ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ಯಾಚನೆಯ ಫಲ!

Last Updated 24 ಜೂನ್ 2020, 5:49 IST
ಅಕ್ಷರ ಗಾತ್ರ

ದಾರಿದ್ರ್ಯೇಣ ಕುಲಂ ಮದೇನ ಕುಶಲಂ ದ್ವೇಷೇಣ ವಿದ್ಯಾಫಲಂ

ಶೀಲಂ ದುರ್ಜನಸಂಗಮೇನ ಮಲಿನಾಚಾರೇಣ ಶುಕ್ಲಂ ಯಶಃ ।

ಆಲಸ್ಯೇನ ಧನಂ ಪ್ರಯಾತಿ ನಿಧನಂ ಲೌಲ್ಯೇನ ಮಾನೋನ್ನತಿಃ

ಯಾಚ್ಞಾದೈನ್ಯಪರಿಗ್ರಹೇಣ ಚ ಗುಣಗ್ರಾಮಃ ಸಮಗ್ರೋ ನೃಣಾಮ್‌ ।।

ಇದರ ತಾತ್ಪರ್ಯ ಹೀಗೆ:

’ಬಡತನದಿಂದ ಕುಟುಂಬವೂ ಮದದಿಂದ ಕ್ಷೇಮವೂ ದ್ವೇಷದಿಂದ ವಿದ್ಯಾಫಲವೂ ದುರ್ಜನನ ಸಹವಾಸದಿಂದ ನಡತೆಯೂ ದುರಾಚಾರದಿಂದ ಶುಭ್ರವಾದ ಕೀರ್ತಿಯೂ ನಾಶವಾಗುತ್ತವೆ. ಹೀಗೆಯೇ ಸೋಮಾರಿತನದಿಂದ ಹಣವೂ ಲೋಭದಿಂದ ಗೌರವವೂ ಕ್ಷೀಣಿಸುತ್ತದೆ. ಯಾಚನೆಯಿಂದ ಒದಗುವ ದೈನ್ಯದಿಂದ ಜನರ ಸಕಲ ಸದ್ಗುಣಗಳೂ ಅಡಗಿಹೋಗುತ್ತವೆ.‘

ಪ್ರತಿ ಕೆಲಸಕ್ಕೂ ಫಲ ಎನ್ನುವುದು ಇದ್ದೇ ಇರುತ್ತದೆಯಷ್ಟೆ. ಹೀಗೆಯೇ ನಮ್ಮ ಒಂದೊಂದು ಗುಣಕ್ಕೂ ದುರ್ಗುಣಕ್ಕೂ ಅದರದೇ ಆದಂಥ ಫಲಗಳೂ ಇರುತ್ತವೆ. ನಮ್ಮ ದುರ್ಗುಣಗಳ ಕಾರಣದಿಂದ ನಾವು ಜೀವನದಲ್ಲಿ ಏನೆಲ್ಲ ಕಳೆದುಕೊಳ್ಳಬೇಕಾಗುತ್ತದೆ ಎನ್ನುವುದನ್ನು ಸುಭಾಷಿತ ತುಂಬ ಮನನೀಯವಾಗಿ ಹೇಳುತ್ತಿದೆ.

ಮೊದಲಿಗೆ ಬಡತನದಿಂದಲೇ ಆರಂಭಿಸಿದೆ. ಹಣ ಇದ್ದರೆ ಮಾತ್ರ ಮುಂದಿನ ವಿಷಯ – ಎಂಬುದನ್ನು ಸುಭಾಷಿತ ಇಲ್ಲಿ ಧ್ವನಿಸಿದೆಯೆ?

ಇರಲಿ, ಬಡತನದಿಂದ ನಾವು ಏನನ್ನು ಕಳೆದುಕೊಳ್ಳುತ್ತೇವೆ? ಇಡಿಯ ಕುಟುಂಬವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಕುಟುಂಬವನ್ನೇ ಕಳೆದುಕೊಳ್ಳುವುದು ಎಂದೇನು? ಇದನ್ನು ಎರಡು ನೆಲೆಗಳಲ್ಲಿ ಅರ್ಥೈಸಿಕೊಳ್ಳಬಹುದು. ಬಡತನದ ಕಾರಣದಿಂದ ನಮ್ಮ ಕುಟುಂಬವು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಈ ಕಷ್ಟಗಳಿಂದ ಕುಟುಂಬದ ದಿಕ್ಕು ತಪ್ಪುತ್ತದೆ. ಆಗ ನಾವು ಕುಟುಂಬವನ್ನು ಕಳೆದುಕೊಳ್ಳಬೇಕಾಗುತ್ತದೆ.

ಇನ್ನೊಂದು ರೀತಿಯಲ್ಲೂ ನಾವು ಕುಟುಂಬವನ್ನು ಕಳೆದುಕೊಳ್ಳಬೇಕಾಗುತ್ತದೆ. ನಮ್ಮಲ್ಲಿ ಹಣವಿಲ್ಲದ ಕಾರಣದಿಂದ ಕುಟುಂಬವೇ ನಮ್ಮನ್ನು ತ್ಯಜಿಸಬಲ್ಲದು. ಎಲ್ಲ ಸಂಬಂಧಗಳೂ ಗುಣಗಳೂ ಹಣವನ್ನೇ ಆಶ್ರಯಿಸಿರುತ್ತವೆಯಷ್ಟೆ! ನಮ್ಮ ಕಿಸೆಯಲ್ಲಿ ಹಣವಿಲ್ಲದಿರುವಾಗ ಮನೆಯವರು ನಮ್ಮನ್ನು ಹೇಗೆ ನೋಡುತ್ತಾರೆ – ಎಂಬುದು ನಮ್ಮ ಅನುಭವಕ್ಕೆ ಬಂದಿರುತ್ತದೆಯೆನ್ನಿ!

ಮದ. ಈ ಪದವನ್ನು ಎರಡು ಸಲ ಉಚ್ಚರಿಸಿದರೂ ನಶೆ ಏರುತ್ತದೆಯೇನೋ! ಇನ್ನು ಅದು ನಮ್ಮಲ್ಲಿ ಗೂಡು ಕಟ್ಟಿದ್ದರೆ ನಮ್ಮ ಪರಿಸ್ಥಿತಿ? ಮದದಿಂದ ನಮ್ಮ ಕ್ಷೇಮಕ್ಕೇ ತೊಂದರೆ ಎನ್ನುತ್ತಿದೆ ಸುಭಾಷಿತ. ಮದ ಇರುವಾಗ ಬುದ್ಧಿ ಕೈ ಕೊಡುತ್ತದೆ; ನಮ್ಮ ಕಣ್ಣಿಂದ ಆಗ ಏನೇನು ಕಾಣುತ್ತಿರುತ್ತೇವೆಯೋ ಅವೆಲ್ಲವೂ ’ನಾವೇ‘ ಆಗಿರುತ್ತೇವೆ; ಎಲ್ಲೆಲ್ಲೂ ’ನಾವೇ‘, ’ನಾವೇ‘! ಎಲ್ಲೆಲ್ಲೂ ನಾವಿರುವಾಗ ನಾವೇನೂ ಮಾಡಿದರೂ ನಮ್ಮನ್ನು ಕೇಳುವವರಿಲ್ಲ – ಎಂಬ ಮನಃಸ್ಥಿತಿ ಇರುತ್ತದೆ. ಆ ಸ್ಥಿತಿಯಲ್ಲಿ ಏನೇನು ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುತ್ತೇವೆಯೋ? ಹೀಗಾಗಿ ಕ್ಷೇಮ ನಮ್ಮಿಂದ ದೂರವಾಗುವುದು ಸಹಜವೇ!

ನಮ್ಮಲ್ಲಿ ದ್ವೇಷಬುದ್ಧಿ ತುಂಬಿರುವಾಗ ನಮ್ಮ ತಲೆಗೆ ವಿದ್ಯೆ ಏರುವುದಿಲ್ಲ. ದ್ವೇಷ ನಮ್ಮನ್ನು ಉದ್ವೇಗದಲ್ಲಿಡುತ್ತದೆ; ನಮ್ಮ ಸಮಾಧಾನವನ್ನು ಕೆಡಿಸುತ್ತದೆ. ಇದು ಏಕಾಗ್ರತೆಯನ್ನು ಭಂಗಮಾಡುತ್ತದೆ. ಏಕಾಗ್ರತೆ ಇಲ್ಲದಿದ್ದಾಗ ವಿದ್ಯೆಯನ್ನು ಸಂಪಾದಿಸಲು ಹೇಗಾದೀತು?

ನಾವು ಯಾರು ಜೊತೆಯಲ್ಲಿ ಇರುತ್ತೇವೆಯೋ ಅವರ ಪ್ರಭಾವಕ್ಕೆ ಒಳಗಾಗುವುದು ಸಹಜವಷ್ಟೆ. ಹೀಗಾಗಿ ದುರ್ಜನರ ಸಹವಾಸದಲ್ಲಿರುವಾಗ ಅವರ ಗುಣಗಳಲ್ಲಿ ಅಷ್ಟೋ ಇಷ್ಟೋ ನಮ್ಮದನ್ನಾಗಿಸಿಕೊಂಡಿರುತ್ತೇವೆ. ಹೀಗಾದಾಗ ಸಹಜವಾಗಿಯೇ ನಮ್ಮ ನಡತೆಯು ಶ್ರುತಿ ತಪ್ಪುತ್ತದೆ; ಜೀವನರಾಗ ಅಸಹನೀಯವಾಗುತ್ತದೆ. ಹೀಗಾಗಿ ನಮ್ಮ ಸ್ನೇಹವಲಯವನ್ನು ನಾವು ಆಯ್ದುಕೊಳ್ಳುವಾಗ ಎಚ್ಚರ ಅನಿವಾರ್ಯ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ದುರಾಚಾರದಿಂದ ಕೀರ್ತಿ ನಾಶವಾಗುತ್ತದೆಯಂತೆ! ಈ ಮಾತು ಸಲ್ಲುವುದು ದುರಾಚಾರಗಳನ್ನು ತಪ್ಪು ಎಂದು ಒಪ್ಪಿರುವ ಸಮಾಜದಲ್ಲಿ! ಆದರೆ ಅನಾಚಾರ–ಭ್ರಷ್ಟಾಚಾರಗಳನ್ನೇ ಒಪ್ಪಿಕೊಂಡಿರುವ, ಹಾಗೆ ನಡೆದುಕೊಳ್ಳುವವರನ್ನೇ ಪ್ರಶಂಸಿಸುವವರ ಮಧ್ಯೆ ಸುಭಾಷಿತದ ಈ ಮಾತು ಎಷ್ಟು ಸಲ್ಲುತ್ತದೆ?! ಕೀರ್ತಿಯನ್ನು ಬಿಳುಪಿಗೆ ಹೋಲಿಸಲಾಗುತ್ತದೆ; ದುರಾಚಾರದಿಂದ ಆ ಬಿಳಿಪು ಮಸುಕಾಗುತ್ತದೆ ಎನ್ನುವುದು ಇಲ್ಲಿಯ ಮಾತು. ಬಳಿಯ ಬಟ್ಟೆಯನ್ನು ಧರಿಸಿರುವಾಗ ಅದು ಕೊಳೆಯಾಗದಂತೆ ನೋಡಿಕೊಳ್ಳಲು ನಾವು ಎಷ್ಟು ಎಚ್ಚರಿಕೆಯಿಂದ ಇರಬೇಕಾಗುತ್ತದೆ ಅಲ್ಲವೆ? ಅಂತೆಯೇ ದುರಾಚಾರಗಳು ನಮ್ಮ ವ್ಯಕ್ತಿತ್ವಕ್ಕೆ ಅಂಟದಂತೆ ನೋಡಿಕೊಳ್ಳಬೇಕು.

ಕೂಡಿಟ್ಟ ಹಣವನನ್ನು ಎಷ್ಟು ದಿನ ಸುಮ್ಮನೆ ಮನೆಯಲ್ಲಿ ಕುಳಿತು ತಿನ್ನಲಾದೀತು? ಸೋಮಾರಿತನ ನಮ್ಮ ಮೊದಲನೆಯ ಶತ್ರು. ಇದು ನಮ್ಮ ದೈಹಿಕ–ಮಾನಸಿಕ–ಆರ್ಥಿಕ–ಸಾಮಾಜಿಕ–ಕೌಟುಂಬಿಕ – ಹೀಗೆ ಎಲ್ಲ ವಿಧದ ಆರೋಗ್ಯವ್ಯವಸ್ಥೆಯನ್ನೂ ನಾಶಗೊಳಿಸುತ್ತದೆ. ಇಲ್ಲಿ ಹಣ ಎಂದರೆ ಕೇವಲ ದುಡ್ಡು ಮಾತ್ರವೇ ಅಲ್ಲ; ಅದು ನಮ್ಮ ಎಲ್ಲ ಭಾಗ್ಯಗಳನ್ನೂ ಸೂಚಿಸುತ್ತಿದೆ.

ನಾವು ಸೋಮಾರಿತನವನ್ನು ಗೆದ್ದು ಕ್ರಿಯಾಶೀಲರಾಗಿ ಸಂಪತ್ತನ್ನೂ ಗಳಿಸಿದ್ದೇವೆ – ಎಂದಿಟ್ಟುಕೊಳ್ಳೋಣ. ಆ ಸಂಪತ್ತಿನ ವಿನಿಯೋಗ ಹೇಗಾಗಬೇಕು? ಕೇವಲ ನನಗೆ, ನನ್ನ ಮಕ್ಕಳಿಗೆ ಮಾತ್ರ – ಎಂದು ಲೋಭದಿಂದ ನಡೆದುಕೊಂಡರೆ ನಮ್ಮ ಕಡೆಗೆ ಕಾಗೆಗಳೂ ತಿರುಗಿನೋಡುವುದಿಲ್ಲ. ಹೀಗಾಗಿ ನಾಲ್ಕು ಜನರಿಂದ ನಮಗೆ ಗೌರವ ದೊರೆಯಬೇಕು ಎಂದರೆ ನಮ್ಮ ಸಂಪತ್ತು ಕೂಡ ನಾಲ್ಕು ಜನರಿಗೆ ತಲಪಬೇಕಾಗುತ್ತದೆ. ಹಣದ ರೂಪದಲ್ಲಿರುವ ಸಂಪತ್ತು ಮಾತ್ರವೇ ಅಲ್ಲ; ನಮ್ಮ ವಿದ್ಯೆ, ಅಧಿಕಾರದ ಶಕ್ತಿಗಳಂಥವೂ ನಾಲ್ಕು ಜನರ ನೆರವಿಗೆ ಒದಗಬೇಕು. ಆಗಲೇ ಅದಕ್ಕೊಂದು ಸಾರ್ಥಕತೆ; ನಮಗೆ ಗೌರವ.

ಹಲವು ದುರ್ಗುಣಗಳ ಮಧ್ಯೆ ಯಾಚನೆಯನ್ನೂ ಸೇರಿಸಿದ್ದಾನೆ, ಸುಭಾಷಿತಕಾರ. ಎಲ್ಲ ದುರ್ಗುಣಗಳ ಕಾರಣದಿಂದ ನಾವು ಯಾವುದೋ ಒಂದು ಸದ್ಗುಣವನ್ನು ಅಥವಾ ಫಲವನ್ನು ಕಳೆದುಕೊಳ್ಳುತ್ತೇವೆ ಎಂದು ಹೇಳಿದ್ದಾನಷ್ಟೆ. ಆದರೆ ಯಾಚನೆಯಿಂದ ನಮ್ಮ ಎಲ್ಲ ಸದ್ಗುಣಗಳೂ ಗಾಳಿಗೆ ಉರುಳುವ ಮರದಂತೆ ನೆಲಕಚ್ಟುತ್ತವೆ ಎಂದಿದ್ದಾನೆ. ಎಂದರೆ ಯಾಚನೆ – ದೈನ್ಯ – ಎಂಥ ದೊಡ್ಡ ದೋಷ ಎನ್ನುವುದನ್ನು ಕಾಣಿಸಿದ್ದಾನೆ.

ಇಬ್ಬರು ತುಂಬ ಪರಿಚಯದವರು; ದೇಶ–ವಿದೇಶಗಳನ್ನು ಉದ್ಧರಿಸುವ ವಿಷಯದಿಂದ ಹಿಡಿದು ಮನೆಯಲ್ಲಿ ಇಂದು ತಿಂಡಿ ಏನು – ಎಂದು ಚರ್ಚಿಸುವಷ್ಟು ಆಪ್ತತೆ. ಇಬ್ಬರಲ್ಲಿ ಒಬ್ಬರಿಗೆ ಏನು ಕಷ್ಟ ಎದುರಾಯಿತು; ಆ ಆಪ್ತನನ್ನು ಸಹಾಯ ಕೇಳುತ್ತಾನೆ. ಮುಂದಿನ ಕ್ಷಣದಿಂದಲೇ ಆ ಆಪ್ತರ ನಡುವೆ ಗೋಡೆ ಏಳದಿದ್ದೀತೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT