ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ| ದುಷ್ಟನ ಗುಣಗಳು

Last Updated 19 ಅಕ್ಟೋಬರ್ 2020, 1:12 IST
ಅಕ್ಷರ ಗಾತ್ರ

ಪರಚ್ಛಿದ್ರೇಷು ಹೃದಯಂ ಪರವಾರ್ತಾಸು ಚ ಶ್ರವಃ ।

ಪರಮರ್ಮಣಿ ವಾಚಂ ಚ ಖಲಾನಾಮಸೃಜದ್ವಿಧಿಃ ।।

ಇದರ ತಾತ್ಪರ್ಯ ಹೀಗೆ:

‘ಇನ್ನೊಬ್ಬರ ದೋಷವನ್ನು ಹುಡುಕುವುದರಲ್ಲಿ ಮನಸ್ಸು, ಇನ್ನೊಬ್ಬರ ಸುದ್ದಿಯನ್ನು ಕೇಳುವುದರಲ್ಲಿ ಕಿವಿ, ಇನ್ನೊಬ್ಬರಿಗೆ ಘಾಸಿಮಾಡುವಂಥ ಮಾತು – ಈ ಮೂರನ್ನು ಬ್ರಹ್ಮನು ದುರ್ಜನರಿಗಾಗಿಯೇ ಸೃಷ್ಟಿಸಿದ್ದಾನೆ.‘

ದುರ್ಜನನ ಲಕ್ಷಣವನ್ನು ಸುಭಾಷಿತ ಇಲ್ಲಿ ನಿರೂಪಿಸಿದೆ.

ದುರ್ಜನನ ಸ್ವಭಾವ ಎಂದರೆ ಇನ್ನೊಬ್ಬರಿಗೆ ತೊಂದರೆಯನ್ನು ಉಂಟುಮಾಡುವುದು. ಅಷ್ಟೆ ಅಲ್ಲ, ಯಾವುದನ್ನು ಮಾಡಬೇಕೋ ಅದನ್ನು ಮಾಡದಿರುವುದು, ಯಾವುದನ್ನು ಮಾಡಬಾರದೋ ಅದನ್ನು ಮಾಡುವುದು – ಇದು ಕೂಡ ದುರ್ಜನನ ಲಕ್ಷಣವೇ ಹೌದು.

ದೋಷಗಳು ಯಾರಲ್ಲಿ ತಾನೆ ಇರುವುದಿಲ್ಲ? ಎಲ್ಲರಲ್ಲೂ ಒಂದಲ್ಲ ಒಂದು ದೋಷ ಇದ್ದೇ ಇರುವುದಷ್ಟೆ. ಎಲ್ಲರಲ್ಲೂ ಮಿತಿಗಳು ಇರುತ್ತವೆ. ಆದರೆ ದುರ್ಜನ ಏನು ಮಾಡುತ್ತಾನೆ? ತನ್ನಲ್ಲಿರುವ ದೋಷಗಳ ಬಗ್ಗೆ ಅವನು ಗಮನ ಕೊಡುವುದಿಲ್ಲ; ಇನ್ನೊಬ್ಬರಲ್ಲಿರುವ ತಪ್ಪುಗಳನ್ನು ಹುಡುಕುವುದರಲ್ಲಿ ಸದಾ ಮಗ್ನನಾಗಿರುತ್ತಾನೆ.

ತನ್ನ ಏಳಿಗೆಯ ಬಗ್ಗೆ ದುರ್ಜನ ಯೋಚಿಸುವುದಿಲ್ಲ; ತನ್ನ ತಪ್ಪುಗಳನ್ನು ತಿದ್ದುಕೊಂಡು ಜೀವನವನ್ನು ಸರಿದಾರಿಗೆ ತಂದುಕೊಳ್ಳಬೇಕೆಂಬ ಯೋಚನೆಯನ್ನೂ ಅವನು ಮಾಡುವುದಿಲ್ಲ. ಇತರರು ಅವನ ಬಗ್ಗೆ ಏನೆಲ್ಲ ಆಡಿಕೊಳ್ಳುತ್ತಾರೆ ಎಂಬುದರ ಬಗ್ಗೆಯೂ ಅವನಿಗೆ ಪರಿವೆ ಇರುವುದಿಲ್ಲ. ಆದರೆ ಇನ್ನೊಬ್ಬರ ಬಗ್ಗೆ ಚಾಡಿಮಾಡತುಗಳನ್ನು ಕೇಳಲು ಮಾತ್ರ ಸರ್ವದಾ ಸನ್ನದ್ಧನಾಗಿರುತ್ತಾನೆ. ಹೀಗೆ ಅವರ ಬಗ್ಗೆ ಇವರ ಬಗ್ಗೆ ತಲೆಕೆಡಿಸಿಕೊಂಡು, ಕಿವಿ ಕೊಡುವುದರಿಂದ ಇವನಿಗೂ ಲಾಭವಿರುವುದಿಲ್ಲ, ಅವರಿಗೂ ಲಾಭವಿರುವುದಿಲ್ಲ. ಆದರೂ ಅವನ ಈ ಹೀನಕೃತ್ಯವನ್ನು ಅವನು ಬಿಡಲಾರ.

ಮಾತಿಗಿರುವ ಶಕ್ತಿ ಅಪಾರ. ಅದರಿಂದ ಮನೆಯನ್ನು ಕಟ್ಟಲೂಬಹುದು, ಮನಸ್ಸನ್ನು ಮುರಿಯಲೂಬಹುದು. ದುರ್ಜನನ ಸ್ವಭಾವವೇ ಒಡೆಯುವುದು ಆದ್ದರಿಂದ ಅವನು ತಾನಾಡುವ ಮಾತಿನ ಮೂಲಕವೂ ಅವನ ಹೀನಕೃತ್ಯವನ್ನು ಮುಂದುವರಿಸುತ್ತಾನೆ. ಮಾತಿನ ಮೂಲಕವೇ ಇನ್ನೊಬ್ಬರಿಗೆ ಹಿಂಸೆಯನ್ನು ಕೊಡಬಲ್ಲ. ಹೀಗೆ ಇನ್ನೊಬ್ಬರಿಗೆ ಹಿಂಸೆಯನ್ನು ಕೊಡುವುದರಿಂದಲೇ ಅವನಿಗೆ ಸಂತೋಷ ದಕ್ಕುವುದು. ಇನ್ನೊಬ್ಬರ ಕಷ್ಟವನ್ನು ನೋಡಿ ಸಂತೋಷಪಡುವಂಥ ವಿಕೃತಬುದ್ಧಿ ಇರುವವನೇ ದುರ್ಜನ.

ನಮ್ಮಲ್ಲಿ ಈ ಮೂರು ಗುಣಗಳಲ್ಲಿ ಯಾವುದಿವೆ; ಮೂರೂ ಇವೆಯೋ, ಒಂದು ಅಥವಾ ಎರಡು ಇದೆಯೋ – ಇದರ ಆತ್ಮಾವಲೋಕನ ನಡೆಯಬೇಕು. ಈ ಗುಣಗಳು ಇದ್ದರೆ ಕೂಡಲೇ ಅವನ್ನು ವ್ಯರ್ಜಿಸಲೇ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT