ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂಜರಿಕೆ ಇತಿಹಾಸ’ ಮತ್ತು ಮೋದಿ ಜಾಣ್ಮೆ!

Last Updated 11 ಜೂನ್ 2016, 19:30 IST
ಅಕ್ಷರ ಗಾತ್ರ

ಭಾರತ ಮತ್ತು ಅಮೆರಿಕದ ಹೊಸ ಬಾಂಧವ್ಯದ ಇತಿಹಾಸವು, 1989ರಲ್ಲಿ ಕೊನೆಗೊಂಡ ‘ಶೀತಲ ಸಮರ’ದ ನಂತರ ಆರಂಭಗೊಂಡಿತು ಎಂದು ಹೇಳುವುದೇ ಹೆಚ್ಚು ಉಚಿತವಾದೀತು. ಆಗಲೂ ಭಾರತ ಹಿಂಜರಿಕೆಯಿಂದಲೇ ಈ ಬಾಂಧವ್ಯ ವೃದ್ಧಿಸಲು ಮನಸ್ಸು ಮಾಡಿತ್ತು.

ಭಾರತ ಮತ್ತು ಅಮೆರಿಕದ ಬಾಂಧವ್ಯ ‘ಹಿಂಜರಿಕೆಯ ಇತಿಹಾಸ’ದಿಂದ ಹೊರಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪುನರುಚ್ಚರಿಸಿರುವುದನ್ನು ಹೊರತುಪಡಿಸಿ ಈ ವಾರದ ಅಂಕಣಕ್ಕೆ ಆಯ್ದುಕೊಳ್ಳಲು ನನ್ನ ಎದುರು ಎರಡು ವಿಷಯಗಳಿದ್ದವು. ಇತಿಹಾಸದ ಸ್ವಯಂ ನಿರಾಕರಣೆ ಅಥವಾ ಇತಿಹಾಸದ ಆಷಾಢಭೂತಿತನ. ಬಹುಶಃ ಎರಡೂ ವಿದ್ಯಮಾನಗಳ ಕುರಿತು ಇಲ್ಲಿ ಚರ್ಚಿಸಿರುವೆ. ಭಾರತ ಮತ್ತು ಅಮೆರಿಕ 1947ರಿಂದಲೇ ಸಹಜ ಮಿತ್ರರು ಮತ್ತು ಪಾಲುದಾರ ದೇಶಗಳಾಗಿ ಇರಬಹುದಾಗಿತ್ತು. ಆದರೆ, ಅಮೆರಿಕವು ಜಾಗತಿಕ ದ್ವಿತೀಯ ಮಹಾಯುದ್ಧದ ನಂತರ ದೇಶವನ್ನು ಪುನಃ ಕಟ್ಟುವುದಕ್ಕೆ ಗಮನ ಕೇಂದ್ರೀಕರಿಸಿದ್ದರಿಂದ ಪೂರ್ವ ಮತ್ತು ಪಶ್ಚಿಮದಲ್ಲಿ ಜಪಾನ್‌ ಹಾಗೂ ಯುರೋಪ್‌ನ ಆಚೆ ದೃಷ್ಟಿ ಹಾಯಿಸಲು ಅದಕ್ಕೆ ಸಾಧ್ಯವಾಗಲಿಲ್ಲ.

ಆರಂಭದಲ್ಲಿ ಭಾರತದ ಮುಖಂಡರೂ ಬ್ರಿಟನ್‌ ಅನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಅಮೆರಿಕ ಮತ್ತು ಅಂದಿನ ಸೋವಿಯತ್‌ ಒಕ್ಕೂಟದ ಮಧ್ಯೆ ಉಂಟಾದ ‘ಶೀತಲ ಸಮರ’ದ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕ ಭಿನ್ನ ದಾರಿ ತುಳಿದವು. ಪಾಕಿಸ್ತಾನವು ಅಮೆರಿಕದ ಕಡೆ ವಾಲಿದರೆ, ಭಾರತವು ಅಲಿಪ್ತ ಚಳವಳಿಯ ನಾಯಕತ್ವದ ಪ್ರಭಾವಕ್ಕೆ ಒಳಗಾಗಿ ನಿಧಾನವಾಗಿ ಸೋವಿಯತ್‌ ಒಕ್ಕೂಟದ ಪ್ರಭಾವಕ್ಕೆ ಒಳಗಾಯಿತು. ಜೆಕೊಸ್ಲೋವಾಕಿಯಾದಲ್ಲಿ ನಡೆದ ರಾಜಕೀಯ ಬದಲಾವಣೆಯ (ಮಾನವೀಯ ಮುಖದ ಕಮ್ಯುನಿಸ್ಟ್‌ ಸರ್ಕಾರದ ಪರವಾದ ಸ್ವಾತಂತ್ರ್ಯ ಚಳವಳಿ– ‘ಪ್ರೇಗ್‌ ಸ್ಪ್ರಿಂಗ್‌’) ಸಂದರ್ಭದಲ್ಲಿ ಮೊದಲ ಬಾರಿಗೆ ಮತ್ತು ಆಫ್ಘಾನಿಸ್ತಾನದ ಮೇಲೆ ನಡೆದ ಆಕ್ರಮಣದ ಸಂದರ್ಭದಲ್ಲಿ ಸೋವಿಯತ್‌ ಒಕ್ಕೂಟದ ಆಷಾಢಭೂತಿತನ ಬಯಲಿಗೆ ಬಂದಿತು.

ಪಾಶ್ಚಿಮಾತ್ಯ ಮುಖಂಡರ ಕಟು ವಿರೋಧಿಗಳಾಗಿದ್ದ ಭಾರತದ ಇಬ್ಬರು ಮುಖಂಡರಾದ ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ ಅವರು, ದೇಶಕ್ಕೆ ಎದುರಾದ ತೀವ್ರ ಬಿಕ್ಕಟ್ಟಿನ ಸಂದರ್ಭಗಳಾದ ಚೀನಾದ ಅತಿಕ್ರಮಣ ಮತ್ತು ಆಹಾರ ಧಾನ್ಯದ ಕೊರತೆ ಉಂಟಾದಾಗ ಅನಿವಾರ್ಯವಾಗಿ ಅಮೆರಿಕದ ನೆರವಿಗಾಗಿ ಮೊರೆ ಇಟ್ಟರು. ಅಲ್ಲಿಂದಾಚೆಗೆ ಮೋದಿ ಅವರೂ ಸೇರಿದಂತೆ ಭಾರತದ ಪ್ರತಿ ಪ್ರಧಾನಿಯೂ, ದೇಶದ ಹಸಿರು ಕ್ರಾಂತಿಯಲ್ಲಿ ಅಮೆರಿಕ ನಿರ್ವಹಿಸಿದ ಪ್ರಮುಖ ಪಾತ್ರವನ್ನು ಶ್ಲಾಘಿಸುತ್ತಲೇ ಬಂದಿದ್ದಾರೆ. 1971ರಲ್ಲಿ ಉಭಯ ದೇಶಗಳ ಬಾಂಧವ್ಯ ಸಾಕಷ್ಟು ಹದಗೆಟ್ಟಿತ್ತು. ಅಮೆರಿಕವು ಪಾಕಿಸ್ತಾನವನ್ನು ಬಹಿರಂಗವಾಗಿಯೇ ಬೆಂಬಲಿಸಿತ್ತು.

ಆದಾಗ್ಯೂ ಅಮೆರಿಕದ ಅಧ್ಯಕ್ಷರಾದ ಜಾರ್ಜ್‌ ಬುಷ್‌, ಬಿಲ್‌ ಕ್ಲಿಂಟನ್‌ ಮತ್ತು ಬರಾಕ್‌ ಒಬಾಮ ಅವರು ಎರಡೂ ದೇಶಗಳ ಸ್ನೇಹ ಸಂಬಂಧದ ದಶಕಗಳ ಇತಿಹಾಸವನ್ನು ಕೊಂಡಾಡುತ್ತಲೇ ಬಂದಿದ್ದಾರೆ. ಭಾರತ ಮತ್ತು ಅಮೆರಿಕದ ಹೊಸ ಬಾಂಧವ್ಯದ ಇತಿಹಾಸವು 1989ರಲ್ಲಿ ಕೊನೆಗೊಂಡ ‘ಶೀತಲ ಸಮರ’ದ ನಂತರ ಆರಂಭಗೊಂಡಿತು ಎಂದು ಹೇಳುವುದೇ ಹೆಚ್ಚು ಉಚಿತವಾದೀತು. ಆಗಲೂ ಭಾರತ ಹಿಂಜರಿಕೆಯಿಂದಲೇ ಈ ಬಾಂಧವ್ಯ ವೃದ್ಧಿಸಲು ಮನಸ್ಸು ಮಾಡಿತ್ತು. ಎರಡು ವರ್ಷಗಳ ರಾಜಕೀಯ ಅಸ್ಥಿರತೆ, ಆರ್ಥಿಕ ಕುಸಿತ, ಹೊತ್ತಿ ಉರಿಯುತ್ತಿದ್ದ ಪಂಜಾಬ್‌, ಕಾಶ್ಮೀರದಲ್ಲಿ  ಕಂಡು ಬಂದ ಅರಾಜಕತೆಯ ಕಾರಣಗಳಿಂದ ಭಾರತದ ಆತ್ಮವಿಶ್ವಾಸಕ್ಕೆ ತೀವ್ರ ಧಕ್ಕೆ ಒದಗಿತ್ತು.

ಇದೇ ಸಂದರ್ಭದಲ್ಲಿ ಘಟಿಸಿದ ‘ಶೀತಲ ಸಮರ’ದ ಅಂತ್ಯವು ಭಾರತದ ಪಾಲಿಗೆ ಅವಕಾಶಕ್ಕಿಂತ ಹೊಸ ಬಿಕ್ಕಟ್ಟನ್ನೇ ಸೃಷ್ಟಿಸಿತ್ತು. ಜಾಗತಿಕ ಬದಲಾವಣೆಗೆ ಭಾರತವು ಸೂಕ್ತ ರೀತಿಯಲ್ಲಿ ಸ್ಪಂದಿಸಲು ವಿಫಲವಾಗಿತ್ತು. ಇನ್ನೊಂದೆಡೆ ಅಮೆರಿಕವು ಆಫ್ಘಾನಿಸ್ತಾನದಲ್ಲಿನ ತನ್ನ ಗೆಲುವನ್ನು ಪೂರ್ಣಗೊಳಿಸಲು ಗಮನ ಕೇಂದ್ರೀಕರಿಸಿತ್ತು. ಹೀಗಾಗಿ ತನ್ನದೇ ಆದ ಬಿಕ್ಕಟ್ಟು ಮತ್ತು ರಾಜಕೀಯದ ಒಳ ಸುಳಿಯಲ್ಲಿ ಸಿಲುಕಿದ್ದ ಭಾರತದ ಸಂಕಷ್ಟ ಪರಿಹರಿಸಲು ಮುಂದಾಗುವ ಮನಸ್ಸೂ ಅಮೆರಿಕಕ್ಕೆ ಇದ್ದಿರಲಿಲ್ಲ. 1991ರಲ್ಲಿ ಭಾರತದ ಚಿತ್ರಣ ಸಂಪೂರ್ಣ ಬದಲಾಯಿತು. ಯಥಾಸ್ಥಿತಿಯಿಂದ ಹೊರಬಂದಿತ್ತು.

ಆದರೆ, ರಾಜಕೀಯ ಮುಖಂಡರ ಮನಸ್ಥಿತಿ ಮಾತ್ರ, ಹಳೆಯ ಕಾರ್ಯತಂತ್ರದ ಪ್ರಭಾವದಿಂದ ಹೊರ ಬಂದಿರಲಿಲ್ಲ. ಸೋವಿಯತ್‌ ಒಕ್ಕೂಟವು ತನ್ನ ಸಿಕ್ಕುಗಳನ್ನು ಬಿಡಿಸಿಕೊಂಡು ಹೊರ ಬಂದಿದ್ದರೂ ಭಾರತ ಆ ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳಲಿಲ್ಲ. ರಷ್ಯಾದಲ್ಲಿ ಅರೆ ಮನಸ್ಸಿನ ಕ್ರಾಂತಿಕಾರಿಗಳು ಕಮ್ಯುನಿಸ್ಟ್‌ ಸರ್ಕಾರವನ್ನು 1991ರ ಆಗಸ್ಟ್‌ನಲ್ಲಿ ಮರಳಿ ಅಧಿಕಾರಕ್ಕೆ ತಂದಾಗ, ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್‌ ಅವರ ವ್ಯಕ್ತಿತ್ವಕ್ಕೆ ಹೊರತಾದ ಮತ್ತು ಅಚಾತುರ್ಯದಿಂದ ಕೂಡಿದ ವಿದೇಶಾಂಗ ನೀತಿಯ ಫಲವಾಗಿ ಭಾರತ ಮತ್ತೊಮ್ಮೆ ಎಡವಿತ್ತು. ರಷ್ಯಾದಲ್ಲಿನ ಈ ರಾಜಕೀಯ ಬೆಳವಣಿಗೆಯು ಸುಧಾರಣಾವಾದಿ ಗೋರ್ಬಚೇವ್‌ ಅವರಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ರಾವ್‌ ಅವಸರದಲ್ಲಿ ಪ್ರತಿಕ್ರಿಯಿಸಿದ್ದರು.

ತಮ್ಮಿಂದ ಆದ ತಪ್ಪನ್ನು ಸರಿಪಡಿಸಲು ‘ಪಿವಿಎನ್‌’ ಆನಂತರ ಸಾಕಷ್ಟು ಪರಿಶ್ರಮಪಟ್ಟರು. ಇಸ್ರೇಲ್‌ ಜತೆಗಿನ ಬಾಂಧವ್ಯ ಸುಧಾರಣೆಗೆ ಕ್ರಮ ಕೈಗೊಂಡರು. ಅಮೆರಿಕಕ್ಕೆ ಭೇಟಿ ನೀಡಿದರು. ದಿಟ್ಟ ನರಸಿಂಹರಾವ್‌ ಅವರು, ‘ಅಮೆರಿಕ ಮತ್ತು ಭಾರತದ ಸಂಬಂಧವನ್ನು ಭೂತಕಾಲವು (ಇತಿಹಾಸವು) ಯಾವತ್ತೂ ನಿರ್ಬಂಧಿಸಲಾರದು. ಸಂಬಂಧ ಸುಧಾರಣೆಗೆ ಯಾವುದೇ ಮಿತಿ ಇಲ್ಲ’ ಎಂದು  ಘೋಷಿಸಿದ್ದರು. ಎರಡು ಬಾರಿ ಅಮೆರಿಕದ ಅಧ್ಯಕ್ಷರಾಗಿದ್ದ ಬಿಲ್‌ ಕ್ಲಿಂಟನ್‌ ಅವರ ಮೊದಲ ಅಧಿಕಾರಾವಧಿಯಲ್ಲಿ ಅವರ ಆಡಳಿತದ ಆಯಕಟ್ಟಿನ ಸ್ಥಳಗಳಲ್ಲಿ ‘ಶೀತಲ ಸಮರ’ದ ಸೇನಾಪತಿಗಳೇ ತುಂಬಿಕೊಂಡಿದ್ದರು. ಇತ್ತ ಕಾಶ್ಮೀರದ ಪರಿಸ್ಥಿತಿಯೂ ಬಿಗಡಾಯಿಸಿತ್ತು.

ವಿಶಾಲ್ ಭಾರದ್ವಾಜ್‌ ಅವರ ‘ಹೈದರ್‌’ ಚಿತ್ರದಲ್ಲಿ ತೋರಿಸಿದಂತೆಯೇ ಕಾಶ್ಮೀರ ಸಮಸ್ಯೆಯು ಉಲ್ಬಣಗೊಂಡಿತ್ತು. ದೆಹಲಿ ಮತ್ತು ವಾಷಿಂಗ್ಟನ್‌ ಮಧ್ಯೆ ಸಂಬಂಧ ಸುಧಾರಣೆಗಿಂತ ಕಿರಿಕಿರಿ ಉಂಟು ಮಾಡುವ ವಿದ್ಯಮಾನಗಳ ಹಾವಳಿಯೇ ಹೆಚ್ಚಾಗಿತ್ತು. ಜಾಗತಿಕ ವಿದ್ಯಮಾನಗಳಲ್ಲಿನ ಬದಲಾವಣೆಗಳನ್ನು ಸಕಾಲದಲ್ಲಿ ಅರ್ಥೈಸಿಕೊಂಡ ಜಾಣ ನರಸಿಂಹರಾವ್‌ ಅವರು, ಆರ್ಥಿಕವಾಗಿಯೂ ತಮ್ಮ ಕಾರ್ಯತಂತ್ರ ಬದಲಾಯಿಸಿಕೊಂಡರು. ‘ಶೀತಲ ಸಮರ’ದ ನಂತರ ಎಡವಟ್ಟು ಮಾಡಿಕೊಂಡಿದ್ದ ಭಾರತದ ವಿದೇಶಾಂಗ ನೀತಿಯ ತಪ್ಪುಗಳನ್ನು ತಿದ್ದಿಕೊಳ್ಳಲು ಮುಂದಾದರು.

ಆ ಪ್ರಕ್ರಿಯೆಯನ್ನು ಈಗ ನರೇಂದ್ರ ಮೋದಿ ಅವರು, ‘ಬಲಿಷ್ಠ ಮತ್ತು ಸಮೃದ್ಧ ಭಾರತ ನಿರ್ಮಾಣವು ಅಮೆರಿಕದ ಹಿತಾಸಕ್ತಿಗೂ ಪೂರಕವಾಗಿದೆ’ ಎಂದು ಅಮೆರಿಕದ ಕಾಂಗ್ರೆಸ್‌ನಲ್ಲಿಯೇ ಘೋಷಿಸುವ ಮೂಲಕ ಪೂರ್ಣಗೊಳಿಸಿದ್ದಾರೆ. ‘ಬಲಿಷ್ಠ ಭಾರತದಿಂದ ಅಮೆರಿಕಕ್ಕೂ ಒಳಿತಾಗಲಿದೆ’ ಎಂದು ಈ ಹಿಂದೆ ಭಾರತದ ಯಾವೊಬ್ಬ ಪ್ರಧಾನಿಯೂ ಈ ಬಗೆಯಲ್ಲಿ ದಿಟ್ಟತನದಿಂದ ಹೇಳಿದ ನಿದರ್ಶನಗಳಿಲ್ಲ. ಎರಡೂ ದೇಶಗಳ ಮಧ್ಯೆ ಉಂಟಾಗಿದ್ದ ಪರಸ್ಪರ ಅಪನಂಬಿಕೆಯ ಕಂದರವನ್ನು ಮುಚ್ಚಲು 25 ವರ್ಷಗಳೇ ಬೇಕಾದವು. ಇದನ್ನೇ ಮೋದಿ ಅವರು ‘ಹಿಂಜರಿಕೆಯ ಇತಿಹಾಸ’ ಎಂದು ತುಂಬ ಜಾಣ್ಮೆಯಿಂದ ಬಣ್ಣಿಸಿದ್ದಾರೆ.

ಮೂರು ದಶಕಗಳ ಕಾಲ ಅಮೆರಿಕ ಮತ್ತು ಭಾರತದ ಬಾಂಧವ್ಯ ಬೆಸೆಯುವ ಪ್ರಯತ್ನವನ್ನು ನಾವು ರಿಲೇ ಸ್ಪರ್ಧೆ ಎಂಬಂತೆ ಪರಿಗಣಿಸಬಹುದು. ನರಸಿಂಹರಾವ್‌ ಅವರು ಆರಂಭದಲ್ಲಿ ಮಾರ್ಗವನ್ನು ಸ್ವಚ್ಛಗೊಳಿಸಿದರು. ಅಟಲ್‌ ಬಿಹಾರಿ ವಾಜಪೇಯಿ ಅವರು ಮೊದಲ ಹಂತದ ಓಟ ಪೂರ್ಣಗೊಳಿಸಿ, ಬೇಟನ್‌ ಅನ್ನು ಮನಮೋಹನ್‌ ಸಿಂಗ್‌ ಅವರಿಗೆ ಹಸ್ತಾಂತರಿಸಿದರು. ‘ಯುಪಿಎ–1’ ಅಧಿಕಾರಾವಧಿಯಲ್ಲಿ ಸಿಂಗ್‌ ಅವರು ಪರಮಾಣು ಒಪ್ಪಂದದ ಮೂಲಕ ಅತ್ಯುತ್ತಮವಾಗಿ ಓಡಿದರೂ, ‘ಯುಪಿಎ–2’ ಅಧಿಕಾರಾವಧಿಯಲ್ಲಿ ಕಾಂಗ್ರೆಸ್‌ ಪಕ್ಷವು ಮಿತ್ರ ಪಕ್ಷಗಳ ಮರ್ಜಿಯಲ್ಲಿ ಇದ್ದ ಕಾರಣಕ್ಕೆ ತಡವರಿಸಿದರು. ಈಗ ಮೋದಿ ಬ್ಯಾಟನ್‌ ಹಿಡಿದುಕೊಂಡು ಕೊನೆಯ ಸುತ್ತಿನಲ್ಲಿ ಭರ್ಜರಿಯಾಗಿ ಓಡುತ್ತಿದ್ದಾರೆ.

ಕಾಲು ಶತಮಾನದ ಗಟ್ಟಿ ಅಡಿಪಾಯದ ಲಾಭದ ಜತೆಗೆ ಮೋದಿ ಅವರು ತಮ್ಮ ಸ್ವಂತ ಬಲವನ್ನೂ ಈ ಓಟದಲ್ಲಿ ಪಣಕ್ಕಿಟ್ಟಿದ್ದಾರೆ. ಮೋದಿ ಅವರಿಗೆ ಈಗ ಸಂಸತ್ತಿನಲ್ಲಿ ಮಾಂತ್ರಿಕ ಸಂಖ್ಯೆ 282 ಸಂಸದರ ಬೆಂಬಲ ಇದೆ. ಸಂಪೂರ್ಣ ಬಹುಮತ ಹೊಂದಿದ್ದ ಪ್ರಧಾನಿ ರಾಜೀವ್‌ ಗಾಂಧಿ ಅವರೂ ಆಗ ಇದೇ ಬಗೆಯ ಉತ್ಸಾಹದಿಂದ ಇದ್ದರು ಎನ್ನುವುದು ಬರೀ ಕಾಕತಾಳೀಯವಷ್ಟೆ. ರಾವ್‌, ವಾಜಪೇಯಿ ಮತ್ತು ಮನಮೋಹನ್‌ ಸಿಂಗ್‌ ಅವರಿಗೆ ಸಂಸತ್ತಿನಲ್ಲಿ ಸೀಮಿತ ಸಂಖ್ಯೆಯ ಸಂಸದರ ಬೆಂಬಲ ಇತ್ತು. ಮೋದಿ ಅವರಿಗೆ ಸಂಸತ್ತಿನಲ್ಲಿನ ಬಹುಮತವನ್ನು ಯಾರೊಬ್ಬರೂ ಕೊಡುಗೆಯಾಗಿ ನೀಡಿಲ್ಲ. ಈ ಬಹುಮತವನ್ನು ಅವರೇ ಸ್ವತಃ ಗಳಿಸಿಕೊಂಡಿದ್ದಾರೆ.

ಜತೆಗೆ, ಈಗ ಮೋದಿ ಅವರು ವೃತ್ತಿನಿರತ ರಾಜತಾಂತ್ರಿಕರ ಜತೆ ಕೆಲಸ ಮಾಡುತ್ತಿದ್ದಾರೆ. ಮೂರನೆಯದಾಗಿ, ಭಾರತದ ಪ್ರತಿಭಾವಂತರ ಕುಟುಂಬ ಸದಸ್ಯರು ದೊಡ್ಡ ಸಂಖ್ಯೆಯಲ್ಲಿ ಅಮೆರಿಕಕ್ಕೆ ವಲಸೆ ಹೋಗಿರುವುದರಿಂದ ಆ ದೇಶದ ಜತೆಗಿನ ಭಾವನಾತ್ಮಕ ಸಂಪರ್ಕವು ನಿರ್ವಹಿಸುವ ಪಾತ್ರ ಗಮನಾರ್ಹವಾಗಿರುತ್ತದೆ. ನಾಲ್ಕನೆಯದಾಗಿ ಮೋದಿ ಅವರು ತಮ್ಮ ಮುಂಚಿನ ಪ್ರಧಾನಿಗಳಿಗಿಂತ ವಯಸ್ಸಿನಲ್ಲಿ ಸಾಕಷ್ಟು ಕಿರಿಯರಾಗಿದ್ದಾರೆ. ವಾಸ್ತವ ಸಂಗತಿ ಏನೆಂದರೆ, ದೇಶದ ಮೂವರು ಜಾಣ ಪ್ರಧಾನಿಗಳಾದ ರಾವ್‌, ವಾಜಪೇಯಿ ಮತ್ತು ಮನಮೋಹನ್‌ ಸಿಂಗ್‌ ಅವರು 10 ವರ್ಷ ತಡವಾಗಿ ಪ್ರಧಾನಿ ಹುದ್ದೆ ಏರಿದ್ದರೆ, ಇವರಿಗಿಂತ ಮುಂಚೆ ಅಧಿಕಾರಕ್ಕೆ ಬಂದಿದ್ದ ರಾಜೀವ್‌ ಗಾಂಧಿ ಅತಿ ಕಿರಿಯ ವಯಸ್ಸಿನ ಪ್ರಧಾನಿಯಾಗಿದ್ದರು.

ಮೋದಿ ಅವರು ಜಾಗತಿಕವಾಗಿ ಇತರ ಪ್ರಧಾನಿಗಳಿಗೆ ಹೋಲಿಸಿದರೆ ವಯಸ್ಸಿನಲ್ಲಿ ಹಿರಿಯರಾಗಿದ್ದರೂ, ಅವರಲ್ಲಿ ಇನ್ನೂ ಸಾಕಷ್ಟು ಉತ್ಸಾಹ ಇದೆ. ವಯಸ್ಸೂ ಅವರ ಪರವಾಗಿಯೇ ಇದೆ. ಚಿತ್ತಚಾಂಚಲ್ಯ ಇಲ್ಲದ ಮನಸ್ಸು ಮೋದಿ ಅವರ ವ್ಯಕ್ತಿತ್ವದ ಅತಿದೊಡ್ಡ ಶಕ್ತಿಯಾಗಿದೆ. ಯಾವುದೇ ಹೊರೆಗಳೂ ಅವರನ್ನು ಅಡ್ಡಿಪಡಿಸಲಾರವು. ಇತಿಹಾಸದ ಆಷಾಢಭೂತಿತನವೂ ಅವರ ಪ್ರಖರ ವ್ಯಕ್ತಿತ್ವಕ್ಕೆ, ದಿಟ್ಟ ಚಿಂತನೆಗೆ ಅಡ್ಡಿಯಾಗಿಲ್ಲ. ಆದರೆ, ಕಾಂಗ್ರೆಸ್‌ನಲ್ಲಿನ ಗಲಿಬಿಲಿಯ ಕಾರಣದಿಂದಾಗಿಯೆ ಅಮೆರಿಕದ ಜತೆಗಿನ ಪರಮಾಣು ಒಪ್ಪಂದವನ್ನು ಜಾರಿಗೆ ತರಲಿಕ್ಕಾಗದೆ ಸ್ಥಗಿತಗೊಳಿಸಬೇಕಾಗಿ ಬಂದಿತು. ಇದು ಅಮೆರಿಕದ ಜತೆಗಿನ ರಕ್ಷಣಾ ಸಹಕಾರ ಒಪ್ಪಂದವನ್ನೂ ಕಾರ್ಯಗತಗೊಳಿಸಲು ಅಡ್ಡಿಯಾಗಿ ಪರಿಣಮಿಸಿತು.

ಅಮೆರಿಕದ ಜತೆಗಿನ ಬಾಂಧವ್ಯ ಗಟ್ಟಿಗೊಳಿಸಲು ಕಾಂಗ್ರೆಸ್‌ ಮುಂದಾದರೆ ಮುಸ್ಲಿಂ ಓಟುಗಳಿಗೆ ಎರವಾಗಬೇಕಾದೀತು ಎಂದು ಕೆಲವರು ಸೋನಿಯಾ ಅವರ ಕಿವಿ ಊದಿದರೆ, ಎಡಪಕ್ಷಗಳ ಪ್ರಭಾವದ ಕೇರಳದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಇನ್ನಷ್ಟು ಪ್ರತಿಕೂಲ ಉಂಟಾದೀತು ಎಂದು ರಕ್ಷಣಾ ಸಚಿವ ಎ.ಕೆ.ಆ್ಯಂಟನಿ ಭಾವಿಸಿದರು. ಮೋದಿ ಅವರು ಸ್ವಚ್ಛ ಪಾಟಿ (ಸ್ಲೇಟು) ಮತ್ತು ಮುಕ್ತ ಮನಸ್ಸಿನಿಂದ ಅಧಿಕಾರಕ್ಕೆ ಬಂದಿದ್ದಾರೆ. ಅಮೆರಿಕದ ಜತೆಗಿನ ಪರಮಾಣು ಮತ್ತು ರಕ್ಷಣಾ ಒಪ್ಪಂದಗಳನ್ನು ತಾವು ಮತ್ತು ತಮ್ಮ ಪಕ್ಷ ಈ ಹಿಂದೆ ಕಟುವಾಗಿ ವಿರೋಧಿಸಿದ್ದರ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದೆ ಮುನ್ನಡೆದಿದ್ದಾರೆ. ಅಧಿಕಾರ ಸ್ವೀಕಾರದ ಮೊದಲ ದಿನವು, ಹೊಸ ಇತಿಹಾಸಕ್ಕೆ ಮುನ್ನುಡಿ ಬರೆಯುತ್ತದೆ.

ಚಿತ್ತಚಾಂಚಲ್ಯಕ್ಕೆ ಒಳಗಾಗದ ಮೋದಿ ಅವರ ಎಲ್ಲವನ್ನೂ, ಎಲ್ಲರನ್ನೂ ನಿಭಾಯಿಸುವ ನಾಯಕತ್ವದ ಗುಣವು ರಾಜತಾಂತ್ರಿಕತೆ ಮತ್ತು ರಾಜಕೀಯ ಒಪ್ಪಂದಕ್ಕೆ ಬರುವ ವಿಷಯದಲ್ಲಿಯೂ ಪ್ರಭಾವ ಬೀರುತ್ತಿದೆ. ಅವರು ಕೊಡು–ಕೊಳ್ಳುವಿಕೆಗೆ ಒಲವು ತೋರಿಸುತ್ತಿದ್ದಾರೆ. ಅದು ವಾಣಿಜ್ಯ ಬಾಂಧವ್ಯ ಸುಧಾರಣೆ ಇರಲಿ, ಹವಾಮಾನ ಬದಲಾವಣೆಗೆ ಸಂಬಂಧಿಸಿದ ಮಾತುಕತೆ ಇರಲಿ ಅಮೆರಿಕ ಮತ್ತು ಚೀನಾದ ಜತೆ ಒಂದೇ ಬಗೆಯಲ್ಲಿ ಜಾಣ್ಮೆಯಿಂದ ವ್ಯವಹರಿಸುತ್ತಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಮೋದಿ ಅವರನ್ನು ಜೂನಿಯರ್‌ ಬುಷ್‌ ಅಥವಾ ರೊನಾಲ್ಡ್‌ ರೇಗನ್‌ ಅವರಿಗೆ ಹೋಲಿಸಬಹುದು. ಅವರೊಬ್ಬ ನೇರವಾಗಿ ಗುರಿ ಇಟ್ಟು ಹೊಡೆಯುವ ಗುರಿಕಾರ. ಹಿಂಜರಿಕೆ ಸ್ವಭಾವದಿಂದ  ಹೊರತಾದವರು ಮತ್ತು ಇತಿಹಾಸದ ಆಷಾಢಭೂತಿತನದಿಂದ ಮುಕ್ತವಾದ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿದವರು.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT