ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರಹಾಂತರ’ಕ್ಕೆ ನೂರು ವರ್ಷಗಳ ಗಡುವು

ಅಕ್ಷರ ಗಾತ್ರ

ಮನುಕುಲದ ಬದುಕುಳಿಯುವಿಕೆಗೆ ಮುಂದಿನ ನೂರು ವರ್ಷಗಳೊಳಗೆ ಬೇರೆ ಗ್ರಹವೊಂದಕ್ಕೆ ಮಾನವರು ವಲಸೆ ಹೋಗುವುದು ಅನಿವಾರ್ಯ ಎಂದು ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಹೇಳುತ್ತಾರೆ. ಈ ಎಚ್ಚರಿಕೆಯನ್ನು ಅವರು ನೀಡಿದ್ದು ಬಿಬಿಸಿಯಲ್ಲಿ ಪ್ರಸಾರವಾಗಲಿರುವ ‘ಎಕ್ಸ್‌ಪೆಡಿಶನ್ ನ್ಯೂ ಅರ್ಥ್’ (ಹೊಸ ಭೂಮಿಯ ಮೇಲೆ ದಂಡಯಾತ್ರೆ) ಎಂಬ ಸಾಕ್ಷ್ಯಚಿತ್ರ ಸರಣಿಗೆ. ಹವಾಮಾನ ವೈಪರೀತ್ಯಗಳು, ಬಾಹ್ಯಾಕಾಶದಲ್ಲಿ ಚಲಿಸುತ್ತಿರುವ ಕ್ಷುದ್ರಗ್ರಹಗಳು ಭೂಮಿಯ ಮೇಲೆ ಬೀಳುವ ಸಾಧ್ಯತೆ, ಸಾಂಕ್ರಾಮಿಕ ರೋಗಗಳು ಮತ್ತು ಜನಸಂಖ್ಯಾ ಹೆಚ್ಚಳಗಳ ಕಾರಣದಿಂದ ಭೂಮಿಯ ಮೇಲೆ ಮನುಷ್ಯನ ಬದುಕು ದಿನೇ ದಿನೇ ಹೆಚ್ಚು ಅನಿಶ್ಚಿತವಾಗುತ್ತಿದೆ ಎಂದು ಹಾಕಿಂಗ್ ವಾದಿಸುತ್ತಾರೆ. ಇವುಗಳ ಜೊತೆಗೆ ತುಂಬ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಕೃತಕ ಬುದ್ಧಿವಂತಿಕೆ) ಈಗ ಅಸ್ತಿತ್ವದಲ್ಲಿರುವ ಏಕೈಕ ಮನುಷ್ಯ ವರ್ಗವಾದ ಸೇಪಿಯನ್ನರ ಭವಿಷ್ಯಕ್ಕೆ ಅತ್ಯಂತ ದೊಡ್ಡ ಕಂಟಕವಾಗಿ ಹೊರಹೊಮ್ಮುತ್ತಿದೆ.

ಮನುಕುಲ ಎದುರಿಸುತ್ತಿರುವ ಇಂತಹ ಅಪಾಯಗಳ ಬಗ್ಗೆ ಹಾಕಿಂಗ್ ಹಿಂದೆಯೂ ಹಲವಾರು ಬಾರಿ ಮಾತನಾಡಿದ್ದಾರೆ. ಕೇವಲ ಆರು ತಿಂಗಳ ಹಿಂದೆ, 2016ರ ನವೆಂಬರ್‌ನಲ್ಲಿ ಆಕ್ಸಫರ್ಡ್ ವಿಶ್ವವಿದ್ಯಾಲಯದ ಯೂನಿಯನ್‌ನಲ್ಲಿ ಮಾತನಾಡುತ್ತ, ಮನುಕುಲದ ಭವಿಷ್ಯದ ನೆಲೆಯಾಗಿ ಇನ್ನೊಂದು ಗ್ರಹವನ್ನು ಹುಡುಕಿ ಅಲ್ಲಿ ನೆಲೆಸಲು ವ್ಯವಸ್ಥೆ ಮಾಡಲು ಸುಮಾರು ಒಂದು ಸಾವಿರ ವರ್ಷಗಳಷ್ಟು ಸಮಯವಿದೆ ಎಂದಿದ್ದರು. ನಂತರದ ಆರು ತಿಂಗಳಲ್ಲಿ ನೂರು ವರ್ಷಗಳ ಹೊಸ ಗಡುವನ್ನು ಹಾಕಿಂಗ್ ನೀಡುವಂತೆ ಮಾಡುವ ಹೊಸ ಅನ್ವೇಷಣೆಗಳು ಅಥವಾ ಬೆಳವಣಿಗೆಗಳು ಭೂಮಿಯ ಮೇಲೇನೂ ಆಗಿಲ್ಲ. ಆದರೂ ನಮ್ಮ ಕಾಲದ ಅತ್ಯಂತ ಬುದ್ಧಿವಂತ ಮನುಷ್ಯನೆಂದು ಗುರುತಿಸಲಾಗುವ 74 ವರ್ಷ ವಯಸ್ಸಿನ ಹಾಕಿಂಗ್ ಅವರ ಮಾತುಗಳನ್ನು, ಅವು ಎಷ್ಟೇ ಪ್ರಚೋದನಕಾರಿ ಹಾಗೂ ವಿವಾದಾತ್ಮಕವಾಗಿದ್ದರೂ, ವಕ್ರನೊಬ್ಬನ ಹುಚ್ಚು ನುಡಿಗಳೆಂದು ತಳ್ಳಿಹಾಕುವಂತಿಲ್ಲ.

ಹಾಗಾದರೆ ಈಗ ನಮ್ಮ ಮಕ್ಕಳ ಜೀವಿತಾವಧಿಯೊಳಗೆಯೇ ಭೂಮಿಯಾಚೆಗಿನ ವಸಾಹತನ್ನು ಮನುಷ್ಯರು ಹುಡುಕಿಕೊಳ್ಳಬೇಕಾದ ಅನಿವಾರ್ಯ ಇದೆ ಎಂದು ಹಾಕಿಂಗ್ ಹೇಳುತ್ತಿದ್ದಾರೆಯೇ? ಭೂಮಿಯ ಮೇಲೆ ಮನುಷ್ಯನ ಭವಿಷ್ಯ ವೈಜ್ಞಾನಿಕ ಕಥನ (ಸೈನ್ಸ್ ಫಿಕ್ಷನ್) ಚಲನಚಿತ್ರವೊಂದರ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಏಕೆ? ಈ ಹಿಂದೆಯೂ ಭೂಮಿಯ ಪರಿಸರ ನಾಟಕೀಯವಾಗಿ ಬದಲಾಗಿದೆ, ಪರಿಸರ ದುರಂತಗಳು ಸಂಭವಿಸಿವೆ. ಭೂಮಿಯ ಮೇಲೆ ವಾಸಿಸುತ್ತಿದ್ದ ಡೈನಾಸೋರ್‌ಗಳಂತಹ ಪ್ರಬಲ ಜೀವಿಗಳು ಅಳಿದಿವೆ. ಹಿಂದಿನ ಈ ವಿಪತ್ತುಗಳಿಗೂ ಇಂದಿನ ಬಿಕ್ಕಟ್ಟುಗಳಿಗೂ ಇರುವ ಸಾಮ್ಯತೆ ಅಥವಾ ವ್ಯತ್ಯಾಸಗಳೇನು?

ಈ ಯಾವ ಪ್ರಶ್ನೆಗಳಿಗೂ ಸುಲಭ, ಸರಳವಾದ ಉತ್ತರಗಳು, ಪರಿಹಾರಗಳು ಇಲ್ಲ. ನಾನು ವಿಜ್ಞಾನ ಮತ್ತು ತಂತ್ರಜ್ಞಾನಗಳ
ಸಂಶೋಧಕನಲ್ಲ. ನಾಗರಿಕತೆಗಳ ಇತಿಹಾಸವನ್ನು ಅಭ್ಯಾಸ ಮಾಡುವ ನಾನು, ನಮ್ಮ ಅಸ್ತಿತ್ವಕ್ಕೆ ಕುತ್ತು ಬರುವಂತಹ ಇಂದಿನ ಸವಾಲುಗಳನ್ನು ಹೇಗೆ ಗ್ರಹಿಸಬೇಕು ಎನ್ನುವ ಪ್ರಶ್ನೆಯನ್ನು ಕೇಳಿಕೊಳ್ಳುತ್ತಿದ್ದೇನೆ. ಇದಕ್ಕೆ  ತಾತ್ಕಾಲಿಕ ಉತ್ತರವಾಗಿ ಕೆಳಗಿನ ಕಥನವನ್ನು ನೀಡಬಹುದು ಎನ್ನಿಸುತ್ತಿದೆ.
ಸುಮಾರು ಎಪ್ಪತ್ತು ಸಾವಿರ ವರ್ಷಗಳಿಂದೀಚೆಗೆ ಸೇಪಿಯನ್ನರು ಭೂಮಿ ಹಾಗೂ ಅದರಲ್ಲಿರುವ ಇತರ ಜೀವಿಗಳ ಮೇಲೆ ನಿಯಂತ್ರಣ ಸಾಧಿಸಿದರು. ಈ ನಂತರದ ಸಹಸ್ರಮಾನಗಳಲ್ಲಿ ಕ್ಷಾಮ, ಸಾಂಕ್ರಾಮಿಕ ರೋಗಗಳು ಮತ್ತು ಯುದ್ಧಗಳು ಅವರು ಎದುರಿಸಿದ ಮುಖ್ಯ ಸವಾಲುಗಳು. ಇವುಗಳನ್ನು ಕೃಷಿ ಕ್ರಾಂತಿ ಹಾಗೂ ಕೈಗಾರಿಕಾ ಕ್ರಾಂತಿಗಳಂತಹ ವಿದ್ಯಮಾನಗಳ ಮೂಲಕ ಕಳೆದ ಹತ್ತು ಸಾವಿರ ವರ್ಷಗಳಲ್ಲಿ ಪರಿಹರಿಸಿಕೊಳ್ಳಬಹುದಾದ ತಾಂತ್ರಿಕ ಸಮಸ್ಯೆಗಳನ್ನಾಗಿ ಸೇಪಿಯನ್ನರು ಪರಿವರ್ತಿಸಿಕೊಂಡರು. ಅಂದರೆ ಇಂದು ಕ್ಷಾಮ, ಸಾಂಕ್ರಾಮಿಕ ರೋಗಗಳು ಮತ್ತು ಯುದ್ಧಗಳು ಸಂಭವಿಸಿದರೆ ಅವುಗಳಿಗೆ ನಮ್ಮಲ್ಲಿ ಅಗತ್ಯ ಪರಿಹಾರಗಳಿವೆ. ಅವುಗಳನ್ನು ನಾವು ಬಳಸದಿದ್ದರೆ, ಅದರ ಫಲವಾಗಿ ಪ್ರಪಂಚದ ಯಾವುದೋ ಮೂಲೆಯಲ್ಲಿ ಒಂದು ಸಮುದಾಯವು ತೊಂದರೆಗೀಡಾದರೆ, ಆಗ ತೊಂದರೆಯಲ್ಲಿದ್ದವರಿಗೆ ಇತರ ಸೇಪಿಯನ್ನರು ಸಹಾಯ ಮಾಡಲಿಲ್ಲ ಎಂದು ಮಾತ್ರ ಅರ್ಥ. ಹೀಗೆ ಪ್ರಾಕೃತಿಕ ವಿಕಸನ ಪ್ರಕ್ರಿಯೆಯ ಪ್ರಭಾವವಲಯದಿಂದ ಬಹುಮಟ್ಟಿಗೆ ಹೊರಗೆ ಬರುವಲ್ಲಿ, ಪ್ರಕೃತಿಯ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಸೇಪಿಯನ್ನರಾದ ನಾವು ಗಣನೀಯ ಯಶಸ್ಸನ್ನು ಕಂಡಿದ್ದೇವೆ. ಇದು ಕಳೆದ ಹತ್ತು ಸಾವಿರ ವರ್ಷಗಳಲ್ಲಿ ಭೂಮಿಯ ಮೇಲೆ ಸೇಪಿಯನ್ನರು ಮಾತ್ರ ಮನುಕುಲದ ಪ್ರತಿನಿಧಿಗಳಾಗಿ ಉಳಿದ ಮೇಲೆ ನಾವು ಮಾಡಿರುವ ಸಾಧನೆ.

ಈ ಹಂತದಲ್ಲಿ ಎರಡು ಟಿಪ್ಪಣಿಗಳನ್ನು ನೀಡಬೇಕು. ಮೊದಲಿಗೆ, ಸೇಪಿಯನ್ನರ ಯಶಸ್ಸು ಗಣನೀಯವಾದ ಪ್ರಮಾಣದಲ್ಲಿ ಭೂಮಿಯ ಪರಿಸರಕ್ಕೆ ಹಾನಿಯನ್ನು ಮಾಡಿದೆ ಎನ್ನುವುದು ನಿಜ. ಹಾಕಿಂಗ್‌ ಅವರ ಎಚ್ಚರಿಕೆಯ ಮಾತುಗಳಿಗೆ ಪರಿಸರಹಾನಿಯೂ ಕಾರಣ ಎನ್ನುವುದನ್ನು ಯಾರೂ ಅಲ್ಲಗಳೆಯುವುದಿಲ್ಲ. ಎರಡನೆಯದಾಗಿ, ಪರಿಸರದ ಹಾನಿ ಸಂಭವಿಸಿರುವುದು ಆಧುನಿಕತೆಯ ಸಂದರ್ಭದ ಬೆಳವಣಿಗೆಗಳಿಂದ ಮಾತ್ರವಲ್ಲ. ಅರಿವಿನ ಕ್ರಾಂತಿಯ ನಂತರ ಮನುಷ್ಯ ಭೂಮಿಯ ಯಾವ ಭಾಗಕ್ಕೆ ವಲಸೆ ಹೋದರೂ, ಅಲ್ಲೆಲ್ಲ ದೊಡ್ಡ ಪ್ರಮಾಣದಲ್ಲಿ ಜೀವ ನಾಶವಾಗಿದೆ, ಪರಿಸರದ ಬದಲಾವಣೆಯಾಗಿದೆ. ಜೊತೆಗೆ, ಸೇಪಿಯನ್ನರಿಗೆ ಆಹಾರಭದ್ರತೆಯನ್ನು ಒದಗಿಸಿದ ಕೃಷಿಕ್ರಾಂತಿಯೂ ಮನುಷ್ಯರನ್ನು ವಿಕಸನ ಪ್ರಕ್ರಿಯೆಯಿಂದ ಹೊರಗಿರಿಸುವಲ್ಲಿ ದೊಡ್ಡಪಾತ್ರ ನಿರ್ವಹಿಸಿತು. ಹಾಗಾಗಿ ನಾವು ಇಂದು ಎದುರಿಸುತ್ತಿರುವ ಪರಿಸರ ಅಸಮತೋಲನದ ಸಮಸ್ಯೆಗಳು ಆಧುನಿಕತೆ, ಕೈಗಾರಿಕಾ ಕ್ರಾಂತಿ, ಜಾಗತೀಕರಣ ಮತ್ತು ಕೊಳ್ಳುಬಾಕ ಸಂಸ್ಕೃತಿಯ ಫಲವಾಗಿ ಮಾತ್ರ ಉತ್ಪನ್ನವಾಗಿಲ್ಲ. ಇಸ್ರೇಲಿ ಇತಿಹಾಸಕಾರ ಯುವಾಲ್ ಹರಾರಿಯವರ ಪ್ರಭಾವಶಾಲಿ ಕಥನದ ಬಹುಮುಖ್ಯ ಒಳನೋಟಗಳಲ್ಲಿ ಈ ಅಂಶವೂ ಒಂದು. ಆದರೆ ಆಧುನಿಕತೆ ಇತ್ಯಾದಿಗಳು ಪರಿಸರದ ಮೇಲಿನ ಆಕ್ರಮಣವನ್ನು ಮತ್ತಷ್ಟು ತೀವ್ರಗೊಳಿಸಿದವು ಎನ್ನುವುದರಲ್ಲಿ ಅನುಮಾನವಿಲ್ಲ.

ಇಷ್ಟಾದರೂ ಕಳೆದ ಎಪ್ಪತ್ತು ವರ್ಷಗಳಲ್ಲಿ ಮನುಷ್ಯನ ಮೂಲಗುಣದಲ್ಲಿ, ಅರಿವಿನ ಶಕ್ತಿಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆಗಳಾಗಿರಲಿಲ್ಲ. ಆ ಮಾತನ್ನು ಕಳೆದ ಮೂರು ದಶಕಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಆಗಿರುವ ಬೆಳವಣಿಗೆಗಳು, ಹೊಸ ಶೋಧನೆಗಳ ಹಿನ್ನೆಲೆಯಲ್ಲಿ ಇನ್ನು ಮುಂದೆ ಪುನರುಚ್ಚರಿಸಲು ಸಾಧ್ಯವಿಲ್ಲ. ಮುಂದಿನ 50 ವರ್ಷಗಳಲ್ಲಿ ಯಾವ ಬಗೆಯ ಬದಲಾವಣೆಗಳಾಗಬಹುದು, ಸೇಪಿಯನ್ನರು ಎದುರಿಸಬಹುದಾಗಿರುವ ಸವಾಲುಗಳೇನು ಎನ್ನುವುದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲದ ಸಂದರ್ಭದಲ್ಲಿ ನಾವಿಂದು ಇದ್ದೇವೆ. ಹಾಕಿಂಗ್ ಮೊದಲಾಗಿ ಹಲವರು ಭೂಮಿಯ ಮೇಲೆ ಮನುಕುಲದ ಭವಿಷ್ಯದ ಬಗ್ಗೆ ಆತಂಕಿತರಾಗಿರುವುದಕ್ಕೆ ಇದೇ ಕಾರಣ.  

ಕಳೆದ ಮೂರು-ನಾಲ್ಕು ದಶಕಗಳಲ್ಲಿ ಮನುಕುಲದ ಇತಿಹಾಸದಲ್ಲಿಯೇ ನಾವು ಕಾಣದ ರೀತಿಯ ಬದಲಾವಣೆಗಳು ಅತ್ಯಂತ ಕ್ಷಿಪ್ರವಾಗಿ ಆಗುತ್ತಿವೆ ಎನ್ನುವುದು ಇಂದು ಸ್ಪಷ್ಟವಾಗುತ್ತಿದೆ. ಇದಕ್ಕೆ ಕಾರಣ ಮಾಹಿತಿ ತಂತ್ರಜ್ಞಾನ, ಖಗೋಳ ವಿಜ್ಞಾನ ಮತ್ತು ಜೀವವಿಜ್ಞಾನಗಳಲ್ಲಿ ನಡೆಯುತ್ತಿರುವ  ಸಂಶೋಧನೆಗಳು. ಯುವಾಲ್ ಹರಾರಿ ಹೊಸ ಸಂಶೋಧನೆಗಳನ್ನು ಮನುಷ್ಯರನ್ನು ದೇವರನ್ನಾಗಿಸಲು, ಅಂದರೆ ಸಾವನ್ನು ಗೆಲ್ಲಲು ಮತ್ತು ಚಿರಯೌವನವನ್ನು ಪಡೆಯಲು ಸೇಪಿಯನ್ನರು ಅನುಸರಿಸುತ್ತಿರುವ ಮೂರು ದಾರಿಗಳು ಎಂದು ವಿಂಗಡಿಸುತ್ತಾರೆ. ಮೊದಲನೆಯದು, ಜೈವಿಕ ಎಂಜಿನಿಯರಿಂಗ್. 400 ಕೋಟಿ  ವರ್ಷಗಳ ನೈಸರ್ಗಿಕ ವಿಕಾಸ ಪ್ರಕ್ರಿಯೆಯ ನಂತರ ನಾವು ಇಂದು ಪಡೆದಿರುವ ಶರೀರದ
ಡಿ.ಎನ್.ಎ., ಹಾರ್ಮೋನುಗಳು ಮತ್ತು ಮಿದುಳಿನ ಸ್ವರೂಪವನ್ನು ಬದಲಿಸಿದರೆ, ನಾವು ಮತ್ತಷ್ಟು ಸಾಮರ್ಥ್ಯವನ್ನು ಪಡೆಯಬಹುದು ಎಂಬ ಆಶಾವಾದ ಇಲ್ಲಿ ಕೆಲಸ ಮಾಡುತ್ತಿದೆ. ಇದರಿಂದ ದುರ್ಬಲವಾಗುತ್ತಿರುವ ದೇಹದ ಯಾವುದೇ ಅಂಗವನ್ನು ಬದಲಿಸಿ, ಚಿರಯೌವನವನ್ನು ಪಡೆಯಬೇಕು ಎಂದು ಹಲವರು ಬಯಸುತ್ತಿದ್ದಾರೆ. ಎರಡನೆಯದು ಸೈಬೋರ್ಗ್ ಎಂಜಿನಿಯರಿಂಗ್. ಅಂದರೆ ಇಲ್ಲಿ ದೇಹದ ಸಾವಯವ ಭಾಗಗಳ ಜೊತೆಗೆ ಕೃತಕವಾಗಿ ತಯಾರಿಸಿದ ಅಂಗಗಳು ಇಲ್ಲವೇ  ಪದಾರ್ಥಗಳನ್ನು ಜೋಡಿಸಲಾಗುವುದು. ಉದಾಹರಣೆಗೆ, ಕೃತಕ ಕೈಗಳು ಇಲ್ಲವೆ ಕಣ್ಣುಗಳ ಬಳಕೆ ಅಥವಾ ದೇಹದೊಳಗೆ ಲಕ್ಷಾಂತರ ಪುಟಾಣಿ (ನ್ಯಾನೊ) ರೊಬಾಟುಗಳನ್ನು ಬಿಟ್ಟು ಅವುಗಳ ಮೂಲಕ ಸಮಸ್ಯೆಗಳನ್ನು ಪತ್ತೆ ಹಚ್ಚಿ, ಚಿಕಿತ್ಸೆ ಮಾಡುವುದು. ಸೈಬೋರ್ಗ್ ಮನುಷ್ಯರೂ ಒಂದು ವಿಧದಲ್ಲಿ ಸಾಂಪ್ರದಾಯಿಕವಾದ ಜೀವಿಗಳೇ. ಏಕೆಂದರೆ ಅವುಗಳ ನಿಯಂತ್ರಣ ಮನುಷ್ಯರ ಮಿದುಳಿನಲ್ಲಿ ಇರುತ್ತದೆ. ಅಂದರೆ ಅಂಗಗಳು ಶಕ್ತಿಶಾಲಿಗಳಾಗಿದ್ದರೂ, ಮಿಕ್ಕಂತೆ ಮನುಷ್ಯಪ್ರಜ್ಞೆ ಇರುತ್ತದೆ.

ಈ ಮೇಲಿನ ಎರಡು ಪಥಗಳಿಗಿಂತ ಭಿನ್ನವಾದುದು ಮೂರನೆಯ ಪಥ. ಅದಾವುದೆಂದರೆ ಕೃತಕ ಜೀವಿಗಳನ್ನು ಸೃಷ್ಟಿಸುವ ಎಂಜಿನಿಯರಿಂಗ್. ಕೃತಕ ಬುದ್ಧಿವಂತಿಕೆ ಅಥವಾ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ವಿವಿಧ ಉದ್ದೇಶಗಳಿಗೆ ಬಳಕೆಯಾಗಬಹುದು. ಉದಾಹರಣೆಗೆ, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ರೊಬಾಟುಗಳು ಅಥವಾ ಚಾಲಕರಹಿತ ವಾಹನಗಳನ್ನು ನಡೆಸುವ ಯಂತ್ರಗಳು ಇತ್ಯಾದಿ. ಆದರೆ ಕಡೆಗೆ ಈ ಪ್ರಕ್ರಿಯೆಯು ಅತ್ಯಂತ ಬುದ್ಧಿವಂತ (ಇಂಟಲಿಜೆಂಟ್) ಕೃತಕ ಜೀವಿಗಳನ್ನು ಸೃಷ್ಟಿಸುತ್ತದೆ. ಈ ಜೀವಿಗಳಿಗೆ ಮನುಷ್ಯರಂತೆ ಪ್ರಜ್ಞೆ (ಕಾನ್ಷಿಯಸ್‌ನೆಸ್) ಇರದಿರಬಹುದು. ಆದರೆ ಮನುಷ್ಯರಂತೆ ಶಾರೀರಿಕ ಮತ್ತು ಬೌದ್ಧಿಕ (ಕಾಗ್ನಿಟಿವ್) ಶಕ್ತಿಗಳನ್ನು ಕೃತಕ ಜೀವಿಗಳು ಹೊಂದಿರುತ್ತವೆ. ಇವುಗಳು ಮನುಷ್ಯರಿಗಿಂತಲೂ ಹೆಚ್ಚು ಸಮರ್ಥವಾಗಿ ನಮ್ಮ ಬಹುಪಾಲು ಕೆಲಸಗಳನ್ನು ಮಾಡಬಲ್ಲವು. ಇದು ಟ್ಯಾಕ್ಸಿಚಾಲಕನಿಂದ ಪರಿಣತ ವೈದ್ಯರವರೆಗೆ ಎಲ್ಲರ ವಿಚಾರದಲ್ಲಿಯೂ ಸತ್ಯವಾಗುವ ಭವಿಷ್ಯವೊಂದು ಹತ್ತಿರದಲ್ಲಿದೆ. ಈಗಾಗಲೇ ಉತ್ಪಾದನಾ ಪ್ರಕ್ರಿಯೆಯಿಂದ ಸಾಫ್ಟ್‌ವೇರ್ ಉದ್ಯಮದವರಗೆ ಎಲ್ಲೆಡೆ ಕೃತಕ ಬುದ್ಧಿವಂತಿಕೆಯ ವ್ಯಾಪಕ ಬಳಕೆಯಾಗುತ್ತಿದೆ. ಮುಂದೆ ಈ ಪ್ರಕ್ರಿಯೆ ಮತ್ತಷ್ಟು ಹೆಚ್ಚಲಿದೆ.

ಇದರ ಅಪಾಯವೇನು? ಯಂತ್ರ ಕಲಿಕೆ (ಮಶೀನ್ ಲರ್ನಿಂಗ್) ಯಾವ ದಿಶೆಯಲ್ಲಿ ಮುಂದುವರೆಯಬಹುದು, ಯಾವ ಬಗೆಯ ಜೀವಿಗಳನ್ನು ಹುಟ್ಟುಹಾಕಬಹುದು ಎನ್ನುವುದನ್ನು ನಾವು ಊಹಿಸಲೂ ಅಸಾಧ್ಯ. ನಮ್ಮ ಇದುವರೆಗಿನ ಐತಿಹಾಸಿಕ ಅನುಭವಗಳು ನಮ್ಮ ತಕ್ಷಣದ ಭವಿಷ್ಯವನ್ನು ಎದುರಿಸಲು ನಮಗೆ ಹೆಚ್ಚು ಉಪಯುಕ್ತವಲ್ಲ. ಸೈಬೋರ್ಗ್ ಜೀವಿಗಳು ಅಥವಾ ಕೃತಕ ಜೀವಿಗಳು ಸೇಪಿಯನ್ನರ ಜೊತೆಗೆ ಹೇಗೆ ವರ್ತಿಸಬಹುದು ಎನ್ನುವುದು ಗೊತ್ತಿಲ್ಲ. ಈ ಅನಿಶ್ಚಿತತೆ ಒಂದೆಡೆಯಾದರೆ ಸೇಪಿಯನ್ನರು ಭೂಮಿಯ ಮೇಲೆ ತಮ್ಮ ನಿಯಂತ್ರಣ ಉಳಿಸಿಕೊಳ್ಳುತ್ತಾರೆ ಎನ್ನುವ ಭರವಸೆ ಕಡಿಮೆಯಾಗುತ್ತಿದೆ. ಅದಕ್ಕಾಗಿಯೇ ಹಾಕಿಂಗ್ ಭೂಮಿಯಾಚೆಗಿನ ವಸಾಹತುಗಳ ಸಾಧ್ಯತೆಯ ಬಗ್ಗೆ ಮಾತನಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT