ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ತಾಳ್ಮೆಯೇ ಬಿಲ್ಲು!

Last Updated 24 ಜೂನ್ 2020, 18:29 IST
ಅಕ್ಷರ ಗಾತ್ರ

ಕ್ಷಮಾಧನುಃ ಕರೇ ಯಸ್ಯ ದುರ್ಜನಃ ಕಿಂ ಕರಿಷ್ಯತಿ ।

ಅತೃಣೇ ಪತಿತೋ ವಹ್ನಿಃ ಸ್ವಯಮೇವೋಪಶಾಮ್ಯತಿ ।।

ಇದರ ತಾತ್ಪರ್ಯ ಹೀಗೆ:

’ತಾಳ್ಮೆಯೆಂಬ ಧನುಸ್ಸು ಯಾರ ಕೈಯಲ್ಲಿರುವುದೋ ಅವನನ್ನು ದುರ್ಜನನು ತಾನೆ ಏನು ಮಾಡಿಯಾನು? ಹುಲ್ಲು ಇಲ್ಲದ ಸ್ಥಳದಲ್ಲಿ ಬಿದ್ದ ಬೆಂಕಿ ತಾನಾಗಿಯೇ ಆರಿಹೋಗುತ್ತದೆಯಲ್ಲವೆ?‘

ನಾವು ಅಸ್ತ್ರವನ್ನು ಹಿಡಿಯುವುದು ಯಾವ ಕಾರಣಕ್ಕಾಗಿ? ನಮ್ಮನ್ನು ಶತ್ರುಗಳಿಂದ ರಕ್ಷಿಸಿಕೊಳ್ಳಲು ಹೌದಲ್ಲವೆ? ನಮ್ಮಲ್ಲಿ ಶಕ್ತಿಶಾಲಿಯಾದ ಆಯುಧ ಇದ್ದಾಗ ಶತ್ರು ನಮ್ಮ ಮೇಲೆ ದಾಳಿ ಮಾಡಲು ಹೆದರುತ್ತಾರೆ. ಇದು ವ್ಯಕ್ತಿಯ ವಿಷಯದಲ್ಲಷ್ಟೆ ಅಲ್ಲ, ದೇಶದ ವಿಷಯದಲ್ಲೂ ದಿಟವೆನ್ನಿ!

ಇಲ್ಲಿ ಸುಭಾಷಿತವೂ ನಮ್ಮ ಕೈಗೆ ಒಂದು ಆಯುಧವನ್ನು ಕೊಡುತ್ತಿದೆ. ಆದರೆ ಆ ಆಯುಧವು ಕೈಯಲ್ಲಿ ಹಿಡಿಯುವಂಥದ್ದಲ್ಲ, ನಮ್ಮ ಮನಸ್ಸಿನಲ್ಲಿ ಸ್ಥಿರವಾಗಿ ಹಿಡಿಯಬೇಕಾಗಿರುವ ಆಯುಧ. ಅದೇ ಕ್ಷಮೆ. ಕ್ಷಮೆ ಎಂದರೆ ತಾಳ್ಮೆ ಎಂದೂ ಅರ್ಥವಿದೆ; ಕ್ಷಮಿಸುವುದು ಎಂದೂ ಅರ್ಥವಿದೆ.

ಕ್ಷಮೆಯನ್ನು ಬಿಲ್ಲಿಗೆ ಹೋಲಿಸಿದ್ದಾನೆ ಸುಭಾಷಿತಕಾರ. ಈ ಬಿಲ್ಲು ನಮ್ಮ ಕೈಯಲ್ಲಿರುವುದನ್ನು ನೋಡಿದಮೇಲೆ ದುಷ್ಟ ನಮ್ಮನ್ನು ಏನು ತಾನೆ ಮಾಡಿಯಾನು? ಇದು ಸುಭಾಷಿತ ನಮಗೆ ನೀಡುತ್ತಿರುವ ಅಭಯ.

ಇದು ಹೇಗೆ?

ದುರ್ಜನ ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಮೇಲೆ ನೇರ ಯುದ್ಧಕ್ಕೆ ಬರುವುದಿಲ್ಲ. ಅವನು ನಮ್ಮನ್ನು ಸಿಟ್ಟಿಗೆಬ್ಬಿಸುತ್ತಾನೆ. ಅದಕ್ಕಾಗಿ ನಮಗೆ ಕೋಪ ಬರುವಂಥ ಕೆಲಸಗಳನ್ನು ಮಾಡುತ್ತಾನೆ. ಕೋಪ ಬಂದಾಗ ವಿವೇಕವನ್ನು ಕಳೆದುಕೊಳ್ಳುತ್ತೇವೆ. ವಿವೇಕ ಇಲ್ಲದಿದ್ದಾಗ ನಮ್ಮನ್ನು ಸೋಲಿಸುವುದು ಸುಲಭ. ಹೀಗಾಗಿ ನಮ್ಮ ದೌರ್ಬಲ್ಯದ ಜೊತೆ ಅವನು ಆಟವಾಡುತ್ತಾನೆ.

ಆದರೆ ನಮಗೆ ತಾಳ್ಮೆ ಇದ್ದರೆ ಯಾವ ಸಂದರ್ಭವನ್ನೂ ನಾವು ಕೂಲಂಕಷವಾಗಿ ಪರಿಶೀಲಿಸಬಹುದು. ಪರಿಸ್ಥಿತಿಯ ದಿಕ್ಕು–ದೆಸೆಗಳನ್ನು ಕಂಡುಕೊಂಡು, ಅದನ್ನು ಎದುರಿಸಲು ತಕ್ಕ ರೀತಿಯಲ್ಲಿ ಸಿದ್ಧತೆಯನ್ನು ಮಾಡಿಕೊಳ್ಳಬಹುದು. ಹೀಗಾಗಿ ನಮಗೆ ತಾಳ್ಮೆ ಇರಬೇಕು. ತಾಳ್ಮೆ ಇದ್ದಾಗ ಯಾರೂ ನಮ್ಮ ಮನಸ್ಸನ್ನು ಕೆರಳಿಸಲಾಗದು. ಮನಸ್ಸು ನಮ್ಮ ನಿಯಂತ್ರಣದಲ್ಲಿದ್ದರೆ ಜಯ ನಮ್ಮ ವಶದಲ್ಲಿದ್ದಂತೆಯೇ ಸರಿ.

ತಾಳ್ಮೆಯೊಂದಿದ್ದರೆ ಸಾಕು, ದುರ್ಜನನ ಕಪಟ ನಮ್ಮನ್ನು ಏನೂ ಮಾಡದು – ಎಂದಿದೆಯಲ್ಲವೆ ಸುಭಾಷಿತ? ಇದಕ್ಕೆ ಒಂದು ಸೊಗಸಾದ ಉದಾಹರಣೆಯನ್ನು ಅದು ಒದಗಿಸಿದೆ.

ಬೆಂಕಿ ವಸ್ತುಗಳನ್ನು ಸುಟ್ಟು ಭಸ್ಮಮಾಡಬಲ್ಲದು. ಆದರೆ ಬೆಂಕಿಗೆ ಕೂಡ ಅದರ ದಹನಕ್ರಿಯೆಗೆ ನೆರವಾಗುವಂಥ ಮತ್ತೊಂದು ವಸ್ತುವಿನ ನೆರವು ಬೇಕೇ ಬೇಕು. ಅಂಥದೊಂದು ವಸ್ತು ಇಲ್ಲದಿದ್ದಾಗ ಬೆಂಕಿ ತಾನಾಗಿಯೇ ನಂದಿಹೋಗುತ್ತದೆ. ಹುಲ್ಲು ಇಲ್ಲದ ನೆಲದಲ್ಲಿ ಬೆಂಕಿ ಬಿದ್ದರೆ, ಆ ಬೆಂಕಿ ಉರಿಯದು; ಅದಕ್ಕೊಂದು ಆಶ್ರಯ ಸಿಗದೆ ಬೆಂಕಿ ಶೀಘ್ರದಲ್ಲಿಯೇ ಆರಿಹೋಗುತ್ತದೆಯಷ್ಟೆ!

ಇಲ್ಲಿ ದುರ್ಜನ, ದುಷ್ಟ, ಎಂದರೆ ನಮ್ಮ ಶತ್ರುವನ್ನು ಬೆಂಕಿಗೆ ಹೋಲಿಸಲಾಗಿದೆ. ನಮ್ಮ ಶತ್ರು ಎಂಬ ಬೆಂಕಿ ನಮ್ಮನ್ನು ನಾಶ ಮಾಡಬೇಕಾದರೆ ಅವನ ದಹನಕ್ರಿಯೆಗೆ ನೆರವಾಗುವಂಥ ಒಂದು ವಸ್ತುವಿನ ಸಹಾಯ ಅವನಿಗೆ ಬೇಕಾಗುತ್ತದೆ; ಎಂದರೆ ಹುಲ್ಲು ಅವನಿಗೆ ಬೇಕಾಗುತ್ತದೆ. ಸುಭಾಷಿತ ಹೇಳುತ್ತಿದೆ, ನಮ್ಮ ದುಡುಕುತನ ಅವನಿಗೆ ಹುಲ್ಲಾಗಿ ಒದಗಬಹುದು. ನಾವು ತಾಳ್ಮೆಯನ್ನು ಕಳೆದುಕೊಂಡು, ಪರಿಸ್ಥಿತಿಯ ಪೂರ್ವಾಪರಗಳನ್ನು ತಿಳಿದುಕೊಳ್ಳದೆ, ಆತುರದಲ್ಲಿ ತೀರ್ಮಾನಕ್ಕೆ ಬಂದರೆ, ನಾವು ನಮ್ಮ ಶತ್ರುವಿನ ಬೆಂಕಿಗೆ ಹುಲ್ಲನ್ನು ಒದಗಿಸಿದಂತಾಗುತ್ತದೆಯಷ್ಟೆ. ಹೀಗಾಗಿ ನಾವು ಎಂಥ ವಿಷಮ ಪರಿಸ್ಥಿತಿಯಲ್ಲೂ ತಾಳ್ಮೆಯನ್ನು ಕಳೆದುಕೊಳ್ಳಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT