ಶನಿವಾರ, ನವೆಂಬರ್ 28, 2020
21 °C

ದಿನದ ಸೂಕ್ತಿ: ಏರುಪೇರು ಜೀವನದ ತೇರು

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

ಛಿನ್ನೋsಪಿ ರೋಹತಿ ತರುಃ ಕ್ಷೀಣೋsಪ್ಯುಪಚೀಯತೇ ಚಂದ್ರಃ ।

ಇತಿ ವಿಮೃಶಂತಃ ಸಂತಃ ಸಂತಪ್ಯಂತೇ ನ ಲೋಕೇsಸ್ಮಿನ್ ।।

ಇದರ ತಾತ್ಪರ್ಯ ಹೀಗೆ:

’ಕತ್ತರಿಸಿದರೂ ಮರವು ಮತ್ತೆ ಚಿಗುರುತ್ತದೆ; ಪೂರ್ತಿ ಕಾಣಿಸದೇ ಹೋದಮೇಲೂ ಚಂದ್ರನು ಮತ್ತೆ ಹೆಚ್ಚುತ್ತಾನೆ. ಹೀಗೆ ಏರುಪೇರುಗಳು ಸ್ವಾಭಾವಿಕವಾದವು ಎಂದು ತಿಳಿದು ಸಜ್ಜನರು ಎಂದಿಗೂ ದುಃಖಿಸುವುದಿಲ್ಲ.’ 

ಜೀವನದಲ್ಲಿ ಸೋಲು ಎದುರಾದಾಗ, ಅಥವಾ ಏನಾದೊಂದು ನಾಶ ಸಂಭವಿಸಿದಾಗ ನಾವು ಕುಗ್ಗಿಹೋಗುತ್ತೇವೆ; ಇದು ನಮಗೆ ಸಹಜ ಕೂಡ. ಆದರೆ ಜೀವನದ ಸತ್ಯವನ್ನು ತಿಳಿದವರು ಇಂಥ ಸಂದರ್ಭಗಳಲ್ಲಿ ದೃಢವಾಗಿರುತ್ತಾರೆ, ದುಃಖಿಸುವುದಿಲ್ಲ ಎಂದು ಸುಭಾಷಿತ ಹೇಳುತ್ತಿದೆ. ನಾವು ಇಂಥ ಸಂದರ್ಭಗಳಲ್ಲಿ ಹೇಗಿರಬೇಕು ಎಂಬುದನ್ನು ಪ್ರಕೃತಿಯೇ ಪಾಠ ಹೇಳುವಂತಿದೆ ಎಂದೂ ಅದು ನಿರೂಪಿಸಿದೆ.

ಮರಗಳೇ ನಮಗೆ ಈ ವಿಷಯದಲ್ಲಿ ಗುರು. ಮರದ ರೆಂಬೆ–ಕೊಂಬೆಗಳನ್ನು ಕತ್ತರಿಸುತ್ತಲೇ ಇರುತ್ತೇವೆ. ಆದರೆ ಅವು ಮತ್ತೆ ಮತ್ತೆ ಚಿಗುರುತ್ತಲೇ ಇರುತ್ತವೆ. ನನ್ನನ್ನು ಕತ್ತರಿಸಿದ್ದಾರೆ, ನನ್ನ ಜೀವನ ಮುಗಿದುಹೋಯಿತು – ಎಂದು ಅವು ಚಿಂತಿಸುತ್ತ ಸೋಲನ್ನು ಒಪ್ಪಿಕೊಳ್ಳುವುದಿಲ್ಲ; ಕೊನೆಯ ಕ್ಷಣದವರೆಗೂ ಬದುಕಲು, ಮತ್ತೆ ಮತ್ತೆ ಹಸಿರಿನಿಂದ ನಳನಳಿಸಲು ಪ್ರಯತ್ನಿಸುತ್ತಲೇ ಇರುತ್ತವೆ.

ಹೀಗೆಯೇ ಚಂದ್ರನನ್ನೂ ಗಮನಿಸಬಹುದು. ಹುಣ್ಣಿಮೆಯ ಚಂದ್ರ ದಿನೇ ದಿನೇ ಕೃಶನಾಗುತ್ತ, ಅಮಾವಾಸ್ಯೆಯಂದು ಪೂರ್ಣ ಮರೆಯಾಗಿಬಿಡುತ್ತಾನೆ. ಆದರೆ ಮರುದಿನದಿಂದಲೇ ಮತ್ತೆ ಬೆಳೆಯಲು ಆರಂಭಿಸುತ್ತಾನೆ. ಅವನು ವೃದ್ಧಿ–ಕ್ಷಯಗಳಿಗೆ ವಶನಾಗಿಲ್ಲ; ನಿರಂತರವಾಗಿ ಮುಂದುವರೆಯುತ್ತಲೇ ಇರುತ್ತಾನೆ.

ನಾವು ಕೂಡ ಮರವನ್ನು, ಚಂದ್ರನನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು; ಕಷ್ಟ ಒದಗಿದಾಗ ಕುಗ್ಗಬಾರದು; ಆ ಸಂದರ್ಭದಿಂದ ಹೇಗೆ ಹೊರಗೆ ಬರುವುದು ಎಂದು ಆಲೋಚಿಸಿ, ಅದರಂತೆ ಕ್ರಿಯಾಶೀಲರಾಗಬೇಕು. ಆಸ್ತಿ, ಅಂತಸ್ತು, ಅಧಿಕಾರ – ಇಂಥವು ಬರುತ್ತಿರುತ್ತವೆ; ಹೋಗುತ್ತಿರುತ್ತವೆ. ಇವಿಷ್ಟೇ ಜೀವನದ ಸರ್ವಸ್ವ ಎಂದು ತಿಳಿದುಕೊಂಡು ನಮ್ಮ ಜೀವನವನ್ನು ನರಕಮಾಡಿಕೊಳ್ಳಬಾರದು. ಜೀವನ ಎಂದಮೇಲೆ ಸುಖವೂ ಇರುತ್ತದೆ, ಕಷ್ಟವೂ ಇರುತ್ತದೆ. ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುವ ಪ್ರಬುದ್ಧತೆಯನ್ನು ನಾವು ಗಳಿಸಿಕೊಳ್ಳಬೇಕು.

 

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.