ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಜ್ಞಾನದಿಂದ ಮೋಹನಾಶ

Last Updated 6 ಫೆಬ್ರುವರಿ 2021, 1:16 IST
ಅಕ್ಷರ ಗಾತ್ರ

ಕದಾಚಿತ್‌ ಪ್ರಾಸಾದೇ ಕ್ವಚಿದಪಿ ಚ ಸೌಧೇಷು ಧನಿನಾಂ

ಕದಾಚಿತ್ ಶೈಲೇಷು ಕ್ವಚಿದಪಿ ಚ ಕೂಲೇಷು ಸರಿತಾಮ್‌ ।

ಕುಟೀರೇ ದಾಂತಾನಾಂ ಮುನಿಜನವರಾಣಾಮಪಿ ವಸನ್‌

ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತತಮಾಃ ।।

ಇದರ ತಾತ್ಪರ್ಯ ಹೀಗೆ:

‘ಒಮ್ಮೆ ಅರಮನೆಯಲ್ಲಿ, ಇನ್ನೊಮ್ಮೆ ಸಿರಿವಂತರ ಸೌಧಗಳಲ್ಲಿ, ಮತ್ತೊಮ್ಮೆ ಪರ್ವತದಲ್ಲಿ, ಮಗದೊಮ್ಮೆ ನದೀತೀರಗಳಲ್ಲಿ, ಇನ್ನೊಮ್ಮೆ ಜಿತೇಂದ್ರಿಯರಾದ ಮುನಿಶ್ರೇಷ್ಠರ ಕುಟೀರಗಳಲ್ಲಿ ವಾಸಮಾಡುತ್ತಿದ್ದರೂ ಗುರುವಿನಿಂದ ಉಪದೇಶವನ್ನು ಪಡೆದು ಅಜ್ಞಾನವನ್ನು ಹೋಗಲಾಡಿಸಿ‌ಕೊಂಡಿರುವ ಮುನಿಯು ವ್ಯಾಮೋಹವನ್ನು ಹೊಂದುವುದಿಲ್ಲ.’

ಜ್ಞಾನದ ಶಕ್ತಿ ಎಂಥದ್ದು ಎಂಬುದನ್ನು ಸುಭಾಷಿತ ಹೇಳುತ್ತಿದೆ.

ನಮ್ಮ ದೊಡ್ಡ ಶತ್ರು ಯಾವುದು ಎಂದರೆ ವ್ಯಾಮೋಹ. ಒಂದರ ಬಗ್ಗೆ ವಿಪರೀತವಾದ ದುರಾಸೆಯನ್ನೇ ವ್ಯಾಮೋಹ ಎಂದು ಹೇಳಬಹುದು. ಈ ದುರಾಸೆ ನಮ್ಮನ್ನು ಆವರಿಸಿಕೊಂಡಿರುವಾಗ ನಮ್ಮ ಬುದ್ಧಿ ಕೆಲಸಮಾಡುವುದಿಲ್ಲ. ನಮ್ಮ ಆ ದುರಾಸೆಯನ್ನು ಹೊರತುಪಡಿಸಿ ಇಡಿಯ ಜಗತ್ತಿನಲ್ಲಿ ಬೇರೆ ಏನೂ ಕಾಣದಷ್ಟು ಅಜ್ಞಾನದ ಕತ್ತಲು ನಮ್ಮನ್ನು ಆವರಿಸಿಕೊಂಡಿರುತ್ತದೆ. ನಮ್ಮ ಬುದ್ಧಿಯನ್ನು ಆವರಿಸುವ ಮಂಕುತನವೇ ವ್ಯಾಮೋಹ. ಈ ಕತ್ತಲೆಯನ್ನು ಹೋಗಲಾಡಿಸುವಂಥದ್ದು ಗುರುವಿನ ಉಪದೇಶ ಎಂದು ಸುಭಾಷಿತ ಹೇಳುತ್ತಿದೆ.

ಗುರು ಎಂಬ ಶಬ್ದಕ್ಕೆ ಇರುವ ಅರ್ಥವೇ ಕತ್ತಲೆಯನ್ನು ಹೋಗಲಾಡಿಸಿ, ಬೆಳಕನ್ನು ನೀಡುವವ ಎಂದು. ಎಂದರೆ ಜ್ಞಾನವನ್ನು ನೀಡುವವನೇ ಗುರು ಎಂದು ಅರ್ಥ.

ಗುರುವಿನಿಂದ ಜ್ಞಾನವನ್ನು ಸಂಪಾದಿಸಿಕೊಂಡವನು ಹೇಗಿರುತ್ತಾನೆ? ವ್ಯಾಮೋಹದಿಂದ ಮುಕ್ತನಾಗಿರುತ್ತಾನೆ.

ಸುಭಾಷಿತ ಇನ್ನೊಂದು ಸಂಗತಿಯನ್ನು ಹೇಳುತ್ತಿದೆ; ವ್ಯಾಮೋಹ ನಮ್ಮನ್ನು ಕಾಡಬಲ್ಲ ಸ್ಥಳಗಳನ್ನು ಗುರುತಿಸಿದೆ. ಜ್ಞಾನವನ್ನು ಸಂಪಾದಿಸಿಕೊಂಡವನು ಅಂಥ ಸ್ಥಳಗಳಲ್ಲಿ ಇದ್ದರೂ ಅವನು ಮೋಹಪರವಶನಾಗಲಾರ ಎಂದು ಅದು ಹೇಳುತ್ತಿದೆ. ‘ಒಮ್ಮೆ ಅರಮನೆಯಲ್ಲಿ, ಇನ್ನೊಮ್ಮೆ ಸಿರಿವಂತರ ಸೌಧಗಳಲ್ಲಿ, ಮತ್ತೊಮ್ಮೆ ಪರ್ವತದಲ್ಲಿ, ಮಗದೊಮ್ಮೆ ನದೀತೀರಗಳಲ್ಲಿ, ಇನ್ನೊಮ್ಮೆ ಜಿತೇಂದ್ರಿಯರಾದ ಮುನಿಶ್ರೇಷ್ಠರ ಕುಟೀರದಲ್ಲಿ‘ ಇದ್ದರೂ ಅವನು ಮೋಹಪರವಶನಾಗಲಾರ. ಎಂದರೆ ಅವನು ಭೋಗಗಳ ನಡುವೆ ಇದ್ದರೂ, ಕಷ್ಟದಲ್ಲಿಯೇ ಇದ್ದರೂ, ಒಳ್ಳೆಯವರ ನಡುವೆ ಇದ್ದರೂ, ಕೆಟ್ಟವರ ಸಂಗಡ ಇದ್ದರೂ ಅವನು ಒಂದೇ ರೀತಿಯಲ್ಲಿರುತ್ತಾನೆ. ಅವನನ್ನು ವ್ಯಾಮೋಹ ಏನೂ ಮಾಡಲಾರದು. ಇದು ಸುಭಾಷಿತದ ನಿಲವು.

ಆಸೆಯೇ ಕೆಟ್ಟದ್ದಲ್ಲ. ಆದರೆ ಆ ಆಸೆಗೂ ಮಿತಿ ಇರಬೇಕು; ಅದೊಂದೇ ಜೀವನ ಎಂಬ ಕುರುಡುತನ ನಮ್ಮ ಬುದ್ಧಿಗೆ ಆವರಿಸಿಕೊಳ್ಳುವಷ್ಟು ಅದನ್ನು ಅತಿಯಾಗಿ ಬೆಳೆಯಲು ಬಿಡಬಾರದು. ಮೋಹ ಎಂದರೆ ತಪ್ಪಾದ ತಿಳಿವಳಿಕೆ; ಅರಿವಿನ ಕೊರತೆ. ಮೋಹ ಎಂಬುದು ನಮ್ಮನ್ನು ಎಚ್ಚರ ತಪ್ಪಿಸುತ್ತದೆ; ಎಚ್ಚರ ಆವಶ್ಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT