ಶನಿವಾರ, ಸೆಪ್ಟೆಂಬರ್ 26, 2020
23 °C

ದಿನದ ಸೂಕ್ತಿ| ಶಿಕ್ಷಣ: ಭುಕ್ತಿಗೂ ಮುಕ್ತಿಗೂ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಬುಭುಕ್ಷಿತೈರ್ವ್ಯಾಕರಣಂ ನ ಭುಜ್ಯತೇ ಪಿಪಾಸಿತೈಃ ಕಾವ್ಯರಸೋ ನ ಪೀಯತೇ ।

ನ ಛಂದಸಾ ಕೇನಚಿದುದ್ಧೃತಂ ಕುಲಂ ಹಿರಣ್ಯಮೇವಾಶ್ರಯ ನಿಷ್ಫಲಾ ಗುಣಾಃ ।।

ಇದರ ತಾತ್ಪರ್ಯ ಹೀಗೆ:

’ಹಸಿದಿರುವವನಿಗೆ ವ್ಯಾಕರಣಶಾಸ್ತ್ರ ಹೊಟ್ಟೆ ತುಂಬಿಸದು; ಕಾವ್ಯರಸವು ಬಾಯಾರಿರುವವನಿಗೆ ನೀರು ಕೊಡದು; ವೇದಗಳನ್ನು ಓದಿ ಯಾವ ಕುಲವೂ ಉದ್ಧಾರವಾಗಿಲ್ಲ. ಹೀಗಾಗಿ ಚಿನ್ನವನ್ನು ಸಂಪಾದಿಸು, ಉಳಿದ ಗುಣಗಳು ಕೇವಲ ವ್ಯರ್ಥವಷ್ಟೆ!‘

ಮೇಲ್ನೋಟಕ್ಕೆ ಈ ಪದ್ಯವು ಶಿಕ್ಷಣವನ್ನು ಮೂದಲಿಸುತ್ತಿದೆ ಎಂದೆನಿಸುವುದು ಸಹಜ. ಆದರೆ ಇದರ ಹಿಂದಿರುವ ಸಂಕಟವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು.

ಒಂದೊಂದು ಶಾಸ್ತ್ರವನ್ನು ಸ್ವಾಧೀನಮಾಡಿಕೊಳ್ಳಲು ಹಲವು ವರ್ಷಗಳ ಅಧ್ಯಯನ ಎಂಬ ತಪಸ್ಸು ಬೇಕು. ಈ ಅಧ್ಯಯನ ನಡೆಯಲು ಹಲವು ರೀತಿಯ ನೆರವು ಕೂಡ ಬೇಕಾಗುತ್ತದೆ. ತೊಂದರೆಗಳಲ್ಲಿಯೇ ಮುಳುಗಿರುವವನು ಅಧ್ಯಯನ ಕಡೆಗೆ ಪೂರ್ಣ ಗಮನವನ್ನು ಕೊಡಲು ಸಾಧ್ಯವಾಗದಷ್ಟೆ. ಸರಿ, ಒಬ್ಬ ಕಷ್ಟಪಟ್ಟು ಒಂದು ವಿಷಯದಲ್ಲಿ ಪಾಂಡಿತ್ಯವನ್ನು ಸಂಪಾದಿಸಿದ, ಎಂದಿಟ್ಟುಕೊಳ್ಳೋಣ. ಆಮೇಲೆ ಅವನ ಜೀವನ ಹೇಗೆ – ಎಂಬ ಪ್ರಶ್ನೆಯೂ ಎದುರಾಗುತ್ತದೆ. ಅವನು ಕಲಿತ ವಿದ್ಯೆ ಸರಿಯಾಗಿ ವಿನಿಯೋಗವಾಗುವಂಥ ವಾತಾವರಣವೂ ಒದಗಬೇಕು. ಇಲ್ಲವಾದಲ್ಲಿ ಅವನಿಗೆ ತಾನು ಕಲಿತ ವಿದ್ಯೆಯೆಲ್ಲವೂ ವ್ಯರ್ಥ ಎಂದೆನಿಸುವುದು ಸಹಜ. ಆದರೆ ಸಮಾಜದ ಗಮನವೆಲ್ಲವೂ ದುಡ್ಡು–ಸಂಪತ್ತು ಇವುಗಳ ಕಡೆಯೇ ಇರುತ್ತದೆ; ಅದು ವಿದ್ಯೆಯನ್ನು ಬಯಸುವುದು ಕೂಡ ಮಾರುಕಟ್ಟೆಯಲ್ಲಿ ’ಅದು ಚೆನ್ನಾಗಿ ವ್ಯಾಪಾರವಾಗುತ್ತದೆ‘ ಎನ್ನುವ ಕಾರಣದಿಂದಲೇ ಆಗಿರುತ್ತದೆ.

ಆಲಿಸಲು: ಕನ್ನಡ ಧ್ವನಿ Podcast | ದಿನದ ಸೂಕ್ತಿ; ಶಿಕ್ಷಣ: ಭುಕ್ತಿಗೂ ಮುಕ್ತಿಗೂ

ಸುಭಾಷಿತ ಇಂಥದೇ ಸಂದರ್ಭದಲ್ಲಿ ಹುಟ್ಟಿಕೊಂಡಿರುವಂಥದ್ದು ಎಂಬುದರಲ್ಲಿ ಅನುಮಾನವೇ ಇಲ್ಲ.

ನಮ್ಮ ದೇಶದಲ್ಲಿ ನಾವೀಗ ನಮ್ಮ ಸಂಪಾದನೆಯ ದೊಡ್ಡ ಮೊತ್ತವನ್ನು ಶಿಕ್ಷಣಕ್ಕಾಗಿಯೇ ಖರ್ಚುಮಾಡುತ್ತಿದ್ದೇವೆ, ಅಲ್ಲವೆ? ಎಲ್‌ಕೆಜಿ, ಯುಕೆಜಿಗಳಿಗೇ ಲಕ್ಷಾಂತರ ರೂಪಾಯಿಗಳನ್ನು ವ್ಯಯಮಾಡುತ್ತಿದ್ದೇವೆ. ಆದರೆ ನಾವು ದಿಟವಾದ ಶಿಕ್ಷಣವನ್ನು ಪಡೆಯುತ್ತಿದ್ದೇವೆಯೆ? ನಾವೇ ಆತ್ಮಾವಲೋಕ ಮಾಡಿಕೊಳ್ಳಬೇಕಷ್ಟೆ!

ಒಂದುನೂರ ಮೂವತ್ತು ಕೋಟಿಯಷ್ಟು ಜನಸಂಖ್ಯೆಯನ್ನೂ ಮೀರಿದ ದೇಶದ ನಮ್ಮದು. ಇಷ್ಟು ದೊಡ್ಡ ದೇಶವೊಂದು ಹೆಮ್ಮೆ ಪಡುವಷ್ಟು ನಾವು ಶಿಕ್ಷಣಕ್ಷೇತ್ರದಲ್ಲಿ ಸಾಧಿಸಿರುವುದಾದರೂ ಎಷ್ಟು? ನಮ್ಮ ಶಿಕ್ಷಣದ ಮಟ್ಟವನ್ನು ನಾವು ನಮಗೆ ಸಿಕ್ಕ ನೊಬೆಲ್‌ ಪ್ರಶಸ್ತಿಗಳಿಂದ ಅಳೆಯಬೇಕಿಲ್ಲ, ದಿಟ; ಆದರೆ ಅದೂ ಒಂದು ಮಾನದಂಡವೇ ಹೌದು. ಇದರೊಂದಿಗೆ ನಮ್ಮ ಸಾಮಾಜಿಕ ಕರ್ತವ್ಯಪ್ರಜ್ಞೆ, ಜನರ ಸುಖದ ಮಟ್ಟ, ಸಮಾಜದಲ್ಲಿ ನೆಲೆಯಾಗಿರುವ ಮೌಲ್ಯಗಳು – ಇಂಥವು ನಾವು ಪಡೆದಿರುವ ಶಿಕ್ಷಣದ ಗುಣಮಟ್ಟವನ್ನು ಎತ್ತಿತೋರಿಸುವ ವಿದ್ಯಾಪತಾಕೆಗಳು. ಮಾತ್ರವಲ್ಲ, ಪ್ರಜಾಪ್ರಭುತ್ವದ ಸಾರ್ಥಕತೆ ಇರುವುದೇ ಆ ದೇಶ ಸಾಧಿಸಿರುವ ಶೈಕ್ಷಣಿಕ ಮೌಲ್ಯಗಳಲ್ಲಿಯೇ ಹೌದು.

ಸಮಾಜಕ್ಕೆ ಬೇಕಾದ ಎಲ್ಲ ವಿಧದ ಪ್ರಯೋಜನವನ್ನು ಒದಗಿಸುವುದೇ ದಿಟವಾದ ವಿದ್ಯೆ, ಶಿಕ್ಷಣ. ಎಂದರೆ ಸಮಾಜವನ್ನು ಸ್ವಾವಲಂಬಿಯಾಗಿಸಬಲ್ಲದ್ದೇ ಶಿಕ್ಷಣ. ಈ ಸ್ವಾವಲಂಬನೆ ಸಮಷ್ಟಿರೂಪದಲ್ಲಿ ಮಾತ್ರವಷ್ಟೆ ಸಾಧಿತವಾಗಬೇಕಾದ ಮೌಲ್ಯವಲ್ಲ, ಇದು ವ್ಯಷ್ಟಿರೂಪದಲ್ಲಿಯೂ ನಡೆಯಬೇಕಾಗುತ್ತದೆ. ನಮ್ಮ ದೇಶದಲ್ಲಿ ಇನ್ನೂ ನಾವು ಇಂಥ ಸ್ವಾವಲಂಬನೆಯನ್ನು ಸಾಧಿಸಿಲ್ಲ ಎನ್ನುವುದನ್ನು ವಿಷಾದದಿಂದಲೇ ಹೇಳಬೇಕಾಗುತ್ತದೆ. 

ನಾವು ನಮ್ಮ ಶಿಕ್ಷಣವ್ಯವಸ್ಥೆಯನ್ನು ಹಣಸಂಪಾದನೆಯ ಮೂಲವನ್ನಾಗಿಯೇ ಗ್ರಹಿಸುತ್ತಿರುವುದು ಆತಂಕಕಾರಿಯಾದ ಸಂಗತಿ. ಹೀಗಾಗಿಯೇ ನಮ್ಮ ದೇಶ ಸಾಧಿಸಬೇಕಾದ ಎತ್ತರವನ್ನು ನಾವು ಇನ್ನೂ ಸಾಧಿಸಲಾಗಿಲ್ಲ. ವಿಜ್ಞಾನ–ತಂತ್ರಜ್ಞಾನದಲ್ಲಿ ನಾವು ಯಾವ ಶ್ರೇಷ್ಠತೆಯನ್ನು ಪಡೆಯಬೇಕಿತ್ತೊ, ಅಷ್ಟನ್ನು ಪಡೆದಿಲ್ಲ ಎನ್ನುವುದು ಕೂಡ ಖೇದಕರ ಸಂಗತಿಯೇ ಹೌದು. ನಮ್ಮ ಸಾಮಾಜಿಕ ಸಂವಾದಗಳನ್ನು ನೋಡಿದರೂ ನಮ್ಮ ವಿದ್ವತ್ತಿನ ಗುಣಮಟ್ಟವೂ, ನಾವು ಅದಕ್ಕೆ ಕೊಡುತ್ತಿರುವ ಮನ್ನಣೆಯೂ ತಿಳಿಯುತ್ತದೆ. ನಮ್ಮ ಬಹುಪಾಲು ರಾಜಕೀಯ–ಸಾಮಾಜಿಕ–ಸಾಂಸ್ಕೃತಿಕ ಚರ್ಚೆಗಳು ಬಾಲಿಶವಾಗಿಯೇ ನಡೆಯುತ್ತಿರುವುದರಲ್ಲಿ ಎರಡು ಮಾತಿಲ್ಲ. ಈ ಎಲ್ಲ ಕಾರಣಗಳನ್ನು ವಿಶ್ಲೇಷಿಸಲು ತೊಡಗಿದಾಗ ಎಂಥ ವಿದ್ಯಾಪಕ್ಷಪಾತಿಗೂ ಬೇಸರ ಹುಟ್ಟದಿರದು. ಅಂಥವನು ಒಮ್ಮೆಯಾದರೂ ’ಅಯ್ಯೋ! ಇಲ್ಲಿ ವಿದ್ಯೆಗೆ ಬೆಲೆ ಇಲ್ಲ, ಹಣಕ್ಕೆ ಮಾತ್ರವೇ ಬೆಲೆ; ನಾನೂ ಒಂದಿಷ್ಟು ದುಡ್ಡು ಮಾಡಿದಿದ್ದರೆ ನನಗೆ ಊಟವೂ ಸಿಗುತ್ತಿತ್ತು, ಗೌರವವೂ ಸಿಗುತ್ತಿತ್ತು‘ ಎಂದು ಉದ್ಗರಿಸದೆ ಇರಲಾರ. 

ಈ ಸುಭಾಷಿತದ ಉದ್ಗಾರದಲ್ಲಿಯೂ ನಾವು ಇಂಥದೇ ನೋವನ್ನು ಕಾಣುವುದು.

ಪ್ರಾಚೀನ ಭಾರತದಲ್ಲಿ ಶಿಕ್ಷಣಪದ್ಧತಿಯನ್ನು ವಿವಿಧ ಆಯಾಮಗಳಲ್ಲಿ ಕಾಣಲಾಗಿದೆ. ಕೇವಲ ಉದ್ಯೋಗ, ಹಣ, ಸುಖಗಳಿಗೆ ಕಾರಣವಾಗುವುದಷ್ಟೆ ವಿದ್ಯೆ ಅಲ್ಲ, ಶಿಕ್ಷಣ ಎಲ್ಲ ಎನ್ನುವುದನ್ನು ಮತ್ತೆ ಮತ್ತೆ ಪ್ರತಿಪಾದಿಸಲಾಗಿದೆ. ಇದಕ್ಕೊಂದು ಉದಾಹರಣೆ ಇಲ್ಲಿದೆ:

ವಾಗ್ವೈಖರೀ ಶಬ್ದಝರೀ ಶಾಸ್ತ್ರವ್ಯಾಖ್ಯಾನಕೌಶಲಮ್ |

ವೈದುಷ್ಯಂ ವಿದುಷಾಂ ತದ್ವದ್‌ ಭುಕ್ತಯೇ ನ ತು ಮುಕ್ತಯೇ ||

’ಮಾತಿನ ವೈಖರಿ, ಪದಗಳ ಪ್ರವಾಹ, ಶಾಸ್ತ್ರಗಳನ್ನು ವಿವರಿಸುವ ವ್ಯಾಖ್ಯಾನಕೌಶಲ ಮತ್ತು ಪಾಂಡಿತ್ಯ – ಇಂಥವು ಭೋಗಕ್ಕೆ ಸಾಧನ ಆಗಬಹುದೇ ಹೊರತು ಮುಕ್ತಿಗೆ ಪ್ರಯೋಜವಾಗದು.‘

ಈ ಮೊದಲಿನ ಸುಭಾಷಿತ ವಿದ್ಯೆಯಿಂದ ಅನ್ನ–ಐಶ್ವರ್ಯಗಳು ಸಿಗುತ್ತಿಲ್ಲ ಎಂದು ಹೇಳಿದ್ದರೆ, ಬರೀ ಅನ್ನ–ಐಶ್ವರ್ಯಗಳನ್ನು ಕೊಡುವುದಷ್ಟೆ ವಿದ್ಯೆ ಅಲ್ಲ ಎಂದು ’ವಿವೇಕಚೂಡಾಮಣಿ‘ಯ ಈ ಪದ್ಯ ಹೇಳುತ್ತಿದೆ.

ಇದರ ತಾತ್ಪರ್ಯ, ವ್ಯಷ್ಟಿ–ಸಮಷ್ಟಿಗಳ ಹಿತವನ್ನು ಸಮಗ್ರವಾಗಿ ಕಾ‍ಪಾಡಬಲ್ಲದ್ದೇ ದಿಟವಾದ ವಿದ್ಯೆ, ಎಂದರೆ ದಿಟವಾದ ಶಿಕ್ಷಣ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು