ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೋಸ್ಟ್ ಟ್ರೂತ್’: ಇಂಡಿಯಾದಲ್ಲಿ ಹೊಸ ಅರ್ಥ?

Last Updated 22 ನವೆಂಬರ್ 2016, 19:30 IST
ಅಕ್ಷರ ಗಾತ್ರ
ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟು ‘ಪೋಸ್ಟ್ ಟ್ರೂತ್’ ಎಂಬ ಪದವನ್ನು ‘ವರ್ಷದ ಪದ’ ಎಂದು ಘೋಷಿಸಿದೆ. ಕಳೆದ ವರ್ಷದಿಂದೀಚೆಗೆ ಪಶ್ಚಿಮದ ಸಾರ್ವಜನಿಕ ವಲಯದಲ್ಲಿ ‘ಪೋಸ್ಟ್ ಟ್ರೂತ್’ ಎಂಬ ಪದ ಹೆಚ್ಚು ಚಾಲ್ತಿಯಲ್ಲಿದೆ. ಈ ಪದವನ್ನು ಕನ್ನಡದಲ್ಲಿ ‘ಸತ್ಯೋತ್ತರ’ ಎಂದು ಕರೆಯಬಹುದೇನೊ. ಅನೇಕ ಸಲ ಯಾವುದಾದರೂ ಘಟ್ಟದ ನಂತರದ ಕಾಲವನ್ನು ವರ್ಣಿಸಲು ಪಶ್ಚಿಮದ ವಿದ್ವಾಂಸರು ಆ ಘಟ್ಟವನ್ನು ಸೂಚಿಸುವ ಪದದ ಹಿಂದೆ ‘ಪೋಸ್ಟ್’ ಎಂದು ಸೇರಿಸುತ್ತಾರೆ.
 
‘ಮಾಡರ್ನಿಸಂ’ ನಂತರದ ಕಾಲವನ್ನು ಹೇಗೆ ವರ್ಣಿಸುವುದು ಎಂಬ ಸವಾಲು ಪಶ್ಚಿಮಕ್ಕೆ ಎದುರಾದಾಗ, ಅದನ್ನು ‘ಪೋಸ್ಟ್ ಮಾಡರ್ನ್’ ಎಂದು ಕರೆಯಿತು. ಆ ಕಾಲಕ್ಕೆ ನಿರ್ದಿಷ್ಟ ಗುಣಗಳೂ ಇವೆ, ಆ ಮಾತು ಬೇರೆ. ಇದೀಗ ಆಕ್ಸ್‌ಫರ್ಡ್ ನಿಘಂಟು ‘ಪೋಸ್ಟ್ ಟ್ರೂತ್’ ಎಂಬ ಪದವನ್ನು ವರ್ಷದ ಪದವೆಂದು ಘೋಷಿಸಿದ ಮಾತ್ರಕ್ಕೆ ಅದನ್ನು ನಾವೇನೂ ಒಪ್ಪಿಕೊಳ್ಳಬೇಕಾಗಿಲ್ಲ. ಆದರೆ ಒಟ್ಟಾರೆ ಸಾರ್ವಜನಿಕ ವಿಶ್ಲೇಷಣೆಯಲ್ಲಿ ಈ ಪದದ ಬಳಕೆ ಈ ವರ್ಷ ಶೇಕಡ 2000ದಷ್ಟು ಹೆಚ್ಚಾಗಿದೆ; ಇದು ನಮ್ಮ ಕಾಲದ ಹೊಸ ಬೆಳವಣಿಗೆಯೊಂದನ್ನು ಸೂಚಿಸುತ್ತದೆ ಎಂಬುದು ಈ ಪದದ ಬಗ್ಗೆ ಕುತೂಹಲ ಹುಟ್ಟಲು ಕಾರಣ. ಆಕ್ಸ್‌ಫರ್ಡ್ ನಿಘಂಟಿನ ಪ್ರಕಾರ, ಈ ಪದ ‘ವಸ್ತುನಿಷ್ಠ  ವಾಸ್ತವಾಂಶಗಳಿಗಿಂತ ಭಾವನೆಗಳು ಹಾಗೂ ಖಾಸಗಿ ನಂಬಿಕೆಗಳೇ ಸಾರ್ವಜನಿಕ ಅಭಿಪ್ರಾಯವನ್ನು ಹೆಚ್ಚು ಪ್ರಭಾವಿಸುವ ಸನ್ನಿವೇಶವನ್ನು’ ಸೂಚಿಸುತ್ತದೆ. 
 
ಸೋಷಿಯಲ್ ಮೀಡಿಯಾವನ್ನು ಸುದ್ದಿಯ ಮೂಲವನ್ನಾಗಿ ಬಳಸುವುದು ಹೆಚ್ಚಾಗಿರುವ ಈ ಕಾಲದಲ್ಲಿ ವ್ಯವಸ್ಥೆ ಕೊಡುವ ‘ವಾಸ್ತವಾಂಶ’ಗಳ ಬಗ್ಗೆ ಅಪನಂಬಿಕೆ ಹೆಚ್ಚುತ್ತಿದೆ; ಈ ಸನ್ನಿವೇಶದಲ್ಲಿ ‘ಪೋಸ್ಟ್ ಟ್ರೂತ್’ ಎಂಬ ಪದ ಬಳಕೆಯಾಗುತ್ತಿದೆ ಎಂದು ಆಕ್ಸ್‌ಫರ್ಡ್ ನಿಘಂಟಿನ ಅಧ್ಯಕ್ಷರು ಹೇಳುತ್ತಾರೆ. ವಾಸ್ತವಾಂಶಗಳು ಏನೇ ಇದ್ದರೂ ಟ್ರಂಪ್ ಗೆದ್ದ ರೀತಿ, ಯುರೋಪಿಯನ್ ಯೂನಿಯನ್ನಿನಿಂದ ಹೊರಬರಲು ಬ್ರಿಟನ್ನಿನ ಜನ ‘ಬ್ರೆಕ್ಸಿಟ್’ ಜನಮತಗಣನೆಯಲ್ಲಿ ಮತ ಚಲಾಯಿಸಿದ ರೀತಿ- ಈ ಬೆಳವಣಿಗೆಗಳಲ್ಲಿ ಜನರ ಭಾವನಾತ್ಮಕ ಆಯ್ಕೆಗಳು ಹೆಚ್ಚು ಪ್ರಭಾವ ಬೀರಿದ್ದವು. ಅಂದರೆ, ಜನ ವಾಸ್ತವಸತ್ಯವನ್ನು ಒಪ್ಪದಂಥ ಸ್ಥಿತಿ ತಲುಪಿದ್ದಾರೆ. ಇದೇ ‘ಪೋಸ್ಟ್ ಟ್ರೂತ್’ ಸನ್ನಿವೇಶ. ಈ ಸನ್ನಿವೇಶದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಒದರಿದ್ದೇ ಸತ್ಯವೆಂದು ಚಲಾವಣೆಯಾಗುತ್ತಿರುವ ಬಗ್ಗೆ ‘ಪೋಸ್ಟ್ ಟ್ರೂತ್’ ಕುರಿತು ಯೋಚಿಸುತ್ತಿರುವವರು ಆತಂಕಗೊಂಡಿದ್ದಾರೆ. 
 
ಆದರೆ ‘ಪೋಸ್ಟ್ ಟ್ರೂತ್’ನ ವ್ಯಾಪ್ತಿಯ ಬಗ್ಗೆ ಪಶ್ಚಿಮ ಯೋಚಿಸುತ್ತಿರುವುದಕ್ಕಿಂತ ಭಿನ್ನವಾಗಿಯೂ ಇಂಡಿಯಾದಲ್ಲಿ ಯೋಚಿಸಬಹುದು ಎನ್ನಿಸುತ್ತದೆ. ವ್ಯವಸ್ಥೆಯ ಕೇಂದ್ರದಲ್ಲಿರುವವರು ಹೊಸೆದು ಕೊಡುವ ‘ಸತ್ಯ’ಕ್ಕಿಂತ ಭಿನ್ನವಾದ ಸತ್ಯಗಳನ್ನು ಸೃಷ್ಟಿಸುವ ಕಾಲ ಇದು ಎಂದು ಕೂಡ ನೋಡಬಹುದು. ಉದಾಹರಣೆಗೆ, ಇಂಡಿಯಾ- ಪಾಕಿಸ್ತಾನ ಬಿಕ್ಕಟ್ಟು ಬಂದ ತಕ್ಷಣ ಎರಡೂ ಸರ್ಕಾರಗಳು ತಂತಮ್ಮ ಮೂಗಿನ ನೇರಕ್ಕೆ ಸತ್ಯವನ್ನು ಬಿಂಬಿಸತೊಡಗುತ್ತವೆ; ‘ಸರ್ಜಿಕಲ್ ಸ್ಟ್ರೈಕ್’ ಎಂಬ ಸರ್ಕಾರಿ ಪದವನ್ನು ಜನಪ್ರಿಯಗೊಳಿಸಲು ಮಾಧ್ಯಮದ ಕೆಲವರನ್ನು ಸಂಪರ್ಕಿಸಲಾಗುತ್ತದೆ. ಮಾಧ್ಯಮಗಳಿರುವುದೇ ಸರ್ಕಾರಗಳ ಹಾಗೂ ಆಳುವ ವರ್ಗಗಳ ನಡೆನುಡಿಗಳನ್ನು ಪರೀಕ್ಷಿಸಲು ಎಂಬುದನ್ನು ಮರೆತ ಗುಂಪುಗಳು ಸರ್ಕಾರದ ಮಾತುಗಳ ಗಿಳಿಪಾಠ ಒಪ್ಪಿಸಲಾರಂಭಿಸುತ್ತವೆ. ಹೀಗೆ ಸರ್ಕಾರಿ ಮಾತುಗಳನ್ನು ವಿಮರ್ಶೆಯಿಲ್ಲದೆ ಗಿಳಿಪಾಠ ಒಪ್ಪಿಸುವವರು ಭ್ರಷ್ಟರೂ, ಸರ್ಕಾರ ಅಥವಾ ಪಕ್ಷಗಳಿಂದ ಲಾಭ ಪಡೆಯುವವರೂ ಆಗಿರುತ್ತಾರೆ. ಇಂಥ ಸನ್ನಿವೇಶದಲ್ಲಿ ಪಕ್ಷಗಳಿಂದ ಸಂಬಳ ಪಡೆದು ಸಮರ್ಥಿಸಿಕೊಳ್ಳುವ ವಕ್ತಾರರಿಗೂ ಮಾಧ್ಯಮದ ವಾಚಾಳಿಗಳಿಗೂ ವ್ಯತ್ಯಾಸವಿಲ್ಲದಂತೆ ಕಾಣತೊಡಗುತ್ತದೆ. ಆಗ ಅರವಿಂದ ಕೇಜ್ರಿವಾಲ್ ಥರದವರು ‘ಸರ್ಜಿಕಲ್ ಸ್ಟ್ರೈಕ್‌ನ ವಿವರಗಳನ್ನು ಕೊಡಿ ಸ್ವಾಮಿ’ ಎಂದು ಸರ್ಕಾರವನ್ನು ಕೇಳಿದ ತಕ್ಷಣ, ಸರ್ಕಾರಿ ವಕ್ತಾರರಿಗಿಂತ ಜೋರಾಗಿ ಮಾಧ್ಯಮದ ಸರ್ಕಾರಿ ಭಕ್ತರು ಹಾರಾಡತೊಡಗುತ್ತಾರೆ. ಆದರೂ ಪ್ರಾಯೋಜಿತ ಸರ್ಕಾರಿ ಸತ್ಯಗಳ ಎದುರು ಕೇಜ್ರಿವಾಲ್ ಥರದವರ ಸತ್ಯೋತ್ತರದ ಮಾತು ಕೂಡ ಕೋಟ್ಯಂತರ ಪ್ರಾಮಾಣಿಕ ಜನರನ್ನು ತಲುಪಿರುತ್ತದೆ. ಇದೇ ಪರ್ಯಾಯ ಸತ್ಯದ ಶಕ್ತಿ. 
 
ವ್ಯವಸ್ಥೆಯ ಆಯಕಟ್ಟಿನಲ್ಲಿರುವ ಲಾಭಕೋರ ಜನ ‘ಸತ್ಯ’ಗಳನ್ನು ಸೃಷ್ಟಿಸುವ ಬಗೆಗಳು ಜನಸಾಮಾನ್ಯರಿಗೆ ಗೊತ್ತಿರಲಿಕ್ಕಿಲ್ಲ. ವ್ಯವಸ್ಥೆಯ ಸಮರ್ಥಕರಾಗಿರುವ ಆಯ್ದ ಜನ ಮೊದಲು ತಾವೇನು ಸುಳ್ಳು ಬಿತ್ತಬೇಕೆಂದು ಯೋಜಿಸುತ್ತಾರೆ. ಅವರಲ್ಲೊಬ್ಬ ‘ಜನ ಏನೆನ್ನುತ್ತಾರೆ ನೋಡೋಣ’ ಎಂದು ಮೊದಲ ಬಾಣ ಬಿಡುತ್ತಾನೆ. ಸಂಜೆಗೆ ಈ ಗುಂಪಿನ ಮಾತುಗಾರ ಮಹಿಳೆ ಇದೇ ಮಾತನ್ನು ಮುಂದುವರಿಸುತ್ತಾಳೆ. ರಾತ್ರಿಯ ಟಿ.ವಿ ಚರ್ಚೆಯಲ್ಲಿ ಈ ‘ಸತ್ಯ’ವನ್ನು ಬಿಂಬಿಸಲು ಕಾಂಟ್ರ್ಯಾಕ್ಟ್ ಪಡೆದವರೂ ಅದೇ ರಾಗ ಹಾಡುತ್ತಾರೆ. ಮೊನ್ನೆ ನಿರ್ನೋಟೀಕರಣ (ಡಿಮಾನಿಟೈಸೇಷನ್) ಸಂದರ್ಭದಲ್ಲಿ ‘ಹಣದ ತಾಪತ್ರಯವನ್ನು ಎರಡು ದಿನ ತಾಳಿಕೊಳ್ಳಬೇಕಾಗುತ್ತದೆ’ ಎಂದು ಸರ್ಕಾರಿ ವಕ್ತಾರರು ಹೇಳಿದರೆ, ಈ ಅನಧಿಕೃತ ವಕ್ತಾರರು ‘ದೇಶಕ್ಕೋಸ್ಕರ ಮೂರು ದಿನ ತಾಳಿಕೊಳ್ಳಬೇಕಾಗುತ್ತದೆ’ ಎನ್ನುತ್ತಾರೆ. ‘ಭಯೋತ್ಪಾದನೆಯನ್ನು ಮಟ್ಟ ಹಾಕಲು ಇದನ್ನೆಲ್ಲ ಮಾಡುತ್ತಿದ್ದೇವೆ’ ಎಂದು ಸರ್ಕಾರಿ ವಕ್ತಾರರು ಹೇಳಿದ್ದನ್ನೇ ಈ ಏಜೆಂಟರೂ ಹೇಳುತ್ತಾರೆ. ವ್ಯವಸ್ಥೆಯ ಲಾಭ ಪಡೆದವರು ಹೀಗೆ ತಮಗೆ ಬೇಕಾದ ‘ಸತ್ಯ’ ಅಥವಾ ‘ಡಿಸ್ಕೋರ್ಸ್’ ಸೃಷ್ಟಿಸುತ್ತಾರೆ. 
 
ಆದರೆ ಅದೇ ಮಾಧ್ಯಮದಲ್ಲೇ ಸತ್ಯಶೋಧಕ ಪತ್ರಕರ್ತರೊಬ್ಬರು 30,000 ರೂಪಾಯಿ ಬೆಲೆಯ ಹತ್ತು ಗ್ರಾಂ ಚಿನ್ನವನ್ನು 40,000 ರೂಪಾಯಿನ ಹಳೆಯ ನೋಟುಗಳನ್ನು ಪಡೆದು ಮಾರುತ್ತಿರುವ ವಿವರಗಳನ್ನೂ ಕೊಡುತ್ತಾರೆ. ಉಳ್ಳವರು, ಹಳೆಯ ನೋಟುಗಳನ್ನು ದಂಡಿಯಾಗಿ ಇಟ್ಟುಕೊಂಡಿರುವವರು ಸುರಕ್ಷಿತವಾಗಿದ್ದಾರೆ ಎಂಬ ಸತ್ಯವನ್ನು ಈ ವರದಿ ಬಯಲಿಗೆಳೆಯುತ್ತದೆ. ‘ಆಯ್ದ ಉದ್ಯಮಿಗಳ ಏಳು ಲಕ್ಷ ಕೋಟಿ ಸಾಲ ಮನ್ನಾ ಮಾಡಲು ಜನರ ಹತ್ತು ಲಕ್ಷ ಕೋಟಿಯನ್ನು ಬ್ಯಾಂಕಿಗೆ ಜಮಾ ಮಾಡಿಸಲಾಗುತ್ತಿದೆ’ ಎಂಬ ಇನ್ನೊಂದು ಮಾಹಿತಿಯನ್ನು ಕೇಜ್ರಿವಾಲ್ ಸ್ಫೋಟಿಸುತ್ತಾರೆ. ಅದು ಕೆಲವಾದರೂ ಸ್ವತಂತ್ರ ಮಾಧ್ಯಮಗಳಲ್ಲಿ ಪ್ರಕಟವಾಗುತ್ತದೆ. ಇದು ‘ಸತ್ಯೋತ್ತರ’ ಯುಗದ ಮತ್ತೊಂದು ಸಾಧ್ಯತೆ.   
 
ಮೊದಲನೆಯ ಮಹಾಯುದ್ಧದ ನಂತರ ಬದಲಾದ ಪಶ್ಚಿಮದ ಜನರ ನಡವಳಿಕೆಯನ್ನು ಕುರಿತು ಲೇಖಕಿ ವರ್ಜೀನಿಯಾ ವುಲ್ಫ್ ‘1920ರ ವೇಳೆಗೆ ಮಾನವ ಸ್ವಭಾವ ಬದಲಾಯಿತು’ ಎಂದಿದ್ದರು. ಹಾಗೆಯೇ ‘1990ರ ಹೊತ್ತಿಗೆ ಜಗತ್ತಿನ ಜನರ ಸ್ವಭಾವ ಬದಲಾಯಿತು’ ಎಂದು ನಾವೂ ಹೇಳಬಹುದೇನೊ. ಯಾವ ಭಾಷೆಯನ್ನಾದರೂ ಬಳಸಿ ಏನನ್ನಾದರೂ ಮಾರಬಹುದೆಂಬ ಭಂಡತನ ಜಾಗತೀಕರಣದ ಮಾರುಕಟ್ಟೆಯಲ್ಲಿ ಹಬ್ಬಿದಾಗ, ಜನರಲ್ಲಿ ಕೂಡ ಯಾವ ಭಾಷೆಯನ್ನಾದರೂ ಬಳಸಿ ಯಾವ ಸುಳ್ಳನ್ನಾದರೂ ಹೇಳಬಹುದೆಂಬ ಭಂಡತನ ಹೆಚ್ಚಾಯಿತು. ಸಮಾಜದ ವಾಸ್ತವವನ್ನು ಅಧ್ಯಯನ ಮಾಡದ ದುರಹಂಕಾರಿ ಅಕ್ಷರಸ್ಥರು ನವಮಾಧ್ಯಮಗಳನ್ನು ಬಳಸತೊಡಗಿದಂತೆ ಸುಳ್ಳುಗಳು ಸತ್ಯವೆಂಬಂತೆ ಸೃಷ್ಟಿಯಾಗತೊಡಗಿದವು. ಸೈಬರ್ ಲೋಕ ಬೆಳೆಯುವ ಮೊದಲೇ ‘ಸೈಬರ್ ಲೋಕವು ವಿದ್ಯುನ್ಮಾನ ಪ್ರಜಾಪ್ರಭುತ್ವವನ್ನು ಸೃಷ್ಟಿ ಮಾಡುವ ಬದಲು, ಜಗತ್ತನ್ನು ಕಾರ್ಪೊರೇಟ್ ಕ್ಯಾಪಿಟಲಿಸಂ ಹಾಗೂ ಸೈಕೋ ವಾರ್ ಕಡೆಗೆ ದೂಡಬಹುದು’ ಎಂದು ಸಂಸ್ಕೃತಿ ವಿಮರ್ಶಕರು ಎಚ್ಚರಿಸಿದ್ದರು. ಇಂಡಿಯಾದಲ್ಲಿ ಈ ಸೈಬರ್ ಲೋಕವನ್ನು ನಿಯಂತ್ರಿಸಲೆತ್ನಿಸುತ್ತಿರುವ ಮೇಲು ಜಾತಿಗಳು- ಮೇಲುವರ್ಗಗಳು ಈ ಕೆಲಸವನ್ನೇ ಮಾಡಲೆತ್ನಿಸುತ್ತಿವೆ. ಕೇಜ್ರಿವಾಲ್ ಕಾಂಗ್ರೆಸ್ಸಿಗೆ ವಿರೋಧವಾಗಿದ್ದಾಗ ಹೆಚ್ಚಿನ ಪ್ರಚಾರ ಕೊಟ್ಟವರೂ ಇವರೇ; ಕೇಜ್ರಿವಾಲ್ ಬಿಜೆಪಿಯನ್ನು ಪ್ರಶ್ನಿಸಿದಾಗ ಕಡೆಗಣಿಸುವವರೂ ಇವರೇ. ಆದರೇನಂತೆ? ಕೇಜ್ರಿವಾಲ್ ಅದೇ ಸೈಬರ್ ಲೋಕದ ಫೇಸ್‌ಬುಕ್ ಲೈವ್ ಮೂಲಕ ಜನರನ್ನು ತಲುಪುತ್ತಿದ್ದಾರೆ. ಅವರನ್ನು ಕೇಳಿಸಿಕೊಳ್ಳುವವರೂ ಅಗಾಧ ಸಂಖ್ಯೆಯಲ್ಲಿದ್ದಾರೆ. 
 
ಅದರ ಜೊತೆಗೇ, ಸಾಮಾಜಿಕ ಚಳವಳಿಗಳು ಹಾಗೂ ಮಾರ್ಕ್ಸ್, ಅಂಬೇಡ್ಕರ್ ಚಿಂತನೆಗಳ ಪ್ರಭಾವದಿಂದ ಎಚ್ಚೆತ್ತಿರುವ ಮತ್ತೊಂದು ತಲೆಮಾರೂ ಇಂಡಿಯಾದಲ್ಲಿದೆ ಎಂಬುದನ್ನು ಮರೆಯದಿರೋಣ. ಈ ಹಿನ್ನೆಲೆಯಲ್ಲಿ ‘ಸತ್ಯೋತ್ತರ’ ಎಂಬ ಪದಕ್ಕೆ ನಾವು ಕೊಡುವ ಅರ್ಥ ಬೇರೆಯೇ ಇರಬಹುದು ಎಂದು ನನಗನ್ನಿಸುತ್ತದೆ. ವ್ಯವಸ್ಥೆಯ ಲಾಭದಲ್ಲಿ ಪಾಲು ಪಡೆಯುವವರು ಪದೇಪದೇ ಹೇಳುವ ‘ಯೋಜಿತ ಸತ್ಯ’ಗಳೆಂಬ ಸುಳ್ಳುಗಳ ಎದುರು ನಮ್ಮ ಕಣ್ಣೆದುರು ಕಾಣುತ್ತಿರುವ ನಿಜವಾದ ಘಟನಾವಳಿಗಳನ್ನು ಆಧರಿಸಿದ ಸತ್ಯಗಳನ್ನು ಎಲ್ಲರೊಡನೆ, ಎಲ್ಲ ಮಾಧ್ಯಮಗಳಲ್ಲೂ  ಹಂಚಿಕೊಳ್ಳುವುದೇ ಈ ‘ಸತ್ಯೋತ್ತರ’ ಎಂಬ ಪದಕ್ಕೆ ಇಂಡಿಯಾದ ಸತ್ಯಶೋಧಕ ತಲೆಮಾರು ಕೊಡುವ ಹೊಸ ಅರ್ಥವಾಗಬಲ್ಲದು; ಜೊತೆಗೆ, ಪಶ್ಚಿಮ ಮುನ್ನೆಲೆಗೆ ತರುವ ಪದಗಳಿಗೆ ಇಂಡಿಯಾದ ವಾಸ್ತವಗಳು ಹೊಸ ಅರ್ಥಗಳನ್ನು ಕೊಡಬಲ್ಲವು ಎಂಬುದನ್ನೂ ಹೇಳಬೇಕು; ಅದರಲ್ಲೂ ತಮ್ಮ ಅಕಡೆಮಿಕ್ ಏಳಿಗೆಗಾಗಿ ಹೊಸ ಪರಿಕಲ್ಪನೆಗಳನ್ನು ದುರ್ಬಳಕೆ ಮಾಡಿ, ಹೆಣವಾಗಿಸುವ ವಿಶ್ವವಿದ್ಯಾಲಯಗಳ ಅಧ್ಯಾಪಕರು ತಮ್ಮ ‘ಕಾರ್ಯಾಚರಣೆ’ ಶುರು ಮಾಡುವ ಮೊದಲೇ ಈ ಕೆಲಸ ಶುರು ಮಾಡಬೇಕು!   
 
ಕೊನೆ ಟಿಪ್ಪಣಿ: ಹಳೇ ನೋಟಿನ ಹೊಸ ಕತೆಗಳು
ಹಳೆಯ ನೋಟು ಚಲಾವಣೆಯಲ್ಲಿರದಿದ್ದರೇನು? ಇಂಡಿಯಾದ ಹಳೆಯ ಕ್ರೌರ್ಯ ಸದಾ ಚಲಾವಣೆಯಲ್ಲಿರುತ್ತದೆ. ಮೊನ್ನೆ ನಿರ್ನೋಟೀಕರಣದ ಗೊಂದಲದ ದಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಾಲ್ಕುಸಾವಿರದ ಹಳೆಯ ನೋಟುಗಳನ್ನು ತೆಗೆದುಕೊಳ್ಳದಿದ್ದುದರಿಂದ ರೋಗಿಯೊಬ್ಬರಿಗೆ ರಕ್ತ ಸಿಗದೆ ಸಾವನ್ನಪ್ಪಿದರು. ಇದೊಂದು ಪ್ರಕರಣವನ್ನು ವಿಶ್ಲೇಷಿಸಿದರೂ ಸಾಕು, ಇಡೀ ವಾತಾವರಣದ ಕ್ರೌರ್ಯ ನಿಮಗೆ ಅರ್ಥವಾಗುತ್ತದೆ. ಇಂಥ ಸುಲಿಗೆಯ ಆಸ್ಪತ್ರೆಗಳಲ್ಲಿ ಹಳೆಯ ನೋಟುಗಳು ದಂಡಿಯಾಗಿರುವ ಸಾಧ್ಯತೆ ಇದ್ದೇ ಇದೆ. ಆದರೆ ಸಾವಿನಂಚಿನಲ್ಲಿರುವ ರೋಗಿಯಿಂದ ಅವರಿಗೆ ಹೊಸ ನೋಟೇ ಬೇಕಾಗಿತ್ತು. ಆ ಹೊತ್ತಿಗಾಗಲೇ ಇನ್ನಿತರ ರೋಗಿಗಳಿಂದ ಲಕ್ಷಾಂತರ ರೂಪಾಯಿ ಪಡೆದಿರಬಹುದಾದ ಆಸ್ಪತ್ರೆಯವರು ಆ ಹಳೆಯ ನೋಟುಗಳನ್ನು ‘ಒತ್ತೆ’ ಇಟ್ಟುಕೊಂಡಾದರೂ ರೋಗಿಗೆ ತಕ್ಷಣ ನೆರವಾಗಬಹುದಾಗಿತ್ತು. ಆ ಹೃದಯಹೀನರಿಗೆ ಇದೆಲ್ಲ ಮುಖ್ಯವಾಗಿರಲಿಲ್ಲ.
 
ಇಡೀ ನಿರ್ನೋಟೀಕರಣ ಪ್ರಕ್ರಿಯೆ ನಿರ್ಲಜ್ಜವಾಗಿ ಬಡವರ ಹೆಸರು ಹೇಳುತ್ತಲೇ ಸಂಪೂರ್ಣವಾಗಿ ಬಡವರು ಹಾಗೂ ಅಸಹಾಯಕರಿಗೆ ವಿರುದ್ಧವಾಗಿದೆ ಎಂಬುದನ್ನು ಈ ಘಟನೆ ಹೇಳುತ್ತದೆ. ಹಳೆಯ ಸಾವಿರ ರೂಪಾಯಿ ಪಡೆದು, ಎಂಟುನೂರು ಕೊಡುವವರಿಗೆ ಇಲ್ಲಿ ಯಾವ ಸಮಸ್ಯೆಯೂ ಇಲ್ಲ. ಆದರೆ ಕಟ್ಟಡದ ಕೆಲಸಗಾರರು ತಮ್ಮ ದಿನಗೂಲಿಯ ಹಳೆಯ ನೋಟುಗಳನ್ನು ಬ್ಯಾಂಕಿನಲ್ಲಿ ಹೊಸ ನೋಟಾಗಿಸಿಕೊಳ್ಳಲಾಗದೆ ಅಸಹಾಯಕರಾಗಿದ್ದಾರೆ. ಅವರು, ಅವರ ಮಕ್ಕಳು ಹಸಿವಿನಿಂದ ಸಾಯಬೇಕೆ? ಮಿತ್ರರೊಬ್ಬರು ಕಂಡಂತೆ, ಮೊನ್ನೆ ಹುಬ್ಬಳ್ಳಿಯ ಮಾರುಕಟ್ಟೆಯಲ್ಲಿ ರೈತರು ತಾವು ಬೆಳೆದ ತರಕಾರಿಗಳನ್ನು ಕೊಳ್ಳುವವರಿಲ್ಲದೆ ಬೀದಿಗೆ ಚೆಲ್ಲುತ್ತಾ ಸಂಕಟಪಡುತ್ತಿದ್ದರೆ, ಕೊಬ್ಬಿದ ‘ದೇಶಭಕ್ತ’ರು, ರಿಲಯನ್ಸ್ ಫ್ರೆಶ್‌ನಲ್ಲಿ ಡೆಬಿಟ್ ಕಾರ್ಡ್ ಬಳಸಿ ತರಕಾರಿ ಕೊಳ್ಳುವಂತೆ ಪ್ರಚಾರ ಮಾಡುತ್ತಿದ್ದರು. ಇಡೀ ದಂಧೆ ಯಾವ ರೀತಿ ನಡೆಯುತ್ತಿದೆ, ಯಾರಿಗೆ ಲಾಭ ಮಾಡಿಕೊಡಲು ಸೃಷ್ಟಿಯಾಗಿದೆ ಎಂಬ ಕಟುಸತ್ಯಗಳನ್ನು ಹೇಳುವ, ಅಸಲಿ ಘಟನಾವಳಿಗಳನ್ನು ಎಲ್ಲರಿಗೂ ಹೇಳುವ ‘ಸತ್ಯೋತ್ತರ’ ಸನ್ನಿವೇಶದ ಹೊಣೆ ಹೊಸ ತಲೆಮಾರಿನ ಮೇಲೆ ಹೆಚ್ಚು ಇದೆ.
 
ಇವತ್ತಿನ ಸನ್ನಿವೇಶವನ್ನು ಬಣ್ಣಿಸಲು ಕಲಬುರ್ಗಿಯ ಜನ ಹೇಳುತ್ತಿರುವ ಒಂದು ಕತೆ: ‘ಒಂದು ದೊಡ್ಡ ಕೊಳದಲ್ಲಿದ್ದ ಮೊಸಳೆಗಳನ್ನು ಹಿಡಿಯಲು ನೀರೆಲ್ಲವನ್ನೂ ಖಾಲಿ ಮಾಡಲಾಯಿತು. ನೀರು ಖಾಲಿಯಾದಾಗ ಮೊಸಳೆಗಳು ಸಿಗಲಿಲ್ಲ; ಬದಲಿಗೆ ಮೀನುಗಳೆಲ್ಲ ಸತ್ತಿದ್ದವು.’ ಈ ಕತೆ ಮತ್ತೊಂದು ಭೀಕರಸತ್ಯವನ್ನೇ ಹೇಳುತ್ತಿದೆಯಲ್ಲವೆ? ಆತ್ಮಸಾಕ್ಷಿಯುಳ್ಳ ಲೇಖಕ, ಲೇಖಕಿಯರು, ಪತ್ರಕರ್ತರು ಸತ್ಯವನ್ನು ಕಾಣಲೇಬೇಕಾದ, ಕಂಡದ್ದನ್ನು ಹಾಗೂ ಹೊಸ ಸತ್ಯಕತೆಗಳನ್ನು ಹೇಳಲೇಬೇಕಾದ ಜವಾಬ್ದಾರಿ ‘ಪೋಸ್ಟ್ ಟ್ರೂತ್’ ಕಾಲದಲ್ಲಿ ಇನ್ನಷ್ಟು ಹೆಚ್ಚಿದೆ.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT