ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ಭ್ರಷ್ಟರ ಏಕತೆಯ ಮಂತ್ರ

Last Updated 31 ಜುಲೈ 2020, 2:09 IST
ಅಕ್ಷರ ಗಾತ್ರ

ಅಸ್ಯ ಮೂರ್ಖಸ್ಯ ಯಾಗೇsಸ್ಮಿನ್‌ ದಕ್ಷಿಣಾ ಮಹಿಷೀಶತಮ್‌ ।

ತವಾಪ್ಯರ್ಧಂ ಮಮಾಪ್ಯರ್ಧಂ ವಿಘ್ನಂ ಮಾ ಕುರು ಪಂಡಿತ ।।

ಇದರ ತಾತ್ಪರ್ಯ ಹೀಗೆ:

’ಈ ದಡ್ಡನ ಯಾಗದಲ್ಲಿ ನೂರು ಎಮ್ಮೆಗಳ ದಕ್ಷಿಣೆ ಉಂಟು; ನಿನಗೂ ಅರ್ಧ, ನನಗೂ ಅರ್ಧ, ಇದನ್ನು ಕೆಡಿಸಬೇಡವೋ ಪಂಡಿತಾss!''

ಇಷ್ಟನ್ನು ಹೇಳಿದರೆ ಅರ್ಥವಾಗದು, ಇದರ ಹಿನ್ನೆಲೆಯನ್ನೂ ಹೇಳಬೇಕು.

ಒಂದೂರಿನಲ್ಲಿ ಒಬ್ಬ ದೊಡ್ಡ ಶ್ರೀಮಂತ; ಅವನಲ್ಲಿ ದುಡ್ಡು ಇತ್ತೇ ಹೊರತು ಬುದ್ಧಿ ಇರಲಿಲ್ಲ. ಅವನಿಗೊಮ್ಮೆ ಕೆಟ್ಟ ಕನಸೊಂದು ಬಿದ್ದಿತಂತೆ. ಅದರ ಅರ್ಥ ಏನೆಂದು ತಿಳಿಯದೆ ಕಂಗಾಲದ. ಕನಸಿನ ಅರ್ಥವನ್ನು ತಿಳಿಯಲು ಅದೇ ಊರಿನ ಅಯೋಗ್ಯಬ್ರಾಹ್ಮಣನೊಬ್ಬನಲ್ಲಿಗೆ ಧಾವಿಸಿದ. ಅವನಿಗೆ ಆ ಶ್ರೀಮಂತನ ಬಗ್ಗೆ ಚೆನ್ನಾಗಿ ತಿಳಿದಿತ್ತು. ’ಈ ದಡ್ಡನಿಂದ ಹಣ ಕೀಳಲು ಇದೇ ಸರಿಯಾದ ಸಮಯ‘ ಎಂದು ಯೋಚಿಸಿದ. ಮುಂದೆ ಎದುರಾಗುವ ದೊಡ್ಡ ವಿಪತ್ತೊಂದರ ಸೂಚನೆಯಾಗಿ ಈ ದುಃಸ್ವಪ್ನ ಕಾಣಿಸಿಕೊಂಡಿದೆಯೊಂದೂ, ಅದರ ಪರಿಹಾರಕ್ಕಾಗಿ ವಿಶೇಷ ಯಾಗ ’ವಜ್ರಶುಂಠ‘ವನ್ನು ಮಾಡಬೇಕೆಂದೂ ಅವನಿಗೆ ತಿಳಿಸಿದ. ಭಯದಿಂದ ಆ ಶ್ರೀಮಂತ ಯಾಗಮಾಡಲು ಒಪ್ಪಿಕೊಂಡ.

ನಿರ್ದಿಷ್ಟ ದಿನದಂದ ಯಾಗ ಆರಂಭವಾಯಿತು. ಈ ಯಾಗದ ವಿಷಯ ತಿಳಿದು ಕುತೂಹಲದಿಂದ ಪಕ್ಕದ ಊರಿನ ಬ್ರಾಹ್ಮಣನೊಬ್ಬ ಯಾಗಶಾಲೆಗೆ ಬಂದ. ’ವಜ್ರಶುಂಠ‘ ಎಂಬ ಯಾವುದೇ ಯಾಗ ಇಲ್ಲವೆಂಬುದು ಅವನಿಗೆ ಗೊತ್ತಿತ್ತು; ಆ ಧೂರ್ತಬ್ರಾಹ್ಮಣನ ಬಗ್ಗೆಯೂ ಅವನಿಗೆ ಗೊತ್ತಿತ್ತು. ಈ ಬ್ರಾಹ್ಮಣನ ಬಗ್ಗೆ ಆ ಧೂರ್ತನಿಗೂ ಗೊತ್ತಿತ್ತು.

ಯಾಗಶಾಲೆಯಲ್ಲಿ ಈ ಬ್ರಾಹ್ಮಣನನ್ನು ಕಂಡು ಆ ಬ್ರಾಹ್ಮಣನಿಗೆ ದಿಗಿಲಾಯಿತು. ತನ್ನ ಗುಟ್ಟನ್ನು ರಟ್ಟುಮಾಡುತ್ತಾನೆಂಬ ಅಂಜಿಕೆಯಾಯಿತು. ಕೂಡಲೇ ಅವನ ಬುದ್ಧಿ ಚುರುಕಾಯಿತು. ಯಾಗದ ಸಮಯದಲ್ಲಿ ಮಂತ್ರಗಳನ್ನು ಹೇಳಬೇಕಷ್ಟೆ. ಮಂತ್ರಗಳು ಸಾಮಾನ್ಯ ಗದ್ಯ–ಪದ್ಯದಂತೆ ಇರುವುದಿಲ್ಲ; ಸ್ವರಗಳಲ್ಲಿ ಇರುತ್ತವೆ; ಹೇಳುವ ಕ್ರಮವೂ ವಿಶಿಷ್ಟವಾಗಿರುತ್ತದೆ. ಆ ಧೂರ್ತ, ಈ ಬ್ರಾಹ್ಮಣನನ್ನು ಕಂಡಕೂಡಲೇ ಮಂತ್ರಗಳನ್ನು ಹೇಳುವ ಶೈಲಿಯಲ್ಲಿಯೇ, ಎಂದರೆ ಸ್ವರಸಮೇತ ಈ ಮಾತುಗಳನ್ನು ಹೇಳಿದ:

’ಈ ದಡ್ಡನ ಯಾಗದಲ್ಲಿ ನೂರು ಎಮ್ಮೆಗಳ ದಕ್ಷಿಣೆ ಉಂಟು; ನಿನಗೂ ಅರ್ಧ, ನನಗೂ ಅರ್ಧ, ಇದನ್ನು ಕೆಡಿಸಬೇಡವೋ ಪಂಡಿತಾss!‘

ಯಾಗದ ಕಥೆ ಏನಾಯಿತೋ, ನಮಗೆ ಗೊತ್ತಿಲ್ಲ. ಆದರೆ ಈ ಮಾತುಗಳನ್ನು ಕೇಳಿದಾಗ ನಮ್ಮ ಕಾಲದಲ್ಲೂ ಇಂಥದೇ ಮಾತುಗಳೂ ನಮ್ಮ ಕಿವಿಯಲ್ಲಿ ಪ್ರತಿಧ್ವನಿಸುತ್ತವೆ. ಆಡಳಿತ ಪಕ್ಷದ ಮತ್ತು ವಿರೋಧಪಕ್ಷದ ಭ್ರಷ್ಟರಾಜಕಾರಣಿಗಳಪರಸ್ಪರ ಆರೋಪ–ಪ್ರತ್ಯಾರೋಪಗಳಲ್ಲಿ ಆ ಧೂರ್ತಬ್ರಾಹ್ಮಣನ ಕಳ್ಳಮಂತ್ರಗಳ ಛಾಯೆಯೇ ಕಾಣುವುದೆನ್ನಿ! ಇಬ್ಬರು ಸರ್ಕಾರಿ ಭ್ರಷ್ಟ ರಾಜಕಾರಣಿಗಳಒಂದು ಫೈಲ್‌ನ ವಿಷಯದಲ್ಲಿ ಪರಸ್ಪರ ಚರ್ಚೆಯಲ್ಲಿ ತೊಡಗಿದಾಗ ಇಂಥವೇ ’ಮಂತ್ರ‘ಗಳು ಅವರಿಂದ ಉದುರುವಂಥವು.

ಭ್ರಷ್ಟರಿಗೆ ಯಾವುದೇ ಸಿದ್ಧಾಂತವಿರುವುದಿಲ್ಲ; ಅವರ ಮನೆಯ ದೇವರು ಎಂದರೆ ಲಂಚ; ಅವರ ದೇವರ ಪೂಜೆ ಎಂದರೆ ಅದು ಭ್ರಷ್ಟಾಚಾರವೇ. ಹೀಗಾಗಿ ಅವರು ಹಣವನ್ನು ಬಾಚಿಕೊಳ್ಳಲು ಯಾರೊಂದಿಗೂ ಯಾವುದರೊಂದಿಗೂ ರಾಜಿ ಮಾಡಿಕೊಳ್ಳುತ್ತಾರೆ.ಲಂಚಾವತಾರದಲ್ಲಿರುವವರು ಯಾವುದೇ ಪಕ್ಷಕ್ಕೆ ಸೇರಿರಲಿ, ಭ್ರಷ್ಟಾಚಾರದಲ್ಲಿ ಮಾತ್ರ ಅವರೆಲ್ಲರೂ ಪರಸ್ಪರ ಒಗ್ಗಟ್ಟಿನಲ್ಲೇ ಇರುತ್ತಾರೆ! ’ನಿನಗೆ ನಾನು ತೊಂದರೆ ಕೊಡುವುದಿಲ್ಲ, ನೀನು ನನಗೆ ತೊಂದರೆ ಕೊಡಬೇಡ; ಇಬ್ಬರೂ ಸೇರಿ ತಿನ್ನೋಣ‘ – ಇದುವೇ ಅವರ ಪ್ರಮಾಣವಚನವಾಗಿರುತ್ತದೆಯೆನ್ನಿ!

ಭ್ರಷ್ಟಾಚಾರದ ದುಷ್ಟತನದ ಬಗ್ಗೆ ಈ ಪದ್ಯವೊಂದು ಸೊಗಸಾಗಿ ನಿರೂಪಿಸಿದೆ, ನೋಡಿ:

ಕಾಯಸ್ಥೇನೋದರಸ್ಥೇನ ಮಾತೃಮಾಂಸಂ ನ ಭಕ್ಷಿತಮ್‌ ।

ನ ತತ್ರ ಕರುಣಾ ಹೇತುಸ್ತತ್ರ ಹೇತುರದಂತತಾ ।।

ಇದರ ತಾತ್ಪರ್ಯ:

’ಕಾಯಸ್ಥ, ಎಂದರೆ ಸರ್ಕಾರದ ಅಧಿಕಾರಿಯೊಬ್ಬ, ತಾಯಿಯ ಗರ್ಭದಲ್ಲಿ ಇದ್ದಾಗ ತಾಯಿಯ ಮಾಂಸವನ್ನು ತಿನ್ನಲಿಲ್ಲವಂತೆ; ಅವನಿಗೆ ತನ್ನ ತಾಯಿಯ ಮೇಲಿದ್ದ ಕರುಣೆ ಇದಕ್ಕೆ ಕಾರಣವಲ್ಲ, ಅವನಿಗಿನ್ನೂ ಆಗ ಹಲ್ಲುಗಳು ಹುಟ್ಟಿರಲಿಲ್ಲವಷ್ಟೆ!‘

ಭ್ರಷ್ಟಾಚಾರದಲ್ಲಿ ಮುಳುಗಿರುವ ಅಧಿಕಾರಿಗಳಿಗೂ ರಾಜಕಾರಣಿಗಳಿಗೂ ಯಾರ ಬಗ್ಗೆಯೂ ದಯೆ–ದಾಕ್ಷಿಣ್ಯಗಳು ಇರುವುದಿಲ್ಲ; ಮಾತ್ರವಲ್ಲ, ದೇಶ, ಸಮಾಜ, ಮನುಕುಲ, ತಂದೆ–ತಾಯಿ, ಮಗ–ಮಗಳು – ಹೀಗೆ ಯಾವ ಬಾಂಧವ್ಯವೂ ಅವರ ಅಯೋಗ್ಯತನವನ್ನು ನಿಲ್ಲಿಸದು. ಅವರ ಮೂರು ಹೊತ್ತಿನ ಪೂಜೆ, ಭಜನೆ, ಧ್ಯಾನ, ತಪಸ್ಸು, ಸೇವೆ – ಎಲ್ಲವೂ ಲಂಚ, ಲಂಚ, ಲಂಚ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT