ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾಕೀಯ’ದ ಪ್ರಸ್ತಾಪದ ಪ್ರಸ್ತಾಪವಂತೆ!

Last Updated 13 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಪ್ರಜಾಕೀಯವಂತೆ! ಪ್ರಜಾಕಾರಣವಂತೆ! ಭಾರತದ ಸ್ವಾತಂತ್ರ್ಯಕ್ಕೆ ನಾಳೆ ಎಪ್ಪತ್ತು ತುಂಬುತ್ತಿರುವಾಗ ಕನ್ನಡದ ಸಿನಿಮಾ ನಟರೊಬ್ಬರು (ಉಪೇಂದ್ರ) ಈ ಹೊಸ ನುಡಿಗಟ್ಟುಗಳನ್ನು ಬಳಸಿ ರಾಜಕೀಯಕ್ಕೆ ಮತ್ತು ರಾಜಕಾರಣಕ್ಕೆ ಅಕ್ಷರಶಃ ಹೊಸ ಭಾಷ್ಯ ಬರೆಯಹೊರಟಿರುವರಂತೆ.

ರಾಜಕೀಯದ ಬದಲಿಗೆ ಪ್ರಜಾಕೀಯ, ರಾಜಕಾರಣದ ಬದಲಿಗೆ ಪ್ರಜಾಕಾರಣ. ಸಿನಿಕತನದಿಂದ ನೋಡುವವರಿಗೆ ಇವೆಲ್ಲಾ ಬರೀ ತಮಾಷೆ ಎಂದು ಅನ್ನಿಸಬಹುದು. ಇನ್ನು ಕೆಲವರು ಈ ಶಬ್ದಗಳಲ್ಲಿ ಹೊಸ ವ್ಯವಸ್ಥೆಯೊಂದರ ಬೀಜಾಕ್ಷರಗಳನ್ನು ಗುರುತಿಸಬಹುದು. ಸಿನಿಮಾ ನಟರ ಈ ರಾಜಕೀಯ ಯೋಚನೆ ಮತ್ತು ಅದನ್ನವರು ಜನರ ಮುಂದಿಟ್ಟ ವಿಧಾನಗಳನ್ನು ನೋಡುತ್ತಿದ್ದರೆ ಇದರ ಕುರಿತು ಸಿನಿಕತನದ ಪ್ರತಿಕ್ರಿಯೆ ವ್ಯಕ್ತಪಡಿಸುವವರನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಇದರ ಮೇಲೆ ಭರವಸೆ ಇಟ್ಟುಕೊಂಡವರನ್ನೂ ಅಷ್ಟೇ ಗಂಭೀರವಾಗಿಯೇ ಪರಿಗಣಿಸಬೇಕಾಗುತ್ತದೆ.

ಎಲ್ಲಾ ದೊಡ್ಡ ಯೋಚನೆಗಳೂ ಆರಂಭದಲ್ಲಿ ತಮಾಷೆಯಾಗಿ ಕಾಣಿಸುತ್ತವೆ. ಹಾಗೆಯೇ, ಆರಂಭದಲ್ಲಿ ಭರವಸೆ ಹುಟ್ಟಿಸಿದ ಯೋಚನೆಗಳೆಲ್ಲಾ ಮುಂದೊಮ್ಮೆ ತಮಾಷೆಯಾಗಿಬಿಡುತ್ತವೆ. ಈಗ ಈ ನಟ ಯಾವ ಹಳೆಯ ರಾಜಕೀಯಕ್ಕೆ ಹೊಸ ಭಾಷ್ಯ ಬರೆಯಲು ಹೊರಟಿದ್ದಾರೋ ಅದೇ ಹಳೆಯ ರಾಜಕೀಯ 70 ವರ್ಷಗಳ ಹಿಂದೆ ಸ್ವಾತಂತ್ರ್ಯ ಬಂದ ವೇಳೆಯಲ್ಲಿ ಎಷ್ಟೊಂದು ದೊಡ್ಡ ಭರವಸೆ ಹುಟ್ಟಿಸಿತ್ತು ನೆನಪಿಸಿಕೊಳ್ಳಿ. ಚರಿತ್ರೆ ಯಾವತ್ತೂ ಹಾಗೆಯೇ. ಅದು, ಹಳೆ ಭರವಸೆಗಳು ಹೊಸ ತಮಾಷೆಗಳಾಗಿ, ಹೊಸ ತಮಾಷೆಗಳು ಭವಿಷ್ಯದ ಬಹುದೊಡ್ಡ ಸತ್ಯಗಳಾಗಿ ಮತ್ತು ಭರವಸೆಗಳಾಗಿ ಮಾರ್ಪಡುವ ಒಂದು ನಿರಂತರ ಪ್ರಕ್ರಿಯೆ.

ಸ್ವತಂತ್ರ ಭಾರತ 1950ರ ಸಂವಿಧಾನದ ಮೂಲಕ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಸ್ವೀಕರಿಸಿದಾಗ ಪಶ್ಚಿಮದಲ್ಲಿ ಮೊಳೆತು ಬೆಳೆದ ಈ ವ್ಯವಸ್ಥೆಗೆ ಭಾರತೀಯ ಸಮಾಜ ಇನ್ನೂ ಸಿದ್ಧವಾಗಿರಲಿಲ್ಲ. ಎಷ್ಟರಮಟ್ಟಿಗೆ ಸಿದ್ಧವಾಗಿರಲಿಲ್ಲ ಎಂದರೆ ವ್ಯವಸ್ಥೆಯನ್ನು ವಿವರಿಸಲು ಬೇಕಾದ ಕನಿಷ್ಠ ನುಡಿಗಟ್ಟುಗಳು ಕೂಡಾ ಯಾವುದೇ ಭಾರತೀಯ ಭಾಷೆಯಲ್ಲಿ ಲಭ್ಯವಿರಲಿಲ್ಲ. ಸರಿ, ಹೊಸದಾಗಿ ಒಪ್ಪಿಕೊಂಡ ವ್ಯವಸ್ಥೆಗೆ ಬೇಕಾದ ಹೊಸ ಶಬ್ದಗಳನ್ನು ಆವಿಷ್ಕರಿಸುವ ಕೆಲಸ ಪ್ರಾರಂಭವಾಯಿತು. ಆದರೆ ಈ ಆವಿಷ್ಕಾರವನ್ನು ನಿರ್ಧರಿಸಿದ್ದು ಹೊಸ ವ್ಯವಸ್ಥೆ ಮತ್ತು ಅದರ ಆಶಯಗಳ ಕುರಿತಾದ ತಿಳಿವಳಿಕೆಯಲ್ಲ. ಬದಲಿಗೆ ಪ್ರತಿಯೊಂದು ಪದದ ನಿರ್ಮಾಣದ ಹಿಂದೆ ಕೆಲಸ ಮಾಡಿದ್ದು ಶತಶತಮಾನಗಳಿಂದ ರಾಜರ ಅಧಿಕಾರ ಮತ್ತು ಆಳ್ವಿಕೆಯನ್ನು ಮರುಮಾತಿಲ್ಲದೆ ಒಪ್ಪಿಕೊಂಡಿದ್ದ ಭಾರತೀಯ ಮನಸ್ಥಿತಿ.

ಆದ ಕಾರಣ ‘ಪಾಲಿಟಿಕ್ಸ್’ ಎಂಬ ಇಂಗ್ಲಿಷ್ ಪದ ಇಲ್ಲಿ ‘ರಾಜಕೀಯ’ವಾಯಿತು. ರಾಜಕೀಯದಲ್ಲಿ ತೊಡಗಿದ ಮಂದಿಯನ್ನು ‘ರಾಜಕಾರಣಿ’ ಗಳೆಂದು ಕರೆಯಲಾಯಿತು. ಇಂಗ್ಲಿಷ್‌ನ ‘ಗವರ್ನ್‌ಮೆಂಟ್’ ಎಂಬ ಪದ ಹಲವು ಭಾರತೀಯ ಭಾಷೆಗಳಲ್ಲಿ ‘ಪ್ರಭುತ್ವ’ ಎಂದಾಯಿತು. ವಾಸ್ತವದಲ್ಲಿ ‘ಪಾಲಿಟಿಕ್ಸ್’, ‘ಗವರ್ನ್‌ಮೆಂಟ್’ ಮುಂತಾದ ಶಬ್ದಗಳಲ್ಲಿ ‘ರಾಜ’ ‘ಪ್ರಭು’ ಇತ್ಯಾದಿ ಪರಿಕಲ್ಪನೆಗಳ ವಾಸನೆ ಕೂಡ ಇಲ್ಲ. ಆದರೆ ಭಾರತೀಯ ಮನಸ್ಸುಗಳಿಗೆ ‘ರಾಜ’ನನ್ನು ಹೊರಗಿಟ್ಟು ಆಡಳಿತ ವ್ಯವಸ್ಥೆಯೊಂದನ್ನು ಕಲ್ಪಿಸುವುದಕ್ಕೆ ಕೂಡಾ ಸಾಧ್ಯವಿರಲಿಲ್ಲ. ‘ರಾಜ’, ‘ಪ್ರಭು’ ಇತ್ಯಾದಿಗಳೆಲ್ಲಾ ಹೊಸ ಆಡಳಿತ ವ್ಯವಸ್ಥೆಗೆ ಸಲ್ಲದ ಶಬ್ದಗಳು. ಹೊಸ ವ್ಯವಸ್ಥೆಯ ಆಶಯವನ್ನೇ ಪ್ರಶ್ನಿಸುವ ಪದಗಳು. ಒಂದರ್ಥದಲ್ಲಿ ಪ್ರಜಾಪ್ರಭುತ್ವ ಎನ್ನುವ ಪದವೇ ಅನರ್ಥಕಾರಿ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪ್ರಜೆಯೂ ಪ್ರಭುವೇನಲ್ಲ. ಆದರೂ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದರೂ ಈ ಪದಗಳೆಲ್ಲಾ ಬಳಸಲು ನಮಗೆ ಕನಿಷ್ಠ ಕಸಿವಿಸಿಯಾದರೂ ಆಗುತ್ತಿಲ್ಲ.

ಕೊನೆಗೂ ಸಿನಿಮಾ ನಟರೊಬ್ಬರು ಹೊಸ ಪಕ್ಷ ಕಟ್ಟುವ ಅಂಗವಾಗಿ ಈ ನುಡಿಗಟ್ಟುಗಳಿಗೆ ಪರ್ಯಾಯ ಪದಗಳನ್ನು ಸೂಚಿಸುತ್ತಿದ್ದಾರೆ ಎನ್ನುವುದು ಪಕ್ಷ ಕಟ್ಟುವ ಅವರ ಯೋಚನೆಯ ಬಗ್ಗೆ ಕುತೂಹಲ ಹುಟ್ಟಿಸಿದೆ. ಇಲ್ಲದೆ ಹೋದರೆ ಈ ಹಿಂದೆಯೂ ಹಲವು ಸಿನಿಮಾ ನಟರು ಪಕ್ಷ ಕಟ್ಟಿದ್ದಾರೆ, ಕೆಲ ನಟರು ಇದ್ದ ಪಕ್ಷ ಸೇರಿ ಅಧಿಕಾರ ಅನುಭವಿಸಿದ್ದಾರೆ. ಕೆಲವರು ಅರಸರ ಪಾತ್ರಗಳನ್ನೂ, ದೇವರ ಪಾತ್ರಗಳನ್ನೂ ತೆರೆಯ ಮೇಲೆ ಅದ್ಭುತವಾಗಿ ಅಭಿನಯಿಸುತ್ತಿದ್ದರು ಎನ್ನುವ ಕಾರಣಕ್ಕೆ ಜನರಿಂದ ಚುನಾಯಿತರಾಗಿದ್ದಾರೆ! ನಟರಲ್ಲದವರೂ ಹೊಸ ಪಕ್ಷ ಕಟ್ಟಿದ್ದಾರೆ. ಅವುಗಳಲ್ಲಿ ಕೆಲವು ಉಳಿದಿವೆ. ಕೆಲವು ಅಳಿದಿವೆ. ಕರ್ನಾಟಕದಲ್ಲಿ ಯಾರು ಕಟ್ಟಿದ ಹೊಸ ಪಕ್ಷವೂ ಹೆಚ್ಚು ಕಾಲ ಬಾಳಲಿಲ್ಲ. ಅದೇನೇ ಇದ್ದರೂ ಅವರೆಲ್ಲಾ ಹಳೆಯ ವ್ಯವಸ್ಥೆಯೊಳಗೆ ವ್ಯವಹರಿಸಿದವರು. ರಾಜಕೀಯಕ್ಕೆ ಬಂದು ತಮ್ಮ ಅರಸೊತ್ತಿಗೆ ಸ್ಥಾಪಿಸಲು ಯತ್ನಿಸಿದವರು. ಇಂತಹವರ ಮಧ್ಯೆ ರಾಜಕೀಯ ವಿಶ್ಲೇಷಕರೂ, ಮಾಧ್ಯಮಗಳು ಎಂದೋ ಕೇಳಬೇಕಾಗಿದ್ದ ಪ್ರಶ್ನೆಗಳನ್ನೆಲ್ಲಾ ಎತ್ತಿಕೊಂಡು ಈ ಕನ್ನಡ ಸಿನಿಮಾ ನಟ ಹೊಸ ಪಕ್ಷ ಕಟ್ಟಲು ಹೊರಟಿರುವುದು ಭಾರತದಲ್ಲಿ ಹೊಸ ಅಲೆಯ ರಾಜಕೀಯ ಪ್ರಯೋಗಗಳ ಪರ್ವವೊಂದು ಪ್ರಾರಂಭವಾಗಿದೆ ಎನ್ನುವುದಕ್ಕೆ ಇನ್ನೊಂದು ಉದಾಹರಣೆಯಂತೆ ತೋರುತ್ತದೆ.

ಈ ‘ಪ್ರಜಾಕಾರಣ’ದ ಪ್ರಯೋಗವನ್ನು ಹೊಸ ಅಲೆಯ ರಾಜಕೀಯ ವಿದ್ಯಮಾನವಾಗಿ ನೋಡಬೇಕು ಎಂದು ಹೇಳುತ್ತಿರುವುದಕ್ಕೆ ಇನ್ನೊಂದು ಕಾರಣ ಹಣ ಮತ್ತು ಜಾತಿ ಇಲ್ಲದೆಯೇ ಪಕ್ಷ ಕಟ್ಟುತ್ತೇವೆ ಎಂದು ಅದರ ಪ್ರವರ್ತಕರು ಹೇಳುತ್ತಿರುವುದು. ಹಣ ಮತ್ತು ಜಾತಿ ಯನ್ನು ಆಶ್ರಯಿಸದ ಪರ್ಯಾಯ ರಾಜಕಾರಣ ಸಾಧ್ಯವೇ ಇಲ್ಲ ಎನ್ನುವ ಮಿಥ್ಯೆಯನ್ನು ಮೊತ್ತ ಮೊದಲಿಗೆ ಮುರಿದದ್ದು ದೆಹಲಿಯ ಆಮ್ ಆದ್ಮಿ ಪಕ್ಷ. ಆ ಪಕ್ಷ ಅಧಿಕಾರಕ್ಕೆ ಬರುತ್ತಲೇ ತಾನು ಪ್ರತಿಪಾದಿಸುತ್ತಿದ್ದ ಆದರ್ಶಗಳಿಂದ ಸ್ವಲ್ಪ ದೂರ ಸರಿದಿರಬಹುದು. ಆದರೆ ಆಮ್ ಆದ್ಮಿ ಪಕ್ಷದ ಪ್ರಯೋಗದಲ್ಲಿ ದೇಶ ಕಂಡುಕೊಳ್ಳಬೇಕಾದ ಒಂದೇ ಒಂದು ಪಾಠ ಎಂದರೆ ಹಣ ಮತ್ತು ಜಾತಿ ಬಲವನ್ನು ಬದಿಗಿಟ್ಟು ಚುನಾವಣೆಯನ್ನು ಗೆಲ್ಲುವ ಸಾಧ್ಯತೆ ಈ ದೇಶದಲ್ಲಿ ಜೀವಂತವಾಗಿದೆ ಎನ್ನುವುದು. ಚುನಾವಣೆ ಗೆಲ್ಲಲು ಬೇಕಾಗಿದ್ದ ಕನಿಷ್ಠ ಮೊತ್ತದ ಹಣವನ್ನು ಆ ಪಕ್ಷ ಜನರಿಂದಲೇ ಸಂಗ್ರಹಿಸಿತು. ಆಮ್ ಆದ್ಮಿ ಪಕ್ಷ ಗೆಲ್ಲುವ ತನಕ ದೆಹಲಿಯಂತಹ ಸಣ್ಣ ರಾಜ್ಯದಲ್ಲಾದರೂ ಇದು ಸಾಧ್ಯ ಅಂತ ಯಾರೂ ನಂಬಿರಲಿಲ್ಲ.

ಆಮ್ ಆದ್ಮಿ ಪಕ್ಷ ಉದಯಿಸುವುದಕ್ಕಿಂತ ಹಿಂದೆ ಕೂಡಾ ಹಲವು ಹೊಸ ಪಕ್ಷಗಳು ಆಗಾಗ ಹುಟ್ಟಿಕೊಂಡಿದ್ದರೂ ಅವುಗಳು ರಾಜಕೀಯದ ಹಳೆಯ ಮಾದರಿಯನ್ನು ಅನಿವಾರ್ಯ ಎಂದು ಸ್ವೀಕರಿಸಿ ಅದರೊಳಗೆ ಅಧಿಕಾರ ವಂಚಿತರಿಗೆ ಅಧಿಕಾರ ನೀಡುವ ಪ್ರಯತ್ನವನ್ನಷ್ಟೇ ಮಾಡಿದವು. ಅಧಿಕಾರ ಹಿಡಿಯಲು ಬೇಕಾಗಿದ್ದ ವಾಮ ಮಾರ್ಗಗಳ ಬಗ್ಗೆ ಅವುಗಳಿಗೆ ಸ್ಪಷ್ಟವಾದ ನಿಲುವಿರಲಿಲ್ಲ. ಮೇಲ್ನೋಟಕ್ಕೆ ಅವು ಭ್ರಷ್ಟಾಚಾರವನ್ನು ತೊಡೆದುಹಾಕುವ ಸಂಕಲ್ಪ ಮಾಡಿದರೂ ಆಳದಲ್ಲಿ ಭ್ರಷ್ಟಾಚಾರ ಅನಿವಾರ್ಯ ಎನ್ನುವ ನಿರ್ಧಾರಕ್ಕೆ ಬಂದಿದ್ದವು. ಆಮ್ ಆದ್ಮಿ ಪಕ್ಷದ ಪ್ರಯೋಗ ಮತ್ತು ಈಗ ಕನ್ನಡದ ನಟ ಪ್ರತಿಪಾದಿಸುತ್ತಿರುವ ರಾಜಕೀಯ, ನಿಜ ಅರ್ಥದಲ್ಲಿ ಪರ್ಯಾಯ ಅಂತ ಅನ್ನಿಸುವುದು ಭಾರತದ ರಾಜಕೀಯದಲ್ಲಿ ಶಾಶ್ವತವಾಗಿ ನೆಲೆಯೂರಿದ್ದ ಈ ಸಿದ್ಧಮಾದರಿಯಿಂದ ಅವು ಭಿನ್ನವಾಗಿ ಯೋಚಿಸುತ್ತಿವೆ ಎನ್ನುವ ಕಾರಣಕ್ಕೆ. ಹೈದರಾಬಾದ್‌ನಲ್ಲಿ ಮಾಜಿ ಐಎಎಸ್‌ ಅಧಿಕಾರಿ ಜಯಪ್ರಕಾಶ್ ನಾರಾಯಣ್ ಸ್ಥಾಪಿಸಿದ ಲೋಕಸತ್ತಾ ಪಕ್ಷ ಕೂಡಾ ಇದೇ ಮಾದರಿಯದ್ದು.

ಇಂತಹ ಪ್ರಯೋಗಗಳು ಈ ಕಾಲದ ದೊಡ್ಡ ಅಗತ್ಯ. ಇಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಈಗ ಪಕ್ಷ ಸ್ಥಾಪಿಸಲು ಹೊರಟಿರುವ ಸಿನಿಮಾ ನಟರನ್ನು ‘ಇನ್ನು ಎಂಟು ತಿಂಗಳಲ್ಲಿ ಪಕ್ಷ ಕಟ್ಟಿ 2018ರ ಚುನಾವಣೆಯಲ್ಲಿ ಗೆಲ್ಲಲು ಹೇಗೆ ಸಾಧ್ಯ’ ಎಂದು ಎಲ್ಲರೂ ಕೇಳುತ್ತಿದ್ದಾರೆ. ಇದೊಂದು ಅಪ್ರಸ್ತುತ ಮತ್ತು ಅಪಕ್ವ ಪ್ರಶ್ನೆ. ರಾಜಕಾರಣ ಮಾಡುವುದು ಎಂದರೆ ತತ್‌ಕ್ಷಣ ಚುನಾವಣೆಯಲ್ಲಿ ಗೆದ್ದು ಬಿಡುವುದು ಎನ್ನುವ ಯೋಚನೆಯೇ ಅನರ್ಥಕಾರಿ. ಆಮ್ ಆದ್ಮಿ ಪಕ್ಷದ ಅವನತಿ ಪ್ರಾರಂಭವಾಗಿದ್ದೇ ಈ ಯೋಚನೆಯಿಂದ. ಆಮ್ ಆದ್ಮಿ ಪ್ರಯೋಗದಿಂದ ಕಲಿಯಬೇಕಾಗಿರುವ ಎರಡನೆಯ ಪಾಠ ಇದು. ಒಳ್ಳೆಯ ರಾಜಕಾರಣ ಮಾಡಿ ಸೋತವರನ್ನು ಕೆಟ್ಟ ರಾಜಕಾರಣ ಮಾಡಿ ಗೆದ್ದವರಿಗಿಂತ ಹೆಚ್ಚು ಗೌರವಿಸುವ ಪರಿಪಾಠ ಒಂದು ಸಮಾಜದಲ್ಲಿ ಅಗತ್ಯವಾಗಿ ಇರಬೇಕು. ಭಾರತದಲ್ಲಿ ಈ ಮನಸ್ಥಿತಿ ಇಲ್ಲ. ಇದು ಗೆದ್ದ ಎತ್ತಿನ ಬಾಲ ಹಿಡಿಯುವ ಸಮಾಜ. ಇಲ್ಲಿ ಸೋಲನ್ನು ಒಂದು ಅಪರಾಧ ಎಂಬಂತೆ ಕಾಣಲಾಗುತ್ತದೆ. ಭಾರತದಲ್ಲಿ ರಾಜಕಾರಣ ಇಷ್ಟೊಂದು ಕೆಡುವುದಕ್ಕೆ ಇದೂ ಒಂದು ಕಾರಣ.

ಆದುದರಿಂದ ‘ಪ್ರಜಾಕಾರಣ’ ಪ್ರಯೋಗದ ಪ್ರಸ್ತಾಪವನ್ನು ಈ ಹಂತದಲ್ಲಿ ನಾವು ಮೌಲ್ಯಮಾಪನ ಮಾಡಬೇಕಿರುವುದು ಅದು ಮುಂದಿನ ಚುನಾವಣೆಗೆ ಎಷ್ಟು ಸಿದ್ಧವಾಗಿದೆ ಎನ್ನುವ ಆಧಾರದಲ್ಲಿ ಅಲ್ಲವೇ ಅಲ್ಲ. ಈಗ ಕೇಳಬೇಕಾಗಿರುವುದು ಒಂದು ಪರ್ಯಾಯ ಮಾದರಿಯಾಗಿ ಅದರ ಹಿಂದಿರುವ ಚಿಂತನೆ ಎಷ್ಟು ಗಟ್ಟಿಯಾಗಿದೆ ಎನ್ನುವ ಪ್ರಶ್ನೆಯನ್ನು. ಇಲ್ಲಿ ಒಂದು ಅಂಶವನ್ನು ಮುಖ್ಯವಾಗಿ ಗಮನಿಸಬೇಕು. ಕೇವಲ ಪರ್ಯಾಯ ಪದಗಳನ್ನು ಆವಿಷ್ಕರಿಸಿದರೆ ಅದು ಪರ್ಯಾಯ ಆಡಳಿತ ಮಾದರಿಯಾಗುವುದಿಲ್ಲ. ಹಣ ಬಲವಿಲ್ಲದೆ, ಜಾತಿ ಬಲವಿಲ್ಲದೆ ಚುನಾವಣೆ ಗೆಲ್ಲುವ ಪ್ರಯತ್ನ ಮಾಡುತ್ತೇವೆ ಎನ್ನುವ ಆದರ್ಶವನ್ನು ಶೂನ್ಯದಲ್ಲಿ ಸಾಧಿಸಲಾಗುವುದಿಲ್ಲ.

ಈ ದೇಶದಲ್ಲಿ ಹಣ ಪಡೆದು ಮತ ನೀಡುವ ಜನರನ್ನು ಮತ್ತು ಜಾತಿಯ ಆಧಾರದ ಮೇಲೆ ಮತ ನೀಡುವ ಜನರನ್ನು ಪ್ರಜಾತಂತ್ರವೆಂಬ ನಿಜ-ನಾಟಕದ ಮಹಾನ್ ಖಳನಾಯಕರು ಎನ್ನುವ ಹಾಗೆ ಚಿತ್ರಿಸುವ ಮೊದಲು ಈ ಜನ ಮತ ನೀಡುವಾಗ ಯಾಕೆ ಹಣ ಮತ್ತು ಜಾತಿಯತ್ತ ನೋಡುತ್ತಾರೆ ಎಂದು ಯೋಚಿಸಬೇಕು. ಜನ ಹಾಗೆ ಮಾಡುವುದಕ್ಕೆ ಅವರದೇ ಆದ ಕಾರಣಗಳಿವೆ. ಅವರ್‍ಯಾರಿಗೂ ಪ್ರಜಾತಂತ್ರವನ್ನು ಅಭದ್ರಗೊಳಿಸಬೇಕೆಂಬ ದುರುದ್ದೇಶವಾಗಲೀ, ಒಳ್ಳೆಯವರನ್ನು ಸೋಲಿಸಬೇಕೆಂಬ ದುರಾಲೋಚನೆಯಾಗಲೀ ಇರುವುದಿಲ್ಲ. ಯಾರಲ್ಲಿ ಏನನ್ನು ಗುರುತಿಸಿ ಮತ ನೀಡಬೇಕು ಎಂಬ ಜನರ ನಿರ್ಧಾರ ಅವರ ದೈನಂದಿನ ಬದುಕಿನ ಸೆಣಸಾಟದ ಭಾಗ. ಭಾರತದ ಬಡ ಜನರು ವೋಟು ಹಾಕುವುದು ಸಂವಿಧಾನದತ್ತವಾದ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯ ಮೌಲ್ಯವನ್ನು ಎತ್ತಿಹಿಡಿಯುವುದಕ್ಕಲ್ಲ. ಅವರು ವೋಟು ಹಾಕುವುದು ತಮ್ಮ ಅಹವಾಲು ಆಲಿಸಲು ಯಾರಾದರೂ ಬೇಕು ಎಂದು. ಜನರ ಈ ಜಾಣ ನಡೆ ಭಾರತೀಯ ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಿದೆ ಎನ್ನುವುದು ಬೇರೆ ವಿಚಾರ. ಏನೇ ಇರಲಿ, ಈ ಮಂದಿಯೆಲ್ಲಾ ಹಣದತ್ತ ನೋಡದೆ, ಜಾತಿಯನ್ನು ಗಣಿಸದೆ. ಧರ್ಮಾಂಧತೆಗೆ ಬಲಿಬೀಳದೆ, ಓಲೈಕೆಗೆ ಮರುಳಾಗದೆ ಒಂದು ಪಕ್ಷದ ಆದರ್ಶವನ್ನೂ, ಆ ಪಕ್ಷ ನಿಲ್ಲಿಸಿದ ಅಭ್ಯರ್ಥಿಯ ಚಾರಿತ್ರ್ಯವನ್ನೂ ನೋಡಿ ಮತ ನೀಡಬೇಕು ಎಂದಾದರೆ ಆ ಪಕ್ಷ ಮುಂದಿಡುವ ಪರ್ಯಾಯ ಮಾದರಿ ಜನರಲ್ಲಿ ಹೊಸ ಭರವಸೆ ಮೂಡಿಸುವಷ್ಟು ಗಟ್ಟಿಯಾಗಿಯೂ, ಸ್ಪಷ್ಟವಾಗಿಯೂ ಇರಬೇಕು.

ಈ ಗಟ್ಟಿತನದ ವಿಚಾರದಲ್ಲಿ ‘ಪ್ರಜಾಕಾರಣ’ ಪ್ರಯೋಗದ ಪ್ರಸ್ತಾಪ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ಹಂತದಲ್ಲಿ ಅದೊಂದು ಪ್ರಯೋಗದ ಪ್ರಸ್ತಾಪ ಎನ್ನಿಸುವಷ್ಟೂ ಸ್ಪಷ್ಟತೆಯನ್ನು ಹೊಂದಿಲ್ಲ. ಅದೊಂದು ಪ್ರಯೋಗದ ಪ್ರಸ್ತಾಪದ ಪ್ರಸ್ತಾಪದ ಪ್ರಸ್ತಾಪದಂತಿದೆ. ಆದರೆ ವ್ಯವಸ್ಥೆಯನ್ನು ಸರಿಪಡಿಸುತ್ತೇವೆ ಎಂದು ಹೊರಡುವ ನಾಯಕನಿಗೆ ತನ್ನದೇ ಆದ ಸ್ಪಷ್ಟ ತಿಳಿವಳಿಕೆ ಮತ್ತು ಒಳನೋಟ ಗಳಿರಬೇಕಾಗುತ್ತದೆ. ಸದ್ಯ ಪ್ರಜಾಕಾರಣದ ಪ್ರವರ್ತಕರು ಮಾತನಾಡುತ್ತಿರುವುದನ್ನು (ಬಜೆಟ್ ಗಾತ್ರ, ಕ್ಷೇತ್ರಗಳ ಸಂಖ್ಯೆ, ಶಾಸಕರ ಕೆಲಸ ಇತ್ಯಾದಿ ಪ್ರಾಥಮಿಕ ವಿಚಾರಗಳ ಬಗ್ಗೆ ಕೂಡಾ) ನೋಡಿದರೆ ಅವರಿಗೆ ವ್ಯವಸ್ಥೆಯ ಬಗ್ಗೆ ಇರುವ ತಿಳಿವಳಿಕೆಯ ಆಳದ ಬಗ್ಗೆ ಭರವಸೆ ಹುಟ್ಟುವುದಿಲ್ಲ. ತೀರಾ ಸ್ಥೂಲ ತಿಳಿವಳಿಕೆಯ ಆಧಾರದಲ್ಲಿ ಅವರು ಕೆಲ ನಿರ್ಧಾರ ತಳೆದಂತಿದೆ. ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ತರಬೇತಿ, ಪರೀಕ್ಷೆ ಎಲ್ಲಾ ಬೇಕೆಂದು ಅವರು ಪ್ರತಿಪಾದಿಸುತ್ತಿದ್ದಾರೆ. ಅದು ಆಮೇಲೆ. ಸದ್ಯ ಅವರು ವ್ಯವಸ್ಥೆಯ ಬಗ್ಗೆ ತಮ್ಮ ತಿಳಿವಳಿಕೆಯನ್ನೇ ಸರಿಪಡಿಸಿಕೊಳ್ಳುವ ಮತ್ತು ತಮ್ಮ ಪ್ರಯೋಗದ ರೂಪುರೇಷೆಗಳನ್ನು ಸ್ಪಷ್ಟಪಡಿಸಿಕೊಳ್ಳುವ ತುರ್ತು ಅಗತ್ಯವಿದೆ ಅನ್ನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT