ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೂಡಂಬಲ’ದಲ್ಲಿ 2,500 ಪಾಸ್‌ಪೋರ್ಟ್‌ಗಳು!

Last Updated 8 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಹೆಲಿಕಾಪ್ಟರ್‌ ನೋಡಲು ಹೋಗಿದ್ದ ವಿಶ್ವನಾಥ, ಪಾಸ್‌ಪೋರ್ಟ್‌ ಮಾಡಿಸಿಕೊಡಿ ಎಂದು ಗಂಟುಬಿದ್ದಿರುವ ಗುಂಡುರಾಜ, ವಿಮಾನ ನೋಡಲು ಓಡಿ ಹೋಗುತ್ತಿದ್ದ ರವಿಕುಮಾರ ಎಲ್ಲರೂ ‘ಕೂಡಂಬಲ’ದವರು. ಆ ಊರಿನವರು ನಿತ್ಯ ನಾಲ್ಕು ಮಂದಿ ಕೊಲ್ಲಿ ದೇಶಗಳಿಗೆ ಹೋದರೆ, ಅಷ್ಟೇ ಮಂದಿ ಅಲ್ಲಿಂದ ಊರಿಗೆ ಬರುತ್ತಾರೆ. ಅವರಿಗೆ ಕೊಲ್ಲಿ ದೇಶಗಳು ತಮ್ಮೂರಿನ ಪಕ್ಕದಲ್ಲೇ ಇರುವ ಚಿಟಗುಪ್ಪಕ್ಕೆ ಹೋಗಿ ಬರುವಷ್ಟೇ ಸಲೀಸು.

ಬೀದರ್‌ ಜಿಲ್ಲೆ ಹುಮನಾಬಾದ್‌ ತಾಲ್ಲೂಕಿನ ಚಿಟಗುಪ್ಪ ಬಳಿ ಕೂಡಂಬಲ ಗ್ರಾಮವಿದೆ. ಅಲ್ಲಿನ ಜನಸಂಖ್ಯೆ ಹತ್ತು ಸಾವಿರ. ಅವರಲ್ಲಿ ಎರಡೂವರೆ ಸಾವಿರಕ್ಕೂ ಹೆಚ್ಚು ಮಂದಿಯ ಬಳಿ ಪಾಸ್‌ಪೋರ್ಟ್‌ ಇದೆ! ಹೆಚ್ಚಿನವರು ದುಬೈ, ಕುವೈತ್‌, ಇರಾಕ್‌, ಕತಾರ್‌, ಅಬುದಾಬಿ, ಬೆಹರಾನ್‌, ಉಮಾನ್‌, ಸೌದಿ ಅರೆಬಿಯಾ, ಸಿಂಗಾಪುರ, ಮಲೇಷಿಯಾಗಳಲ್ಲೂ, ಕೆಲವರು ಅಮೆರಿಕಾ, ರಷ್ಯಾ, ದಕ್ಷಿಣ ಆಫ್ರಿಕಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಕೂಡಂಬಲದಿಂದ ಹೊರದೇಶಗಳಿಗೆ ‘ಮಹಾಗುಳೆ’ ಆರಂಭವಾಗಿದ್ದು ಮೂವತ್ತು ವರ್ಷಗಳ ಹಿಂದೆ. ಅದೇ ಊರಿನ ಹುಲಿಯಪ್ಪ, ಕಾಶಪ್ಪ, ಪ್ರಭು ಗೊಲ್ಲೂರ, ಬಸವರಾಜ ಒಳಕಿಂಡಿ, ಶೌಕತ್‌ ಅಲಿ ಕಮಲಾಪುರೆ ದುಬೈಗೆ ಹೋದರು. ವರ್ಷಗಳು ಕಳೆದಂತೆ ಒಬ್ಬರ ಹಿಂದೆ ಒಬ್ಬರಂತೆ ಬಂಧುಗಳನ್ನು ಕರೆಸಿಕೊಂಡರು. ಈ ಕೊಂಡಿ ಇನ್ನೂ ತುಂಡಾಗಿಲ್ಲ.

ದುಬೈನಲ್ಲಿ ಇರುವ ವ್ಯಕ್ತಿಯೊಬ್ಬರು ಕೂಡಂಬಲದ ಗೆಳೆಯನೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದರು. ಅದನ್ನು ಗಮನಿಸಿದ ವಿಶ್ವನಾಥ ‘ಈಗ ಯಾರು, ಯಾರ ಜೊತೆಗಾದರೂ, ಎಷ್ಟು ಹೊತ್ತಿಗಾದರೂ ಮಾತನಾಡಬಹುದು; ನೋಡಬಹುದು. ಆದರೆ ನಮ್ಮ ಕಾಲದ ಕಥೆಯೇ ಬೇರೆ’ ಎಂದು ಏನ್ನನ್ನೋ ಹೇಳಲು ಪೀಠಿಕೆ ಹಾಕಿದರು.

‘ಹಾಗಿದ್ದರೆ ನಿಮ್ಮ ಕಾಲ ಹೇಗಿತ್ತು’ ಹುಡುಗರ ಪ್ರಶ್ನೆ. ‘ನಮ್ಮ ಮನೆಯ ಅಟ್ಟವನ್ನು ಕೆದುಕಿದರೆ ನಿಮಗೆ ಉತ್ತರ ಸಿಗುತ್ತದೆ’. ‘ನಮ್ಮ ಪ್ರಶ್ನೆಗೂ, ನಿಮ್ಮ ಮನೆಯ ಅಟ್ಟಕ್ಕೂ ಏನು ಸಂಬಂಧ?’.

‘ಅಲ್ಲಿ ಕ್ಯಾಸೆಟ್‌ ಮತ್ತು ಪತ್ರಗಳ ರಾಶಿಯೇ ಇದೆ. ನಾವು ಕಷ್ಟ–ಸುಖವನ್ನು ಹಂಚಿಕೊಳ್ಳಲು ಆ ದಿನಕ್ಕೆ ಕಂಡುಕೊಂಡಿದ್ದ ಒಳದಾರಿಗಳವು’.
‘ಆ ಕ್ಯಾಸೆಟ್‌ಗಳಲ್ಲಿ ಏನು ಇರುತ್ತಿತ್ತು’ ಕುತೂಹಲದಿಂದ ಕೇಳಿದರು.

‘ನಾನು ಕ್ಷೇಮವಾಗಿದ್ದೇನೆ. ನೀವು ಕ್ಷೇಮವೆ? ನನ್ನ ಕಂಪೆನಿ, ಕೆಲಸ ಎರಡೂ ಚೆನ್ನಾಗಿವೆ. ನೀವು ನನ್ನ ಚಿಂತೆ ಬಿಡಿ. ನನಗೆ ನಿಮ್ಮದೇ ಚಿಂತೆ. ಊರಿನಲ್ಲಿ ಮಳೆ ಆಯಿತೆ? ಹೊಲದಲ್ಲಿ ಏನು ಬಿತ್ತಿದ್ದೀರಿ. ಆಕಳು ಕರು ಹಾಕಿತೆ?–ಹೀಗೆ ಕ್ಷೇಮ ಸಮಾಚಾರವನ್ನು ರೆಕಾರ್ಡ್‌ ಮಾಡಿ ಕ್ಯಾಸೆಟ್‌ ಕಳುಹಿಸುತ್ತಿದ್ದೆ. ಅದೇ ರೀತಿ ಮನೆಯವರೂ ಮಾಡುತ್ತಿದ್ದರು’ ಎಂದು ವಿಶ್ವನಾಥ ಹೇಳಿದರು.

ಕೊಲ್ಲಿ ದೇಶಗಳಿಂದ ರಜೆಗೆ ಹಿಂದಿರುಗಿದ್ದ ಯುವಕರೇ ಹೆಚ್ಚು ಇದ್ದ ಆ ಗುಂಪು ಗೊಳ್ಳೆಂದು ನಕ್ಕಿತು. ‘ದೋಸ್ತಿ ಈಗಷ್ಟೆ ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೋ ಕಳುಹಿಸಿದ್ದಾನೆ’ ಎಂದು ಹನುಮಂತ ಅದನ್ನು ತೋರಿಸಲು ಮುಂದಾದರು.

‘ಲೇ, ಹನುಮಂತ, ಊರಿನಿಂದ ಬರುವ ಪತ್ರಕ್ಕಾಗಿ ಹುಚ್ಚನಂತೆ ಕಾಯುತ್ತಿದ್ದೆ. ನಿನಗೆ ನನ್ನ ಭಾವನೆ ತಮಾಷೆಯಾಗಿ ಕಾಣಿಸುತ್ತದೆ’ ಎಂದು ವಿಶ್ವನಾಥ ರೇಗಿದರು.

ವಿಶ್ವನಾಥ ದುಬೈ ಬಿಟ್ಟು ಹತ್ತು ವರ್ಷಗಳೇ ಆದವು. ಅಲ್ಲಿ ದುಡಿದು ಕೂಡಿಟ್ಟ ಹಣದಲ್ಲಿ ಎಂಟು ಎಕರೆ ಹೊಲವನ್ನು ಖರೀದಿಸಿ ಕೃಷಿ, ಹೈನುಗಾರಿಕೆಯಲ್ಲಿ ತೊಡಗಿದ್ದಾರೆ.

ಕೂಡಂಬಲದಿಂದ ಹೋಗುವವರು ಅಲ್ಲಿ ಏನು ಕೆಲಸ ಮಾಡುತ್ತಾರೆ ಎನ್ನುವ ನನ್ನನ್ನು ಪ್ರಶ್ನೆ ಕಾಡುತ್ತಿತ್ತು. ಅದನ್ನು ಅರ್ಥ ಮಾಡಿಕೊಂಡ ಹುಡುಗರು ‘ಬ್ಲಾಸ್ಟಿಂಗ್‌, ಪೇಂಟಿಂಗ್‌ ಹಾಗೂ ಹೆಲ್ಪರ್‌’ ಕೆಲಸ ಎಂದು ಚುಟುಕಾಗಿ ಹೇಳಿದರು. ಆದರೆ, ಅದು ಯಾರಿಗೂ ತಿಳಿಯುವುದಿಲ್ಲ ಎಂದುಕೊಂಡ ನಾಗರಾಜ ‘ಆಯಿಲ್‌ ಪೂರೈಸುವ ಪೈಪ್‌ಗಳು ತುಕ್ಕು ಹಿಡಿದಿರುತ್ತವೆ. ಅವುಗಳನ್ನು ಸ್ಯಾಂಡ್‌ ಬ್ಲಾಸ್ಟಿಂಗ್‌ ಮೂಲಕ ತೆಗೆಯುವುದು, ಬಣ್ಣ ಹಚ್ಚುವುದು’ ಎಂದರು.

‘ನೀನು ಹೀಗೆ ಹೇಳಿದರೆ ಅವರಿಗೆ ತಿಳಿಯುವುದಿಲ್ಲ’ ಎಂದ ಮಹಮ್ಮದ್‌ ಜಮೀರ್‌, ‘ಗ್ಯಾರೇಜ್‌ಗಳಲ್ಲಿ ವಾಹನ ತೊಳೆಯಲು
ನೀರು ಚಿಮ್ಮಿಸುವ ಜೆಟ್‌ ಅನ್ನು ನೀವು ನೋಡಿರುತ್ತೀರಿ. ಅದೇ ರೀತಿ ಜೆಟ್‌ ಇರುತ್ತದೆ. ಅದರಲ್ಲಿ ಮರಳು ರಭಸವಾಗಿ ಬರುತ್ತದೆ. ಅದನ್ನು ತುಕ್ಕು ಇರುವ ಕಡೆ ಹಿಡಿದು ಸ್ವಚ್ಛಗೊಳಿಸಿ ಬಣ್ಣ ಹಚ್ಚುತ್ತೇವೆ’ ಎಂದು ವಿವರಿಸಿದರು.

ವಿಶ್ವನಾಥ ಅವರಿಗೆ ಬಾಲ್ಯದಲ್ಲಿ ಹೆಲಿಕಾಪ್ಟರ್‌ ಅನ್ನು ಸಮೀಪದಿಂದ ನೋಡುವ ಅದಮ್ಯ ಆಸೆ ಇತ್ತು. ತಮ್ಮೂರಿನಿಂದ 58 ಕಿಲೊಮೀಟರ್‌ ದೂರದ ಭಾಲ್ಕಿಗೆ ಮುಖ್ಯಮಂತ್ರಿ ಆರ್‌.ಗುಂಡುರಾವ್‌ ಬರುವ ಸುದ್ದಿ ವಿಶ್ವನಾಥ ಅವರ ತಂದೆಯ ಕಿವಿಗೆ ಬಿದ್ದಿತು. ಮಗನನ್ನು ಕರೆದುಕೊಂಡು ಹೋದರು. ಮಗ ಅಪ್ಪನ ಹೆಗಲ ಮೇಲೆ ಕುಳಿತು ಹೆಲಿಕ್ಯಾಪ್ಟರ್‌ನ್ನು ನೋಡಿ ಪುಳಕಗೊಂಡನು. ಅಲ್ಲಿಗೆ ಆಸೆ ತೀರಿತು ಎಂದುಕೊಳ್ಳುತ್ತಾನೆ ಮಗ. ಅಪ್ಪನೂ ಅಷ್ಟೆ. ಆದರೆ, ಅಲ್ಲಿಗೇ ಮುಗಿಯುವುದಿಲ್ಲ.

ಕೂಡಂಬಲದ ಚಿಗುರುಮೀಸೆಯ ಹುಡುಗ ಗುಂಡುರಾಜ ಕೂಡ ಕೊಲ್ಲಿ ದೇಶಗಳಲ್ಲಿ ಕೆಲಸ ಮಾಡುವ ಕನಸು ಹೊತ್ತಿದ್ದಾನೆ. ಆತ
ಸಾಮಾಜಿಕ ಕಾರ್ಯಕರ್ತ ಮುಕುಂದ ಸಂಗೋಳಗಿ ಅವರ ಬಳಿ ಹೋಗಿ ಪಾಸ್‌ಪೋರ್ಟ್‌ ಮಾಡಿಸಿಕೊಡಿ ಎಂದು ಗಂಟುಬಿದ್ದಿದ್ದಾನೆ.

‘ಮೊದಲು ಎಸ್‌ಎಸ್‌ಎಲ್‌ಸಿ ಪಾಸು ಮಾಡು. ಆಮೇಲೆ ನೋಡೋಣ’ ಎಂದು ತಿಳಿಹೇಳಿದರೂ ಆತ ಕೇಳಿಸಿಕೊಳ್ಳಲು ತಯಾರಿಲ್ಲ. ಏಕೆಂದರೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಫೇಲಾದವರೂ ಹೊರದೇಶಗಳಿಗೆ ಹೋಗಿದ್ದಾರೆ, ಹೋಗುತ್ತಲೇ ಇದ್ದಾರೆ. ಅವರು ಅಲ್ಲಿ ಹಣ ಗಳಿಸಿ ಸಾಲ ತೀರಿಸಿದ್ದಾರೆ. ಆರ್‌ಸಿಸಿ ಮನೆ ಕಟ್ಟಿಸಿದ್ದಾರೆ. ಬೈಕ್‌, ಕಾರು, ಹೊಲ, ನಿವೇಶನ ಖರೀದಿಸಿದ್ದಾರೆ. ಸಹೋದರಿಯರ ಮದುವೆ, ಸಹೋದರರ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಿದ್ದಾರೆ. ತಂದೆ–ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಒಳ್ಳೆಯ ಬಟ್ಟೆಯನ್ನು ಹಾಕುತ್ತಿದ್ದಾರೆ. ಅಲ್ಲಿಂದ ಹೀರೋ ರೀತಿ ಬರುತ್ತಾರೆ. ಇವೆಲ್ಲವೂ ಗುಂಡುರಾಜನ ಮನಸ್ಸನ್ನು ಕೆಡಿಸಿವೆ.

‘ಮದುವೆಯಾದ ನಾಲ್ಕು ದಿನಕ್ಕೆ ಹೆಂಡತಿಯನ್ನು ಬಿಟ್ಟು ಹೋಗಬೇಕು. ಹುಟ್ಟಿದ ಮಗುವನ್ನು ವಿಡಿಯೋ ಕಾಲ್‌ನಲ್ಲಿ ನೋಡಬೇಕು. ತಂದೆ–ತಾಯಿ ಸತ್ತರೆ ಅಂತಿಮ ದರ್ಶನ ಕೂಡ ಮಾಡಲು ಆಗುವುದಿಲ್ಲ. ಆಡಿ ಬೆಳೆದ ಊರು–ಕೇರಿ, ಬಾಲ್ಯದ ಗೆಳೆಯರು, ಬಂಧುಗಳು, ಆಪ್ತರು, ಜಾತ್ರೆ ಎಲ್ಲರಿಂದಲೂ ದೂರ ಇರಬೇಕು’ ಎಂದು ನಾಗರಾಜು ಬೇಸರ ಮಾಡಿಕೊಂಡರು.

ವಿಶ್ವನಾಥ ‘ಆಯಿಲ್‌ ರಿಗ್‌’ನಲ್ಲಿ ಕೆಲಸ ಮಾಡುತ್ತಿದ್ದರು. ‘ಆಯಿಲ್‌ ರಿಗ್‌’ ಎಂದರೆ ನೂರಾರು ಕಿಲೊಮೀಟರ್‌ ದೂರದ ಸಮುದ್ರದಲ್ಲಿ ತೈಲ ತೆಗೆಯಲು ಅಗತ್ಯವಾದ ಉಪಕರಣಗಳು ಇರುವ ಅಟ್ಟಣಿಗೆ. ಆ ದಿನಗಳಲ್ಲಿ ನಿತ್ಯ ಹೆಲಿಕ್ಯಾಪ್ಟರ್‌ನಲ್ಲೇ ಓಡಾಡುತ್ತಿದ್ದರು. ಆಗ ಅವರಿಗೆ ತಾವು ಹೆಲಿಕ್ಯಾಪ್ಟರ್‌ ನೋಡಲು ಭಾಲ್ಕಿಗೆ ಹೋಗಿದ್ದು ನೆನಪಾಗಿ ನಗುತರಿಸಿತ್ತು.

‘ನಿತ್ಯ ಸಮುದ್ರವನ್ನು ನೋಡಿ ಜೀವನವೇ ಬೇಡ ಅನಿಸಿತ್ತು. ಅಲ್ಲಿ ವಾಂತಿ ಮಾಡಿದ್ದು ಲೆಕ್ಕವೇ ಇಲ್ಲ. ಒಮ್ಮೆ ರಕ್ತ ವಾಂತಿ ಮಾಡಿದೆ. ಅಲ್ಲಿ ಇರಲು ಸಾಧ್ಯವೇ ಇಲ್ಲ ಅನಿಸಿತು. ನಾವು ತಂಗುತ್ತಿದ್ದ ಹಡಗಿನ ಕ್ಯಾಪ್ಟನ್‌ ಕಾಲಿಗೆ ಬಿದ್ದು ವಾಪಸು ಕಳುಹಿಸಿಬಿಡಿ ಎಂದು ಬೇಡಿಕೊಂಡೆ. ಆತನ ಮನಸ್ಸು ಕರಗಲೇ ಇಲ್ಲ. ಅಲ್ಲಿ ಕೈತುಂಬಾ ಹಣ ಸಿಗುತ್ತಿತ್ತು. ಆದರೆ ನೆಮ್ಮದಿ ಸಮುದ್ರ ಪಾಲಾಗಿತ್ತು’ ಎಂದು ಅಂತರ್ಮುಖಿಯಾದರು.

ಕೂಡಂಬಲದಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಇದೆ. ಅಲ್ಲಿ ತಿಂಗಳಿಗೆ ಒಂದೂವರೆಯಿಂದ ಎರಡು ಕೋಟಿ ರೂಪಾಯಿಗಳಷ್ಟು ಹಣ ಜಮಾ ಆಗುತ್ತದೆ. ಅದನ್ನು ಹಿರಿಯರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಅದೇ ಊರಿನ ಶಿವಪ್ಪ ಮೈಲಾರಿ ಹತ್ತು ವರ್ಷಗಳ ಕಾಲ ಎಂಟು ದೇಶಗಳಲ್ಲಿ ಕೆಲಸ ಮಾಡಿದವರು. ಈಗ ಅವರೇ ಏಜೆಂಟರಾಗಿದ್ದು, 800 ಮಂದಿಗೆ ಉದ್ಯೋಗ ಕೊಡಿಸಿದ್ದಾರೆ. ಕಂಪೆನಿಗಳಿಗೆ ಉದ್ಯೋಗಿಗಳನ್ನು ಒದಗಿಸುವ ಮೈಲಾರಿಯಂತಹ ಏಜೆಂಟರಿಗೆ ಉದ್ಯೋಗ ಪಡೆಯುವವರು ಕನಿಷ್ಠ ಐವತ್ತು ಸಾವಿರ ಕಮಿಷನ್‌ ಕೊಡಬೇಕು. ಇದಕ್ಕಾಗಿ ಬಡ್ಡಿ ಸಾಲ ಮಾಡುವುದು ಉದ್ಯೋಗಾಕಾಂಕ್ಷಿಗಳಿಗೆ ಅನಿವಾರ್ಯ.ಅವರು ಪ್ರತಿಷ್ಠೆಗಾಗಿ ಅಲ್ಲ, ಹೊಟ್ಟೆಪಾಡಿಗೆ ಅಲ್ಲಿಗೆ ಹೋದವರು. ತಮ್ಮೂರಿನಲ್ಲೇ ಕೈತುಂಬ ಕೆಲಸ ಸಿಕ್ಕಿದ್ದರೆ, ಕೃಷಿ, ತೋಟಗಾರಿಕೆ ಇಲಾಖೆ ನೆರವಿಗೆ ಬಂದಿದ್ದರೆ, ಊರಿನ ಸಮೀಪವಿದ್ದ ಸಕ್ಕರೆ ಕಾರ್ಖಾನೆ ಮುಚ್ಚದೇ ಹೋಗಿದ್ದರೆ ದೇಶ, ದೇಶ ಅಲೆಯುವ ಸ್ಥಿತಿ ಬರುತ್ತಲೇ ಇರಲಿಲ್ಲ.

ವೀರಭದ್ರೇಶ್ವರ ಗುಡಿಯ ಪ್ರಾಂಗಣದಲ್ಲಿದ್ದ ಹುಡುಗರ ಕಣ್ಣುಗಳು ಮಾತನಾಡತೊಡಗಿದವು. ಅವರ ಭಾವನೆಗಳು ಕೊಲ್ಲಿ ದೇಶಗಳ ಕರೆನ್ಸಿಯನ್ನು ರೂಪಾಯಿಗೆ ಪರಿವರ್ತಿಸಿ ಲೆಕ್ಕ ಮಾಡುವುದರಲ್ಲೇ ಕಮರಿಹೋದ ಕಥೆಯನ್ನು ಹೇಳುತ್ತಿದ್ದವು. ಆದರೆ ಗುಂಡುರಾಜುವಿನಂತಹ ಚಿಕ್ಕ ಹುಡುಗರಿಗೆ ನೋವಿನ ಕಥೆ ಹೇಳುವ ಅವರ ಕಣ್ಣುಗಳನ್ನು ಓದುವ ಸಂವೇದನೆಯೇ ಇರಲಿಲ್ಲ.

‘ಹೊರದೇಶಗಳಲ್ಲಿ ದುಡಿಯಲು ಹೋಗುವ ನನ್ನಂಥವರ ಜೀವನ ಹಾಳಾಗುತ್ತದೆ. ಆದರೆ ಊರಿನಲ್ಲಿ ಇರುವ ಕುಟುಂಬದ ಹತ್ತಾರು ಮಂದಿಯ ಬದುಕು ಹಸನಾಗುತ್ತದೆ. ನಮ್ಮ ಬದುಕು ಹೋದರೂ ಪರವಾಗಿಲ್ಲ, ಕುಟುಂಬದವರು ಚೆನ್ನಾಗಿ ಇರುತ್ತಾರಲ್ಲ ಅಷ್ಟೇ ಸಾಕು’ ಎಂದು ನಾಗರಾಜ ಕಣ್ಣು ತುಂಬಿಕೊಂಡರು.

ನನಗೆ ಆ ರಾತ್ರಿ ನಿದ್ರೆ ಬರಲೇ ಇಲ್ಲ. ಕರ್ಪೂರ ಉರಿಯದೇ ಬೆಳಕು ಬರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT