ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೇಬಿನ ಸೀಮೆ’ಯ ಬಿಜೆಪಿಗೆ ಮೋದಿಯೇ ಮಂತ್ರ!

Last Updated 29 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವೆಂಬರ್ ಒಂಬತ್ತರ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಹುರಿಗೊಳ್ಳುತ್ತಿರುವ ಹಿಮಾಚಲ ಪ್ರದೇಶ, ಪಶ್ಚಿಮ ಹಿಮಾಲಯ ತಪ್ಪಲಿನ ಪುಟ್ಟ ರಾಜ್ಯ. ಮುಕ್ಕಾಲು ಕೋಟಿಯನ್ನೂ ಮುಟ್ಟದ ಜನಸಂಖ್ಯೆ ಒಟ್ಟು 68 ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಿ ಹೋಗಿದೆ. ಸಿಂಧೂ ಕಣಿವೆಯ ನಾಗರಿಕತೆಯಷ್ಟೇ ಪುರಾತನ ಇತಿಹಾಸ.

ಕಿರಾತ, ಕಿನ್ನರ, ದಾಸ, ಖಾಸ, ದಾಗಿ, ಕೋಯ್ಲಿ ಮುಂತಾದ ಪ್ರಾಚೀನ ಬುಡಕಟ್ಟು ಜನಾಂಗಗಳ ಆವಾಸ ಸ್ಥಾನ. ನಿಸರ್ಗಧಾಮಗಳು, ಸದಾ ಹರಿಯುವ ನದಿಗಳ ನಾಡು. ಆದರೆ ದೇಶದ ರಾಜಕೀಯ ಆಗುಹೋಗುಗಳನ್ನು ನಿರ್ಧರಿಸುವಲ್ಲಿ ಈ ಪರ್ವತ ಸೀಮೆಯ ಪಾತ್ರ ಅಮುಖ್ಯ. ದೇಶದಲ್ಲಿ ಸೇವಿಸಲಾಗುವ ಸೇಬಿನ ಶೇ 40ರಷ್ಟನ್ನು ಹಿಮಾಚಲವೂ, ಶೇ 50ರಷ್ಟನ್ನು ಕಾಶ್ಮೀರವೂ ಬೆಳೆದುಕೊಡುತ್ತವೆ.

ಶಿಮ್ಲಾ, ಕಿನ್ನಾರ್, ಕುಲು, ಮಂಡಿ, ಚಂಬಾ ಜಿಲ್ಲೆಗಳೇ ಅಲ್ಲದೆ ಸಿರ್ಮಾರ್ ಮತ್ತು ಲಾಹೋಲ್ ಸ್ಪಿತಿಯ ಕೆಲವು ಭಾಗಗಳಲ್ಲಿ ಬೆಳೆಯಲಾಗುವ ಸೇಬು ರಾಜ್ಯದ ಪ್ರಧಾನ ವಾಣಿಜ್ಯ ಬೆಳೆ. ವರ್ಷಕ್ಕೆ ಐದು ಲಕ್ಷ ಟನ್ನುಗಳಷ್ಟು ಸೇಬು ಹಿಮಾಚಲದಿಂದ ಕರ್ನಾಟಕ ಸೇರಿದಂತೆ ನಾನಾ ರಾಜ್ಯಗಳಿಗೆ ರವಾನೆಯಾಗುತ್ತದೆ.

1.05 ಲಕ್ಷ ಹೆಕ್ಟೇರುಗಳಲ್ಲಿ ಬೆಳೆಯಲಾಗುವ ಈ ರಾಜ್ಯದ ಸೇಬಿನ ವಹಿವಾಟಿನ ಮೊತ್ತ 3.50 ಲಕ್ಷ ಕೋಟಿ ರೂಪಾಯಿಗಳದು. ರಾಜ್ಯದ ಆರ್ಥವ್ಯವಸ್ಥೆಗೆ ಪ್ರವಾಸೋದ್ಯಮದ ಕೊಡುಗೆಯೂ ದೊಡ್ಡದು. ಶಿಮ್ಲಾ (ಗ್ರಾಮಾಂತರ) ಸೇರಿದಂತೆ ಸೇಬು ಬೆಳೆಯುವ ಸೀಮೆಯಲ್ಲಿ ಹನ್ನೊಂದು ವಿಧಾನಸಭಾ ಕ್ಷೇತ್ರಗಳಿವೆ.

ಒಂದು ಕಾಲಕ್ಕೆ ಶಿಮ್ಲಾ ಜಿಲ್ಲೆಯ ‘ಸೇಬು ಸ್ವರ್ಗ’ ಕಿಯಾರಿ ಗ್ರಾಮ ಏಷ್ಯಾದ ಹತ್ತು ಅತ್ಯಂತ ಸಿರಿವಂತ ಹಳ್ಳಿಗಳ ಪಟ್ಟಿಗೆ ಸೇರಿತ್ತು. ಈಗ ಅದು ಗತವೈಭವ. 1930ರ ದಶಕದಲ್ಲಿ ಹಿಮಾಚಲಕ್ಕೆ ಸೇಬು ಕೃಷಿ ಪ್ರವೇಶ ಆದದ್ದು ಇದೇ ಹಳ್ಳಿಯಿಂದ. ಹಿಮಾಚಲದ ಲಕ್ಷಾಂತರ ರೈತರ ಜೀವನಶೈಲಿಯನ್ನೇ ಬದಲಿಸಿದ ಬೆಳೆಯಿದು. ಇಲ್ಲಿನ ಕೆಲವು ಸೇಬು ಬೆಳೆಗಾರರ ವಾರ್ಷಿಕ ವರಮಾನ ₹ 50 ಲಕ್ಷಕ್ಕೂ ಹೆಚ್ಚು.

ಸೇಬಿನ ಕೃಷಿಯನ್ನು ಹವಾಮಾನ ಏರಿಳಿತ ಹಿಂದೆಂದೂ ಇಲ್ಲದಂತೆ ಕಾಡತೊಡಗಿದೆ. ಆಲಿಕಲ್ಲು ಮಳೆ ಈಗ ಸರ್ವೇಸಾಧಾರಣ ವಿದ್ಯಮಾನ. ಇಂದಿನ ಚಳಿಗಾಲಗಳು ಹಿಂದಿನಂತೆ ಕಾಡಿ ಕೊರೆಯುವಷ್ಟು ದಟ್ಟವಲ್ಲ. ಈ ಎರಡೂ ಅಂಶಗಳು ಸೇಬಿನ ಕೃಷಿಗೆ ಪೂರಕ ಅಲ್ಲ. ಚೀನಾ ಮತ್ತು ಅಮೆರಿಕೆಯಿಂದ ಆಮದಾಗುತ್ತಿರುವ ಸೇಬಿನ ಪ್ರಮಾಣ ಹೆಚ್ಚುತ್ತಿರುವುದೂ ಹಿಮಾಚಲ ಮತ್ತು ಕಾಶ್ಮೀರದ ಸೇಬು ಬೆಳೆಗಾರರ ಪಾಲಿಗೆ ಒಳ್ಳೆಯ ಸುದ್ದಿಯಲ್ಲ.

ಹಿಂದಿ ಆಡಳಿತ ಭಾಷೆಯಾದರೂ ನಿತ್ಯ ವ್ಯವಹಾರದಲ್ಲಿ ಪಹಾಡಿ, ಕುಲ್ಲುವಿ, ಮಂಡೇಲಿ, ಕಾಂಗ್ಡಿ, ಕಿನ್ನರಿ, ಚಂಬೇಲಿ ಸಂಪರ್ಕ ಭಾಷೆಗಳಾಗಿ ಬಳಕೆಯಾಗುತ್ತವೆ. ಹಿಂದೂಗಳ ಪ್ರಮಾಣ ಶೇ 95.17. ಮುಸಲ್ಮಾನರು ಶೇ 2.18 ಮಾತ್ರ. ಸಿಖ್ಖರು ಮತ್ತು ಬೌದ್ಧ ಜನಸಂಖ್ಯೆ ಶೇಕಡ ಒಂದೂಕಾಲರ ಆಸುಪಾಸು.

‘ದೇವಭೂಮಿ’ ಎಂದೇ ಹೆಸರಾದ ಹಿಮಾಚಲವೂ ಮನುಷ್ಯ ಮನುಷ್ಯರ ನಡುವಣ ಮೇಲು ಕೀಳಿನ ಕಠಿಣ ಜಾತಿವ್ಯವಸ್ಥೆಯ ಹಿಡಿತದಿಂದ ಮುಕ್ತವಾಗಿಲ್ಲ. ಪಂಜಾಬಿನ ನಂತರ ದೇಶದಲ್ಲಿ ದಲಿತ ಜನಸಂಖ್ಯೆ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ರಾಜ್ಯ ಹಿಮಾಚಲ. ಅವರ ಸಾಕ್ಷರತೆಯ ಪ್ರಮಾಣ ಶೇ 78.9. ರಾಜ್ಯದ ಶೇ 13.7ರಷ್ಟು ಕೃಷಿ ಭೂಮಿಯ ಒಡೆತನ ದಲಿತರದು. ಶೇ 6ರಷ್ಟು ಒಡೆಯರಿಗೆ ನೀರಾವರಿ ಸೌಲಭ್ಯ ದೊರೆತಿದೆ. ದೇಶದ ಇತರೆಡೆ ದಲಿತರ ಮೇಲೆ ನಡೆಯುವ ಬಗೆ ಬಗೆಯ ಅತ್ಯಾಚಾರಗಳಿಗೆ ಹಿಮಾಚಲವೆಂಬ ‘ದೇವಭೂಮಿ’ಯೂ ಹೊರತಲ್ಲ.

ಜಾತಿ, ಅಭಿವೃದ್ಧಿ ಕೆಲಸಗಳು, ಭ್ರಷ್ಟಾಚಾರ, ದುರಾಡಳಿತ, ನಾಯಕತ್ವದ ವರ್ಚಸ್ಸಿನಂತಹ ಅಂಶಗಳು ವಿಶೇಷವಾಗಿ ವಿಧಾನಸಭಾ ಚುನಾವಣೆಗಳ ಮತದಾನದ ಮೇಲೆ ಪ್ರಭಾವ ಬೀರುತ್ತವೆ ಎಂಬುದು ಸಾಮಾನ್ಯ ನಂಬಿಕೆ. ಈ ನಂಬಿಕೆಯನ್ನು ಹುಸಿ ಮಾಡುವ ಯಾವುದೇ ಅಸಾಧಾರಣ ಸಂಗತಿಗಳು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಕಾಣಬರುತ್ತಿಲ್ಲ.

ಈ ರಾಜ್ಯದ ರಾಜಕೀಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯೇ ಪ್ರಮುಖ ಪಾತ್ರಧಾರಿಗಳು. ಅವರು ತಪ್ಪಿದರೆ ಇವರು, ಇವರು ತಪ್ಪಿದರೆ ಅವರು. ಯಾರೂ ಇಲ್ಲ ಮೂರನೆಯವರು ಎನ್ನುವ ಸ್ಥಿತಿ ನೆಲೆಸಿ ಹಲವು ದಶಕಗಳೇ ಉರುಳಿ ಹೋಗಿವೆ. ಠಾಕೂರ್ ಸೇನ್ ನೇಗಿ ಮತ್ತು ಜೆಬಿಎಲ್ ಖಾಚಿ ಕೈ ಕಲೆಸಿ ಕಟ್ಟಿದ್ದ ಹಿಮಾಚಲ ಲೋಕ್ ರಾಜ್ ಪಾರ್ಟಿ 1967ರಲ್ಲಿ ಮತ್ತು ಭ್ರಷ್ಟಾಚಾರಕ್ಕೆ ಪರ್ಯಾಯ ಪದವೇ ಆಗಿಹೋಗಿದ್ದ ಪಂಡಿತ ಸುಖರಾಮ್ ಅವರು 1997ರಲ್ಲಿ ಕಟ್ಟಿದ್ದ ಹಿಮಾಚಲ ವಿಕಾಸ ಕಾಂಗ್ರೆಸ್, ಮಾಹೇಶ್ವರ ಸಿಂಗ್ ಸ್ಥಾಪಿಸಿದ ಹಿಮಾಚಲ ಲೋಕಹಿತ ಪಾರ್ಟಿ ಎಂಬ ತೃತೀಯ ಶಕ್ತಿಗಳು ಕಂಡ ಅಷ್ಟಿಷ್ಟು ಯಶಸ್ಸು ಬಹುಕಾಲ ಮುಂದೆ ಸಾಗಲಿಲ್ಲ.

1967ರಿಂದ ಹಿಮಾಚಲದ ಚುನಾವಣೆ ಕಣಕ್ಕಿಳಿದ ಭಾರತೀಯ ಜನತಾ ಪಾರ್ಟಿಯ ಹಳೆಯ ರೂಪವಾದ ಭಾರತೀಯ ಜನಸಂಘದ ಮತಗಳಿಕೆಯ ಪ್ರಮಾಣ 1977ರ ತನಕ ಮೂರನೆಯ ಸ್ಥಾನದಲ್ಲಿ ಸ್ಥಗಿತಗೊಂಡಿತ್ತು. ಜನತಾ ಪಾರ್ಟಿಯೊಂದಿಗೆ ಜನಸಂಘ ವಿಲೀನವಾಗಿ ನಂತರ ಹೊರಬಂದು ಭಾರತೀಯ ಜನತಾ ಪಾರ್ಟಿಯ ರೂಪ ತಳೆದ ನಂತರ ಕೇಸರಿ ಪಕ್ಷವು ಕಾಂಗ್ರೆಸ್‌ಗೆ ಪರ್ಯಾಯವಾಗಿ ಬೆಳೆಯಿತು.

ವೀರಭದ್ರ ಸಿಂಗ್ ಆಡಳಿತ ಹೊತ್ತ ಭ್ರಷ್ಟಾಚಾರದ ಆಪಾದನೆಗಳು ಕಾಂಗ್ರೆಸ್ ಪಕ್ಷವನ್ನು ಕಾಡಿ ಕಂಗೆಡಿಸಿದ್ದು ಹೌದು. ಆದರೂ ಪಕ್ಷ ಇತ್ತೀಚಿನ ತಿಂಗಳುಗಳಲ್ಲಿ ಅಷ್ಟಿಷ್ಟು ಚೇತರಿಕೆ ಕಂಡಿದ್ದರೆ ಅದರ ಬಹುಪಾಲು ಶ್ರೇಯಸ್ಸು ಕೇಂದ್ರ ಸರ್ಕಾರದ ನೋಟು ರದ್ದು ನಿರ್ಧಾರ ಮತ್ತು ಹಸಿಬಿಸಿ ಜಿ.ಎಸ್.ಟಿ. ಜಾರಿಯು ಉಂಟು ಮಾಡಿರುವ ಅವಾಂತರಗಳಿಗೆ ಸಲ್ಲಬೇಕು. ಭ್ರಷ್ಟಾಚಾರದ ಕಳಂಕದ ನಡುವೆಯೂ ವಯೋವೃದ್ಧ ವೀರಭದ್ರ ಸಿಂಗ್ ಕಾಂಗ್ರೆಸ್ ಪಾಲಿಗೆ ಓಡಿ ಗೆಲ್ಲುವ ಗಟ್ಟಿ ಕುದುರೆ.

ತಮ್ಮನ್ನು ಕಡೆಗಣಿಸಿದರೆ ಕಾಂಗ್ರೆಸ್ ತೊರೆದು ಪ್ರಾದೇಶಿಕ ಪಕ್ಷ ಕಟ್ಟಿ ಕಣಕ್ಕೆ ಇಳಿಯುವುದಾಗಿ ಈ ರಜಪೂತ, ಕಾಂಗ್ರೆಸ್ ವರಿಷ್ಠರಿಗೆ ಹಾಕಿದ ಧಮಕಿಯೂ ಕೆಲಸ ಮಾಡಿದೆ. ಪುನಃ ಸಿಂಗ್ ಅವರೇ ಕಾಂಗ್ರೆಸ್ಸಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ರಾಹುಲ್ ಗಾಂಧಿ ಸಾರ್ವಜನಿಕ ಸಭೆಯೊಂದರಲ್ಲಿ ಘೋಷಿಸಿದರು. ಅಷ್ಟೇ ಅಲ್ಲದೆ ಒಂದು ಕುಟುಂಬಕ್ಕೆ ಒಬ್ಬನೇ ಉಮೇದುವಾರ ಎಂಬ ನೀತಿಯನ್ನು ಮುರಿದು ಸಿಂಗ್ ಪುತ್ರ ವಿಕ್ರಮಾದಿತ್ಯ ಸಿಂಗ್ ಅವರಿಗೂ ಟಿಕೆಟ್ ನೀಡಲಾಗಿದೆ.

ಗೆಲುವಿನ ಅಚಲ ವಿಶ್ವಾಸದಲ್ಲಿರುವ ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಈವರೆಗೆ ಘೋಷಿಸಿಲ್ಲ. ಪ್ರಭಾವ, ವರ್ಚಸ್ಸು, ರಣತಂತ್ರ ನಿರ್ಮಿತಿಯಲ್ಲಿ ವೀರಭದ್ರಗೆ ಸರಿಸಾಟಿ ಎನ್ನಲಾದ ಮಾಜಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಲ್ ಅವರಿಗೆ ಮುಖ್ಯಮಂತ್ರಿ ಪಟ್ಟ ಬಹುತೇಕ ಒಲಿದೀತು. ಆದರೆ ಅವರನ್ನು ಈವರೆಗೆ ಅತಂತ್ರದಲ್ಲಿ ತೂಗು ಬಿಟ್ಟಿರುವುದು ಬಿಜೆಪಿಯ ಹಿತಕ್ಕೆ ಒಳ್ಳೆಯದಲ್ಲ, ವಿನಾ ಕಾರಣ ಕಾಂಗ್ರೆಸ್ಸಿಗೆ ಇನ್ನಷ್ಟು ಕಸುವು ತುಂಬಿದಂತೆ ಎಂಬುದು ಪಕ್ಷದೊಳಗಣ ಅನಿಸಿಕೆ. ಜನಾಧಾರ ಇಲ್ಲದ ಬೇರುರಹಿತ ನಾಯಕರನ್ನು ದೆಹಲಿಯಿಂದ ಹೇರುವುದು ತಿರುಗುಬಾಣ ಆದೀತು ಎಂಬುದು ಒಂದು ವರ್ಗದ ಬಲವಾದ ಶಂಕೆ.

ಅಭಿವೃದ್ಧಿ ಮತ್ತು ಉದ್ಯೋಗಾವಕಾಶ ಸೃಷ್ಟಿಯಲ್ಲಿ ಹಾಲಿ ಕಾಂಗ್ರೆಸ್ ಸರ್ಕಾರದ ಸಾಧನೆ ಕಳಪೆಯೇನೂ ಅಲ್ಲ. ಆದರೆ ಭ್ರಷ್ಟಾಚಾರದ ಆಪಾದನೆಗಳು, ಶಿಥಿಲ ಕಾನೂನು ಮತ್ತು ಸುವ್ಯವಸ್ಥೆಯು ಸರ್ಕಾರದ ವರ್ಚಸ್ಸನ್ನು ಮುಕ್ಕು ಮಾಡಿದೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸುಖವಿಂದರ್ ಸಿಂಗ್ ಸುಖ್ಖು ಮತ್ತು ವೀರಭದ್ರ ಸಿಂಗ್ ನಡುವಣ ಮನಸ್ತಾಪ ಮೇರೆ ಮೀರಿದೆ. ಜೊತೆಗೆ ಹಿಮಾಚಲದ ಮತದಾರ ಒಮ್ಮೆ ಗೆಲ್ಲಿಸಿದ ಪಕ್ಷವನ್ನು ಒಡನೆಯೇ ಮತ್ತೊಂದು ಅವಧಿಗೆ ಆರಿಸುವುದಿಲ್ಲ. ಆಡಳಿತ ವಿರೋಧಿ ಅಲೆಯು ಬಹುತೇಕ ಎಲ್ಲ ಸರ್ಕಾರಗಳನ್ನೂ ಸೋಲಿಸುತ್ತ ಬಂದಿದೆ.

ಆರನೆಯ ಬಾರಿ ಮುಖ್ಯಮಂತ್ರಿ ಏರಲು ಜನಾದೇಶ ಬಯಸಿರುವ ರಾಜ ವಂಶಜ ವೀರಭದ್ರ ಸಿಂಗ್ 83 ವರ್ಷದ ವೃದ್ಧರು. ಸಿಂಗ್ ಎದುರಾಳಿ ಬಿಜೆಪಿಯ ಪ್ರೇಮ್ ಕುಮಾರ್ ಧುಮಲ್ ಕೂಡ 73ರ ಇಳಿಪ್ರಾಯದವರು. ಬಿಜೆಪಿಗೆ ಬಹುಮತ ದೊರೆತರೆ ಮುಖ್ಯಮಂತ್ರಿ. ಗದ್ದುಗೆ ಧಮಲ್ ಪಾಲಾಗುವ ಸಾಧ್ಯತೆಯೇ ದಟ್ಟ. ಆದರೆ ಕೇಂದ್ರ ಆರೋಗ್ಯ ಮಂತ್ರಿ ಜೆ.ಪಿ.ನಡ್ಡಾ ತಾವೂ ಮುಖ್ಯಮಂತ್ರಿ ಆಗಬೇಕೆಂದು ಎದೆ ಸುಡುವಂತಹ ಮಹದಾಸೆ ಇಟ್ಟುಕೊಂಡಿದ್ದಾರೆ. ಪಕ್ಷ ಅವರನ್ನು ಚುನಾವಣಾ ಕಣಕ್ಕೆ ಹುರಿಯಾಳನ್ನಾಗಿ ಇಳಿಸಿಲ್ಲ.

ಹಿಂದಿ ಭಾಷಿಕ ಸೀಮೆಯಲ್ಲಿ ಮೋದಿ ಎಂಬ ಯಶಸ್ಸಿನ ಮಂತ್ರದ ಹೊಳಪು ಇನ್ನೂ ಅಳಿದಿಲ್ಲ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಉಸಾಬರಿಯೇಕೆ ಎಂಬುದು ಪಕ್ಷದ ಸದ್ಯದ ನಿಲುವು. ನೆರೆ ಹೊರೆಯ ದೈತ್ಯ ರಾಜ್ಯ ಉತ್ತರಪ್ರದೇಶದಲ್ಲಿಯೂ ಇದೇ ತಂತ್ರವನ್ನು ಬಿಜೆಪಿ ಅನುಸರಿಸಿತ್ತು. ಮುಖ್ಯಮಂತ್ರಿ ಗಾದಿಗೆ ಮನೋಜ್ ಸಿನ್ಹಾ ಮತ್ತು ಯೋಗಿ ಆದಿತ್ಯನಾಥ ನಡುವೆ ತುರುಸಿನ ಪೈಪೋಟಿ ಇತ್ತು.

2019ರ ಲೋಕಸಭೆ ಚುನಾವಣೆಯ ತನಕ ಕೋಮುವಾದಿ ರಾಜಕಾರಣದ ಕೊಪ್ಪರಿಗೆಯನ್ನು ಕುದಿ ಬಿಂದುವಿನಲ್ಲೇ ಕಾಯಿಸಿ ಇರಿಸುವ ಯೋಗಿಯ ಸಾಮರ್ಥ್ಯವನ್ನು ಗುರುತಿಸಲಾಗಿತ್ತು. ಆದರೆ ಗುಂಪುಗಾರಿಕೆ ತಡೆಯಲು ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಅಂಶವನ್ನು ಅಡಗಿಸಿ ಇಡಲಾಗಿತ್ತು. ಉತ್ತರಪ್ರದೇಶದಲ್ಲಿ ನಡೆದದ್ದು, ಉತ್ತರದ್ದೇ ಆದ ಮತ್ತೊಂದು ತುಣುಕಿನಲ್ಲಿ ಯಾಕೆ ನಡೆಯುವುದಿಲ್ಲ ಎಂಬ ಆತ್ಮವಿಶ್ವಾಸ ಪಕ್ಷದ ವರಿಷ್ಠರದು.

ಆದರೆ ಮೋದಿಯವರ ನೋಟು ರದ್ದತಿ ಮತ್ತು ಜಿ.ಎಸ್.ಟಿ. ಜಾರಿ ಕ್ರಮಗಳು ವ್ಯಾಪಾರಿಗಳಿಗೆ ನಿತ್ತರಿಸಲಾಗದ ಪೆಟ್ಟು ನೀಡಿರುವುದು ವಾಸ್ತವ, ನೋಟು ರದ್ದತಿ ಮತ್ತು ನಗದು ಅಭಾವದಿಂದಾಗಿ ಸೇಬಿನ ಧಾರಣೆ ಕುಸಿತ ಬೆಳೆಗಾರರ ನೆಮ್ಮದಿ ಕೆಡಿಸಿದೆ. ದುರ್ಬಲರು, ಕೆಳಮಧ್ಯಮ ವರ್ಗ ಮತ್ತು ಮಧ್ಯಮವರ್ಗಗಳ ಜನಸಮುದಾಯಗಳನ್ನು ಹೈರಾಣಾಗಿಸಿದ ಕ್ರಮವಿದು. ಆದರೆ ಎರಡು ಪಕ್ಷಗಳನ್ನು ಬಿಟ್ಟು ಮೂರನೆಯದರ ಆಯ್ಕೆ ಮತದಾರನಿಗೆ ಇಲ್ಲ.

ಕೇವಲ 68 ಸದಸ್ಯಬಲದ ಪುಟ್ಟ ರಾಜ್ಯದ ಮುಖ್ಯಮಂತ್ರಿ ಹುದ್ದೆಗೆ ಶಾಸನಸಭೆಗೆ ಆಯ್ಕೆ ಆಗದ ನಡ್ಡಾ ಅವರನ್ನು ನೇಮಕ ಮಾಡಿದರೆ ಅಸಮಾಧಾನ ಭುಗಿಲೇಳುವ ಅಪಾಯವನ್ನು ಎದುರಿಸಬೇಕಾದೀತು ಎಂಬ ಅರಿವು ವರಿಷ್ಠರಿಗೆ ಉಂಟು. ಜೊತೆಗೆ ಬ್ರಾಹ್ಮಣ (ನಡ್ಡಾ) ಮುಖ್ಯಮಂತ್ರಿಯಾದರೆ, ಪ್ರಬಲ ಠಾಕೂರ್ (ಧುಮಲ್) ತಿರುಗಿ ಬಿದ್ದು ಪರಸ್ಪರ ತಿಸ್ರಕ್ಕೆ ದಾರಿಯಾದೀತು ಎಂಬ ಆತಂಕವೂ ಕೆಲಸ ಮಾಡಿದೆ.

ವಾಜಪೇಯಿ ಅವರಿಗೆ ಹತ್ತಿರವಿದ್ದ ರಾಜ್ಯ ಬಿಜೆಪಿಯ ಮತ್ತೊಬ್ಬ ತಲೆಯಾಳು ಶಾಂತಕುಮಾರ್ ಅವರು ಮೋದಿಯವರ ಕೃಪಾದೃಷ್ಟಿಯಲ್ಲಿ ಇಲ್ಲ. ಈಶಾನ್ಯ ಭಾರತದ ಬಿಜೆಪಿ ಉಸ್ತುವಾರಿ ನೋಡಿಕೊಳ್ಳುವ ಆರೆಸ್ಸೆಸ್ ಪ್ರಚಾರಕ ಅಜಯ್ ಜಾಮ್ವಾಲ್ ಅವರು ಅಚ್ಚರಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೊರಹೊಮ್ಮಬಹುದು ಎಂಬ ಮಾತು ಚಾಲ್ತಿಯಲ್ಲಿದೆ.

ರಾಜ್ಯದ ಮೊದಲ ಮುಖ್ಯಮಂತ್ರಿ ಡಾ.ವೈ.ಎಸ್.ಪರಮಾರ್ ಅವರ ಮೊಮ್ಮಗ ಮತ್ತು ಐದು ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ಕುಶ್ ಪರಮಾರ್ ಪುತ್ರ ಚೇತನ್ ಪರಮಾರ್ ಬಿಜೆಪಿ ಸೇರ್ಪಡೆ, ಕುಲು ರಾಜವಂಶಜ ಮಹೇಶ್ವರ ಸಿಂಗ್ 2012ರ ಚುನಾವಣೆಗಳಿಗೆ ಮುನ್ನ ಬಿಜೆಪಿಯನ್ನು ತೊರೆದು ಹಿಮಾಚಲ ಲೋಕಹಿತ ಪಾರ್ಟಿ ಕಟ್ಟಿದ್ದವರು ಈ ಸಲ ಮಾತೃಪಕ್ಷಕ್ಕೆ ಮರಳಿರುವುದು ಸಂಘಟನೆಗೆ ಬಲ ತಂದಿದೆ.

1993ರಿಂದ ಈ ರಾಜ್ಯದ ಅಧಿಕಾರ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಕೈ ಬದಲಾಯಿಸುತ್ತ ಬಂದಿದೆ. ಅಭಿವೃದ್ಧಿಯ ಮಾತು ಬಂದಾಗ ಎರಡೂ ಪಕ್ಷಗಳ ಸರ್ಕಾರಗಳ ನಡುವೆ ಒಂದನ್ನು ಆರಿಸಿ ಬೆನ್ನು ತಟ್ಟುವಂತಹ ಹೆಚ್ಚುಗಾರಿಕೆ ಏನೂ ಇಲ್ಲ.

ಹಾಗೆ ನೋಡಿದರೆ ಹಿಮಾಚಲ ಚುನಾವಣೆಗಳು ತನಗೆ ಸವಾಲೇ ಅಲ್ಲ ಎಂಬುದು ಬಿಜೆಪಿಯ ಭಾವನೆ. ಗುಜರಾತ್ ಮತ್ತು ಆನಂತರ ಕರ್ನಾಟಕವನ್ನು ಗೆಲ್ಲುವುದು ಸದ್ಯದ ಮುಖ್ಯ ಗುರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT