ಶುಕ್ರವಾರ, ಜೂನ್ 18, 2021
29 °C

ದಿನದ ಸೂಕ್ತಿ | ಇದ್ದಿಲೋ ಹೂಮಾಲೆಯೋ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

ಚಿಟ್ಟೆ ಮತ್ತು ಹೂವು

ಯಥಾ ಮಧು ಸಮಾದತ್ತೇ ರಕ್ಷನ್‌ ಪುಷ್ಪಾಣಿ ಷಟ್ಪದಃ

ತದ್ವದರ್ಥಾನ್‌ ಮನುಷ್ಯೇಭ್ಯ ಆದದ್ಯಾದವಿಹಿಂಸಯಾ ।

ಪುಷ್ಟಂ ಪುಷ್ಪಂ ವಿಚಿನ್ವೀತ ಮೂಲಚ್ಛೇದಂ ನ ಕಾರಯೇತ್‌

ಮಾಲಾಕಾರ ಇವಾರಾಮೇ ನ ಯಥಾಂಗಾರಕಾರಕಃ ।

 ಇದರ ತಾತ್ಪರ್ಯ ಹೀಗೆ:

‘ಹೂಗಳಿಗೆ ತೊಂದರೆ ಮಾಡದೆ ದುಂಬಿಗಳು ಮಧುವನ್ನು ಹೀರುವಂತೆ, ರಾಜನು ಜನರಿಗೆ ಹಿಂಸೆ ಕೊಡುದಂತೆ ಅವರಿಂದ ಹಣವನ್ನು ವಸೂಲುಮಾಡಬೇಕು. ಹೂವಾಡಿಗನು ತೋಟದಲ್ಲಿ ಹೂವನ್ನು ಕೀಳುವಂತೆ ಸಂಗ್ರಹಿಸಬೇಕು. ಇದ್ದಿಲನ್ನು ಮಾಡುವವನಂತೆ ಬೇರನ್ನೇ ಕತ್ತರಿಲು ತೊಡಗಬಾರದು.‘

ರಾಜ್ಯದ ನಿರ್ವಹಣೆ ನಡೆಯುವುದೇ ಪ್ರಜೆಗಳಿಂದ ಸಂಗ್ರಹಿಸುವ ತೆರಿಗೆಯ ಹಣದಿಂದ. ಈ ತೆರಿಗೆಯನ್ನು ಹೇಗೆ ಸಂಗ್ರಹಿಸಬೇಕು – ಎನ್ನುವುದರ ಬಗ್ಗೆ ಸುಭಾಷಿತ ತಿಳಿಸುತ್ತಿದೆ, ಸೊಗಸಾದ ಉದಾಹರಣೆಯ ಮೂಲಕ.

ದುಂಬಿ ಹಲವು ಹೂವುಗಳಿಂದ ಮಧುವನ್ನು ಸಂಗ್ರಹಿಸಿ, ಅದರ ಫಲವಾಗಿ ಜೇನಿನ ಗೂಡನ್ನೇ ಕಟ್ಟುತ್ತದೆ. ಹನಿಹನಿಯಾಗಿ ಸಂಗ್ರಹವಾಗುವ ಜೇನು ಕೊನೆಯಲ್ಲಿ ದೊಡ್ಡ ಪ್ರಮಾಣದಲ್ಲಿಯೇ ಶೇಖರವಾಗುತ್ತದೆ, ಜೇನುಗೂಡಿನ ರೂಪದಲ್ಲಿ. ಇಲ್ಲಿ ಒಂದು ಸಂಗತಿ ಗಮನಾರ್ಹ; ದುಂಬಿ ಹೂವುಗಳಿಂದ ಜೇನನ್ನು ಸಂಗ್ರಹಿಸುವಾಗ ಅದು ಹೂವಿಗೆ ಸ್ವಲ್ಪವೂ ತೊಂದರೆ ಆಗದಂತೆ ಎಚ್ಚರವನ್ನು ವಹಿಸುತ್ತದೆ. ಹೀಗೆಯೇ ರಾಜನಾದವನು ಕೂಡ ಜನರಿಂದ ಹಣವನ್ನು ಸಂಗ್ರಹಿಸುವಾಗ ಅವರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು. ಇದು ಸುಭಾಷಿತದ ಆಶಯ.

ಪ್ರಜೆಗಳು ತೆರಿಗೆ ಕಟ್ಟುವುದರಲ್ಲಿಯೇ ಅವರ ಜೀವನವನ್ನೂ ದುಡಿಮೆಯನ್ನೂ ನೆಮ್ಮದಿಯನ್ನೂ ಕಳೆದುಕೊಂಡರೆ ಆಗ ರಾಜ್ಯದ ಪರಿಸ್ಥಿತಿಯಾದರೂ ಹೇಗಿದ್ದೀತು? ರಾಜ್ಯ ಇರುವುದೇ ಜನರಿಂದ ಜನರಿಗೆ ಎಂಬುದನ್ನು ರಾಜನಾದವನು ಎಂದಿಗೂ ಮರೆಯಬಾರದು.

ಇಲ್ಲಿ ಸುಭಾಷಿತ ಈ ವಿವರವನ್ನು ನಿರೂಪಿಸಲು ನೀಡಿರುವ ಇನ್ನೊಂದು ಉದಾಹರಣೆಯೂ ರೀತಿ ಸೊಗಸಾಗಿದೆ.

ಹೂವಾಡಿಗ ವೃತ್ತಿಯೇ ಹೂವಿನ ಮಾಲೆಯನ್ನು ಪೋಣಿಸಿ, ಅದನ್ನು ಮಾರಿ ಜೀವನವನ್ನು ನಡೆಸುವುದು. ಇದಕ್ಕಾಗಿ ಅವನು ಹೂವುಗಳನ್ನು ಸಂಗ್ರಹಿಸಲೇಬೇಕು. ಆದರೆ ಅವನು ತೋಟದಲ್ಲಿ ಹೂವುಗಳನ್ನು ಹೇಗೆ ಸಂಗ್ರಹಿಸುತ್ತಾನೆ? ಇಡಿಯ ಗಿಡಗಳನ್ನೇ ಅವನು ಕೀಳುವದಿಲ್ಲವಷ್ಟೆ! ಗಿಡವನ್ನೇ ಕಿತ್ತರೆ ಅವನಿಗೆ ನಾಳೆ ಹೂವಾದರೂ ಹೇಗೆ ಸಿಕ್ಕೀತು?

ಇದಕ್ಕೆ ತದ್ವಿರುದ್ಧ ಕೆಲಸವನ್ನು ಮಾಡುವವನು ಇದ್ದಿಲನ್ನು ತಯಾರಿಸುವವ. ಇದ್ದಿಲಿನ ತಯಾರಿಕೆಯಲ್ಲಿ ಬೇಕಾಗಿರುವುದು ಇಡಿಯ ಮರವೇ ಹೊರತು ಹೂವುಗಳಲ್ಲ; ಹೂವುಗಳಿಂದ ಅವನಿಗೆ ಆಗಬೇಕಾದ್ದು ಏನೂ ಇಲ್ಲವಷ್ಟೆ! ಹೀಗಾಗಿ ಅವನು ಬುಡಸಮೇತ ಮರಗಳನ್ನೇ ಕಿತ್ತು, ಇದ್ದಿಲಿನ ತಯಾರಿಕೆಯಲ್ಲಿ ಅವನ್ನು ಬಳಸಿಕೊಳ್ಳುತ್ತಾನೆ. ಮರಗಳ ಸಾವಿನಲ್ಲಿ ಇದ್ದಿಲಿನವನ ಬದುಕು ಇದೆ; ಆದರೆ ಹೂಗಿಡಗಳ ಬದುಕಿನಲ್ಲಿ ಹೂವಾಡಿಗನ ಜೀವನ ಇದೆ. ಇಲ್ಲಿ ನೀಡಿರುವ ಉದಾಹರಣೆಗಳ ಆಶಯವನ್ನು ಸರಿಯಾಗಿ ಗ್ರಹಿಸಬೇಕಾಗುತ್ತದೆ. ನಮ್ಮ ಉದ್ದೇಶವನ್ನು ನೆರವೇರಿಸಿಕೊಳ್ಳುವಲ್ಲಿ ನಾವು ಬೇರೆಯವರ ಜೀವವನ್ನೂ ಜೀವನವನ್ನೂ ಕಾಪಾಡುತ್ತಿದ್ದೇವೆಯೋ ನಾಶಮಾಡುತ್ತಿದ್ದೇವೆಯೋ – ಎನ್ನುವುದೇ ಇಲ್ಲಿ ಆಲೋಚಿಸಬೇಕಾದ ಸಂಗತಿ.

ರಾಜನಾದನು ಪ್ರಜೆಗಳನ್ನು ಇದ್ದಿಲನ್ನಾಗಿ ನೋಡುತ್ತಾನೋ ಅಥವಾ ಹೂವನ್ನಾಗಿ ನೋಡುತ್ತಾನೋ ಎನ್ನುವುದರಲ್ಲಿ ರಾಜ್ಯದ ಭವಿಷ್ಯವೂ ಇದೆ, ರಾಜನ ಭವಿಷ್ಯವೂ ಇದೆ, ಪ್ರಜೆಗಳ ಭವಿಷ್ಯವೂ ನಿಂತಿರುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.