ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೇಲಿನ ನಾಯಕರು’ ಮೇಲ್ಪಂಕ್ತಿ ಆಗುವರೇ?

Last Updated 11 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಕಹಿಯಾದ ಹಾಗೂ ಕೋಪೋದ್ರಿಕ್ತ ಆರೋಪ-ಪ್ರತ್ಯಾರೋಪಗಳು ಮತ್ತು ಸಿನಿಕತೆಯಿಂದ ತುಂಬಿದ್ದ ಮತ್ತೊಂದು ಚುನಾವಣಾ ಪ್ರಚಾರ ಮುಗಿದಿರುವ ಈ ಸಂದರ್ಭದಲ್ಲಿ, ತಳಮಳಕ್ಕೆ ಈಡು ಮಾಡುವಂತಹ ಕೆಲವು ಸಂಗತಿಗಳ ಬಗ್ಗೆ ಸಾರ್ವಜನಿಕರ ಗಮನ ಸೆಳೆಯಬೇಕಾದ ಅಗತ್ಯವಿದೆ. ಪ್ರತೀ ಚುನಾವಣೆ ಪ್ರಚಾರ ಮುಗಿದ ನಂತರ ಅಬ್ಬರದ ವಾಗಾಡಂಬರ, ವೈಯಕ್ತಿಕ ತೀಕ್ಷ್ಣ ದಾಳಿ ಹಾಗೂ ಸಂಯಮರಹಿತ ಭಾಷೆಯ ಬಳಕೆ ದಿನಮಾನದ ಅಳತೆಗೋಲು ಎಂಬುದು ಹೆಚ್ಚೆಚ್ಚು ಖಾತ್ರಿಯಾಗುತ್ತಿದೆ. ಒಂದು ರೀತಿಯಲ್ಲಿ ಇದು ರಾಜಕೀಯ ಪಕ್ಷಗಳಲ್ಲಿ ಮತದಾರರ ಬೆಂಬಲ ಪಡೆಯಲು ಬೇಕಾದ ‘ಚಿಂತನೆಗಳ ಬಡತನ’ ಇರುವುದನ್ನು ತೋರಿಸುತ್ತದೆ. ಇದೇ ವೇಳೆ ಇದು, ಸಾರ್ವಜನಿಕ ಚರ್ಚೆಯ ಗುಣಮಟ್ಟ ಪ್ರಸ್ತುತ ಎಷ್ಟು ರಸಾತಳಕ್ಕೆ ಇಳಿದಿದೆ ಎಂಬುದಕ್ಕೂ ನಿದರ್ಶನ ಎಂಬುದು ಕಳವಳಕ್ಕೆ ಈಡುಮಾಡುವ ವಿದ್ಯಮಾನವಾಗಿದೆ.

ರಾಜಕೀಯವು ವಿಶಾಲ ಹರವಿನ ಸಾಮಾಜಿಕ ವಾಸ್ತವದ ಪ್ರತಿಫಲನ ಎಂಬುದನ್ನು ನಾವು ಇಲ್ಲಿ ಗಮನದಲ್ಲಿ ಇರಿಸಿಕೊಳ್ಳಬೇಕು. ಚರ್ಚೆ, ಸಂಯಮ ಹಾಗೂ ಘನತೆಯಲ್ಲಿನ ಈ ಅಧಃಪತನವು ಎಲ್ಲಾ ಬಗೆಯ ಸಾರ್ವಜನಿಕ ಸಂವಾದಗಳನ್ನೂ ವ್ಯಾಪಿಸಿದೆ. ಸಾಮಾಜಿಕ ಜಾಲತಾಣಗಳ ವೇದಿಕೆಯನ್ನು ಸ್ಥೂಲವಾಗಿ ಗಮನಿಸಿದರೂ ಸಾಕು, ಸಂವಾದ, ಪ್ರತಿಕ್ರಿಯೆ, ಪ್ರತಿಸ್ಪಂದನದ ವೈಖರಿ ಹೇಗೆ ಪಾತಾಳಕ್ಕಿಳಿದಿದೆ ಎಂಬುದು ಗೊತ್ತಾಗುತ್ತದೆ. 24X7 ಮಾಧ್ಯಮಗಳು ಇದ್ದ ಮಾತ್ರಕ್ಕೆ ಆರೋಗ್ಯಕರ ಸಂವಾದವೇನೂ ನಡೆಯುತ್ತಿಲ್ಲ ಎಂಬುದೂ ಇದರಿಂದ ವೇದ್ಯ. ಇಂತಹ ಸನ್ನಿವೇಶದಲ್ಲಿ ಸಾರ್ವಜನಿಕ ಚರ್ಚೆಯ ಮಟ್ಟ ಇನ್ನಷ್ಟು ಕುಸಿಯದಂತೆ ತಡೆಯುವುದಾದರೂ ಹೇಗೆ? ಸ್ಪಷ್ಟವಾಗಿ ಹೇಳುವುದಾದರೆ ಈ ಅಧಃಪತನಕ್ಕೆ ಕಾರಣವಾದ ಅಂಶಗಳು ಹಾಗೂ ಪ್ರಭಾವಗಳು ಯಾವುವು ಎಂಬುದರ ಕುರಿತು ವಸ್ತುನಿಷ್ಠ, ಆಮೂಲಾಗ್ರ ಹಾಗೂ ತರತಮರಹಿತ ಪರಾಮರ್ಶೆಯು ಸದ್ಯದ ತುರ್ತು ಜರೂರಾಗಿದೆ.

ಕಾಂಗ್ರೆಸ್‍ನ ಮಣಿಶಂಕರ್ ಅಯ್ಯರ್ ಅವರ ವಿವಾದಿತ 'ನೀಚ' ಟೀಕೆಯು ವೈಯಕ್ತಿಕ ಕೀಳುಮಟ್ಟದ ಆರೋಪಕ್ಕೆ ತೀರಾ ಇತ್ತೀಚಿನ ಉದಾಹರಣೆ
ಯಾಗಿದೆ. ಇದೇ ಕಾರಣಕ್ಕಾಗಿ ಅಯ್ಯರ್ ಅವರು ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಂಡಿದ್ದಾರೆ ಕೂಡ. ಕಾಂಗ್ರೆಸ್ ಪಕ್ಷವು ತಕ್ಷಣವೇ ಅಯ್ಯರ್ ಅವರಿಗೆ ಕ್ಷಮೆ ಕೇಳಲು ಸೂಚಿಸುವುದರ ಜತೆಗೆ ಪಕ್ಷದಿಂದಲೂ ಅವರನ್ನು ಅಮಾನತು ಮಾಡಿದೆ. ಕೆಲವು ಬಿಜೆಪಿ ನಾಯಕರು ಹೇಳುತ್ತಿರುವ ಪ್ರಕಾರ, ಈ ಟೀಕೆಯು ತನಗೆ ತಿರುಗುಬಾಣವಾಗದು ಎಂದೇ ಕಾಂಗ್ರೆಸ್ ಈ ಕ್ರಮ ಕೈಗೊಂಡಿದೆ. ಇದೇನೇ ಇದ್ದರೂ ಪಕ್ಷವು ಈ ಅಮಾನತು ಕ್ರಮವನ್ನು ತಾರ್ಕಿಕವಾಗಿ ಅಂತ್ಯಗೊಳಿಸಲಿದೆಯೇ ಎಂಬುದು ಗುಜರಾತ್ ಚುನಾವಣಾ ಫಲಿತಾಂಶದ ನಂತರ ನಿಜವಾದ ಪರೀಕ್ಷೆಗೆ ಒಳಪಡಲಿದೆ.

ಮಣಿಶಂಕರ್ ಅವರು ತಮಗೆ ಸರಿಯಾಗಿ ಹಿಂದಿ ಬಾರದಿರುವುದರಿಂದ ಹೀಗಾಗಿದೆ ಎಂದಿರುವುದಾಗಲೀ ಅಥವಾ ಅವರ ಷರತ್ತುಬದ್ಧ ವಿಷಾದವಾಗಲೀ ಈ ಖಂಡನೀಯ ಹೇಳಿಕೆಗೆ ಸಮಜಾಯಿಷಿ ಆಗಲಾರವು. ನಿರೀಕ್ಷೆಯಂತೆಯೇ ಬಿಜೆಪಿ, ಈ ಹೇಳಿಕೆಯ ಸಂಬಂಧ ನಾನಾ ಬಗೆಯ ತಾರ್ಕಿಕ ಹಾಗೂ ಒಂದಷ್ಟು ತಾರ್ಕಿಕವಲ್ಲದ ವ್ಯಾಖ್ಯಾನಗಳನ್ನು ನೀಡುತ್ತಾ ಇದನ್ನು ಚುನಾವಣೆಯ ಪ್ರಧಾನ ವಿಷಯವಾಗಿಸಿದೆ. ಯಾವುದೇ ಪಕ್ಷವಾಗಲೀ, ಅದೂ ಜಿದ್ದಾಜಿದ್ದಿಯ ಚುನಾವಣಾ ಪೈಪೋಟಿಯ ಸಂದರ್ಭದಲ್ಲಿ ಎದುರಾಳಿಗಳು ಒದಗಿಸುವ ಇಂತಹ ಅವಕಾಶವನ್ನು ಬಳಸಿಕೊಳ್ಳದೆ ಕೈಚೆಲ್ಲಿ ಕೂರುವುದಿಲ್ಲ. ಮಾಧ್ಯಮಗಳು ಕೂಡ ಈ ಟೀಕೆಯನ್ನು, ಅದರಿಂದ ಉದ್ಭವಿಸಿದ ದಿಢೀರ್ ತಿರುವುಗಳನ್ನು ಸಾಕಷ್ಟು ಅವಧಿಗೆ 'ಸ್ಫೋಟಕ ಸುದ್ದಿ'ಯಾಗಿ ಬಿಂಬಿಸಿ ಅದನ್ನು ವಿವಾದವನ್ನಾಗಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಸಾರ್ವಜನಿಕ ಚರ್ಚೆಯ ಗುಣಮಟ್ಟ ಕುಸಿತದಲ್ಲಿ ತನ್ನ ಕೊಡುಗೆ ಇಲ್ಲ ಎಂದು ಯಾವ ಪಕ್ಷವೂ ಹೇಳಿಕೊಳ್ಳುವಂತಹ ಸ್ಥಿತಿ ಇಲ್ಲ ಎಂಬುದು ಇತ್ತೀಚಿನ ವಿದ್ಯಮಾನಗಳನ್ನು ನೋಡಿದರೆ ತಿಳಿಯುತ್ತದೆ. ಗುಜರಾತ್‍ನಲ್ಲಿ ಕಳೆದ ವಿಧಾನಸಭಾ ಚುನಾವಣೆ ವೇಳೆ ಬಹುತೇಕ ಪ್ರಚಾರವು ಪ್ರಮುಖ ಅಭ್ಯರ್ಥಿಗಳ ಪರಸ್ಪರ ವೈಯಕ್ತಿಕ ಆರೋಪ- ಪ್ರತ್ಯಾರೋಪಗಳಿಗೇ ಸೀಮಿತವಾಗಿತ್ತು. 2014ರ ನಂತರ ನಡೆದಿರುವ 15 ರಾಜ್ಯಗಳ ವಿಧಾನಸಭಾ ಚುನಾವಣೆ
ಗಳಲ್ಲಿ ಪ್ರತಿ ಚುನಾವಣೆಯಲ್ಲೂ ಮುಂಚೂಣಿ ರಾಜಕೀಯ ನಾಯಕರ ಮೇಲೆ ವೈಯಕ್ತಿಕ ದೂಷಣೆಗಳು ಕೇಳಿಬಂದು ಅವು ಸಾರ್ವಜನಿಕ ಹಾಗೂ ಮಾಧ್ಯಮಗಳ ಚರ್ಚೆಗೆ ಗ್ರಾಸ ಒದಗಿಸಿವೆ. 2014ರ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಂತೂ ಇದು ತಾರಕಕ್ಕೇರಿತು; ಆಗ ಪ್ರತಿಸ್ಪರ್ಧಿಗಳ ಮೇಲೆ ವೈಯಕ್ತಿಕ ನಿಂದನೆಯು ವಿವಾದಕ್ಕೆ ಕಾರಣವಾಗದ ದಿನವೇ ಇರಲಿಲ್ಲ ಎನ್ನಬಹುದು. ಹೀಗಾಗಿ ಮಾಧ್ಯಮಗಳಲ್ಲಿ ಕೂಡ ಅಭಿವೃದ್ಧಿ ಅಥವಾ ನೀತಿ ನಿರ್ಧಾರಕ ವಿಷಯಗಳಿಗಿಂತ ಹೆಚ್ಚಾಗಿ ಇಂತಹ ವೈಯಕ್ತಿಕ ದೂಷಣೆಗಳೇ ಹೆಡ್‍ಲೈನ್‍ಗಳಾಗಿ ರಾರಾಜಿಸಿದವು. ರಾಜಕೀಯ ನಾಯಕರ ಸಾರ್ವಜನಿಕ ರ‍್ಯಾಲಿಗಳು ಮತ್ತು ಸಣ್ಣಪುಟ್ಟ ಸಭೆಗಳ ಭಾಷಣಗಳಲ್ಲೂ ಇವೇ ಕೇಂದ್ರೀಕೃತ ವಿಷಯಗಳಾದವು.

ಹೀಗಾಗಿ, ಮಣಿಶಂಕರ್ ಅಯ್ಯರ್ ಅವರ ಈಗಿನ ಟೀಕೆಯನ್ನು ಒಂದು ಪ್ರತ್ಯೇಕ ಬಿಡಿ ಪ್ರಕರಣವೆಂದು ಈಗ ಪರಿಗಣಿಸಲಾಗದು. ಕಳೆದ ಕೆಲವು ವರ್ಷಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ನಾಯಕರೂ ಇಂತಹ ಮಾತುಗಳನ್ನು ಆಡಿರುವುದನ್ನು ಜನ ಕೇಳಿದ್ದಾರೆ. ಆದರೆ ಯಾವೊಂದು ರಾಜಕೀಯ ಪಕ್ಷವೂ ಹೀಗೆ ಮಾತನಾಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ, ಕಠಿಣ ಎಚ್ಚರಿಕೆ ನೀಡುವ ಪ್ರಯತ್ನ ಕೂಡ ಮಾಡಿಲ್ಲ. ರಾಜಕೀಯ ಪಕ್ಷಗಳ ಈ ನಿಷ್ಕ್ರಿಯ ಮೌನ ಹಾಗೂ ಕೆಲವೊಮ್ಮೆ ಹೀಗೆ ಟೀಕಿಸುವವರಿಗೆ ತೋರಿದ ಮೆಚ್ಚುಗೆಯು ಅಂತಹ ನಾಯಕರು ಇನ್ನಷ್ಟು ಕೀಳುಮಟ್ಟಕ್ಕೆ ಇಳಿಯಲು ಪ್ರಚೋದನೆ ಒದಗಿಸಿತು; ಅಷ್ಟೇ ಅಲ್ಲ, ಎದುರಾಳಿಗಳನ್ನು ಎದುರಿಸಲು ಇದೇ ಸೂಕ್ತ ಮಾರ್ಗ ಎಂಬ ಅಭಿಪ್ರಾಯವನ್ನೂ ಮೂಡಿಸಿತು. ಒಂದೊಮ್ಮೆ ಈ ಕುಸಿತಕ್ಕೆ ಪ್ರಜ್ಞಾಪೂರ್ವಕವಾಗಿ ತಡೆಯೊಡ್ಡದೇ ಇದ್ದರೆ ಈ ಧೋರಣೆಯು ಹಿಡಿತಕ್ಕೆ ಸಿಗದ ವೇಗದಲ್ಲಿ ಅಪಾಯಕಾರಿ ಮಟ್ಟಕ್ಕೆ ಇಳಿಯುವುದರಲ್ಲಿ ಅನುಮಾನವೇ ಇಲ್ಲ.

ಕಳೆದ ಹದಿನೈದು ವರ್ಷಗಳಲ್ಲಿ ಇಬ್ಬರು ಅಧಿಕಾರಾರೂಢ ಪ್ರಧಾನಿಗಳ ವಿರುದ್ಧ ಮಾಡಿದ ಟೀಕೆಯು ಹೇಗೆ ಟೀಕಾಕಾರರಿಗೇ ತಿರುಗುಬಾಣವಾಯಿತು ಎಂಬುದೂ ಇಲ್ಲಿ ಗಮನಾರ್ಹ. ಪ್ರತಿಯೊಂದು ರಾಜಕೀಯ ಪಕ್ಷದಲ್ಲೂ ಇಂತಹ ಪ್ರಕರಣಗಳನ್ನು ಹೆಕ್ಕಬಹುದಾದರೂ ಉದಾಹರಣೆಗಾಗಿ ಎರಡನ್ನು ಮಾತ್ರ ನೋಡೋಣ. ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಲ್.ಕೆ.ಅಡ್ವಾಣಿ ಅವರು ‘ಲೆಕ್ಕಕ್ಕಿಲ್ಲದ ಎದುರಾಳಿ’ ಎಂದು ಬಣ್ಣಿಸಿದ್ದು 2009ರ ಲೋಕಸಭಾ ಚುನಾವಣಾ ಪ್ರಚಾರದ ಪ್ರಮುಖ ತಿರುವಾಯಿತು. ಆದರೆ ಇದು ಪಕ್ಷಕ್ಕೆ ಚುನಾವಣೆಯಲ್ಲಿ ವ್ಯತಿರಿಕ್ತವಾಗಿ ಪರಿಣಮಿಸಿದ್ದರಿಂದ ನಂತರ ಬಿಜೆಪಿಯು ಈ ಹೇಳಿಕೆಗಾಗಿ ಪರಿತಪಿಸಬೇಕಾಯಿತು. ಇದಕ್ಕೆ ಮುನ್ನ ಪ್ರಧಾನಿಯಾಗಿದ್ದ ವಾಜಪೇಯಿ ಅವರು ಲೋಕಸಭಾ ಚರ್ಚೆಯ ವೇಳೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಭಾಷಣದ ಹೇಳಿಕೆಗಳನ್ನೇ ಎಳೆಎಳೆಯಾಗಿ ಉಲ್ಲೇಖಿಸಿ, ಸರ್ಕಾರದ ಮೇಲೆ ಪ್ರಯೋಗಿಸಿದ ಪದಗಳ ಬಗ್ಗೆ ವ್ಯಾಖ್ಯಾನಿಸುವಂತೆ ಸದನವನ್ನು ಕೋರಿದ್ದರು; ಸದನದ ಘನತೆಗೆ ಇವು ತಕ್ಕುದಾಗಿವೆಯೇ ಎಂದು ಕೇಳಿ ಆ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿದ್ದರು. ವಾಜಪೇಯಿಯವರ ಈ ನಡೆಯು ಪ್ರತಿಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವುದರ ಜತೆಗೆ ಅವರೆಡೆಗೆ ಗಣನೀಯವಾಗಿ ಸಾರ್ವಜನಿಕ ಅನುಕಂಪವನ್ನೂ ಮೂಡಿಸಿತ್ತು.

ವೈಯಕ್ತಿಕ ನಿಂದನೆಯ ಕೆಸರೆರಚಾಟವು ಕಂದಕದ ಹರವನ್ನು ಇನ್ನಷ್ಟು ತೀವ್ರಗೊಳಿಸುತ್ತದಷ್ಟೆ. ಸಂಯಮರಹಿತ ಭಾಷೆಯ ಬಳಕೆಗೆ ಕೊನೆ ಬೀಳಲೇಬೇಕು. ಹೀಗಾಗಿ ಮೊದಲಿಗೆ ರಾಜಕೀಯ ಪಕ್ಷಗಳ ನಾಯಕರು ಸ್ವತಃ ತಾವು ಎದುರಾಳಿಗಳನ್ನು ಟೀಕಿಸುವಾಗ ಕೀಳು ಭಾಷಾ ಪ್ರಯೋಗವನ್ನು ತೊರೆಯಬೇಕು. ಅಲ್ಲದೆ, ಹೀಗೆ ಟೀಕಿಸುವ ತಮ್ಮ ಪಕ್ಷದ ಸಹೋದ್ಯೋಗಿಗಳ ಮೇಲೆ ತಡಮಾಡದೇ ಕ್ರಮ ಕೈಗೊಳ್ಳಬೇಕು. ಹೀಗೆ ಮಾದರಿಯಾಗುವವರು 'ಮೇಲಿನ ಹಂತ'ದಲ್ಲಿ ಕಾಣದೇ ಹೋದರೆ ಈಗಿನ ಸಾರ್ವಜನಿಕ ಚರ್ಚೆಯ ವಿಷಯ ಹಾಗೂ ಗುಣಮಟ್ಟದಲ್ಲಿ ಬದಲಾವಣೆ ನಿರೀಕ್ಷಿಸುವ ಯಾವ ಭರವಸೆಗಳೂ ನಮಗೆ ಕಾಣುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT