ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೂರ್ಣಾಹುತಿ’ ಮಾದರಿಯ ಕಾತ್ಯಾಯಿನಿ

Last Updated 24 ಮೇ 2014, 19:30 IST
ಅಕ್ಷರ ಗಾತ್ರ

ಟಿಪ್ಪು ಸುಲ್ತಾನನ ಮಂತ್ರಿಯೊಬ್ಬ ಬ್ರಿಟಿಷ್ ವಸಾಹತುಶಾಹಿಯನ್ನು ಕುರಿತಂತೆ ‘We are not afraid of what we can see, but we afraid of what we can’t see’ ಎಂದು ಹೇಳುವ ಮಾತುಗಳು ವಸಾಹತುಶಾಹಿಯನ್ನು ಮಾತ್ರ ಕುರಿತಂತೆಯಲ್ಲ, ಒಟ್ಟೂ ಶೋಷಣೆ ಮತ್ತು ಶ್ರೇಣೀಕರಣವನ್ನು ಕುರಿತಂತೆ, ಅದರ ಮೂರ್ತ ಅಮೂರ್ತ ಕಾರ್ಯ ಮಾದರಿಗಳನ್ನು ಕುರಿತಂತೆ ಯಾವ ಕಾಲಕ್ಕೂ ಯಾವ ಶೋಷಿತ ವರ್ಗದವರೂ ಹೇಳಬಹುದಾದ ಮಾತುಗಳು.

ಸಮಾಜ ವಿಜ್ಞಾನಿಯ ಅಧ್ಯಯನದ ಫಲಶ್ರುತಿಯಂತೆ ಭಾಸವಾಗುವ ಈ ಹೇಳಿಕೆಯು ದಮನಿತ ವರ್ಗದ ಹೋರಾಟದ ಎದುರಿಗಿರುವ ಸವಾಲುಗಳನ್ನು ಕುರಿತಂತೆ ಅತ್ಯಂತ ಮಹತ್ವದ ಮತ್ತು ಸೂಕ್ಷ್ಮವಾದ ಸತ್ಯವೊಂದರ ವ್ಯಾಖ್ಯಾನವೂ ಹೌದು. ಸಾಂಸ್ಕೃತಿಕ ರಾಜಕಾರಣವನ್ನು ಕುರಿತಂತೆ ಮಾತ್ರವಲ್ಲ, ಎಲ್ಲ ಬಗೆಯ ಪಟ್ಟಭದ್ರ ಸಂಸ್ಥೆಗಳ ಶಕ್ತಿ ಮತ್ತು ವ್ಯಾಪ್ತಿಯನ್ನು ಕುರಿತಂತೆಯೂ ಇದೊಂದು ದಿಕ್ಸೂಚಿ ಹೇಳಿಕೆ.

ಇಲ್ಲಿ ‘ಕಾಣದ’ ಎನ್ನುವುದು ಅದರೆಲ್ಲ ಅರ್ಥ ಸಾಧ್ಯತೆಗಳಲ್ಲಿ ಮತ್ತು ಗುಣ ಸ್ವಭಾವಗಳಲ್ಲಿ ಮಾತ್ರವಲ್ಲ, ಅದರ ಅತ್ಯಂತ ಅಸಂಗತ ಎನಿಸುವ ಸಾಧ್ಯತೆಯಲ್ಲಿಯೂ ನಿರಂತರವಾಗಿ ಕಾರ್ಯಪ್ರವೃತ್ತವಾಗುವುದು ಲಿಂಗ ರಾಜಕಾರಣದಲ್ಲಿ. ಅದೆಂಥ ಅದಮ್ಯವಾದ, ಆಕರ್ಷಕವಾದ, ಮೀರಲು ದಾರಿಗಳೇ ಇಲ್ಲವೇನೋ ಎನಿಸುವ, ಭಯಾನಕವಾದ ವೇಷಗಳಲ್ಲಿ ಹೆಣ್ಣನ್ನು ಆಳುವ, ಅವರ ಮನೆಯ ಒಲೆಯ ಕಟ್ಟಿಗೆಯೇನೋ ಎನ್ನುವಂತೆ ಸುಟ್ಟು ಬಿಡುವ ಮಾದರಿಗಳು ನಮ್ಮಲ್ಲಿ ಇವೆ ಎಂದರೆ, ಅದು ಅವರು ನಮ್ಮನ್ನು ಸುಡುತ್ತಿರುವುದೋ, ನಾವೇ ಸುಟ್ಟುಕೊಳ್ಳುತ್ತಿರುವುದೋ ಎನ್ನುವುದೇ ಅನೇಕ ಬಾರಿ ಅಸ್ಪಷ್ಟವಾಗುವಷ್ಟು! ಇದನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಅನೇಕ ಬಾರಿ ಬದುಕು ನಮ್ಮ ಕೈಜಾರಿ ಹೋಗಿಬಿಟ್ಟಿರುತ್ತದೆ.

ಹಿಂದೊಮ್ಮೆ ಪ್ರಸ್ತಾಪಿಸಿದ್ದ ಕಾತ್ಯಾಯಿನಿ ನಮ್ಮೆದುರಿಗೆ ಪ್ರತ್ಯಕ್ಷಳಾಗುವುದು ಈ ಎಲ್ಲ ಕಾರಣಗಳಿಗಾಗಿ. ಈ ಅಂಕಣದಲ್ಲಿ ಈ ತನಕ ನೋಡಿದ ಪಾತ್ರಗಳಿಗೆ ವಿರುದ್ಧವಾದ ನೆಲೆಯಲ್ಲಿ ನಿಂತಿರುವ ಈ ಪಾತ್ರವನ್ನು ಗಮನಿಸುವುದು ಅನೇಕ ಕಾರಣಗಳಿಗಾಗಿ ಮುಖ್ಯ. ಸೋದ್ದಿಶ್ಯವಾದ ಬರವಣಿಗೆಯ ಒಂದು ಆಯಾಮವನ್ನು ಕಳೆದ ಬಾರಿ ಕಾರಂತರ ಮಂಜುಳೆಯಲ್ಲಿ ಕಂಡಂತೆ ಈ ಬಾರಿ ಅದರ ಇನ್ನೊಂದು ಆಯಾಮವನ್ನು ಭೈರಪ್ಪನವರ ಕಾತ್ಯಾಯಿನಿಯ ಮೂಲಕ ನೋಡಬಹುದು.

ಲೈಂಗಿಕತೆಯು ಗಂಡಿನಷ್ಟೇ ಹೆಣ್ಣಿಗೂ ಮೂಲಭೂತವಾದ ಸಂಗತಿ ಎನ್ನುವುದನ್ನು, ಅದರೊಂದಿಗಿನ ಮನೋದೈಹಿಕ ಸಂಗತಿಗಳು, ಬುದ್ಧಿ-ಭಾವಗಳ ನೈತಿಕ ಪ್ರಶ್ನೆಗಳು ಮನುಷ್ಯರ ಬದುಕನ್ನು ಸಂಕೀರ್ಣಗೊಳಿಸುವ, ಅದರ ಸಾರ್ಥಕತೆ ಮತ್ತು ನಿರರ್ಥಕತೆಗಳನ್ನು ರೂಪಿಸುವ ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನು ಕಾರಂತರು ನಿಭಾಯಿಸುವ ಪರಿಯನ್ನು ಚರ್ಚಿಸಿದ್ದಾದ ಮೇಲೆ ಇನ್ನೊಂದು ಸೋದ್ದಿಶ್ಯ ಬರವಣಿಗೆಯ ಮಾದರಿಯನ್ನು ಭೈರಪ್ಪನವರ ಕಾತ್ಯಾಯಿನಿಯ ಮೂಲಕ ನೋಡಬಹುದು.

ಹಾಗೆ ನೋಡಿದರೆ ಈ ತನಕ ನಾವು ಗಮನಿಸುತ್ತ ಬಂದಿರುವ ಪಾತ್ರಗಳಿಗೆ ವಿರುದ್ಧವಾಗಿ ಕಾತ್ಯಾಯಿನಿಯ ಪಾತ್ರವಿದೆ. ಇತರ ಪಾತ್ರಗಳು   ತಮ್ಮ ಅಂತಃಶಕ್ತಿಯಿಂದಲೇ, ಅದಮ್ಯ ಜೀವನಪ್ರೀತಿ ಮತ್ತು ಸೋಲರಿಯದ ಹೋರಾಟಗುಣವನ್ನೇ ಬದುಕಿನ ದಾರಿಯಾಗಿಸಿಕೊಂಡು ಗೊತ್ತಿದ್ದು, ಗೊತ್ತಿಲ್ಲದೆ ತಮ್ಮನ್ನು ಹಣಿಯಲು ಪ್ರಯತ್ನಿಸುವ ವ್ಯವಸ್ಥೆಗೆ ಸವಾಲೊಡ್ಡುತ್ತವೆಯಾದರೆ ಕಾತ್ಯಾಯಿನಿ ಖಂಡವಿದೆಕೊ ಮಾಂಸವಿದೆಕೊ ಎನ್ನುವ ‘ಪೂರ್ಣಾಹುತಿ’ಯಂತೆ ಭಾಸವಾಗುತ್ತಾಳೆ.

ವ್ಯವಸ್ಥೆಯ ‘ಅಪೇಕ್ಷಿತ ಹೆಣ್ಣಿ’ನ ಮಾದರಿಯನ್ನು ಮುರಿಯಲು ಯತ್ನಿಸುವ ಹೆಣ್ಣನ್ನು ವ್ಯವಸ್ಥೆ ಅದೆಷ್ಟು ಶಕ್ತವಾಗಿ ಮುರಿಯುತ್ತದೆ ಎನ್ನುವುದಕ್ಕೆ ಮಾತ್ರವಲ್ಲ, ಅದೆಷ್ಟು ಅಧಿಕೃತವಾಗಿ, ‘ಮೌಲ್ಯಯುತವಾಗಿ’ಯೇ ಮುರಿಯುತ್ತದೆ ಎನ್ನುವುದಕ್ಕೂ ಇದೊಂದು ಮಾದರಿ ಎನ್ನುವ ಕಾರಣಕ್ಕಾಗಿಯೂ ಈ ಬಗೆಯ ಪಾತ್ರ ಮಾದರಿಯೊಂದನ್ನು ನಾವು ಗಮನಿಸುವುದು ಅನಿವಾರ್ಯ.

ಎಸ್.ಎಲ್. ಭೈರಪ್ಪನವರ ‘ವಂಶವೃಕ್ಷ’ ಕಾದಂಬರಿ ಕಾದಂಬರಿಯಾಗಿಯೂ ಚಲನಚಿತ್ರವಾಗಿಯೂ ಬಹು ಜನಪ್ರಿಯತೆಯನ್ನು ಪಡೆದಿದೆ. ಭಾರತೀಯ ಸಮಾಜ ವ್ಯವಸ್ಥೆಯ ಮುಖ್ಯ ರಚನೆಗಳಲ್ಲೊಂದಾದ ‘ವಂಶ’ದ ಪ್ರಶ್ನೆಯನ್ನು, ಆ ಮೂಲಕ ಒಟ್ಟೂ ಆ ರಚನೆಯ ತಳಹದಿಯನ್ನೇ  ತೀವ್ರವಾದ ಮರುಶೋಧಕ್ಕೆ ಒಡ್ಡುವ ಕೃತಿಯಾಗಿಯೇ ಇದು ಕಾಣುತ್ತದೆ. ಎಂದರೆ ಎಲ್ಲ ಕಲಾಪಠ್ಯಗಳೂ ಅಂತಿಮವಾಗಿ ಎದುರಾಗುವ ಮಾನವೀಯ ಪ್ರಶ್ನೆಗಳನ್ನೇ ಈ ಕೃತಿಯೂ ತನ್ನ ಮೂಲ ಆಶಯವಾಗಿ ಹೊಂದಿದೆ. ಅಂದಹಾಗೆ, ಈ ಮಾನವೀಯ ಪ್ರಶ್ನೆಗಳ ಮುಖಾಮುಖಿಯ ಫಲಿತಗಳೇನು?

ನಂಜನಗೂಡಿನ ಪ್ರಸಿದ್ಧ ‘ಶ್ರೋತ್ರಿ’ಯರ ಕುಟುಂಬದ ಸೊಸೆ ಕಾತ್ಯಾಯಿನಿ. ಅವಳ ಗಂಡ ನಂಜುಂಡ ಅಕಾಲಿಕವಾಗಿ ತೀರಿಕೊಂಡ ಮೇಲೆ ಅವಳು ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸುವ ಘಟ್ಟದಲ್ಲಿ, ದುರ್ದಮ್ಯವಾದ ಯೌವನದ ಒತ್ತಡಗಳಿಗೆ ಮತ್ತು ಅನಿವಾರ್ಯತೆಗಳಿಗೆ ಒಳಗಾಗುತ್ತಾಳೆ. ತನ್ನೆಲ್ಲ ನಿಯಂತ್ರಣಗಳ ಪ್ರಯತ್ನಗಳ ಆಚೆಗೂ ಅವಳಿಗೆ ಸಂಗಾತಿಯೊಬ್ಬನ ಅವಶ್ಯಕತೆ ಮನದಟ್ಟಾಗುತ್ತದೆ.

ತಾನು ಪಡೆದ ವಿದ್ಯಾಭ್ಯಾಸದ ಫಲವಾಗಿ ಪಡೆದ ಮನೋಧೈರ್ಯ ಮತ್ತು ಅರಿವಿನ ಹಿನ್ನೆಲೆಯಲ್ಲಿ ತಾನು ಮಾಡುತ್ತಿರುವುದು ‘ಪಾಪ’ವಲ್ಲ ಎನ್ನುವ ತಿಳಿವಳಿಕೆಯಲ್ಲಿ ರಾಜಾರಾಯನನ್ನು ಮರು ಮದುವೆಯಾಗುತ್ತಾಳೆ. ಕಾದಂಬರಿಯಲ್ಲಿ ಇವಳ ನಿರ್ಧಾರವನ್ನು ಪ್ರಚೋದಿಸಿದ, ಗಟ್ಟಿ ಮಾಡಿದ ಸಂದರ್ಭವೊಂದಿದೆ. ಕಾತ್ಯಾಯಿನಿ ರಾಜಾರಾಯನ ನಿರ್ದೇಶನದ ನಾಟಕವೊಂದರಲ್ಲಿ ‘ಪ್ರಕೃತಿ’ಯ ಪಾತ್ರವನ್ನು ಅಭಿನಯಿಸುತ್ತಾಳೆ. ಪ್ರಕೃತಿಯನ್ನು ಯಾರೂ ಕೃತಕವಾಗಿ ನಿರ್ಬಂಧಿಸಬಾರದು, ನಿರ್ಬಂಧಿಸಲಾಗದು.

‘ಪ್ರಕೃತಿ’ ಮತ್ತು ‘ಪುರುಷ’ ಪರಸ್ಪರ ಪೂರಕ. ಕಾತ್ಯಾಯಿನಿಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಇದ್ದ ಗೊಂದಲ ಇದರಿಂದ ಪರಿಹಾರವಾಗಿ ಅವಳು ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದ ಆಶಯಗಳಿಗೆ ವಿರುದ್ಧವಾಗಿ ಮದುವೆಯಾಗುತ್ತಾಳೆ. ತನ್ನ ಎಳೆಯ ಮಗುವನ್ನು ತನ್ನೊಂದಿಗೆ ಕರೆದೊಯ್ಯಲು ಕಾತ್ಯಾಯಿನಿ ಸಹಜವಾಗಿ ಹಂಬಲಿಸುತ್ತಾಳೆ. ಆದರೆ ಮಾವ ಶ್ರೀನಿವಾಸ ಶ್ರೋತ್ರಿಗಳು, ‘ಸರಕಾರದ ಕಾನೂನಿನ ಪ್ರಕಾರ ಮಗೂನ ನೀನೆ ಕರಕೊಂಡು ಹೋಗಬಹುದು.

ಆದರೆ ಕಾನೂನಿನಲ್ಲಿ ಧರ್ಮ ಸಿಕ್ಕುಲ್ಲ’ ಎನ್ನುವ ಸಂದಿಗ್ಧಕ್ಕೆ ಅವಳನ್ನು ಸಿಕ್ಕಿಸುತ್ತಾರೆ. ಮಗುವು ತಂದೆ ತಾಯಿಯರಿಗೆ ಮಗುವಾಗಿರುವಂತೆಯೇ ಅಜ್ಜ ಅಜ್ಜಿಯರಿಗೆ ಮೊಮ್ಮಗುವೂ ಆಗಿರುತ್ತದೆ, ಆ ಮೂಲಕ ಅವರಿಗೂ ಹಕ್ಕಿದೆ ಎನ್ನುವುದನ್ನು ಹೇಳುತ್ತಲೇ, ತಮ್ಮ ಔದಾರ್ಯ ಮತ್ತು ನಿಸ್ವಾರ್ಥತೆಯ ನಿಲುವೋ ಎಂಬಂತೆ ‘ಮಗೂನ ಬಿಟ್ಟು ಹೋಗು ಅಂತ ನಾನು ನನಗಾಗಿಯಾಗಲಿ, ಒಳಗೆ ಅಳುತ್ತಾ ಕೂತಿರುವ ಮುದುಕಿಯ ಪರವಾಗಿಯಾಗಲಿ ಭಿಕ್ಷೆ ಬೇಡೋದಿಲ್ಲ. ಮುಪ್ಪಿನ ವಯಸ್ಸಿನಲ್ಲಿ ಅದು ನಮ್ಮನ್ನ ಒಪ್ಪವಾಗಿಡಲಿ ಎನ್ನುವ ಪ್ರಲೋಭ ನನಗೆ ಎಳ್ಳಷ್ಟೂ ಇಲ್ಲ... ಮಗೂನ ಕರಕೊಂಡೇ ಹೋಗಬೇಕು ಅಂತ ನಿನ್ನ ಆತ್ಮ ಹೇಳಿದರೆ ಎತ್ತಿಕೊಂಡು ಹೊರಟು ಹೋಗು’. ಇಲ್ಲಿ ತೀರ್ಮಾನವನ್ನು ಶ್ರೋತ್ರಿಗಳು ಈಗಾಗಲೇ ಮಾಡಿಯಾಗಿದೆ.

ಅದನ್ನು ಕಾತ್ಯಾಯಿನಿಯದೇ ಎಂಬಂತೆ, ಅವಳೇ ಸ್ವಇಚ್ಛೆಯಿಂದ ತೆಗೆದುಕೊಂಡಂತೆ ಮಾಡುವ ಅಧಿಕಾರ ಕೇಂದ್ರದ ಕಾರ್ಯಮಾದರಿ ಇದು. ಕಾನೂನಿನ ಪ್ರಶ್ನೆ ಬಿಡಿ, ಯಾವ ತಾಯಿಯ ಆತ್ಮ ತನ್ನ ಮಗು ತನ್ನ ಜೊತೆಗಿರುವುದು ಬೇಡ ಎಂದೀತು? ಸಾಂಪ್ರದಾಯಿಕ ಕೌಟುಂಬಿಕ ವಾತಾವರಣದಿಂದ ಬಂದ ಕಾತ್ಯಾಯಿನಿಗೆ ತನ್ನ ಮರು ಮದುವೆಯೇ ಧರ್ಮ ವಿರೋಧಿಯೋ ಎನ್ನುವ ಪ್ರಶ್ನೆ ಒಳಗೇ ಕೊರೆಯುತ್ತಿರುವಾಗ ಶ್ರೋತ್ರಿಗಳು ಮತ್ತೆ ಧರ್ಮದ ಪ್ರಶ್ನೆಯನ್ನೆತ್ತಿದ್ದಾಗ, ಕೊನೆಗಾಲದಲ್ಲಿ ಅತ್ತೆ ಮಾವನಿಗೆ ಈ ಮಗುವಿನ ಆಸರೆಯಾದರೂ ಇರಲಿ ಎಂದು ಮಗುವನ್ನು ಬಿಟ್ಟು ಹೋಗುತ್ತಾಳೆ.

ಈ ಧರ್ಮ ಸೂಕ್ಷ್ಮದ ಪ್ರಶ್ನೆಯೇ ಕಾತ್ಯಾಯಿನಿ ಎನ್ನುವ ಮರಕ್ಕೆ ಹತ್ತಿದ ಗೆದ್ದಲು ಹುಳುವಾಗಿ ಅವಳನ್ನು ಮುಗಿಸುತ್ತದೆ. ‘ಪ್ರಕೃತಿ’ಯಾಗಿ, ‘ಸೃಷ್ಟಿಶೀಲತೆ’ಯೇ ‘ಧರ್ಮ’ವಾಗಿರುವ ಹೆಣ್ಣು ಅದಕ್ಕೆ ಎರವಾಗುತ್ತಾ ತನ್ನನ್ನೇ ಬಲಿ ಕೊಡುತ್ತಾಳೆ. ಮರುಮದುವೆಯ ಮೂಲಕ ತಾನು ಅಧರ್ಮ ಮಾಡಿದೆ ಎನ್ನುವ ಪಾಪಪ್ರಜ್ಞೆ ಕಾತ್ಯಾಯಿನಿಗೆ ಪದೇ ಪದೇ ಗರ್ಭಪಾತವಾಗುವ ಹಾಗೆ ಮಾಡುತ್ತಾ ಕೊನೆಗೆ ಅವಳ ಸಾವಿನಲ್ಲಿ ಕೊನೆಯಾಗುತ್ತದೆ. ಪ್ರಕೃತಿಯನ್ನು ಮಾತ್ರವಲ್ಲ ಪುರುಷನಿಗೂ, ಎಂದರೆ ಕಾತ್ಯಾಯಿನಿಯನ್ನು ಮದುವೆಯಾದ ರಾಜಾರಾಯನಿಗೂ ಪ್ರಕೃತಿಯನ್ನು ತಾನು ಹೀಗೆ ಬಯಸಿದ್ದು ತಪ್ಪಾಯಿತು ಎನ್ನುವ ತಪ್ಪಿತಸ್ಥ ಭಾವ ಕಾಡುತ್ತದೆ.

ಇಡೀ ಕಾದಂಬರಿಯಲ್ಲಿ ಇದಕ್ಕೆ ಸಮಾನಾಂತರವಾಗಿ ಎಂಬಂತೆ ಕಾತ್ಯಾಯಿನಿಯ ಮಾವ ಶ್ರೀನಿವಾಸ ಶ್ರೋತ್ರಿಗಳು ಇಷ್ಟೇ ಮೂಲಭೂತವಾದ ನೈತಿಕತೆಯ ಪ್ರಶ್ನೆಯನ್ನು ಎರಡು ಸಂದರ್ಭದಲ್ಲಿ ಎದುರಿಸುತ್ತಾರೆ. ಮಗುವಾದ ಮೇಲೆ ಹೆಂಡತಿಯ ಆರೋಗ್ಯದ ಕಾರಣಕ್ಕಾಗಿ ಅವಳಿಂದ ಅನಿವಾರ್ಯವಾಗಿ ದೂರವಿರಬೇಕಾದವರು ಸ್ವತಃ ತನ್ನ ಹೆಂಡತಿಯೇ ಮನೆಯ ಕೆಲಸದಾಕೆ ಲಕ್ಷ್ಮಿಯ ಮೂಲಕ ಒಡ್ಡುವ ಪ್ರಲೋಭನೆಯನ್ನು ಗೆದ್ದು ಇತರರಿಗೆ ಮಾರ್ಗದರ್ಶನ ಮಾಡುವ ನೈತಿಕತೆಯನ್ನು ಪಡೆಯುವುದು ಒಂದು ಕಡೆಗೆ.

ಈ ನೈತಿಕತೆಯ ಬಲದಿಂದಲೇ ಅವರು ಕಾತ್ಯಾಯಿನಿ ಮಾಡಿದ್ದು ಸರಿಯೋ ತಪ್ಪೋ ಎನ್ನುವುದಕ್ಕಿಂತ ಹೆಚ್ಚಾಗಿ ಅವಳು ದುರ್ಬಲಳು ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಇನ್ನೊಂದು ಸಂದರ್ಭ ಇವರ ಹುಟ್ಟಿಗೆ ಸಂಬಂಧಿಸಿದ್ದು. ಶ್ರೋತ್ರಿಯರ ಕುಟುಂಬದ ಗೌರವ ಕೋರ್ಟಿನ ಮೆಟ್ಟಿಲು ಹತ್ತಲು ಬಿಡುವುದಿಲ್ಲ ಎಂದವರಿಗೆ ತನ್ನ ಹುಟ್ಟಿನ ರಹಸ್ಯ ಬಯಲಾಗಿ, ತನ್ನ ತಂದೆ ಆಸ್ತಿಯ ಸಲುವಾಗಿ ತನ್ನ ತಾಯಿ, ಗಂಡನ ಒತ್ತಡಕ್ಕೆ ಮಣಿದು, ಇನ್ನೊಬ್ಬರೊಂದಿಗಿನ ಸಂಬಂಧದಲ್ಲಿ ತನ್ನನ್ನು ಪಡೆದದ್ದು ಎನ್ನುವ ಸತ್ಯದ ಅರಿವಾಗುತ್ತದೆ. ಈ ಹಿನ್ನೆಲೆಯ ಆಸ್ತಿಯ ಮೇಲೆ ತನಗೆ ಯಾವ ಹಕ್ಕೂ ಇಲ್ಲವೆನ್ನುವ ನೈತಿಕ ನಿಲುವಿನಲ್ಲಿ ಶ್ರೋತ್ರಿಯರು ಆಸ್ತಿಯನ್ನು ತ್ಯಜಿಸಿ ಸನ್ಯಾಸಿಯಾಗುವ ತೀರ್ಮಾನ ತೆಗೆದುಕೊಳ್ಳುತ್ತಾರೆ. ಕಾತ್ಯಾಯಿನಿಯ ಬಗ್ಗೆ ಅವರಿಗೆ ಅನುಕಂಪ ಹುಟ್ಟುತ್ತದೆ ಮತ್ತು ಅವರು ಅವಳನ್ನು ಕ್ಷಮಿಸುತ್ತಾರೆ.


ಇಲ್ಲಿ ನಮಗೆ ಎದುರಾಗುವ ಹಲವು ಪ್ರಶ್ನೆಗಳಿವೆ. ಶ್ರೋತ್ರಿಯರು, ತಮಗೆ ಎದುರಾಗುವ ಆಮಿಷವನ್ನು ಗೆದ್ದು ಜಿತೇಂದ್ರಿಯರಾಗುತ್ತಾರೆ, ಆಸ್ತಿಯ ಆಮಿಷವನ್ನೂ ಗೆದ್ದು ಸನ್ಯಾಸಿಯಾಗುತ್ತಾರೆ, ತಮ್ಮ ಪಾಂಡಿತ್ಯದಿಂದಾಗಿ ಎಲ್ಲರ ಗೌರವಕ್ಕೂ ಭಾಜನರಾಗುತ್ತಾರೆ. ಕೊನೆಗೆ ಕಾತ್ಯಾಯಿನಿಯನ್ನೂ ಕ್ಷಮಿಸುವ ಔದಾರ್ಯವನ್ನು ತೋರಿಸುವ ಮೂಲಕ ಮಹಾನುಭಾವರೂ ಆಗುತ್ತಾರೆ. ಆದರೆ ಕಾತ್ಯಾಯಿನಿ ‘ಹುಲು ಬಯಕೆ ಬಾ ಎನಲು’ ಅದಕ್ಕೆ ಓಗೊಟ್ಟು, ಅದು ‘ಪ್ರಕೃತಿ’ಯ ಮೂಲಗುಣವೇ ಆಗಿದ್ದಾಗಲೂ, ತನ್ನೊಳಗೆ ತಾನೇ ಸೃಷ್ಟಿಸಿಕೊಂಡ ನರಕದಲ್ಲಿ ನರಳುತ್ತಾ ಸಾಯುತ್ತಾಳೆ.

ಕಾತ್ಯಾಯಿನಿಯ ಪಾಪಪ್ರಜ್ಞೆಯ ಮೂಲ ಯಾವುದು? ಅದು ಅವಳಲ್ಲಿ ಸಹಜವಾಗಿ ಹುಟ್ಟಿದ್ದೋ? ಅವಳ ಮೇಲೆ ಹೇರಲ್ಪಟ್ಟಿದ್ದೋ? ಕೊನೆಯಲ್ಲಿ ಶ್ರೋತ್ರಿಯರು ಅವಳನ್ನು ಕ್ಷಮಿಸುವುದೇ ಅಹಂಕಾರವಲ್ಲವೆ? ತನ್ನ ಹುಟ್ಟೂ ಸೇರಿದಂತೆ, ವಂಶದ ಘನತೆ, ಶುದ್ಧತೆ ಇತ್ಯಾದಿಗಳೆಲ್ಲ ಕೊನೆಗೂ ಅಸಂಗತವೆನ್ನುವ ತಿಳಿವಳಿಕೆ ಕಾತ್ಯಾಯಿನಿಯ ಮರುಮದುವೆಯ ತೀರ್ಮಾನವನ್ನು ಇನ್ನೂ ಹೆಚ್ಚಿನ ಧರ್ಮಸೂಕ್ಷ್ಮದಲ್ಲಿ ಪರಿಶೀಲಿಸುವಂತೆ ಮಾಡಬೇಕಿತ್ತಲ್ಲವೆ?

ಇದಕ್ಕಿಂತ ಹೆಚ್ಚಾಗಿ, ಶ್ರೋತ್ರಿಯರು ತಮ್ಮ ಬದುಕಿನುದ್ದಕ್ಕೂ ಆರೋಹಣ ಪರ್ವದಲ್ಲಿರುವಂತೆ ಮತ್ತು ಕಾತ್ಯಾಯಿನಿ ಅವರೋಹಣ ಪರ್ವದಲ್ಲಿರುವಂತೆ ಚಿತ್ರಿಸಿರುವುದರಲ್ಲಿ ಲೇಖಕರ ದೃಷ್ಟಿಕೋನ ನಿರ್ಣಾಯಕ ಪಾತ್ರ ವಹಿಸಿದೆಯೆ? ಶ್ರೋತ್ರಿಯರು ‘ಆಹಾ ಪುರುಷಾಕಾರ’ದ ಪ್ರತಿನಿಧಿಯಂತೆ ಕಂಡರೆ ಕಾತ್ಯಾಯಿನಿ, ‘ಮನಸಿಜನ ಮಾಯೆ ವಿಧಿ ವಿಳಸನದ ನೆರಂಬಡೆಯೆ ಕೊಂದು ಕೂಗದೆ ನರರಂ’ ಎನ್ನುವಂತೆ ಕಾಣಿಸುತ್ತಾಳೆ.

ಇದನ್ನೇ ಪಿತೃ ಸಂಸ್ಕೃತಿಯ ಅಧಿಕಾರ ಕೇಂದ್ರದ ಶಕ್ತಿ ಎಂದು ಕರೆಯಲಾಗುತ್ತದೆ. ಕಾತ್ಯಾಯಿನಿ ಅಪರಿಹಾರ್ಯ ಮಾನವ ಸಂದರ್ಭಗಳ ಪಾತ್ರವಾಗಿ ಕಾಣದೆ. ‘ಅಪೇಕ್ಷಿತ ಹೆಣ್ಣಿನ ರಚನೆ’ಯಾಗಿ ಕಾಣುವುದು ಈ ಕಾರಣಕ್ಕೆ. ಚೌಕಟ್ಟಿನಾಚೆಗೆ ಚಲಿಸುವ, ಚಲಿಸಲು ಬಯಸುವ ಹೆಣ್ಣನ್ನು ವ್ಯವಸ್ಥೆ ಮಾತೇ ಇಲ್ಲದೆ, ಉಸಿರುಗಟ್ಟಿಸಿ ಕೊಲ್ಲುವುದು ಹೀಗೆ. ಈ ಮಾದರಿಗಳು ಸದಾ ಚಾಲ್ತಿಯಲ್ಲಿರುವಂತೆ ಮಾಡುತ್ತಾ, ಇವು ನಮ್ಮ ಆಯ್ಕೆಗಳಾಗದಂತೆ ಕಾಯುತ್ತಾ ಪಿತೃ ಸಂಸ್ಕೃತಿ ಯಥಾಸ್ಥಿತಿಯನ್ನು ಕಾಪಾಡುವುದು ಹೀಗೆ.

ಕಾಣುವುದು ಯಾವುದೆಂದರೆ ಕಾತ್ಯಾಯಿನಿಯ ನಿರ್ಧಾರ, ಅದನ್ನು ತೆಗೆದುಕೊಳ್ಳುವುದರಲ್ಲಿನ ಅವಳ ಹಕ್ಕನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳುವ ಸಂದರ್ಭ. ಕಾಣದೇ ಇರುವುದು ಯಾವುದೆಂದರೆ, ಅವಳ ಮನೋವಿನ್ಯಾಸದಲ್ಲಿ ಆಗುತ್ತಿರುವ ಬದಲಾವಣೆಗಳನ್ನು, ಅವಳ ಸ್ವಪ್ರಜ್ಞೆಯನ್ನು ಹಿಂಡಿಹಿಪ್ಪೆ ಮಾಡುತ್ತಾ ಅವಳು ತಾನಾಗಿ ವ್ಯವಸ್ಥೆಯ ಚಿತೆಯ ಕಡೆಗೆ ಚಲಿಸುವಂತೆ ಮಾಡುವುದು. ‘ಕೆರೆಗೆ ಹಾರ’ ನೆನಪಿದೆಯಲ್ಲವೆ? ಅವಳನ್ನು ಯಾರೂ ಕೆರೆಗೆ ತಳ್ಳುವುದಿಲ್ಲ, ಹೊಡೆತ –ಬಡಿತ, ಕ್ರೌರ್ಯದ ಮಾತು ಯಾವುದೂ ಇಲ್ಲ.

ಅವಳು ತಾನಾಗಿ ಸ್ವಇಚ್ಛೆಯಿಂದ ಒಂದೊಂದೇ ಮೆಟ್ಟಿಲು ಇಳಿದು ತಾನೇ ತಾನಾಗಿ ಕೆರೆಗೆ ಹಾರವಾಗುತ್ತಾಳೆ. ಅವಳನ್ನು ಲೋಕ ಮಹಾಸತಿ ಎಂದು ಕೊಂಡಾಡುತ್ತದೆ, ಕಾತ್ಯಾಯಿನಿಯನ್ನು ನೋಡಿ, ‘ಪಾಠ ಕಲಿ ಮಗಳೆ, ದಾಟಬೇಡ ಲಕ್ಷ್ಮಣರೇಖೆಯನ್ನು’ ಎಂದು ಕಟ್ಟಪ್ಪಣೆ ಕೊಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT