ಶನಿವಾರ, ಏಪ್ರಿಲ್ 17, 2021
32 °C

ದಿನದ ಸೂಕ್ತಿ: ಒಳ್ಳೆಯತನಕ್ಕೆ ಅಪಾಯ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ವಸಂತ್ಯರಣ್ಯೇಷು ಚರಂತಿ ದೂರ್ವಾಃ

ಪಿಬಂತಿ ತೋಯಾನ್ಯಪರಿಗ್ರಹಾಣಿ ।

ತಥಾಪಿ ವಧ್ಯಾ ಹರಿಣಾ ನರಾಣಾಂ

ಕೋ ಲೋಕಾಮಾರಾಧಯಿತುಂ ಸಮರ್ಥಃ ।।

ಇದರ ತಾತ್ಪರ್ಯ ಹೀಗೆ:

‘ವಾಸ ಕಾಡಿನಲ್ಲಿ; ತಿನ್ನುವುದು ಗರಿಕೆಯ ಹುಲ್ಲನ್ನು; ಕುಡಿಯವುದು ಮತ್ತೊಬ್ಬರು ತೆಗೆದುಕೊಳ್ಳದ ನೀರನ್ನು; ಹೀಗಿದ್ದರೂ ಜಿಂಕೆಗಳು ಮನುಷ್ಯರಿಂದ ಕೊಲ್ಲಲ್ಪಡುತ್ತವೆ. ಲೋಕವನ್ನು ಮೆಚ್ಚಿಸಲು ಯಾರಿಗೆ ಸಾಧ್ಯ?’

‘ಬಡವ ನೀನು ಮಡಗಿದಂತೆ ಇರು’ – ಎಂಬ ಮಾತಿದೆ. ಬಡವನಾದವನು ಹೀಗೆ ತನ್ನ ಪಾಡಿಗೆ ತಾನು ಇದ್ದರೂ ಲೋಕ ಅವನನ್ನು ಹಿಂಸಿಸದೆ ಸುಮ್ಮನಿರದು ಎಂದು ಸುಭಾಷಿತ ಹೇಳುತ್ತಿದೆ.

ಸಜ್ಜನರು, ಸುಸಂಸ್ಕೃತರು ಯಾರ ತಂಟೆಗೂ ಹೋಗದೆ ತಮ್ಮ ಪಾಡಿಗೆ ತಾವು ಇರುತ್ತಾರೆ; ಆದರೂ ಲೋಕ ಅವರನ್ನು ನಿಂದಿಸದೆ ಬಿಡುವುದಿಲ್ಲ, ತೊಂದರೆ ಕೊಡದೆ ಇರುವುದಿಲ್ಲ. ಇದಕ್ಕೆ ಇನ್ನೊಂದು ಉದಾಹರಣೆ ಕೊಡಬಹುದಾದರೆ ಅದು ಉಗ್ರಗಾಮಿಗಳ ದಾಳಿ. ಅವರು ದಾಳಿಯನ್ನು ಯಾರ ಮೇಲೆ ನಡೆಸುತ್ತಾರೆ? ಸಾಮಾನ್ಯಜನರ ಮೇಲೆ ತಾನೆ? ಎಲ್ಲೋ ಪಾರ್ಕಿನಲ್ಲಿ ಆಟವಾಡುತ್ತಿರುವವರ ಮೇಲೆ, ಸ್ಕೂಲಿನಲ್ಲಿರುವ ಮಕ್ಕಳ ಮೇಲೆ, ದೇವಸ್ಥಾನಕ್ಕೆ ಹೋಗಿರುವ ಮುಗ್ಧರ ಮೇಲೆ, ರೈಲು–ಬಸ್‌ಗಳಲ್ಲಿ ಸಂಚರಿಸುತ್ತಿರವ ಅಮಾಯಕರ ಮೇಲೆ ಇವರು ದಾಳಿ ನಡೆಸುತ್ತಾರೆ. ಯಾರದೋ ಅವಿವೇಕ, ಅಮಾನವೀಯತೆಗಳ ಕಾರಣದಿಂದ ಇನ್ನ್ಯಾರೋ ಬಲಿಪಶುಗಳು ಆಗುತ್ತಿರುತ್ತಾರೆ. ಎಂದರೆ, ಸಾಮಾನ್ಯರು ತಮ್ಮಷ್ಟಕ್ಕೆ ತಾವು ಗಮ್ಮನೆ ಇದ್ದರೂ ಅವರಿಗೆ ಅಪಾಯ ತಪ್ಪಿದ್ದಲ್ಲ ಎಂಬುದನ್ನು ಸಮಾಜದಲ್ಲಿ ಪ್ರತಿಕ್ಷಣವೂ ನೋಡುತ್ತಿರುತ್ತೇವೆ.

ಸುಭಾಷಿತ ಇಲ್ಲಿ ಜಿಂಕೆಯ ಉದಾಹರಣೆಯನ್ನು ತೆಗೆದುಕೊಂಡಿದೆ. ಜಿಂಕೆ ಕಾಡಿನಲ್ಲಿ ತನ್ನ ಪಾಡಿಗೆ ತಾನಿರುತ್ತದೆ. ಅದು ಬೇರೊಂದು ಪ್ರಾಣಿಯನ್ನು ಹಿಂಸಿಸುವುದಿಲ್ಲ. ಅದು ತಿನ್ನುವುದು ಕೂಡ ಹುಲ್ಲನ್ನೇ. ಇನ್ನ್ಯಾರದೋ ಪಾಲಿನ ನೀರನ್ನೂ ಅದು ಕುಡಿಯುವುದಿಲ್ಲ. ಇಷ್ಟು ಸರಳ ಮತ್ತು ಅಹಿಂಸಾತ್ಮಕ ರೀತಿಯಲ್ಲಿ ಜೀವಿಸುವ ಜಿಂಕೆಯನ್ನು ಮನುಷ್ಯ ಬೇಟೆಯಾಡಿ ಕೊಲ್ಲುತ್ತಾನೆ. ಇಂಥವನ್ನು ನೋಡಿದಾಗ, ಸಾಮಾನ್ಯರನ್ನು ಹಿಂಸಿಸುವುದು ಲೋಕದ ನಿಯಮವೇ ಹೌದೇನೋ ಎಂದು ಆಗಾಗ ಸಂಶಯ ಬರುವುದುಂಟು.

ಇಂಥ ಪರಿಸ್ಥಿತಿಯನ್ನು ಕಚೇರಿಗಳಲ್ಲಿಯೂ ನೋಡಬಹುದು; ಮನೆಗಳಲ್ಲೂ ನೋಡಬಹುದು; ಸಮಾಜದಲ್ಲೂ ನೋಡಬಹುದು.

ಮೈ ಬಗ್ಗಿಸಿ, ಕಷ್ಟದಿಂದ ದುಡಿಯುವ ಕೆಲಸಗಾರರು ಧೂರ್ತರ ಮೋಸಜಾಲದಿಂದ ಕಚೇರಿಗಳಲ್ಲಿ ಸಂಕಷ್ಟಕ್ಕೆ ತುತ್ತಾಗಬಹುದು. ಮನೆಗಳಲ್ಲೂ ಯಾರು ಹಿರಿಯರು ಹೇಳಿದಂತೆ ಕೇಳುತ್ತ ಸೌಮ್ಯವಾಗಿ ನಡೆದುಕೊಳ್ಳುವವರೋ ಅವರ ಮೇಲೆಯೇ ಆರೋಪಗಳ ಸುರಿಮಳೆ ಆಗುತ್ತಿರಬಹುದು. ಸಜ್ಜನರನ್ನು ಸಮಾಜ ಕೈಲಾಗದವರು ಎಂದೇ ವ್ಯವಹರಿಸುತ್ತಿರುತ್ತದೆ.

ಕೇವಲ ಒಳ್ಳೆಯತನ ಇದ್ದರಷ್ಟೆ ಸಾಲದು; ಅದನ್ನು ಉಳಿಸಿಕೊಳ್ಳಬಲ್ಲ ಬಲವೂ ಬೇಕಾಗುತ್ತದೆಯೆನ್ನಿ!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.