ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೋಟಾ’ ಶಕ್ತಿಯನ್ನು ಎಂದಿಗೂ ನಿರ್ಲಕ್ಷಿಸಲಾಗದು

Last Updated 3 ಜನವರಿ 2018, 19:30 IST
ಅಕ್ಷರ ಗಾತ್ರ

ಈಚೆಗೆ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶವು ‘ನೋಟಾ’ದ (ಯಾವ ಅಭ್ಯರ್ಥಿಗೂ ಮತ ಇಲ್ಲ) ಶಕ್ತಿಯನ್ನು ಮೊದಲ ಬಾರಿಗೆ ಅತ್ಯಂತ ಸ್ಪಷ್ಟವಾಗಿ ತೋರಿಸಿಕೊಟ್ಟಿದೆ. ದೇಶದ ಪ್ರಮುಖ ಚುನಾವಣೆಯೊಂದರಲ್ಲಿ ‘ನೋಟಾ’ ಪ್ರಮುಖ ಪಾತ್ರವಹಿಸಬಲ್ಲದು ಎಂಬುದಕ್ಕೆ ಈ ಫಲಿತಾಂಶ ಆಧಾರ ಒದಗಿಸಿಕೊಟ್ಟಿದೆ.

ಪಿಯುಸಿಎಲ್‌ ಮತ್ತು ಇತರರು ಹಾಗೂ ಕೇಂದ್ರ ಸರ್ಕಾರ ಮತ್ತು ಇತರರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ 2013ರಲ್ಲಿ ತೀರ್ಪು ನೀಡಿದ ನಂತರ ದೇಶವು ‘ನೋಟಾ ಯುಗ’ ಪ್ರವೇಶಿಸಿತು. ಎಲೆಕ್ಟ್ರಾನಿಕ್‌ ಮತ ಯಂತ್ರಗಳಲ್ಲಿ ‘ನೋಟಾ’ ಆಯ್ಕೆಯನ್ನು ನೀಡಬೇಕು ಎಂದು ಕೋರ್ಟ್‌ ಆ ತೀರ್ಪಿನಲ್ಲಿ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತು. ಯಾವ ಅಭ್ಯರ್ಥಿಗೂ ಮತ ನೀಡದಿರುವ ಹಕ್ಕನ್ನು ಮತದಾರರಿಗೆ ಕೊಡುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅತ್ಯಂತ ಮುಖ್ಯವಾದದ್ದು ಎಂದು ಕೋರ್ಟ್‌ ಹೇಳಿತು. ಕೇಂದ್ರ ಕಾನೂನು ಆಯೋಗ ಮತ್ತು ಚುನಾವಣಾ ಆಯೋಗ ಕೂಡ, ಚುನಾವಣಾ ಕಣದಲ್ಲಿ ಇರುವ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸುವ ಆಯ್ಕೆಯನ್ನು ಮತದಾರರಿಗೆ ನೀಡುವ ಪರವಾಗಿ ಇದ್ದವು. ‘ನೋಟಾ’ ಆಯ್ಕೆ ಜಾರಿಯಲ್ಲಿ ಇದ್ದ 13 ದೇಶಗಳನ್ನು ಉಲ್ಲೇಖಿಸಿದ್ದ ಕೋರ್ಟ್‌, ‘ರಾಜಕೀಯ ಪಕ್ಷಗಳು ಕಣಕ್ಕೆ ಇಳಿಸುತ್ತಿರುವ ಅಭ್ಯರ್ಥಿಗಳ ಬಗ್ಗೆ ಇರುವ ತಿರಸ್ಕಾರವನ್ನು ವ್ಯಕ್ತಪಡಿಸಲು ಮತದಾರರಿಗೆ ಇದರಿಂದಾಗಿ ಸಾಧ್ಯವಾಗುತ್ತದೆ’ ಎಂದು ಹೇಳಿತ್ತು. ‘ತಾವು ಕಣಕ್ಕೆ ಇಳಿಸುತ್ತಿರುವ ಅಭ್ಯರ್ಥಿಗಳ ಬಗ್ಗೆ ಜನರ ದೊಡ್ಡ ಗುಂಪೊಂದು ಅಸಮ್ಮತಿಯನ್ನು ವ್ಯಕ್ತಪಡಿಸುತ್ತಿದೆ ಎಂಬುದು ರಾಜಕೀಯ ಪಕ್ಷಗಳ ಅರಿವಿಗೆ ಬಂದಾಗ, ವ್ಯವಸ್ಥೆಯಲ್ಲಿ ಹಂತ ಹಂತವಾಗಿ ಬದಲಾವಣೆ ಕಂಡುಬರುತ್ತದೆ. ಜನರ ಆಕಾಂಕ್ಷೆಗಳನ್ನು ಒಪ್ಪಿಕೊಳ್ಳಲೇಬೇಕಾದ ಸ್ಥಿತಿ ಪಕ್ಷಗಳಿಗೆ ಬರುತ್ತದೆ, ಪ್ರಾಮಾಣಿಕ ಅಭ್ಯರ್ಥಿಗಳನ್ನು ಅವು ಕಣಕ್ಕೆ ಇಳಿಸಬೇಕಾದ ಸ್ಥಿತಿ ಬರುತ್ತದೆ’ ಎಂದೂ ಕೋರ್ಟ್‌ ಹೇಳಿತ್ತು. ಆ ತೀರ್ಪಿನ ನಂತರ ದೇಶದಲ್ಲಿ ‘ನೋಟಾ’ ಬಳಕೆಗೆ ಬಂದಿದೆ. 2017ರ ಗುಜರಾತ್‌ನಲ್ಲಿ ಚುನಾವಣೆಯಲ್ಲಿ ‘ನೋಟಾ’ ಬೀರಿದ ಪರಿಣಾಮ ಮಹತ್ವದ್ದು.

ಗುಜರಾತ್ ವಿಧಾನಸಭೆಗೆ ಈಚೆಗೆ ನಡೆದ ಚುನಾವಣೆಯಲ್ಲಿ, 21 ಕ್ಷೇತ್ರಗಳಲ್ಲಿ ಮೊದಲ ಎರಡು ಸ್ಥಾನಗಳಲ್ಲಿದ್ದ ಅಭ್ಯರ್ಥಿಗಳು ಪಡೆದ ಮತಗಳ ನಡುವಿನ ಅಂತರಕ್ಕಿಂತ ಹೆಚ್ಚು ಮತಗಳು ‘ನೋಟಾ’ ಪರವಾಗಿ ಬಿದ್ದಿದ್ದವು. ಇವುಗಳ ಪೈಕಿ 12 ಸ್ಥಾನಗಳಲ್ಲಿ ಬಿಜೆಪಿಯ ಸೋಲಿನ ಅಂತರವು ‘ನೋಟಾ’ಕ್ಕಿಂತಲೂ ಕಡಿಮೆ ಇತ್ತು. ‘ನೋಟಾ’ ಪರ ಮತ ಚಲಾಯಿಸಿದವರಲ್ಲಿ ಬಹುತೇಕರು ಬಿಜೆಪಿ ವಿರುದ್ಧ ತಮ್ಮಲ್ಲಿರುವ ಅಸಮಾಧಾನವನ್ನು ತೋರಿಸುತ್ತಿದ್ದಾರೆ, ಬಿಜೆಪಿ ಬಗ್ಗೆ ತಮ್ಮಲ್ಲಿರುವ ಅವಿಶ್ವಾಸವು ಕಾಂಗ್ರೆಸ್ ಪರ ಮತಗಳಾಗಿ ಪರಿವರ್ತನೆ ಆಗಬಾರದು ಎಂಬುದೂ ಇವರ ಉದ್ದೇಶವಾಗಿತ್ತು ಎನ್ನುವ ಒಂದು ವಾದ ಇದೆ. ಕಾಂಗ್ರೆಸ್ಸಿಗೆ ಯಾವ ರೀತಿಯಿಂದಲೂ ಲಾಭವಾಗದಂತೆ ನೋಡಿಕೊಂಡು, 22 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಪಕ್ಷಕ್ಕೆ ಸಣ್ಣ ಪ್ರಮಾಣದ ಆಘಾತ ನೀಡುವ ಉದ್ದೇಶ ‘ನೋಟಾ’ ಮತದಾರರಿಗೆ ಇತ್ತು. ಇದರ ಅರ್ಥ, ಇಂತಹ ಅತೃಪ್ತಿ ಇಲ್ಲವಾಗಿದ್ದಿದ್ದರೆ, ಈ ಕ್ಷೇತ್ರಗಳ ಪೈಕಿ ಅಷ್ಟರಲ್ಲೂ ಅಥವಾ ಬಹುತೇಕ ಕಡೆ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸುತ್ತಿದ್ದರು. ಗುಜರಾತಿನಲ್ಲಿ ಕಾಂಗ್ರೆಸ್ ಎರಡು ದಶಕಗಳಿಗೂ ಹೆಚ್ಚು ಅವಧಿಯಿಂದ ಅಧಿಕಾರವಂಚಿತವಾಗಿದೆ, ಕೇಂದ್ರದಲ್ಲಿಯೂ ಅದು ಅಧಿಕಾರ ಹೊಂದಿಲ್ಲದಿರುವ ಕಾರಣ ಇದು ಅತ್ಯಂತ ವಿಶ್ವಾಸಾರ್ಹ ಊಹೆ ಎನ್ನಬಹುದು.

ಎರಡನೆಯ ವಿಚಾರವೆಂದರೆ; ಬಿಜೆಪಿ ಮೇಲೆ ಮತದಾರರಿಗೆ ಸಿಟ್ಟು ಇದೆ ಎಂದು ಕಾಂಗ್ರೆಸ್ ಭಾವಿಸಿತು, ನೋಟು ರದ್ದತಿ ಮತ್ತು ಜಿಎಸ್‌ಟಿ ವಿರುದ್ಧವಾಗಿ ಜನರನ್ನು ಎತ್ತಿಕಟ್ಟುವ ಯತ್ನ ನಡೆಸಿತು. ಹಾಗಾಗಿ, ‘ನೋಟಾ’ ಮತಗಳು ಹೆಚ್ಚಾಗಿದ್ದಕ್ಕೆ ಕಾರಣ ತಾನು ಎಂದು ಕಾಂಗ್ರೆಸ್ ಹೇಳಿಕೊಳ್ಳಬಹುದೇ ವಿನಾ, ಅದಕ್ಕಿಂತ ಹೆಚ್ಚಿನದೇನನ್ನೂ ಆ ಪಕ್ಷ ತನ್ನದೆಂದು ಹೇಳಿಕೊಳ್ಳುವಂತಿಲ್ಲ. ಕನಿಷ್ಠಪಕ್ಷ ಈ ಚುನಾವಣೆಯಲ್ಲಿ, ‘ನೋಟಾ’ ಪರವಾಗಿ ಚಲಾವಣೆಯಾದ ಮತಗಳಿಗಂತೂ ಕಾಂಗ್ರೆಸ್ ಅರ್ಹವಲ್ಲ.

‘ನೋಟಾ’ ಮತಗಳು ಬಿಜೆಪಿಗೆ ಏಟು ಕೊಟ್ಟ 12 ವಿಧಾನಸಭಾ ಕ್ಷೇತ್ರಗಳ ಫಲಿತಾಂಶದ ವಿಶ್ಲೇಷಣೆಯು ಕೆಲವಷ್ಟು ಸಂಗತಿಗಳನ್ನು ಹೊರಗೆಡವುತ್ತದೆ. ಛೋಟಾ ಉದಯಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಒಂದು ಸಾವಿರಕ್ಕೂ ಕಡಿಮೆ ಮತಗಳ ಅಂತರದಿಂದ ಗೆಲುವು ಸಾಧಿಸಿದರು, ಅಲ್ಲಿ ‘ನೋಟಾ’ ಪರವಾಗಿ 5,870 ಮತಗಳು ಚಲಾವಣೆಯಾದವು. ಡಾಂಗ್ ಕ್ಷೇತ್ರದಲ್ಲಿ ಕಾಂಗ್ರೆಸ್ 800 ಮತಗಳಿಂದ ಗೆಲುವು ಸಾಧಿಸಿತು, ಅಲ್ಲಿ ನೋಟಾ ಪರವಾಗಿ 2,184 ಮತಗಳು ಚಲಾವಣೆಯಾದವು. ದೇವಧರ್ ಕ್ಷೇತ್ರದಲ್ಲಿ ಕಾಂಗ್ರೆಸ್‌ ಒಂದು ಸಾವಿರಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ ಜಯ ಸಾಧಿಸಿತು. ಅಲ್ಲಿ ಚಲಾವಣೆಯಾದ ‘ನೋಟಾ’ ಮತಗಳ ಸಂಖ್ಯೆ 2,988. ಕಪ್ರದಾ, ಮಾನ್ಸಾ, ಛೋಟಾ ಉದಯಪುರ ಮತ್ತು ಜೇತ್ಪುರ ಕ್ಷೇತ್ರಗಳ ಫಲಿತಾಂಶ ಅತ್ಯಂತ ಸ್ಪಷ್ಟ ಸಂದೇಶ ನೀಡುತ್ತದೆ. ಕಪ್ರದಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿಯನ್ನು ಕೇವಲ 170 ಮತಗಳಿಂದ ಸೋಲಿಸಿದರು. ಆದರೆ, ಅಲ್ಲಿನ ಮತಯಂತ್ರದಲ್ಲಿ ದಾಖಲಾದ ‘ನೋಟಾ’ ಮತಗಳ ಸಂಖ್ಯೆ 3,868. ಮಾನ್ಸಾ ಕ್ಷೇತ್ರವನ್ನು ಬಿಜೆಪಿ 524 ಮತಗಳಿಂದ ಕಳೆದುಕೊಂಡಿತು. ಅಲ್ಲಿ ಮೂರು ಸಾವಿರ ಮತಗಳು ‘ನೋಟಾ’ ಪರವಾಗಿ ಚಲಾವಣೆ ಆಗಿದ್ದವು. ಜೇತ್ಪುರದಲ್ಲಿ ಬಿಜೆಪಿಯ ಸೋಲಿನ ಅಂತರ 3,052 ಮತಗಳಾಗಿದ್ದರೆ, ಅಲ್ಲಿ ‘ನೋಟಾ’ ಪರವಾಗಿ ಚಲಾವಣೆಯಾದ ಮತಗಳ ಸಂಖ್ಯೆ 6,155.

ಮೊರ್ವಾ ಹದಾಫ್, ಸೊಜಿತ್ರಾ, ವಾಂಕಾನೆರ್, ಜಂಜೋಧ್‌ಪುರ, ಧನೇರಾ ಮತ್ತು ತಲಜಾ ಕ್ಷೇತ್ರಗಳೂ ಬಿಜೆಪಿಯ ಕೈಯಿಂದ ಜಾರಿದವು. ತಲಜಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ 1,779 ಮತಗಳಿಂದ ಜಯ ಸಾಧಿಸಿದರೆ, ನೋಟಾ ಪರವಾಗಿ 2,918 ಮತಗಳು ಬಿದ್ದವು. ವಾಂಕಾನೆರ್‌ ಕ್ಷೇತ್ರದಲ್ಲಿ ಬಿಜೆಪಿ 1,361 ಮತಗಳಿಂದ ಸೋಲು ಕಂಡಿತು. ಅಲ್ಲಿ ನೋಟಾ ಪರವಾಗಿ 3,170 ಮತಗಳು ಚಲಾವಣೆಯಾದವು.

ಈ ಹಿಂದೆಯೇ ಹೇಳಿರುವಂತೆ, ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿನ ಸೋಲಿನ ಅಂತರ ‘ನೋಟಾ’ ಮತಗಳಿಗಿಂತ ಕಡಿಮೆಯಾಗಿತ್ತು. ವಾಗ್ರಾಮ, ವಿಜಯಪುರ, ಪ್ರಾಂತಿಜ್ ಮತ್ತು ಪೋರಬಂದರ್ ಕ್ಷೇತ್ರಗಳು ಇಂತಹವುಗಳು. ಆದರೆ, ಕಾಂಗ್ರೆಸ್ಸಿಗೆ ಗುಜರಾತಿನಲ್ಲಿ ‘ಆಡಳಿತ ವಿರೋಧಿ ಅಲೆ’ ಎದುರಿಸಬೇಕಾದ ಅಗತ್ಯ ಇರಲಿಲ್ಲ. ಹಾಗಾಗಿ, ‘ನೋಟಾ’ ಪರವಾಗಿ ಚಲಾವಣೆಯಾಗಿರುವ ಮತಗಳು, ‘ನೋಟಾ’ ಇಲ್ಲದಿದ್ದರೆ ಕಾಂಗ್ರೆಸ್ ಪರವಾಗಿ ಚಲಾವಣೆ ಆಗುತ್ತಿದ್ದವು ಎಂದು ಹೇಳುವುದು ಸರಿಯಾಗಲಿಕ್ಕಿಲ್ಲ. ಅಬ್ಬಬ್ಬಾ ಎಂದರೆ, ನೋಟಾ ಇಲ್ಲದಿದ್ದಿದ್ದರೆ ಬಿಜೆಪಿಯ ಗೆಲುವಿನ ಅಂತರ ಹೆಚ್ಚುತ್ತಿತ್ತು ಎಂಬ ವಾದ ಮುಂದಿಡಬಹುದು.

ನೋಟಾ ಹೊರತುಪಡಿಸಿಯೂ, ಗುಜರಾತ್ ಚುನಾವಣೆಯ ಫಲಿತಾಂಶವು ಇತರ ರಾಜ್ಯಗಳಲ್ಲಿನ ಫಲಿತಾಂಶಕ್ಕಿಂತ ಭಿನ್ನವಾಗಿದೆ ಎಂಬುದನ್ನು ಗುರುತಿಸಬಹುದು. ಸಾಮಾನ್ಯ ಸಂದರ್ಭಗಳಲ್ಲಿ, ಮೊದಲ ಎರಡು ಪಕ್ಷಗಳು ಪಡೆಯುವ ಮತಗಳಿಕೆ ಪ್ರಮಾಣದಲ್ಲಿ ಶೇಕಡ 10ರಷ್ಟು ಅಥವಾ ಅದರ ಆಸುಪಾಸಿನ ಸಂಖ್ಯೆಯ ವ್ಯತ್ಯಾಸ ಇದ್ದಾಗ, ಗೆಲುವು ಸಾಧಿಸುವ ಪಕ್ಷವು ಒಟ್ಟು ಕ್ಷೇತ್ರಗಳ ಪೈಕಿ ಶೇಕಡ 75ರಿಂದ 80ರಷ್ಟನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತದೆ. ಆದರೆ, ಗುಜರಾತ್ ವಿಧಾನಸಭಾ ಚುನಾವಣೆಗಳಲ್ಲಿ ಇದು ಯಾವತ್ತೂ ಆಗಿಲ್ಲ. ಉದಾಹರಣೆಗೆ, 2013ರಲ್ಲಿ ರಾಜಸ್ಥಾನ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು ಮತಗಳ ಪೈಕಿ ಶೇಕಡ 45ರಷ್ಟನ್ನು ಬಿಜೆಪಿ, ಶೇಕಡ 33ರಷ್ಟನ್ನು ಕಾಂಗ್ರೆಸ್ ಪಡೆದುಕೊಂಡವು. ಅಲ್ಲಿನ ಒಟ್ಟು 200 ಕ್ಷೇತ್ರಗಳ ಪೈಕಿ 163 ಕ್ಷೇತ್ರಗಳಲ್ಲಿ (ಶೇಕಡ 80ರಷ್ಟು) ಬಿಜೆಪಿ ಜಯ ಸಾಧಿಸಿತು. ಕಾಂಗ್ರೆಸ್ 21 ಸ್ಥಾನಗಳನ್ನು ಮಾತ್ರ ಪಡೆಯಿತು. 2013ರಲ್ಲಿ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್ಸಿಗಿಂತ ಶೇಕಡ 8.5ರಷ್ಟು ಹೆಚ್ಚು, ಅಂದರೆ ಶೇಕಡ 45ರಷ್ಟು ಮತಗಳನ್ನು ಪಡೆಯಿತು. ಇದರ ಪರಿಣಾಮವಾಗಿ ಅಲ್ಲಿನ 230 ಸ್ಥಾನಗಳ ಪೈಕಿ (ಶೇಕಡ 70ರಷ್ಟು) 165 ಸ್ಥಾನಗಳು ಬಿಜೆಪಿ ಪಾಲಾದವು. 58 ಸ್ಥಾನಗಳು ಕಾಂಗ್ರೆಸ್ಸಿಗೆ ದಕ್ಕಿದವು. ಹಿಮಾಚಲ ಪ್ರದೇಶದಲ್ಲಿ ಈಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್ಸಿಗಿಂತ ಹೆಚ್ಚುವರಿಯಾಗಿ ‍ಪಡೆದ ಶೇಕಡ 7ರಷ್ಟು ಮತಗಳು, 68 ಸ್ಥಾನಗಳ ಪೈಕಿ 44 ಸ್ಥಾನಗಳಲ್ಲಿ ಬಿಜೆಪಿ ಜಯ ಸಾಧಿಸಲು ಕಾರಣವಾದವು.

ಹಾಗಾಗಿ, ಗುಜರಾತ್ ಚುನಾವಣೆಯ ಪಥವೇ ಬೇರೆ ಎಂದು ಹೇಳಬಹುದು. ಈ ಬಾರಿ ಗುಜರಾತಿನಲ್ಲಿ ಮತಗಳಿಕೆ ಪ್ರಮಾಣದಲ್ಲಿ ಶೇಕಡ 7ರಷ್ಟು ವ್ಯತ್ಯಾಸ ಇದ್ದರೂ, ಚುನಾವಣಾ ಕಣದಲ್ಲಿನ ಸ್ಪರ್ಧೆಯನ್ನು ‘ನೋಟಾ’ ತೀವ್ರಗೊಳಿಸಿತು. ಇದನ್ನು ಈಗ ಎಲ್ಲ ರಾಜಕೀಯ ಪಕ್ಷಗಳೂ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ನಮ್ಮ ಚುನಾವಣಾ ರಾಜಕೀಯಕ್ಕೆ ಇದು ಒಂದು ಹೊಸ ಆಯಾಮ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT