ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ಮೂರ್ಖನಿಗೆ ಉಪದೇಶ

Last Updated 29 ಜೂನ್ 2020, 5:44 IST
ಅಕ್ಷರ ಗಾತ್ರ

ಅಕಾರ್ಯವಾರಣೋದ್ಯುಕ್ತೋ ಮೂಢೇ ಯಃ ಪರಿಖಿದ್ಯತೇ ।

ವಾಗ್ವಿಸ್ತರೋ ವೃಥಾ ತಸ್ಯ ಭಸ್ಮನ್ಯಾಜ್ಯಾಹುತಿರ್ಯಥಾ ।।

ಇದರ ತಾತ್ಪರ್ಯ ಹೀಗೆ:

‘ಅಕಾರ್ಯವನ್ನು ಮಾಡಬೇಡ – ಎಂದು ಮೂರ್ಖನಿಗೆ ಎಷ್ಟು ವಿಧವಾಗಿ ಉಪದೇಶಮಾಡಿದರೂ ತೊಂದರೆಯನ್ನು ತೆಗೆದುಕೊಂಡರೂ ಪ್ರಯೊಜನ ಇರದು – ಇದು ಕೊನೆಗೆ ಬೂದಿಯಲ್ಲಿ ಸರಿದ ತುಪ್ಪದಂತೆ ವ್ಯರ್ಥವಾಗುತ್ತದೆಯಷ್ಟೆ!’

ಮೂರ್ಖ ಎಂದರೆ ಬುದ್ಧಿ ಇಲ್ಲದವನು. ನಾವು ಮಾಡುವ ಕೆಲಸದಿಂದ ಏನು ಒಳ್ಳೆಯದಾಗುತ್ತದೆ, ಏನು ಕೆಟ್ಟದಾಗುತ್ತದೆ – ಎಂದು ತಿಳಿದುಕೊಳ್ಳುವುದು ಬುದ್ಧಿಯ ಕೆಲಸ. ಮೂರ್ಖನಿಗೆ ಬುದ್ಧಿಯೇ ಇಲ್ಲದ ಕಾರಣ, ಅವನಿಗೆ ಏನೂ ಹೇಳಿದರೂ ಅರ್ಥವಾಗದು. ‘ಇದೊಂದು ಮಾಡಬಾರದ ಕೆಲಸ; ಮಾಡಿದರೆ ತೊಂದರೆಯಾಗುತ್ತದೆ‘ ಎಂದು ಅವನಿಗೆ ಎಷ್ಟು ಹೇಳಿದರೂ ಅರ್ಥವೇ ಆಗದು. ಅವನ ಮೂರ್ಖತ್ವದ ಜೊತೆ ಹಠಮಾರಿತನವೂ ಸೇರಿಕೊಂಡರೆ, ಎಲ್ಲವೂ ವ್ಯರ್ಥವೋ ವ್ಯರ್ಥ!

ಸುಭಾಷಿತ ಇದನ್ನೇ ಹೇಳುತ್ತಿರುವುದು. ಮೂರ್ಖನಿಗೆ ಎಷ್ಟು ಉಪದೇಶಮಾಡಿದರೂ ಪ್ರಯೋಜನವಿರದು; ಹೋಗಲಿ, ‘ಅವನು ಮೂರ್ಖ, ಒಂದಿಷ್ಟು ತಿಳಿವಳಿಕೆಯನ್ನು ಕೊಡೋಣ’ಎಂದು ಪ್ರಯತ್ನಿಸಿದರೂ ಪ್ರಯೋಜನವಿರದು ಎನ್ನುತ್ತಿದೆ ಸುಭಾಷಿತ.There is no medicine for a fool - ಎಂಬ ಮಾತೊಂದಿದೆ. ಮೂರ್ಖತನಕ್ಕೆ ಔಷಧವೇ ಇಲ್ಲ. ನಾಳೆ ಕೊರೊನಾಗೆ ಔಷಧವನ್ನು ಕಂಡುಹಿಡಿಯಬಹುದು; ಆದರೆ ಮೂರ್ಖತ್ವಕ್ಕೆ ಎಂದಿಗೂ ಔಷಧ ಕಂಡುಹಿಡಿಯಲಾಗದು. ಮೂರ್ಖತ್ವವು ನೀರು–ಗೊಬ್ಬರಗಳ ಸಹಾಯವಿಲ್ಲದೆ ಹುಲುಸಾಗಿ ಬೆಳೆಯುವ, ಬೆಳೆಯುತ್ತಲೇ ಇರುವ ಮಹಾವೃಕ್ಷ. ಅದನ್ನು ಯಾರೂ ಬೇರು ಸಹಿತ ಕಿತ್ತುಹಾಕಲು ಸಾಧ್ಯವಿಲ್ಲವೆನ್ನಿ!

ಮೂರ್ಖರಿಗೆ ಒಂದು ನಂಬಿಕೆ ಗಟ್ಟಿಯಾಗಿರುತ್ತದೆ: ‘ನಾನು ತುಂಬ ಬುದ್ಧಿವಂತ’.ಇದು ಎಲ್ಲ ಮೂರ್ಖರ ಗಟ್ಟಿ ನಂಬಿಕೆ. ಹೀಗಾಗಿ ಅವರು ಯಾರ ಮಾತನ್ನೂ ಕೇಳಿಸಿಕೊಳ್ಳಲುಹೋಗುವುದಿಲ್ಲ. ಎಲ್ಲವೂ ನನಗೆ ಗೊತ್ತಿದೆ – ಎಂಬ ನಂಬಿಕೆಯಲ್ಲಿ ಬದುಕುತ್ತಿರುವವರಿಗೆ ಇನ್ನೊಬ್ಬರ ಸಲಹೆ–ಸೂಚನೆಗಳಾದರೂ ಏಕೆ ಬೇಕು? ಎಲ್ಲವೂ ಗೊತ್ತಿದೆ - ಎಂಬ ದಡ್ಡತನ ಅವರಲ್ಲಿ ಸಮೃದ್ಧವಾಗಿರುವುದರಿಂದ ಅವರು ಯಾವ ಕೆಲಸಕ್ಕೂ ಮುನ್ನುಗುತ್ತಾರೆ, ಪೂರ್ವಾಪರಗಳನ್ನೂ ಯೋಚಿಸದೆಯೇ! ಯಾವ ಕೆಲಸವನ್ನು ಮಾಡಲು ಬುದ್ಧಿವಂತರೂ ಹೆದರುತ್ತಾರೆಯೋ ಆ ಕೆಲಸದಲ್ಲಿ ಮೂರ್ಖರು ಧೈರ್ಯವಾಗಿ ತೊಡಗಿಕೊಳ್ಳುವುದುಂಟು.

ಮೂರ್ಖ ಯಾರನ್ನು ನಂಬುವುದು ಎಂದರೆ ತನ್ನಂತೆಯೇ ಇರುವ ಮತ್ತೊಬ್ಬ ಮೂರ್ಖನನ್ನು ಮಾತ್ರವೇ. ಹೀಗಾಗಿ ಅಂಥವರಿಗೆ ಕೊಡುವ ಎಲ್ಲ ವಿಧದ ತಿಳಿವಳಿಕೆಯೂ ವ್ಯರ್ಥವೇ ಸರಿ. ಸುಭಾಷಿತ ಇದನ್ನು ಸೊಗಸಾದ ಉದಾಹರಣೆಯ ಮೂಲಕ ನಿರೂಪಿಸುತ್ತಿದೆ. ತುಪ್ಪವನ್ನು ಬೂದಿಯಲ್ಲಿ ಸುರಿದರೆ ಏನಾಗುತ್ತದೆ? ವ್ಯರ್ಥವಷ್ಟೆ. ಹಾಗೆ ಸುರಿದ ತುಪ್ಪದಿಂದ ಬೂದಿಗೂ ಪ್ರಯೋಜನವಿಲ್ಲ; ನಾವೂ ಆ ಬೂದಿಯಲ್ಲಿರುವ ತುಪ್ಪವನ್ನು ಬಳಸುವುದಕ್ಕೆ ಆಗದು. ಮೂರ್ಖನಿಗೆ ಕೊಡುವ ಉಪದೇಶದ ಕಥೆಯೂ ಹೀಗೇ ಆಗುತ್ತದೆಯಷ್ಟೆ! ಅನವಶ್ಯಕವಾಗಿ ಓಡಾಡಬೇಡಿ; ಕೊರೊನಾ ಹರಡುವಿಕೆ ಹೆಚ್ಚಾಗುತ್ತದೆ – ಎಂಬ ಉಪದೇಶವನ್ನು ಇಂದು ಎಷ್ಟು ಜನರು ಕೇಳುತ್ತಿದ್ದಾರೆ?

ಇಲ್ಲಿ ಇನ್ನೂ ಒಂದು ವಿಷಯವನ್ನು ಗಮನಿಸಬೇಕು. ಕೆಲವೊಂದು ಸಲ ಮೂರ್ಖರಿಗೆ ಬುದ್ಧಿ ಹೇಳುವುದರಿಂದ ಅಪಾಯ ಕೂಡ ಎದುರಾಗಬಹುದು. ಎಚ್ಚರ ಇರಲಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT