ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಅಲ್ಪತೃಪ್ತಿ

Last Updated 17 ನವೆಂಬರ್ 2020, 0:49 IST
ಅಕ್ಷರ ಗಾತ್ರ

ಯತ್ರ ವಿದ್ವಜ್ಜನೋ ನಾಸ್ತಿ ಶ್ಲಾಘ್ಯಸ್ತತ್ರಾಲ್ಪಧೀರಪಿ ।
ನಿರಸ್ತಪಾದಪೇ ದೇಶ ಏರಂಡೋಪಿ ದ್ರುಮಾಯತೇ ।।

ಇದರ ತಾತ್ಪರ್ಯ ಹೀಗೆ:

‘ಎಲ್ಲಿ ವಿದ್ವಾಂಸರು ಇಲ್ಲವೋ ಅಲ್ಲಿ ಕಡಿಮೆ ವಿದ್ವತ್ತು ಇರುವವನೇ ದೊಡ್ಡ ವಿದ್ವಾಂಸ ಎಂದು ಕರೆಯಿಸಿಕೊಳ್ಳುತ್ತಾನೆ. ದೊಡ್ಡ ಮರಗಳು ಇಲ್ಲದ ಸ್ಥಳದಲ್ಲಿ ಹರಳುಗಿಡವೇ ದೊಡ್ಡ ಮರ ಎಂದೆನಿಸಿಕೊಳ್ಳುವುದಷ್ಟೆ!’

ಈ ಶ್ಲೋಕದ ಧ್ವನಿ ನಮ್ಮ ಇಂದಿನ ಸಮಾಜದ ಎಲ್ಲ ರಂಗಗಳಿಗೂ ಸಲ್ಲುತ್ತದೆ. ರಾಜಕಾರಣ, ಶಿಕ್ಷಣ, ಪಾಂಡಿತ್ಯ, ಕಲೆ – ಹೀಗೆ ಎಲ್ಲ ರಂಗಗಳಿಗೂ.

ರಾಜಕಾರಣ ಮಾಡಬೇಕಿರುವುದು ಸಮಾಜದ ಒಳಿತಿಗಾಗಿ. ಆದರೆ ಇದು ಇಂದು ತಮ್ಮ ಸ್ವಾರ್ಥಕ್ಕಾಗಿ ಎಂಬಂತಾಗಿದೆ. ಆ ಪಕ್ಷ, ಈ ಪಕ್ಷ – ಎಂದಲ್ಲದೆ ಎಲ್ಲ ಪಕ್ಷಗಳ ರಾಜಕಾರಣಿಗಳೂ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನಮಗೆ ಏನು ಅನಿಸುತ್ತದೆ? ಕಡಿಮೆ ಪ್ರಮಾಣದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವವನೇ ನಮ್ಮ ಪಾಲಿಗೆ ಪ್ರಾಮಾಣಿಕ ಎಂಬ ಹೊಗಳಿಕೆಗೆ ಪಾತ್ರನಾಗುತ್ತಾನಷ್ಟೆ! ಸಾವಿರ ರೂಪಾಯಿಗಳ ಲಂಚ ಕೇಳುವವರ ಗುಂಪಿನಲ್ಲಿ ನೂರು ರೂಪಾಯಿಗಳ ಲಂಚ ಕೇಳುವವನು ಪ್ರಾಮಾಣಿಕ ಎಂದೆನಿಸಿಕೊಳ್ಳುವಂತೆ!!

ಹೀಗೆಯೇ ನಟನೆಯೇ ಗೊತ್ತಿಲ್ಲದ ನಟರ ನಡುವೆ ಅಲ್ಪ ಸ್ವಲ್ಪ ನಟನೆಯ ಕೌಶಲ ಇದ್ದವರೇ ದೊಡ್ಡ ಕಲಾವಿದರು ಎಂದೆಸಿಕೊಳ್ಳುವುದು ಸಹಜವೇ. ಸಂಗೀತದ ಗಂಧಗಾಳಿಯೇ ಗೊತ್ತಿಲ್ಲದವನ ನಡುವೆ ಸರಳೆ ವರಸೆಯನ್ನು ಹಾಡುವವನೇ ದೊಡ್ಡ ಸಂಗೀತಗಾರ ಅಲ್ಲವೆ?

ಇಂಥ ಪರಿಸ್ಥಿತಿ ಪಾಂಡಿತ್ಯಕ್ಕೂ ಸಲ್ಲುತ್ತದೆ. ಇಂದಿನ ನಮ್ಮ ಶಿಕ್ಷಣವ್ಯವಸ್ಥೆಯ ಅವ್ಯವಸ್ಥೆಗಳ ಕಾರಣದಿಂದ ನಮ್ಮ ವಿದ್ಯಾರ್ಥಿಗಳ ಕಲಿಕಾಸಾಮರ್ಥ್ಯದ ಮಟ್ಟ ಕುಸಿಯುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ. ಇಂದಿನ ಶಿಕ್ಷಣ ಎಂದರೆ ಡಿಗ್ರಿಗಳನ್ನು ಪಡೆಯುವುದಷ್ಟೆ ಎಂದಾಗಿದೆ. ಉರು ಹೊಡೆಯುವುದು, ಪರೀಕ್ಷೆ ಬರೆಯವುದು, ಪ್ರಮಾಣಪತ್ರಗಳನ್ನು ಪಡೆಯುವುದು – ಇವಿಷ್ಟೆ ಶಿಕ್ಷಣ ಎಂಬಂತಾಗಿದೆ. ಇದರ ಪರಿಣಾಮವನ್ನು ಸಮಾಜದ ಎಲ್ಲ ರಂಗಗಳಲ್ಲೂ ಕಾಣಬಹುದಾಗಿದೆ. ನಮ್ಮ ದೇಶದ ಬಹುಪಾಲು ಸಮಸ್ಯೆಗಳಿಗೆ ಶಿಕ್ಷಣವ್ಯವಸ್ಥೆ ಕಳಪೆಯಾಗುತ್ತಿರುವುದೇ ಕಾರಣ ಎಂಬದರಲ್ಲಿ ಎರಡು ಮಾತಿಲ್ಲ.

ಸುಭಾಷಿತದ ಮಾತುಗಳನ್ನು ಈ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬಹುದು.

ನೂರಮೂವತ್ತು ಕೋಟಿಗೂ ಮೀರಿದ ಜನಸಂಖ್ಯೆ ಇರುವ ನಮ್ಮ ದೇಶ ಸಾಧಿಸಿರುವ ಸಾಧನೆಯನ್ನು ನೋಡಿದರೆ ಆಶಾದಾಯಕವಾಗಿಲ್ಲ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ; ಭ್ರಷ್ಟಾಚಾರ ಎಲ್ಲ ರಂಗಗಳನ್ನೂ ಅವನತಿಯತ್ತ ತೆಗೆದುಕೊಂಡುಹೋಗುತ್ತಿದೆ. ಶಿಕ್ಷಣಕ್ಷೇತ್ರವೂ ಅದಕ್ಕೆ ಬಲಿಯಾಗುತ್ತಿದೆ ಎನ್ನುವುದನ್ನು ನೋಡಿದವಷ್ಟೆ. ಹೀಗಾಗಿ ನಮ್ಮ ಇಂದಿನ ಪರಿಸ್ಥಿತಿ ಹೇಗಿದೆ? ಸಣ್ಣ ಪುಟ್ಟ ಸಾಧನೆಯನ್ನೇ ಚಪ್ಪರಿಸಿ, ಸಂಭ್ರಮಿಸುತ್ತಿರುತ್ತೇವೆ. ಒಲಂಪಿಕ್‌ನಲ್ಲಿ ಪದಕ ಪಡೆದು ಸಂಭ್ರಮಿಸುವ ಅವಕಾಶ ನಮಗಿಲ್ಲ; ಒಲಂಪಿಕ್‌ನಲ್ಲಿ ಭಾಗವಹಿಸಲು ಅರ್ಹತೆ ದೊರಕಿದರೂ ಸಾಕು ಸಂಭ್ರಮಿಸತ್ತಿದ್ದೇವೆ. ನಮ್ಮ ವಿಶ್ವವಿದ್ಯಾಲಯಗಳು ವಿಶ್ವದ ಮಟ್ಟದಲ್ಲಿ ನೂರನೇ ಸ್ಥಾನ ಪಡೆದರೂ ಸಂಭ್ರಮಿಸುತ್ತಿದ್ದೇವೆ!

ಇಂಥ ಪರಿಸ್ಥಿತಿಯನ್ನು ವ್ಯಕ್ತಿಗಳ ಮಟ್ಟದಲ್ಲೂ ನೋಡಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಅದೋ ಇದೋ ಬರೆಯುವವರೇ ದೊಡ್ಡ ವಿದ್ವಾಂಸರು, ವಿಷಯತಜ್ಞರು ಎಂದು ಆರಾಧಿಸುವಂಥ ಮಾನಸಿಕತೆಗೆ ಪಕ್ಕಾಗಿದ್ದೇವೆ. ನಿಜವಾದ ಪಾಂಡಿತ್ಯಕ್ಕೆ ಬೆಲೆಯೂ ಇಲ್ಲವಾಗಿದೆ; ಅಂಥ ವಿದ್ವಾಂಸರು ನಿರ್ಮಾಣವಾಗುವಂಥ ವಾತಾವರಣವೂ ಇಲ್ಲವಾಗಿದೆ. ಹೀಗಾಗಿ ಅಲ್ಪ ಸ್ವಲ್ಪ ಅಕ್ಷರಜ್ಞಾನ ಇದ್ದವರೇ ನಮ್ಮ ಪಾಲಿಗೆ ವಿದ್ವಾಂಸರಾಗುತ್ತಿದ್ದಾರೆ ಎಂದು ಹೇಳುತ್ತಿದೆ, ಸುಭಾಷಿತ. ಇದಕ್ಕೆ ಅದು ಕೊಟ್ಟಿರುವ ಉದಾಹರಣೆಯೂ ಚೆನ್ನಾಗಿದೆ: ದೊಡ್ಡ ಮರಗಳೇ ಇಲ್ಲದ ಸ್ಥಳದಲ್ಲಿ ಹರಳುಗಿಡವೇ ದೊಡ್ಡ ಮರ ಎಂಬ ಕೀರ್ತಿಯನ್ನು ಸಂಪಾದಿಸುವುದಂತೆ! ತುಂಬೇಗಿಡವನ್ನೇ ಅಶ್ವತ್ಥವೃಕ್ಷ ಎಂದುಕೊಳ್ಳಬೇಕು!!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT