ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಾಹ’ದ ಮುಂದೆ ಯಾರಿಗೆ ಯಾವ ಎಚ್ಚರ?

Last Updated 7 ಜೂನ್ 2016, 10:04 IST
ಅಕ್ಷರ ಗಾತ್ರ

ಈಗ ‘ಇತಿಹಾಸ ಕಥನ’ ಎನ್ನುವುದು ಘಟನಾವಳಿಗಳ ಹೊಸ ನಿರೂಪಣೆ ಮಾತ್ರವಲ್ಲ. ಅದು ಅಂತರಂಗದ ಇತಿಹಾಸ ಕೂಡ. ಮಹಾಭಾರತವು ಇತಿಹಾಸ ಹೌದು; ಇತಿಹಾಸದ ಇತಿಹಾಸವೂ ಹೌದು.

ಆಐವರು ಒಡಹುಟ್ಟುಗಳು – ಕ್ಷತ್ರಿಯರು – ದಟ್ಟ ಕಾಡಿನಲ್ಲಿ ಅನ್ಯಕಾರ್ಯಾರ್ಥ ಅಲೆದಾಡುತ್ತಿದ್ದರು. ಅವರು ಹುಡುಕುತ್ತಿದ್ದ ಆ ಕವಲುಗೊಂಬಿನ ಜಿಂಕೆ ಇನ್ನೂ ಕಾಣಸಿಕ್ಕಿರಲಿಲ್ಲ. ಅದು ಜಿಂಕೆಯ ಬೇಟೆಯಾಗಿರಲಿಲ್ಲ. ಮೃಗದ ಕೊಂಬಿನಲ್ಲಿ ಬ್ರಾಹ್ಮಣನೊಬ್ಬನ ಯಜ್ಞಸಾಮಗ್ರಿ ಸಿಕ್ಕಿಹಾಕಿಕೊಂಡಿತ್ತು! ಅದನ್ನು ಮರಳಿ ಪಡೆಯಬೇಕಿತ್ತು.

ಕಾಡಿನ ವಾಸದಲ್ಲಲ್ಲದೆ ಇಂಥ ಅನುಭವ ಅನ್ಯತ್ರ ಸಾಧ್ಯವಿರಲಿಲ್ಲ! ಹೀಗೆ ಜಿಂಕೆಯನ್ನು ಹುಡುಕುತ್ತ ಅಲೆಯುತ್ತಿದ್ದ ಪಾಂಡವ ಸೋದರರಿಗೆ ಸಹಜವಾಗಿ ತುಂಬ ಬಳಲಿಕೆಯಾಯಿತು. ಬಸವಳಿದು ತೀರ ಗಂಟಲೊಣಗುತ್ತಿತ್ತು. ಇಲ್ಲೇ ಎಲ್ಲಾದರೂ ನೀರಿದೆಯೇನು? ನಾತಿ ದೂರದಲ್ಲಿ ಒಂದು ಕೊಳ ಕಂಡಿತು. ತುಂಬು ತಿಳಿನೀರು. ಹಿರಿಯ ಯುಧಿಷ್ಠಿರ, ನಕುಲನಿಗೆ ಹೇಳಿದ:

‘ನೀನು ನೀರು ಕುಡಿದು ಬಾ. ಹಾಗೇ, ಈ ಬತ್ತಳಿಕೆಗಳಲ್ಲಿ ನೀರು ತುಂಬಿಸಿಕೊಂಡು ಬಾ – ನಮಗಾಗಿ. ನಾವಿಲ್ಲೇ ಇರುವೆವು. ‘ಚರ್ಮದ ತೂಣೀರ – ಬತ್ತಳಿಕೆ – ಇಂಥ ಸಂದರ್ಭಗಳಲ್ಲಿ ನಮ್ಮ  ತತ್ರಾಣಿಯಂತೆ ನೀರ ಬಳಕೆಗೆ ಒದಗಿ ಬರುತ್ತಿತ್ತು.

ಜಿಂಕೆಯೊಂದನ್ನು ಬೆನ್ನಟ್ಟುವ ಈ ಪ್ರಸಂಗವನ್ನು ಚಿತ್ರಿಸುವಲ್ಲಿ ನಮ್ಮ ಕುಮಾರವ್ಯಾಸ ರಾಮಾಯಣದ ನೆನಪನ್ನು ತರುತ್ತಾನೆ. ಕಾಡಿನಲ್ಲಿ ಬಂಗಾರದ ಜಿಂಕೆಯನ್ನು ರಾಮ ಬೆಂಬತ್ತಿದಂತೆ ಎಂದು ಹೋಲಿಸುತ್ತಾನೆ. ‘ಮಾಯಾ ಹರಿಣನನು ಬೆಂಬತ್ತಿ ವಿಹ್ವಲ ಕರಣನಾದಂದದಲಿ’ ಎನ್ನುತ್ತಾನೆ. ಇಲ್ಲೊಂದು ‘ಮಾಯೆ’ ಇದೆ ಎಂದು ಸೂಚಿಸುವುದು ಕುಮಾರವ್ಯಾಸನ ಇಂಗಿತ. ಈ ಸಂದರ್ಭ ಪಂಪನಲ್ಲಿಯೂ ಇದೆ.

ಪಂಪನಲ್ಲಿಯೂ ‘ಮಾಯೆ’ ಇದೆ. ಗಾಢವಾಗಿದೆ. ‘ಮಾಯೆ’ ಕವಿಗಳ ಜೀವಾಳವಲ್ಲವೆ! ಆದರೆ ಪಂಪನಲ್ಲಿ ಪ್ರಾಣಿ ಬದಲಾಗಿದೆ. ಜಿಂಕೆಯ ಬದಲಿಗೆ ಆನೆ ಕಾಣಿಸಿಕೊಂಡಿದೆ. ‘ಆನೆ’ಗೆ ಮತ್ತೇರಿದೆ. ‘ಮದ’, ಮಾಯೆಯೇ ಅಲ್ಲವೆ? ‘ಮಾಯಾ ಮತ್ತ ಹಸ್ತಿ’ ಎಂದೇ ಹೇಳುತ್ತಾನೆ.

ಆ ‘ಮದಾಂಧ ಗಂಧ ಸಿಂಧುರದ ಕೋಳಾಹಳ’ವನ್ನು ಬಣ್ಣಿಸಲು ಪಂಪ ಒಂದು ‘ಮತ್ತೇಭವಿಕ್ರೀಡಿತ’ವನ್ನೇ ಮೀಸಲು ಮಾಡಿದ್ದಾನೆ. ‘ಬೇವಸಮಂ ಮಾಡುವುದಾಯ್ತದೊಂದು ವಿಭವಂ ಮತ್ತೇಭವಿಕ್ರೀಡಿತಂ’– ಆ ಮದ್ದಾನೆಯ ಉಪಟಳ ಆಶ್ರಮವಾಸಿಗಳಿಗೆ ದೊಡ್ಡ ಸಂಕಟವನ್ನುಂಟುಮಾಡುವುದಾಯಿತು – ಎನ್ನುತ್ತಾನೆ.

ನಕುಲ – ಇವನು ಮಾದ್ರಿಯ ಅವಳಿ ಮಕ್ಕಳಲ್ಲಿ ಹಿರಿಯ – ಕೊಳದ ಬಳಿ ಬಂದ. ನೀರನ್ನು ನೋಡುತ್ತಲೇ ಅವನ ತೃಷೆ ತೀವ್ರವಾಯಿತು. ಇನ್ನೇನು ನಕುಲ ಕೊಳಕ್ಕೆ ಇಳಿಯುವುದರಲ್ಲಿದ್ದ. ಆಗ ಎಲ್ಲಿಂದಲೋ ಒಂದು ಧ್ವನಿ ಕೇಳಿಸಿತು; ಆಗಸದ ಒಂದು ಮೂಲೆಯಿಂದ. ‘ದುಡುಕದಿರು.

ಈ ಕೊಳ ನನ್ನದು. ನಿನ್ನಿಂದ ಎಷ್ಟೋ ಮೊದಲೇ ಇದು ನನ್ನದಾಗಿರುವುದು. ‘ಮಮ ಪೂರ್ವ ಪರಿಗ್ರಹಃ’. ಆದುದರಿಂದ ನನ್ನ ಅನುಮತಿ ಇಲ್ಲಿದೆ ನೀರನ್ನು ಮುಟ್ಟದಿರು. ಅನುಮತಿ ಸಿಗಬೇಕಾದರೆ ನನ್ನನ್ನು ಕಾಡುವ ಪ್ರಶ್ನೆಗಳಿಗೆ ತಕ್ಕ ಸಮಾಧಾನವನ್ನು ಹೇಳಬೇಕು. ಆಮೇಲೆ ನಿನ್ನ ತೃಷೆ ಯಥೇಷ್ಟ ತಣಿಸಿಕೋ.

ಇತರರನ್ನೂ ತಣಿಸುವೆಯಂತೆ’– ಹೀಗೆಂದು ಆ ಧ್ವನಿ ನುಡಿಯುತ್ತಿತ್ತು. ನಕುಲ ಸುತ್ತಲೆಲ್ಲ ನೋಡಿದ. ಯಾರೂ ಕಾಣಿಸುತ್ತಿಲ್ಲ. ನುಡಿಯೇನೋ ಸ್ಪಷ್ಟವಿತ್ತು. ಆದರೆ ನಕುಲನನ್ನು ನೀರು ಸೆಳೆಯುತ್ತಿತ್ತು. ನೀರಿಗಿಳಿದು ಬೊಗಸೆ ತುಂಬ ಕುಡಿದ. ದಡಕ್ಕೆ  ಬಂದವನು ಅಶರೀರವಾಣಿಗೆ ತನ್ನ ಶರೀರವನ್ನೇ ತೆತ್ತಂತೆ ಕೆಡೆದುಬಿದ್ದ.

‘ಮಮ ಪೂರ್ವ ಪರಿಗ್ರಹಃ’ ಎನ್ನುವುದಿಲ್ಲಿ ವ್ಯಾಸರ ಅರ್ಥವತ್ತಾದ ಮಾತು. ಲಾಗಾಯತಿನಿಂದ ಇದು – ಈ ಕೊಳ – ನನ್ನದಾಗಿದೆ; ನನ್ನದಾಗಿಸಿಕೊಂಡಿದ್ದೇನೆ ಎನ್ನುವುದು ಈ ಮಾತಿನ ಅರ್ಥ. ಕುಮಾರವ್ಯಾಸ ಹೀಗೆಯೇ ಗ್ರಹಿಸಿದ್ದಾನೆ; ವ್ಯಾಸರ ಮಾತುಗಳನ್ನೇ ನುಡಿದಿದ್ದಾನೆ.
‘ತನಗೀ ಕ್ಷೋಣಿಯಲಿ ಪೂರ್ವದ ಪರಿಗ್ರಹ ವೀ ಸರೋವರವು’. ಪಂಪನೂ ಕೂಡ.

‘ಮರುಮಾತನಿತ್ತು ಮದೀಯೆ ಸರೋವರದ ತೋಯಮಂ ಕುಡಿ’– ಇದು ಪಂಪನ ನುಡಿ. ಆದರೆ ವ್ಯಾಸಭಾರತಕ್ಕೆ ‘ಭಾರತ ಭಾವ ದೀಪ’ ಎಂಬ ವ್ಯಾಖ್ಯಾನವನ್ನು ಬರೆದ ನೀಲಕಂಠ ಚತುರ್ಧರ (ಚೌಧರಿ) – ‘ಪರಿಗ್ರಹೋ ನಿಯಮಃ’ – ಹಿಂದಿನಿಂದ ನಡೆದುಬಂದ ಕಟ್ಟಳೆ ಎನ್ನುತ್ತಾನೆ.

ಏನು ಕಟ್ಟಳೆ? ನಿಯಮ? ಪ್ರಶ್ನೆಗಳಿಗೆ ಉತ್ತರಿಸಿದವನು ಮಾತ್ರ ನೀರು ಕುಡಿಯಬಹುದೆನ್ನುವುದು. ನೀಲಕಂಠನ ‘ನಿಯಮ’ಕ್ಕಿಂತ ಈ ಕೊಳ ತನ್ನದೆನ್ನುವ ‘ನಿಯಾಮಕ ಭಾವ’ದ ಅರ್ಥವೇ ಹೆಚ್ಚು ಸ್ವರಸವಾಗಿದೆ.

***
ಸತ್ಯವತೀಪುತ್ರರಾದ ಕೃಷ್ಣದ್ವೈಪಾಯನ ವ್ಯಾಸರು ರಚಿಸಿದ – ಹೇಳಿ ಬರೆಯಿಸಿದ ಈ ಇತಿಹಾಸ ಕಥನಕ್ಕೆ ‘ಭಾರತ’ ಎಂದು ಹೆಸರು. ವ್ಯಾಸರು ಈ ಇತಿಹಾಸವನ್ನು ಗಣಪತಿಗೆ ಹೇಳಿ ಬರೆಯಿಸಿದರು ಎನ್ನುವುದು ಅರ್ಥಪೂರ್ಣವಾದ ಒಂದು ಸಂದರ್ಭವಾಗಿದೆ. ಅಂದರೆ ಇದು ಮೌಖಿಕವಾದ ಇತಿಹಾಸ ಮಾತ್ರವಲ್ಲ; ಲಿಪಿಬದ್ಧವಾದ ಇತಿಹಾಸ ಕೂಡ.

ಚರಿತ್ರೆಯು ಮೌಖಿಕತೆಯಿಂದ ಲಿಪಿಬದ್ಧತೆಗೆ ಹೊರಳುತ್ತಿರುವ ಸಂದರ್ಭ. ವ್ಯಾಸರು ಮೌಖಿಕ ಪರಂಪರೆಯ ಪ್ರತಿನಿಧಿ. ಅವರೇ ಲಿಪಿಬದ್ಧಗೊಳಿಸಬಹುದಾಗಿತ್ತು. ಆದರೆ ಲಿಪಿಕಾರ ವರ್ಗವೊಂದು ಬೇರೆಯೇ ಇತ್ತು.

ಈ ಹೊಸ ವರ್ಗಕ್ಕೆ ಒಂದು ಬಗೆಯ ಗರ್ವವೂ ಇತ್ತು. ನಾನು ಬರೆಯಬಲ್ಲ ವೇಗಕ್ಕೆ ಅನುಸರಿಸಿ ನೀವು ಹೇಳಬಲ್ಲಿರಾ ಎಂದು ವ್ಯಾಸರನ್ನು ಕೇಳಿದನಂತೆ ಗಣಪತಿ! ಆಗ, ‘ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ’ಯ ವ್ಯಾಸರು; ‘ಕಂಠಪತ್ರದ ಉಲುಹುಗೆಡದಗ್ಗಳಿಕೆ’ಯ ಗಣಪತಿಗೆ,

‘ನಾನು ಹೇಳುತ್ತಿರುವುದನ್ನು ಲಿಪಿಬದ್ಧಗೊಳಿಸುವಾಗ, ಹೇಳುತ್ತಿರುವುದು ನಿನಗೆಷ್ಟು ತಿಳಿಯಿತು ಎನ್ನುವುದೂ ಮುಖ್ಯ’ ಎಂದು ಹೇಳಿದರಂತೆ. ಲಿಪಿಕಾರರಿಗೆ ಲಿಪಿಜ್ಞಾನವೇನೋ ಇತ್ತು. ಅರ್ಥಜ್ಞಾನ ಇರಲೇಬೇಕೆಂಬ ಕಡ್ಡಾಯ ಪ್ರಾಯಃ ಇರಲಿಲ್ಲ; ಇರುವುದು ಅಗತ್ಯ ಎಂದು ವ್ಯಾಸರು ಸೂಚಿಸಿದರು.

ವಕ್ತಾರರಾದ ವ್ಯಾಸರು, ‘ಮಾ ತಾತ ಸಾಹಸಂ ಕಾರ್ಷೀಃ ಮಮ ಪೂರ್ವ ಪರಿಗ್ರಹಃ’– ‘ಹುಡುಗಾ, ದುಡುಕದಿರು; ನನ್ನದಿದು ಈ ಕೊಳ ಬಹುಕಾಲದಿಂದ’ ಎಂಬ ಈ ಶ್ಲೋಕವನ್ನು ಯಾವಾಗ ಉಚ್ಚರಿಸಿದರು – ಬರೆಯುತ್ತಿದ್ದ ಗಣಪತಿ ಒಮ್ಮೆಗೇ ಚಕಿತನಾದ.

ತಾನು ಹೇಳಿದ್ದನ್ನು ಅರ್ಥ ಮಾಡಿಕೊಂಡು ಬರೆಯಬೇಕೆಂಬ ಕರಾರನ್ನು ವ್ಯಾಸರು ಹಾಕಿದ ಮೇಲೆ, ಅದಕ್ಕನುಗುಣವಾಗಿ, ಅರ್ಥವಾಗಲು ತುಸು ಹೊತ್ತು ತಗಲುವಂತೆ ಸಂಕೀರ್ಣ ರಚನಾ ವಿನ್ಯಾಸದ ಶ್ಲೋಕಗಳನ್ನು ವ್ಯಾಸರು ಹೇಳುತ್ತಿದ್ದುದಿತ್ತು. ಅವುಗಳಿಗೆ ಕೂಟಶ್ಲೋಕಗಳೆನ್ನುವರು. ಚಿತ್ರಕಾವ್ಯವಿದ್ದಂತೆ.

ಲಿಪಿಕಾರ ಗಣಪತಿಗೆ ಈ ಕೂಟಶ್ಲೋಕಗಳ ಪರಿಚಯವೂ ಇತ್ತು. ಅರ್ಥವಾಗಲು ತುಸು ತಡವಾದರೂ ಅರ್ಥವಾಗುತ್ತಿದ್ದಂತೆ ಈ ಶ್ಲೋಕಗಳ ಸ್ವಾರಸ್ಯವೂ ವೇಗವಾಗಿ ಇಳಿದುಹೋಗುತ್ತಿತ್ತು. ಅದಿರಲಿ. ಆದರೆ ‘ಮಮ ಪೂರ್ವ ಪರಿಗ್ರಹಃ’ ಎನ್ನುವ ಈ ಮಾತು ಸರಳವಾಗಿದೆ. ಸರಳವಾಗಿ ಏನೋ ಕೇಳಿಸುತ್ತದೆ.

ಆದರೆ ಇದು ನೈಜ ಇತಿಹಾಸ ಪ್ರಜ್ಞೆಯನ್ನು ಉದ್ದೀಪಿಸುವ ಮಾತಾಗಿದೆಯಲ್ಲವೇ ಎಂದು ಲಿಪಿಕಾರ ಗಣಪತಿಗೆ ಹೊಳೆಯಿತು. ನಮ್ಮ ಬಳಕೆಗೆ ಬರುವ ಮುನ್ನ ಇಲ್ಲಿ ಯಾರಿದ್ದರು? ಯಾರು ಈ ನೀರು, ಈ ಭೂಮಿ ಬಳಸುತ್ತಿದ್ದರು? ಈಗ ನನ್ನದೆಂದು ನಾನು ಭಾವಿಸುವ ಈ ನಿಸರ್ಗವನ್ನು ಎಷ್ಟು ಪೂರ್ವಕಾಲದಿಂದ ಎಷ್ಟು ತಲೆಮಾರುಗಳು ತಮ್ಮದೆಂದು ಭಾವಿಸಿ ಬಾಳಿಕೊಂಡು ಬಂದಿದ್ದರು! ಅವರೀಗ ಕಾಣುವುದಿಲ್ಲ ನಿಜ.

ಆದರೆ ಅವರ ನುಡಿ ಆಗಸದಲ್ಲಿ ಇರಬಹುದಲ್ಲವೆ? ಆಗಸ, ಆ ನುಡಿಗಳನ್ನು ಒಡಲಲ್ಲಿ ಇಟ್ಟುಕೊಂಡಿರಬಹುದಲ್ಲವೆ! ಆ ನುಡಿಗಳನ್ನೂ ಅದರರ್ಥಗಳನ್ನೂ ಕೇಳಿಸಿಕೊಳ್ಳುವ ಸೂಕ್ಷ್ಮವೇ ಇತಿಹಾಸ ಪ್ರಜ್ಞೆಯಲ್ಲವೆ? – ಎಂದು ಲಿಪಿಕಾರನಿಗೆ ಹೊಳೆಯಿತು. ಕೂಟಶ್ಲೋಕಗಳ ಮೂಲಕ ವ್ಯಾಸರು ತಮ್ಮನ್ನು ಗಹನಗೊಳಿಸಿಕೊಳ್ಳುವರೆನ್ನುವ ಮಾತು ಬರಿಯ ಚಪಲದ ಮಾತು. ಒಂದು ರೀತಿಯಲ್ಲಿ ವ್ಯಾಸರಿಗೇ ಅಪಚಾರ. ವ್ಯಾಸರ ಗಹನತೆಯನ್ನು ಅನುಭವಿಸಬಲ್ಲ ದಾರಿಯೇ ಬೇರೆ ಎಂದೂ ಹೊಳೆಯಿತು.

ಹೊಳೆದಂತೆ ಗಣಪತಿಯ ಮುಖದಲ್ಲಿ ಎಳೆಯ ಸುಳಿದಾಡೆಗಳ ಮೂಲದ ಬಾಯತಿರುವಿನಲ್ಲಿ ಸಣ್ಣ ನಗುವೊಂದು ಕಾಣಿಸಿಕೊಂಡಿತು. ಮರಿಯಾನೆ ನಕ್ಕಂತೆ. ವ್ಯಾಸರು ನೋಡಿದರು. ಓಮ್ ಎಂದು ಹೃದ್ಯವಾಗಿ ಉದ್ಗರಿಸಿದರು. ಈ ಉದ್ಗಾರ ನಿನ್ನ ಹೊಳಹಿಗೆ ನನ್ನ ಸಮ್ಮತಿ ಇದೆ ಎಂದಂತೆಯೂ ಹೌದು. ಒಂದು ಕೋನದಲ್ಲಿ ನೀನು ಓಮ್‌ಕಾರದಂತೆ ಕಾಣುತ್ತಿದ್ದೀಯೆ ಎಂದಂತೆಯೂ ಹೌದು. ‘ಓಮ್‌ ಇತ್ಯಂಗೀಕಾರೇ’.

ಓಮ್‌ ಎಂದಾಗ ಅದು ಅದು ಒಪ್ಪಿಗೆಯೆ. ಅಂಗೀಕಾರ ಸೂಚಕವಾದ ಉದ್ಗಾರವೂ ಹೌದು. ಇದು ಕೇವಲ ವ್ಯಾವಹಾರಿಕ ಒಪ್ಪಿಗೆಯಿಲ್ಲ. ಎಲ್ಲವನ್ನೂ – ಸಕಲವನ್ನೂ – ಅದು ನಿಜವಾಗಿ ಹೇಗಿದೆಯೋ ಹಾಗೆ ಒಪ್ಪಿದರೆ ಆಗ ಓಮ್‌ ಎಂಬ ಉದ್ಗಾರ. ಇದು ಆಧ್ಯಾತ್ಮಿಕವೂ ಹೌದು. ಈ ಸಕಲಾಂಗೀಕಾರವು ಶರಣಾಗತಿ ಭಾವದ ಇನ್ನೊಂದು ಮುಖ! ಸಕಲವನ್ನೂ ಒಪ್ಪುವ ಸ್ಥಿತಿಯನ್ನು ಸೂಚಿಸುವುದಕ್ಕೆ ಒಂದು ಅಕ್ಷರ ಬೇಕು; ಒಂದು ಪದ ಬೇಕು.

ಅದು ‘ಓಮ್‌’. ಸಕಲ ವೇದಗಳ ಜ್ಞಾನವನ್ನೂ ಒಂದು ಉದ್ಗಾರದಲ್ಲಿ ಒಂದು ಉಚ್ಚಾರದಲ್ಲಿ ಇಡಿಕಿರಿದಿರಬೇಕು ಎನ್ನುವುದಾದರೆ ಆ ಉದ್ಗಾರ, ಆ ಉಚ್ಚಾರ – ‘ಓಮ್‌’. ಓಮ್‌ಕಾರದ ಶ್ರವಣಾನುಭವವನ್ನು ಚಾಕ್ಷುಷ ಅನುಭವಕ್ಕೆ ಸಿಗುವಂತೆ ಅಂದರೆ ಕಣ್ಣಿಗೆ ಕಾಣುವಂತೆ ಮಾಡುವ ಎಸಕದಲ್ಲಿ ‘ಲಿಪಿ’ ಮೂಡಿ ಬಂತು.

ದೇವನಾಗರಿಯಲ್ಲಿ ಓಮ್‌ಕಾರ ಬರೆದಾಗ ಅದು ಒಂದು ಕೋನದಲ್ಲಿ ಗಣಪತಿಯ ಮೊಗದಂತೆಯೂ ಕಾಣಿಸುತ್ತದೆ. ಗಣಪತಿಯು ಓಮ್‌ಕಾರ ರೂಪಿ ಎನ್ನುವುದು ಶಾಸ್ತ್ರಪ್ರಸಿದ್ಧವಾದ ವಿಷಯವಾಗಿದೆ. ಅಂದರೆ ವೇದಸಾರವಾದ ಓಮ್‌ಕಾರದ ಲಿಪಿರೂಪನಾಗಿರುವ ಗಣಪತಿ,

ವ್ಯಾಸರ ‘ಮಹಾಭಾರತ’ವೆಂಬ ಈ ಮಹಾನ್‌ ಇತಿಹಾಸ ವಾಙ್ಮಯಕ್ಕೆ ತಾನು ಲಿಪಿಕಾರನಾದನೆಂಬ ಕಥೆ, ವೇದ ಮತ್ತು ಇತಿಹಾಸಗಳೊಳಗಣ ಅಂದರೆ ಆಧ್ಯಾತ್ಮಿಕ ಮತ್ತು ಲೌಕಿಕಗಳೊಳಗಣ ಹಾಸು–ಹೊಕ್ಕಿನ ಸಂಬಂಧವನ್ನು ಗಾಢವಾಗಿ ಸೂಚಿಸುತ್ತದೆ. ಮತ್ತು,

‘ಇತಿಹಾಸ ಪುರಾಣಭ್ಯಾಂ ವೇದಂ ಸಮುಪಬೃಂಹಯೇತ್‌’ ಎಂಬ ಮಹಾಭಾರತದ ಒಳಗಣ ಮಾತಿಗೆ – ಇತಿಹಾಸ ಪುರಾಣಗಳ ಲೌಕಿಕ ನಡೆಯಲ್ಲಿ ವೇದದ ಅರಿವಿನ ಆಧ್ಯಾತ್ಮಿಕ ಚಲನೆಯನ್ನು ಕೂಡ ಗುರುತಿಸಿ, ತಿಳಿಸಿ, ಬೆಳೆಸಿರಿ – ಎಂಬ ಮಾತಿಗೆ ಅನುಗುಣವಾಗಿದೆ ಕೂಡ.

ಹೇಳಿದ್ದು ಲಿಪಿಬದ್ಧಗೊಳ್ಳಬೇಕೆಂಬ ತುಡಿತ ಮತ್ತು ಲಿಪಿಕಾರನಿಗೆ ನಾನು ಬರೆದದ್ದು – ಕೊರೆದದ್ದು ಅರ್ಥವಾಗಬೇಕೆಂಬ ತುಡಿತ – ಇವೆರಡೂ ಹೇಳಿಕೆ ಮತ್ತು ‘ಬರೆಹ’ ಒಂದಾಗುವ ತುಡಿತವಾಗಿದೆ. ವೇದ ಮತ್ತು ಚರಿತ್ರೆ ಒಂದಾಗುವ ತುಡಿತವಾಗಿದೆ.

ವಕ್ತಾರ ಮತ್ತು ಲಿಪಿಕಾರ ತಮ್ಮ ಅನನ್ಯತೆಯನ್ನು ಅನುಭವಿಸುವ ತುಡಿತವಾಗಿದೆ. ಈ ಅರ್ಥದಲ್ಲೇ ಕನ್ನಡದ ದೊಡ್ಡಮಾತುಗಾರ ಕವಿ ಕುಮಾರವ್ಯಾಸ ತಾನು ‘ಲಿಪಿಕಾರ’ ಎಂದು ಕರೆದುಕೊಂಡ. ‘ವೀರನಾರಾಯಣನೆ ಕವಿ; ಲಿಪಿಕಾರ ಕುಮಾರವ್ಯಾಸ’ ಎನ್ನುವಲ್ಲಿ ಧನ್ಯತೆಯನ್ನು ಕಂಡುಕೊಂಡ! ಇದು ಮಹಾಭಾರತದ ದಾಯವೇ ಹೌದು.

***
ನಕುಲ ಕೆಡೆದು ಬಿದ್ದಿದ್ದ. ಅಣ್ಣನನ್ನು ಹುಡುಕಿಕೊಂಡು ಅವನಿಗಿಂತಲೂ ಹೆಚ್ಚು ಬಾಯಾರುತ್ತ ಸಹದೇವ ಬಂದ. ಮತ್ತದೇ ಅಶರೀರವಾಣಿಯನ್ನು ಕೇಳಿದ. ಸಹದೇವ ಜ್ಞಾನಿ ಎಂದು ಹೆಸರಾದವನು. ಆದರೆ ಅಜ್ಞಾನಿಯಂತೆ ನಡೆದುಕೊಂಡ. ಸಹದೇವ ಮುಂದೆ ನಕುಲನ ಪತನದ ಪ್ರತ್ಯಕ್ಷ ನಿದರ್ಶನವೇ ಇತ್ತು.

ಕುಮಾರವ್ಯಾಸ, ‘ಮಂದಣ ನಿನ್ನವನ ಕಂಡಿಂತು ಮರುಳಹರೆ?’ – ನಿನ್ನ ಮುಂದೆ ನಿನ್ನ ಅಣ್ಣ ಬಿದ್ದಿರುವುದನ್ನು ನೋಡಿಯೂ ನನ್ನ ಮಾತನ್ನು ಹೀಗೆ ಮಾಡುವುದೆ? – ಎಂದು ಅಶರೀರವಾಣಿಯ ಎಚ್ಚರಿಕೆಯನ್ನು ವಿಸ್ತರಿಸುತ್ತಾನೆ.

ಈ ಮಾತು ನುಡಿಸದಿದ್ದರೇ ಚೆನ್ನಿತ್ತು. ಏಕೆಂದರೆ ಇದು ತಾನಾಗಿ ತಿಳಿಯಬೇಕಾದದ್ದಲ್ಲವೆ? ಆದರೆ ‘ದಾಹ’ದ ಮುಂದೆ ಯಾರಿಗೆ ಯಾವ ಎಚ್ಚರವಿರುತ್ತದೆ? – ಹೀಗೆ ಎಚ್ಚರಗೆಟ್ಟು ಸಹದೇವನೂ ಬಿದ್ದ.

ನಕುಲ, ಸಹದೇವರು ಬಿದ್ದುದನ್ನು ನೋಡಿಯೂ ಅರ್ಜುನನಂಥವನು, ತಮ್ಮಂದಿರು ಮೂರು ಮಂದಿ ಬಿದ್ದುದನ್ನು ನೋಡಿಯೂ ಭೀಮಸೇನನಂಥವನು, ಮೊದಲು ನೀರು ಕುಡಿಯೋಣ, ಮತ್ತೆ ಮುಂದಿನ ಮಾತು ಎನ್ನುವವರಾಗಿ ಹೋದರು. ‘ಅಗ್ನಿಪರೀಕ್ಷೆ’ ಎನ್ನುವರು. ಇದು ಜಲಪರೀಕ್ಷೆ.

ಜೀವನ(=ನೀರು)ಪರೀಕ್ಷೆ, ‘ಹುಸಿನೀರು’ ಎನ್ನುವ ಅಪೂರ್ವ ಪದ ಬೇಂದ್ರೆ ಬಳಸುವರು. ಹುಸಿನೀರು ಎಂದರೆ ಮರೀಚಿಕೆ. ಕಡು ಬೇಸಿಗೆಯಲ್ಲಿ ದೂರದಲ್ಲಿ ನೀರ ಅಲೆಗಳಂತೆ ಕಾಣಿಸುವ ದೃಶ್ಯಭ್ರಾಂತಿ – ಇದು ಮರೀಚಿಕೆ. ‘ಹುಲ್ಲೆ ಹುಸಿನೀರ ಕಂಡಂತೆ ಕಂಡೆ ನೀರ’ ಎನ್ನುವ ಮಾತು ಬೇಂದ್ರೆಯವರದು.

ಇದು ಅಲ್ಲಮನ ಬಗೆಗೆ ಆಡಿದ ಮಾತು. ಇಂದ್ರಿಯಗಳ ಮಿತಿಯನ್ನು ದಾಟಿ ಹೋದ ಅತೀತ ಪ್ರಜ್ಞೆಯ ಅಲ್ಲಮನಿಗೆ– ದಾಹ ತಣಿಸುವ ನೀರೇ ಹುಸಿನೀರು! ಏಕೆಂದರೆ ಅವನಿಗೆ ಇಂದ್ರಿಯ ದಾಹವೇ ಹುಸಿ! ನಿರ್ಮೋಹಿಗೆ ಮೋಹವೇ ಹುಸಿ. ದಾಹದಲ್ಲಿ ಹುಲ್ಲೆಗೆ ಹುಸಿನೀರೇ ನೀರಿನಂತೆ ಕಂಡರೆ.

ದಾಹವೇ ಹುಸಿಗೊಂಡ ಅಲ್ಲಮನಿಗೆ ನೀರೇ – ಹುಸಿನೀರು! ಯುಧಿಷ್ಠಿರನಿಗೆ, ಪ್ರಶ್ನೆಗಳಿಗೆ ಉತ್ತರಿಸದಿದ್ದರೆ, ದಾಹ ತಣಿಸುವ ನೀರೇ ಹುಸಿನೀರಾಗಿ ಕೇಡಾಗಬಹುದೆನ್ನುವ ನಿಜ ನಿಚ್ಚಳವಾಗಿ ಕಾಣಿಸುವುದು. ಅಲ್ಲದೆ ‘ದಾಹ’ದಲ್ಲಿ ಎಷ್ಟು ಬಗೆ! ಕಾಡುತ್ತಿರುವ ಪ್ರಶ್ನೆಗಳೂ ಜೀವದ ಜೀವನದ ದಾಹವೇ.

ಈ ದಾಹವೂ ತಣಿಯಬೇಕು. ಜೀವನ ಎಂದರೆ ನೀರು ಎನ್ನುವ ಅರ್ಥದಲ್ಲಿ ಈ ಎಲ್ಲ ಬಗೆಯ ದಾಹಗಳೂ ತಣಿದರೆ ಅದು ಜೀವನ ಎನ್ನುವ ಸೂಕ್ಷ್ಮ ಇದೆ. ದೇಹ, ಬಾಯಾರಿದರೆ ನೀರನ್ನು ಕೆರೆ–ಕೊಳಗಳಿಂದ ಅಂದರೆ ಹೊರಗಿನಿಂದ ತರಬೇಕು. ನೀರನ್ನು ಹೊರಮೂಲಗಳಲ್ಲಿ ಹುಡುಕಬೇಕು. ಕಾಡುವ ಪ್ರಶ್ನೆಗಳಿಗೆ ಉತ್ತರವನ್ನಾದರೋ ನಮ್ಮೊಳಗೆ ಅರಸಬೇಕು. ಒಳಗಿನ ಉತ್ತರದಿಂದ ತಾನು ತಣಿದು, ಇತರರನ್ನು ತಣಿಸಬೇಕು.

ಈಗ ಇತಿಹಾಸ ಕಥನ ಎನ್ನುವುದು ಘಟನಾವಳಿಗಳ ಹೊಸ ನಿರೂಪಣೆ ಮಾತ್ರವಲ್ಲ. ಅದು ಅಂತರಂಗದ ಇತಿಹಾಸ ಕೂಡ ಎನ್ನುವುದು ಸಿದ್ಧಿಸುವುದು. ಮಹಾಭಾರತವು ಇತಿಹಾಸ ಹೌದು; ಇತಿಹಾಸದ ಇತಿಹಾಸವೂ ಹೌದು.

ಮಹಾಭಾರತದ ಅನುಸಂಧಾನದ ‘ಭಾರತಯಾತ್ರೆ’
ಲಕ್ಷ್ಮೀಶ ತೋಳ್ಪಾಡಿ ನಮ್ಮ ನಾಡಿನ ಪ್ರಮುಖ ಚಿಂತಕರಲ್ಲಿ ಒಬ್ಬರು. ಪ್ರಾಚೀನ ಭಾರತೀಯ ವಾಙ್ಮಯವನ್ನು ನೂತನ ನೆಲೆ–ಬೆಲೆಗಳೊಂದಿಗೆ ಅನುಸಂಧಾನಿಸುವುದರಲ್ಲಿ ಸಿದ್ಧಹಸ್ತರು.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಲಕ್ಷ್ಮೀಶ ತೋಳ್ಪಾಡಿ ಸಂಸ್ಕೃತವಿದ್ವಾಂಸರು; ಪ್ರಾಚೀನ ಪದ್ಧತಿಯಲ್ಲಿಯೇ ತತ್ತ್ವಶಾಸ್ತ್ರದ ಪ್ರಮೇಯಗಳನ್ನು ದಕ್ಕಿಸಿಕೊಂಡು, ಅವಕ್ಕೆ ಆಧುನಿಕ ಸ್ಪರ್ಶವನ್ನು ನೀಡುತ್ತ, ತಮ್ಮ ಬರಹ ಮತ್ತು ಉಪನ್ಯಾಸಗಳ ಮೂಲಕ ಶಾಸ್ತ್ರವನ್ನು ಕಾವ್ಯವಾಗಿ ಉಣಬಡಿಸುತ್ತಿದ್ದಾರೆ.

ಕೃಷಿಯನ್ನು ಕಾಯಕವಾಗಿಸಿಕೊಂಡ,  ಋಷಿಪ್ರಜ್ಞೆಯ ಸಾರ್ವಕಾಲಿಕತೆಯನ್ನು ರಸಾನುಭವವಾಗಿ ಒದಗಿಸುವ ಅವರ ಮಾತು–ಲೇಖನಗಳ ನಿರೂಪಣಶೈಲಿ ಅವರದ್ದೇ ಅನನ್ಯಮಾರ್ಗ.   ತಾರುಣ್ಯದಲ್ಲಿ ವೈಎನ್‌ಕೆ, ಗೋಪಾಲಕೃಷ್ಣ ಅಡಿಗ, ಲಂಕೇಶ್, ಕಿ. ರಂ. ನಾಗರಾಜ್ ಮುಂತಾದವರ ಸಂಪರ್ಕದಲ್ಲಿ ವೈಚಾರಿಕತೆಯ ಹಲವು ಸುಳಿಗಳನ್ನು ಹತ್ತಿರದಿಂದ ಕಂಡವರು;

ಸೂಫಿ ಬ್ಯಾರಿಯೊಬ್ಬರ ಜೀವನದೃಷ್ಟಿಯಲ್ಲಿನ ಬೆಳಕನ್ನು ಕಂಡವರು; ಚಿಂತನೆಯ ಅಪಾಯದಿಂದ ಪಾರಾಗುವ ಆವಶ್ಯಕತೆಯನ್ನೂ ವಿಧಾನವನ್ನೂ ಜೀವನದ ಪಕ್ವವಯಸ್ಸಿನಲ್ಲಿ ಪುತ್ತೂರು ಅಜ್ಜನವರ ಸಾಮೀಪ್ಯದಲ್ಲಿ  ದಕ್ಕಿಸಿಕೊಂಡವರು.  ವೇದ–ಉಪನಿಷತ್ತುಗಳನ್ನು ಆಳವಾಗಿ ಅಧ್ಯಯನ ಮಾಡಿದಂತೆ ರಾಮಾಯಣ–ಮಹಾಭಾರತಗಳ ರಸಸಾಗರದಲ್ಲಿ ಮಿಂದವರು.

ವಚನ–ದಾಸಸಾಹಿತ್ಯದ ದಾರ್ಶನಿಕತೆಯ ಸೊಗಸಿಗೆ ಧ್ವನಿ ಕೊಡುವಂತೆ, ಪಾಶ್ಚಾತ್ಯ ತತ್ತ್ವಶಾಸ್ತ್ರಜ್ಞರ ಬೆಳಕಿನಲ್ಲೂ ಜೀವನಮೀಮಾಂಸೆಯ ದಾರಿಯನ್ನು ನಿರ್ಮಿಸಬಲ್ಲವರು. ಪಂಪ–ಕುಮಾರವ್ಯಾಸರನ್ನು ತಮ್ಮವರನ್ನಾಗಿಸಿಕೊಂಡಂತೆ ಬೇಂದ್ರೆಯವರ ಕಾಣ್ಕೆಯನ್ನು ಉತ್ಸಾಹದಿಂದ ಕಾಣಿಸಬಲ್ಲವರು.

‘ಇದು ಪೂರ್ವ’–‘ಇದು ಪಶ್ಚಿಮ’, ‘ಇದು ಮಾರ್ಗ’–‘ಇದು ದೇಸಿ’ – ಎಂಬ ಒಡಕಿಗೆ ಒಲ್ಲದ, ವಿಶಾಲ ಹರವಿನ ಅರಿವಿನ ನಲಿವಿಗೆ ಒಲಿದ, ಸಹೃದಯಪ್ರಸ್ಥಾನದಲ್ಲಿ ಬೇರುಬಿಟ್ಟಿರುವ ಒಮ್ಮುಖವಲ್ಲದ ಬಹುಮುಖ ಸ್ವರೂಪದಲ್ಲಿ ಅರಳಿರುವ ವ್ಯಾಖ್ಯಾನಪರಂಪರೆಯ ವಾರಸಿಕೆಯವರು ಅವರು.

ಒಂದು ಕಾಲದಲ್ಲಿ ತಾಳಮದ್ದಲೆಯ ಅರ್ಥಧಾರಿಗಳಾಗಿದ್ದ ಅವರು, ಅರ್ಥದ ಸಂಕುಚಿತ ಬಲೆಯಿಂದ ಪ್ರಾಚೀನ ವಾಙ್ಮಯವನ್ನು ಕೆಡವಬಾರದೆಂಬ ಸಂಕಲ್ಪ ತೊಟ್ಟವರು; ಭಾವವನ್ನು ತರ್ಕದ  ಮೊನೆ ವಿನಯದಿಂದ ಸೇವಿಸಬೇಕೆ ಹೊರತು ಬುದ್ಧಿಯೇ ಭಾವವನ್ನು ಆಳುವಂತಾಗಬಾರದು ಎಂಬ ವ್ರತಬುದ್ಧಿಯಿಂದ ಸಿದ್ಧವಾಗುವ ಅವರ ಮಾತು–ಬರಹಗಳು ಓದುಗರನ್ನೂ ಕೇಳುಗರನ್ನೂ ಆನಂದಲೋಕಕ್ಕೆ ಕೊಂಡೊಯ್ಯುವ ಪ್ರತಿಭಾರಥದ ರಸಚಕ್ರಗಳಾಗಿವೆ.

ಪುರಾಣಗಳು ಲೌಕಿಕ–ಅಲೌಕಿಗಳ, ಪ್ರತ್ಯಕ್ಷ–ಪರೋಕ್ಷಗಳ ನಡುವೆ ಜರುಗುವ ಪ್ರಜ್ಞಾವಾಹಿನಿಯ ಭಾವಸಂಚಾರಗಳು, ಸಾಂಕೇತಿಕತೆಯ ಧ್ವನಿಗಳು ಎನ್ನುವುದು ಅವರ ವ್ಯಾಖ್ಯಾನಗಳ ಹಿಂದಿರುವ ಮನೋಧರ್ಮ.

ಪುರಾಣಗಳು ನಮ್ಮ ಪ್ರಕೃತಿಯ ನಿತ್ಯದ ಕನಸುಗಳು; ಅವು ನಮಗೆ ಹತ್ತಿರವಾಗುವುದು ‘ಅರ್ಥ’ದ ಹುಡುಕಾಟದಲ್ಲಿ ಅಲ್ಲ, ನಮ್ಮ ಭಾವಕೋಶದಲ್ಲಿ ಮೂಡುವ ಅವುಗಳ ಪ್ರತಿಮೆಗಳ ಮರುಹುಟ್ಟಿನಲ್ಲಿ. ಇಂಥ ತಾದಾತ್ಮ್ಯದಲ್ಲಿ ಲಕ್ಷ್ಮೀಶ ತೋಳ್ಪಾಡಿ ಅವರಿಂದ ನಡೆದಿರುವ ಮಹಾಭಾರತದ ಅನುಸಂಧಾನವೇ ‘ಭಾರತಯಾತ್ರೆ.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT