ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ಆಚಾರವಿಲ್ಲದ ನಾಲಗೆ

Last Updated 26 ಜೂನ್ 2020, 1:02 IST
ಅಕ್ಷರ ಗಾತ್ರ

ರೋಹತೇ ಸಾಯಕೈರ್ವಿದ್ಧಂ ವನಂ ಪರಶುನಾ ಹತಮ್ ।

ವಾಚಾ ದುರುಕ್ತಂ ಬೀಭತ್ಸಂ ನ ಸಂರೋಹತಿ ವಾಕ್‌ಕ್ಷತಮ್‌ ।।

ಇದರ ತಾತ್ಪರ್ಯ ಹೀಗೆ:

‘ಬಾಣಗಳಿಂದಾದ ಗಾಯ ಗುಣ ಹೊಂದುತ್ತದೆ; ಕೊಡಲಿಯಿಂದ ಕಡಿದ ವನವು ಚಿಗುರುತ್ತದೆ; ಆದರೆ ಕೆಟ್ಟಮಾತಿನಿಂದಾದ ಗಾಯ ತೀವ್ರವಾದದ್ದು. ಅದು ಗುಣ ಹೊಂದುವುದಿಲ್ಲ.‘

ಕೆಟ್ಟಮಾತಿನಿಂದ ಆಗುವ ಅನಾಹುತದ ಬಗ್ಗೆ ಸುಭಾಷಿತ ಎಚ್ಚರಿಸುತ್ತಿದೆ.

ಯಾವುದೋ ಸಂದರ್ಭದಲ್ಲಿ ದುಡುಕಿನಿಂದ ನಡೆದುಕೊಳ್ಳುತ್ತೇವೆ. ಈ ದುಡುಕುತನದ ಮೊದಲ ಆವೇಶಕ್ಕೆ ಒಳಗಾಗುವುದೇ ನಮ್ಮ ನಾಲಗೆ. ಅದು ಒಂದು ವಿಧದಲ್ಲಿ ನಮ್ಮ ದುಡುಕುತನದ ಆಗಮನವನ್ನು ಸೂಚಿಸುವ ಬಾವುಟವೇ ಹೌದೆನ್ನಿ! ಈ ದುಡುಕುತನದ ಫಲವೇ ನಮ್ಮಿಂದ ನಾಲಗೆ ಹೊರಡಿಸುವ ಕೆಟ್ಟಮಾತು.

ಜೀವನದಲ್ಲಿ ನಡೆದುಹೋದ ಕೆಲವೊಂದು ಸಂದರ್ಭಗಳನ್ನು ಎಂದಿಗೂ ಸರಿಮಾಡಲು ಸಾಧ್ಯವಿಲ್ಲ. ಅಂಥದ್ದರಲ್ಲಿ ಪ್ರಧಾನವಾಗಿರುವುದು ಮಾತು. ಒಮ್ಮೆ ನಮ್ಮ ಬಾಯಿಂದ ಮಾತು ಹೊರಗೆ ಬಂದಮೇಲೆ ಅದನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲು‌ ಆಗದು. ’ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು‘ ಎಂಬ ಮಾತನ್ನು ನಾವು ಕೇಳಿಯೇ ಇದ್ದೇವೆ.

ಬಾಣವೊಂದು ತಗಲಿ ನಮ್ಮ ಮೈಗೆ ಗಾಯವಾಗಿದೆ. ಈ ಗಾಯ ಕೆಲವೊಂದು ದಿನಗಳಲ್ಲಿ ವಾಸಿಯಾಗುತ್ತದೆ. ಮರವನ್ನು ಕಡಿದರೆ ಮತ್ತೆ ಅದು ಚಿಗುರುತ್ತದೆ. ಆದರೆ ಮಾತಿನಿಂದಾದ ಗಾಯ ಆದು ಎಂದಿಗೂ ವಾಸಿಯಾಗದು ಎನ್ನುತ್ತಿದೆ ಸುಭಾಷಿತ.

ಮಾತಿನಿಂದ ಗಾಯ ಹೇಗಾಗುತ್ತದೆ?

ನಾವಾಡುವ ಮಾತಿಗೆ ಬಾಣದ ಮೊನಚು ಇರುತ್ತದೆ; ನಾವಾಡುವ ಮಾತಿಗೆ ಕೊಡಲಿಗಿರುವಂಥ ಹರಿತಗುಣವೂ ಇರುತ್ತದೆ. ಅದು ನಮ್ಮ ಅಂತರಂಗವನ್ನು ಚುಚ್ಚುತ್ತದೆ; ನಮ್ಮ ಅಭಿಮಾನವನ್ನು ಕತ್ತರಿಸುತ್ತದೆ. ನಮ್ಮ ಅಂತರಂಗಕ್ಕೆ ಆದಂಥ ಗಾಯ, ಅಭಿಮಾನಕ್ಕೆ ಬಿದ್ದಂಥ ಪೆಟ್ಟು – ಎಂದಿಗೂ ವಾಸಿಯಾಗದು. ಏಕೆಂದರೆ ಈ ಗಾಯ ನಮ್ಮ ಮನಸ್ಸಿನಲ್ಲಿ ಸ್ಥಿರವಾಗಿರುತ್ತದೆ; ನಮ್ಮ ಹೃದಯಲ್ಲಿ ಎಂದೂ ಅಳಿಸಲಾಗದ ರೀತಿಯಲ್ಲಿ ನಿಂತುಬಿಡುತ್ತದೆ. ನಾವು ಕಟ್ಟಿದ ಕಟ್ಟಡ ಸರಿ ಇಲ್ಲ ಎಂದಾದಲ್ಲಿ ಅದನ್ನು ಕೆಡವಿ ಮತ್ತೆ ಕಟ್ಟಬಹುದು; ಆದರೆ ನಮ್ಮ ಮಾತಿನ ಮೂಲಕ ನಾವೇ ಕಟ್ಟಿಕೊಂಡ ನಮ್ಮ ವ್ಯಕ್ತಿತ್ವವನ್ನು ಎಂದಿಗೂ ಕೆಡವಿ, ಇನ್ನೊಮ್ಮೆ ಅದನ್ನು ನಿರ್ಮಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ನಾವು ಆಡುವ ಮಾತುಗಳನ್ನು ತುಂಬ ಎಚ್ಚರಿಕೆಯಿಂದ ಆಡಬೇಕು; ಆಡುವ ಮೊದಲು ನಾಲ್ಕು ಸಲ ಯೋಚಿಸಿ ಮಾತನಾಡಬೇಕು.

ಒಳ್ಳೆಯ ಮಾತುಗಳನ್ನೇ ಆಡುವುದು ನಮ್ಮ ವ್ಯಕ್ತಿತ್ವದ ಭಾಗವೇ ಆಗಬೇಕು. ಆಗ ಮಾತ್ರವೇ ಕೆಟ್ಟಮಾತು ಆಡುವುದು, ಆಡಿದಮೇಲೆ ಅದಕ್ಕಾಗಿ ಪರಿತಪಿಸುವುದು ತಪ್ಪುತ್ತದೆ. ಅಷ್ಟೇ ಅಲ್ಲ, ಒಳ್ಳೆಯ ಮಾತಿನ ಮೂಲಕ ನಾವು ಸ್ನೇಹವನ್ನು ಸಂಪಾದಿಸಿಕೊಳ್ಳಲು ಸಾಧ್ಯ; ಒದಗಿರುವ ಸ್ನೇಹವನ್ನು ಉಳಿಸಿಕೊಳ್ಳಲೂ ಸಾಧ್ಯ. ನಾಲಗೆಯೇ ನಮ್ಮ ಪ್ರಪಂಚವನ್ನು ನಿರ್ಮಿಸುವ ಜಾದುಗಾರ ಎಂಬುದನ್ನು ನಾವು ಎಂದಿಗೂ ಮರೆಯಬಾರದು.

ದಾಸರು ’ಆಚಾರವಿಲ್ಲದ ನಾಲಗೆ, ನಿನ್ನ ನೀಚಬುದ್ಧಿಯನ್ನು ಬಿಡು ನಾಲಗೆ‘ ಎಂದು ಹಾಡಿ ನಾಲಗೆಯ ಕೆಟ್ಟತನದ ಬಗ್ಗೆ ಎಚ್ಚರಿಸಿದ್ದಾರೆ; ಬಸವಣ್ಣನವರು ’ಅಯ್ಯಾ ಎಂದೊಡೆ ಸ್ವರ್ಗ ಎಲವೊ ಎಂದೊಡೆ ನರಕ‘ ಎಂದು ಹೇಳಿ ಮಾತಿನ ಅಪಾರಶಕ್ತಿಯನ್ನು ಕಾಣಿಸಿದ್ದಾರೆ.

ಆಡಿದ ಮಾತನ್ನು ಉಪಸಂಹಾರಮಾಡಲು ಆಗದು; ಅದರಿಂದ ಆದ ಗಾಯವನ್ನು ಎಂದಿಗೂ ವಾಸಿಮಾಡಲೂ ಆಗದು. ಆದುದರಿಂದ ನಾವು ಆಡುವ ಮಾತಿನ ಬಗ್ಗೆ ಎಚ್ಚರ ಇರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT