ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ದೋಷಗಳಿಗೆ ಹೆದರದಿರಿ

Last Updated 14 ಫೆಬ್ರುವರಿ 2021, 1:22 IST
ಅಕ್ಷರ ಗಾತ್ರ

ದೋಷಾಭೀತೇರನಾರಂಭಃ ಕಾಪುರೂಷಸ್ಯ ಲಕ್ಷಣಮ್‌ ।

ಕೈರಜೀರ್ಣಭಯಾದ್ಭ್ರಾತಃ ಭೋಜನಂ ಪರಿಹೀಯತೇ ।।

ಇದರ ತಾತ್ಪರ್ಯ ಹೀಗೆ:

‘ದೋಷಗಳಿಗೆ ಹೆದರಿ ಕೆಲಸವನ್ನೇ ಆರಂಭಿಸದಿರುವುದು ಹೀನಪುರುಷರ ಲಕ್ಷಣ. ಅಜೀರ್ಣವಾಗುವುದು ಎಂಬ ಭಯದಿಂದ ಊಟಮಾಡುವುದನ್ನು ಯಾರೂ ಬಿಡುವುದಿಲ್ಲವಷ್ಟೆ.’

ಯಾವುದೇ ಕೆಲಸವನ್ನು ಮಾಡಿದರೂ ಅದರ ಜೊತೆಗೆ ಒಂದಿಷ್ಟು ಸಮಸ್ಯೆಗಳೂ ಎದುರಾಗುತ್ತವೆ. ಹೀಗೆಂದು ಸಮಸ್ಯೆಗಳಿಗೆ ಹೆದರಿ ಯಾವುದೇ ಚಟುವಟಿಕೆಯಲ್ಲಿ ತೊಡಗದಿರುವುದು ಉತ್ತಮರ ಲಕ್ಷಣವಲ್ಲ ಎಂದು ಸುಭಾಷಿತ ಹೇಳುತ್ತಿದೆ.

ನಾವು ಮಾಡುವ ಕೆಲಸಗಳಲ್ಲಿ ಜನರೂ ದೋಷಗಳನ್ನು ಗುರುತಿಸುತ್ತಾರೆ, ಕೆಲಸ ಮುಗಿದಮೇಲೆ ಆ ಕೆಲಸದಲ್ಲಿ ನಮಗೂ ಕೆಲವೊಂದು ದೋಷಗಳು ಗಮನಕ್ಕೆ ಬರುತ್ತವೆ. ಆದರೆ ದೋಷಗಳಿಲ್ಲದೆ ಯಾವುದೇ ಕೆಲಸವನ್ನೂ ಮಾಡಲು ಸಾಧ್ಯವಿಲ್ಲ ಎಂಬುದು ವಾಸ್ತವ. ಯಾವುದೇ ಚಟುವಟಿಕೆಗಳು ಇಲ್ಲದೆ ನಮ್ಮ ಜೀವನವೇ ನಡೆಯದು ಎಂಬುದೂ ವಾಸ್ತವವೇ.

ಸೃಷ್ಟಿಯ ಸುಂದರವಾದ ಸೃಷ್ಟಿಗಳಲ್ಲಿ ಹೂವು ಕೂಡ ಒಂದು. ಆದರೆ ಹೂವು ಸುಂದರವಾದ ವಿವರಗಳನ್ನು ಮಾತ್ರವೇ ಹೊಂದಿರುವುದಿಲ್ಲ; ಎಲೆಗಳು ಇರುತ್ತವೆ, ಮುಳ್ಳುಗಳೂ ಇರುತ್ತವೆ. ಕೆಲವೊಂದು ಹೂವುಗಳಿಗೆ ಸುಗಂಧವಿರುತ್ತದೆ; ಕೆಲವೊಂದಕ್ಕೆ ಯಾವುದೇ ವಾಸನೆಯೇ ಇರುವುದಿಲ್ಲ; ಕೆಲವೊಂದಕ್ಕೆ ದುರ್ಗಂಧವೂ ಇದ್ದೀತು. ಈ ವೈರುದ್ಧ್ಯ ಕೇವಲ ಹೂವಿನಲ್ಲಿ ಮಾತ್ರವೇ ಇರುವಂಥದ್ದಲ್ಲ; ಸೃಷ್ಟಿಯ ಎಲ್ಲ ವಿವರಗಳಲ್ಲೂ ಇರುತ್ತವೆ. ಎಳನೀರು ಎಷ್ಟು ಸಿಹಿ! ಆದರೆ ಅದು ಇರುವುದು ಕಠಿಣವಾದ ಕರಟದ ಒಳಗೆ. ಕಬ್ಬು ಸಿಹಿ, ಆದರೆ ಅದನ್ನು ಸುಲಭವಾಗಿ ಚಪ್ಪರಿಸಲು ಆಗದಷ್ಟೆ.

ಒಬ್ಬ ಕಷ್ಟಪಟ್ಟು ದುಡಿದು ಸಂಪಾದನೆಮಾಡಿರುತ್ತಾನೆ; ಸಂಪಾದನೆಮಾಡಿರುವುದನ್ನು ಸಮಾಜಕ್ಕೆ ದಾನದ ರೂಪದಲ್ಲಿ ಕೊಡುತ್ತಿರುತ್ತಾನೆ ಎಂದಿಟ್ಟುಕೊಳ್ಳಿ. ಸಮಾಜದಲ್ಲಿ ಕೆಲವರಾದರೂ ಏನೆನ್ನುತ್ತಾರೆ: ’ಮೋಸದಿಂದ ಸಂಪಾದನೆ ಮಾಡಿದ್ದಾನೆ; ಪಾಪವನ್ನು ಕಳೆದುಕೊಳ್ಳಲು ದಾನಧರ್ಮ ಮಾಡುತ್ತಿದ್ದಾನೆ.’ ಈ ಮಾತುಗಳು ಅವನ ಕಿವಿಗೂ ಬೀಳುತ್ತವೆ. ಅವನು ಆಗ ಏನು ಮಾಡಬೇಕು? ಸುಭಾಷಿತ ಹೇಳುತ್ತಿದೆ: ಇಂಥ ಮಾತುಗಳು ನೀವು ಏನು ಮಾಡದಿದ್ದರೂ ತಪ್ಪದು. ಹೀಗೆಂದು ಈಗ ನೀವು ಮಾಡುತ್ತಿರುವ ಒಳ್ಳೆಯ ಕೆಲಸವನ್ನು ನಿಲ್ಲಿಸಬೇಡಿ.

ನಾವು ಒಳ್ಳೆಯದನ್ನು ಮಾಡಿದರೂ ಕೆಟ್ಟದ್ದನ್ನು ಮಾಡಿದರೂ ಜನರಿಂದ ಟೀಕೆ–ಟಿಪ್ಪಣಿ ತಪ್ಪದು. ಇವುಗಳಿಗೆ ನಾವು ಹೆದರಬಾರದು; ನಾವು ಹೆದರಬೇಕಾದ್ದು ನಮ್ಮ ಆತ್ಮಸಾಕ್ಷಿಗೆ. ಹೀಗಲ್ಲದೆ ಯಾರೋ ಎಣಿಸುವ ದೋಷಗಳಿಗೆ ಹೆದರಿ ನಾವು ನಮ್ಮ ಜೀವನದ ಆದರ್ಶವನ್ನು ತ್ಯಜಿಸಬಾರದು; ಒಳ್ಳೆಯದರಿಂದ ದೂರ ಸರಿಯಬಾರದು. ಸುಭಾಷಿತ ಕೊಟ್ಟಿರುವ ಉದಾಹರಣೆಯೂ ಚೆನ್ನಾಗಿದೆ. ನಾವು ದಿನಕ್ಕೆ ಮೂರು ಸಲ ಊಟಮಾಡುತ್ತೇವೆ. ಒಮ್ಮೊಮ್ಮೆ ಅಜೀರ್ಣವೂ ಆಗಬಹುದು. ಹೀಗೆಂದು ನಾವು ಆಹಾರ ತೆಗೆದುಕೊಳ್ಳುವುದನ್ನೇ ಬಿಟ್ಟುಬಿಡುತ್ತೇವೆಯೆ? ಇಲ್ಲವಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT