ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಬಂಧು ಪ್ರೀತಿ

Last Updated 26 ಆಗಸ್ಟ್ 2021, 6:42 IST
ಅಕ್ಷರ ಗಾತ್ರ

ಸಂಭೋಜನಂ ಸಂಕಥನಂ ಸಂಪ್ರಶ್ನೋsಥ ಸಮಾಗಮಃ ।

ಜ್ಞಾತಿಭಿಃ ಸಹ ಕಾರ್ಯಾಣಿ ನ ವಿರೋಧಃ ಕದಾಚನ ।।

ಇದರ ತಾತ್ಪರ್ಯ ಹೀಗೆ:

‘ನಂಟರೊಡನೆ ಊಟ ಮಾಡಬೇಕು, ಮಾತನಾಡಬೇಕು. ಕುಶಲಪ್ರಶ್ನೆ ಮಾಡಬೇಕು. ಆಗಾಗ ಅವರ ಮನೆಗೆ ಭೇಟಿಯನ್ನು ಮಾಡಬೇಕು. ಎಂದಿಗೂ ಹಗೆತನ ಮಾಡಬಾರದು.’

ನಾವೆಲ್ಲರೂ ಸಾಮರಸ್ಯದ ಜೀವನವನ್ನು ನಡೆಸಬೇಕು ಎಂಬುದನ್ನು ಸುಭಾಷಿತ ಹೇಳುತ್ತಿದೆ.

ನಮ್ಮ ಬಂಧುಗಳ ಜೊತೆ, ಸ್ನೇಹಿತರ ಜೊತೆ ಹಿತವಾದ ಬಾಂಧವ್ಯವನ್ನು ಸಾಧಿಸುವುದರಲ್ಲಿಯೇ ಜೀವನದ ಸಂತೋಷವಿದೆ. ಎಲ್ಲರೊಡನೆ ಬೆರೆತು ಸ್ನೇಹ–ಪ್ರೀತಿ–ಕಾಳಜಿಗಳನ್ನು ಹಂಚಿಕೊಂಡು, ಒಂದಾಗಿ ಬದುಕಿದಾಗ ಜೀವನ ಸುಖಮಯವೂ ಸುಂದರಮಯವೂ ಎನಿಸುತ್ತದೆ. ಸ್ನೇಹದಿಂದ ಬದುಕುವುದು ಹೇಗೆ ಎಂಬುದನ್ನು ತಿಳಿಸಲು ಸುಭಾಷಿತ ಕೆಲವು ವಿಧಾನಗಳನ್ನೂ ಹೇಳಿದೆ. ನಮ್ಮ ನಿತ್ಯದ ಜೀವನದಲ್ಲಿ ಬಂಧುಗಳನ್ನು ಹೇಗೆ ಆದರಿಸಬೇಕು, ಅವರೊಂದಿಗೆ ಸ್ನೇಹದ ಬೆಸುಗೆಯನ್ನು ಹೇಗೆ ಸಾಧಿಸಬೇಕು – ಎಂಬುದನ್ನು ಇಲ್ಲಿ ಹೇಳುತ್ತಿದೆ.

‘ನಂಟರೊಡನೆ ಊಟ ಮಾಡಬೇಕು, ಮಾತನಾಡಬೇಕು. ಕುಶಲಪ್ರಶ್ನೆ ಮಾಡಬೇಕು. ಆಗಾಗ ಅವರ ಮನೆಗೆ ಭೇಟಿಯನ್ನು ಕೊಡಬೇಕು.‘ ಇವೆಲ್ಲವೂ ಸ್ನೇಹವನ್ನು ಸಂಪಾದಿಸುವುದಕ್ಕೂ, ಸಂಪಾದಿಸಿದ ಸ್ನೇಹವನ್ನು ಉಳಿಸಿಕೊಳ್ಳುವುದಕ್ಕೂ ಕಾರಣವಾಗುವ ನಮ್ಮ ನಡತೆ. ಊಟ ಮಾಡುವುದು, ಮಾತನಾಡುವುದು, ಯೋಗಕ್ಷೇಮವನ್ನು ವಿಚಾರಿಸುವುದು, ಆಗಾಗ ಮನೆಗೆ ಭೇಟಿ ನೀಡುವುದು – ಇವೆಲ್ಲವೂ ಬಾಂಧವ್ಯವನ್ನು ಗಟ್ಟಿಮಾಡುತ್ತವೆ. ಈಗ ನಾವು ದ್ವೀಪಗಳಂತೆ ಪ್ರತ್ಯೇಕವಾಗಿ ಬದುಕುತ್ತಿರುವುದೇ ಹೆಚ್ಚು. ಯಾರಿಗೂ ಸಮಯವೂ ಇಲ್ಲ, ಮನಸ್ಸೂ ಇಲ್ಲ – ಎಂಬಂತೆ ಒಬ್ಬರಿಂದ ಒಬ್ಬರು ದೂರವಾಗಿ ಬದುಕುತ್ತಿದ್ದೇವೆ. ನಮ್ಮ ಕೌಟುಂಬಿಕ ಜೀವನ ಎಂಬುದು ಬಹಳ ಕೃತಕವೇ ಆಗುತ್ತಿದೆ. ಆದರೆ ಪರಸ್ಪರ ಸ್ನೇಹದಲ್ಲಿ ಸಾಗುವ ಬದುಕಿನ ಸುಖವನ್ನು ಸವಿದರೆ ಮಾತ್ರವೇ ಅದರ ರುಚಿ ಎಂಥದ್ದು ಎಂದು ಅರಿವಾಗುವುದು.

ನಾವು ಸ್ನೇಹವನ್ನು ಸಂಪಾದಿಸದಿದ್ದರೂ ಪರವಾಗಿಲ್ಲ, ಎಂದಿಗೂ ಹಗೆತನ ಮಾಡಬಾರದು – ಎಂದೂ ಸುಭಾಷಿತ ಎಚ್ಚರಿಸುತ್ತಿದೆ.

ಜೀವನವೇನೂ ಶಾಶ್ವತವಲ್ಲ. ಇರುವಷ್ಟು ದಿನ ಸಂತೋಷವಾಗಿ ಇರಬೇಕಾದರೆ ನಮ್ಮ ಸುತ್ತಮುತ್ತ ನಾಲ್ಕು ಜನರು ಬಂಧುಗಳು, ಸ್ನೇಹಿತರು ಇರಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT