‘ಸಾವು’ಗಳ ಸಹಗಮನ

Last Updated 12 ಮಾರ್ಚ್ 2017, 6:41 IST
ಅಕ್ಷರ ಗಾತ್ರ

ವ್ಯಾಸರು ತಮ್ಮ ಕೃತಿ ಮಹಾಭಾರತದಲ್ಲಿ ಕೃತಿಯ ಒಳಗಡೆಯೇ ಎಲ್ಲಿಯಾದರೂ ಒಂದೆಡೆಯಲ್ಲಿ, ಇಲ್ಲಿಗೆ ತಾನು ಹೇಳುತ್ತಿರುವ ಇತಿಹಾಸದಲ್ಲಿ ಒಂದು ಹಂತ ಮುಗಿಯಿತು, ಒಂದು ಅಂಕ ಮುಗಿಯಿತು ಎಂದು ಹೇಳಿದ್ದುಂಟೆ? ಒಂದು ಹಂತದ ವಿರಾಮವನ್ನು ಸೂಚಿಸದ್ದುಂಟೆ?...

ಆ ವಿರಾಮವು ಇನ್ನೊಂದು ದಾರುಣವಾದ ಇತಿಹಾಸದ ನಡೆಯನ್ನು ನೋಡುವುದಕ್ಕೆ ಸಜ್ಜುಗೊಳ್ಳುವಂಥದೇ ಆಗಿರಲಿ, ಹಾಗಿದ್ದೂ ಒಂದಿಷ್ಟು ವಿಶ್ರಾಂತಿಯನ್ನು ಸೂಚಿಸಿದ್ದುಂಟೆ? ಈ ಇತಿಹಾಸದಲ್ಲಿ ತಾವೂ ಒಂದು ಪಾತ್ರವಾದುದರಿಂದ ತಮ್ಮ ಸುತ್ತ ಸುಳಿಯುವ ಕೆಲವು ಪಾತ್ರಗಳಿಗಾದರೂ ಇನ್ನು ಮುಂದಿನದನ್ನು ನೀವು ನೋಡಲಾರಿರಿ, ಆದುದರಿಂದ ನೇಪಥ್ಯಕ್ಕೆ ಸರಿಯಿರಿ ಎಂದು ಸಲಹೆ ನೀಡಿದ್ದುಂಟೆ? ಎಂದರೆ ಹೌದು. ಹಾಗೆ ಹೇಳಿದ್ದಿದೆ.

‘ಮಹಾಭಾರತದಲ್ಲಿ ಹದಿನೆಂಟು ಮುಖ್ಯ ಪರ್ವಗಳಿವೆ. ಇವುಗಳ ನಡುವೆ ನೂರಾರು ಉಪಪರ್ವಗಳಿವೆ. ಇವುಗಳಲ್ಲೆಲ್ಲ ಪ್ರಾರಂಭ-ಮುಗಿತಾಯಗಳ ಲಕ್ಷಣಗಳಿವೆ. ಆದರೆ ಇವೆಲ್ಲ ಕೃತಿಯ ಬಾಹ್ಯವ್ಯಸ್ಥೆಗೆ ಸಂಬಂಧಿಸಿದ ಮಾತಾಗಿವೆ.

ಕೃತಿಯ ಒಳಗಡೆಯ ಸೂಚನೆಯೇ ನಮಗೆ ಮುಖ್ಯ. ಏಕೆಂದರೆ ಆಗ ಇತಿಹಾಸದ ಗತಿಯಲ್ಲಿಯೇ ಇತಿಹಾಸದ ನಿರ್ಮಮ ಅವಲೋಕನ (Introspection) ಕೂಡ ನಡೆಯುತ್ತಿದೆ ಎಂದು ತಿಳಿಯುತ್ತದೆ. ಮಹಾಭಾರತವು ಇತಿಹಾಸವೂ ಹೌದು; ಅವಲೋಕನದ ಇತಿಹಾಸವೂ ಹೌದು.

ಪಾಂಡು–ಮಾದ್ರಿಯರ ದುರಂತ ಮರಣದ ಅನಂತರ ವ್ಯಾಸರು (ಈ ದುರಂತಕ್ಕೆ ಇತಿಹಾಸವೇ ವಿಚಲಿತಗೊಂಡಿತೆಂಬಂತೆ) ತಮ್ಮ ತಾಯಿ ಸತ್ಯವತಿಯೊಡನೆ ಹೇಳಿದು ಮಾತಿದು.

‘ಅತ್ರಿಕ್ರಾಂತ ಸುಖಾಃ ಕಾಲಾಃ ಪರ್ಯುಪಸ್ಥಿತ ದಾರುಣಾಃ I
ಶ್ವಃ ಶ್ವಃ ಪಾಪಿಷ್ಠ ದಿವಸಾಃ ಪೃಥಿವೀಗತ ಯೌವನಾ II
‘ಕಳೆದು ಹೋದವು ಸುಖದ ದಿನಗಳು
ದಾರುಣವು ಬಂದೆರಗಿದೆ
ಕೇಡು ಬೆಳೆವುದು ನಾಳೆ ನಾಳಗೆ
ಮಣ್ಣೆ ಕಂಪನು ನೀಗಿದೆ’

‘ಪೃಥಿವೀಗತ ಯೌವನಾ’ ಎಂಬ ನುಡಿಗಟ್ಟು ಮುಖ್ಯ. ಭೂಮಿಯನ್ನು ಆಳುವೆವೆನ್ನುವವರ ಪತನವನ್ನು ತೀವ್ರವಾಗಿ ಸೂಚಿಸುವ ಮಾತಿದು. ‘ಗಂಧವತೀ ಪೃಥಿವೀ’ ಎನ್ನುವರು. ವಾಸನೆಯೇ ಮಣ್ಣಿನ ಜೀವ. ಮಣ್ಣಿಗೆ ಸಂಬಂಧಿಸಿದ ಮಾತೆಲ್ಲವೂ ಹೆಣ್ಣಿಗೂ ಸಂಬಂಧಿಸಿದ್ದೇ ಆಗಿರುವುದು. ‘ಗಂಧ’ವು ಮಹಾಭಾರತದಲ್ಲಿ ವಹಿಸಿದ ಕೇಂದ್ರ ಪಾತ್ರ ವಿದಿತವೇ ಇದೆ.

‘ಪೃಥಿವೀಗತ ಯೌವನಾ’ ಎನ್ನುವಲ್ಲಿ ಮಾದ್ರಿಯ ದುರಂತದ ನೆರಳಿದೆ; ಮುಂದೆ ಬರಲಿರುವ ದ್ರೌಪದಿಯ ಪಾಡಿನ ಸೂಚನೆಯೂ ಇದೆ. ಪಂಪನಾಗಲೀ ಕುಮಾರವ್ಯಾಸನಾಗಲೀ ಅದೇಕೋ ಅರ್ಥಪೂರ್ಣ ನುಡಿಗಟ್ಟನ್ನು ಗಮನಿಸದೆ ಹೋದರು!

ವ್ಯಾಸರು ತಮ್ಮ ತಾಯಿಗೆ ಹುಸಿ ಭರವಸೆ, ಹುಸಿ ಸಾಂತ್ವನ ನೀಡಲಿಲ್ಲ. ‘ಜಯ’ ಮುಂದೆ ಇದೆ ಎನ್ನಲಿಲ್ಲ. ‘ಜಯ’ ಮಹಾಭಾರತದ ಮೂಲ ಹೆಸರು. ಅದು ಈ ಘಟನೆಯ ನಂತರವೂ ಹದಿನೇಳು ಪರ್ವಗಳಷ್ಟು ಮುಂದಕ್ಕೆ ಚಾಚಿಕೊಂಡಿದೆ. ಈ ಅರ್ಥದಲ್ಲಿ ‘ಜಯ’ ಮುಂದೆ – ಮುಂದಕ್ಕೂ – ಇದೆ. ಆ ಮಾತು ಬೇರೆ. ಆದರೆ ವ್ಯಾಸರು ‘ಜಯ’ ಮುಂದೆ ಉಂಟಾಗಲಿದೆ ಎನ್ನಲಿಲ್ಲ.

‘ಹೇಳಬಾರದು ಮಂದಣದು’ ಎನ್ನುತ್ತಾನೆ ಕುಮಾರವ್ಯಾಸ! ವ್ಯಾಸರು ತಾಯಿಯೊಡನೆ ತನ್ನ ಆಶ್ರಮಕ್ಕೆ ಹೋಗೋಣ ಎಂದರು. ಅಲ್ಲೇ ಉಳಿದ ದಿನಗಳನ್ನು ಕಳೆಯುವೆಯಂತೆ ಎಂದರು. ಸತ್ಯವತಿ, ಮಗನ ಈ ಮಾತನ್ನು ಒಪ್ಪಿದಳು. ತನ್ನ ಸೊಸೆಯಂದಿರಿಗೂ – ಅಂಬಿಕೆ; ಅಂಬಾಲಿಕೆಯರಿಗೂ – ಈ ಮಾತನ್ನು ಹೇಳಿದಳು.

ಪಾಂಡು–ಮಾದ್ರಿಯರ ದುರಂತ ಅಂಬಿಕೆ–ಅಂಬಾಲಿಕೆಯರಿಗೆ ಆಳದಲ್ಲಿ, ಎಲ್ಲರಿಗಿಂತ ಹೆಚ್ಚು ಅರ್ಥವಾಗಿದ್ದಿರಬೇಕು! ಹೀಗೆ ಈ ಮೂವರು ಮಹಿಳೆಯರು ಅರಮನೆಯನ್ನು ತೊರೆದರು. ವ್ಯಾಸರೊಡನೆ ಆಶ್ರಮದಲ್ಲಿ ತಪಸ್ವಿಗಳಂತೆ ಬದುಕು ಕಳೆದರು. ನಿಯೋಗಕ್ಕೆ ಮುನ್ನ ವರ್ಷದ ಕಾಲ ವ್ರತನಿಷ್ಠರಾಗಿರಬೇಕು ಎಂಬ ವ್ಯಾಸರ ಮಾತು ಈಗ ಹೀಗೆ ವಿಲಕ್ಷಣವಾಗಿ ಫಲಿಸಿತು!

ವ್ಯಾಸರನ್ನು ನೋಡಲಾಗದೆ ಕಣ್ಣು ಮುಚ್ಚಿಕೊಂಡ ಅಂಬಿಕೆ ಈಗ ವ್ಯಾಸಶ್ರಮದಲ್ಲಿಯೇ ಧ್ಯಾನಾಸಕ್ತಳಾಗಿ ಕಣ್ಣು ಮುಚ್ಚಿಕೊಂಡು ಹಗಲಿರುಳುಗಳನ್ನು ಕಳೆದಳು! ಇದು ‘ವಿಧಿವಿಲಾಸ’ ಎಂದು ಅರ್ಥಪೂರ್ಣವಾಗಿ ತೋರ್ಬೆರಳು ತೋರಿಸುವರು – ವ್ಯಾಸ! ವಾಲ್ಮೀಕಿ ಸೀತೆಯನ್ನು ತನ್ನಾಶ್ರಮಕ್ಕೊಯ್ದು – ರಾಮನು ಸೀತೆಯನ್ನು ತೊರೆದ ಮೇಲೆ – ಪೊರೆದುದು ನೆನಪಾಗುತ್ತದೆ. ಯಾರೂ ಯಾರನ್ನೂ ತೊರೆಯಬಹುದೇನೋ? ಕವಿ ಮಾತ್ರ ತೊರೆಯಲಾರ!

ಇತಿಹಾಸವು ಅವಲೋಕನದ ಇತಿಹಾಸವೂ ಹೌದು ಎಂದ ಮೇಲೆ ಪಾಂಡು–ಮಾದ್ರಿಯರನ್ನು ಮಂಜುಗಡ್ಡೆಯಂತೆ ನಿಂತಾದರೂ ನಾವು ಅವಲೋಕನ ಮಾಡಬೇಕು. ಪಾಂಡು–ಮಾದ್ರಿ ಇದ್ದುದು ಹಿಮಾಲಯದ ತಪ್ಪಲು. ಅಲ್ಲಿನ ವಸಂತದ ಸಿರಿಯ ಬಗೆಯೇ ಬೇರೆ. ವಸಂತವನ್ನು ಬಣ್ಣಿಸುವುದು ಕವಿಗಳಿಗೆ ಸಂಭ್ರಮ. ಪಂಪನಿಗೂ, ಕುಮಾರವ್ಯಾಸನಿಗೂ. ಆದರೆ ಪಾಂಡು–ಮಾದ್ರಿ ಪ್ರಸಂಗದಲ್ಲಿ ಕುಮಾರವ್ಯಾಸ ಅದ್ಭುತವೆನ್ನುವಂತೆ ಬರೆಯುತ್ತಾನೆ.

‘ರಾಗ’ವೊಂದು ಅನೇಕ ಭಾವಗಳನ್ನು ಪೋಷಣೆ ಮಾಡುವ ಆಂತರಿಕ ಶಕ್ತಿಯನ್ನು ಹೊಂದಿದೆ. ಆದರೆ ಹಾಡಲಿರುವ ಹಾಗೆಯ ಕೃತಿಯ ಒಳಗಿನ ಭಾವವನ್ನು ಅನುಸರಿಸಿ ಆರಾಗದ ಭಾವವನ್ನು ಆಲಾಪನೆಯಲ್ಲಿ ಪೋಷಿಸುವುದು ನಿಜವಾದ ಕಲಾವಿದನ ಮನೋಧರ್ಮವನ್ನು ತೋರಿಸುತ್ತದೆ ಎನ್ನುವುದಾದರೆ, ಕುಮಾರವ್ಯಾಸನಾದರೂ ಪಾಂಡು–ಮಾದ್ರಿಯರ ಸನ್ನಿವೇಶದಲ್ಲಿ ವಸಂತವನ್ನು ಬಣ್ಣಿಸುವುದು ಇದಕ್ಕೆ ಉಚಿತವಾಗಿಯೇ ಇದೆ. ಕುಮಾರವ್ಯಾಸನ ಈ ಭಾಮಿನಿಯನ್ನು ಕೇಳಿ.

‘ಯೋಗಿಗೆತ್ತಿದ ಖಡುಗ ಧಾರೆ ವಿ
ಯೋಗಿ ಗೆತ್ತಿದ ಸಬಳವಖಿಳ ವಿ
ರಾಗಿಗಳ ಹೆಡತಲೆಯ ದಡಿ ನೈಷ್ಠಿಕರಿಗಲಗಣಸು
ಆಗಮಿಕರೆದೆ ಶೂಲ ಗರ್ವಿತ
ಗೂಗೆ ಗಳ ನಖ ಸಾಳ ವಗ್ಗದ
ಭೋಗಿಗಳ ಕುಲ ದೈವ ವೆಸೆದುದು ಕುಸುಮಮಯಸ ಸಮಯ’

ಇದು ಹಿಮಾಲಯದಲ್ಲಿ ಮೈದೋರಿದ ವಸಂತಮಾಸ! ತಾನು ಹಿಮಾಲಯವನ್ನೆ ಗೆಲ್ಲಬೇಕಾಗಿದೆ ಎನ್ನುವ ಅರಿವು ವಸಂತನಿಗೂ ಇರುವಂತಿದೆ. ಒಬ್ಬ ರಾಜ ಇನ್ನೋರ್ವ ರಾಜನ ಮೇಲೆ ಯುದ್ಧ ಸಾರಿದಂತಿತ್ತು ವಸಂತದ ಉರವಣಿಗೆ ಎನ್ನುತ್ತಾನೆ ಕವಿ. ‘ಚಾತುರದ ವಸಂತ ನೃಪಾಲ ನಡೆದನು ಪಾಂಡುವಿನ ಮೇಲೆ’ ಎನ್ನುತ್ತಾನೆ.

ನಿಸರ್ಗದ ಸಹಜ ನಡೆಗಳೂ ಇತಿಹಾಸದಲ್ಲಿ ದಾಳಗಳಾಗುತ್ತವೆ ಎಂದು ಕವಿಗೆ ಗೊತ್ತಿಲ್ಲದೆ ಉಂಟೆ? ಇನ್ನೊಂದು ಅತಿಚೆಲುವಿನ ರೂಪಕಾಲಂಕಾರದಲ್ಲಿ – ‘ತಾವರೆಯೆಸಳ ದೋಣಿಯ ಮೇಲೆ ಹಾಯ್ದವು ಕುಸುಮರಸದುಬ್ಬರದ ತೊರೆಯನು ಕೂಡೆ ತುಂಬಿಗಳು’ ಎಂದು ಅದ್ಭುತವಾಗಿ ನುಡಿಯುತ್ತಾನೆ. ತುಂಬಿಗಳಿಗೆ ಉಬ್ಬರದ ಕುಸುಮರಸದ ತೊರೆಯನ್ನು ಕೂಡ ಬೇಕಿದೆ.

ಅದಕ್ಕಾಗಿ ತಾವರೆಯೆಸಳೆಂಬ ದೋಣಿಯನ್ನು ತುಂಬಿಗಳು ಬಳಸಿಕೊಂಡಿವೆ. ‘ತಾವರೆಯೆಸಳು’ ಎನ್ನುವುದು ನೀರಲ್ಲಿದ್ದೂ ಒದ್ದೆಯಾಗದ ನಿರ್ಲಿಪ್ತಸ್ಥಿತಿಗೆ ಸೂಚಕವಾಗಿ ಲಾಗಾಯ್ತಿನಿಂದ ಬಳಕೆಯಾದ ಕಾವ್ಯಸಾಮಗ್ರಿ. ‘ಪದ್ಮಪತ್ರಮಿವಾಂಭ್ರಸಿ’ ಎಂಬ ಮಾತು ಎಷ್ಟೋ ಕೇಳಿದ್ದೇವೆ.

ಈ ನಿರ್ಲಿಪ್ತತೆಯನ್ನೇ, ಇಲ್ಲಿ, ತಮಗನುಕೂಲವಾಗಿ ಬಳಸಿಕೊಳ್ಳುವುದು ಹೇಗೆ ಎಂದು ರಸಿಕ ತುಂಬಿಗಳು ಚಿಂತಿಸಿ, ತಾವರೆಯೆಸಳನ್ನು ಉಬ್ಬರದ ತೊರೆಯತ್ತ ಸಾಗಲು ದೋಣಿಯಂತೆ ಬಳಸಿಕೊಂಡಿವೆಯಂತೆ! ವಂಸತಮಾಸದಲ್ಲಿ ರಸಿಕರ ಜಾಣ್ಮೆ ಮತ್ತು ಕವಿಗಳ ಜಾಣ್ಮೆ ತುಂಬ ಹತ್ತಿರ ಇವೆ! ನಿರ್ಲಿಪ್ತ ಸ್ಥಿತಿಯೂ ಪ್ರವಾಹದಲ್ಲಿ ಎಲ್ಲಿಗೋ ಒಯ್ಯಲ್ಪಡುವ ಸ್ಥಿತಿಯಾಗಬಹುದು!

ಇನ್ನು ಪಾಂಡುವಿನ ಪಾಡೇನು? ಪಾಂಡು–ಮಾದ್ರಿ ಇಬ್ಬರೇ ಇದ್ದ ಹೊತ್ತೊಂದು ಸಿಕ್ಕಿತು. ಆಗ ನಿಸರ್ಗ ಹೆಡೆ ಮರಳಿ ಎದ್ದು ನಿಂತಿತು. ಮಾದ್ರಿ ತನ್ನನ್ನೇ ಚಿಗುರೆಲೆ ಹೂವುಗಳಿಂದ ಸಿಂಗರಿಸಿಕೊಂಡಿದ್ದಳೆನ್ನುತ್ತಾನೆ ಪಂಪ. ಇದು ಮಾದ್ರಿಯ ಮನಸ್ಸನ್ನು ತೋರಿಸುತ್ತದೆ. ಐವರು ಮಕ್ಕಳಿದ್ದರು; ಬೆಳೆಯುತ್ತಿದ್ದರು. ಇದೊಂದು ವಿಶೇಷ.

ಸಂಸಾರವೂ ತುಂಬಿದ್ದಾಗ ಕಾಮವೂ ಮತ್ತೊಮ್ಮೆ ತುಂಬಿ ಬರುವುದೇನೋ. ನಿಸರ್ಗದ ಮುಂದೆ ಯಾರ ಮಾತು? ಯಾವ ಮಾತು? ನನ್ನ ಕೈಯಲ್ಲಿರುವ ಓ ಅಸಹಾಯಕ ಕೂಸೇ – ನನ್ನನ್ನು ಬಲಾತ್ಕಾರದಿಂದ ದಮನ ಮಾಡುತ್ತಿಯೇನು? ಅದು ಸಾಧ್ಯವೇನು? ಕಿಂದಮೇನ? ದಮನ ಮಾಡಿದ್ದರಿಂದೇನು ಪಡೆಯಲು ಸಾಧ್ಯ? (‘ಕಿಂದಮ’ ಎನ್ನುವುದು ಜಿಂಕೆಯ ದೇಹ ತಾಳಿ ನಲ್ಲೆಯೊಡನೆ ಕ್ರೀಡಿಸಿದ, ಪಾಂಡುವಿನ ಬಾಣಕ್ಕೆ ತುತ್ತಾಗಿ ಅಸುನೀಗಿದ ಮುನಿಯ ಹೆಸರೂ ಹೌದು.

ಈ ಹೆಸರೆಷ್ಟು ಸೋಜಿಗ!? – ಎಂದಿತು ನಿಸರ್ಗ. ಪಾಂಡುವಿನ ಉದ್ವೇಗವನ್ನು ವರ್ಣಿಸಲು ಕಾವ್ಯದ ಹಳೆಯ ಸರಕುಗಳು ಸಾಲವು ಎನ್ನುತ್ತಾನೆ. ಕುಮಾರವ್ಯಾಸ. ‘ತಾಗಿದವು ಶರನಿಕರ, ಕಾಮನ ಲಾಗುವೇಗವದೆಂತುಟೋ ತೆಗೆ ಹೂಗಣೆಗಳೈದಲ್ಲ, ರೋಮಗಳೆಂಟು ಕೋಟಿಯಲಿ ತೂಗಿ ನೆಟ್ಟವು ಕಣೆಗಳು’ ಎನ್ನುತ್ತಾನೆ.

ಪಾಂಡು ತನಗೊದಗಿದ್ದ ಶಾಪವನ್ನು ಮರೆತ. ಮಡದಿಯನ್ನು ಮುಟ್ಟಿದ ಕ್ಷಣಕ್ಕೆ ಮರಣವೂ ನಿನ್ನನ್ನು ಮುಟ್ಟಲಿ ಎಂದಿದ್ದ ಕಿಂದಮ. ಮರೆತುದರಿಂದಲೇ ‘ಶಾಪ’ ನಡೆದುಬಿಟ್ಟಿತು. ಮರೆಯದೇ ಇರುತ್ತಿದ್ದರೆ ಮುನಿಯ ಮಾತು ಶಾಪವೇ ಆಗುತ್ತಿರಲಿಲ್ಲ. ಇಂದ್ರಿಯನಿಗ್ರಹದ ಸಾಧನೆಯಾಗುತ್ತಿತ್ತು. ಆಗುತ್ತಿತ್ತೇನೋ? ಆದರೆ ಪಾಂಡುವಿನ ಮಟ್ಟಿಗೆ ಇಂದ್ರಿಯ ನಿಗ್ರವೂ ಶಾಪಗ್ರಸ್ತ ಜೀವನದಂತೆಯೇ ಆಗುತ್ತಿತ್ತು! ಪಾಂಡು ಮರೆತ.

ಶಾಪವಾಕ್ಯದಲ್ಲೂ ‘ಧ್ವನಿ’ ಇದೆ. ‘ನೀನು ಮರೆಯುವೆ. ಮರೆತು ನಾನು ಪಡೆದ ಸಾವನ್ನೇ ನೀನೂ ಪಡೆಯುವೆ’ – ಎಂಬ ‘ಧ್ವನಿ’ ಇದೆ.  ಮಾದ್ರಿ ಬೇಡವೆಂದಳು. ತಡೆದಳು. ‘ವಾರ್ಯ ಮಾಣಃ ತಯಾ ದೇವ್ಯಾ ವಿಸ್ಫುರಂತ್ಯಾ ಯಥಾ ಬಮ್‌’ ಆದರೆ ತಡೆಯುವ, ಬೇಡವೆನ್ನುವ, ನಿವಾರಿಸುವ ಆಂಗಿಕಗಳಲ್ಲಿಯೇ ಕಡು ಚೆಲುವೆಯಾಗಿ ಪಾಂಡುವಿಗೆ ಕಂಡಳು! ‘ಕಲೆ’ ಕಾಯಬಲ್ಲುದು! ಕೊಲ್ಲಬಲ್ಲುದು!

ಪಾಂಡು, ಮಾದ್ರಿಯನ್ನಪ್ಪಿಕೊಂಡ. ಒಂದು ಕ್ಷಣ! ಬದುಕು ಸ್ಖಲಿಸಿತು. ಇನ್ನೊಂದು ರೀತಿಯಲ್ಲಿ ನೋಡಿದರೆ ಆ ಒಂದು ಕ್ಷಣಕ್ಕಾಗಿ ಎಷ್ಟು ದೀರ್ಘ ಸಿದ್ಧತೆ! ವಸಂತದಲ್ಲಿ ಹೊಸ ಚಿಗುರು ಹೊಮ್ಮುವುದಕ್ಕೆ ಶಿಶಿರದ ಉದ್ದಕ್ಕೆ ಎಲೆಗಳನ್ನೆಲ್ಲ ಕಳಚಿ ಸಾವಿನ ಅನುಭವದಲ್ಲಿರುವ ಮರ! ಒಂದು ಕ್ಷಣ.

ಮಾದ್ರಿಗೆ ತಣ್ಣನೆಯ ಕೈ ಸೋಂಕಿತು. ಬಿಸಿಯುಸಿರು ನಿಧಾನವಾಯಿತು. ಎವೆ ಮೆಲ್ಲಗೆ ಮುಚ್ಚಿಕೊಂಡವು. ‘ನಗೆಗಣ್ಗಳಾಲಿ– ಮಗುಳ್ದಂತಿರೆ’ –ಎನ್ನುತ್ತಾನೆ ಪಂಪ. ನಲ್ಲೆಯ ಮೇಲೆ ಗೆಲ್ಲುವ ನೋಟವಿಟ್ಟು ನಗುತ್ತಿದ್ದ ಕಣ್ಣ ಪಾಪೆಗಳು ಅವಳನ್ನು ನೋಡಲು ಹಿಂಜರಿದವು. ‘ಕಣ್ಣು ತೆರೆದಿರುವಂತೆಯೇ ನೋಡಲು ಹಿಂಜರಿಕೆ.’ ಅದ್ಭುತ. ಸಾವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ ಹೀಗೆ ಬಣ್ಣಿಸುವುದುಂಟೆ!

ಪಾಂಡುವನ್ನು ಮರಣ ಮುಟ್ಟಿಬಿಟ್ಟಿತ್ತು. ಪಾಂಡುವಿಗೆ ಬದುಕಿನ ಸ್ಪರ್ಶಾನುಭವ ಅಥವಾ ಸ್ಪರ್ಶಾನುಭವದ ಬದುಕು ದಕ್ಕದೇ ಹೋಯಿತು. ಮೈಮುಟ್ಟಿದ್ದು ತನಗೆ ಮರಣ ಕಾರಣವಾಗುವುದಾದರೆ ತಾನು ಮೈತುಂಬ ಬೆಂಕಿಯನ್ನು ಹೊದ್ದಂತೆಯೇ. ಈಗ ಮಾದ್ರಿ ಪಾಂಡುವಿನ ದೇಹವನ್ನು ತಬ್ಬಿಕೊಂಡಳು. ಪಾಂಡುವಿನಿಂದ ತಾನೇ ತಬ್ಬಿಸಿಕೊಂಡಳು.

ಬೇಡವೆನ್ನಲಿಲ್ಲ. ತಡೆಯಲಿಲ್ಲ. ಭೋರೆಂದು ಅತ್ತಳು. ಮಕ್ಕಳೋಡನಿದ್ದ ಅಕ್ಕ ಕುಂತಿಯನ್ನು ಕರೆದಳು. ಮಕ್ಕಳನ್ನು ಅಲ್ಲೇ ಬಿಟ್ಟು– ನೀನೊಬ್ಬಳೇ ಇಲ್ಲಿ ಬಾ ಎಂದು ಕರೆದಳು. ‘ತಿಷ್ಠಂತು ಅತ್ರೈವ ದಾರಕಾಃ’ ಮಕ್ಕಳು ಅಲ್ಲೇ ಇರಲಿ. ಇಲ್ಲಿ ನಡೆದಿರುವುದನ್ನು ಮಕ್ಕಳು ನೋಡಬಾರದು.

ಕುಂತಿ ಓಡೋಡಿ ಬಂದು ನೋಡಿದರೆ ಅವಳಿಗೆ ದಿಗ್‌ಭ್ರಮೆಯಾಯಿತು. ಕ್ಷಣದಲ್ಲಿ ಎಲ್ಲವೂ ಅವಳಿಗೆ ತಿಳಿದುಹೋಯಿತು. ಅಳುತ್ತಲೇ ಹೇಳಿದಳು: ‘ನೀನು ನಿಜಕ್ಕೂ ಧನ್ಯೆ ತಂಗಿ. ಅರಸನ ನಗುಮುಖವನ್ನು ಕೊನೆಗೂ ನೀನು ಕಂಡೆ. ‘ಈ ಒಂದು ಮಾತು, ಪಾಂಡು; ಮಾದ್ರಿ; ಕುಂತಿ ಎಲ್ಲರ ಪಾಡನ್ನು ಸೂಚಿಸುವ ಎದೆ ಕರಗಿಸುವ ಮಾತು. ಕುಂತಿ ಅರಸನ ಚಿತೆಯನ್ನೇರಿ ತಾನು ಸಹಗಮನ ಮಾಡುವೆನೆಂದಳು.

ಮಹಾಭಾರತದಲ್ಲಿ ಬರುವ ಮೊದಲ ಸಹಗಮನದ ಪ್ರಸ್ತಾವವಿದು. ಶಂತನು ಸತ್ತಾಗ; ವಿಚಿತ್ರವೀರ್ಯ ಸತ್ತಾಗ ಸಹಗಮನದ ಪ್ರಸ್ತಾವವಿರಲಿಲ್ಲ. ‘ನಿಯೋಗ’ವನ್ನು ಒಪ್ಪಿದ ಸಂಸ್ಕೃತಿಯಲ್ಲಿ ಸಹಗಮನದ ಕಲ್ಪನೆಯೇ ಸಾಧ್ಯವಿರಲಿಲ್ಲ. ಆದರೆ ಪಾಂಡು–ಮಾದ್ರಿ ಪ್ರಸಂಗದಲ್ಲಿ ಮಾತ್ರ ಇದು ನಡೆಯಿತು. ಇಡಿಯ ಮಹಾಭಾರತದಲ್ಲಿ ನಡೆದ ಸಹಗಮನ ಇದೊಂದೇ. ಇಲ್ಲಿಂದ ಸಹಗಮನದ ಕಲ್ಪನೆ ಪ್ರಾರಂಭವಾಗಿರಬೇಕು.

ಕುಂತಿಯ ಮಾತಿಗೆ ಮಾದ್ರಿ ಒಲ್ಲೆನೆಂದಳು. ಪಾಂಡು ಜಿಂಕೆಗಳ ಜೋಡಿಯನ್ನು ಕೊಂದಿದ್ದ. ಮುನಿಯ ಶಾಪ ವಾಕ್ಯದಲ್ಲಿ ‘ದ್ವಯೋಃ ನೃಶಂಸಕರ್ತಾರಂ’ ಎಂಬ ಮಾತಿತ್ತು. ಅಂದರೆ ಗಂಡು–ಹೆಣ್ಣು ಎರಡು ಜೀವಗಳನ್ನೂ ಅವು ಜೊತೆಯಾಗಿರುವಾಗ ಕೊಂದವನು ನೀನು. ನಿನಗೂ ಹೀಗೇ ಸಾವು ಬಂದೆರಗಲಿ ಎಂಬ ಮಾತು. ಪಾಂಡುವಿಗೆ ಜೊತೆಯಾಗಿದ್ದವಳು ಮಾದ್ರಿ.

ಜಿಂಕೆಗಣ್ಣಿನ ಮಾದ್ರಿ ಪಾಂಡುವಿನ ಜೊತೆ ಬೆಂಕಿಯ ಮಂಚವೇರದೆ ತಣ್ಣಗೆ ಉಳಿಯುವುದು ಸಾಧ್ಯವಿರಲಿಲ್ಲ. ಎಲ್ಲದಕ್ಕಿಂತ ಹೆಚ್ಚು ಪಾಂಡುವಿನ ಕಾಮಸ್ಪರ್ಶದ ನೆಪದಲ್ಲಿ ಸಾವು ಮಾದ್ರಿಯನ್ನು ಮುಟ್ಟಿಬಿಟ್ಟಿತ್ತು! ಕಾಮ ಬಾಣ, ಪಾಂಡುವನ್ನು ಮಾತ್ರವಲ್ಲ ಮಾದ್ರಿಯನ್ನೂ ಇರಿದಿದೆ!

ಯಾವ ಮೈಯ್ಯಲ್ಲಿ ‘ಕಾಮ’ ತನ್ನ ನೆಲೆಯನ್ನು ಕಂಡುಕೊಂಡಿದೆಯೋ ಅದೇ ಮೈಯ್ಯಲ್ಲಿ ‘ಸಾವು’ ಕೂಡ ತನ್ನ ನೆಲೆಯನ್ನು ಕಂಡಿದೆ. ಹುಟ್ಟಿದವನಿಗೆ ಸಾವು ತಪ್ಪದು ಎಂಬ ಮಾತು ತಾತ್ತ್ವಿಕವಾಗಿ ಕೇಳಿಸುತ್ತದೆಯೇನೋ ನಿಜ. ಆದರೆ ದೇಹದಲ್ಲಿಯೇ ಮನೆ ಮಾಡಿದ ‘ಕಾಮ’ ಮತ್ತು ‘ಸಾವು’ಗಳ ನಿಕಟತೆಯ ಅರಿವೂ ಈ ಮಾತಿನಲ್ಲಿ ಇದೆ. ಮೈಗೆ ಕಾಮದ ಗಬ್ಬೆ ಪ್ರೀತಿ ಇದೆ. ಸಾವಿನ ಬಗ್ಗೆ ಭೀತಿ ಇದೆ.

ಕಾಮದ ಉತ್ಕಟತೆಯಲ್ಲಿ ಸಾವಿನ ಭೀತಿಯನ್ನು ಮೀರಿದ ಸ್ಥಿತಿಯನ್ನು ಪಾಂಡುವಿನಲ್ಲಿ ಕಾಣುವೆವಾದರೆ ಮಾದ್ರಿಯ ಬಗೆ ಬೇರೆ. ಈ ಎಲ್ಲ ಉತ್ಕಟತೆಗೂ ಆಕೆ ತಾನೇ ಸಾಕ್ಷಿಯೂ ಹೌದು. ತಾನೇ ಪಾತ್ರಧಾರಿಯೂ ಹೌದು. ‘ಕಾಮ’ ಮತ್ತು ‘ಸಾವು’ ಎರಡರ ಸ್ಪರ್ಶವನ್ನೂ ಏಕಕಾಲಕ್ಕೆ ಪಡೆದ ಅನೂಹ್ಯ ಅವಸ್ಥೆ ಅವಳದು. ಬದುಕು ತನ್ನೆರಡು ಧ್ರುವಗಳಲ್ಲಿಯೂ ಮಾದ್ರಿಯಲ್ಲಿ ಏಕಕಾಲಕ್ಕೆ ಝೇಂಕರಿಸುತ್ತಿದೆ!

ಪಂಪ, ಮಾದ್ರಿಯ ಮುಖದಿಂದ ಕುಂತಿಗೆ ಹೇಳಿಸುವ ಮಾತು ಗಹನವಾದದ್ದು. ಇನಿಯನ ಜೊತೆಗಿರುವ ನನ್ನ ಸರದಿಯನ್ನು ನಿನಗೆ ಬಿಟ್ಟುಕೊಡಲಾರೆನೆನ್ನುತ್ತಾಳೆ ಮಾದ್ರಿ. ಈ ಮಾತು ಹೆಣ್ಣಿನ ಒಂದು ಮನೋಧರ್ಮವನ್ನು ಸೂಚಿಸುವುದರ ಜೊತೆಗೆ – ಒಂದು ಜೀವ ತಾನು ಹೊತ್ತಿ ಉರುವ ತನ್ನ ಉತ್ಕಟವನ್ನು ತಾನೇ ಪಡೆಯಬೇಕು, ಅದು ಹಂಚಿಕೊಳ್ಳುವಂಥದಲ್ಲ ಎಂದೂ ಹೇಳುತ್ತದೆ.

ಮಾದ್ರಿಯನ್ನು ಸರಿಯಾಗಿ ಮನವರಿಕೆ ಮಾಡಿಕೊಳ್ಳಲು ಚಿತ್ರಣದ ಹೊಸ ಬಗೆಗಳೇ ಬೇಕೆನಿಸುತ್ತದೆ. ಪಾಂಡುವನ್ನು ವರ್ಣಿಸುವಲ್ಲಿ, ಅವನಲ್ಲಿ ಕಾಮನ ಕಣೆಗಳು ನೆಟ್ಟವು ಎನ್ನುವಲ್ಲಿ, ‘ತೆಗೆ–ಪೂಗಣೆಗಳೈದಲ್ಲ’ ಎಂದು ಕುಮಾರವ್ಯಾಸ ಹೇಳುವಾಗ ಚಿತ್ರಣದ ಹೊಸ ಬಗೆಯೇ ಬೇಕೆನ್ನುತ್ತಿದ್ದಾನಲ್ಲ – ಹಾಗೆ ಮಾದ್ರಿಯ ಚಿತ್ರಣದಲ್ಲೂ ಕಾಳಿದಾಸನ ಮಾತು ನೆನಪಾಗುತ್ತದೆ. ಅಜವಿಲಾಪದ ಸಂದರ್ಭದಲ್ಲಿ (ರಘುವಂಶ) ‘ಅಥವಾ ಮೃದುವಸ್ತು ಹಿಂಸಿತುಂ ಮೃದುನೈವ ಆರಂಭತೇ ಪ್ರಜಾಂತಕಃ’ ಎಂದಿದ್ದ ಕಾಳಿದಾಸ.

‘ಮೃದು ಜೀವವೊಂದನ್ನು ಇನ್ನೊಂದು ಮೃದು ವಸ್ತುವಿನಿಂದಲೇ ಸಾಯಿಸುವ ಹೊಸ ಉಪಕ್ರಮವನ್ನು ಅಂತಕ ಪ್ರಾರಂಭಿಸಿದನೇನು?’ ಗಂಡು–ಹೆಣ್ಣಿನ ಸಾಮೀಪ್ಯದ ಸರಸ ಸಂದರ್ಭದಲ್ಲಿಯೇ ಸಾವು ಬಂದೆರಗಿದರೆ ಈ ವ್ಯುತ್ಕ್ರಮವನ್ನು ಯಾವ ಮಾತು ಧಾರಣ ಮಾಡಲಾದೀತು? ಹೊಸ ಮಾತನ್ನೇ ಹುಡುಕಬೇಕಷ್ಟೆ ಎಂಬ ಭಾವ ಕಾಳಿದಾಸನಿಗೂ ಇದೆ.

‘ಮೃದುನಾ ದಾರುಣಂ ಹಂತಿ ಮೃದುನಾ ಹಂತಿ ಅದಾರುಣಂ’ – ಮೃದುವಾದುದು, ದಾರುಣವಾದುದನ್ನೂ ಕೋಮಲವಾದುದನ್ನೂ ಗೆಲ್ಲಬಲ್ಲುದು – ಎಂಬ ಮಹಾಭಾರತದ ಮಾತೇ ಕಾಳಿದಾಸನ ರಘುವಂಶದ ಮಾತಿಗೆ ಮೂಲ ಎಂಬ ಮಾತು ಬೇರೆ! ಈ ಎಲ್ಲ ಸೂಕ್ಷ್ಮಗಳನ್ನು ಬಲ್ಲ ಆಧುನಿಕ ಕವಿ ಕಡೆಂಗೋಡ್ಲು ಶಂಕರ ಭಟ್ಟರು ತಮ್ಮ ‘ಮಾದ್ರಿಯ ಚಿತೆ’ಯಲ್ಲಿ, ಪಾಂಡುವಿಗೂ ತನಗೂ ಬಾನಮಂಡಪದಲ್ಲಿ ಮದುವೆ ನಡೆಯಲಿಕ್ಕಿದೆ ಎಂದು ಮಾದ್ರಿಯ ಮಾತಿನಲ್ಲಿ ಕಾಣಿಸಿ ಹೀಗೆ ಹೇಳಿಸಿದ್ದಾರೆ:

‘ಮದುವೆಗಾವ ಸಿಂಗರಗಳು?
ಕಣ್ಣ ನೀರೆ? ಬಿಡುವ ಸುಯ್ಲೆ?
ಹಳಬರಿಟ್ಟ ತೊಡವು ಬೇಡ ನಮಗೆ ಹೊಸತನೀವುದು.’

ಹೊಸ ನುಡಿಕಟ್ಟಿಗೆ, ಹೊಸ ರಸಮೀಮಾಂಸೆಗೆ ಬಯಸುವಂತಿದೆ ಪಾಂಡು–ಮಾದ್ರಿಯ ಸಂದರ್ಭ. ವ್ಯಾಸರೂ ಸೇರಿದಂತೆ ಈ ದುರಂತದಿಂದ ಎಲ್ಲರೂ ದಿಗ್‌ಭ್ರಮೆಗೊಂಡಿದ್ದಾರೆ. ‘ಪೃಥಿವೀ ಗತ ಯೌವನಾ’ ಎಂದರು ವ್ಯಾಸ. ಮಣ್ಣು ತನ್ನ ಕಂಪನ್ನು ಕಳೆದುಕೊಂಡಿತು – ಎಂದು. ಆಶ್ಚರ್ಯವಾಗುತ್ತದೆ– ಒಂದೆಡೆ ದೇವತೆಗಳ ನಿಯೋಗದಿಂದ ಪಡೆದ ಮಕ್ಕಳು. ಅಂದರೆ ಒಂದು ಅರ್ಥದಲ್ಲಿ ಮೇಲಿನಿಂದ ಕೆಳಗಿಳಿದು – ಅವತರಿಸಿ – ಈ ಭೂಮಿಗೆ ಬಂದ ಶಕ್ತಿಗಳು. ಇನ್ನೊಂದೆಡೆ ನಿಂತ ನೆಲವೇ ನಿಸ್ಸತ್ತ್ವಗೊಂಡಂಥ, ದೊಡ್ಡ ಆದರ್ಶಗಳನ್ನು ಧಾರಣ ಮಾಡಲಾಗದ ದುರ್ಬಲರು.

ಎರಡು ರೀತಿಯ ‘ಕರೆ’ಗಳಿವೆ ಎಂದು ಅನಿಸುತ್ತಿದೆ. ಮೇಲಿನಿಂದ ಕೆಳಗಿಳಿದು ಬಾ ಎಂದು ಆರ್ತವಾಗಿ ಕರೆಯುವ ರೀತಿ. ನಮ್ಮ ಬೇಂದ್ರೆಯವರು ಗಂಗೆಯನ್ನು ಕರೆದಂತೆ. ಇಳಿದು ಬಾ ತಾಯಿ– ಎಂದು ಕೂಗಿ ಕರೆದಂತೆ. ಮೇಲಿನವರನ್ನು ಕರೆಯುವ ಶಕ್ತಿ ನಮ್ಮ ಭಾಷೆಗೆ ಎಷ್ಟಿದೆ ಎಂದು ನಮಗೇ ಅರಿವಿಗೆ ಬರುವಂಥ ಕರೆ. ಇದೊಂದು ರೀತಿ. ಇನ್ನೊಂದು ರೀತಿಯ ಕರೆ ಇದೆ.

ಅದು ‘ಏಳಮ್ಮಾ ಮಲಗಿರುವ ತಾಯಿ ಪೃಥಿವೀ’ ಎಂದು ಮಧುರಚೆನ್ನರು ಕರೆದಂತೆ. ಸ್ಥಳೀಯ ದೇವತೆಗಳನ್ನು ಜಾಗರಿಸುವ ಕರೆ. ಮಣ್ಣಿಗೆ ಕಂಪೂಡುವ ಕರೆ. ಮಕ್ಕಳಿಗೆ ಸುಪ್ರಭಾತ ಹೇಳಿ ಎಚ್ಚರಿಸುವ ಕರೆ. ಮಣ್ಣಿನ ವಾಸನೆ ಕಳೆದು ಹೋಗಬಾರದೆಂಬ ಕಾಳಜಿಯ ಕರೆ.

‘ಪೃಥಿವೀಗತ ಯೌವನಾ’ ಎನ್ನುವ ನುಡಿಗಟ್ಟಿನ ವ್ಯಾಸರು’ ಏಳಮ್ಮಾ ಮಲಗಿರುವ ತಾಯಿ ಪೃಥಿವೀ’ ಎನ್ನುವ ಕರೆಯನ್ನು ಮನದಲ್ಲೇ ಗುಣುಗುಣಿಸುತ್ತಿದ್ದಾರೆನ್ನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT