ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜದ್ರೋಹ’ ಎಂಬ ಬ್ರಿಟಿಷ್ ಪಾಪದ ಕೂಸು

Last Updated 13 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

‘ನಾನು ನನ್ನ ಭಾಷಣದಲ್ಲಿ ಬಳಸಿದ್ದು ‘ಇಂಪೀರಿಯಲ್’ ಎಂಬ ಪದವನ್ನೋ, ಅಥವಾ ಬೇರೆ ಇನ್ಯಾವುದಾದರೂ ಪದವನ್ನೋ?’ ಇಪ್ಪತ್ತೆಂಟರ ತರುಣ ರಾಮಮನೋಹರ ಲೋಹಿಯಾ ಕೇಳಿದ ಪ್ರಶ್ನೆಗೆ ಸರ್ಕಾರಿ ವರದಿಗಾರ ತಬ್ಬಿಬ್ಬಾದ. ‘ಅದನ್ನು ಅವನು ಹೇಗೆ ಹುಡುಕಲು ಸಾಧ್ಯ?’ ಎಂದು ಮ್ಯಾಜಿಸ್ಟ್ರೇಟರು ಕೇಳಿದರು.

ಲೋಹಿಯಾ: ಸಾಧ್ಯವಿದೆ. ಶಾರ್ಟ್ ಹ್ಯಾಂಡ್‌ನಲ್ಲಿ ಬರೆದುಕೊಳ್ಳುವವರಿಗೆ ‘ಮಾರಲ್’ ಹಾಗೂ ಇಂಪೀರಿಯಲ್ ಎರಡೂ ಒಂದೇ ರೀತಿ ಕೇಳಿಸುವ ಸಾಧ್ಯತೆಯಿರುತ್ತದೆ.
ಮ್ಯಾಜಿಸ್ಟ್ರೇಟ್:  (ಸರ್ಕಾರಿ ವರದಿಗಾರನಿಗೆ) ನೋಡ್ರೀ, ಆ ಪದ ‘ಮಾರಲ್’ ಅಂತ ಇರಬಹುದು.
ಸರ್ಕಾರಿ ವರದಿಗಾರ: ‘ಮಾರಲ್’ ಇರಬಹುದು ಅನ್ನಿಸುತ್ತೆ…

ಇದು ಲೋಹಿಯಾ ಮೇಲೆ ‘ಸೆಡಿಷನ್’ (ರಾಜದ್ರೋಹ ಅಥವಾ ರಾಜ್ಯದ್ರೋಹ) ಕೇಸ್ ಹಾಕಿದ ಸಂದರ್ಭದಲ್ಲಿ ಕಲ್ಕತ್ತಾ ಕೋರ್ಟಿನಲ್ಲಿ ನಡೆದ ಮಾತುಕತೆ. ಈ ವಿಚಾರಣೆಗೆ ಕಾರಣವಾಗಿದ್ದ ತಮ್ಮ ಭಾಷಣದಲ್ಲಿ ಲೋಹಿಯಾ ಬ್ರಿಟನ್ ವಿರುದ್ಧ ಅಹಿಂಸಾತ್ಮಕ ಪ್ರತಿಭಟನೆಯನ್ನು ಒತ್ತಿ ಹೇಳಿದ್ದರು. ಆದರೆ ಸರ್ಕಾರಿ ವರದಿಯಲ್ಲಿ ‘ಅಹಿಂಸೆ’ ಎಂಬ ಪದದ ಪ್ರಸ್ತಾಪವೇ ಇರಲಿಲ್ಲ. ಕೇಸ್ ದಾಖಲಿಸಿದ ಇನ್ಸ್ ಪೆಕ್ಟರನ್ನು ಲೋಹಿಯಾ ವಿಚಾರಣೆಗೊಳಪಡಿಸಿದರು. ಆತ ‘ಬಂಗಾಳ ಸರ್ಕಾರದ ಆಜ್ಞೆಯಂತೆ ಈ ಕೆಲಸ ಮಾಡಿದ್ದೇನೆ’ ಎಂದ. 

ಲೋಹಿಯಾ ಹೇಳಿದರು: ‘ನಮ್ಮ ಭಾಷಣಗಳು ಸಾಮಾನ್ಯವಾಗಿ ಬೇಸಿಗೆಯಲ್ಲಿ ಹಾಗೂ ಚಳಿಗಾಲದಲ್ಲಿ ಹೆಚ್ಚು ಇರುತ್ತವೆ. ಆದರೆ ‘ರಾಜದ್ರೋಹ’ ಎನ್ನುವುದು ‘ಋತುಆಧಾರಿತ’ ಚಟುವಟಿಕೆಯಾಗಿರುವಂತೆ ಕಾಣುತ್ತಿದೆ! ಮಳೆಗಾಲದಲ್ಲಿ ಸರ್ಕಾರ ಹೆಚ್ಚಿನ ಸಂಖ್ಯೆಯ ರಾಜದ್ರೋಹದ ಕೇಸುಗಳನ್ನು ಹಾಕುತ್ತದೆ. ಒಂದೋ, ಈಗ ಜನರಲ್ಲಿ ರಾಜದ್ರೋಹದ ಮನೋಭಾವ ಹೆಚ್ಚಾಗಿರಬೇಕು ಅಥವಾ ಸರ್ಕಾರದ ಪಾಲಿಸಿ ಬದಲಾಗಿರಬೇಕು.

ಪ್ರಧಾನಮಂತ್ರಿ ಅಥವಾ ಗೃಹಮಂತ್ರಿ ಇಲ್ಲಿ ಬಂದು ಈ ಕುರಿತು ನಮಗೆ ಜ್ಞಾನೋದಯವನ್ನುಂಟು ಮಾಡಬೇಕು…  ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಯಾಕೆ ರಾಜದ್ರೋಹದ ಕೇಸುಗಳಿರಲಿಲ್ಲ? ಈಗ (ಜುಲೈ ತಿಂಗಳಲ್ಲಿ) ನಿಮ್ಮ ಎದುರು ಇಷ್ಟೊಂದು ರಾಜದ್ರೋಹದ ಕೇಸುಗಳನ್ನು ದಾಖಲಿಸಿರುವುದು ಯಾಕೆ?’

ಮ್ಯಾಜಿಸ್ಟ್ರೇಟರು ಪ್ರಕರಣವನ್ನು ಮುಂದೂಡಿದರು. ವಿಚಾರಣೆ ಮುಂದುವರಿಯಿತು. ಆಗಸ್ಟ್ 15ರಂದು ಮ್ಯಾಜಿಸ್ಟ್ರೇಟರು ಲೋಹಿಯಾರನ್ನು ಖುಲಾಸೆ ಮಾಡಿದರು; ವಕೀಲರನ್ನು ನೇಮಿಸಿಕೊಳ್ಳದೆ ತಮ್ಮ ಪರವಾಗಿ ತಾವೇ ವಾದ ಮಾಡುತ್ತಿದ್ದ ಲೋಹಿಯಾರ ವಾದಸಾಮರ್ಥ್ಯವನ್ನು ಮೆಚ್ಚಿ, ‘ನೀವು ಬ್ಯಾರಿಸ್ಟರ್ ಆಗಿದ್ದರೆ ತುಂಬಾ ಯಶಸ್ವಿಯಾಗಿರುತ್ತಿದ್ದಿರಿ’ ಎಂದರು.

1939-40ರ ಈ ‘ರಾಜದ್ರೋಹ’ ಪ್ರಕರಣವನ್ನು ಪ್ರಸ್ತಾಪಿಸಲು ಕಾರಣವಿದೆ. ಅವತ್ತು ಲೋಹಿಯಾ ವಾದಿಸುತ್ತಿದ್ದುದು ಬ್ರಿಟಿಷ್ ಸರ್ಕಾರ ತನ್ನ ರಕ್ಷಣೆಗಾಗಿ ಮಾಡಿಕೊಂಡ ‘ರಾಜದ್ರೋಹ’ದ ಕಾನೂನಿನ ಅಸಂಬದ್ಧತೆಯ ಬಗ್ಗೆ; ಅದು ಇವತ್ತಿಗೂ ಹಾಗೇ ಇದೆ. ಆಗ ಲೋಹಿಯಾ ಮಹಾಯುದ್ಧವನ್ನು ವಿರೋಧಿಸಿ ಮಾತಾಡಿದ್ದರು. ಬ್ರಿಟಿಷ್ ಸರ್ಕಾರದ ಪ್ರಕಾರ, ತಾನು ಭಾಗವಹಿಸಿದ್ದ ಯುದ್ಧವನ್ನು ಒಪ್ಪದವರೆಲ್ಲ ‘ರಾಜದ್ರೋಹಿ’ಗಳಾಗಿದ್ದರು.

ಈ ‘ರಾಜದ್ರೋಹ’ದ ಕಾನೂನು ಹುಟ್ಟಿದ್ದು ಬ್ರಿಟನ್ನಿನಲ್ಲಿ. ರಾಜಪ್ರಭುತ್ವ ಅಥವಾ ಸರ್ಕಾರದ ವಿರುದ್ಧ ಯಾರೂ ಸೊಲ್ಲೆತ್ತದಿರಲಿ ಎಂಬ ದುರುದ್ದೇಶದಿಂದ ಹುಟ್ಟಿದ್ದ ಈ ಕಾನೂನು ಇಂಡಿಯಾದಲ್ಲಿ ತಮಗೆ ಅನುಕೂಲಕರವಾಗಿದ್ದುದರಿಂದ ಬ್ರಿಟಿಷರು ಅದನ್ನು ಇಲ್ಲೂ ಬಳಸಲಾರಂಭಿಸಿದ್ದರು.

ಬ್ರಿಟಿಷರ ಈ ‘ಸೆಡಿಷನ್’ ಕಾನೂನನ್ನು ಇನ್ನೂ ಸಾಕಿಕೊಂಡಿರುವ ಇಂಡಿಯಾದಲ್ಲಿ ಈಚೆಗೆ ಇದರ ದುರ್ಬಳಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ‘ಕಾಮನ್ ಕಾಸ್’ ಸಂಸ್ಥೆ ಸುಪ್ರೀಂ ಕೋರ್ಟಿನಲ್ಲಿ ಮೊಕದ್ದಮೆ ಹೂಡಿತ್ತು. ಸಂಸ್ಥೆಯ ಪರವಾಗಿ ಹಾಗೂ ನ್ಯೂಕ್ಲಿಯರ್ ಎನರ್ಜಿಯನ್ನು ವಿರೋಧಿಸಿ ‘ರಾಜದ್ರೋಹ’ದ ಆಪಾದನೆಗೆ ಒಳಗಾಗಿರುವ ಆ್ಯಕ್ಟಿವಿಸ್ಟ್ ಉದಯಕುಮಾರ್ ಪರವಾಗಿ ನ್ಯಾಯವಾದಿ- ರಾಜಕೀಯ ಚಿಂತಕ ಪ್ರಶಾಂತಭೂಷಣ್ ವಾದಿಸಿದ್ದರು.

ಮೊನ್ನೆ ಬಂದ ಸುಪ್ರೀಂಕೋರ್ಟಿನ ತೀರ್ಪು, ‘1962ರಲ್ಲಿ ‘ಕೇದಾರನಾಥ್ ಸಿಂಗ್  v/s ಸ್ಟೇಟ್ ಆಫ್ ಬಿಹಾರ್’ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ನೀಡಿರುವ ಮಾರ್ಗದರ್ಶಿ ಸೂತ್ರಗಳ ಮೂಲಕ ‘ಸೆಡಿಷನ್’ಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆ 124ಎ ಕಲಮಿನ ವ್ಯಾಖ್ಯಾನ ಇರುತ್ತದೆ’ ಎಂದು ಸ್ಪಷ್ಟವಾಗಿ ಹೇಳಿದೆ.

ಅಂದರೆ, ಈ ಕಲಮಿನಡಿ ವಿಚಾರಣೆಗೆ ಒಳಪಟ್ಟ ಪ್ರಕರಣಗಳಲ್ಲಿ, ಸರ್ಕಾರವನ್ನು ಹಿಂಸಾತ್ಮಕ ಸಾಧನಗಳ ಮೂಲಕ ಅಭದ್ರಗೊಳಿಸುವ ಹಾಗೂ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುವ ಸಾಧ್ಯತೆ ಇದ್ದರೆ ಮಾತ್ರ ಅದು ವಿಚಾರಣೆಗೆ ಅರ್ಹ.  ಸರ್ಕಾರಗಳನ್ನು ಟೀಕಿಸಿದ್ದಕ್ಕೆ, ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದ ಮಾತ್ರಕ್ಕೇ ಈ ಕಲಮನ್ನು ಬಳಸಲಾಗದು.

ಈ ‘ಸೆಡಿಷನ್’ ಎಂಬ ವಸಾಹತುಶಾಹಿ ಕಾನೂನು ಸ್ವತಂತ್ರ ಇಂಡಿಯಾದಲ್ಲಿ ಯಾಕಿರಬೇಕು ಎಂಬ ಪ್ರಶ್ನೆ ಅಂದೇ ಸಂವಿಧಾನ ಪಿತೃಗಳ ಎದುರು ಬಂದಿತ್ತು. ಸಂಯುಕ್ತ ವಿಧಾನಸಭೆಯಲ್ಲಿ, ‘ಸೆಡಿಷನ್’ ಎಂಬ ಪದ ವಾಕ್ ಸ್ವಾತಂತ್ರ್ಯ ಕುರಿತ 19(2)ರ ಕಲಮಿನಲ್ಲಿ ಸೇರಬೇಕೇ ಎಂಬ ಚರ್ಚೆ ನಡೆಯುತ್ತಿದ್ದಾಗ, ಸೋಮನಾಥ ಲಾಹಿರಿಯವರು ವಲ್ಲಭಭಾಯಿ ಪಟೇಲರನ್ನು ವ್ಯಂಗ್ಯವಾಗಿ ಕೇಳಿದರು:

‘ಸರ್ವಾಧಿಕಾರಿ ಬ್ರಿಟಿಷರು ಪಡೆದದ್ದಕ್ಕಿಂತ ಹೆಚ್ಚಿನ ರಕ್ಷಣೆಯನ್ನು ನೀವು ನಿಮ್ಮದೇ ಆದ ಜನರಿರುವಾಗಲೂ ಪಡೆಯಲು ಬಯಸಿದ್ದೀರೇನು?’ ಮಾರನೆಯ ದಿನ ‘ಸೆಡಿಷನ್’ ಎಂಬ ಪದ ಕರಡಿನಿಂದ ಮಾಯವಾಯಿತು; ಎರಡನೆಯ ಕರಡಿನಲ್ಲಿ ಮತ್ತೆ ಬಂತು! ಅದನ್ನು ವಿರೋಧಿಸಿದ ಸದಸ್ಯರು, ರಾಷ್ಟ್ರೀಯ ಚಳವಳಿಯ ಕಾಲದಲ್ಲಿ ಸೆಡಿಷನ್ ಕಾನೂನಿನಡಿ ತಾವೇ ಬಂಧಿಗಳಾಗಿದ್ದುದನ್ನೂ ನೆನೆಸಿಕೊಂಡರು.

ಹೀಗಾಗಿ ಕಲಂ 19(2)ರಲ್ಲಿ ಅದು ಸೇರಲಿಲ್ಲ. ಆದರೆ ಅದು ಭಾರತೀಯ ದಂಡಸಂಹಿತೆಯ 124ಎ ಕಲಮಿನ ಅಂಚಿನಲ್ಲಿ ಹೇಗೋ ಸೇರಿಕೊಂಡುಬಿಟ್ಟಿತು. ಮುಂದೆ 1951ರಲ್ಲಿ ನೆಹರೂ ಕೂಡ ‘ಇದು ಎಷ್ಟು ಬೇಗ ತೊಲಗಿದರೆ ಅಷ್ಟು ಒಳ್ಳೆಯದು’ ಎಂದಿದ್ದರು. ಅದು ತೊಲಗಲಿಲ್ಲ. ಕೋರ್ಟುಗಳಿಂದ ಟೀಕಿಸಿಕೊಂಡು, ವ್ಯಾಖ್ಯಾನಿಸಿಕೊಂಡು, ಆಳುವ ಸರ್ಕಾರಗಳ ಕೈಗಳ ಅಸ್ತ್ರವಾಗಿ ಅದು ಇಲ್ಲಿಯತನಕ ಉಳಿದುಕೊಂಡೇ ಬಂದಿದೆ. ಇದರಡಿ ವಿಚಾರಣೆಯಾದಾಗಲೆಲ್ಲ, ಸರ್ಕಾರವನ್ನು ಕಟುವಾಗಿ ಟೀಕಿಸುವ ಜನರ ಹಕ್ಕನ್ನು ಕೋರ್ಟುಗಳು ಎತ್ತಿ ಹಿಡಿಯುತ್ತಲೇ ಬಂದಿದೆ.

ಮತ್ತೆ ಈಗ ಸುಪ್ರೀಂ ಕೋರ್ಟು 124ಎ ಕಲಮಿನ ಬಗ್ಗೆ ಕೊಟ್ಟಿರುವ ಮರುಸ್ಪಷ್ಟತೆ ಮಹತ್ವದ್ದಾಗಿದೆ. ಯಾಕೆಂದರೆ ಈ ಕಲಮಿನ ದುರ್ಬಳಕೆಯಿಂದ ಎಲ್ಲ ರಾಜಕೀಯ ಪಕ್ಷಗಳ ನಾಯಕರೂ, ಕಾರ್ಯಕರ್ತರೂ, ಪತ್ರಕರ್ತರೂ ಸೆಡಿಷನ್ ಕೇಸುಗಳನ್ನು ಎದುರಿಸುತ್ತಲೇ ಇರಬೇಕಾಗುತ್ತದೆ.

ಸರ್ಕಾರವನ್ನು ಟೀಕಿಸುವ ಹಕ್ಕನ್ನು ಮಾನನಷ್ಟ ಮೊಕದ್ದಮೆಯ ಮೂಲಕ ಕಸಿಯಲಾಗದು ಎಂದು ಕಳೆದ ತಿಂಗಳು ತಮಿಳುನಾಡು ಸರ್ಕಾರದ ವಿರುದ್ಧ ತೀರ್ಪು ಕೊಟ್ಟ ಸುಪ್ರೀಂ ಕೋರ್ಟು, ಈಗ 124ಎ ಕುರಿತ ತೀರ್ಪನ್ನೂ ಕೊಟ್ಟಿದೆ. ಇದೇ ಸಂದರ್ಭದ ಮತ್ತೊಂದು ಪುಟ್ಟ ಬೆಳವಣಿಗೆಯೂ ಗಮನಾರ್ಹವಾಗಿದೆ: ಕಳೆದ ಫೆಬ್ರವರಿಯಿಂದ ಜವಾಹರಲಾಲ್ ನೆಹರೂ ಯೂನಿವರ್ಸಿಟಿಯ ಮುಕ್ತಚಿಂತನೆಯ ವಾತಾವರಣವನ್ನು ನಾಶ ಮಾಡಲೆತ್ನಿಸಿದವರನ್ನು ಅಲ್ಲಿನ ವಿದ್ಯಾರ್ಥಿಗಳು ಮೊನ್ನೆ ನಡೆದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೊಸತಲೆಮಾರಿನ ಇಂಡಿಯಾ ಹೊಸ ರೀತಿಯಲ್ಲಿ ಸಜ್ಜಾಗುತ್ತಿದೆ ಎಂಬುದನ್ನು ಇವೆಲ್ಲ ಸೂಚಿಸುತ್ತಿವೆ.

ಎಡಪಂಥೀಯರಿರಲಿ, ಬಲಪಂಥೀಯರಿರಲಿ, ಯಾವುದೇ ಪಂಥದವರಿರಲಿ, ತಮಗೆ ಹತ್ತಿರವಿರುವ ಸರ್ಕಾರಗಳಿದ್ದಾಗ ತಂತಮ್ಮ ಸಂಕುಚಿತ ಐಡಿಯಾಲಜಿಗಳನ್ನು ಸಾಧಿಸಲು ಹೊರಟಾಗ ಕಾನೂನಿನ ದುರ್ಬಳಕೆ ಶುರುವಾಗುತ್ತದೆ. ಆದರೆ ಕಾಲ ಉರುಳಿದಂತೆ ತಾವು ತೋಡಿದ ಕಾನೂನಿನ ಖೆಡ್ಡಾಗಳಲ್ಲಿ ತಾವೇ ಬೀಳುತ್ತೇವೆ ಎಂಬ ಸತ್ಯ ಎಲ್ಲರಿಗೂ ತಿಳಿದಿರಬೇಕು.

ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಅಪಪ್ರಚಾರಗಳು ಅಥವಾ ಸುಳ್ಳುದೂರುಗಳ ಮೂಲಕ ಬಗೆಹರಿಸಿಕೊಳ್ಳಲೆತ್ನಿಸುವುದು ತಮಗೇ ಮುಳುವಾಗುತ್ತದೆಂಬ ಎಚ್ಚರ ಎಲ್ಲರಿಗೂ ಇರಬೇಕು; ಸಾರ್ವಜನಿಕ ವಲಯದಲ್ಲಿ ಇರುವ ಎಲ್ಲರಿಗೂ ಕೊಂಚ ಚರಿತ್ರೆಯ ಪ್ರಜ್ಞೆಯೂ ಇರಬೇಕು.

ಇವತ್ತು ಮಾತೆತ್ತಿದರೆ ‘ಚರಿತ್ರೆ’, ‘ದೇಶದ್ರೋಹ’ ಎನ್ನುವವರಿಗೆ, ‘ಸೆಡಿಷನ್’ ಕಲಮಿನಡಿ ಬಾಲಗಂಗಾಧರ ತಿಲಕರಿಗೇ ಶಿಕ್ಷೆಯಾಗಿತ್ತು ಎಂಬುದು ಗೊತ್ತಿರಲಿಕ್ಕಿಲ್ಲ. ಆರೆಸ್ಸೆಸ್ಸಿನ ಮುಖವಾಣಿ ‘ಆರ್ಗನೈಸರ್’ ಮೇಲೇ ಈ ರಾಜದ್ರೋಹದ ಕೇಸು ಬಿದ್ದಿತ್ತು ಎಂಬುದೂ ಗೊತ್ತಿರಲಿಕ್ಕಿಲ್ಲ.

ಜೆ.ಎನ್.ಯು. ವಿದ್ಯಾರ್ಥಿ ನಾಯಕ ಕನ್ಹಯ್ಯಾಕುಮಾರ್ ಪ್ರಕರಣವಾದಾಗ, ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆ ಈ ಕಲಮಿನ ದುರ್ಬಳಕೆಯ ವಿರುದ್ಧ ಎಚ್ಚರಿಸಿತ್ತು: ತಿಲಕ್ ತಮ್ಮ ‘ಕೇಸರಿ’ ಪತ್ರಿಕೆಯಲ್ಲಿ ‘ನಮ್ಮ ದೇಶದ ದುರದೃಷ್ಟ’ ಎಂಬ ಲೇಖನ ಬರೆದಿದ್ದಕ್ಕಾಗಿ ಬ್ರಿಟಿಷ್ ಸರ್ಕಾರ ರಾಜದ್ರೋಹದ ಆಪಾದನೆ ಹೊರಿಸಿ ಆರು ವರ್ಷ ಜೈಲುಶಿಕ್ಷೆ ವಿಧಿಸಿತ್ತು; ಈ ಕಲಮಿನಡಿ ಮಹಾತ್ಮ ಗಾಂಧಿ, ಭಗತ್ ಸಿಂಗ್, ಮೌಲಾನಾ ಆಝಾದ್, ಪತ್ರಕರ್ತರು, ಪತ್ರಿಕೆಯ ಮಾಲೀಕರು, ಲೇಖಕರು ಮುಂತಾಗಿ ನೂರಾರು ಜನ ಬಂಧಿಯಾದದ್ದನ್ನೂ ಈ ಪತ್ರಿಕೆ ನೆನಪಿಸಿತ್ತು.

ಯಾವುದು ಒಂದು ಕಾಲಕ್ಕೆ ‘ರಾಜದ್ರೋಹ’ದ ಪ್ರಕರಣವಾಗಿತ್ತೋ ಅದನ್ನು ಮುಂದೊಮ್ಮೆ ಪ್ರಭುತ್ವವೇ ಒಪ್ಪುವ ಕಾಲವೂ ಬಂದ ಪ್ರಕರಣಗಳೂ ಇಂಡಿಯಾದಲ್ಲಿವೆ. 1953ರಲ್ಲಿ ಬಿಹಾರದ ಆದಿವಾಸಿಗಳು ‘ನಮಗೆ ಪ್ರತ್ಯೇಕ ಜಾರ್ಖಂಡ್ ರಾಜ್ಯ ಬೇಕು; ಆಗ ಮಾತ್ರ ನಮ್ಮ ಹಿತರಕ್ಷಣೆಯಾಗಬಲ್ಲದು’ ಎಂದು ಚಳವಳಿ ಹೂಡಿದರು. ಬಿಹಾರ ಸರ್ಕಾರ ಅವರ ವಿರುದ್ಧ 124ಎ ಕಲಮಿನಡಿ ರಾಜದ್ರೋಹದ ಪ್ರಕರಣವನ್ನು ದಾಖಲಿಸಿತು.

ಈ ‘ದೇಬಿ ಸೊರೆನ್ v/s ದಿ ಸ್ಟೇಟ್’ ಪ್ರಕರಣದಲ್ಲಿ, ‘ಅವರ ಭಾಷಣಗಳು ರಾಜದ್ರೋಹವಲ್ಲ’ ಎಂದು 1954ರಲ್ಲಿ ಹೈಕೋರ್ಟು ತೀರ್ಪು ಕೊಟ್ಟಿತು. ಮುಂದೊಮ್ಮೆ ಭಾರತ ಸರ್ಕಾರವೇ ಈ ಬೇಡಿಕೆಯನ್ನು ಒಪ್ಪಿ ಪ್ರತ್ಯೇಕ ಜಾರ್ಖಂಡ್ ರಾಜ್ಯವನ್ನೇ ಸ್ಥಾಪಿಸುವ ಕಾಲವೇ ಬಂತು. ಸರ್ಕಾರಗಳು ‘ರಾಜದ್ರೋಹ’ ಎನ್ನುವ ಚಳವಳಿಗಳು ನಾಡುಕಟ್ಟುವ ಚಳವಳಿಗಳಾಗಿರಬಲ್ಲವು ಎಂಬುದಕ್ಕೆ ವಸಾಹತು ಇಂಡಿಯಾದಿಂದ ಹಿಡಿದು ಇಂದಿನ ಇಂಡಿಯಾದವರೆಗೂ ಉದಾಹರಣೆಗಳಿವೆ. 

ಆದ್ದರಿಂದಲೇ ಸರ್ಕಾರಗಳಿಗಾಗಲೀ, ಪೊಲೀಸರಿಗಾಗಲೀ ಇಂಥ ಕಾನೂನುಗಳ ಸಲೀಸು ಬಳಕೆಗೆ ಅವಕಾಶ ಕೊಡುವುದು ಅತ್ಯಂತ ಅಪಾಯಕಾರಿ. ದಿನವಿಡೀ ದುಡಿಯುವ ಕಾರ್ಮಿಕರು, ರೈತರು, ದಲಿತರು, ಮಹಿಳೆಯರು, ಗಡಿಗಳಲ್ಲಿ ಪ್ರಾಣ ಕೊಡುವ ಸೈನಿಕರು-  ಯಾರಿಗೂ ಎದುರಾಗದ ‘ರಾಜದ್ರೋಹ’ದ ಪ್ರಶ್ನೆ ಕೂತಲ್ಲೇ ಥಿಯರಿ ಹೊಸೆಯುವ ಹೀನ ವಿದ್ಯಾವಂತ ಮನಸ್ಸುಗಳಿಗೆ ಮಾತ್ರ ಹೊಳೆಯುತ್ತದೆ.

ಇದರ ದೂರದ ಪರಿಣಾಮ ಈ ಇನ್ಸ್ಟಂಟ್ ‘ದೇಶಭಕ್ತ’ರಿಗೆ ತಿಳಿದಿರಲಿಕ್ಕಿಲ್ಲ. ಅಂಥವರು, ತುರ್ತುಪರಿಸ್ಥಿತಿಯಲ್ಲಿ ಇಂಥ ಹುಸಿಕೇಸುಗಳಿಗೆ ಬಲಿಯಾಗಿ ಜೈಲು ಸೇರಿದ್ದ ಅಂದಿನ ಜನಸಂಘದ (ಇಂದಿನ ಬಿಜೆಪಿಯ) ನಾಯಕರೂ ಸೇರಿದಂತೆ ಇನ್ನಿತರ ವಿರೋಧ ಪಕ್ಷದ ಹಿರಿಯರಿಂದಲಾದರೂ ಈ ಬಗ್ಗೆ ಕೇಳಿ ತಿಳಿಯಲಿ.

ಮೊನ್ನೆ ಸೆಡಿಷನ್ ಕುರಿತ ಸುಪ್ರೀಂ ಕೋರ್ಟಿನ ತೀರ್ಪು ಬಂದಾಗ, ಚಿಂತಕ ಪ್ರೊ. ಬಿ.ಕೆ. ಚಂದ್ರಶೇಖರ್ ಈ ಬಗ್ಗೆ ಕರ್ನಾಟಕದ ಶಾಸನಸಭೆ ವಿಶೇಷಚರ್ಚೆ ನಡೆಸಬೇಕೆಂದು ಕೋರಿದ್ದಾರೆ.  ದೇಶಕ್ಕೆ ಹೊಸ ದಾರಿ ತೋರುವ ಇಂಥದೊಂದು ಗಂಭೀರ ಚರ್ಚೆಯನ್ನು ಹುಟ್ಟುಹಾಕಲು ಕರ್ನಾಟಕ ಮುಂದಾಗಲಿ; ಕರ್ನಾಟಕದಲ್ಲೂ ಪ್ರಶಾಂತಭೂಷಣ್ ಥರದ ಕ್ರಿಯಾಶೀಲ ನ್ಯಾಯವಾದಿಗಳು ಈ ಸವಾಲಿಗೆ ಸಜ್ಜಾಗಲಿ.

ಕೊನೆಟಿಪ್ಪಣಿ: ರಮ್ಯ ಇಂಡಿಯಾ, ರಮ್ಯ ಪಾಕಿಸ್ತಾನ! ಚಿತ್ರನಟಿ ರಮ್ಯಾ, ‘ಈಚೆಗೆ ಪಾಕಿಸ್ತಾನಕ್ಕೆ ಹೋಗಿದ್ದೆ. ನನಗೆ ಅದೇನೂ ನರಕದಂತೆ ಕಾಣಲಿಲ್ಲ’ ಎಂದದ್ದಕ್ಕೆ ಅವರ ಮೇಲೆ ಹಾರಾಡುತ್ತಿರುವವರಲ್ಲಿ ಅಸೂಯೆ, ಪ್ರತಿಸ್ಪರ್ಧಿಯ ಆತಂಕ, ರಾಜಕೀಯ ದುರುದ್ದೇಶ ಎಲ್ಲವೂ ಇವೆ. ಅತ್ತ ಪಾಕಿಸ್ತಾನದ ಜನ ರಮ್ಯಾ ಥರದ ಸುಂದರಿಯನ್ನು ನೋಡಿ, ‘ಇಂಥ ಸುಂದರ ನಟಿಯರಿರುವ ಇಂಡಿಯಾ ಸ್ವರ್ಗದಂತಿರಬಹುದು’ ಎನ್ನುತ್ತಾರೆ ಎಂದಿಟಕೊಳ್ಳಿ; ಅವರ ವಿರುದ್ಧ ಕೇಸ್ ಹಾಕುವ ಹುಚ್ಚುತನಕ್ಕೆ ಯಾವ ಪಾಕಿಸ್ತಾನೀಯರೂ ಹೋಗಲಾರರು!

ಹಾಗೆಯೇ, ಸಿರಿವಂತ ರಮ್ಯಜೀವಿಗಳಿಗೆ ‘ಸ್ವರ್ಗ’ವಾಗಿ ಕಾಣುವ ನಮ್ಮ ದೇಶ ಹಸಿವು, ಅಸ್ಪೃಶ್ಯತೆ, ಬಡತನಗಳಿಂದ ನರಳುತ್ತಿರುವವರಿಗೆ, ಅನ್ಯಾಯಕ್ಕೆ ತುತ್ತಾಗುವವರಿಗೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರಿಗೆ ನರಕದಂತೆ ಕಾಣುತ್ತಿರಬಹುದು. ಈ ಕಟುಸತ್ಯ ಕಂದಾಚಾರಿ ವಾಚಾಳಿಗಳಿಗೆ ಗೊತ್ತಿಲ್ಲ.

ಇಂಡಿಯಾ-ಪಾಕಿಸ್ತಾನದ ಗಡಿಯಲ್ಲಿರುವ ವಾಘಾ ಹಾಗೂ ಹುಸೇನಿವಾಲ ಗಡಿ ಪ್ರದೇಶಕ್ಕೆ ಕೆಲವು ಸಲ ಭೇಟಿ ಕೊಟ್ಟಿರುವ ನನ್ನ ಸ್ನೇಹಿತರು ಹೇಳುತ್ತಾರೆ: ‘ಅಲ್ಲಿನ ಜನಕ್ಕೆ, ವ್ಯಾಪಾರಿಗಳಿಗೆ ಇಂಥ ಸಮಸ್ಯೆಯೇ ಇಲ್ಲ. ಇದೇನಿದ್ದರೂ ಎರಡೂ ದೇಶದ ರಾಜಕಾರಣಿಗಳ ಸಮಸ್ಯೆ, ಅಷ್ಟೆ.’ ಸಾಮಾನ್ಯ ಜನರಿಗಿರುವ ವಿವೇಕ, ವಿಶಾಲದೃಷ್ಟಿ ಪುಢಾರಿ
ಗಳಿಗೆ ಯಾಕಿಲ್ಲ ಎಂದು ನೀವು ಮುಗ್ಧವಾಗಿ ಕೇಳಬಹುದು. ಆ ವಿವೇಕ ಇದ್ದಿದ್ದರೆ ಅವರೇಕೆ ಪುಢಾರಿಗಳಾಗಿ ಚೀರುತ್ತಿರುತ್ತಿದ್ದರು? ದುಡಿದು ಉಣ್ಣುತ್ತಿದ್ದರು, ಅಲ್ಲವೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT