ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ| ಪುಣ್ಯವಂತರು

Last Updated 29 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ವಿವೇಕಾಲಂಕೃತಂ ಚೇತೋ ರೂಪಂ ಗುಣವಿವರ್ಧಿತಮ್‌ ।

ಸುಹೃದ್ಬಂಧುವೃತಾ ಲಕ್ಷ್ಮೀರ್ಲಕ್ಷಣಂ ಪುಣ್ಯಕರ್ಮಣಾಮ್‌ ।।

ಇದರ ತಾತ್ಪರ್ಯ ಹೀಗೆ:

‘ವಿವೇಕದಿಂದ ಅಲಂಕೃತವಾದ ಮನಸ್ಸು, ಗುಣಗಳಿಂದ ಸಮೃದ್ಧವಾದ ರೂಪ, ಸ್ನೇಹಿತರಿಂದಲೂ ನಂಟರಿಂದಲೂ ಕೂಡಿರುವ ಐಶ್ವರ್ಯ – ಇವು ದಿಟವಾಗಿಯೂ ಪುಣ್ಯವಂತರ ಲಕ್ಷಣ.’

ಜೀವನದಲ್ಲಿ ಕೆಲವೊಂದು ಸುಖಗಳು ಸುಲಭವಾಗಿ ಸಿಗುವುದಿಲ್ಲ ಎಂಬುದನ್ನು ಸುಭಾಷಿತ ಜ್ಞಾಪಕಕ್ಕೆ ತರುತ್ತಿದೆ.

ನಮ್ಮೆಲ್ಲರಿಗೂ ಮನಸ್ಸು ಇದೆ; ಅದು ಏನೇನೂ ಚಿತ್ರವಿಚಿತ್ರ ಚೇಷ್ಟೆಗಳನ್ನು ಮಾಡುತ್ತಲೇ ಇರುತ್ತದೆ. ಮನಸ್ಸೇ ನಮ್ಮ ಸುಖಕ್ಕೂ ದುಃಖಕ್ಕೂ ಕಾರಣವಾಗವಂಥದ್ದು. ಮನಸ್ಸು ಹೋಗುವ ಎಲ್ಲ ಕಡೆಯೂ ನಮ್ಮ ಬುದ್ಧಿಯೂ ಹೋಗಲು ತೊಡಗಿದರೆ ನಮಗೆ ದುಃಖದ ಪ್ರಸಂಗಗಳು ಎದುರಾಗುವ ಸಂದರ್ಭಗಳೇ ಹೆಚ್ಚು. ಹೀಗಾಗಿಯೇ ಸುಭಾಷಿತ ಹೇಳುತ್ತಿರುವುದು: ವಿವೇಕದಿಂದ ಅಲಂಕೃತವಾದ ಮನಸ್ಸು ನಮ್ಮದಾಗಬೇಕು ಎಂದು.

ಒಳ್ಳೆಯ ರೂಪವಂತರೂ ನಾವಾಗಿರಬಹುದು. ಆದರೆ ಆ ರೂಪಕ್ಕೆ ಸಾರ್ಥಕತೆ ಒದಗುವುದು ಗುಣಗಳಿಂದಲೇ ಹೌದು. ಗುಣಗಳೇ ಇಲ್ಲದ ರೂಪ ಅದು ಗಂಧವೇ ಇಲ್ಲದ ಪ್ಲಾಸ್ಟಿಕ್‌ ಹೂವುಗಳಂತೆ ನಿರರ್ಥಕವಷ್ಟೆ. ಹೀಗೆಯೇ ನಾವು ಅಪಾರವಾದ ಆಸ್ತಿ–ಐಶ್ವರ್ಯಗಳನ್ನು ಸಂಪಾದಿಸಬಹುದು. ಅದನ್ನು ನಾಲ್ಕಾರು ಜನರೊಂದಿಗೆ ಹಂಚಿಕೊಂಡು ಸಂತೋಷಿಸಬೇಕು, ಸಂಭ್ರಮಿಸಬೇಕು. ಎಂದರೆ ನಮ್ಮ ಜೊತೆಯಲ್ಲಿ ಸ್ನೇಹಿತರೂ ಬಂಧುಗಳೂ ಇರಬೇಕು. ಎಲ್ಲವೂ ಇದ್ದು ನಮ್ಮ ಜೊತೆ ಯಾರೂ ಇಲ್ಲದಿದ್ದಾಗ ಯಾರೊಂದಿಗೆ ನಮ್ಮ ಸಂತೋಷವನ್ನು ಹಂಚಿಕೊಳ್ಳುವುದು?

ವಿವೇಕ, ಗುಣ, ಸ್ನೇಹ – ಇವೆಲ್ಲವೂ ಸುಲಭಕ್ಕೆ ದಕ್ಕುವ ವಸ್ತುಗಳಲ್ಲ. ಹೀಗಾಗಿಯೇ ಸುಭಾಷಿತ ಇವುಗಳನ್ನು ಪುಣ್ಯದ ಸಾಲಿಗೆ ಸೇರಿಸಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT