ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪವಿತ್ರ ಭೂಮಿ’ಗೆ ಅಂಟಿದ ದ್ವೇಷದ ಶಾಪ

Last Updated 26 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಭಾರತದ ಉದ್ಯಮಿ ಜಮ್‌ಶೆಟ್‌ಜಿ ಟಾಟಾ ಅವರು 1873ರಲ್ಲಿ ಜೆರುಸಲೇಂಗೆ ಭೇಟಿ ನೀಡಿದ್ದರು. ಅಲ್ಲಿನ ಜನರು ತೋರುತ್ತಿದ್ದ ಧಾರ್ಮಿಕ ಅಂಧಶ್ರದ್ಧೆ ಕಂಡು ಅವರು ಹೌಹಾರಿದ್ದರು. ‘ಈ ರೀತಿ ಇರುವುದು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದ್ದರು. ‘ಜಗತ್ತಿನ ಇತರರಿಂತ ತಾವು ಶ್ರೇಷ್ಠರು ಎಂದು ಹೇಳಿಕೊಳ್ಳುತ್ತಿರುವವರು ಇಂತಹ ಹುಚ್ಚು ಮೂರ್ಖರೇ? ಅಥವಾ ಈ ಎಲ್ಲವನ್ನೂ ಅವರು ನಂಬುತ್ತಿದ್ದಾರೆ ಎಂದು ಹೇಳಿಕೊಳ್ಳುವಂತಹ ಆಷಾಢಭೂತಿಗಳೇ? ಅಥವಾ ಜೆರುಸಲೇಂನಲ್ಲಿ ಕಾಣಿಸಿಕೊಳ್ಳುವ ಈ ಅಸಂಗತ ಅಂಶಗಳು ನಿಜವಾದ ಭಕ್ತಿಯೇ’ ಎಂದು ಅವರು ಕೇಳಿದ್ದರು. ಅವರು ನಗರದ ಜನರ ಜತೆ ಮಾತನಾಡಿದ್ದರು. ‘ಅವರ ಮೂರ್ಖತನ, ಪಕ್ಷಪಾತಿ ತುಡಿತ, ಕಣ್ಣಿಗೆ ರಾಚುವ ಆಷಾಢಭೂತಿತನಗಳು ನೇರವಾದ ವಾಗ್ವಾದದಲ್ಲಿನ ಸಾಮಾನ್ಯ ಸಭ್ಯತೆಯನ್ನು ಮರೆಸಿಬಿಡಬಹುದು’ ಎಂದು ಜೆಮ್‌ಶೆಟ್‌ಜಿ ಅಭಿಪ್ರಾಯಪಟ್ಟಿದ್ದರು. ‘ಇಸ್ಲಾಂ ಧರ್ಮಕ್ಕೆ ಸೇರಿದ ಸ್ಥಳಗಳ ಪವಾಡ ಮತ್ತು ಪಾವಿತ್ರ್ಯದ ಬಗ್ಗೆ ಕ್ರೈಸ್ತ ಗೈಡ್‌ಗಳು ಮತ್ತು ಕ್ರೈಸ್ತ ಧರ್ಮಕ್ಕೆ ಸೇರಿದ ಸ್ಥಳಗಳ ಪಾವಿತ್ರ್ಯ ಮತ್ತು ಪವಾಡಗಳ ಬಗ್ಗೆ ಮುಸ್ಲಿಂ ಗೈಡ್‌ಗಳು ವಿವರಿಸುವಾಗ ಅವರ ಧ್ವನಿಯಲ್ಲಿ ಅಡಗಿರುವ ಅವಹೇಳನ ಮತ್ತು ಅನುಮಾನಗಳು ಗಮನಾರ್ಹ’ ಎಂದು ಅವರು ಹೇಳಿದ್ದರು.

ಜೆಮ್‍ಶೆಟ್‌ಜಿ ಅವರು ಜೆರುಸಲೇಂಗೆ ಭೇಟಿ ನೀಡಿದ್ದಾಗ ಅಸಂಗತತೆ ಮತ್ತು ಆಷಾಢಭೂತಿತನಗಳನ್ನು ಪ್ರದರ್ಶಿದವರು ಮುಖ್ಯವಾಗಿ ಮುಸ್ಲಿಮರು ಮತ್ತು ಕ್ರೈಸ್ತರು. ಆದರೆ ಸ್ವಲ್ಪದರಲ್ಲಿಯೇ ಅದಕ್ಕೆ ಮತ್ತೊಂದು ವರ್ಗವೂ ಸೇರ್ಪಡೆಯಾಯಿತು. ಅದು ಯೆಹೂದ್ಯರು. 19ನೇ ಶತಮಾನದ ಕೊನೆಯ ಹೊತ್ತಿಗೆ ಅವರು ಭಾರಿ ಸಂಖ್ಯೆಯಲ್ಲಿ ಪ್ಯಾಲೆಸ್ಟೀನ್‍ಗೆ ವಲಸೆ ಆರಂಭಿಸಿದರು. ಶತಮಾನಗಳ ಹಿಂದೆ ತೊರೆದು ಹೋಗಿದ್ದ ತಮ್ಮ ತಾಯ್ನಾಡನ್ನು ಮತ್ತೆ ತಮ್ಮ ನೆಲೆಯನ್ನಾಗಿ ಮಾಡಿಕೊಂಡರು. ಇದು ರಾಷ್ಟ್ರೀಯತೆಯ ಭಾವನೆ ತೀವ್ರವಾಗುತ್ತಿದ್ದ ಕಾಲ. ಯುರೋಪ್‍ನಲ್ಲಿದ್ದ ಪ್ರತಿ ಭಾಷೆ ಮತ್ತು ಜನಾಂಗೀಯ ಗುಂಪುಗಳೂ ತಮ್ಮನ್ನು ಒಂದು ದೇಶವಾಗಿ ಕಟ್ಟಿಕೊಳ್ಳಲು ಬಯಸುತ್ತಿದ್ದ ಕಾಲ ಅದು. ಈ ಭಾವನೆ ಯೆಹೂದಿಗಳಲ್ಲಿಯೂ ಮೂಡಿತು. ಆದರೆ ಪೋಲೆಂಡ್‍ನವರು, ಜೆಕ್‍ನವರು ಅಥವಾ ರೋಮನ್ನರ ಹಾಗೆ ಅವರಿಗೆ ಯುರೋಪ್‍ನಲ್ಲಿ ತಮ್ಮದೇ ಆದ ಪ್ರದೇಶ ಇರಲಿಲ್ಲ. ಅಷ್ಟಲ್ಲದೆ, ಯುರೋಪ್ ಖಂಡದಲ್ಲಿ ಅವರು ಭಾರಿ ಕಿರುಕುಳವನ್ನೂ ಎದುರಿಸಬೇಕಾಯಿತು. ಹಾಗಾಗಿ, ಪ್ಯಾಲೆಸ್ಟೀನ್‍ನಲ್ಲಿ ತಮ್ಮದೇ ಆದ ದೇಶ ಕಟ್ಟಿಕೊಳ್ಳಲು ಅವರು ನಿರ್ಧರಿಸಿದರು.

19ನೇ ಶತಮಾನದ ಕೊನೆಯ ಕಾಲದಲ್ಲಿದ್ದ ಯೆಹೂದಿಗಳ ಪರ ಪ್ರಮುಖ ಚಿಂತಕ ಥಿಯೋಡಾರ್ ಹರ್ಜೆಲ್. ಪ್ಯಾಲೆಸ್ಟೀನ್‍ಗೆ ವಲಸೆ ಹೋಗಿ ಅಲ್ಲಿ ನೆಲೆಯಾಗುವ ಯೆಹೂದಿಗಳು ಅಲ್ಲಿ ಆಗಲೇ ನೆಲೆಸಿದ್ದ ಅರಬರ ಕಲ್ಯಾಣಕ್ಕೆ ಮತ್ತು ಅವರಿಗೆ ಶಿಕ್ಷಣ ನೀಡಲು ಕೆಲಸ ಮಾಡುತ್ತಾರೆ ಎಂಬುದು ಹರ್ಜೆಲ್ ಮತ್ತು ಆತನಂತಹ ಇತರರ ನಂಬಿಕೆಯಾಗಿತ್ತು. ಪ್ಯಾಲೆಸ್ಟೀನನ್ನು ನಾಗರಿಕಗೊಳಿಸುವ ದೊಡ್ಡ ಜವಾಬ್ದಾರಿ ಯೆಹೂದಿಗಳ ಮೇಲಿದೆ ಎಂದು ಅವರು ಭಾವಿಸಿದ್ದರು. ಆದರೆ, ರಷ್ಯಾ ಸಂಜಾತ ವಿದ್ವಾಂಸ ಆ್ಯಷರ್ ಗಿನ್ಸ್‍ಬರ್ಗ್ ಈ ಸಿದ್ಧಾಂತಕ್ಕೆ ವಿರೋಧಿಯಾಗಿದ್ದರು. ‘ಅಹದ್ ಹ ಅಮ್’ ಎಂಬ ಕಾವ್ಯನಾಮದಲ್ಲಿ ಇವರು ಬರೆಯುತ್ತಿದ್ದರು. ಪ್ಯಾಲೆಸ್ಟೀನ್‍ನಲ್ಲಿ ಈಗಾಗಲೇ ಇರುವ ಜನರ ಸಂಸ್ಕೃತಿ ಮತ್ತು ಹಕ್ಕುಗಳ ಬಗ್ಗೆ ಗೌರವ ತೋರಬೇಕು ಹಾಗೂ ಗೆಳೆತನ ಹಾಗೂ ಗೌರವದ ಭಾವನೆಯಲ್ಲಿಯೇ ಅವರನ್ನು ನೋಡಬೇಕು ಎಂದು 1891ರಲ್ಲಿ ಬರೆದ ಲೇಖನವೊಂದರಲ್ಲಿ ಇವರು ಹೇಳಿದ್ದರು. ಅದು ಹಾಗೆ ಆಗುತ್ತಿಲ್ಲ ಎಂಬುದು ತಿಳಿದ ಬಳಿಕ ಅಹದ್ ಹ ಅಮ್ ಆಕ್ರೋಶದಲ್ಲಿ ಹೀಗೆ ಬರೆದಿದ್ದರು: ‘ಹಾಗಿದ್ದರೂ ನಮ್ಮ ಸಹೋದರರು ಪ್ಯಾಲೆಸ್ಟೀನ್‍ನಲ್ಲಿ ಏನು ಮಾಡುತ್ತಿದ್ದಾರೆ? ಏನು ಮಾಡಬೇಕಿತ್ತೋ ಅದರ ವಿರುದ್ಧವಾದದ್ದನ್ನು ಮಾಡುತ್ತಿದ್ದಾರೆ! ತಾವು ನೆಲೆಯಾಗಿದ್ದ ಊರಿನಲ್ಲಿ (ರಷ್ಯಾ ಮತ್ತು ಪೂರ್ವ ಯುರೋಪ್) ಅವರು ಗುಲಾಮರಾಗಿದ್ದರು. ತಮಗೆ ದಿಢೀರ್ ಸ್ವಾತಂತ್ರ್ಯ ಸಿಕ್ಕಿತು ಎಂಬ ಭಾವ ಅವರಲ್ಲಿ ಬಂದಿದೆ. ಈ ಬದಲಾವಣೆ ಅವರಲ್ಲಿ ನಿರಂಕುಶಾಧಿಕಾರದ ಭಾವನೆಯನ್ನು ಮೂಡಿಸಿದೆ. ಅರಬ್ಬರನ್ನು ದ್ವೇಷ ಮತ್ತು ಕ್ರೌರ್ಯದಿಂದ ನಡೆಸಿಕೊಳ್ಳುತ್ತಿದ್ದಾರೆ. ಅವರಿಗೆ ಹಕ್ಕುಗಳನ್ನು ನಿರಾಕರಿಸುತ್ತಿದ್ದಾರೆ, ಯಾವ ಕಾರಣವೂ ಇಲ್ಲದೆ ಅವರಿಗೆ ನೋವು ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಈ ಕೃತ್ಯಗಳ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ ಸಿಟ್ಟು ತರಿಸಬೇಕಾದ ಮತ್ತು ಅಪಾಯಕಾರಿಯಾದ ಈ ಮನೋಭಾವವನ್ನು ನಮ್ಮಲ್ಲಿ ಯಾರೂ ವಿರೋಧಿಸುತ್ತಿಲ್ಲ’.

ಇಂತಹ ವಿರೋಧಗಳು ಯೆಹೂದಿಗಳ ಮನೋಭಾವದ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ. 20ನೇ ಶತಮಾನದ ಆರಂಭದ ವರ್ಷಗಳಲ್ಲಿ ಯುರೋಪ್‍ನಿಂದ ಪ್ಯಾಲೆಸ್ಟೀನ್‍ಗೆ ಯೆಹೂದಿಗಳ ವಲಸೆ ವೇಗವಾಗಿಯೇ ನಡೆಯಿತು. ಬಾಲ್‍ಫೋರ್ ಘೋಷಣೆಯ ಬಳಿಕ ಇದು ಇನ್ನಷ್ಟು ವೇಗ ಪಡೆದುಕೊಂಡಿತು. ಈ ಘೋಷಣೆಗೆ ಮುಂದಿನ ವಾರಕ್ಕೆ ನೂರು ವರ್ಷ ತುಂಬಲಿದೆ. ಪ್ಯಾಲೆಸ್ಟೀನ್‍ನಲ್ಲಿ ಯೆಹೂದಿ ರಾಷ್ಟ್ರ ನಿರ್ಮಾಣಕ್ಕೆ ಬ್ರಿಟನ್ ಸರ್ಕಾರ ಬೆಂಬಲ ನೀಡುತ್ತದೆ ಎಂದು 1917ರ ನವೆಂಬರ್ 2ರಂದು ಬ್ರಿಟನ್‍ನ ವಿದೇಶಾಂಗ ಸಚಿವ ಆರ್ಥರ್ ಜೇಮ್ ಬಾಲ್‍ಫೋರ್ ಘೋಷಿಸಿದರು. ವಿಶ್ವ ಮಹಾಯುದ್ಧ ಕೊನೆಗೊಳ್ಳುವ ಹಂತಕ್ಕೆ ಬಂದಿತ್ತು. ಬ್ರಿಟಿಷರು ಗೆದ್ದಿದ್ದರೆ, ಜೆರುಸಲೇಂ ಮತ್ತು ಪ್ಯಾಲೆಸ್ಟೀನ್‍ನ ಮೇಲೆ ನಿಯಂತ್ರಣ ಹೊಂದಿದ್ದ ಒಟ್ಟೋಮನ್ ಸಾಮ್ರಾಜ್ಯ ಸೋಲು ಕಂಡಿತ್ತು. ತಮ್ಮ ವಿಜಯದ ಭಾಗವಾಗಿ ಯೆಹೂದಿ ದೇಶ ಸ್ಥಾಪನೆಯ ಸಾಧ್ಯತೆಯನ್ನು ಬ್ರಿಟಿಷರು ಬಿಚ್ಚಿಟ್ಟಿದ್ದರು.

ಬಾಲ್‍ಫೋರ್ ಘೋಷಣೆಯಿಂದಾಗಿ 1920ರ ದಶಕದಲ್ಲಿ ಪ್ಯಾಲೆಸ್ಟೀನ್‍ನತ್ತ ಯೆಹೂದಿಗಳ ವಲಸೆ ಹೆಚ್ಚಾಯಿತು. ಹಿಟ್ಲರ್ ಮತ್ತು ನಾಜಿವಾದ ಉಚ್ಚ್ರಾಯಕ್ಕೆ ಬರುವುದರೊಂದಿಗೆ 1930ರ ದಶಕದಲ್ಲಿ ಇದು ಇನ್ನಷ್ಟು ತೀವ್ರಗೊಂಡಿತು. ಯೆಹೂದಿಗಳು ಪ್ಯಾಲೆಸ್ಟೀನನ್ನು ತಮ್ಮ ನೆಲೆಯಾಗಿ ಮಾಡಿಕೊಂಡದ್ದರ ಬಗ್ಗೆ ವರದಿಗಾರರೊಬ್ಬರು ಗಾಂಧಿಯನ್ನು 1938ರಲ್ಲಿ ಪ್ರಶ್ನಿಸಿದ್ದರು. ಯೆಹೂದಿಗಳ ಬಗ್ಗೆ ತಮಗೆ ಅನುಕಂಪ ಇದೆ. ಅವರು ಕ್ರೈಸ್ತ ಧರ್ಮದಲ್ಲಿ ಅಸ್ಪೃಶ್ಯರಾಗಿದ್ದರು ಎಂದು ಗಾಂಧಿ ಹೇಳಿದ್ದರು.

ಆದರೆ ಈ ಅನುಕಂಪ ಈಗಾಗಲೇ ಪ್ಯಾಲೆಸ್ಟೀನ್‍ನಲ್ಲಿ ಇದ್ದ ಸಮುದಾಯಕ್ಕೆ ನ್ಯಾಯ ದೊರಕಬೇಕು ಎಂಬ ವಿಚಾರವನ್ನು ಗಾಂಧಿ ಕಡೆಗಣಿಸುವಂತೆ ಮಾಡಲಿಲ್ಲ. ಯೆಹೂದಿಗಳಿಗೆ ತಮ್ಮದೇ ಆದ ದೇಶವೊಂದು ಬೇಕು ಎನ್ನುವುದಕ್ಕೆ ಅರಬರು ಯಾಕೆ ಬಲಿಯಾಗಬೇಕು? ಬ್ರಿಟಿಷರ ಬಂದೂಕಿನ ನೆರಳಿನಲ್ಲಿ ಯೆಹೂದಿಗಳು ಯುರೋಪ್‍ನಿಂದ ಪ್ಯಾಲೆಸ್ಟೀನ್ ಪ್ರವೇಶಿಸಿದರು ಎಂಬುದು ಗಾಂಧಿಯಲ್ಲಿ ಕಳವಳ ಮೂಡಿಸಿತ್ತು. ‘ಬಂದೂಕಿನ ಬಲದಿಂದ ಧಾರ್ಮಿಕ ಕಾರ್ಯವೊಂದನ್ನು ಮಾಡುವುದಕ್ಕೆ ಸಾಧ್ಯವಿಲ್ಲ. ಯೆಹೂದಿಗಳಿಗೆ ಪ್ಯಾಲೆಸ್ಟೀನ್‍ನಲ್ಲಿ ನೆಲೆಸಬೇಕು ಎಂದಿದ್ದರೆ ಅದು ಅರಬರ ಒಪ್ಪಿಗೆಯಿಂದ ಮಾತ್ರ ಸಾಧ್ಯ. ಆದರೆ ಈಗಿನ ಪರಿಸ್ಥಿತಿ ನೋಡಿದರೆ, ತಮಗೆ ಯಾವ ಅನ್ಯಾಯವನ್ನೂ ಮಾಡದ ಜನರ ಜೀವನನ್ನು ಹಾಳುಗೆಡವುವಲ್ಲಿ ಬ್ರಿಟಿಷರ ಜತೆಗೆ ಯೆಹೂದಿಗಳು ಪಾಲುದಾರರಾದರು’ ಎಂದು ಗಾಂಧಿ ಹೇಳಿದ್ದರು.

ಸಲಹೆ ಮತ್ತು ಎಚ್ಚರಿಕೆ ರೂಪದ ಈ ಮಾತುಗಳನ್ನು ನಿರ್ಲಕ್ಷಿಸಲಾಯಿತು. ಯೆಹೂದಿಗಳು ಮತ್ತು ಅರಬರು ಪ್ಯಾಲೆಸ್ಟೀನ್‍ನಲ್ಲಿ ತಮ್ಮ ಹೋರಾಟ ಮುಂದುವರಿಸಿದರು. 1948ರಲ್ಲಿ ಇಸ್ರೇಲ್ ದೇಶ ಸ್ಥಾಪನೆಯೊಂದಿಗೆ ಈ ಸಂಘರ್ಷ ಭಾರಿ ತೀವ್ರತೆ ಪಡೆದುಕೊಂಡಿತು. ಯೆಹೂದಿಗಳು ಮತ್ತು ಅರಬರು 1948, 1956, 1967 ಮತ್ತು 1973ರಲ್ಲಿ ದೊಡ್ಡ ಯುದ್ಧಗಳನ್ನು ಮಾಡಿದರು. ಈ ಯುದ್ಧಗಳ ನಡುವಲ್ಲಿ ಮತ್ತು ಯುದ್ಧಗಳ ನಂತರವೂ ಆಗಾಗ ಹಿಂಸೆ ನಡೆಯುತ್ತಲೇ ಇದೆ.

1956ರ ಯುದ್ಧ ಕೊನೆಗೊಂಡ ಸ್ವಲ್ಪ ಸಮಯದ ಬಳಿಕ, ಶ್ರೇಷ್ಠ ಇತಿಹಾಸಕಾರ ಹಾನ್ಸ್ ಕೊಹ್ನ್ ಲೇಖನವೊಂದನ್ನು ಬರೆದು, ಅರಬರ ಜತೆ ಶಾಂತಿಯ ಪ್ರಯತ್ನ ಮಾಡಿದ ಕೆಲವು ದಿಟ್ಟ ಯೆಹೂದ್ಯರನ್ನು ನೆನಪು ಮಾಡಿಕೊಂಡಿದ್ದರು. ‘ರೆಬ್ ಬಿನ್ಯೋಮನ್’ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದ ವ್ಯಕ್ತಿಯೊಬ್ಬರನ್ನು ಅವರು ಉಲ್ಲೇಖಿಸಿದ್ದರು. ಯೆಹೂದಿ ಸಂಪ್ರದಾಯವಾದದ ಭಿನ್ನಮತೀಯರನ್ನು ಅವರು 1953ರಲ್ಲಿ ಹೀಗೆ ಬಣ್ಣಿಸಿದ್ದರು: ‘ನಮ್ಮ ಇತರ ಜನಸಮೂಹದಿಂದ ನಮ್ಮನ್ನು ಬೇರ್ಪಡಿಸುವ ಅಂಶ ಯಾವುದು? ಇದು ಅರಬರೆಡೆಗಿನ ನಮ್ಮ ಧೋರಣೆ. ಅವರು ಅರಬರನ್ನು ಶತ್ರುಗಳು ಎಂದು ಕಾಣುತ್ತಾರೆ. ಕೆಲವರಂತೂ ಅರಬರು ಶಾಶ್ವತ ಶತ್ರುಗಳು ಎಂದು ಭಾವಿಸಿದ್ದಾರೆ. ಅವರಲ್ಲಿ ನೇರಧೋರಣೆ ಇರುವವರು ಹೀಗೆ ಮಾತನಾಡುತ್ತಾರೆ. ಅಷ್ಟೊಂದು ನೇರ ಅಲ್ಲ ಅನಿಸಿಕೊಂಡವರು ಶಾಂತಿಯ ಬಗ್ಗೆ ಮಾತನಾಡುತ್ತಾರೆ. ಆದರೆ ಅವುಗಳು ಬರೇ ಮಾತು ಮಾತ್ರ. ಅವರಿಗೆ ಶರಣಾಗತಿಯ ಶಾಂತಿ ಬೇಕು, ಅದನ್ನು ಅರಬರು ಒಪ್ಪಿಕೊಳ್ಳದಿರುವ ಸಾಧ್ಯತೆಯೇ ಹೆಚ್ಚು’. ಯಾವ ಅಳುಕೂ ಇಲ್ಲದ, ಯಾವುದಕ್ಕೂ ಬಾಗದ ಯೆಹೂದಿ ಸಾಂಪ್ರದಾಯಿಕತೆಯ ನಿಲುವು ಇದು. ಆದರೆ ತಮ್ಮ ಮತ್ತು ತಮ್ಮ ದಿಟ್ಟವಾದ ಸಣ್ಣ ಭಿನ್ನಮತೀಯ ಗುಂಪಿನ ಬಗ್ಗೆ ರೆಬ್‌ ಬಿನ್ಯೋಮಿನ್‌ ಹೀಗೆ ಹೇಳಿದ್ದಾರೆ: ‘ಏನೇ ಆದರೂ, ನಾವು ಅರಬರನ್ನು ಶತ್ರುಗಳಾಗಿ ಕಂಡಿಲ್ಲ, ಹಿಂದೆಯೂ ಕಂಡಿಲ್ಲ, ಈಗಲೂ ಕಾಣುವುದಿಲ್ಲ’.

ಹಾನ್ಸ್‌ ಕೊಹ್ನ್‌ ಸ್ವತಃ ಯೆಹೂದಿ ಆಗಿದ್ದರೂ ಎಂದೂ ಇಸ್ರೇಲ್‌ನಲ್ಲಿ ನೆಲೆಸಿರಲಿಲ್ಲ. ಪ್ರಭಾವಿ ಇತಿಹಾಸಕಾರ ಜಾಕೋಬ್‌ ಟಾಲ್ಮನ್‌ ಇಸ್ರೇಲ್‌ನಲ್ಲಿ ನೆಲೆಸಿದ್ದರು. 1967ರ ಯುದ್ಧದ ಬಳಿಕ ಟಾಲ್ಮನ್‌ ಅವರು ‘ಎನ್‌ಕೌಂಟರ್‌’ ನಿಯತಕಾಲಿಕದಲ್ಲಿ ‘ಯೆಹೂದಿಗಳು ಮತ್ತು ಅರಬರ ನಡುವಣ ವಾಗ್ವಾದ’ ಎಂಬ ಶೀರ್ಷಿಕೆಯಲ್ಲಿ ಲೇಖನವೊಂದನ್ನು ಬರೆದಿದ್ದರು. ‘ಯೆಹೂದಿಗಳ ತಪ್ಪುಗಳು ಅಥವಾ ಒಪ್ಪುಗಳು ಏನೇ ಇದ್ದರೂ ಅರಬರ ಜತೆಗೆ ರಾಜಿಗೆ ಅವರು ನಡೆಸಿದ ಯಾವುದೇ ಪ್ರಯತ್ನ ಫಲಕಾರಿಯಾಗಲಿಲ್ಲ. ಯೆಹೂದಿಗಳ  ಹಕ್ಕು ಮಂಡನೆಗಳೆಲ್ಲವನ್ನೂ ಅವರು ಸಂಪೂರ್ಣವಾಗಿ ಮತ್ತು ನಿಷ್ಕರುಣವಾಗಿ ತಿರಸ್ಕರಿಸಿದರು’. ನೆಲದ ಮೇಲಿನ ಯೆಹೂದಿಗಳ ಹಕ್ಕನ್ನು ಅರಬರು ತಿರಸ್ಕರಿಸಿದ ರೀತಿಯಲ್ಲಿಯೇ ಪವಿತ್ರ ಮತ್ತು ವಿವಾದಾತ್ಮಕ ನಗರ ಜೆರುಸಲೇಂನ ವಿಚಾರದಲ್ಲಿ ಅರಬರ ಹಕ್ಕು ಮಂಡನೆಗಳನ್ನು ಯೆಹೂದಿಗಳು ತಿರಸ್ಕರಿಸಿದರು. ಹಾಗಾಗಿಯೇ ಈ ಬಗ್ಗೆ ಟಾಲ್ಮನ್‌ ಅವರು ಹೀಗೆ ಹೇಳಿದ್ದರು: ‘ಜೆರುಸಲೇಂ ನಗರವನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಇಸ್ರೇಲ್‌ನ ಸಾರ್ವಜನಿಕ ಅಭಿಪ್ರಾಯ ಎಷ್ಟು ಸರ್ವಾನುಮತ ಮತ್ತು ದೃಢವಾದುದೆಂದರೆ, ಅದನ್ನು ಕೊಟ್ಟು ಬಿಡುವ ಯಾವುದೇ ಸುಳಿವು ತೋರಿದರೂ ಆ ಸರ್ಕಾರ ಒಂದು ವಾರಕ್ಕಿಂತ ಹೆಚ್ಚು ಉಳಿಯುವುದು ಸಾಧ್ಯವಿಲ್ಲ.’

1967ರ ಯುದ್ಧದಲ್ಲಿ ಗೆದ್ದ ಇಸ್ರೇಲ್‌, ವೆಸ್ಟ್‌ ಬ್ಯಾಂಕ್‌, ಗಾಜಾ ಮತ್ತು ಸಂಪೂರ್ಣ ಜೆರುಸಲೇಂ ಮೇಲೆ ನಿಯಂತ್ರಣ ಸಾಧಿಸಿತು. ಈ ಅವಮಾನ ಅರಬರಲ್ಲಿ ತಡವಾಗಿಯಾದರೂ ವಾಸ್ತವದ ಅರಿವು ಮೂಡಿಸಿತು. ಯೆಹೂದಿಗಳ ಯಾವುದೇ ಹಕ್ಕು ಮಂಡನೆಯನ್ನು ಸಂಪೂರ್ಣವಾಗಿ ಮತ್ತು ನಿಷ್ಕರುಣವಾಗಿ ತಿರಸ್ಕರಿಸುತ್ತಿದ್ದ ಅರಬರು ತಮ್ಮ ಈ ನಿಲುವನ್ನು ಬದಲಾಯಿಸಿಕೊಂಡರು. ಪರಿಣಾಮವಾಗಿ ಪ್ಯಾಲೆಸ್ಟೀನ್‌ ಲಿಬರೇಷನ್‌ ಆರ್ಗನೈಸೇಷನ್‌ ಮತ್ತು ಇಸ್ರೇಲ್‌ ಸರ್ಕಾರದ ನಡುವೆ ಶಾಂತಿ ಮಾತುಕತೆ ಆರಂಭವಾಯಿತು. 1993ರಲ್ಲಿ ಓಸ್ಲೊದಲ್ಲಿ ನಡೆದ ಒಪ್ಪಂದ ‘ಎರಡು ದೇಶ ಸೃಷ್ಟಿ’ ವಾದವನ್ನು ಅಧಿಕೃತವಾಗಿ ಒಪ್ಪಿಕೊಂಡಿತು. ಸ್ವತಂತ್ರ ದೇಶವಾಗಿ ಇಸ್ರೇಲ್‌ನ ಅಸ್ತಿತ್ವವನ್ನು ಪ್ಯಾಲೆಸ್ಟೀನ್‌ ಒಪ್ಪಿಕೊಂಡಿತು. ವೆಸ್ಟ್‌ಬ್ಯಾಂಕ್‌ ಮತ್ತು ಗಾಜಾದಲ್ಲಿ ತಮ್ಮದೇ ದೇಶ ದೊರೆಯಬಹುದು ಎಂಬ ಭರವಸೆ ಪ್ಯಾಲೆಸ್ಟೀನ್‌ನ ಈ ನಿಲುವಿಗೆ ಕಾರಣ.

ಯೆಹೂದಿ ದೇಶ ರಚನೆಯಾಗಬೇಕು ಎಂದು ನೂರು ವರ್ಷಗಳ ಹಿಂದೆ ಬಾಲ್‌ಫೋರ್‌ ಘೋಷಣೆ ಹೇಳಿತ್ತು. ಐವತ್ತು ವರ್ಷಗಳ ಹಿಂದೆ, 1967ರ ಯುದ್ಧದ ಬಳಿಕ ಇಸ್ರೇಲ್‌ ಒಂದು ಆಕ್ರಮಣಕಾರಿ ಶಕ್ರಿಯಾಗಿ ರೂಪುಗೊಂಡಿತು. ಈ ವರ್ಷದಲ್ಲಿ ಒಂದು ಘಟನೆಗೆ ಶತಮಾನ ತುಂಬಿದರೆ ಮತ್ತೊಂದಕ್ಕೆ ಅರ್ಧ ಶತಮಾನ ತುಂಬಲಿದೆ. 2018ರಲ್ಲಿ ಇನ್ನೊಂದು ಘಟನೆಯ ಬೆಳ್ಳಿಹಬ್ಬ ನಡೆಯಲಿದೆ. ಪ್ಯಾಲೆಸ್ಟೀನ್‌ ದೇಶ ರಚನೆಯ ಓಸ್ಲೊ ಒಪ್ಪಂದವಾಗಿ ಮುಂದಿನ ವರ್ಷಕ್ಕೆ 25 ವರ್ಷಗಳಾಗಲಿವೆ. ಹಾಗಿದ್ದರೂ ಪ್ಯಾಲೆಸ್ಟೀನ್‌ನಲ್ಲಿ ಅರಬರು ಮತ್ತು ಯೆಹೂದಿಗಳ ನಡುವಣ ಜಗಳ ನಿಂತಿಲ್ಲ. ಕಳೆದ ಶತಮಾನಕ್ಕೆ ಹೋಲಿಸಿದರೆ ಈಗ ಈ ಹೋರಾಟ ಅತ್ಯಂತ ಬಿರುಸಾಗಿದೆ.

ಎರಡೂ ಕಡೆಗಳ ನಿಲುವು ಈಗ ಇನ್ನಷ್ಟು ಕಠಿಣವಾಗಿದೆ. ‘ಆತ್ಮಾಭಿಮಾನಕ್ಕೆ ಏಟಾದ ಭವ್ಯ ಪರಂಪರೆಯನ್ನು ಹೊಂದಿರುವ ಜನಾಂಗವೊಂದರ ನೆನಪುಗಳು ಹೀನವೇನಲ್ಲ. ಆದರೆ, ಗಾಯದ ಬಗ್ಗೆ ಗೀಳು ಮತ್ತು ಸ್ವಮರುಕವು ಸ್ವಾರ್ಥ ಹಾಗೂ ಮಾನವದ್ವೇಷಕ್ಕೆ ಕಾರಣವಾಗುತ್ತದೆ’ ಎಂದು 1967ರಲ್ಲಿ ಜಾಕೋಬ್‌ ಟಾಲ್ಮನ್‌ ಬರೆದಿದ್ದಾರೆ. ದುರಂತವೆಂದರೆ, ಟಾಲ್ಮನ್‌ ಗುರುತಿಸಿರುವ ಸಂತ್ರಸ್ತಭಾವ ಈಗ ಪ್ಯಾಲೆಸ್ಟೀನಿಯರು ಮತ್ತು ಯೆಹೂದಿಯರಿಬ್ಬರಿಗೂ ಅನ್ವಯ ಆಗುತ್ತದೆ. ಭೂತ ಕಾಲದಲ್ಲಿ ತಮಗೆ ಅನ್ಯಾಯವಾಗಿದೆ, ಇತ್ತೀಚಿನ ಇತಿಹಾಸದಲ್ಲಿ ಮಾತ್ರವಲ್ಲ ವರ್ತಮಾನದಲ್ಲಿ ಕೂಡ ತಮಗೆ ಅನ್ಯಾಯವಾಗಿದೆ ಎಂದು ಎರಡೂ ವರ್ಗಗಳು ಹೇಳಿಕೊಳ್ಳುತ್ತಿವೆ. ತಮ್ಮನ್ನು ಗಾಸಿಗೊಳಿಸಿರುವ ನಿಜವಾದ ಅಥವಾ ಕಾಲ್ಪನಿಕವಾದ ಗಾಯಗಳು ಪ್ಯಾಲೆಸ್ಟೀನಿಯರ ಇದೇ ರೀತಿಯ ಗಾಯಗಳ ಬಗ್ಗೆ ಯೆಹೂದಿಗಳಲ್ಲಿ ಅಸಡ್ಡೆ ಬೆಳೆಯಲು ಕಾರಣವಾಗಿದೆ. ಇದೇ ಮಾತು ಪ್ಯಾಲೆಸ್ಟೀನಿಯರಿಗೂ ಅನ್ವಯವಾಗುತ್ತದೆ. ಎರಡೂ ಕಡೆಗಳಲ್ಲಿ ಧಾರ್ಮಿಕ ಮೂಲಭೂತವಾದದ ಮರುಹುಟ್ಟು ಸಂಧಾನವನ್ನೇ ಅಸಾಧ್ಯವಾಗಿಸಿದೆ.

ಇಸ್ರೇಲ್‌ ಮತ್ತು ಪ್ಯಾಲಿಸ್ಟೀನ್‌ ನಡುವಣ ಯುದ್ಧವನ್ನು ಒಂದು ಕಾಲದಲ್ಲಿ ಸರಿ ಮತ್ತು ಸರಿಗಳ ನಡುವಣ ಯುದ್ಧ ಎಂದು ಬಣ್ಣಿಸಲಾಗುತ್ತಿತ್ತು. ಆದರೆ ಈಗ ಈ ಸಂಘರ್ಷವನ್ನು ತಪ್ಪು ಮತ್ತು ತಪ್ಪಿನ ನಡುವಣ ಹೋರಾಟ ಎಂದು ಪರಿಗಣಿಸಲಾಗುತ್ತಿದೆ. ತಮ್ಮ ರಾಷ್ಟ್ರೀಯ ಮತ್ತು ಧಾರ್ಮಿಕ ಗುರಿಗಳನ್ನು ಸಾಧಿಸುವುದಕ್ಕಾಗಿ ಎರಡೂ ಸಮುದಾಯಗಳು ಬಾಂಬ್‌ ಮತ್ತು ಬಂದೂಕಿನ ಮೂಲಕ ಅನಾಗರಿಕ ಹಿಂಸಾಚಾರದಲ್ಲಿ ತೊಡಗಿವೆ. ಜಮ್‌ಶೆಟ್‌ಜಿ ಟಾಟಾ ಅವರು 1873ರಲ್ಲಿ ಗುರುತಿಸಿದ ಮೂರ್ಖತನದಿಂದ ಕೂಡಿದ ವಿಭಜನೆಯ ತುಡಿತ ಈಗ ಇನ್ನೂ ಹೆಚ್ಚು ಢಾಳಾಗಿ (ಮತ್ತು ಇನ್ನೂ ಅಪಾಯಕಾರಿಯಾಗಿ) ಪ್ರದರ್ಶನಗೊಳ್ಳುತ್ತಿದೆ. ಸ್ಪರ್ಧೆಯಲ್ಲಿರುವ ಹೆಚ್ಚು ಪ್ರಬಲ ಹಾಗೂ ಅತಿಕ್ರಮಣಕಾರಿ ಶಕ್ತಿ ಎಂಬ ಕಾರಣಕ್ಕೆ ಇದರಲ್ಲಿ ಇಸ್ರೇಲ್‌ನ ಹೊಣೆಯೇ ಹೆಚ್ಚು. ಪ್ರಧಾನಿ ಬೆಂಜಾಮಿನ್‌ ನೇತನ್ಯಾಹು ಅವರ ನಾಯಕತ್ವದಲ್ಲಿ ಹಿಂದೆ ಮತ್ತು ಈಗ ಇಸ್ರೇಲ್‌ನ ಹೆಚ್ಚು ಹೆಚ್ಚು ಜನರು ಅರಬರನ್ನು ಶತ್ರುಗಳು ಎಂದು ನೋಡುತ್ತಿದ್ದಾರೆ. ಇದು ಬದಲಾಗುವ ತನಕ ‘ಪವಿತ್ರ ಭೂಮಿ’ಯಲ್ಲಿ ಶಾಂತಿ ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT