ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಪ್ರಾಜ್ಞರು ಹಾಗೂ ಸಾಹಿತ್ಯ ಆಸಕ್ತರನ್ನು ಆಕರ್ಷಿಸುವ ‘ಕವಿಗೋಷ್ಠಿ’ಗೆ ಈ ಬಾರಿ ಹೊಸತನದ ಸ್ಪರ್ಶ ನೀಡಲು ನಿರ್ಧರಿಸಲಾಗಿದೆ. ‘ಪಂಚ ಕಾವ್ಯೋತ್ಸವ’ ಶೀರ್ಷಿಕೆಯಲ್ಲಿ, ರಾಜ್ಯದೊಂದಿಗೆ ಹೊರ ರಾಜ್ಯ ಮತ್ತು ವಿದೇಶಿ ಕವಿಗಳನ್ನೂ ಆಹ್ವಾನಿಸಿ, ಇದೇ ಮೊದಲ ಬಾರಿಗೆ ‘ಜಾಗತಿಕ ವ್ಯಾಪ್ತಿ’ ಒದಗಿಸಲಾಗುತ್ತಿದೆ.
ಹಿಂದಿನ ದಸರೆಯಲ್ಲಿ ಪ್ರಧಾನ ಕವಿಗೋಷ್ಠಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕವಿಗಳೊಂದಿಗೆ ‘ಸಹೋದರ ಭಾಷೆ’ಗಳ ಕವಿಗಳ ಕವಿತೆ ವಾಚನಕ್ಕೆ ಅವಕಾಶ ಕೊಡಲಾಗುತ್ತಿತ್ತು. ಈ ಬಾರಿ ಇತರ ರಾಜ್ಯಗಳ ಭಾಷೆಗಳ ಕವಿಗಳನ್ನು ಆಹ್ವಾನಿಸಲಾಗುತ್ತಿದ್ದು, ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ.
‘ಪ್ರಾದೇಶಿಕ’, ‘ವಿಶಿಷ್ಟ’, ‘ವಿನೋದ’, ‘ವೈವಿಧ್ಯ‘ ಹಾಗೂ ‘ಸಮಗ್ರ’ ಎಂಬ ಶೀರ್ಷಿಕೆಯಲ್ಲಿ ಐದು ಕವಿಗೋಷ್ಠಿಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಈ ಬಾರಿ ‘ಉರ್ದು ಕವಿಗೋಷ್ಠಿ’ ಪ್ರತ್ಯೇಕವಾಗಿರುವುದಿಲ್ಲ. ಮಕ್ಕಳು, ಯುವಕರು ಹಾಗೂ ಮಹಿಳೆಯರಿಗೂ ಪ್ರತ್ಯೇಕವಾಗಿ ನಡೆಸದಿರಲು ನಿರ್ಧರಿಸಲಾಗಿದೆ. ಹಿಂದಿನ ವರ್ಷ ದಸರಾ ಕಾವ್ಯ ಸಂಭ್ರಮ, ಚಿಗುರು, ಮಹಿಳಾ, ಪ್ರಾದೇಶಿಕ, ಯುವ ಹಾಗೂ ಉರ್ದು ಕವಿಗೋಷ್ಠಿಗಳನ್ನು ಆಯೋಜಿಸಲಾಗಿತ್ತು.
ಕವಿಗಳ ಪಟ್ಟಿ ಶೀಘ್ರ:
ಈ ಬಾರಿ ಪ್ರತಿ ಕವಿಗೋಷ್ಠಿಯಲ್ಲೂ ಮಕ್ಕಳು, ಮಹಿಳೆಯರು, ಕನ್ನಡದ ಸಹೋದರ ಭಾಷೆಗಳವರು ಹಾಗೂ ಪ್ರಾದೇಶಿಕ ಸಮತೋಲನ ಆಧರಿಸಿ ಕವಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಶೀಘ್ರದಲ್ಲೇ ಕವಿಗಳ ಪಟ್ಟಿ ಹೊರಬೀಳಲಿದೆ. ಮಕ್ಕಳು, ಯುವಕರು ಹಾಗೂ ಮಹಿಳಾ ಕವಿಗಳಿಗೆ ವಿವಿಧ ವೇದಿಕೆಗಳಲ್ಲಿ ವೇದಿಕೆ ಒದಗಿಸಲಾಗುತ್ತಿದೆ.
ಹಿಂದೆ ಪ್ರಧಾನ ಕವಿಗೋಷ್ಠಿ’ ಎಂದು ಕರೆಯುತ್ತಿದ್ದುದ್ದನ್ನು ಈ ಬಾರಿ ‘ಸಮೃದ್ಧ ಕವಿಗೋಷ್ಠಿ’ ಎಂದು ಹೆಸರಿಡಲಾಗಿದೆ. ಕನ್ನಡದೊಂದಿಗೆ ಇತರ ಭಾಷೆಗಳ ಕಾವ್ಯಲೋಕಕ್ಕೆ ಸಮೃದ್ಧ ಕೊಡುಗೆ ನೀಡಿದವರನ್ನು ಆಹ್ವಾನಿಸಲಾಗುವುದು. ಆದ್ದರಿಂದ ಅದು ಬಹುಭಾಷಾ ಕವಿಗೋಷ್ಠಿಯೂ ಆಗಲಿದೆ. ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಅಸ್ಸಾಮಿ, ಬಂಗಾಳಿ, ಮಲಯಾಳ ಮೊದಲಾದ ಕವಿತೆಗಳನ್ನು ಕೇಳುವ ಅವಕಾಶ ಸಾಹಿತ್ಯಾಸಕ್ತರಿಗೆ ದೊರೆಯಲಿದೆ.
- ಈ ಬಾರಿ ‘ಪ್ರತ್ಯೇಕ ಉರ್ದು ಕವಿಗೋಷ್ಠಿ’ ಇಲ್ಲ ಪ್ರಧಾನ ಕವಿಗೋಷ್ಠಿಯ ಹೆಸರು ಬದಲು ಚಿಗುರು, ಯುವಕರು, ಮಹಿಳಾ ಕವಿಗೋಷ್ಠಿ ಪ್ರತ್ಯೇಕವಿಲ್ಲ
ಹಂಪನಾ ನಾಡಹಬ್ಬದ ಉದ್ಘಾಟಕರೂ ಆಗಿದ್ದಾರೆ. ಸರ್ಕಾರದಿಂದ ಅವರ ಆಯ್ಕೆ ಅಂತಿಮಗೊಳ್ಳುವ ಮುನ್ನವೇ ನಾವು ಕವಿಗೋಷ್ಠಿಗೆ ಆಹ್ವಾನಿಸಿದ್ದೆವು. ಬರಲು ಒಪ್ಪಿದ್ದಾರೆವಿ.ಎನ್. ಮಲ್ಲಿಕಾರ್ಜುನಸ್ವಾಮಿ ಉಪ ವಿಶೇಷಾಧಿಕಾರಿ ಕವಿಗೋಷ್ಠಿ ಉಪ ಸಮಿತಿ
ಹಲವು ಭಾಷೆಯವರಿಗೆ...
‘ಬೇರೆ ರಾಜ್ಯದ 12 ಕವಿಗಳು ವಿದೇಶದ ಮೂವರು ಕವಿಗಳನ್ನು ಆಹ್ವಾನಿಸಲಾಗುತ್ತಿದೆ. ರಾಜ್ಯದಲ್ಲಿರುವ ಸಹೋದರ ಭಾಷೆಗಳಾದ ಕೊಡವ ತುಳು ಕೊಂಕಣಿ ಉರ್ದು ಸಂಸ್ಕೃತ ಬಂಜಾರ ಮತ್ತಿತರ ಕವಿಗಳನ್ನೂ ಕರೆಸಲಾಗುತ್ತಿದೆ’ ಎಂದು ಕವಿಗೋಷ್ಠಿ ಉಪ ಸಮಿತಿಯ ಉಪ ವಿಶೇಷಾಧಿಕಾರಿ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ಪ್ರಾದೇಶಿಕ ಕವಿಗೋಷ್ಠಿಯಲ್ಲಿ ವಿವಿಧ ಪ್ರದೇಶದವರಿಗೆ ಅವಕಾಶವಿರಲಿದೆ. ‘ವಿಶಿಷ್ಟ’ದಲ್ಲಿ ಸಾಹಿತ್ಯ ಹೊರತುಪಡಿಸಿದ ಪತ್ರಿಕೋದ್ಯಮ ರೈತ... ಹೀಗೆ ವಿಭಿನ್ನ ಕ್ಷೇತ್ರದಲ್ಲಿ ಕಾವ್ಯ ಬರೆಯುತ್ತಿರುವರನ್ನು ಪಾಲ್ಗೊಳ್ಳಲಿದ್ದಾರೆ. ಕೈದಿಗಳಲ್ಲೂ ಕಾವ್ಯ ಬರೆಯುವ ಹವ್ಯಾಸ ಇರುತ್ತದೆ; ಅಂತಹ ವಿಶೇಷ ವ್ಯಕ್ತಿಗಳಿಗೆ ವೇದಿಕೆ ಒದಗಿಸಲಾಗುವುದು. ವಿನೋದ ವಿಭಾಗದಲ್ಲಿ ಹಾಸ್ಯ– ಕಾವ್ಯ ಜುಗಲ್‌ಬಂದಿ ನಡೆಯಲಿದೆ. ಖ್ಯಾತ ಹಾಸ್ಯ ಭಾಷಣಕಾರರು ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು. ‘ದಸರಾ ಕವಿಗೋಷ್ಠಿಯನ್ನು ಸಾಹಿತಿ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಉದ್ಘಾಟಿಸಲಿದ್ದಾರೆ. ಚಲನಚಿತ್ರ ಗೀತ ರಚನೆಕಾರ ವಿ. ನಾಗೇಂದ್ರ ಪ್ರಸಾದ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ. ಪ್ರಾದೇಶಿಕ ಕವಿಗೋಷ್ಠಿಯನ್ನು ಕವಿ ಎಚ್.ಎಸ್. ಶಿವಪ್ರಕಾಶ್ ಉದ್ಘಾಟಿಸಲಿದ್ದಾರೆ. ವಿನೋದ ಕವಿಗೋಷ್ಠಿಗೆ ಹಂಪಾ ನಾಗರಾಜಯ್ಯ ಅವರನ್ನು ಉದ್ಘಾಟಕರನ್ನಾಗಿ ಆಹ್ವಾನಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.