ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಾಕೇಂದ್ರೆ, ನಾವು ಹಾಗೆ ಹೇಳ್ತಾ ಇದೀವಿ, ಅದಕ್ಕೆ!’

Last Updated 24 ಮೇ 2016, 19:30 IST
ಅಕ್ಷರ ಗಾತ್ರ

ತತ್ವಜ್ಞಾನಿ ಸೇಂಟ್ ಅಗಸ್ಟೈನ್ ಹೇಳುವ ಘಟನೆಯೊಂದನ್ನು ನೋಮ್ ಚಾಮ್‌ಸ್ಕಿ ಉಲ್ಲೇಖಿಸುತ್ತಾರೆ. ಗ್ರೀಕ್ ಚಕ್ರವರ್ತಿ ಅಲೆಕ್ಸಾಂಡರ್ ಕಡಲುಗಳ್ಳನೊಬ್ಬನನ್ನು ಕೇಳುತ್ತಾನೆ: ‘ಈ ಕಡಲಿನ ಮೇಲೆ ಅತ್ಯಾಚಾರ ಮಾಡಲು ನಿನಗೆಷ್ಟು ಧೈರ್ಯ?’ ಅದಕ್ಕೆ ಕಡಲುಗಳ್ಳನ ಉತ್ತರ: ‘ಇಡೀ ಜಗತ್ತಿನ ಮೇಲೆ ಅತ್ಯಾಚಾರ ಮಾಡಲು ನಿನಗೆಷ್ಟು ಧೈರ್ಯ? ನಾನು ಒಂದು ಪುಟ್ಟ ಹಡಗನ್ನಿಟ್ಟುಕೊಂಡು ಈ ಕೆಲಸ ಮಾಡಿದರೆ ನನ್ನನ್ನು ಕಡಲುಗಳ್ಳ ಅನ್ನುತ್ತಾರೆ; ಅದೇ ನೀನು ಒಂದು ದೊಡ್ಡ ಹಡಗುಪಡೆಯನ್ನೇ ಇಟ್ಟುಕೊಂಡು ಇದೇ ಕೆಲಸ ಮಾಡಿದರೆ ನಿನ್ನನ್ನು ಚಕ್ರವರ್ತಿ ಅನ್ನುತ್ತಾರೆ!’  

ಚಾಮ್‌ಸ್ಕಿಯವರ ಪ್ರಕಾರ, ‘ಶಾಂತಿಸ್ಥಾಪನೆ’ ‘ಭಯೋತ್ಪಾದನೆಯ ವಿರುದ್ಧ ಯುದ್ಧ’ ಮುಂತಾದ ಮುಖವಾಡಗಳನ್ನು ಬಳಸಿ ಅಮೆರಿಕ ಮಾಡುತ್ತಿರುವ ಕೆಲಸ ಕೂಡ ಇದೇ! ಇವತ್ತು ಜಗತ್ತಿನ ಅತ್ಯಂತ ಪ್ರಭಾವಶಾಲಿ ಚಿಂತಕರಾದ ಚಾಮ್‌ಸ್ಕಿಯವರ ಇತ್ತೀಚಿನ ಪುಸ್ತಕ ‘ಬಿಕಾಸ್ ವಿ ಸೇ ಸೋ’ (ಪ್ರ: ಹ್ಯಾಮಿಷ್ ಹ್ಯಾಮಿಲ್ಟನ್, ಪೆಂಗ್ವಿನ್), ಕಳೆದ ಐವತ್ತು ವರ್ಷಗಳಲ್ಲಿ ಜಗತ್ತಿನ ಮೇಲೆ ತನ್ನ ಹಿಡಿತ ಸಾಧಿಸಲು ಅಮೆರಿಕ ಮಾಡಿರುವ ಹೊಂಚು, ದಬ್ಬಾಳಿಕೆ, ಹುಸಿಪ್ರಚಾರಗಳ ಭಯಾನಕ ಮುಖಗಳನ್ನು ಅಂಕಿ-ಅಂಶ, ಆಧಾರಗಳ ಮೂಲಕ ತೋರಿಸಿಕೊಡುತ್ತದೆ.

ಉದಾಹರಣೆಗೆ, ಕಾಲಕಾಲಕ್ಕೆ ಅಮೆರಿಕ ಸೃಷ್ಟಿಸುವ ‘ಟೆರರಿಸ್ಟ್’ ಹಣೆಪಟ್ಟಿಗಳನ್ನು ನೋಡಿ. ಈಗ ನಾವು ಯಾರನ್ನು ‘ಟೆರರಿಸ್ಟ್’ ಎನ್ನುತ್ತೇವೋ ಅದು ಬಹುತೇಕವಾಗಿ ಅಮೆರಿಕ ಪ್ರಚಾರ ಮಾಡುತ್ತಿರುವುದರ ಗಿಳಿಪಾಠವೇ. ಅಮೆರಿಕ ತನ್ನ ‘ಟೆರರಿಸ್ಟ್ ಪಟ್ಟಿ’ಯಿಂದ ದಕ್ಷಿಣ ಆಫ್ರಿಕಾದ ಶ್ರೇಷ್ಠನಾಯಕರಾದ ನೆಲ್ಸನ್ ಮಂಡೇಲರ ಹೆಸರನ್ನು ಕೈಬಿಟ್ಟಿದ್ದು 2008ರಲ್ಲಿ! ಅಮೆರಿಕದ ಪಟ್ಟಿಯಲ್ಲಿದ್ದ ಜಗತ್ತಿನ ಅತ್ಯಂತ ತಂಟೆಕೋರ ಭಯೋತ್ಪಾದಕ ಗುಂಪುಗಳಲ್ಲಿ ಮಂಡೇಲರ ‘ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್’ ಕೂಡ ಇತ್ತು! ಆದರೆ 1982ರಲ್ಲಿ ಇರಾಕನ್ನು ‘ಟೆರರಿಸ್ಟರನ್ನು ಬೆಂಬಲಿಸುವ ದೇಶಗಳ ಪಟ್ಟಿ’ಯಿಂದ ಅಮೆರಿಕ ತೆಗೆಯಿತು. ಕಾರಣ, ಸದ್ದಾಂ ಹುಸೇನ್  ಇರಾನ್ ಮೇಲೆ ದಾಳಿ ಮಾಡಿದ ನಂತರ ರೇಗನ್ ಸರ್ಕಾರ ಸದ್ದಾಂಗೆ ನೆರವಾಗಬೇಕಾಗಿತ್ತು! ಆಮೇಲೆ ಸದ್ದಾಂ ಹುಸೇನ್ ಕತೆ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ.

ಒಂದು ನಿರ್ದಿಷ್ಟ ಸಿದ್ಧಾಂತವನ್ನು, ಅದರಲ್ಲೂ ಕಮ್ಯುನಿಸಮ್ಮನ್ನು ಒಪ್ಪದಿದ್ದಾಗ ಒಂದು ದೇಶ ಹೇಗೆ ವರ್ತಿಸಬಹುದು? ಆ ಸಿದ್ಧಾಂತದ ದೋಷಗಳನ್ನು ಎಲ್ಲರಿಗೆ ಮನದಟ್ಟು ಮಾಡಿಕೊಡಬಹುದು; ತನ್ನ ದೇಶ ಆ ಸಿದ್ಧಾಂತದತ್ತ ವಾಲದಂತೆ ಮಾಡಬಹುದು… ಇತ್ಯಾದಿ. ಆದರೆ ಅಮೆರಿಕ ಹಾಗಲ್ಲ. ಅದು ಮಾನವ ಹಕ್ಕುಗಳ ರಕ್ಷಣೆಯ ವಕ್ತಾರನಂತೆ ಯಾವುದೋ ನೆವದಲ್ಲಿ ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ ಪ್ರವೇಶ ಮಾಡಲೆತ್ನಿಸುತ್ತದೆ. ತನ್ನ ಪಕ್ಕದ ಕ್ಯೂಬಾವನ್ನು ತೆಕ್ಕೆಗೆ ತೆಗೆದುಕೊಳ್ಳಲು, ಕ್ಯೂಬಾದ ನಾಯಕ ಫಿಡೆಲ್ ಕ್ಯಾಸ್ಟ್ರೋರನ್ನು ಮುಗಿಸಲು ಅಮೆರಿಕದ ಸಿಐಎ ಮಾಡಿರುವ ಹೊಂಚುಗಳು ಒಂದೆರಡಲ್ಲ.

ಗ್ವಾಟೆಮಾಲಾದಲ್ಲಿ 1954ರಿಂದ 1990ರವರೆಗೆ ಎರಡು ಲಕ್ಷ ಜನರನ್ನು ಅಮೆರಿಕದ ಬೆಂಬಲದಿಂದ ಕೊಲ್ಲಲಾಗಿದೆ; ಅದರಲ್ಲಿ ಎಂಬತ್ತುಭಾಗ ಜನ ಅಲ್ಲಿನ ಮೂಲನಿವಾಸಿಗಳು. ಇದಕ್ಕೆ ಅಮೆರಿಕ ಕೊಡುವ ಕಾರಣ ಏನು ಗೊತ್ತೆ? ‘ಗ್ವಾಟೆಮಾಲ ಲ್ಯಾಟಿನ್ ಅಮೆರಿಕದಲ್ಲಿ ರಷ್ಯಾ ಪ್ರವೇಶಕ್ಕಿರುವ ರಹದಾರಿ’. ಆದರೆ ನಿಜವಾದ ಕಾರಣ ಬೇರೆಯೇ ಇದೆ: ಗ್ವಾಟೆಮಾಲದಲ್ಲೇನಾದರೂ ರೈತರೇ ಪ್ರಧಾನವಾಗಿರುವ ಪ್ರಜಾಪ್ರಭುತ್ವ ಸ್ಥಾಪನೆಯಾದರೆ ತಮ್ಮ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎಂಬ ಅಮೆರಿಕದ ಬಂಡವಾಳ ಹೂಡಿಕೆದಾರರ ಭಯವೇ ಅಮೆರಿಕದ ದಾಳಿಗಳಿಗೆ ಕಾರಣ. ಇನ್ನು ನಿಕಾರಾಗುವಾ ದೇಶದ ಕತೆ ಕೇಳಿ: ನಿಕಾರಾಗುವಾಕ್ಕೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸೇನೆಯಿರುವುದರಿಂದ ರೇಗನ್ ಸರ್ಕಾರ ಬಲಪಂಥೀಯ ಗೆರಿಲ್ಲಾಗಳಿಗೆ ಕುಮ್ಮಕ್ಕು ಕೊಟ್ಟು ನಿಕಾರಾಗುವಾ ಸರ್ಕಾರಕ್ಕೆ ಕಾಟ ಕೊಡತೊಡಗಿತು. ಅಂತರರಾಷ್ಟ್ರೀಯ ನ್ಯಾಯಾಲಯ ನಿಕಾರಾಗುವಾಕ್ಕೆ ನಷ್ಟ ಪರಿಹಾರ ಕೊಡಬೇಕೆಂದು ತೀರ್ಪು ಕೊಟ್ಟರೂ ಅಮೆರಿಕ ಕೊಟ್ಟಿಲ್ಲ.

ಬಿನ್ ಲಾಡೆನ್‌ನನ್ನು ಹಿಡಿಯಲು ಅಮೆರಿಕ ಮಾಡಿದ ಕಾರ್ಯಾಚರಣೆಗೂ ಮೊದಲು ಅದು ಮಾಡಿದ ‘ಹೆಲ್ತ್ ಕ್ಯಾಂಪ್’ ವಿಫಲನಾಟಕ ಅನೇಕರಿಗೆ ಗೊತ್ತಿಲ್ಲ. ಪಾಕಿಸ್ತಾನದಲ್ಲಿ ಬಿನ್ ಲಾಡೆನ್‌ ಇರುವನೆಂದು ಊಹಿಸಲಾದ ಊರಿನಲ್ಲಿ ಒಂದು ದಿನ ಅಮೆರಿಕನ್ ಪ್ರಾಯೋಜಿತ ‘ಪೋಲಿಯೊ ವ್ಯಾಕ್ಸಿನೇಷನ್ ಕ್ಯಾಂಪ್’ ನಡೆಯಿತು. ಅಲ್ಲಿ ಲಾಡೆನ್‌ ಇಲ್ಲವೆಂದು ಗೊತ್ತಾದ ತಕ್ಷಣ ಕ್ಯಾಂಪನ್ನು ಅರ್ಧಕ್ಕೇ ಬಿಟ್ಟು, ಮತ್ತೊಂದು ಊರಿನಲ್ಲಿ ಹೆಲ್ತ್ ಕ್ಯಾಂಪ್ ಏರ್ಪಡಿಸಲಾಯಿತು.

ಮುಂದೆ ಇದೆಲ್ಲ ಬಯಲಾದ ಮೇಲೆ, ಪಾಕಿಸ್ತಾನದಲ್ಲಿ ಪೋಲಿಯೊ ಲಸಿಕೆ ಕಾರ್ಯಕ್ರಮಕ್ಕೇ ಕುತ್ತು ಬಂತು. ಅಲ್ಲಿನ ಜನ ಪೋಲಿಯೊ ಕಾರ್ಯಕರ್ತರನ್ನೆಲ್ಲ ಇವರು ಅಮೆರಿಕದ ಕಡೆಯವರಿರಬೇಕೆಂದು ಕೊಲ್ಲತೊಡಗಿದರು. ವಿಶ್ವಸಂಸ್ಥೆ ಪೋಲಿಯೊ ಲಸಿಕೆ ಕಾರ್ಯಕ್ರಮವನ್ನೇ ಹಿಂತೆಗೆದುಕೊಳ್ಳಬೇಕಾಯಿತು. ಇದರ ಪರಿಣಾಮ ಭವಿಷ್ಯದಲ್ಲಿ ಎಷ್ಟು ಭೀಕರವಾಗಿರಲಿದೆ ಎಂಬ ಬಗ್ಗೆ ಕೊಲಂಬಿಯಾದ ಆರೋಗ್ಯವಿಜ್ಞಾನಿ ಲೆಸ್ಲಿರಾಬರ್ಟ್ಸ್ ಹೇಳುತ್ತಾರೆ. ಅವರ ಪ್ರಕಾರ, ಅಮೆರಿಕದ ಈ ನಾಟಕದಿಂದಾಗಿ ಮುಂದೆ ಸುಮಾರು ಒಂದು ಲಕ್ಷ ಪಾಕಿಸ್ತಾನಿ ಮಕ್ಕಳು ಪೋಲಿಯೊಗೆ ತುತ್ತಾಗಬಹುದು; ಆಗ ಜನ ‘ಅಮೆರಿಕ ಬಿನ್
ಲಾಡೆನ್‌ನನ್ನು ಹಿಡಿಯಬೇಕೆಂದು ಹೊರಟು ಮಾಡಿದ ಹುಚ್ಚಾಟದಿಂದ ಈ ಮಕ್ಕಳು ಪೋಲಿಯೊಗೆ ತುತ್ತಾದವು’ ಎನ್ನಬಹುದು. 

ಅಮೆರಿಕದ ಪ್ರಕಾರ, ತಾನು ಮಾಡುವ ಯುದ್ಧಗಳೆಲ್ಲ ಭಯೋತ್ಪಾದನೆಯ ವಿರುದ್ಧ ಹಾಗೂ ಶಾಂತಿಸ್ಥಾಪನೆಗಾಗಿ! ಆದರೆ ಚಾಮ್‌ಸ್ಕಿ ಪ್ರಕಾರ ‘ನ್ಯೂಕ್ಲಿಯರ್ ನಾನ್-ಪ್ರೊಲಿಫಿರೇಷನ್ ಟ್ರೀಟಿ’ಯನ್ನು ನೇರವಾಗಿ ಉಲ್ಲಂಘಿಸುತ್ತಿರುವ ದೇಶವೆಂದರೆ ಅಮೆರಿಕ. ಇನ್ನು ಗಾಜಾದಲ್ಲಿ ಅಮೆರಿಕ, ಇಸ್ರೇಲ್ ಬೆನ್ನಿಗೆ ನಿಂತು ಮಾಡುತ್ತಿರುವ ಕೆಲಸ ಗಾಜಾ ಪ್ರದೇಶವನ್ನೇ ಜೈಲನ್ನಾಗಿಸಿಬಿಟ್ಟಿದೆ. ಭಯೋತ್ಪಾದಕರು ಎಲ್ಲಿದ್ದಾರೆ ಎಂದು ಮನಬಂದಂತೆ ಊಹಿಸಿ, ಅದು ಜಗತ್ತಿನಾದ್ಯಂತ ಮಾಡುತ್ತಿರುವ ರಿಮೋಟ್ ಕಂಟ್ರೋಲ್ಡ್ ‘ಡ್ರೋನ್’ ದಾಳಿ ನವಭಯೋತ್ಪಾದನೆಯನ್ನು ಹುಟ್ಟು ಹಾಕುತ್ತಿದೆ. ಮೂರು ವರ್ಷದ ಕೆಳಗೆ ಭಯೋತ್ಪಾದಕ ಗುಂಪೊಂದು ಅಮೆರಿಕದ ಬಾಸ್ಟನ್ ಮೇಲೆ ದಾಳಿ ಮಾಡಿತು. ಆನಂತರ ಯೆಮನ್‌ನ  ಹಳ್ಳಿಯೊಂದರಲ್ಲಿ ಅಮೆರಿಕದ ‘ಡ್ರೋನ್’ ದಾಳಿ ನಡೆಯಿತು.

ಈ ಕುರಿತು ಯೆಮೆನ್‌ನ ಪತ್ರಕರ್ತನೊಬ್ಬ ಅಮೆರಿಕದ ಸೆನೆಟ್ ಕಮಿಟಿಯ ಎದುರು ಕೊಟ್ಟ ಸಾಕ್ಷ್ಯ ಇದು: ‘ನಮ್ಮ ಹಳ್ಳಿ ಡ್ರೋನ್ ದಾಳಿಗೆ ತುತ್ತಾದ ಮೇಲೆ ಅಲ್ಲಿಯ ಜನರೆಲ್ಲ ಅಮೆರಿಕದ ವಿರೋಧಿಗಳಾದರು. ಆ ತನಕ ಜಿಹಾದಿ ಪ್ರಚಾರಕರ ಅಮೆರಿಕ ವಿರೋಧಿ ಪ್ರಚಾರಗಳಿಗೆ ಕಿವಿಗೊಡದೆ, ಅಮೆರಿಕವನ್ನು ಮೆಚ್ಚುತ್ತಿದ್ದ ನಮ್ಮೂರ ಜನ ಈ ಡ್ರೋನ್ ದಾಳಿಯಿಂದಾಗಿ ಅಮೆರಿಕದ ವಿರೋಧಿಗಳಾದರು’.

ಅಮೆರಿಕನ್ ಸರ್ಕಾರದ ಚಾಳಿಗಳು ಅಲ್ಲಿನ ಬಹುರಾಷ್ಟ್ರೀಯ ಕಂಪೆನಿಗಳ ಧೋರಣೆಯಲ್ಲೂ ಕಾಣಿಸಿಕೊಳ್ಳುತ್ತವೆ. 2012ರಲ್ಲಿ ಗ್ರೀಸ್ ಒಲಿಂಪಿಕ್ಸ್ ನಡೆಯುತ್ತಿದ್ದಾಗ, ‘ಇಂಟರ್‌ನ್ಯಾಷನಲ್ ಒಲಿಂಪಿಕ್ ಕಮಿಟಿ’ ಅಮೆರಿಕದ ‘ಡೋ’ ಕೆಮಿಕಲ್ ಕಂಪೆನಿಯನ್ನು ಒಲಿಂಪಿಕ್ಸ್ ವಿಶ್ವಪ್ರಾಯೋಜಕನಾಗಿ ಒಪ್ಪಿಕೊಂಡಿತು. ‘ಡೋ’ ಕಂಪೆನಿಯ ಪ್ರಾಯೋಜಕತ್ವವನ್ನು ವಿಯೆಟ್ನಾಂ ಸರ್ಕಾರ ಪ್ರತಿಭಟಿಸಿತು. ಮನಮೋಹನ ಸಿಂಗ್ ನೇತೃತ್ವದ ಭಾರತ ಸರ್ಕಾರ, ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಷನ್ ಹಾಗೂ ಭೋಪಾಲಿನ ಯೂನಿಯನ್ ಕಾರ್ಬೈಡ್ ವಿಷಾನಿಲ ಸೋರಿಕೆಯಿಂದ ಸಂತ್ರಸ್ತರಾದವರ ಸಂಘ ಕೂಡ ವಿಯೆಟ್ನಾಂ ಮಾಡಿದ ಪ್ರತಿಭಟನೆಯನ್ನು ಬೆಂಬಲಿಸಿದವು. 

ಈ ಪ್ರತಿಭಟನೆಯ ಹಿಂದೆ ಮಹತ್ತರ ಕಾರಣವೊಂದಿದೆ. 1961ರಿಂದ ಹಲವು ವರ್ಷ ಕಾಲ ದಕ್ಷಿಣ ವಿಯೆಟ್ನಾಮಿನ ಕಾಡುಗಳನ್ನು ಅಮೆರಿಕದ ಸೈನಿಕರು ನಾಶ ಮಾಡುತ್ತಿದ್ದರು; ಅದಕ್ಕೆ ‘ಡೋ’ ಕಂಪೆನಿ ವಿಷಮಯ ರಾಸಾಯನಿಕಗಳನ್ನು ಒದಗಿಸಿತ್ತು. ಇದರಿಂದ ವಿಯೆಟ್ನಾಮಿನ ಲಕ್ಷಾಂತರ ಜನ ಹಾಗೂ ಅಮೆರಿಕದ ಸೈನಿಕರು ಕೂಡ ಅಪಾಯಕ್ಕೆ ತುತ್ತಾದರು. ಈಗ ಹುಟ್ಟುವ ಮಕ್ಕಳ ಮೇಲೂ ಅದರ ದುಷ್ಪರಿಣಾಮ ಆಗುತ್ತಿದೆ.  ಸರಿ, ಈ ‘ಡೋ’ ಕಂಪೆನಿಗೂ ಇಂಡಿಯಾಕ್ಕೂ ಸಂಬಂಧವೇನು? ‘ಡೋ’ ಭೋಪಾಲ್ ದುರಂತಕ್ಕೆ ಕಾರಣವಾಗಿದ್ದ ಯೂನಿಯನ್ ಕಾರ್ಬೈಡ್ ಕಂಪೆನಿಯನ್ನು ಕೆಲ ವರ್ಷಗಳ ಕೆಳಗೆ ಕೊಂಡುಕೊಂಡಿತು.

ಅಷ್ಟೇ ಅಲ್ಲ, ವಿಕಿಲೀಕ್ಸ್ ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ, 2012ರ ಫೆಬ್ರುವರಿಯಲ್ಲಿ ಡೋ ಕಂಪೆನಿ ‘ಸ್ಟ್ರಾಟ್ ಫರ್’ ಎಂಬ ಖಾಸಗಿ ಡಿಟೆಕ್ಟೀವ್ ಏಜೆನ್ಸಿಯನ್ನು ನೇಮಿಸಿಕೊಂಡಿತು. ಈ ಡಿಟೆಕ್ಟೀವ್ ಏಜನ್ಸಿಯ ಕೆಲಸ: ಭೋಪಾಲ್ ವಿಷಾನಿಲ ಸೋರಿಕೆಯಿಂದ ಸಂತ್ರಸ್ತರಾದವರಿಗೆ ಪರಿಹಾರ ಕೊಡಿಸಲು ಹಾಗೂ ಯೂನಿಯನ್ ಕಾರ್ಬೈಡ್ ಕಂಪೆನಿಯ ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಹೋರಾಟ ನಡೆಸುತ್ತಿರುವ ಆ್ಯಕ್ಟಿವಿಸ್ಟ್‌ಗಳ ಮೇಲೆ ‘ನಿಗಾ’ ಇಡುವುದು’. ಅಮೆರಿಕದ ಬಹುರಾಷ್ಟ್ರೀಯ ಕಂಪೆನಿಗಳು ಕೆಲಸ ಮಾಡುವ ಕುಟಿಲ ರೀತಿಯನ್ನು, ಅಮೆರಿಕನ್ ಕಾರ್ಪೊರೇಟ್ ವ್ಯವಸ್ಥೆ ಯಾವ ಮಟ್ಟಕ್ಕಾದರೂ ಇಳಿಯಬಹುದು ಎನ್ನುವುದನ್ನು ಇದು ಸೂಚಿಸುತ್ತದೆ. 

ಜಗತ್ತಿನ ದೊಡ್ಡ ಪಿಡುಗಾಗಿರುವ ಶಿಕ್ಷಣದ ಖಾಸಗೀಕರಣ-ವ್ಯಾಪಾರೀಕರಣಗಳ ಹಿಂದೆ ಅಮೆರಿಕದ ಕಾರ್ಪೊರೇಟ್ ಹಾಗೂ ಕ್ಯಾಪಿಟಲಿಸ್ಟ್ ಸಂಸ್ಥೆಗಳ ಕುಟಿಲ ಚಿಂತನೆ-ಯೋಜನೆಯೂ ಕೆಲಸ ಮಾಡಿರುವುದನ್ನೂ ಚಾಮ್‌ಸ್ಕಿ ಚರ್ಚಿಸುತ್ತಾರೆ. ವಿಶ್ವವಿದ್ಯಾಲಯಗಳಲ್ಲಿ ಅರಳುವ ಸ್ವತಂತ್ರಚಿಂತನೆಯನ್ನು ಕೊಂದು ವ್ಯವಸ್ಥೆಯ ಗುಲಾಮರನ್ನು ತಯಾರಿಸುವುದು ಶಿಕ್ಷಣದ ವ್ಯಾಪಾರೀಕರಣದ ಉದ್ದೇಶ. ಈಗ ಇಂಡಿಯಾದಲ್ಲಿ ಬಲಪಂಥೀಯರು ವಿಶ್ವವಿದ್ಯಾಲಯಗಳ ಮೇಲೆ ಏಕೆ ಎಗರಾಡುತ್ತಿದ್ದಾರೆ ಎಂಬುದರ ಒಂದು ಬೇರು ಅಮೆರಿಕದ ಶಿಕ್ಷಣದ ವ್ಯಾಪಾರೀಕರಣದ ತಾತ್ವಿಕತೆಯಲ್ಲೂ ಇದೆ.

ಇನ್ನು ಗ್ಲೋಬಲ್ ವಾರ್ಮಿಂಗ್ ಬಗ್ಗೆ ಇಡೀ ಜಗತ್ತಿನ ವಿಜ್ಞಾನಿಗಳು ಹೆಚ್ಚುಕಡಿಮೆ ಏಕಾಭಿಪ್ರಾಯಕ್ಕೆ ಬಂದಿದ್ದಾರೆ. ಆದರೆ ಅಮೆರಿಕ ಮಾತ್ರ ತನಗೆ ಸೂಕ್ತವಾದ ಹುಸಿವಾದವನ್ನೇ ಬಿತ್ತುತ್ತಿದೆ. ಅಮೆರಿಕ ಮತ್ತು ಕೆನಡಾ ಜಂಟಿಯಾಗಿ ನಡೆಸುತ್ತಿರುವ ತೈಲಸಂಬಂಧಿ ಪ್ರಯೋಗಗಳು ಜಗತ್ತಿನ ತಾಪಮಾನ ಹೆಚ್ಚಿಸುತ್ತಿವೆ ಎಂದು ಸಂಶೋಧಕರು ಖಚಿತವಾಗಿ ಹೇಳುತ್ತಿದ್ದಾರೆ. ಜಗತ್ತು ಸುಟ್ಟು ಹೋದರೇನಂತೆ? ತನ್ನ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳಲು ಅಮೆರಿಕ ಯಾವ ವಾದವನ್ನಾದರೂ ಹೂಡಬಲ್ಲದು.

ಅಮೆರಿಕ ಈಗ  ಕಾರ್ಪೊರೇಟ್ ಸಂಸ್ಥೆಗಳ ಜೊತೆಗೂಡಿ ‘ಹವಾಮಾನ ಬದಲಾವಣೆ’ಯ ಬಗ್ಗೆ ವಿಜ್ಞಾನಿಗಳು ಕೊಡುತ್ತಿರುವ ಎಚ್ಚರ ಉತ್ಪ್ರೇಕ್ಷೆಯದು ಎಂಬ ವಾದವೊಂದನ್ನು ತಯಾರಿಸತೊಡಗಿದೆ. ಹೀಗೆ ಅಮೆರಿಕದ ‘ನಾವು ಹೇಳ್ತಾ ಇದೀವಿ, ಅದಕ್ಕೇ ಅದು ನಿಜ’ ಎಂಬ ಠೇಂಕಾರ ಎಲ್ಲ ರಂಗಗಳನ್ನೂ ಕಲುಷಿತಗೊಳಿಸತೊಡಗಿದೆ. ಅದರ ಜೊತೆಗೇ, ಜಗತ್ತಿಗೆಲ್ಲ ನ್ಯಾಯದ ಪಾಠ ಹೇಳುವ ಅಮೆರಿಕದ ಸಾಮಾಜಿಕ ನ್ಯಾಯದ ಸಾಧನೆಯ ಮಟ್ಟವೇ ಕಳಪೆಯಾಗಿದೆ.

ಚಾಮ್‌ಸ್ಕಿಯವರ ‘ಬಿಕಾಸ್ ವಿ ಸೇ ಸೋ’ ಓದುತ್ತಿದ್ದರೆ, ಯಾವುದೇ ದೇಶದ ಸರ್ಕಾರಗಳು, ವಕ್ತಾರರು ಆಡುವ ಮಾತುಗಳ ಹಿಂದಿರುವ ಉದ್ದೇಶಗಳು, ಪ್ರತಿದಿನದ ಸುದ್ದಿಗಳ ಹಿಂದಿರುವ ಜಾಗತಿಕ ರಾಜಕಾರಣ, ಯಜಮಾನಿ ಶಕ್ತಿಗಳ ನಡೆನುಡಿಗಳಲ್ಲಿ ಇರುವ ಅಂತರ… ಇವೆಲ್ಲವನ್ನೂ ಹೇಗೆ ಅರಿಯಬೇಕು ಎಂಬುದು ಗೊತ್ತಾಗುತ್ತದೆ. ಅಮೆರಿಕಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಅದು ‘ಮಾನವಕುಲದ ಅಭಿಪ್ರಾಯಗಳಿಗೆ ಸಭ್ಯ ಗೌರವ ಕೊಡುವ’ ಕಾಳಜಿ ವ್ಯಕ್ತಪಡಿಸಿದ್ದನ್ನು ಚಾಮ್‌ಸ್ಕಿ ನೆನಪಿಸುತ್ತಾರೆ. 

ಒಂದು ದೇಶ ಸ್ವಾತಂತ್ರ್ಯ ಸಿಕ್ಕ ಗಳಿಗೆಯಲ್ಲಿ ತೋರುವ ವಿನಯಕ್ಕೂ, ತಾನು ಸೂಪರ್ ಪವರ್ ಎಂದು ಭ್ರಮಿಸಿದ ಕಾಲದಲ್ಲಿ
ತೋರುತ್ತಿರುವ ದುರಹಂಕಾರಕ್ಕೂ ಇರುವ ಅಂತರ ನಮ್ಮಲ್ಲಿ ದುಗುಡ ಹುಟ್ಟಿಸುತ್ತದೆ; ಈ ದುರಹಂಕಾರ ಜಗತ್ತಿಗೆ ತಂದಿರುವ, ತರಲಿರುವ ಅಪಾಯಗಳನ್ನು ನೆನೆದರೆ ದಿಗ್ಭ್ರಮೆಯಾಗುತ್ತದೆ.

ಕೊನೆ ಟಿಪ್ಪಣಿ: ಜಗದ ಕನ್ನಡಿಯಲ್ಲಿ ಅಮೆರಿಕ!  
2013ನೆಯ ಇಸವಿಯ ಕೊನೆಗೆ ವಿನ್/ಗ್ಯಾಲಪ್ ಇಂಟರ್‌ನ್ಯಾಷನಲ್ ನಡೆಸಿದ ಸಮೀಕ್ಷೆಯೊಂದನ್ನು ಬಿಬಿಸಿ ಬಿತ್ತರಿಸಿತು.  ‘ಈಗ ಜಗತ್ತಿನ ಶಾಂತಿಗೆ ಅತ್ಯಂತ ಅಪಾಯಕಾರಿ ದೇಶ ಯಾವುದು?’ ಎಂದು ಪ್ರಶ್ನಿಸಿದ್ದ ಈ ಸಮೀಕ್ಷೆಯಲ್ಲಿ ಅಮೆರಿಕ ‘ಚಾಂಪಿಯನ್’ ಸ್ಥಾನ ಪಡೆಯಿತು! ಚಾಮ್‌ಸ್ಕಿ ಗುರುತಿಸುವಂತೆ, ಎರಡನೆಯ ಸ್ಥಾನದಲ್ಲಿದ್ದ ಪಾಕಿಸ್ತಾನಕ್ಕಿಂತ ಮೂರು ಪಟ್ಟು ಹೆಚ್ಚು ವೋಟುಗಳನ್ನು ಮೊದಲ ಸ್ಥಾನದಲ್ಲಿರುವ ಅಮೆರಿಕ ಪಡೆದಿತ್ತು!
ಅಮೆರಿಕ ತನ್ನನ್ನು ತಾನು ‘ಜಗದೇಕವೀರ’ ‘ಜಗದೇಕರಕ್ಷಕ’ ಎಂಬಂತೆ ಬಿಂಬಿಸಿಕೊಳ್ಳಲು ಏನೇ ಸರ್ಕಸ್ ಮಾಡುತ್ತಿರಲಿ, ಅದರ ಬಗ್ಗೆ ಜಗತ್ತಿನ ಜನ ಏನು ಹೇಳುತ್ತಿದ್ದಾರೆಂಬುದು ತಿಳಿಯಿತೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT