ಶನಿವಾರ, ಜನವರಿ 23, 2021
22 °C

ದಿನದ ಸೂಕ್ತಿ: ಬ್ರಹ್ಮಚೈತನ್ಯ ಮಹಾರಾಜರು

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

ಶ್ರೀರಾಮ

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ ।

ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ ।।

ಇದು ಶ್ರೀರಾಮನ ಗುಣಗಳನ್ನು ವರ್ಣಿಸುವ ಪದ್ಯ.

ಇಂದು ಬ್ರಹ್ಮಚೈತನ್ಯ ಮಹಾರಾಜರ ಆರಾಧನೆ. ಶ್ರೀರಾಮನಾಮದ ಮಹಿಮೆಯನ್ನು ಎತ್ತಿಹಿಡಿದ ಪ್ರಮುಖರಲ್ಲಿ ಒಬ್ಬರು.

ನಮ್ಮ ದೇಶದಲ್ಲಿ ಸಂತಪರಂಪರೆಯ ಹಿರಿಮೆ ದೊಡ್ಡದು. ಜನಮಾನಸದಲ್ಲಿ ಭಕ್ತಿಯನ್ನೂ ಧಾರ್ಮಿಕತೆಯನ್ನೂ ಬಿತ್ತುವುದರ ಜೊತೆಗೆ ನೈತಿಕಪ್ರಜ್ಞೆಯನ್ನೂ ಬೆಳೆಸುವುದರಲ್ಲಿ ಸಂತರ ಕೊಡುಗೆ ಹಿರಿದಾದುದು. ಹೀಗೆ ನಮ್ಮ ಸಂಸ್ಕೃತಿಯ ಮೇಲೆ ತುಂಬ ಪ್ರಭಾವವನ್ನು ಮೂಡಿಸಿದ ಪ್ರಮುಖ ಸಂತರಲ್ಲಿ ಒಬ್ಬರು ಬ್ರಹ್ಮಚೈತನ್ಯ ಮಹಾರಾಜರು (1845–1913). ಹುಟ್ಟಿದ್ದು ಮಹಾರಾಷ್ಟ್ರದ ಸತಾರಾ ಜಿ‌ಲ್ಲೆಯ ಗೋಂದಾವಲಿಯಲ್ಲಿ. ಗೀತಾಬಾಯಿ ಮತ್ತು ರಾವಜಿ ಇವರ ತಾಯಿ–ತಂದೆ. ಜನ್ಮನಾಮ ಗಣಪತಿ.

ಬ್ರಹ್ಮಚೈತನ್ಯರು ಮುಖ್ಯವಾಗಿ ಎತ್ತಿಹಿಡಿದದ್ದು ನಾಮದ ಮಹಿಮೆಯನ್ನು. ದೇವರ ನಾಮಸ್ಮರಣೆ ಎಂದರೆ ಸದಾ ಎಚ್ಚರವಾಗಿರುವುದು ಎಂದು ಪ್ರತಿಪಾದಿಸಿದರು. ‘ಭಕ್ತ, ಭಗವಂತ ಮತ್ತು ನಾಮ – ಈ ಮೂರು ಏಕರೂಪವಾಗಿರುತ್ತದೆ. ಮನುಷ್ಯನು ಎಷ್ಟೇ ಪಾಪಿಯಾಗಿದ್ದರೂ ಭಗವಂತನ ನಾಮಸ್ಮರಣೆಯಿಂದ ಅವನು ಶುದ್ಧನಾಗುತ್ತಾನೆ. ನಾಮಸ್ಮರಣೆ ಎಂಬ ನದಿಯನ್ನು ಆಶ್ರಯಿಸಿದವರು ಶ್ರೀರಾಮ ಎಂಬ ಸಮುದ್ರದಲ್ಲಿ ಒಂದಾಗುತ್ತಾರೆ’–ಹೀಗೆಂದು ಅವರು ನಾಮಸ್ಮರಣೆಯನ್ನು ಪ್ರಶಂಸಿಸಿದರು. ಮಾತ್ರವಲ್ಲ, ‘ಅನಾಥ – ಎಂಬ ಶಬ್ದವು ನಾಥನ ಹೊರತು ಇರುವುದಿಲ್ಲ; ನಾಥನಿಗೆ ಅನಾಥನ ಹೊರತು ನಾಥತ್ವವು ಬರುವುದಿಲ್ಲ. ರಾಮನು ಎಲ್ಲರ ನಾಥನಾಗಿದ್ದಾನೆ. ನಾವು ಅವನ ಅಖಂಡ ಸ್ಮರಣೆಯಲ್ಲಿರೋಣ. ಅದರಿಂದ ನಮಗೆ ಪ್ರಾಪಂಚಿಕ ಕಷ್ಟಪರಂಪರೆಗಳು ಹಗುರವಾಗುತ್ತವೆ. ಪ್ರಪಂಚವೇ ಒಂದು ವಿಧದಲ್ಲಿ ವನವಾಸದಂತೆ ಇರುತ್ತದೆ. ಆದರೆ ರಾಮನ ಸ್ಮರಣೆಯ ಮೂಲಕ ನಮ್ಮ ಎಲ್ಲ ಸಂಕಟಗಳು ಮತ್ತು ದುಃಖಗಳು ನಗಣ್ಯ ಎನಿಸುತ್ತವೆ‘ ಎಂದು ಉಪದೇಶಿಸುವ ಮೂಲಕ ರಾಮನಾಮದ ಹಿರಿಮೆಯನ್ನು ಎತ್ತಿಹಿಡಿದರು.

ಎಂಥ ಸಂದರ್ಭದಲ್ಲೂ ಭಗವಂತನ ಸ್ಮರಣೆಯನ್ನು ಬಿಡಬಾರದು ಎಂಬುದನ್ನು ಒತ್ತಿಹೇಳಿದವರು ಬ್ರಹ್ಮಚೈತನ್ಯ ಮಹಾರಾಜರು. ‘ಕೆಟ್ಟ ವಿಚಾರಗಳು ನಿರಂತರವಾಗಿ ನಮ್ಮ ಮನಸ್ಸಿನ ಮೇಲೆ ದಾಳಿ ಮಾಡುತ್ತಲೇ ಇರುತ್ತವೆ. ಇದರಿಂದ ತಪ್ಪಿಸಿಕೊಳ್ಳುವ ವಿಧಾನ ಎಂದರೆ ಪರಮೇಶ್ವರನಲ್ಲಿ ಭಕ್ತಿ ಮತ್ತು ಅವನ ನಾಮದಲ್ಲಿ ಶ್ರದ್ಧೆ. ಯಾರು ದೇವರ ಅಸ್ತಿತ್ವವನ್ನು ಒಪ್ಪುತ್ತಾರೋ, ಯಾರು ಸದಾ ಅವನ ಸ್ಮರಣೆಯಲ್ಲಿ ಇರುತ್ತಾರೋ ಅವರಿಗೆ ಯಾವುದರಿಂದಲೂ ಭಯ ಎದುರಾಗದು. ಇದು ಹೇಗೆಂದರೆ, ಮಗುವಿನ ತಲೆಯ ಮೇಲೆ ಮುಸುಕು ಹಾಕಿ, ‘ಈಗ ಭೂತ ಬಂದಿದೆ’ ಎಂದು ಹೇಳಿದರೆ ಆ ಮಗು ಹೆದರುತ್ತದೆ. ಆದರೆ ಮುಸುಕಿನಲ್ಲಿ ತನ್ನ ಜೊತೆ ತನ್ನ ತಂದೆಯೂ ಇದ್ದಾನೆ ಎಂದು ಅದಕ್ಕೆ ಅರಿವಾದರೆ ಆಗ ಅದಕ್ಕೆ ಭಯವಾಗುವುದಿಲ್ಲ. ಹೀಗೆಯೇ ನಾವು ಕೂಡ ನಮ್ಮ ಜೀವನದಲ್ಲಿ ಎದುರಾಗಿರುವ ಸಂಕಟಗಳು ಎಂಬ ಭೂತ ಬಂದಿರುವುದು ಪರಮೇಶ್ವರನ ಇಚ್ಛೆಯಿಂದಲೇ ಎಂದು ತಿಳಿಯಬೇಕು. ನನ್ನ ಜೊತೆ ಪರಮೇಶ್ವರನ ನಾಮ ಇರುವುದರಿಂದ ಅವನು ನನ್ನ ಜೊತೆಯಲ್ಲಿಯೇ ಇದ್ದಂತೆಯೇ. ಪರಮೇಶ್ವರನೇ ಜೊತೆಯಲ್ಲಿರುವಾಗ ಇನ್ನು ಯಾವುದರಿಂದಲೂ ಹೆದರಬೇಕಾದ ಆವಶ್ಯಕತೆ ಇಲ್ಲ ಎಂದು ಮನವರಿಕೆಯಾಗುತ್ತದೆ’ ಎಂದೂ ಅವರು ಉಪದೇಶಿಸಿ, ದೇವರಿಗೂ ಅವನ ಸ್ಮರಣೆಗೂ ಇರುವ ಸಾವಯವ ಸಂಬಂಧವನ್ನು ಸ್ಥಾಪಿಸಿದರು.

ಸಾಮಾಜಿಕ ಜೀವನದ ಬಗ್ಗೆಯೂ ಮಹಾರಾಜರು ವ್ಯಾಖ್ಯಾನಿದ್ದಾರೆ. ‘ಮನುಷ್ಯಜೀವನವನ್ನು ಸಾಮಾಜಿಕ ಜೀವನದೊಂದಿಗೆ ಪ್ರತ್ಯೇಕ ಮಾಡಲು ಸಾಧ್ಯವಿಲ್ಲ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿರುವವರು ನೀತಿವಂತರಾಗಿರಬೇಕು, ಧರ್ಮದಲ್ಲಿ ಶ್ರದ್ಧೆಯುಳ್ಳವರಾಗಿರಬೇಕು; ಮಾತ್ರವಲ್ಲ, ಸ್ವಾರ್ಥಬುದ್ಧಿಯಿಂದ ಅವರು ಸಂಪೂರ್ಣ ವಿಮುಖರಾಗಿರಬೇಕು; ವೈಯಕ್ತಿಕ ಸುಖಕ್ಕಿಂತಲೂ ಸಮಾಜದ ಹಿತ ದೊಡ್ಡದು ಎಂಬ ಆದರ್ಶ ಅವರಲ್ಲಿರಬೇಕು. ಎಲ್ಲದಕ್ಕೂ ಮೊದಲು ಅವರು ಜ್ಞಾನವನ್ನು ಸಂಪಾದಿಸಬೇಕು’ ಎಂದು ಉಪದೇಶಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು