ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾರ್ಕ್’ ಬಾಂಧವ್ಯ: ಉದ್ಯಮದ ನಿರೀಕ್ಷೆ ಅಪಾರ

Last Updated 3 ಜೂನ್ 2014, 19:30 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರು ಅಧಿ­ಕಾರ­ವಹಿಸಿಕೊಂಡ ಮೊದಲ ವಾರ­ದಲ್ಲಿ ಅನೇಕ ಆಸಕ್ತಿದಾಯಕ ಬೆಳವಣಿಗೆಗಳು ನಡೆ­ದಿವೆ. ನನಗಂತೂ ಈ ವಿದ್ಯಮಾನಗಳು ಮೋದಿ ಅವರ ವ್ಯಕ್ತಿತ್ವದ  ಇನ್ನೊಂದು ಮುಖದ ಸ್ಪಷ್ಟ ಚಿತ್ರಣ ನೀಡಿವೆ. ಚುನಾವಣಾ ಪ್ರಚಾರ ಸಂದರ್ಭ­ದಲ್ಲಿ, ವೈರಿಗಳ ಮೇಲೆ ಆಕ್ರಮಣ ನಡೆ­ಸುವ ಸಮರ ಸೇನಾನಿ ರೂಪದಲ್ಲಿ ಮೋದಿ ಎಲ್ಲರ ಗಮನ ಸೆಳೆದಿದ್ದರು. ಅವರ ಹಾವಭಾವ ಮತ್ತು ಧ್ವನಿಯ ಏರಿಳಿತಗಳು, ಯಾವುದೇ ಬೆಲೆ ತೆತ್ತಾದರೂ ಎದುರಾಳಿಗಳನ್ನು ಬಗ್ಗು­ಬಡಿ­ಯುವ ಸಮರ್ಥ ಸೇನಾಪತಿಯಂತೆ ಕಂಡು ಬಂದಿದ್ದವು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯ­ಮ­­ಗಳಲ್ಲಿ ತಮ್ಮ ಬಗ್ಗೆ ಬಂದ ಪ್ರತಿಕೂಲಕರ ಟೀಕೆ­ಗಳಿಂದ ಅವರೇನೂ ಧೃತಿಗೆಟ್ಟಿದ್ದಿಲ್ಲ. ತಾವು ನಿರ್ವಹಿಸಬಹುದಾದ ಪಾತ್ರದ ಬಗ್ಗೆ ಅವರಿಗೆ ಸ್ಪಷ್ಟ ಪರಿಕಲ್ಪನೆ ಇತ್ತು.

ಚುನಾವಣಾ ಫಲಿತಾಂಶ ಪ್ರಕಟವಾ­ಗು­ತ್ತಿ­ದ್ದಂತೆ ಅವರ ಮಾತು ಮತ್ತು ಚರ್ಯೆ ಸಂಪೂರ್ಣ ಬದಲಾಯಿತು. ತಮ್ಮ ಪಾತ್ರ ಬದ­ಲಾ­ಗಿದೆ ಮತ್ತು ತಾವು ನಿರ್ವಹಿಸಲಿರುವ ಹೊಸ ಹುದ್ದೆಗೆ ವಿಭಿನ್ನ ಮೋದಿಯ ಅಗತ್ಯ ಇದೆ ಎನ್ನುವುದು ಅವರಿಗೆ ಮನದಟ್ಟಾಗಿತ್ತು. ಸಂಸ­ತ್ತಿನ ಮೆಟ್ಟಿಲುಗಳಿಗೆ ಪೂಜ್ಯಭಾವದಿಂದ ನಮಸ್ಕರಿ­ಸಿ­ರುವುದು ಮತ್ತು ನಂತರ ಮಾಡಿದ ಭಾಷಣವು ಅವರ ವ್ಯಕ್ತಿತ್ವ ಬದಲಾಗಿರುವುದಕ್ಕೆ ಸ್ಪಷ್ಟ ನಿದರ್ಶನ­ವಾಗಿತ್ತು.

ಪ್ರಮಾಣ ವಚನ ಸ್ವೀಕಾರ ಸಮಾ­ರಂಭಕ್ಕೆ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟ­ನೆಯ ಎಂಟು ಸದಸ್ಯ ದೇಶಗಳ (ಸಾರ್ಕ್) ಮುಖ್ಯಸ್ಥ­ರಿಗೆ ನೀಡಿದ ಆಹ್ವಾನವು, ಮೋದಿ ಅವರು ಪ್ರಧಾನಿ­ಯಾಗುವ ಸಂದರ್ಭದಲ್ಲಿ ಹೆಚ್ಚು ಚರ್ಚೆಗೆ ಒಳಗಾಗಿತ್ತು. ಮಾಧ್ಯಮ­ಗ­ಳಂತೂ ಈ ಆಹ್ವಾನವನ್ನು ಹಲವಾರು ದೃಷ್ಟಿ­ಕೋನ­ಗಳಿಂದ ವಿಶ್ಲೇಷಿಸಿದವು. ವಿದೇಶ ವ್ಯವ­ಹಾರ­ಗಳ ಪರಿಣತರಂತೂ ಇದೊಂದು ಐತಿ­ಹಾಸಿಕ ವಿದ್ಯಮಾನ ಎಂದೇ ಬಣ್ಣಿಸಿದರು. ಪ್ರಾದೇಶಿಕ ಸಹ­ಕಾರಕ್ಕೆ ಸಂಬಂಧಿಸಿದಂತೆ, ಕೇಂದ್ರ­ದಲ್ಲಿ ಅಧಿಕಾರಕ್ಕೆ ಬಂದ ಹೊಸ ಸರ್ಕಾರದ ನಿಲುವು ಸಂಪೂರ್ಣವಾಗಿ ಬದಲಾಗಿ­ರುವುದನ್ನು ಅವರು ಸ್ಪಷ್ಟವಾಗಿ ಗುರುತಿ­ಸಿದರು.

ಉದ್ಯಮ ಪ್ರಮುಖರು ಕೂಡ `ಸಾರ್ಕ್ ಕಾರ್ಯ­ಸೂಚಿ'ಯಲ್ಲಿನ ಬದ­ಲಾವಣೆಯು ಉದ್ಯಮ ವಹಿವಾಟು ವಿಸ್ತರಣೆಗೆ ಅಪಾರ ಅವ­ಕಾಶ­ಗಳನ್ನು ಒದಗಿಸಿ ಕೊಡಲಿದೆ ಎಂದೇ ನಿರೀಕ್ಷಿ­ಸಿದ್ದಾರೆ. ಇನ್ನುಮುಂದೆ ನೆರೆಹೊರೆ ದೇಶಗಳ ಜತೆಗಿನ ರಾಜಕೀಯ, ಭದ್ರತೆ, ವಾಣಿಜ್ಯ ಮತ್ತು ವ್ಯಾಪಾರ ಸಂಬಂಧವು ಸುಧಾರಣೆಯಾಗಲಿದೆ ಎಂದು ಉದ್ಯಮ ವಲಯವು ಬಹುವಾಗಿ ನಿರೀಕ್ಷಿಸಿದೆ.

ಪಾಕಿಸ್ತಾನವು ಭಾರತಕ್ಕೆ ವಾಣಿಜ್ಯ ವಹಿ­ವಾಟಿನ ‘ಪರಮಾಪ್ತ ದೇಶದ ಸ್ಥಾನಮಾನ’ ನೀಡುವ ಸಾಧ್ಯತೆಯು ಮತ್ತು ಅದರಿಂದ ಎರಡೂ ದೇಶಗಳಿಗೆ ಆಗಲಿರುವ ಪ್ರಯೋಜನ­ಗಳು ಚರ್ಚೆಯ ಕೇಂದ್ರ ಬಿಂದುಗಳಾಗಿದ್ದವು. ಭಾರತವು 15 ವರ್ಷಗಳ ಹಿಂದೆಯೇ ಪಾಕಿಸ್ತಾ­ನಕ್ಕೆ ‘ಪರಮಾಪ್ತ ದೇಶದ ಸ್ಥಾನಮಾನ’ ಕಲ್ಪಿ­ಸಿದ್ದು, ಪಾಕಿಸ್ತಾನದಿಂದಲೂ ಇದೇ ಬಗೆಯ ಸ್ಥಾನ­ಮಾನ ಸಿಗುವುದನ್ನು ಎದುರು ನೋಡುತ್ತಿದೆ.
ಒಂದು ವೇಳೆ ಎರಡೂ ದೇಶಗಳ ನಡುವಣ ವಾಣಿಜ್ಯ - ವ್ಯಾಪಾರ ಸುಧಾ­ರಿಸಿದರೆ ಅದರಿಂದ ಇಬ್ಬರಿಗೂ ಒಳಿತಾ­ಗಲಿದೆ. ಇದರಿಂದ ನೆರೆಹೊರೆ ದೇಶಗಳ ಮಧ್ಯೆ ಇನ್ನಷ್ಟು ವಿಶ್ವಾಸ ವೃದ್ಧಿಯಾಗ­ಲಿದೆ. ‘ಸಾರ್ಕ್’ ಸಂಘಟನೆಯ ಇತರ ಸದಸ್ಯ ದೇಶಗಳೂ ಭಾರತ - ಪಾಕ್ ಬಾಂಧವ್ಯ ವೃದ್ಧಿ­ಯನ್ನು ಎದುರು ನೋಡುತ್ತಿವೆ. ಇದರಿಂದ ವಾಣಿಜ್ಯ ರಂಗದಲ್ಲಿ ಅರ್ಥಪೂರ್ಣ ಬೆಳವಣಿಗೆ­ಗಳು ಕಂಡು ಬರಲಿವೆ.
‘ಸಾರ್ಕ್’ ದೇಶಗಳ ಮಧ್ಯೆ ಸರಕು ಮತ್ತು ಸೇವೆಗಳ ಉಚಿತ ಹರಿವು ಉತ್ತೇಜಿಸಲು ಸಾಮಾನ್ಯ ಕರೆನ್ಸಿ ಬಳಕೆ ಸಾಧ್ಯತೆಗಳ ಬಗ್ಗೆಯೂ ಕೆಲ ವಿಶ್ಲೇಷಕರು ಊಹೆ ಮಾಡುತ್ತಿದ್ದಾರೆ. ಸಾಮಾನ್ಯ ಕರೆನ್ಸಿ ಬಳಕೆ ಬಗ್ಗೆ ಐರೋಪ್ಯ ಒಕ್ಕೂಟದ ಪ್ರಯೋಗವು ಸಂಪೂರ್ಣವಾಗಿ ಸಫಲ­ವಾಗಿಲ್ಲ. ಒಂದೂವರೆ ದಶಕದ ನಂತರವೂ ಸಾಮಾನ್ಯ ಕರೆನ್ಸಿಯ ಸಾಧಕ ಬಾಧಕಗಳ ಬಗ್ಗೆ ಇನ್ನೂ ಅಲ್ಲಿ ಹಲ­ವಾರು ಪ್ರಶ್ನೆಗಳು ಕೇಳಿ ಬರುತ್ತಿವೆ.

ವಾಣಿಜ್ಯ ಸಂಬಂಧ ಸುಧಾರಣೆ­ಯಾದರೆ, ಸಾಮಾನ್ಯ ಕರೆನ್ಸಿಯ ಬಳಕೆ ಇಲ್ಲದಿದ್ದರೂ ‘ಸಾರ್ಕ್’ ದೇಶಗಳು ಹಲವು ಪ್ರಯೋಜನ­ಗಳನ್ನು ಪಡೆಯಲು ಸಾಧ್ಯವಿದೆ. ವಾಣಿಜ್ಯ ವ್ಯಾಪಾರ ಕಂದಕದ ಸಮಸ್ಯೆಗಳನ್ನು ಸ್ಥಳೀಯ ಕರೆನ್ಸಿಯ ನೆರವಿನೊಂದಿಗೆ ಬಗೆಹರಿಸುವ ವ್ಯವಸ್ಥೆ ಅಭಿವೃದ್ಧಿಪಡಿಸಬಹುದಾಗಿದೆ. ಆದರೆ, ಸದ್ಯದ ಪರಿಸ್ಥಿತಿಯಿಂದ ಇನ್ನೂ ಒಂದು ಹೆಜ್ಜೆ ಮುಂದೆ ಇಡಲು ದೂರದೃಷ್ಟಿಯ ನಾಯಕತ್ವದ ಅಗತ್ಯ ಇದೆ. ಪ್ರಧಾನಿ ಮೋದಿ ನೇತೃತ್ವದಲ್ಲಿನ ಭಾರತವು ಈ ಪ್ರಕ್ರಿಯೆಗೆ ಚಾಲನೆ ನೀಡಬಹು­ದಾಗಿದ್ದು, ‘ಸಾರ್ಕ್’ ದೇಶಗಳ ಹೊಸ ನಾಯ­ಕತ್ವದ ಹೊಣೆ­ಯನ್ನು ಸಮರ್ಥವಾಗಿ ನಿಭಾಯಿಸ­ಬ­ಹುದಾಗಿದೆ.

‘ಸಾರ್ಕ್’ ಮುಖ್ಯಸ್ಥರಿಗೆ ನೀಡಿದ್ದ ಆಹ್ವಾನ­ವನ್ನು ಇನ್ನೂ ಕೆಲ ಪರಿಣತರು ಇನ್ನೊಂದು ವಿಭಿನ್ನ ದೃಷ್ಟಿಕೋನ­ದಿಂದಲೂ ವಿಶ್ಲೇಷಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ವಿಶ್ವದಾದ್ಯಂತ ಹರಿದು ಬಂದ ಟೀಕಾ ಪ್ರವಾಹದಿಂದಾಗಿ ಮೋದಿ ವರ್ಚ­ಸ್ಸಿಗೆ ತಗುಲಿದ್ದ ಕಳಂಕ ತೊಡೆದು ಹಾಕಲು ಪ್ರಮಾಣ ವಚನ ಸಮಾರಂಭಕ್ಕೆ ‘ಸಾರ್ಕ್’ ಮುಖ್ಯ­ಸ್ಥರ ಉಪಸ್ಥಿತಿಯು ಗಮನಾರ್ಹ ಕೊಡುಗೆ ನೀಡಿತು ಎಂಬುದು ಅವರ ವಿಶ್ಲೇಷಣೆ­ಯಾಗಿದೆ.

ಮೋದಿ ಅವರ ಬಲಪಂಥೀಯ ವಿಚಾರ­ಧಾರೆಯ  ಒಲವಿನ ಹಿನ್ನೆಲೆ­ಯಲ್ಲಿ ಅವರ ಉದ್ದೇಶ­ಗಳ ಬಗ್ಗೆ ಕೆಲ ಪ್ರಮುಖ ಚಿಂತಕರು ಕಳವಳ ವ್ಯಕ್ತಪಡಿ­ಸಿದ್ದಾರೆ. ವಿಶ್ವದ ಅತಿದೊಡ್ಡ ಪ್ರಜಾ­ಪ್ರಭುತ್ವದ ಅತ್ಯುನ್ನತ ಹುದ್ದೆ ಅಲಂಕರಿ­ಸುವಾಗ ತಾವು ಪೂರ್ವಗ್ರಹಗಳಿಂದ ಮುಕ್ತವಾ­ಗಿ­ರು­ವುದನ್ನು ಮೋದಿ ಅವರು ತಮ್ಮ ಈ ನಡೆಯ ಮೂಲಕ ವಿಶ್ವ ಸಮುದಾಯಕ್ಕೆ ಸಂದೇಶ ರವಾನಿ­ಸಿದ್ದಾರೆ. ಫಲಿತಾಂಶದ ಸಂಭ್ರ­ಮಾ­ಚರಣೆ ನಂತರ ಮೋದಿ ಅವರ ವ್ಯಕ್ತಿತ್ವ ಬದಲಾಗಿದ್ದು, ಈಗ ಅವರೊಬ್ಬ ಸದಾ ಕಾರ್ಯ­ನಿರತ ಪ್ರಧಾನಿಯಾಗಿದ್ದು, ಜನರಿಗೆ ಒಳಿತನ್ನು ಮಾಡುವ ಸದಾಶಯ ಹೊಂದಿದವರಂತೆ ಕಂಡು ಬರುತ್ತಿದ್ದಾರೆ.

 ಮೋದಿ ಸಂಪುಟದ ಗಾತ್ರ ಮತ್ತು ಸಚಿವರ ಆಯ್ಕೆ ಕೂಡ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.  ಹಣಕಾಸು ಖಾತೆ ವಹಿಸಿ­ಕೊಂಡಿರುವ ಅರುಣ್ ಜೇಟ್ಲಿ ಅವರ ಆರಂಭಿಕ ಹೇಳಿಕೆ ಮತ್ತು ಉದ್ಯಮ ಪರ ನಿಲುವು ನಿರೀಕ್ಷಿತ ರೀತಿಯಲ್ಲಿಯೇ ಇವೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ರಘುರಾಂ ರಾಜನ್ ಜತೆಗೆ ಕೆಲಸ ಮಾಡುವ ಅವರ ನಿರ್ಧಾರವು ಅರ್ಥ ವ್ಯವಸ್ಥೆಯ ಪಾಲಿಗೆ ಶುಭಶಕುನ­ವಾಗಿದೆ. ಮೋದಿ ಸರ್ಕಾರವು ವೃತ್ತಿ­ಪ­ರ­ತೆಗೆ ಆದ್ಯತೆ ನೀಡಲಿದೆ ಎನ್ನುವ ಸರಿಯಾದ ಸಂಕೇತ ರವಾನಿಸಿದೆ. ಸಮಯ ವ್ಯರ್ಥ ಮಾಡದ ಜೇಟ್ಲಿ ಅವರು, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಆದ್ಯತೆ ನೀಡಿದ್ದಾರೆ.

ಅಂತರರಾಷ್ಟ್ರೀಯ ಲೆಕ್ಕಪತ್ರ ಕ್ಷೇತ್ರ­ದಲ್ಲಿನ ಅನುಭವ ಮತ್ತು ವಾಣಿಜ್ಯ ಸಲಹಾ ಸಂಸ್ಥೆ ಪಿಡಬ್ಲ್ಯುಸಿ  ಜತೆಗೆ ಕೆಲಸ ಮಾಡಿರುವ ಹಿನ್ನೆ­ಲೆಯ ಕೈಗಾರಿಕಾ ಮತ್ತು ವಾಣಿಜ್ಯ ಖಾತೆ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಉದ್ಯಮ ಮತ್ತು ಕೈಗಾರಿಕಾ ವಲಯ­ದಲ್ಲಿ ಸಂಚಲನ ಮೂಡಿಸಿದ್ದಾರೆ.

ಸಚಿವರಿಗೆ ಮೋದಿ ಅವರ ಹತ್ತು ಅಂಶಗಳ ಮಾರ್ಗ­ದರ್ಶಿ ಸೂತ್ರಗಳು ಕೂಡ ಉತ್ತಮ ಆಡ­ಳಿತ ನೀಡಲು ನೆರವಾಗಲಿವೆ. ಈ ಮಾರ್ಗದರ್ಶಿ ಸೂತ್ರ­­ಗಳು ಒಂದಕ್ಕೊಂದು ತಳಕು ಹಾಕಿ­ಕೊಂಡಿ­ರ­ದಿದ್ದರೂ, ಪ್ರತಿಯೊಂದು ಸೂತ್ರವು  ತುಂಬ ಮಹತ್ವ­ದ್ದಾಗಿದ್ದು, ಜನಸಾಮಾನ್ಯರಲ್ಲಿ ಮತ್ತು ಉದ್ಯಮಿ­­ಗಳಲ್ಲಿ  ಭರವಸೆ ಮೂಡಿಸಿವೆ. ತಮ್ಮ ಸಂಪುಟದ ಸದಸ್ಯರೂ ತಮ್ಮಂತೆಯೇ ‘ಕೆಲಸದ ಸಂಸ್ಕೃತಿ’ಗೆ ಅನುಗುಣವಾಗಿ ಕರ್ತವ್ಯ ನಿರ್ವಹಿ­ಸಲು ಮೋದಿ ಬಯ­ಸುತ್ತಾರೆ ಎನ್ನುವ ಭಾವನೆ ಮೂಡಿಸು­ವಲ್ಲಿ ಈ ಸೂತ್ರಗಳು ಸಫಲವಾಗಿವೆ.
ಪ್ರಮುಖ ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬಕ್ಕೆ ಆಸ್ಪದ ನೀಡುತ್ತಿದ್ದ ಹಲವು ಸಚಿವರ ಸಮಿತಿ­ಗ­ಳನ್ನು ರದ್ದುಪಡಿಸಿ­ರುವುದು ಕೂಡ ಸ್ವಾಗ­ತಾರ್ಹ ಬದ­ಲಾವಣೆಯಾಗಿದೆ. ಯೋಜನೆ­ಗ­ಳನ್ನು ಕಾಲಮಿತಿಗೆ ಒಳಪಟ್ಟು ಪೂರ್ಣಗೊ­ಳಿಸಲು ಅಧಿ­ಕಾರ­ಶಾಹಿಗೆ   ನೀಡಿರುವ ನಿರ್ದೇಶನವು, ಮೋದಿ ಅವರು ಸುಧಾರಣಾ ಕಾರ್ಯಕ್ರಮ­ಗ­ಳನ್ನು  ಕಾರ್ಯಗತಗೊಳಿಸುವುದಕ್ಕೆ ಹೆಚ್ಚು ಆಸಕ್ತ­ರಾ­ಗಿದ್ದಾರೆಯೇ ಹೊರತು,  ಅಬ್ಬರದ ಪ್ರಚಾರ­ದಲ್ಲಿ ನಂಬಿಕೆ ಇಟ್ಟಿಲ್ಲ ಎನ್ನುವುದನ್ನು ತೋರಿ­ಸುತ್ತದೆ.

ಆಪ್ತ ಸಿಬ್ಬಂದಿ ವರ್ಗದಲ್ಲಿ ಸಂಬಂಧಿ­ಕರನ್ನು ನೇಮಿಸಿಕೊಳ್ಳಬಾರದು ಮತ್ತು ಸ್ನೇಹಿತರಿಗಷ್ಟೇ ಗುತ್ತಿಗೆಗಳನ್ನು ನೀಡಬಾ­ರದು ಎಂದು ಎಲ್ಲ ಸಚಿವ­ರಿಗೆ ನೀಡಿರುವ ನಿರ್ದೇಶನವೂ ಸ್ವಜನ­ಪಕ್ಷ­ಪಾತ-ವನ್ನು ಅಧಿಕಾರದಿಂದ ಗಾವುದ ದೂರ ಇಡಲು ನೆರವಾಗಲಿದೆ.
ದಕ್ಷ ಆಡಳಿತ ಮತ್ತಿತರ ಸುಧಾರಣಾ ಕ್ರಮ­ಗಳ ಬಗ್ಗೆ ಮೋದಿ ವ್ಯತ್ಯಸ್ತರಾಗಿ­ರುವಾಗಲೇ, ಇತರ ಸಚಿವಾಲಯ­ಗಳಿಂದಲೂ ಸಕಾರಾತ್ಮಕ ಸಂದೇಶಗಳು ಬರುತ್ತಿರುವುದು ಉತ್ತೇಜನಕಾರಿ­ಯಾಗಿದೆ. ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾ­ವನ್ನು ಖಾಸಗೀಕರಣ­ಗೊಳಿ­ಸುವ­ಮಾತು ಕರ್ಣಾಂದಕರ­ವಾಗಿದೆ.

ನನೆಗುದಿಗೆ ಬಿದ್ದಿರುವ ಬೃಹತ್ ಯೋಜನೆ­ಗಳನ್ನು ನಿಸರ್ಗದ ಸಂರಕ್ಷಣೆ ವಿಷಯದಲ್ಲಿ ರಾಜಿ ಮಾಡಿಕೊಳ್ಳದೇ ಕೈಗೆತ್ತಿಕೊಳ್ಳಲು ಪರಿಸರ ಇಲಾಖೆ­ಯು ಮುಂದಾಗಿದೆ. ಯೋಜನೆಗಳಿಗೆ ತ್ವರಿತ­ವಾಗಿ ಅನುಮೋದನೆ ನೀಡುವ ವಿಷಯ­ದಲ್ಲಿ, ಅಭಿವೃದ್ಧಿ, ಪ್ರಗತಿ ಮತ್ತು ಪರಿಸರ ಸಂರಕ್ಷಣೆಯ ಸಮತೋಲನ ಕಾಪಾಡಿ­ಕೊಳ್ಳು­ವುದು ನಿಜಕ್ಕೂ ಅರ್ಥ­ಪೂರ್ಣ ನಿಲುವಾಗಿರು­ತ್ತದೆ. ಇದರಿಂದ ಅಂದಾಜು ₨ 5 ಲಕ್ಷ ಕೋಟಿ­ಗಳಷ್ಟು ಬೃಹತ್ ಮೊತ್ತ ಮೂಲ ಸೌಕರ್ಯ ರಂಗಕ್ಕೆ ಹರಿದು ಬರಲಿದೆ. ಹಿಂದಿನ ‘ಯುಪಿಎ-2’ ಸರ್ಕಾರದಲ್ಲಿ ವೀರಪ್ಪ ಮೊಯಿಲಿ ಅವರು ಈ ನಿಟ್ಟಿನಲ್ಲಿ ಕಾರ್ಯಾರಂಭ ಮಾಡಿರುವುದು ನಿಜವಾ­ಗಿದ್ದರೂ, ಅದು ನಿರೀಕ್ಷಿಸಿದ ಬಗೆಯಲ್ಲಿ ಉತ್ತೇಜನಕಾರಿ­ಯಾಗಿ­ರಲಿಲ್ಲ.
ರಕ್ಷಣಾ ರಂಗದಲ್ಲಿ ಶೇ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವ­ಕಾಶ ಮಾಡಿಕೊಡು­ವುದು, 100 ನಗರಗಳ ಬೆಳ­ವ­­ಣಿಗೆಗೆ ಉತ್ತೇಜನ ನೀಡುವುದು ಮುಂತಾ­ದವು ಇತರ ಸಚಿವಾಲಯಗಳ ಗಂಭೀರ ಪ್ರಸ್ತಾವ­ಗಳಾಗಿವೆ.

ಹೊಸ ಸಚಿವರು ಅಧಿಕಾರವಹಿ­ಸಿಕೊಂಡು ಒಂದು ವಾರವಷ್ಟೇ ಕಳೆದಿದೆ. ಅನೇಕ ಆಸಕ್ತಿ­ದಾ­ಯಕ ಮತ್ತು ಉತ್ತೇಜನ­ಕಾರಿಯಾದ ಪ್ರಸ್ತಾವ­ಗಳು ಕೇಳಿ ಬರುತ್ತಿರುವುದು ನಿಜಕ್ಕೂ ಉತ್ಸಾಹ ಮೂಡಿಸಿದೆ.  ಮೊದಲ ಬಾರಿಗೆ ಸಚಿವರಾದ ಕೆಲ­ವರು ಮಾತ್ರ ಉದಾ­ಸೀನ­ರಾಗಿರುವುದನ್ನು ನೋಡಿ­ದರೆ, ಅವರು ಕಾರ್ಯಾರಂಭ ಮಾಡಲು ಇನ್ನಷ್ಟು ಕಾಲಾವಕಾಶ ನೀಡಬೇಕಾ­ಗುತ್ತದೆ. ಇಂತಹ ಸಣ್ಣ ಪುಟ್ಟ ಸಮಸ್ಯೆಗಳನ್ನು ಬದಿಗಿಟ್ಟು ನೋಡಿ­ದರೆ, ನರೇಂದ್ರ ಮೋದಿ ಅವರು ಪ್ರಧಾನಿ ಪಾತ್ರವನ್ನು ಮೊದಲ ದಿನದಿಂದಲೇ  ಸಮರ್ಥ­ವಾಗಿ ನಿಭಾಯಿಸುತ್ತಿದ್ದಾರೆ ಎನ್ನುವುದು ಸ್ಪಷ್ಟಗೊಳ್ಳುತ್ತದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT