ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಕ್ಕರೆ ಅದೇ ನರಕ’ಎನ್ನುವ ದೇವಮಾನವರು!

Last Updated 19 ಜನವರಿ 2016, 19:32 IST
ಅಕ್ಷರ ಗಾತ್ರ

ಸ್ವಘೋಷಿತ ‘ದೇವಮಾನವ’ ಗುರ್ಮೀತ್ ರಾಮ್ ರಹೀಮ್ ಅವರನ್ನು ರಿಯಾಲಿಟಿ ಶೋ ಒಂದರಲ್ಲಿ ಅಣಕ ಮಾಡಿದ್ದಕ್ಕೆ ಹರಿಯಾಣದ ನಟ, ಕಮಿಡಿಯನ್ ಕಿಕು ಶಾರ್ದ ಮೊಕದ್ದಮೆಯೊಂದನ್ನು ಎದುರಿಸುತ್ತಿದ್ದಾರೆ. ಈ ಘಟನೆ ಇಂಡಿಯಾದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ವ್ಯವಸ್ಥಿತ ಹಲ್ಲೆಯ ಮತ್ತೊಂದು ರೂಪವಾಗಿ ನಮ್ಮ ಕಣ್ಣ ಮುಂದಿದೆ. ‘ಇಂಡಿಯಾದಲ್ಲಿ ಅಸಹನೆ ಎಲ್ಲಿದೆ?’ ಎಂದು ವಾದಿಸುವ ಆರಾಮಜೀವಿಗಳು ನಿತ್ಯ ಎದುರಾಗುತ್ತಿರುವ ಈ ಬಗೆಯ ಅಸಹನೆಯ ರೂಪಗಳನ್ನು ಕಾಣುವ ಹಾಗೂ ಗ್ರಹಿಸುವ ಶಕ್ತಿಯನ್ನು ಕಳೆದುಕೊಂಡಂತಿದೆ.

ಸಂವಿಧಾನವನ್ನೇ ಒಲ್ಲೆ ಎನ್ನಬಲ್ಲ ಧಾರ್ಮಿಕ ಸಂಸ್ಥೆಗಳ ಮುಖಂಡರು ಹಾಗೂ ಸಂವಿಧಾನೇತರ ಶಕ್ತಿಗಳು ತಮ್ಮ ಬಗೆಗಿನ ಅಣಕಕ್ಕೆ ಪೊಲೀಸು, ಕೋರ್ಟುಗಳನ್ನು ದುರ್ಬಳಕೆ ಮಾಡಿಕೊಳ್ಳಲು ಹೊರಟಿರುವ ಈ ಘಟನೆ ಇಂಡಿಯಾದಲ್ಲಿ ಧಾರ್ಮಿಕ ಮೂಲದ ಫ್ಯಾಸಿಸ್ಟ್ ಶಕ್ತಿಗಳು ಬೆಳೆಸಿಕೊಳ್ಳುತ್ತಿರುವ ಹೊಸ ಹಲ್ಲು, ಉಗುರುಗಳನ್ನು ಸೂಚಿಸುವಂತಿದೆ. ಈ ತಮಾಷೆಯ ಶೋ ನಂತರ ನಟ ಕಿಕು ಟ್ವಿಟರ್ ಮೂಲಕ ಕ್ಷಮೆ ಯಾಚಿಸಿದ ಮೇಲೂ ರಾಮ್ ರಹೀಮರ ಭಕ್ತನೊಬ್ಬ ತನ್ನ ‘ಧಾರ್ಮಿಕ ಭಾವನೆಗಳಿಗೆ ನೋವುಂಟಾಗಿದೆ’ ಎಂದು ಕಾನೂನಿನ ಮೊರೆ ಹೋಗಿದ್ದಾನೆ. ಭಕ್ತನ ಉತ್ಸಾಹದ ಫಲವಾಗಿ ಅವನ ಗುರುವಿನ ಬಗೆಗಿನ ತಮಾಷೆಗೆ ಹೆಚ್ಚು ಪ್ರಚಾರ ಸಿಕ್ಕಿದ್ದರಿಂದ, ಆ ತಮಾಷೆ ಎಂಥದಿರಬಹುದೆಂದು ಕುತೂಹಲಿಗಳು ಜಾಲತಾಣಗಳನ್ನು ಹುಡುಕುತ್ತಿದ್ದಾರೆ. ಗುರುವಿನ ‘ಮಾನ’ ರಕ್ಷಣೆಗೆ ಹೊರಟ ಭಕ್ತನೊಬ್ಬ ಗುರುವಿನ ಮಾನವನ್ನು ಇನ್ನಷ್ಟು ಹರಾಜು ಹಾಕಿದ ಕತೆಯಿದು!

ಉತ್ತರ ಭಾರತದಲ್ಲಿ ಧರ್ಮಗುರುಗಳನ್ನು ಅವರ ಭಕ್ತರು ‘ಸಾಧು ಮಹಾರಾಜ್’ ಎಂದು ಸಂಬೋಧಿಸುತ್ತಾರೆ. ಆದರೆ ಈ ಸಾಧು ಮಹಾರಾಜರುಗಳಿಗೆ ಚರಿತ್ರೆಯ ಮಹಾರಾಜರು ತಂತಮ್ಮ ವಿದೂಷಕರನ್ನು ಇಟ್ಟುಕೊಂಡು ತಮ್ಮನ್ನೂ ಗೇಲಿ ಮಾಡಿಸಿಕೊಳ್ಳುತ್ತಿದ್ದುದು ಯಾಕೆಂದು ಗೊತ್ತಿರಲಿಕ್ಕಿಲ್ಲ. ಅಕ್ಬರನ ಆಸ್ಥಾನದಲ್ಲಿದ್ದ ಬೀರಬಲ್, ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ತೆನಾಲಿ ರಾಮಕೃಷ್ಣ ಥರದವರ ಜಾಣ್ಮೆಯನ್ನು ಸಾರುವ ಪ್ರಸಂಗಗಳಲ್ಲಿ ಎಷ್ಟು ನಿಜವೋ, ಎಷ್ಟು ಆ ಕಾಲದ ಜನರ ಕಲ್ಪನಾವಿಲಾಸಗಳಿಂದ ಹುಟ್ಟಿ ಬೆಳೆದಂಥವೋ ಹೇಳುವುದು ಕಷ್ಟ. ಯಾಕೆಂದರೆ, ಒಂದು ಕಾಲದ ಜನ ಕೂಡ ಒಬ್ಬ ಬುದ್ಧಿವಂತನ ಸುತ್ತ ಇಂಥ ಕತೆಗಳನ್ನು ಹೆಣೆದಿರುವ ಸಾಧ್ಯತೆಗಳಿವೆ. ಇವು ಒಂದು ಕಾಲದಿಂದ ಮತ್ತೊಂದು ಕಾಲದ ಜಾಣನಿಗೂ ಹಬ್ಬಿ, ಆಯಾ ಕಾಲದ ಸ್ಥಳೀಯ ಕತೆಗಳಾಗಿರುವ ಸಾಧ್ಯತೆಗಳಿವೆ. ಆದರೆ, ರಾಜರು ಯಾಕೆ ವಿದೂಷಕರನ್ನು ಇಟ್ಟುಕೊಂಡಿರುತ್ತಾರೆಂಬುದಕ್ಕೆ ಫ್ರಾಯ್ಡಿಯನ್ ಮನೋವಿಜ್ಞಾನವನ್ನು ಆಧರಿಸಿ ಪಶ್ಚಿಮದ ಮನೋವೈಜ್ಞಾನಿಕ ಸಾಹಿತ್ಯ ವಿಮರ್ಶೆ ಕುತೂಹಲಕರ ವ್ಯಾಖ್ಯಾನವೊಂದನ್ನು ರೂಪಿಸಿಕೊಂಡಿದೆ: ಅದರ ಪ್ರಕಾರ, ರಾಜ ‘ಇಗೋ’ದ (ಅಹಂ) ಸಂಕೇತವಾದರೆ, ವಿದೂಷಕ ರಾಜನ ‘ಆಲ್ಟರ್ ಇಗೋ’ದ (ಪರ್ಯಾಯ ಅಹಂ) ಸಂಕೇತ. ರಾಜ ಮಾಡಲಾರದ್ದನ್ನೆಲ್ಲ ವಿದೂಷಕ ಮಾಡುತ್ತಾನೆ. ರಾಜ ಘನಗಂಭೀರವಾಗಿ ‘ನಾವು ವಿಷಯವನ್ನು ಕೂಲಂಕಷವಾಗಿ ಪರಾಂಬರಿಸುತ್ತೇವೆ’ ಎಂಬ ಉಬ್ಬಿದ ಭಾಷೆಯಲ್ಲಿ ಮಾತಾಡುತ್ತಿದ್ದರೆ, ವಿದೂಷಕ ಹಾದಿಬೀದಿಯ ಸ್ಟೈಲಿನಲ್ಲಿ ಮನಸ್ಸಿಗೆ ಬಂದಂತೆ ಮಾತಾಡುತ್ತಿರುತ್ತಾನೆ. ರಾಜ ಗಂಭೀರವಾಗಿ ನಡೆಯುತ್ತಿದ್ದರೆ, ವಿದೂಷಕ ಪಲ್ಟಿ ಹೊಡೆಯುತ್ತಿರುತ್ತಾನೆ. ವಿದೂಷಕ ಉಳಿದವರನ್ನು ಗೇಲಿ ಮಾಡುವಂತೆ ರಾಜನನ್ನು ಕೂಡ ಗೇಲಿ ಮಾಡುತ್ತಿರುತ್ತಾನೆ. ರಾಜ ಕೂಡ ವಿದೂಷಕನ ಗೇಲಿಯ ಮೂಲಕ ಕೆಲ ಬಗೆಯ ಸತ್ಯಗಳನ್ನು ಕಾಣಲೆತ್ನಿಸುತ್ತಾನೆ. ಒಂದು ರೀತಿ ವಿದೂಷಕ ಅತಿಅಹಮ್ಮಿನಲ್ಲಿ ಮೇಲೆ ತೇಲುತ್ತಿರುವ ರಾಜನನ್ನು ನೆಲಕ್ಕೆ ಎಳೆದು ತರುತ್ತಿರುತ್ತಾನೆ.

ಈ ಬಗೆಯ ಮಾನಸಿಕ ಸೂಕ್ಷ್ಮಗಳು ಒಂದು ಅಣಕಕ್ಕೆ ಕೋರ್ಟು ಹತ್ತಿರುವ ಶಿಷ್ಯರುಗಳಿಗಾಗಲೀ ಅವರಿಗೆ ದಿವ್ಯ ಪ್ರೇರಣೆ ನೀಡುವ ಸ್ವಾಮಿಗಳಿಗಾಗಲೀ ತಿಳಿದಿರಲಾರವು. ತಮ್ಮ ‘ಧಾರ್ಮಿಕ ಭಾವನೆಗಳಿಗೆ ನೋವುಂಟಾಗುತ್ತಿದೆ’ ಎಂದು ಹುಸಿ ದೂರು ಕೊಡುವವರ ಸಂಖ್ಯೆ ಈಚೆಗೆ ಹೆಚ್ಚುತ್ತಿದೆ. ಇಂಥವರ ಹಿಂದೆ ಆಸಕ್ತ ಹಿತಗಳು ಹಾಗೂ ಮೂಲಭೂತವಾದಿ ಗುಂಪುಗಳು ಇರುತ್ತವೆಂಬುದು ಕೂಡ ಎಲ್ಲರಿಗೂ ಗೊತ್ತಿದೆ. ವಿಚಾರವಾದಿ ಹುಲಿಕಲ್ ನಟರಾಜ್ ಹಲವು ವರ್ಷಗಳಿಂದ ‘ಪವಾಡ ಬಯಲು’ ಕಾರ್ಯಕ್ರಮದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ. ಕೆಲವು ವರ್ಷಗಳ ಕೆಳಗೆ ಅವರು ನಡೆಸಿಕೊಟ್ಟ ‘ಪವಾಡ ಬಯಲು’ ಕಾರ್ಯಕ್ರಮದಿಂದ ತನ್ನ ಧಾರ್ಮಿಕ ಭಾವನೆಗಳಿಗೆ ನೋವಾಗಿದೆಯೆಂದು ವ್ಯಕ್ತಿಯೊಬ್ಬ ಪೊಲೀಸರಿಗೆ ದೂರು ಕೊಟ್ಟ. ಪೊಲೀಸರು ಮೊಕದ್ದಮೆ ದಾಖಲಿಸಿದರು. ವಿಚಾರವಾದಿ ಹಾಗೂ ನ್ಯಾಯವಾದಿ ರವಿವರ್ಮಕುಮಾರ್ ಆ ದೂರನ್ನು ಆಧರಿಸಿದ ಮೊಕದ್ದಮೆಯ ರದ್ದತಿಗಾಗಿ ಕರ್ನಾಟಕ ರಾಜ್ಯ ಹೈಕೋರ್ಟನ್ನು ಕೋರಿದರು.

ಈ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಮೋಹನದಾಸ್ ಅವರು ಕೊಟ್ಟ ತೀರ್ಪಿನಲ್ಲಿ (‘ಹುಲಿಕಲ್ ನಟರಾಜ್ ವರ್ಸಸ್ ಸ್ಟೇಟ್ ಆಫ್ ಕರ್ನಾಟಕ’) ಬರುವ ವಾಕ್ ಸ್ವಾತಂತ್ರ್ಯ ಕುರಿತ ಒಂದು ಪ್ರಬುದ್ಧ ವ್ಯಾಖ್ಯಾನವನ್ನು ಸಾರ್ವಜನಿಕ ವಿಮರ್ಶೆಯಲ್ಲಿ ತೊಡಗುವವರೆಲ್ಲ ಅವಶ್ಯವಾಗಿ ಗಮನಿಸಬೇಕು: ಈ ತೀರ್ಪಿನಲ್ಲಿ ‘ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ’ದಲ್ಲಿ ‘ಫ್ರೀಡಂ ಟು ಡಿಸೆಂಟ್’ (ಭಿನ್ನಮತವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ) ಹಾಗೂ ವಿಮರ್ಶಿಸುವ ಸ್ವಾತಂತ್ರ್ಯ (ಫ್ರೀಡಂ ಟು ಕ್ರಿಟಿಸೈಸ್) ಕೂಡ ಸೇರಿದೆ ಎಂಬುದನ್ನು ನಾಗಮೋಹನದಾಸ್ ಗುರುತಿಸುತ್ತಾರೆ. ಇದು ಸಂವಿಧಾನದ 42ನೆಯ ತಿದ್ದುಪಡಿಯ ನಂತರ ಸೇರಿರುವ ‘ಫಂಡಮೆಂಟಲ್ ರೈಟ್ಸ್’ನ ಭಾಗವೂ ಆಗಿದೆ ಎಂಬುದನ್ನೂ ಅವರ ತೀರ್ಪು ಹೇಳುತ್ತದೆ: ‘ಆರ್ಟಿಕಲ್ 51 ಎ (ಎಚ್) ಪ್ರಕಾರ ವೈಜ್ಞಾನಿಕ ಮನೋಭಾವ, ಮಾನವೀಯತೆ ಹಾಗೂ ಎಲ್ಲವನ್ನೂ ಪರೀಕ್ಷಿಸಿ ನೋಡಬಲ್ಲ ಮನಸ್ಸುಗಳನ್ನು ಬೆಳೆಸುವುದರ ಮೂಲಕ ಸಮಾಜದಲ್ಲಿ ಪರಿವರ್ತನೆ ತರುವುದು’ ನಮ್ಮ ಮೂಲಭೂತ ಕರ್ತವ್ಯಗಳಲ್ಲಿ ಒಂದಾಗಿದೆ. ಈ ಚಾರಿತ್ರಿಕ ತೀರ್ಪಿನ ಪೂರ್ಣ ಪಾಠ karnatakajudiciary. kar.nic.in ವೆಬ್‌ಸೈಟಿನಲ್ಲಿದೆ.

ಸ್ಥಾವರವಾಗಿರುವ ಸ್ವಾಮಿಗಳನ್ನು, ಮಠಗಳನ್ನು ವೈಚಾರಿಕವಾಗಿ ವಿಮರ್ಶಿಸಿ ಸಮಾಜವನ್ನು ತಿದ್ದುವ ಕ್ರಮಗಳನ್ನು ವಚನ ಸಾಹಿತ್ಯ 11-12ನೆಯ ಶತಮಾನದಲ್ಲೇ ನಮಗೆ ತೋರಿಸಿಕೊಟ್ಟಿದೆ. ‘ಭಕ್ತಿಯೆಂಬುದು ತೋರುಂಬ ಲಾಭ’ ಎನ್ನುತ್ತಾನೆ ಅಲ್ಲಮ. ಹೀಗೆ ‘ತೋರುಂಬ ಲಾಭ’ವಾಗಿರುವ ‘ಭಕ್ತಿ’ಯನ್ನು ಜನರಲ್ಲಿ ಬಿತ್ತುತ್ತೇವೆಂದು ಹೇಳಿಕೊಳ್ಳುತ್ತಾ, ಲೆಕ್ಕಪತ್ರಗಳಿಲ್ಲದ ಕೋಟಿಗಟ್ಟಲೆ ಹಣ ಇಟ್ಟುಕೊಂಡಿರುವ ಸ್ವಾಮಿಗಳ ಕ್ರಿಯೆಗಳು ಪ್ರಶ್ನಾತೀತವೆಂದು ಅವರಾಗಲೀ ಅವರ ಹುಂಬ ಭಕ್ತರಾಗಲೀ ತಿಳಿಯಲಾಗದು. ಸಕಾರಣವಾದ ಸಾರ್ವಜನಿಕ ಟೀಕೆ, ವಿಮರ್ಶೆಗಳನ್ನಾಗಲೀ, ಹಾಸ್ಯವನ್ನಾಗಲೀ ಸಾರ್ವಜನಿಕ ಜೀವನದಲ್ಲಿ ಇರುವವರು ಎದುರಿಸುತ್ತಲೇ ಇರಬೇಕಾಗುತ್ತದೆ. ಆ ದೃಷ್ಟಿಯಿಂದ, ರಾಜಕಾರಣಿಗಳು ಈ ಬಗೆಯ ಟೀಕೆ ಹಾಗೂ ಹಾಸ್ಯಗಳನ್ನು ಒಂದು ಮಟ್ಟದಲ್ಲಾದರೂ ಸ್ವೀಕರಿಸುವ ರೀತಿಯಿಂದ ಸ್ವಾಮೀಜಿಗಳು ಕಲಿಯುವುದಿದೆ. ಯಾಕೆಂದರೆ ಸಾರ್ವಜನಿಕ ಜೀವನದಲ್ಲಿರಬೇಕಾದ ರಾಜಕಾರಣಿಗಳಿಗೆ ತಾವೂ ಇನ್ನೊಬ್ಬರ ಬಗ್ಗೆ ಹಾಸ್ಯದ ಅಸ್ತ್ರ ಬಳಸಬೇಕಾಗಬಹುದೆಂಬುದು ಗೊತ್ತಿರುತ್ತದೆ. ನೆಹರೂ ಅವರು ವ್ಯಂಗ್ಯಚಿತ್ರಕಾರ ಶಂಕರ್ ಬರೆದ ತಮ್ಮ ವ್ಯಂಗ್ಯಚಿತ್ರಗಳನ್ನು ನೋಡಿ ನಗುತ್ತಿದ್ದರು ಹಾಗೂ ಶಂಕರರ ಕೆಲವು ಒರಿಜಿನಲ್ ಚಿತ್ರಗಳನ್ನು ತರಿಸಿ ಇಟ್ಟುಕೊಂಡಿದ್ದರು. ಕೆಲ ಕಾಲ ಈ ಬಗೆಯ ಆರೋಗ್ಯವನ್ನು ಉಳಿಸಿಕೊಂಡಿದ್ದ ಅವರ ಮಗಳು ಇಂದಿರಾ ಗಾಂಧಿ ತುರ್ತುಪರಿಸ್ಥಿತಿಯ ಕಾಲದಲ್ಲಿ ವ್ಯಂಗ್ಯಚಿತ್ರಗಳೂ ಸೇರಿದಂತೆ ಎಲ್ಲ ಬಗೆಯ ಟೀಕೆಗಳನ್ನು ನಿಷೇಧಿಸಲು ಪತ್ರಿಕೆಗಳ ಮೇಲೆ ಸೆನ್ಸಾರ್‌ಶಿಪ್ ವಿಧಿಸಿದರು. ನಂತರ ಅವರು ಚುನಾವಣೆಯಲ್ಲಿ ಹೀನಾಯವಾಗಿ ಸೋತದ್ದು, ಮತ್ತೆ ಗೆದ್ದಾಗ ಟೀಕೆಗಳ ಬಗ್ಗೆ ಕೊಂಚ ತಾಳ್ಮೆ ಬೆಳೆಸಿಕೊಂಡದ್ದು ಈಗ ಇತಿಹಾಸ. ಜೊತೆಗೆ, ರಾಜಕಾರಣಿಗಳು ನಿತ್ಯ ಜನತೆಯ ಸಹವಾಸದಲ್ಲಿ ಇರಬೇಕಾಗುವುದರಿಂದ ಅನೇಕ ಬಗೆಯ ವಿನಯವನ್ನು ಕಲಿಯುತ್ತಿರಬೇಕಾಗುತ್ತದೆ; ಕೆಲಬಗೆಯ ಹೊಂದಾಣಿಕೆ ಮಾಡಿಕೊಳ್ಳುತ್ತಿರಬೇಕಾಗುತ್ತದೆ. ಆದ್ದರಿಂದ ರಾಜಕಾರಣಿಗಳು ಸ್ವಾಮೀಜಿಗಳಂತೆ ಪೆಡಸಾದ ಸನಾತನಿಗಳಾಗಿರಲಾರರು. ರಾಜಕಾರಣಿಗಳಿಗೆ ಬದಲಾಗುತ್ತಿರಲೇಬೇಕಾದ ಒತ್ತಡಗಳಿರುತ್ತವೆ. ಆದರೆ ತಾವು ಜನರಿಗೆ ಬಾಧ್ಯಸ್ಥರಲ್ಲವೆಂದುಕೊಂಡಿರುವ ಸ್ವಾಮಿಗಳಿಗೆ ಆ ಒತ್ತಡವೂ ಇರದು.

‘ನಾನು’ ಎನ್ನಬೇಕಾದ ಕಡೆ ‘ನಾವು’ ಎಂಬ ಸರ್ವನಾಮ ಬಳಸುವ ಸ್ವಾಮೀಜಿಗಳು ನಿಜವಾದ ಗಾಂಭೀರ್ಯವನ್ನೋ ಅಥವಾ ಹುಸಿ ಗಾಂಭೀರ್ಯವನ್ನೋ ತಮ್ಮ ವ್ಯಕ್ತಿತ್ವದ ಭಾಗವಾಗಿಸಿಕೊಳ್ಳುವುದು ಅನಿವಾರ್ಯವಾಗಿರಬಹುದು. ಆದರೆ ಅದರಿಂದ ಅವರಿಗೆ ಹಾಸ್ಯಪ್ರಜ್ಞೆಯಾಗಲೀ ಹಾಸ್ಯದಿಂದ ದೊರೆಯುವ ಮಾನಸಿಕ ಆರೋಗ್ಯವಾಗಲೀ ದೈನಿಕವನ್ನು ಮೀರುವ ಶಕ್ತಿಯಾಗಲೀ ದಕ್ಕದೆ ಹೋಗಬಹುದು. ‘ಆಳವಾದ ವಿನೋದಪ್ರಜ್ಞೆ ಇರುವವರಲ್ಲಿ ಉನ್ನತ ಬುದ್ಧಿಶಕ್ತಿ, ಪ್ರಾಮಾಣಿಕತೆ ಇರುತ್ತದೆ’ ಎಂಬ ಚಿಂತಕರೊಬ್ಬರ ಮಾತನ್ನು ಈಚೆಗೆ ಮಗುವೊಂದರ ಬಾಯಲ್ಲಿ ಕೇಳಿ ದಂಗಾದೆ. ವಿನೋದಪ್ರಜ್ಞೆ ಮನುಷ್ಯರ ವ್ಯಕ್ತಿತ್ವಗಳಿಗೆ ತರಬಲ್ಲ ಈ ಆಯಾಮಗಳ ಬಗ್ಗೆ ರಾಮ್ ರಹೀಮ್ ಸ್ವಾಮಿ ಎಂದೂ ಕೇಳಿರಲಾರರು. ಒಂದು ಬಗೆ ಕೃತಕ ಜೀವನ ನಡೆಸಬೇಕಾದ ಒತ್ತಡದಲ್ಲಿರುವ ಸ್ವಾಮಿಗಳು ನಗುತ್ತಾ ಏನಾದರೂ ಹೇಳಿದಾಗ ಮಾತ್ರ ‘ನಾವೂ ಈಗ ನಗಬಹುದು’ ಎಂದು ನಗುವ ಶಿಷ್ಯರನ್ನು ನೀವು ನೋಡಿರಬಹುದು! ಇಂಥವರು ರೆಕಾರ್ಡೆಡ್ ನಗುವನ್ನು ಕೇಳಿ ನಗುವ ಟೆಲಿವಿಷನ್ ಪ್ರೇಕ್ಷಕರಂತೆ ಕಂಡರೆ ಅಚ್ಚರಿಯಲ್ಲ. ಸಹಜತೆಯಿಲ್ಲದ ಮನುಷ್ಯರಲ್ಲಿ ನಗೆ ಉಕ್ಕುವುದು ಕಷ್ಟ. ಸರ್ವಜ್ಞ ಹೇಳುವ ‘ಸಹಜದ ಧರ್ಮ’ವಾದ ನಗೆಯನ್ನು ಕಳೆದುಕೊಂಡ ಸಮಾಜದಲ್ಲಿ ಅಸಹನೆ ಹಬ್ಬತೊಡಗುತ್ತದೆ.    
ಸಾರ್ವಜನಿಕ ಜೀವನದ ಅತಿಗಾಂಭೀರ್ಯ ಅನಿವಾರ್ಯ ಪೀಡೆಯೆಂದು ಬಲ್ಲ ಸ್ವಾಮಿಗಳು ಮಾತ್ರ ಖಾಸಗಿಯಾಗಿ ಅಷ್ಟಿಷ್ಟು ನಗೆ ಉಳಿಸಿಕೊಂಡಿರಬಹುದು. ಪಾದ್ರಿಗಳ ಲೋಕದಲ್ಲಿ ಖಾಸಗಿ ಜೋಕುಗಳು ಹರಿದಾಡುತ್ತಿರುತ್ತವೆ ಎಂದು ಮಿತ್ರರೊಬ್ಬರು ಹೇಳುತ್ತಿದ್ದರು. ವಿಮರ್ಶಾಪ್ರಜ್ಞೆ ಉಳಿಸಿಕೊಂಡಿರುವ ವೀರಭದ್ರ ಚೆನ್ನಮಲ್ಲಸ್ವಾಮಿಯವರ ಥರದವರೂ ಇದ್ದಾರೆ. ಮಠೀಯ ವ್ಯವಸ್ಥೆಯನ್ನು ಟೀಕಿಸಿದಾಗಲೂ ಒಪ್ಪುವ ಸ್ವಾಮಿಗಳೂ ಇದ್ದಾರೆ. ಆದರೆ ತಮ್ಮನ್ನು ಯಾರೂ ಪ್ರಶ್ನಿಸದಂಥ, ಹಾಸ್ಯ ಮಾಡದಂಥ ಕೃತಕ ಪ್ರಭಾವಳಿ ನಿರ್ಮಿಸಿಕೊಂಡಿರುವವರು ಸರ್ವಾಧಿಕಾರಿಗಳಂತಿರುತ್ತಾರೆ. ಆ ಹಂತ ತಲುಪಿದವರು ತಮ್ಮನ್ನು ವಿಮರ್ಶಿಸುವವರಿಗೆ ಕಿರುಕುಳ ಕೊಡಲೂ ಹೇಸಲಾರರು. ಇನ್ನು ಮುಲ್ಲಾಗಳು ಮುಲ್ಲಾ ನಸರುದ್ದೀನನ ಕತೆಗಳನ್ನು ಕೇಳಿದ್ದರೂ ಅವರಿಗೆ ಹಾಸ್ಯಪ್ರಜ್ಞೆ ಇರುವ ಕುರುಹು ಎಲ್ಲೂ ಕಾಣುತ್ತಿಲ್ಲ!

ಇಷ್ಟೆಲ್ಲದರ ನಡುವೆ, ಈಚಿನ ವರ್ಷಗಳಲ್ಲಿ ದೇವಮಾನವರು ಕಾನೂನಿನ ಮೊರೆ ಹೋಗುತ್ತಿದ್ದಾರೆ. ಆದರೆ ಅವರ ಅನೇಕ ಬಗೆಯ ‘ಕ್ರಿಯೆಗಳು’ ಕೂಡ ಕಾನೂನಿನ ಕುಣಿಕೆಯಡಿ ಬರುತ್ತಿವೆ. ಈ ವಿದ್ಯಮಾನ ಇಂಡಿಯಾದ ಪ್ರಜಾಪ್ರಭುತ್ವದ ಪ್ರಬುದ್ಧವಿಕಾಸದ ದೃಷ್ಟಿಯಿಂದ ಮುಖ್ಯವಾದುದು. ಈ ಪ್ರಕ್ರಿಯೆಯಲ್ಲಿ ದೇವಮಾನವರ ಆರ್ಥಿಕ ಮೂಲಗಳೂ ಸಾರ್ವಜನಿಕ ವಿಚಾರಣೆಯ ಕಕ್ಷೆಯಡಿ ಬರಬೇಕಾಗುತ್ತದೆ. ಆಗ ತಾವೂ ಸಮಾಜಕ್ಕೆ ಉತ್ತರ ಹೇಳಬೇಕಾಗುತ್ತದೆ ಎಂಬ ಪ್ರಜ್ಞೆ ಅವರಿಗೂ ಬರಬೇಕಾಗುತ್ತದೆ. ಹಾಗೆ ಬಂದಾಗ, ಸ್ವಾಮಿಗಳು ಪಲ್ಲಕ್ಕಿಗಳಿಂದ, ರಾಜ್ಯಪಾಲರುಗಳ ಕುರ್ಚಿಗಿಂತ ಒಂದಿಂಚು ಎತ್ತರದ ಕುರ್ಚಿಗಳಿಂದ ಇಳಿದು ಜನರ ನಿತ್ಯದ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಕಾಲವೂ ಬರುತ್ತದೆ. ಆ ಕಾಲ ಬರುವ ಸೂಚನೆಗಳು ಇಂಡಿಯಾದುದ್ದಕ್ಕೂ ಸ್ಪಷ್ಟವಾಗಿ ಕಾಣುತ್ತಿವೆ.

ಕೊನೆ ಟಿಪ್ಪಣಿ: ಗೇಲಿಗೆ ತತ್ವಜ್ಞಾನಿಯ ಉತ್ತರ
ಎ.ಎನ್.ಮೂರ್ತಿರಾವ್ ಅನುವಾದಿಸಿರುವ ‘ಸಾಕ್ರೆಟೀಸನ ಕೊನೆಯ ದಿನಗಳು’ ಪುಸ್ತಕದಲ್ಲಿ ಒಂದು ಭಾಗವಿದೆ: ಗ್ರೀಕ್ ವಿನೋದ ನಾಟಕಕಾರ ಅರಿಸ್ಟೋಫನೀಸ್ ತನ್ನ ‘ಕ್ಲೌಡ್ಸ್’ ನಾಟಕದಲ್ಲಿ ಸಾಕ್ರೆಟೀಸನನ್ನು ಗೇಲಿ ಮಾಡಿ ಅವನನ್ನು ಜನರ ದ್ವೇಷಕ್ಕೂ ತಿರಸ್ಕಾರಕ್ಕೂ ಗುರಿ ಮಾಡುತ್ತಾನೆ. ಹೊಸ ತಲೆಮಾರನ್ನು ಸ್ವತಂತ್ರವಾಗಿ ಯೋಚಿಸುವಂತೆ ಪ್ರೇರೇಪಿಸುತ್ತಿದ್ದ ಸಾಕ್ರೆಟೀಸ್ ಬಗ್ಗೆ ಆ ಕಾಲದ ಸಾಂಪ್ರದಾಯಿಕರಲ್ಲಿ ಪೂರ್ವಗ್ರಹಗಳಿದ್ದವು. ಅವು ಅರಿಸ್ಟೋಫನೀಸನ ನಾಟಕದಲ್ಲೂ ಸೇರಿಕೊಂಡಿದ್ದವೆಂದು ಕಾಣುತ್ತದೆ. ಆದರೆ ಸಾಕ್ರೆಟೀಸ್ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಒಮ್ಮೆ ರಂಗಮಂದಿರದಲ್ಲಿ ‘ಕ್ಲೌಡ್ಸ್’ ನಾಟಕ ನಡೆಯುತ್ತಿದ್ದಾಗ, ಸಾಕ್ರೆಟೀಸ್ ‘ಈ ನಾಟಕದಲ್ಲಿ ಗೇಲಿಗೊಳಗಾಗುತ್ತಿರುವವನು ನಾನೇ’ ಎಂಬಂತೆ ಎಲ್ಲರಿಗೂ ಕಾಣುವಂತೆ ಎದ್ದು ನಿಂತುಕೊಂಡಿದ್ದನಂತೆ. ಸಾಕ್ರೆಟೀಸ್‌ಗೆ ಸಾವಿರಾರು ವರ್ಷಗಳ ಕೆಳಗೆ ಇದ್ದ ಇಂಥ ಆತ್ಮವಿಶ್ವಾಸ ಹಾಗೂ ಹಾಸ್ಯಪ್ರಜ್ಞೆ ಹುಂಬ ಜನರ ಹುಸಿ ಭಜನೆಯ ಪರಾಕು ಪಂಪುಗಳಿಂದ ಉಬ್ಬುವ ದೇವಮಾನವರಿಗೆ ಎಲ್ಲಿಂದ ಬಂದೀತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT